ಕೈಗಾರಿಕಾ ಸಂಬಂಧಗಳು

ಕೈಗಾರಿಕೆಗಳ ಮಾಲೀಕರ ಸಂಘಗಳಿಗೂ ಕಾರ್ಮಿಕ ಸಂಘಗಳಿಗೂ ನಡುವಣ ಸಂಬಂಧಗಳು (ಇಂಡಸ್ಟ್ರಿಯಲ್ ರಿಲೇಷನ್ಸ್).ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಶೀಘ್ರ ಮತ್ತು ಸಮತೂಕದ ಕೈಗಾರಿಕಾಕರಣಕ್ಕೆ ಪ್ರಾಮುಖ್ಯ ಇರುವುದರಿಂದ, ಕೈಗಾರಿಕಾ ಸಂಬಂಧಗಳು ಕೇವಲ ಎರಡು ಪಕ್ಷಗಳಿಗೆ, ಅಂದರೆ ಒಡೆಯರಿಗೆ ಮತ್ತು ಕೆಲಸಗಾರರಿಗೆ, ಸೀಮಿತವಾಗಿಲ್ಲ. ಆಗಾಗ ಕೆಲಸಗಾರರು ಕಾರ್ಮಿಕ ಸಂಘಗಳನ್ನು ಕಟ್ಟಿ ಅವುಗಳ ಮೂಲಕ ಒಡೆಯರೊಡನೆ ತಮ್ಮ ಹಕ್ಕುಗಳಿಗೆ ಹೋರಾಡುವುದಲ್ಲದೆ ಸರ್ಕಾರ ಕೂಡ ಕಾರ್ಮಿಕ ಕಾನೂನು ಮತ್ತು ಕಾರ್ಮಿಕ ಆಡಳಿತಗಳ ಮೂಲಕ ಕೈಗಾರಿಕಾ ಸಂಬಂಧಗಳಲ್ಲಿ ನೇರವಾಗಿ ಪ್ರವೇಶಿಸುತ್ತದೆ. ಇದೂ ಅಲ್ಲದೆ ಸರ್ಕಾರ ಸಾರ್ವಜನಿಕ ಕ್ಷೇತ್ರದಲ್ಲಿ ತಾನೇ ಮಾಲೀಕನಾಗಿದ್ದು ಕೈಗಾರಿಕಾ ಸಂಬಂಧಗಳಲ್ಲಿ ಇಟ್ಟಿಗೆಯ ಪಾತ್ರ ವಹಿಸುತ್ತದೆ.[]

ಕೈಗಾರಿಕಾ ಸಂಬಂಧ

ಬದಲಾಯಿಸಿ

ಹೀಗಾಗಿ ಕೈಗಾರಿಕಾ ಸಂಬಂಧಗಳಲ್ಲಿ ಸರ್ಕಾರ, ಒಡೆಯರು, ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳು-ಈ ನಾಲ್ಕು ಮುಖಗಳನ್ನು ನೋಡಬಹುದು. ಅಂತರ ರಾಷ್ಟ್ರೀಯ ಕಾರ್ಮಿಕ ಸಂಘ (ಐ.ಎಲ್.ಒ.) ಕೈಗಾರಿಕಾ ಸಂಬಂಧಗಳನ್ನು `ರಾಜ್ಯದ, ಒಡೆಯರ ಮತ್ತು ಕಾರ್ಮಿಕರ ಸಂಘಗಳ ನಡುವಿನ ಸಂಬಂಧಗಳು ಎಂದು ವಿವರಿಸುವುದು ಈ ಕ್ಷೇತ್ರದ ವ್ಯಾಪ್ತಿಯನ್ನು ತಿಳಿಸುತ್ತದೆ.ಈ ವಿಶಾಲದೃಷ್ಟಿಯಿಂದ ನೋಡಿದಾಗ, ಕೈಗಾರಿಕಾ ಸಂಬಂಧಗಳು ಇಡೀ ಕಾರ್ಮಿಕ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೂ ಪರ್ಯಾಯಪದವಾಗಿದ್ದು ಈ ಮುಂದೆ ಕಂಡ ವಿಷಯಗಳನ್ನು ಒಳಗೊಂಡಿವೆ: ರಾಜ್ಯದ ಕಾರ್ಮಿಕ ನೀತಿ, ಕಾರ್ಮಿಕ ಕಾನೂನು ರಚನೆ ಮತ್ತು ಜಾರಿ, ಕಾರ್ಮಿಕ ನ್ಯಾಯಾಂಗ, ಅದರ ಆಯ್ಕೆ ಮತ್ತು ಶಿಕ್ಷಣ, ಸ್ಥಾಯೀನಿಯಮಗಳು, ಗೈರುಹಾಜರಿ ಮತ್ತು ಕಾರ್ಮಿಕರ ಪ್ರತಿಸ್ಥಾಪನ, ಅವರ ಕಾರ್ಯದ ಷರತ್ತುಗಳು, ಸಾಮಾಜಿಕ ಅನುಕೂಲತೆಗಳು ಮತ್ತು ರಕ್ಷಣೆ, ಆಡಳಿತ ನಿರ್ವಹಣದ ರೀತಿನೀತಿಗಳು, ವೇತನದ ಸಮಸ್ಯೆಗಳು, ದುಡಿಮೆಗೆ ನೀಡುವ ಪ್ರೋತ್ಸಾಹ, ಕಾರ್ಮಿಕ ಮಾಲೀಕರಲ್ಲಿ ವಿಚಾರವಿನಿಮಯದ ಏರ್ಪಾಡು, ಆಡಳಿತ ಮತ್ತು ಕಾರ್ಮಿಕ ವರ್ಗಗಳ ಸಹಸಂಬಂಧ, ಸಾಮೂಹಿಕ ಕರಾರುಗಳು ಮತ್ತು ಒಪ್ಪಂದಗಳು, ವಿವಾದಗಳ ತಡೆ ಮತ್ತು ತೀರ್ಮಾನ; ಮುಷ್ಕರಗಳು ಮತ್ತು ಹೊರಗೀಲಿ (ಲಾಕ್ ಔಟ್), ಸಂಕಟ ನಿವಾರಣಾ ಕ್ರಮ, ಕಾರ್ಮಿಕ ಸಂಘಗಳ ಬಗ್ಗೆ ಆಡಳಿತ ವರ್ಗದವರ ಮನೋವೃತ್ತಿ, ಕಾರ್ಮಿಕ ಸಂಘಗಳು, ಕಾರ್ಯಮಂಡಳಿಗಳು ಮತ್ತು ಆಡಳಿತಾಧಿಕಾರಿಗಳ ನಡುವಿನ ಸಂಬಂಧ-ಇತ್ಯಾದಿ. ಇದೂ ಅಲ್ಲದೆ, ಈ ನಾಲ್ಕು ಪಕ್ಷಗಳಿಂದ ಹುಟ್ಟದಿದ್ದರೂ ಕೈಗಾರಿಕಾ ಸಂಬಂಧಗಳ ಮೇಲೆ ನೇರವಾಗಿ ಪ್ರಭಾವ ಬೀರುವ ವಿಷಯಗಳೆಂದರೆ ಕಾರ್ಮಿಕ ವರ್ಗದವರ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಮಟ್ಟಗಳು; ನಗರ ಜೀವನಕ್ಕೆ ಮತ್ತು ಕೆಲಸಕ್ಕೆ ಅವರ ಹೊಂದಾವಣೆ; ಅವರ ಆರೋಗ್ಯ ಮತ್ತು ಶಿಕ್ಷಣ ಮಟ್ಟಗಳು; ಅವರ ನಿರೀಕ್ಷೆಗಳು, ಗುರಿಗಳು ಮತ್ತು ಸಾಮಾಜಿಕ ಚಲನೆ.[]

ಪರಸ್ಪರ ಹೊಂದಿಕೆ ವಿಧಾನ

ಬದಲಾಯಿಸಿ

ಈ ಎಲ್ಲ ಸಮಸ್ಯೆಗಳನ್ನೂ ಕೇವಲ ಒಂದೇ ಬಗೆಯಾಗಿ ನಿಯಮದ ಸಹಾಯದಿಂದ ಪರಿಹರಿಸಲಾಗುವುದಿಲ್ಲ; ವಿವಿಧ ನಿಯಮಗಳನ್ನೊಳಗೊಂಡ ಸಮಗ್ರ ಪರಿಶೀಲನೆ ಇಲ್ಲಿ ಅವಶ್ಯಕ. ಕೈಗಾರಿಕಾ ವಿವಾದವೊಂದರ ಕಾರಣಗಳು ಆರ್ಥಿಕ, ಸಾಮಾಜಿಕ, ಮಾನಸಿಕ ಅಥವಾ ರಾಜಕೀಯವಿರಬಹುದು. ಬೇಡಿಕೆಗಳು ಕಾರ್ಮಿಕರ ಹೆಚ್ಚಿನ ಗಳಿಕೆ, ಹೆಚ್ಚಿನ ಸ್ಥಾನಮಾನ, ಒಪ್ಪಿಗೆ, ರಾಜಕೀಯ ವಿರೋಧಗಳಿಗೆ ಸಂಬಂಧಿಸಿರಬಹುದು. ಕೈಗಾರಿಕಾ ಸಂಬಂಧಗಳು ನಾನಾ ಕ್ಷೇತ್ರಗಳ ರೀತಿನಿಯಮಗಳನ್ನೊಳಗೊಂಡಿರುತ್ತವೆ. ಯಜಮಾನ, ಕಾರ್ಮಿಕ ಅಥವಾ ನೌಕರ ಇವರ ಸಂಬಂಧದಿಂದುದ್ಭವಿಸುವ ಸಮಸ್ಯೆಗೆ, ಕಾರ್ಮಿಕ ಅರ್ಥಶಾಸ್ತ್ರ ಆರ್ಥಿಕ ವಿವರಣೆ ನೀಡುತ್ತದೆ. ಕೈಗಾರಿಕಾ ಸಮಾಜಶಾಸ್ತ್ರ ಕೆಲಸಗಾರರ ಸಾಮಾಜಿಕ ಹಿನ್ನೆಲೆಯನ್ನು ತಿಳಿಸುತ್ತದೆ. ಇದು ಕೈಗಾರಿಕಾ ಸಂಬಂಧಗಳನ್ನರಿಯಲು ಅತ್ಯವಶ್ಯ. ಕೈಗಾರಿಕಾ ಮನಶ್ಶಾಸ್ತ್ರ ಸಾಮಾನ್ಯ ಜ್ಞಾನವನ್ನು ನಿಷ್ಕøಷ್ಟತೆಗೊಳಿಸುವುದಕ್ಕೆ ಉಪಯುಕ್ತ, ಅಲ್ಲದೆ ಹೊಸಬರ ಆಯ್ಕೆ, ನೇಮಕ, ಉದ್ಯೋಗಶಿಕ್ಷಣ, ದಣಿವು, ಶಿಷ್ಟತೆಯಪಾಲನೆ ಮುಂತಾದ ವಿಷಯಗಳಲ್ಲಿ ಪ್ರಾಯೋಗಿಕ ಸಲಕರಣೆಗಳನ್ನು ಅದು ನೀಡುತ್ತದೆ. ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ಸಂಬಂಧದ ಕ್ಷೇತ್ರದಲ್ಲಿ ಕಾರ್ಮಿಕ ಕಾಯಿದೆ ಮತ್ತು ಅದಕ್ಕೆ ಸಂಬಂಧಪಟ್ಟ ನ್ಯಾಯಾಲಯಗಳು ಮತ್ತು ತೀರ್ಪುಗಾರರ ಪಾತ್ರ ಹಿರಿದು ಕಾರ್ಮಿಕ ಅಂಕಿ ಅಂಶಗಳು ಅವುಗಳ ಪರಿಮಾಣ ವಿಶ್ಲೇಷಣದಿಂದ ಕೈಗಾರಿಕಾ ಸಂಬಂಧಗಳ ಮೇಲೆ ಬೆಳಕು ಬೀರುತ್ತವೆ. ಕಡೆಯದಾಗಿ, ಕೇಂದ್ರೀಕೃತ ಯೋಜನೆಯ ಪರಿಣಾಮವಾಗಿ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ರಂಗದ ಮೇಲೆ ರಾಜಕೀಯ ಸ್ಥಿತಿಗತಿಗಳೂ ತಮ್ಮ ಪ್ರಭಾವ ಬೀರುತ್ತವೆ. ಹೀಗಾಗಿ, ಸುಸಂಯೋಜಿತ ಪರಸ್ಪರ ಹೊಂದಿಕೆ ವಿಧಾನದೃಷ್ಟಿ ಕೈಗಾರಿಕಾ ಸಂಬಂಧಗಳಲ್ಲಿ ಅಗತ್ಯ ಮತ್ತು ಅಪೇಕ್ಷಣೀಯ.

ಕಾರ್ಮಿಕರಿಗೂ ಮಾಲೀಕರಿಗೂ ವಿರಸ ಉಂಟಾಗಲು ಹಲವಾರು ಕಾರಣಗಳುಂಟು

ಬದಲಾಯಿಸಿ

1 ಏರುಬೆಲೆಗಳಿಂದ ಕಾರ್ಮಿಕರ ಜೀವನವೆಚ್ಚ ಹೆಚ್ಚುವುದರಿಂದ ಅಧಿಕ ಕೂಲಿಗಾಗಿ ಬೇಡಿಕೆ, 2 ದುಡಿಮೆಯ ಗಂಟೆಗಳ ಇಳಿತಾಯಕ್ಕಾಗಿ ಒತ್ತಾಯ, 3 ಉದ್ಯೋಗದಲ್ಲಿ ಭರವಸೆ, 4 ಕೆಲಸದ ಪರಿಸ್ಥಿತಿಯ ಉತ್ತಮಿಕೆಯ ಬೇಡಿಕೆ, 5 ಕೂಲಿ ಇಳಿತಾಯ, ಕಾರ್ಮಿಕರ ವಜಾ ಮುಂತಾದವುಗಳಿಗೆ ಕಾರ್ಮಿಕರ ವಿರೋಧ-ಇವು ಕೆಲವು ಕಾರಣಗಳು. ಕಾರ್ಮಿಕರು ಕೆಲಸವನ್ನು ನಿಧಾನವಾಗಿ ಮಾಡುವ ಮಾರ್ಗ ಹಿಡಿದರೆ ಮಾಲೀಕರು ಅದನ್ನು ವಿರೋಧಿಸುವುದುಂಟು.

ಕೈಗಾರಿಕಾ ಮಾಲೀಕರಿಗೂ ಕಾರ್ಮಿಕರಿಗೂ ಜರಗುವ ಸಂಘರ್ಷಗಳನ್ನು ಸುಧಾರಿಸಲು ಕೆಲವು ಪದ್ಧತಿಗಳು ಜಾರಿಗೆ ಬಂದಿದೆ.

ಬದಲಾಯಿಸಿ

ಅವುಗಳಲ್ಲಿ ಮುಖ್ಯವಾದವು ಇವು:1 ಕಾರ್ಮಿಕರಿಗೆ ನ್ಯಾಯವಾದ ವೇತನ: ಏರುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಆಗಿಂದಾಗ್ಗೆ ವೇತನಗಳನ್ನು ಪರಿಷ್ಕರಿಸಲಾಗುತ್ತದೆ. ಮೂಲವೇತನದ ಜೊತೆಗೆ ಅಧಿಕ ಜೀವನ ವೆಚ್ಚವನ್ನು ಸರಿದೂಗಿಸಲು ಅದಕ್ಕೆ ಅನುಗುಣವಾಗಿ ಭತ್ಯವನ್ನು ಸೇರಿಸುವುದು ಸಾಮಾನ್ಯವಾಗಿ ಅನುಸರಿಸುವ ಮಾರ್ಗ. 2 ಲಾಭದಲ್ಲಿ ಪಾಲು: ಮಾಲೀಕರಿಗೆ ನ್ಯಾಯವಾಗಿ ಸಲ್ಲಬೇಕಾದ ಲಾಭವನ್ನು ಕೊಟ್ಟು, ಕಾರ್ಮಿಕರಿಗೆ ಸಲ್ಲಬೇಕಾದ ವೇತನವನ್ನು ನೀಡಿ, ಉಳಿಯುವ ಲಾಭವನ್ನು ಒಪ್ಪಂದದ ಪ್ರಕಾರ ಕಾರ್ಮಿಕರಲ್ಲಿ ಹಂಚುವುದೇ ಲಾಭ ಹಂಚಿಕೆಯ ಮೂಲೋದ್ದೇಶ. ಭಾರತದಲ್ಲಿ ಕೈಗಾರಿಕಾ ಶಾಂತಿಸಾಧನೆಗಾಗಿ ಲಾಭ ಹಂಚಿಕೆ ಯೋಜನೆಯನ್ನು ಪ್ರಾಯೋಗಿಕವಾಗಿ ಹಲವು ಕೈಗಾರಿಕೆಗಳಲ್ಲಿ ಆಚರಣೆಗೆ ತರಲಾಯಿತು. ಈ ಯೋಜನೆ ಹೆಚ್ಚು ಯಶಸ್ವಿಯಾಗಿಲ್ಲ. 3 ಸಹಭಾಗಿ ಯೋಜನೆ: ಕೂಲಿಗಾರರು ಉದ್ಯಮದಲ್ಲಿ ಷೇರುದಾರರಾಗಿ, ತಮ್ಮ ಷೇರಿನ ಮೊತ್ತಕ್ಕನುಗುಣವಾಗಿ ಆಡಳಿತದಲ್ಲೂ ಒಡೆತನದಲ್ಲೂ ಭಾಗವಹಿಸುವುದು. ಈ ಯೋಜನೆ ಹಲವು ಪಾಶ್ಚಾತ್ಯ ದೇಶಗಳಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಇದನ್ನು ಪ್ರಯೋಗಿಸುವ ಪ್ರಯತ್ನಗಳು ನಡೆದಿವೆ. 4 ಸಂಧಾನ ಮಂಡಲಿ: ಸಂಧಾನ ಮಂಡಳಿಗಳಲ್ಲಿ ಮಾಲೀಕರು ಮತ್ತು ಕಾರ್ಮಿಕರೇ ಅಲ್ಲದೆ ಮೂರನೆಯ ಒಂದು ಪಕ್ಷ ಇರುವುದುಂಟು. ವಿವಾದಗಳು ಈ ಮಂಡಳಿಯ ಮುಂದೆ ಬಂದು ಇತ್ಯರ್ಥವಾಗುತ್ತವೆ. ಭಾರತದ 1947 ಕೈಗಾರಿಕಾ ವಿವಾದಗಳ ಕಾಯಿದೆಯ ಪ್ರಕಾರ ಭಾರತದಲ್ಲಿ ಕಾರ್ಖಾನೆಗಳಲ್ಲಿ ದಿನಂಪ್ರತಿ ಉದ್ಭವಿಸಬಹುದಾದ ಸಣ್ಣಪುಟ್ಟ ವಿವಾದಗಳನ್ನು ಪರಿಹರಿಸಲು ಮಾಲೀಕರ ಮತ್ತು ಕೆಲಸಗಾರರ ಪ್ರತಿನಿಧಿಗಳನ್ನೊಳಗೊಂಡ ಒಂದು ಸಮಿತಿ ಇರುತ್ತದೆ. ಈ ಸಮಿತಿಯಿಂದ ವಿವಾದಗಳು ತೀರ್ಮಾನವಾಗದೆ ಹೋದರೆ ಅವನ್ನು ಪರಸ್ಪರ ಸಮಾಲೋಚನೆ ಮತ್ತು ಮಧ್ಯಸ್ಥಿಕೆಯ ಮೇಲೆ ತೀರ್ಮಾನಿಸಲು ಸಂಧಾನ ಅಧಿಕಾರಿಗಳಿರುತ್ತಾರೆ. ಇವರ ಪ್ರಯತ್ನದಿಂದ ವಿವಾದ ತೀರ್ಮಾನವಾಗದಿದ್ದರೆ ಸಂಧಾನ ಮಂಡಲಿಯನ್ನು ಸರ್ಕಾರ ನೇಮಿಸಬಹುದು.

ಪಂಚಾಯತಿ

ಬದಲಾಯಿಸಿ

ಸಂಧಾನ ಮುರಿದರೆ ಪಂಚಾಯತಿ ಒಂದೇ ಉಳಿದ ಹಾದಿ. ಮಾಲೀಕ-ಕಾರ್ಮಿಕರೇ ಸ್ವತಃ ಪಂಚಾಯತಿಯನ್ನೇರ್ಪಡಿಸಿಕೊಳ್ಳಬಹುದು. ಇಲ್ಲವೇ ಸರ್ಕಾರ ಅದನ್ನು ಕಡ್ಡಾಯವಾಗಿ ವಿಧಿಸಬಹುದು. ಪಂಚಾಯತಿ ನಡೆಸುವ ಮಧ್ಯಸ್ಥಗಾರರು ವಿವಾದದ ಹಿನ್ನೆಲೆಯನ್ನು ಕೂಲಂಕಷವಾಗಿ ತಿಳಿದು ತೀರ್ಮಾನಿಸುವುದು ಬಹಳ ತಡವಾಗುವುದರಿಂದ ಇದು ಅಷ್ಟೊಂದು ಸೂಕ್ತವಾದ ವಿಧಾನವಲ್ಲ. ಭಾರತದಲ್ಲಿ ವಿವಾದಗಳು ಸಮಾಧಾನಕರವಾಗಿ ತೀರ್ಮಾನವಾಗದೆ ಇದ್ದರೆ ಸರ್ಕಾರ ವಿವಾದವನ್ನು ಕೈಗಾರಿಕಾ ವಿವಾದ ವಿಚಾರಣಾ ಮಂಡಳಿಗೆ ಒಪ್ಪಿಸಿ ಅದರ ತೀರ್ಮಾನವನ್ನು ಕಡ್ಡಾಯವಾಗಿ ಜಾರಿಗೆ ತರಲು ಕೈಗಾರಿಕಾ ವಿವಾದಗಳ ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಕಡ್ಡಾಯದ ತೀರ್ಮಾನ ಪ್ರಜಾಪ್ರಭುತ್ವದಲ್ಲಿ ಉಚಿತವಲ್ಲದಿದ್ದರೂ ದೇಶದಲ್ಲಿ ಕಾರ್ಮಿಕರ ಸಂಘಗಳ ಶಕ್ತಿ ಹೆಚ್ಚುವ ಮುನ್ನ ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ.

ಕಾರ್ಮಿಕ ಕಾನೂನುಗಳು

ಬದಲಾಯಿಸಿ

ಕಾರ್ಮಿಕರ ಕೆಲಸ, ಕೂಲಿ, ವಸತಿ ಸೌಕರ್ಯ ಮುಂತಾದವನ್ನು ಅವರಿಗೆ ಹಿತವಾಗುವ ರೀತಿಯಲ್ಲಿ ನಿರ್ವಹಿಸಲು ಕಾಯಿದೆಗಳನ್ನು ರಚಿಸಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಅನಂತರ ದೇಶದಲ್ಲಿ ಇಂಥ ಅನೇಕ ಕಾಯಿದೆಗಳು ಜಾರಿಗೆ ಬಂದು ಕಾರ್ಮಿಕರಿಗೆ ಅನೇಕ ಸೌಲಭ್ಯಗಳು ದೊರೆಕಿವೆ. (ನೋಡಿ-ಕಾರ್ಮಿಕ ಕಾನೂನುಗಳು)

ಸಾಮಾಜಿಕ ಭದ್ರತೆ

ಬದಲಾಯಿಸಿ

ಪ್ರತಿಯೊಂದು ಉದ್ಯಮವೂ ತನ್ನ ಕೂಲಿಗಾರರಿಗೆ ಸಂಭವಿಸಬಹುದಾದ ಮುಪ್ಪು, ವ್ಯಾಧಿ, ನಿರುದ್ಯೋಗ, ಗಾಯ ಮತ್ತು ಸಾವು-ಈ ಹಾನಿಯಿಂದ ಪಾರುಮಾಡಲು ವಿಮಾ ಯೋಜನೆಯನ್ನು ಜಾರಿಗೆ ತರಬಹುದು. ಇದು ಜರ್ಮನಿಯಲ್ಲಿ ಕಳೆದ ಶತಮಾನದಲ್ಲಿ ಜಾರಿಗೆ ಬಂತು. ಇಂಗ್ಲೆಂಡಿನಲ್ಲಿ ಸಾಮಾಜಿಕ ಭದ್ರತೆಯ ಹೊಣೆ ಸರ್ಕಾರಕ್ಕೆ ಸೇರಿದ್ದು. ಅಲ್ಲಿ ಈ ಬಗ್ಗೆ ಸಮಗ್ರ ಯೋಜನೆಯೊಂದು ಜಾರಿಗೆ ಬಂದಿದೆ. ಭಾರತದಲ್ಲಿ 1948ರ ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ ಈ ನಿಟ್ಟಿನಲ್ಲಿ ಮೊದಲನೆಯ ಪ್ರಯತ್ನ. ಭವಿಷ್ಯ ನಿಧಿ ಕಾಯಿದೆ ಇನ್ನೊಂದು. (ನೋಡಿ-ಕಾರ್ಮಿಕ ಕಾನೂನುಗಳು)ಕೈಗಾರಿಕೆಗಳು ಕಾರ್ಮಿಕರಿಗೆ ಅಧ್ಯಂಶ ನೀಡುವ ಯೋಜನೆಯೂ ಜಾರಿಯಲ್ಲಿದೆ. ಕಾರ್ಮಿಕರಲ್ಲಿ ಶ್ರದ್ಧೆ ಮತ್ತು ತೃಪ್ತಿ ಹೆಚ್ಚಿಸುವುದು ಇದರ ಉದ್ದೇಶ. ವೇತನದ ಜೊತೆಗೆ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನೀಡಲಾಗುವ ಸಂಭಾವನೆಯಿದು. ಕಾರ್ಮಿಕ-ಮಾಲೀಕರ ನಡುವೆ ಸೌಹಾರ್ದಯುತ ಸಂಬಂಧ ಬೆಳೆದು ಕೈಗಾರಿಕೆಯಲ್ಲಿ ಶಾಂತಿ ನೆಲಸುವಂತೆ ಮಾಡಲು ಲಭ್ಯವಿರುವ ಉಪಾಯಗಳಿವು.

ಉಲ್ಲೇಖಗಳು

ಬದಲಾಯಿಸಿ
  1. http://www.kanaja.in/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8-%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6-%E0%B2%86%E0%B2%B0-16/
  2. "ಆರ್ಕೈವ್ ನಕಲು". Archived from the original on 2017-05-09. Retrieved 2016-11-05.