ಕೆ.ಜಯತೀರ್ಥರಾವ್
ಮೈಸೂರು ಮಹಾರಾಜಾ ಕಾಲೇಜುವಿನಲ್ಲಿ ಬಿ.ಎ. ಪದವಿ ಪಡೆದ ನಂತರ ಕೆ.ಜಯತೀರ್ಥರಾವ್ ತಾಯಿನಾಡು ಪತ್ರಿಕೆಯ ಉಪಸಂಪಾದಕರಾಗಿ ೧೯೫೭/೧೯೫೮ರಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ಪ್ರವೇಶವನ್ನು ಪಡೆದರು. ಅಂದು ಪತ್ರಿಕೆಯ ಸಂಪಾದಕರಾಗಿದ್ದ ತಿ.ಸಿದ್ದಪ್ಪನವರು ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅಂದಿನ ದಿನಗಳಲ್ಲಿ ಸಂಪಾದಕರ ನಂತರದ ಸ್ಥಾನಕ್ಕೆ ಸಹಾಯಕ ಸಂಪಾದಕರಾಗಲಿ ಅಥವಾ ಸುದ್ದಿ ಸಂಪಾದಕರಾಗಲಿ ತಾಯಿನಾಡುವಿನಲ್ಲಿ ಇರಲಿಲ್ಲ. ಪತ್ರಿಕೆಯ ಹಿರಿಯ ಉಪಸಂಪಾದಕರಾಗಿದ್ದ ಹೆಚ್.ಆರ್.ನಾಗೇಶರಾವ್ ಸುದ್ದಿ ಪುಟಗಳ ನಿರ್ವಹಣೆ, ಸಂಪಾದಕೀಯ ಬರಹ, ನಿತ್ಯ ಅಂಕಣ ರಚನೆ ಮುಂತಾದವುಗಳ ಜತೆಗೆ ಹೊಸತಾಗಿ ಸೇರಿದ ಪತ್ರಕರ್ತರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಜಯತೀರ್ಥರಿಗೆ ನಾಗೇಶರಾವ್ ಮಾರ್ಗದರ್ಶಕರಾದರು.
ಸಂಯುಕ್ತ ಕರ್ನಾಟಕದ ಬೆಂಗಳೂರು ಆವೃತ್ತಿ ಆರಂಭವಾದ ವರ್ಷದ ನಂತರ ಜಯತೀರ್ಥ `ತಾಯಿನಾಡು'ವಿನಿಂದ ಬಂದು ಸೇರಿದರು. ನಾಗೇಶರಾವ್ ಅವರ ಸಂಪರ್ಕ ಮತ್ತೆ ದೊರೆಯಿತು. ಕೆಲ ವರ್ಷಗಳ ನಂತರ ಜಯತೀರ್ಥ, ಪ್ರವರ್ಧಮಾನಕ್ಕೆ ಬಂದಿದ್ದ ಪ್ರಜಾವಾಣಿಯ ಹಿರಿಯ ವರದಿಗಾರರಾಗಿ ಸೇರ್ಪಡೆಯಾದರು. ಆ ಪತ್ರಿಕೆಯ ದೆಹಲಿ ಕಚೇರಿಯಲ್ಲಿ ಪ್ರಧಾನ ವರದಿಗಾರರಾಗಿ ಕೆಲಸ ಮಾಡಿದರು. ನಿವೃತ್ತಿಗೆ ಮುನ್ನ ಬೆಂಗಳೂರಿಗೆ ವರ್ಗಾವಣೆಗೊಂಡು ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ಗಳ ಕಾರ್ಯಕಾರಿ ಸಮಿತಿಗಳಲ್ಲಿ ಜಯತೀರ್ಥ ಕಾರ್ಯನಿರ್ವಹಿಸಿದ್ದಾರೆ.