ಕು. ಶಿ. ಹರಿದಾಸ ಭಟ್ಟ

(ಕು.ಶಿ.ಹರಿದಾಸ ಭಟ್ಟ ಇಂದ ಪುನರ್ನಿರ್ದೇಶಿತ)

ಕು. ಶಿ. ಹರಿದಾಸ ಭಟ್ಟರು ಮಾರ್ಚ ೧೭, ೧೯೨೪ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಶಿವಗೋಪಾಲ ಭಟ್ಟರು ಗದಗ ಪಟ್ಟಣದಲ್ಲಿ ಚಹದಂಗಡಿಯನ್ನು ನಡೆಯಿಸುತ್ತಿದ್ದರು.[]

ಕು. ಶಿ. ಹರಿದಾಸ ಭಟ್ಟ
ಜನನಮಾರ್ಚ್ ೧೭, ೧೯೨೪
ಉಡುಪಿ
ಮರಣಆಗಸ್ಟ್ ೨೦, ೨೦೦೦
ವೃತ್ತಿಅಧ್ಯಾಪನ ಮತ್ತು ಸಾಹಿತ್ಯ ರಚನೆ
ವಿಷಯಕನ್ನಡ ಸಾಹಿತ್ಯ

ಶಿಕ್ಷಣ

ಬದಲಾಯಿಸಿ

ಹರಿದಾಸ ಭಟ್ಟರ ಆರಂಭದ ಶಿಕ್ಷಣ ಕಡಿಯಾಳಿನಲ್ಲಾಯಿತು. ಅಲ್ಲಿಂದ ಉಡುಪಿ ಬೋರ್ಡ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಯಿತು. ಬಡತನದಿಂದಾಗಿ ಕಾಲೇಜಿಗೆ ಹೋಗಲಾಗಲಿಲ್ಲ.ಮಂಗಳೂರಿನಲ್ಲಿ ಎರಡು ವರ್ಷದ ಶಿಕ್ಷಕರ ತರಬೇತಿ ಪಡೆದರು ಅದೇ ಸಮಯದಲ್ಲಿಯೆ 'ಕನ್ನಡ ಜಾಣ' ಹಾಗು ಹಿಂದಿ ಪರೀಕ್ಷೆಗಳಲ್ಲಿಯೂ ಸಹ ಉತ್ತೀರ್ಣರಾದರು. ಮದ್ರಾಸ ವಿಶ್ವವಿದ್ಯಾಲಯದಿಂದ ಕನ್ನಡ ಹಾಗು ಸಂಸ್ಕೃತ 'ವಿದ್ವಾನ್' ಪದವಿ ಪಡೆದರು. ೧೯೪೬ ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೪೯ರಲ್ಲಿ ಬಿ.ಏ.(ಆನರ್ಸ್) ಪದವಿ ಪಡೆದರು.

ವೃತ್ತಿ ಜೀವನ

ಬದಲಾಯಿಸಿ

ಮದರಾಸಿಗೆ (ಈಗಿನ ಚೆನ್ನೈಗೆ) ಕಲಿಯಲು ಹೋಗುವದಕ್ಕೆ ಮೊದಲು ೧೯೪೨ ರಲ್ಲಿ ಹರಿದಾಸ ಭಟ್ಟರು ಕಡಿಯಾಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ಈ ಕೆಲಸ ತ್ಯಜಿಸಿದ ಹರಿದಾಸ ಭಟ್ಟರು, ಬಿ.ಏ. ಪದವಿಯನ್ನು ಪಡೆದ ಬಳಿಕ ೧೯೫೦ ರಲ್ಲಿ ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜ್ ದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಈ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಮುಂದೆ ಅದೇ ಕಾಲೇಜಿನ ಪ್ರಾಂಶುಪಾಲರಾಗಿದ್ದ ಭಟ್ಟರ ಗರಡಿಯಲ್ಲಿ ಪಳಗಿದ ಸಾವಿರಾರು ವಿದ್ಯಾರ್ಥಿಗಳು, ತಾವು ಭಟ್ಟರ ವಿದ್ಯಾರ್ಥಿಗಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ.

ಸಾಂಸ್ಕೃತಿಕ ಜೀವನ

ಬದಲಾಯಿಸಿ

ಉಡುಪಿಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹರಿದಾಸ ಭಟ್ಟರು ಕೇಂದ್ರಬಿಂದುವಾದರು. ಸಾಹಿತ್ಯ,ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಶೋಧನೆಗಳಿಗೆ ಸೂಕ್ತವಾದ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಮುಖ್ಯವಾಗಿ ಯಕ್ಶಗಾನ ಕೇಂದ್ರ, ರಾ.ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ ಇವೆಲ್ಲವುಗಳ ಜೊತೆ ಜೊತೆಯಲ್ಲಿ ಸಮ್ಮೇಳನ, ರಂಗಪ್ರಯೋಗ ಮೊದಲಾದವುಗಳು ಹರಿದಾಸ ಭಟ್ಟರ ನೆರವಿನಿಂದಾಗಿ ಕಳೆಗೊಂಡವು. ಯಕ್ಷಗಾನ ಕಲೆಯನ್ನು ಕಡಲಾಚೆಯಲ್ಲೂ ಹರಡಲು ರಷ್ಯಾ, ಜರ್ಮನಿ, ಬ್ರಿಟನ್‌ ಹಾಗೂ ಅಮೆರಿಕೆಗಳಿಗೆ ಭಾರತದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಪ್ರವಾಸ ಮಾಡಿದ್ದರು.

ಕರ್ನಾಟಕದ ಜಾನಪದ ಕಲೆಯನ್ನು ವಿಶ್ವಾದ್ಯಂತ ಪರಿಚಯಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. ೧೯೮೮-೮೯ರ ಸಾಲಿನಲ್ಲಿ ಅಮೆರಿಕದ ಫೋರ್ಡ್‌ ಫೌಂಡೇಷನ್‌ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ವಿಶ್ವದ ಗಮನವನ್ನೇ ಸೆಳೆಯಿತು.

ಸಾಹಿತ್ಯ ರಚನೆ

ಬದಲಾಯಿಸಿ

ಈ ಎಲ್ಲ ಚಟುವಟಿಕೆಗಳ ನಡುವೆಯೂ ಬಹುಮುಖ ವ್ಯಕ್ತಿತ್ವವನ್ನು ಕಾಯ್ದುಕೊಂಡ ಹರಿದಾಸ ಭಟ್ಟರು ಗದ್ಯ ಲೇಖಕರೆಂದೇ ಹೆಸರಾದವರು. ಇವರ ಪ್ರಬಂಧಗಳಲ್ಲಂತೂ ವೈಶಿಷ್ಟ್ಯ ಪೂರ್ಣ ವೈವಿಧ್ಯತೆಯನ್ನು ಕಾಣಬಹುದು.೧೯೫೦ರಲ್ಲಿ ಭಟ್ಟರು ಬರೆದ ‘ಅರ್ಥಶಾಸ್ತ್ರ ’ ಅವರ ಮೊದಲ ಶಾಸ್ತ್ರೀಯ ಗ್ರಂಥ. ಕಾದಂಬರಿ, ಕತೆ, ಕವನ, ಇತಿಹಾಸ, ಸಂಶೋಧನೆ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃತಿ ರಚಿಸಿರುವ ಭಟ್ಟರು ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಆರು ಬೃಹತ್‌ ಸಂಪುಟಗಳಲ್ಲಿ ಪ್ರಕಟವಾದ ತುಳು ನಿಘಂಟಿನ ಸಂಪಾದಕರಾಗಿದ್ದರು.

ಕೃತಿಗಳು

ಬದಲಾಯಿಸಿ
  • ಇತಾಲಿಯಾ ನಾನು ಕಂಡಂತೆ
  • ಜಗದಗಲ
  • ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯಾ
  • ರಂಗಾಯನ
  • ವರ್ತಮಾನ ಕಾಲದ ನಾಲ್ವರು ಮಹಾನುಭಾವರು
  • ಯುಗವಾಣಿ
  • ಕಡಲಿನ ಸಂಪತ್ತು
  • ಕಾಲವೇ ಬದಲಾಗಿದೆ
  • ಸ್ವಾತಂತ್ರ್ಯ ಮತ್ತು ಸಂಸ್ಕೃತಿ
  • ಶಿಕ್ಷಣ ಮತ್ತು ಜೀವನದ ಅರ್ಥ
  • ಅರ್ಥಶಾಸ್ತ್ರ
  • ಪ್ರಜಾತಂತ್ರದ ಹೆದ್ದಾರಿ
  • ಏಶಿಯಾದ ಸಂಪತ್ತು
  • ಕಾರಂತ ಪ್ರಪಂಚ (ಸಂಪಾದನೆ)
  • ಸಮಗ್ರ ಯಕ್ಷಗಾನ: ಪರಂಪರೆ ಮತ್ತು ಪ್ರಯೋಗ (ಸಂಪಾದನೆ)
  • ಕನ್ನಡ ಕಟ್ಟಿದವರು
  • ಬದುಕುವ ದಾರಿ ( ಆಲ್ಬರ್ಟ ಶ್ವೈಟ್ಝರ ನ ಪುಸ್ತ್ಕಕದ ಸಂಗ್ರಹ )
  • ಕಟ್ಟಂಗೇರಿ ಕೃಷ್ಣ ಹೆಬ್ಬಾರ

ಅನುವಾದ

ಬದಲಾಯಿಸಿ
  • ರಮಾನಾಥ (ಮೂಲ:ಪ್ರೇಮಚಂದ್ರರ ಕಾದಂಬರಿ:' ಗಬನ್ ' )
  • ಅಮೆರಿಕದ ಆರು ಕತೆಗಳು
  • ಘಂಟಮಾರಾ ( ಮೂಲ: ಇಟಾಲಿಯನ್ ಲೇಖಕ:ಇನ್ಶತ್ಸಿಯೊ ಸಿಲೋನೆ)
  • ನಡುಹಗಲಿನಲ್ಲಿ ಕಗ್ಗತ್ತಲೆ (ಮೂಲ: ಆರ್ಥರ್ ಕೋಸ್ಲರ್)
  • ಮ್ಯಾನ್ ದ ಅನ್‍ನೋನ್ (ಮೂಲ: ಅಲೆಕ್ಸಿಸ್ ಕೆರಲ್ ; ಲಕ್ಷ್ಮೀನಾರಾಯಣ ಆಚಾರ್ಯರ ಜೊತೆಗೆ)

ಪುರಸ್ಕಾರ

ಬದಲಾಯಿಸಿ

ಕು.ಶಿ.ಹರಿದಾಸ ಭಟ್ಟರು ಬರೆದ ಕೆ.ಕೆ.ಹೆಬ್ಬಾರ ರವರ ಜೀವನ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೧೯೮೮ನೆಯ ಸಾಲಿನ ಬಹುಮಾನ ಲಭಿಸಿದೆ. ಇದಲ್ಲದೆ ೧೯೮೫ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೮೬ರಲ್ಲಿ ಫಿನ್‌ಲ್ಯಾಂಡ್‌ಪ್ರಶಸ್ತಿ ಹಾಗೂ ೧೯೮೯ರಲ್ಲಿ ಪ್ರತಿಷ್ಠಿತ ವಿಶ್ವ ಮಾನವ ಪ್ರಶಸ್ತಿ ಮುಂತಾದ ಗೌರವಗಳು ಕೂಡಾ ಭಟ್ಟರಿಗೆ ಸಂದಿದ್ದವು.

ಈ ಮಹಾನ್ ಸಾಂಸ್ಕೃತಿಕ ಮಹಾನುಭಾವರು ಆಗಸ್ಟ್ ೨೦, ೨೦೦೦ದಲ್ಲಿ ಈ ಲೋಕವನ್ನಗಲಿದರು. ಅವರು ಉಳಿಸಿ ಹೋಗಿರುವ ಸಾಂಸ್ಕೃತಿಕ ಸೌಗಂಧ ಚಿರಂತನವೆನಿಸಿದೆ.

ಉಲ್ಲೇಖಗಳು

ಬದಲಾಯಿಸಿ