ಕುರಾನು

ಇಸ್ಲಾಂ ಧರ್ಮದ ಪವಿತ್ರ ಗ್ರಂಥ

ಕುರಾನು ಇಸ್ಲಾಂ ಧರ್ಮದ ಮೂಲಾಧಾರ ಗ್ರಂಥ, ಕುರಾನು ಎಂಬುದು ಕುರ್ ಆನ್ ಎಂಬ ಪದಗಳಿಂದಾಗಿದ್ದು ಮೂಲ ಅರಬ್ಬೀ ಶಬ್ದವಾದ ಕರಾ ಎಂದರೆ ಓದು ಎಂಬುದಕ್ಕೆ ಸಂಬಂಧಿಸಿದೆ. ಅರಬ್ಬೀ ಭಾಷೆಯಲ್ಲಿ ಇದಕ್ಕೆ ಆಲ್-ಫರ್ಕ್ವಾನ್ (ಪ್ರಸಿದ್ಧಗ್ರಂಥ), ಕಲಮುಲ್ಲಾ (ದೇವನ ನುಡಿ), ಕಿತಾಬ್ (ಪವಿತ್ರ ಗ್ರಂಥ), ನೂರ್ (ದಿವ್ಯಜ್ಯೋತಿ) ಮತ್ತು ಆಲ್‍ಹುದಾ (ಮಾರ್ಗದರ್ಶಕ) ಎಂಬ ಹೆಸರುಗಳಿವೆ. ಇದಕ್ಕಿರುವ ಹಲವಾರು ಹೆಸರುಗಳಲ್ಲಿ ಕೆಲವನ್ನು ಕುರಾನಿನಲ್ಲಿ ಸೂಚಿಸಿದೆ; ಮತ್ತೆ ಕೆಲವನ್ನು ಮುಸಲ್ಮಾನರು ಕೊಟ್ಟಿರುತ್ತಾರೆ. ಕುರಾನನ್ನು ಇಸ್ಲಾಂ ಧರ್ಮದ ಎಲ್ಲ ಪಂಗಡದವರೂ ಅತ್ಯಂತ ಪೂಜ್ಯಭಾವನೆಯಿಂದ ಕಾಣುತ್ತಾರೆ.

Manuscript of the Quran. Brooklyn Museum.
11th-century North African Quran in the British Museum.
Quran − in Mashhad, Iran − written by Ali.
ಪೆಟ್ರಾ; ಇಸ್ಲಾಮಿಕ್ ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಡಾನ್ ಗಿಬ್ಸನ್ ಪ್ರಕಾರ, ಮೊಹಮ್ಮದ್ ತನ್ನ ಯೌವನದಲ್ಲಿ ವಾಸಿಸುತ್ತಿದ್ದ ಮತ್ತು ಅವನ ಮೊದಲ ಬಹಿರಂಗಪಡಿಸುವಿಕೆಯನ್ನು ಪಡೆದ ಸ್ಥಳ ಇದು. ಮೊದಲ ಮುಸ್ಲಿಂ ಮಸೀದಿಗಳು ಮತ್ತು ಸ್ಮಶಾನಗಳು ತೋರಿಸಿದಂತೆ, ಇದು ಮುಸ್ಲಿಮರ ಮೊದಲ ಕಿಬ್ಲಾ ನಿರ್ದೇಶನವೂ ಆಗಿದೆ.[][]
 
Birmingham Quran manuscript dated among the oldest in the world.

ಶುಚಿ ಸ್ನಾನವಿಲ್ಲದೆ, ಕೈತೊಳೆಯದೆ ಇದನ್ನು ಓದುವಂತಿಲ್ಲ, ಮುಟ್ಟುವಂತೆಯೂ ಇಲ್ಲ, ಇದರ ವಚನಗಳನ್ನು ಬರೆದು ತಾಯಿತವಾಗಿ ಅಥವಾ ರಕ್ಷಾಬಂಧನವಾಗಿ ಉಪಯೋಗಿಸುತ್ತಾರೆ. ಇದು ಇಸ್ಲಾಂ ಮತದ ಶಾಶ್ವತ ಪವಾಡ ಗ್ರಂಥವೆಂದೂ ಉದಾತ್ತ ಸತ್ಯವನ್ನು ವ್ಯಾಖ್ಯಾನಿಸುವ ಗ್ರಂಥವೆಂದೂ ಹಿಂದಿನ ಸಮಸ್ತ ಧರ್ಮಗಳೂ ಪರಿಗಣಿಸಿರುವ ತತ್ತ್ವಗಳಿಗಿಂತಲೂ ಉತ್ತಮ ತತ್ತ್ವಗಳನ್ನು ಸಾರುವ ಗ್ರಂಥವೆಂದೂ ಪರಮಾತ್ಮನನ್ನು ಕಾಣಲು, ಮುಕ್ತಿಯನ್ನು ಪಡೆಯಲು ಶ್ರೇಷ್ಠಮಾರ್ಗದರ್ಶಿಯೆಂದೂ ಪರಿಗಣಿತವಾಗಿದೆ. ಇದನ್ನು ಎಲ್ಲ ಧರ್ಮಶಾಸ್ತ್ರಗಳ ಪರಿಪೂರ್ಣತೆಯಂದೂ ಮೂಲವಾಗಿ ಸೃಷ್ಟಿಯಾಗದ ಹಾಗೂ ಪೈಗಂಬರನಿಗೆ ಒಪ್ಪಿಸುವುದಕ್ಕೆ ಮುಂಚೆ ದೇವ ಲಿಪಿಕಾರರಿಂದ ಲಿಖಿತವಾದ, ಶ್ರೀಮಂತವಾದ ಮತ್ತು ಸ್ವಯಂಪೂರ್ಣವಾದ ಗ್ರಂಥವೆಂದೂ ಹೇಳಲಾಗಿದೆ. ಇಡೀ ಗ್ರಂಥ ಪೂರ್ಣವಾಗಿ ಸ್ವರ್ಗದಲ್ಲಿ ಇರಿಸಲ್ಪಟ್ಟಿದ್ದು, ತರುವಾಯ ಅವಶ್ಯಕತೆ ಉಂಟಾದಾಗಲೆಲ್ಲ ಇಪ್ಪತ್ತಮೂರುವರ್ಷಗಳ ವಿವಿಧ ಕಾಲಗಳಲ್ಲಿ, ಇದನ್ನು ಪಡೆಯುವುದಕ್ಕಾಗಿಯೇ ವಿವಿಧ ರೂಪಗಳಲ್ಲಿ, ಧರೆಗಿಳಿದ ಪ್ರಮುಖ ದೇವದೂತ ಗ್ಯಾಬ್ರಿಯಲನ ಮೂಲಕ, ಪರಮಾತ್ಮನಿಂದ ದೊರಕಿತೆಂದು ಮುಸಲ್ಮಾನರು ತಿಳಿಯುತ್ತಾರೆ. ಈ ಪುಣ್ಯಗ್ರಂಥದ ಕೆಲವು ಅಧ್ಯಾಯಗಳು ಪೂರ್ತಿಯಾಗಿ ಸಾಕ್ಷಾತ್ಕಾರವಾದವು, ಉಳಿದವು ಭಾಗಗಳಲ್ಲಿ ದೊರೆತವು.

 
First sura of the Quran, Al-Fatiha, consisting of seven verses.
 
At-Tin (the fig), 95th sura of the Quran.

ಕುರಾನು ಮೂವತ್ತು ಭಾಗಗಳಾಗಿ ವಿಂಗಡಣೆಯಾಗಿದ್ದು ೧೧೪ ಸುರಾ (ಅಧ್ಯಾಯ) ಗಳನ್ನೊಳಗೊಂಡಿದೆ. ಕೆಲವು ಅಧ್ಯಾಯಗಳು ಧೀರ್ಘವಾಗಿಯೂ ಉಳಿದವು ಸಂಕ್ಷಿಪ್ತವಾಗಿಯೂ ಇವೆ. ಪ್ರತಿಯೊಂದು ಭಾಗವೂ ನಾಲ್ಕು ಉಪವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಪೈಗಂಬರನ ನಿರ್ದೇಶನದಲ್ಲಿ ಅಧ್ಯಾಯಗಳು ಜೋಡಣೆಯಾದುವು, ಸಾಕ್ಷಾತ್ಕಾರವಾದ ವಚನಗಳನ್ನು ನಿರ್ದಿಷ್ಟ ಅಧ್ಯಾಯಗಳಲ್ಲಿಯೇ ಸೇರಿಸುವಂತೆ ಆತ ಲಿಪಿಕಾರರಿಗೆ ಸೂಚನೆ ಕೊಡುತ್ತಿದ್ದ. ಹೀಗೆ, ಕುರಾನಿನ ವಿಷಯ ಕಾಲಾನುಕ್ರಮವಿಲ್ಲದೆ ಜೋಡಣೆಯಾಗಿರುವುದು ಪೈಗಂಬರನ ಆದೇಶದಂತೆಯೇ ಹೊರತು ನೋಟತಪ್ಪಿ ಅಲ್ಲ. ಕುರಾನಿನ ವಿಷಯಸಂಗ್ರಹಣ ಕಾರ್ಯವನ್ನು ಅಬುಬಕರನ ಅಪ್ಪಣೆಯಂತೆ ಕೈಗೊಳ್ಳಲಾಯಿತು. ಈ ಉದ್ದೇಶಕ್ಕಾಗಿಯೇ ಗ್ರಂಥದ ಒಂದು ಪ್ರತಿಯನ್ನು ಪೈಗಂಬರನ ವಿಧವೆ ಹಾಪ್ಸಾಳ ವಶಕ್ಕೆ ಕೊಡಲಾಗಿತ್ತು. ಕುರಾನಿನ ಪ್ರಥಮ ಸಂಗ್ರಹಕಾರನಾಗಿದ್ದ ಸಾಬಿತ್ ಎಂಬಾತನ ಮಗ ಜೈಯದ್, ಜಿಬೇರ್ ಎಂಬಾತನ ಮಗ ಅಬ್ದುಲ್ಲಾ. ಆಸ್ ಎಂಬಾತನ ಮಗ ಸೈಯದ್ ಮತ್ತು ಹ್ಯಾರಿಸ್ ಎಂಬಾತನ ಮಗ ಅಬ್ದುಲ್ ರಹಮಾನ್-ಈ ತಜ್ಞರ ಮೇಲ್ವಿಚಾರಣೆಯಲ್ಲಿ ಮೂರನೆಯ ಕಲೀಫ್ ಉಸ್ಮಾನನ ಅನುಜ್ಞೆಯಂತೆ ಕುರಾನಿನ ಪರಿಷ್ಕರಣ ಪ್ರಾರಂಭವಾಯಿತು. ಮೂಲ ಪ್ರತಿಯೊಡನೆ ಸಂಗ್ರಹಿಸಿದ ತುಣುಕುಗಳನ್ನು ಹೋಲಿಸಿ ಇಡೀ ಗ್ರಂಥವನ್ನು ಅಧ್ಯಾಯಗಳಾಗಿ ವಿಂಗಡಿಸಲಾಯಿತು. ಪರಿಷ್ಕತ ಗ್ರಂಥವನ್ನು ಕಲೀಫನಿಗೆ ಒಪ್ಪಿಸಲಾಯಿತು. ಕಲೀಫ ಗ್ರಂಥದ ಅನೇಕ ಪ್ರತಿಗಳನ್ನು ಮಾಡಿಸಿ ಅವನ್ನು ಇಸ್ಲಾಂ ಧರ್ಮದ ವಿವಿಧ ಕೇಂದ್ರಗಳಿಗೆ ಕಳುಹಿಸಿದ. ಆ ಪ್ರತಿಗಳು ಈ ಪವಿತ್ರ ಗ್ರಂಥದ ತರುವಾಯದ ಪ್ರತಿಗಳಿಗೆ ಆಧಾರವಾದವು. ಹಳೆಯ ಗ್ರಂಥದ ಅವಶಿಷ್ಟಗಳನ್ನು ವಶಪಡಿಸಿಕೊಂಡು ಸುಡಲಾಯಿತು. ಮಸೂದ್ ಎಂಬಾತನ ಮಗ ಅಬ್ದುಲ್ಲಾ, ಸಲೀಂ, ಆಲಿ, ನಾಲ್ಕನೆಯ ಕಲೀಫ್ ಜಬಾಲ್ ಎಂಬಾತನ ಮಗ ಮೌಜ್, ಕಾಬ್ ಎಂಬಾತನ ಮಗ ಉಬಯಜ್, ಉಮರ್ ಎಂಬಾತನ ಮಗ ಅಬ್ದಲ್ಲಾ ಇವರೇ ಮೊದಲಾದ ಪೈಗಂಬರನ ಒಳನಾಡಿಗಳು ಕುರಾನನ್ನು ಪೂರ್ತಿಯಾಗಿ ನೆನಪಿಟ್ಟುಕೊಂಡಿದ್ದುದರಿಂದಲೂ ಮತ್ತೆ ಹಲವರು ಅದರ ಭಾಗಗಳನ್ನು ಕಂಠಪಾಟಮಾಡಿದ್ದರಿಂದಲೂ ತಪ್ಪಿಲ್ಲದಂತೆ ವಿಷಯಗಳನ್ನು ಪಡೆದುಕೊಳ್ಳಲು ಮತ್ತು ಸಂಗ್ರಹಿಸಿದ ವಿಷಯಗಳನ್ನು ಅಗತ್ಯವಿದ್ದಂತೆ ಜೋಡಿಸಲು ತೊಂದರೆಯಾಗಲಿಲ್ಲ. ಪೈಗಂಬರ್ ಸುರಾಗಳಲ್ಲಿನ ವಚನಗಳನ್ನು ಬರೆಯುವಂತೆ ಮತ್ತು ಕಂಠಪಾಠ ಮಾಡುವಂತೆ ತನ್ನ ಒಡನಾಡಿಗಳಿಗೆ ಉತ್ತೇಜನವಿತ್ತ. ಈ ಗ್ರಂಥದ ಬಗ್ಗೆ ಮುಸಲ್ಮಾನರಿಗೆ ಆಸಕ್ತಿ ಅಪಾರವಾದ್ದರಿಂದ, ಅದು ಕಳೆದ ಸಾವಿರದ ನಾನೂರು ವರ್ಷಗಳಿಂದಲೂ ಯಾವ ಬದಲಾವಣೆಯೂ ಇಲ್ಲದೆ ತನ್ನ ಪವಿತ್ರತೆಯನ್ನು ಉಳಿಸಿಕೊಂಡು ಬಂದಿದೆ. ಕುರಾನು ಮಕ್ಕಾ ಭಾಷೆಯಾದ ಕೊರೈಷ್ ದೇಸಿ ನುಡಿಯಲ್ಲಿ ಸಾಕ್ಷಾತ್ಕಾರವಾಯಿತು. ಅದೇ ಪ್ರಾಂತ್ಯ ಭಾಷೆಯಲ್ಲಿ ಜನ ಅದನ್ನು ಓದುವಂತೆ ಮಾಡುವುದೇ ಉಸ್ಮಾನನ ಉದ್ದೇಶವಾಗಿತ್ತು. ಕುರಾನಿನ ಅಧ್ಯಾಯಗಳಿಗೆ ಕೊಟ್ಟಿರುವ ಶಿರೋನಾಮೆಗಳು ಮುಖ್ಯ ಹೆಸರುಗಳಿಗೆ, ದೃಷ್ಟಾಂತ ಕಥೆಗಳಿಗೆ ಅಥವಾ ಅಧ್ಯಾಯಗಳ ಪ್ರಾರಂಭದಲ್ಲಿ ಸೂಚಿಸಿರುವ ವರ್ಣಮಾಲೆಯ ಅಕ್ಷರ ಅಥವಾ ಅಕ್ಷರಗಳಿಗೆ ಸಂಬಂಧಪಟ್ಟಂತಿವೆ. ಉದಾಹರಣೆಗೆ ಅಲ್-ಫತೆ-ಹ ಅಥವಾ ಪ್ರಾರಂಭಿಕ ಅಧ್ಯಾಯ ಎಂದು ಒಂದನೆಯ ಅಧ್ಯಾಯವನ್ನು ಹೆಸರಿಸಿದೆ. ಅದರ ಪ್ರಾರಂಭದ ಪದಗಳು ಅಲ್ ಅಹಮದ್' ಇತ್ಯಾದಿಯಾಗಿರುವುದರಿಂದ ಅದನ್ನು ಅಲ್ ಅಹಮದ್ ಎಂದು ಸಹ ಕರೆಯಲಾಗಿದೆ.

ಸಾಹಿತ್ಯ ಮತ್ತು ಶೈಲಿ

ಬದಲಾಯಿಸಿ

ಕುರಾನ್ ಪರಮಾತ್ಮನ ಅಮರವಾಣಿ. ಅಪ್ರತಿಮ ಭಾಷಾ ಸೌಂದರ್ಯದಿಂದ ಈ ಅಮರವಾಣಿ ಹೊರಟಿದೆ. ಈ ಗ್ರಂಥದಲ್ಲಿ ಮೂರ್ತವಾಗಿರುವ ತತ್ತ್ವಗಳು ಸತ್ಯದ ಘೋಷಣೆ ಎಂದು ಪ್ರತಿಯೊಬ್ಬ ಮುಸಲ್ಮಾನನೂ ನಂಬುತ್ತಾನೆ. ಮುಸ್ಲಿಮೇತರರು ಹಾಗೂ ಯೂರೋಪಿನ ವಿಮರ್ಶಕರು ಇದರ ಸಾಹಿತ್ಯ ಪ್ರತಿಭೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಶ್ರೋತೃಗಳಿಗೆ ಕುರಾನಿನ ವಚನಗಳು ಎಷ್ಟು ಆಕರ್ಷಣೀಯವಾಗಿದ್ದುವೆಂದರೆ, ಪೈಗಂಬರನ ವಿರೋಧಿಗಳನೇಕರು ಅವು ಮಾಟದ ಇಲ್ಲವೆ ಮಾಯೆಯ ಜಾಲವೆಂದು ತಿಳಿದರು' ಎಂದು ಕುರಾನನ್ನು ಅನುವಾದ ಮಾಡಿ ಪ್ರಸಿದ್ಧರಾದ ಮ್ಹಿಸೇಲ್ ಅವರು ಹೇಳುತ್ತಾರೆ. ಮಕ್ಕಾನಗರದಲ್ಲಿ ಪಂಡಿತರೆಂದೂ ಕೊರೈಷ್ ಪಂಗಡದ ಮುಖಂಡರೆಂದೂ ಗಣ್ಯಸ್ಥಾನ ಪಡೆದಿದ್ದ ಪೈಗಂಬರನ ಉಗ್ರ ವಿರೋಧಿಗಳು ಸಹ ಹೀಗೆ ಟೀಕಿಸಿರುವುದನ್ನು ಕುರಾನು ಸ್ವತಃ ವ್ಯಕ್ತಿಪಡಿಸುತ್ತದೆ. ಈ ವಿರೋಧಿಗಳಲ್ಲಿ ಮುಘೀರನ ಮಗ ವಾಲೀದ್ ಒಬ್ಬ. ಈತ ಖ್ಯಾತಿವೆತ್ತ ಸೇನಾಧಿಪತಿ ಖಲೀದನ ತಂದೆ, ಕುರಾನಿನ ಕೆಲವು ವಚನಗಳನ್ನು ಕೇಳಿದ ವಾಲೀದ್ ಮಾಡಿದ ಕೆಲವು ಟೀಕೆಗಳನ್ನು ಕುರಾನಿನ ಈ ಕೆಳಕಂಡ ಸುರಾದಲ್ಲಿ ಸೊಗಸಾಗಿ ವರ್ಣಿಸಲಾಗಿದೆ.

'ಆತ (ವಾಲೀದ್) ಅವನಿಗಾಗಿ ಓದಿದ ವಚನಗಳನ್ನು ತೂಗಿಸಿ ನೋಡಿದವನಂತೆ ಅಲ್ಲಗಳೆದು ಟೀಕಿಸಿದ. ಆ ವಚನಗಳನ್ನು ಎಷ್ಟೇ ಕೀಳಾಗಿ ಟೀಕಿಸಿದರೂ ಅವನು ಸಾವಿಗೆ ಪಾತ್ರ. ಅಷ್ಟೇ ಅಲ್ಲ, ಅವನು ಎಷ್ಟೇ ತಪ್ಪಾಗಿ ಅವುಗಳನ್ನು ಪರಿಗಣಿಸಿದರೂ ಅವನಿಗೆ ಸಾವೇ ಸರಿ. ಅವನು ಸುತ್ತಲೂ ನೋಡಿ, ತರುವಾಯ ಹುಬ್ಬುಗಂಟ್ಟಿಕ್ಕಿ (ಮತ್ತು ವಿಷಣ್ಣವದನನಾಗಿ) ಹಿಂತಿರುಗಿ, ಗರ್ವದಿಂದ ಉಬ್ಬಿ ಹೇಳಿದ: ಇದು ಮಾಯಾಜಾಲವಲ್ಲದೆ ಮತ್ತೇನು?'

ಎರಡನೆಯ ಕಲೀಫ್ ಉಮರ್, ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಕ್ಕೆ ಮುಂಚೆ ಪೈಗಂಬರನ ವಿರೋಧಿಯಾಗಿದ್ದು, ಒಮ್ಮೆ ಪೈಗಂಬರನನ್ನು ಕೊಲೆಮಾಡಲು ತನ್ನ ನೆಲೆಯಿಂದ ಹೊರಟ. ಹಾದಿಯಲ್ಲಿ ಅವನಿಗೆ ಇಸ್ಲಾಂ ಮತವನ್ನು ಅಗಲೇ ಅವಲಂಬಿಸಿದ್ದ ತನ್ನ ತಂಗಿಯನ್ನು ಸಂಧಿಸುವ ಸಂದರ್ಭವೊದಗಿ, ಆಕೆ ಕುರಾನಿನ ಕೆಲವು ವಚನಗಳನ್ನು ಓದುತ್ತಿದ್ದುದನ್ನು ಕಂಡ. ಆ ವಚನಗಳನ್ನು ತಾನು ಸಹ ಓದಿ ಕೂಡಲೆ ಮುಸಲ್ಮಾನನಾಗುವಷ್ಟರ ಮಟ್ಟಿಗೆ ಅವುಗಳಿಂದ ಪ್ರಭಾವಿತನಾದ. ಅದೇ ವಚನಗಳ ಅನುವಾದವನ್ನು ಇಲ್ಲಿ ಕೊಟ್ಟಿದೆ:

'ಎಲೆ ಮಾನವ, ನೀನು ದುಃಖಿಸುತ್ತಲೇ ಇರಬೇಕೆಂಬ ಉದ್ದೇಶದಿಂದ ಕುರಾನನ್ನು ನಾವು ನಿನಗೆ ಸಾಕ್ಷಾತ್ಕಾರ ಮಾಡಿಕೊಟ್ಟಿಲ್ಲ. ಅದು ಭಗವಂತನಿಗೆ ಹೆದರಿ ನಡೆಯಬೇಕೆಂಬುದಕ್ಕೆ ಜ್ಞಾಪನ; ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮಹಾನುಭಾವನಿಂದ ಸಾಕ್ಷಾತ್ಕಾರವಾದ ಅಮರವಾಣಿ. ಅವನೇ ರಹಮಾನ್, ಅಂದರೆ ದಯಾಸಾಗರ. ಅವನೇ ಧರ್ಮಪೀಠವನ್ನಲಂಕರಿಸಿರುವಾತ. ಅವನೇ ಭೂಮ್ಯಾಕಾಶಗಳಲ್ಲಿನ, ಭೂತಳದಲ್ಲಿನ ಸಮಸ್ತವನ್ನೂ ವ್ಯಾಪಿಸಿರುವಾತ. ನಿನ್ನ ಮಾತು ಉಚ್ಚಧ್ವನಿಯಿಂದ ಕೂಡಿದ್ದರೆ. ನಿನ್ನ ಹೃದಯಾಂತರಾಳದಲ್ಲಿರುವುದನ್ನು ಗ್ರಹಿಸುವ ಶಕ್ತಿ ಅವನದು. ಅಂಥ ಸರ್ವಶಕ್ತನೆ ಅಲ್ಲಾ. ಅವನಿಗಿಂತ ಬೇರೊಬ್ಬ ದೇವನಿಲ್ಲ. ಅವನದೇ ಸರ್ವೋತ್ಕೃಷ್ಟ ನಾಮಾವಳಿ.

ಇಂಥ ಶೈಲಿ ಕುರಾನಿನದು. ಇದು ಸುಂದರ, ಸ್ಪಷ್ಟ, ಸಂಕ್ಷಿಪ್ತ ಹಾಗೂ ಮನವೊಲಿಸುವ ಶೈಲಿ. ವಿಷಯವನ್ನು ಸುಲಭವಾಗಿ ತಿಳಿಸುವ ಸಾಮರ್ಥ್ಯ ಈ ಶೈಲಿಯಲ್ಲಿದೆ. ಕೆಲವು ಸಂದರ್ಭಗಳಲ್ಲಿದು ಓದುವುದಕ್ಕಿಂತ ಕೇಳುವುದಕ್ಕಾಗಿಯೇ ಸೃಷ್ಟಿಯಾದ ಶೈಲಿಯಾಗಿದೆ. ಪರಮಾತ್ಮನ ಪವಿತ್ರ ಗುಣಗಳನ್ನು ವರ್ಣಿಸುವ ಮತ್ತು ಯೋಧರಿಗೆ, ಸತ್ಯಶೋಧಕರಿಗೆ, ಎದೆಗುಂದಿದವರಿಗೆ ಮಾರ್ಗದರ್ಶನ ನೀಡುವ ಸಂದರ್ಭಗಳಲ್ಲಿ ಶೈಲಿ ಭವ್ಯವಾಗಿದೆ. ಕುರಾನು ಪದ್ಯರೂಪದಲ್ಲಾಗಲಿ, ಸರಳ ಗದ್ಯದಲ್ಲಾಗಲಿ ರಚಿತವಾಗಿಲ್ಲ. ಪದಗಳು ಯುಕ್ತವಾಗಿ ಆಯ್ಕೆಯಾಗಿ ಸುಂದರವಾಗಿ ಜೋಡಿಸಲ್ಪಟ್ಟಿದ್ದು ವಾಕ್ಯಗಳು ಲಯಬದ್ದವಾಗಿವೆ. ಪ್ರತಿಯೊಂದು ಅಧ್ಯಾಯವೂ ಲಯಬದ್ಧ ಪದಗಳೊಂದಿಗೆ ಮುಕ್ತಾಯವಾಗುತ್ತದೆ.

ಆಧ್ಯಾತ್ಮಿಕತೆ

ಬದಲಾಯಿಸಿ

ರಚನಾ ಸೌಂದರ್ಯವಷ್ಟೇ ಅಲ್ಲದೆ ಕುರಾನಿನಲ್ಲಿ ಸೃಷ್ಟಿಯ ಐಕ್ಯತೆ ಹಾಗೂ ಪರಮಾತ್ಮನ ಏಕಸ್ವರೂಪದ ವಿಷಯದಲ್ಲಿ ಮೂಲ ಕಲ್ಪನೆಗಳಿವೆ. ವಿಧರ್ಮಿಗಳಾದ ಅರಬರು ಅನೇಕ ವಿಗ್ರಹಗಳನ್ನು ಪೂಜಿಸುತ್ತಿದ್ದರೂ ಒಬ್ಬ ಹಿರಿಯ ದೇವನಿದ್ದಾನೆಂದು ನಂಬಿ, ಅವನನ್ನು ಅಲ್ಲಾ ಎಂದು ಕರೆಯುತ್ತಿದ್ದರು ; ಭೂಮ್ಯಾಕಾಶಗಳನ್ನು ಸೃಷ್ಟಿಸಿದವ, ಸ್ವಯಂ ಅಸ್ತಿತ್ವ ಹೊಂದಿ ದೇವತೆಗಳನ್ನೂ ಮಾನವರನ್ನೂ ಜಗತ್ತಿನ ಎಲ್ಲ ಜೀವರಾಶಿಗಳನ್ನೂ ಸ್ಪಷ್ಟಿಸಿದವ ಅಲ್ಲಾ ಎಂದು ಅವರು ಭಾವಿಸಿದ್ದರು. ಕುರಾನು ಹೀಗೆ ತಿಳಿಸುತ್ತದೆ:

ಭೂಮ್ಯಾಕಾಶಗಳನ್ನು ಸೃಷ್ಟಿಸಿದವ ಯಾವನೆಂದು ಅವರನ್ನು ಕೇಳಿರಿ, ಅವರು ಉತ್ತರಿಸುತ್ತಾರೆ ಅವನ್ನು ಸೃಷ್ಟಿಸಿದವ ಅಲ್ಲಾ ಎಂದು. ಅದರೂ ಪರಮಶ್ರೇಷ್ಠನಾದ ಅಲ್ಲಾನ ಜೊತೆಗೆ ಕಿರುದೇವತೆಗಳಲ್ಲಿಯೂ ಅವರು ನಂಬಿಕೆಯಿಟ್ಟಿದ್ದರು. ಅಲ್ಲಾನ ಹೊರತು ಬೇರೊಬ್ಬ ದೇವರಿಲ್ಲ ಎಂದು ಘೋಷಿಸಿದಾಗ ಅದನ್ನು ಕೇಳಿ ಅವರು ವಿಸ್ಮಿತರಾದರು. ಕುರಾನಿನ ಪ್ರಕಾರ ಅವರು ನುಡಿದ ಮಾತುಗಳಿವು: 'ಏನು? ಮಹಮದ್ದನು ಅನೇಕ ದೇವತೆಗಳನ್ನು ಒಬ್ಬನೇ ದೇವರನ್ನಾಗಿ ಮಾಡುತ್ತಾನೆಯೇ? ಆಶ್ಚರ್ಯ, ಆಶ್ಚರ್ಯ!'

ಅಧ್ಯಾಯಗಳು

ಬದಲಾಯಿಸಿ

ಕುರಾನಿನ ಅಧ್ಯಾಯಗಳನ್ನು ಮಕ್ಕಾ ಅಧ್ಯಾಯಗಳು, ಮದಿನಾ ಅಧ್ಯಾಯಗಳು ಎಂದು ವಿಂಗಡಿಸಿದೆ. ಮಕ್ಕಾ ಅಧ್ಯಾಯಗಳು ಉತ್ಸಾಹ ಕೆರಳಿಸುವ ಕಾವ್ಯಶೈಲಿಯಲ್ಲಿವೆ. ತೇಜೋಮಯವಾದ ವಾಕ್ಯಗಳಿಂದ ಕೂಡಿವೆ. ವಿಗ್ರಹಾರಾಧನೆಯನ್ನು ಖಂಡಿಸಿ, ನಂಬಿದವರಿಗೆ ಸ್ವರ್ಗವೂ ದುರುಳರಿಗೆ ಘೋರ ನರಕವೂ ಕಾದಿದೆಯೆಂದು ತಿಳಿಸಿ, ಪರಮಾತ್ಮನ ಏಕಸ್ವರೂಪವನ್ನೂ ಪವಿತ್ರ ಗುಣಗಳನ್ನೂ ವಿವರಿಸಿ, ಪ್ರವಾದಿಗಳಲ್ಲಿ ಕೆಲವರ ಬಗ್ಗೆ ಉಲ್ಲೇಖಿಸಿ ಅವರ ಕಾಲದಲ್ಲಿ ನಡೆದ ಘಟನೆಗಳನ್ನೂ ದೇವರು ನಡೆಸುವ ಕೊನೆಯ ವಿಚಾರಣೆಯ ದಿನವನ್ನೂ ವರ್ಣಿಸುತ್ತವೆ. ಈ ಅಧ್ಯಾಯಗಳು ಪ್ರಕೃತಿಯಲ್ಲಿನ ವಸ್ತುಗಳ ಮೆಚ್ಚಿಗೆಯೊಂದಿಗೆ ವಾಗ್ವೈಖರಿಯಲ್ಲಿ ಶ್ರೀಮಂತವಾಗಿವೆ. ಅವುಗಳಲ್ಲಿ ಅನೇಕವು ಒಂದು ಅಥವಾ ಹೆಚ್ಚಿನ ಶಪಥಗಳಿಂದ ಪ್ರಾರಂಭವಾಗಿ ಅರಬರಿಗೆ ಮನ ಮುಟ್ಟುವ ಮಾದರಿಯಲ್ಲಿವೆ.

'ಸೂರ್ಯ ಮತ್ತು ಅವನ ತೇಜಸ್ಸಿನಿಂದ, ಅವನನ್ನು ಹಿಂಬಾಲಿಸುವ ಮಧ್ಯಾಹ್ನದಿಂದ ಅವನನ್ನು ಕಾಣಿಸುವ ಹಗಲಿನಿಂದ, ಅವನನ್ನು ವ್ಯಾಪಿಸಿಕೊಳ್ಳುವ ನಿಶೆಯಿಂದ, ಅವನು ಸೃಷ್ಟಿಸಿದ ಆಕಾಶದಿಂದ ಅವನು ವಿಸ್ತರಿಸಿದ ಭೂಮಿಯಿಂದ ಯಾವುದು ಸತ್ಯ, ಯಾವುದು ಅಸತ್ಯವೆಂಬ ಅರಿವನ್ನು ತುಂಬಿ ಅವನು ಸೃಷ್ಟಿಸಿ ಪರಿಪೂರ್ಣಗೊಳಿಸಿರುವ ಆತ್ಮನಿಂದ ಪರಮಾತ್ಮ ಸಾಕ್ಷಾತ್ಕಾರವಾಗುತ್ತಾನೆ.'

ಮದಿನಾ ಅಧ್ಯಾಯಗಳು ಅದೇ ವಿಷಯಗಳನ್ನು ತಿಳಿಸುವುದಾದರೂ ಅವನ್ನು ಸಾಮಾನ್ಯವಾಗಿ ಹೆಚ್ಚು ವಿವರವಾಗಿ ವರ್ಣಿಸುತ್ತವೆ. ಅಧ್ಯಾಯಗಳು ದೀರ್ಘವಾಗಿದ್ದು ವಿಷಯ ಗದ್ಯರೂಪದಲ್ಲಿದೆ. ಈ ಅಧ್ಯಾಯಗಳಲ್ಲಿರುವ ಹೆಚ್ಚಿಗೆ ವಿಷಯಗಳಿವು : ೧ ವ್ಯಾವಹಾರಿಕ ಹಾಗೂ ಅಪರಾಧ ಸಂಬಂಧಿ ಕಾಯಿದೆಗಳು, ೨ ಪ್ರಾರ್ಥನೆ, ಉಪವಾಸ, ದ್ಯಾನ, ತೀರ್ಥಯಾತ್ರೆ ಮೊದಲಾದ ಸಂಸ್ಕಾರ ಪದ್ಧತಿಗಳ ಬಗ್ಗೆ ಸೂಚನೆಗಳು, ೩ ಸಮಾಜ ಸುಧಾರಣೆ, ೪ ನೈತಿಕ ನಿಯಮಗಳು, ೫ ಕೊರೈಷ್ ಮತ್ತು ಯಹೂದಿ ಜನರ ವಿರುದ್ಧ ನಡೆಸಿದ ಮುಖ್ಯ ಯುದ್ಧಗಳ ಸಂಕ್ಷಿಪ್ತ ವಿವರಣೆ, ೬ ಇಸ್ಲಾಂ ಧರ್ಮಗಳನ್ನು ಸ್ವೀಕರಿಸಿ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡಿದ ಕಪಟಿಗಳ ಬಗ್ಗೆ ಟೀಕೆ ಮತ್ತು ಖಂಡನೆ, ೭) ಇಸ್ಲಾಂ ಮತವನ್ನು ರಕ್ಷಿಸಲು ಪ್ರಭೋಧನೆ ಮತ್ತು ೮) ಇಸ್ಲಾಂ ಮತದ ಮೂಲತತ್ತ್ವಗಳನ್ನು ವಿಶದಗೊಳಿಸುವ ಪೂರ್ವ ಘಟನೆಗಳು. ಅಲ್ಲಲ್ಲಿ ಕೆಲವು ವಾಕ್ಯಗಳನ್ನು ಬಿಟ್ಟರೆ ಉಳಿದ ಭಾಗವೆಲ್ಲ ಛಂದಸ್ಸಿನ ನಿಯಮಕ್ಕೊಳಗಾಗದಿದ್ದರೂ ಕುರಾನಿನ ಶ್ಲೋಕಗಳು ಇತರ ಪವಿತ್ರ ಶ್ಲೋಕಗಳಂತೆ ಕಾವ್ಯಶೈಲಿಯಲ್ಲಿವೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

Word-for-word analysis:

Manuscripts:

ಉಲ್ಲೇಖಗಳು

ಬದಲಾಯಿಸಿ
  1. Dan Gibson: Qur'ānic geography: a survey and evaluation of the geographical references in the qurãn with suggested solutions for various problems and issues. Independent Scholars Press, Surrey (BC) 2011, ISBN 978-0-9733642-8-6
  2. https://www.mdpi.com/2077-1444/11/3/102/htm


"https://kn.wikipedia.org/w/index.php?title=ಕುರಾನು&oldid=1250128" ಇಂದ ಪಡೆಯಲ್ಪಟ್ಟಿದೆ