ಕುಪ್ಯ
Hಕುಪ್ಯವು ಕೊಡವ ಪುರುಷರ ಸಾಂಪ್ರದಾಯಕ ಉಡುಪಿನ ಒಂದು ಪ್ರಧಾನ ಅಂಗ. ಕುಪ್ಪಸವೆನ್ನುವದರ ಕೊಡವ ರೂಪಾಂತರ ಕುಪ್ಯ. ಇದನ್ನು ಕುಪ್ಪಿಯವೆಂದೂ ಹೇಳುವರು. ಜಾನಪದ ಸಾಹಿತ್ಯದಲ್ಲಿ ಕುಪ್ಪಾಯವೆಂಬ ಉಲ್ಲೇಖ ವೂ ಇದೆ.
ಇದು ಮೊಣಕಾಲಿಗಿಂತ ಸುಮಾರು ಒಂದು ಗೇಣು ಕೆಳಕ್ಕೆ ಬರುವಷ್ಟು ಉದ್ದವಿರುವ ಅರ್ಧ ತೋಳಿನ ನಿಲುವಂಗಿ. ಇದರ ಮುಂಭಾಗವು ಪೂರ್ತಿಯಾಗಿ ತೆರೆದಿರುತ್ತದೆ. ಇದನ್ನು ಧರಿಸುವಾಗ, ಮುಂದಿನ ಎಡಭಾಗವನ್ನು ದೇಹದ ಬಲಭಾಗಕ್ಕೆ ತಂದು, ಒತ್ತಿಹಿಡಿದು, ಕುಪ್ಯದ ಬಲಭಾಗವನ್ನು ದೇಹದ ಎಡಭಾಗಕ್ಕೆ ತಂದು, ಬಿಗಿಯಾಗಿ ಹಿಡಿದು, ಅದರ ಬಲ ಅಂಚಿಗೆ ಜೋಡಿಸಲಾಗಿರುವ ಲಾಡಿಯಿಂದ ಸೊಂಟವನ್ನು ಒಂದು ಸುತ್ತು ಬಳಸಿ ತಂದು ಕಟ್ಟಲಾಗುವದು. ಬಳಿಕ ಇದರ ಮೇಲಿನಿಂದ ಸೊಂಟದ ಸುತ್ತಲೂ ಚೇಲೆಯನ್ನು ಕಟ್ಟುವರು.
ಕುಪ್ಯವು ಹಿಂದಿನ ಕಾಲದಲ್ಲಿ ಹತ್ತಿಯ ಬಟ್ಟೆಯಲ್ಲಿ ತಯಾರಿಸಲಾಗುತಿದ್ದು, ಯಾವದೇ ಬಣ್ಣದಲ್ಲಿಯೂ ಇರುತಿತ್ತು. ಕೊಡಗನ್ನಾಳುತ್ತಿದ್ದ ಲಿಂಗಾಯತ ರಾಜರ ಕಾಲದಲ್ಲಿ ಆಸ್ಥಾನದ ಮುಖ್ಯಾಧಿಕಾರಿಗಳು, ದಿವಾನರು, ಸೈನ್ಯಾಧಿಕಾರಿಗಳು, ಮೊದಲಾದವರು ತುಂಬುತೋಳಿನ ಕೆಂಪು, ಮರೂನ್, ನೀಲಿ, ಬೂದಾ, ಮತ್ತಿತರ ಬಣ್ಣಗಳ ಕುಪ್ಯಗಳನ್ನು ತೊಡುತ್ತಿದ್ದರು. ಅವುಗಳ ಬಟ್ಟೆ ರೇಶ್ಮೆಯದಾಗಿರುತ್ತಿತ್ತು. ಇವುಗಳ ಮೇಲೆ ಬೂಟಾ ಸೀರೆಯ ಮೇಲಿರುವಂಥ ಬೊಟ್ಟುಗಳಿರುತ್ತಿದ್ದವು. ಇವಕ್ಕೆ ‘ಕುರಿ’ (ಬೊಟ್ಟು) ಕುಪ್ಯ ಅಥವಾ ‘ಪಟ್ಟ್ ಕುಪ್ಯ’ವೆನ್ನುತ್ತಿದ್ದರು.
ಇಂದು ಸಾಮಾನ್ಯವಾಗಿ ಎಲ್ಲರೂ ಅರ್ಧ ತೋಳಿನ ಕಪ್ಪು ಬಣ್ಣದ ಕುಪ್ಯವನ್ನೇ ತೊಡುತ್ತಾರೆ. ಇದನ್ನು ಸರ್ಜ್ (serge) ಬಟ್ಟೆಯಿಂದ ತಯಾರಿಸುತ್ತಾರೆ. ಕಪ್ಪು ಬಣ್ಣದ ಕುಪ್ಯ, ಅದರೊಳಗೆ ಬಿಳಿಯ ಬಣ್ಣದ ತುಂಬು ತೋಳಿನ ಅಂಗಿ, ಕೆಂಪು ಅಥವ ಮರೂನ್ ಬಣ್ಣದ ಚೇಲೆ, ಬಿಳಿಯ ಮಂಡೆತುಣಿ (ರುಮಾಲು), - ಈ ರೀತಿಯ ವಸ್ತ್ರವಿನ್ಯಾಸದಲ್ಲಿ ಸೌಂದರ್ಯ ದೃಷ್ಟಿಯಿದೆಯಲ್ಲದೆ ಬೇರಾವ ಧಾರ್ಮಿಕ ಅಥವಾ ಸಾಂಪ್ರದಾಯಕ ಅರ್ಥವಿಲ್ಲ.
ಮದುವಣಿಗನು ಬಿಳಿಯ ಬಣ್ಣದ ತುಂಬುತೋಳಿನ ಹತ್ತಿಯ ದಪ್ಪನೆಯ ಗ್ಯಾಬರ್ಡೀನ್ (gabardine) ಬಟ್ಟೆಯಿಂದ ತಯಾರಿಸಿದ ಕುಪ್ಯವನ್ನು ಧರಿಸುತ್ತಾನೆ. ಇದರ ತೋಳಿನ ಕೊನೆ ಜುಬ್ಬಾದಂತಿರುತ್ತದೆ. ಹಿಂದಿನ ಕಾಲದಲ್ಲಿ ಕುಟುಂಬದ, ಊರಿನ ಮತ್ತು ದೇವಸ್ಥಾನದ ಮುಖ್ಯಸ್ಥರೂ, ವಯೋವೃದ್ಧರೂ ಬಿಳಿಯ ಕುಪ್ಯವನ್ನೇ ಧರಿಸುತ್ತಿದ್ದರು. ಪುರುಷ ಶವ ಶೃಂಗಾರದಲ್ಲೂ ಬಿಳಿಯ ಕುಪ್ಯವನ್ನೇ ತೊಡಿಸುವರು.
ಇಪ್ಪತ್ತನೆ ಶತಮಾನದ ಆದಿಯವರೆಗೂ ಮದುವಣಿಗನು ಕೆಂಪು ಬಣ್ಣದ ರೇಶ್ಮೆಯ ತುಂಬುತೋಳಿನ ಕುಪ್ಯವನ್ನೇ ಧರಿಸುತ್ತಿದ್ದನು.