ಚೇಲೆ
ಚೇಲೆಯು ಕೊಡವ ಪುರುಷರ ಸಾಂಪ್ರದಾಯಕ ಉಡುಪಿನ ಒಂದು ಅಂಗ.
ಚೇಲೆಯು ಕುಪ್ಯದ ಮೇಲಿನಿಂದ ಸೊಂಟಕ್ಕೆ ಭದ್ರವಾಗಿ ಸುತ್ತಲಾಗುವ ಪಟ್ಟಿ. ಸುಮಾರು ನಲುವತ್ತು ಸೆಂಟಿಮೀಟರ್ ಅಗಲದ ಮತ್ತು ಸುಮಾರು ನಾಲ್ಕು ಮೀಟರ್ ಉದ್ದದ ರೇಶ್ಮೆಯ ಬಟ್ಟೆಯಿದು. ಕೆಂಪು, ಕುಂಕುಮ ವರ್ಣ, ಬೂದು, ನೀಲಿ, ನಸುಹಳದಿ, ಇತ್ಯಾದಿ ಬಣ್ಣಗಳಲ್ಲಿದ್ದರೂ ಇಂದು ಕೆಂಪು ಮತ್ತು ಕುಂಕುಮ ವರ್ಣಗಳಲ್ಲಿರುವವು ಮಾತ್ರ ಬಳಕೆಯಲ್ಲಿವೆ. ಇದರ ಎರಡೂ ಕೊನೆಗಳಲ್ಲಿ ಸುಮಾರು ನಲುವತ್ತು ಸೆಂಟಿಮೀಟರ್ ಉದ್ದಕ್ಕೆ ಚಿನ್ನದ ಬಣ್ಣದ ಜರತಾರಿಯಿರುತ್ತದೆ. ಕೊನೆಗಳಲ್ಲಿ ಸೀರೆಯ ಸೆರಗಿನ ಅಂಚಿನಲ್ಲಿರುವಂತೆ ಕುಚ್ಚುಗಳು ಕಟ್ಟಲ್ಪಟ್ಟಿವೆ. ಅಲ್ಲದೆ, ಚೇಲೆಯ ಉದ್ದಕ್ಕೂ ಎರಡೂ ಅಂಚುಗಳಲ್ಲಿ ಸುಮಾರು ಎಂಟು ಸೆಂಟಿಮೀಟರ್ ಅಗಲಕ್ಕೆ ಚಿನ್ನದ ಬಣ್ಣದ ಜರತಾರಿಯಿದೆ.
ಚೇಲೆಯನ್ನು ಸೊಂಟಕ್ಕೆ ಕಟ್ಟುವ ಮೊದಲು ಉದ್ದಕ್ಕೂ ಎರಡುಬಾರಿ ಸಮವಾಗಿ ಮಡಚಲಾಗುತ್ತದೆ. ಹೀಗೆ ಮಡಚಿದ ಚೇಲೆಯ ಅಗಲ ಸುಮಾರು ಹತ್ತು ಸೆಂಟಿಮೀಟರ್ ಆಗುತ್ತದೆ. ಬಳಿಕ ಅದನ್ನು ಸಣ್ಣಗೆ ಮತ್ತು ಬಿಗಿಯಾಗಿ ಸುರುಳಿ ಸುತ್ತಿಕೊಳ್ಳಬೇಕು. ನಂತರ ಚೇಲೆಯ ಒಂದು ಕೊನೆಯು ಸುಮಾರು ನಲುವತ್ತು ಸೆಂಟಿಮೀಟರ್ (ಎರಡು ಗೇಣು) ಉದ್ದಕ್ಕೆ ಸೊಂಟದಿಂದ ಕೆಳಕ್ಕೆ ನೇತಾಡುವಂತೆ ದೇಹದ ಎಡಭಾಗದಲ್ಲಿರಿಸಿಕೊಂಡು, ಹಿಂಬದಿಯಿಂದ ಬಲಗಡೆಗಾಗಿ ಎಡಕ್ಕೆ ಸುತ್ತಬೇಕು. ಇನ್ನೊಂದು ಕೊನೆಯು ಇಳಿಬಿಟ್ಟಿರುವ ಮೊದಲಿನ ಭಾಗದ ಪಕ್ಕದಲ್ಲಿ ಬರುವಂತೆ ಹಿಡಿದು ಕಟ್ಟಬೇಕು.
ಚೇಲೆಯನ್ನು ಸೊಂಟಕ್ಕೆ ಅನುಕೊಲವಾಗುವಷ್ಟು ಬಿಗಿಯಾಗಿ ಸುತ್ತಿ ಕಟ್ಟುವದರಿಂದ, ಹಿಂದಿನ ಕಾಲದ ಯುದ್ಧೇತ್ಯಾದಿ ಚಟುವಟಿಕೆಗಳಲ್ಲೂ, ಇಂದಿನ ಕೋಲಾಟ, ‘ಪರಿಯ ಕಳಿ’, ಮೊದಲಾದ ಸ್ಪರ್ಧೆಗಳಲ್ಲೂ ದೇಹಕ್ಕೆ ಉತ್ತಮ ಧೃಡತೆಯನ್ನು ಕೊಡುವದು.