ಕುದುರೆ ರೋಗಗಳು
ಕುದುರೆಗೆ ಬರುವ ಕೆಲವು ಮುಖ್ಯ ರೋಗಗಳನ್ನು ಇಲ್ಲಿ ಬರೆದಿದೆ.
ಆಫ್ರಿಕದ ಕುದುರೆ ರೋಗ
ಬದಲಾಯಿಸಿಕುದುರೆ ಜಾತಿ ಪ್ರಾಣಿಗಳಿಗೆ ವೈರಸ್ ಸೋಂಕಿನಿಂದ ಬರುವ ಶ್ರಾಯವ್ಯಾಧಿ (ಹಾರ್ಸ್ ಸಿಕ್‍ನೆಸ್). ಮಿಡತೆಗಳು, ಕೀಟಗಳು ಈ ರೋಗದ ವಾಹಕಗಳು. ಪ್ರಾರಂಭದಲ್ಲಿ ಈಜಿಪ್ಟ್, ಆಫ್ರಿಕ ದೇಶಗಳಲ್ಲಿ ಇದ್ದ ಈ ರೋಗ ಈಗ ಮಧ್ಯಪ್ರಾಚ್ಯ, ಪಾಕಿಸ್ತಾನ, ಭಾರತ ಇಲ್ಲೆಲ್ಲ ವ್ಯಾಪಿಸಿದೆ, ಇದು ಶ್ವಾಸಕೋಶಗಳಿಗೂ ರಕ್ತನಾಳಗಳಿಗೂ ತೀವ್ರವಾಗಿ ಅಂಟುವ ಕಾಯಿಲೆ. ರೋಗ ಕಠಿನವಾದರೆ ಅಂಥ ಕುದುರೆಗಳು ಉಳಿಯುವುದು ಕಷ್ಟ. ರೋಗದ ಆರಂಭದಲ್ಲಿ ಯುಕ್ತ ಚಿಕಿತ್ಸೆ ಮಾಡಿ ರೋಗಗ್ರಸ್ತ ಕುದುರೆಯ ಜೀವವನ್ನು ರಕ್ಷಿಸಬಹುದು. ಲಸಿಕೆಯನ್ನು ಚುಚ್ಚುಮದ್ದು ಹಾಕಿ ಆರೋಗ್ಯವಂತ ಕುದುರೆಗಳಲ್ಲಿ ಈ ಕಾಯಿಲೆಯ ವಿರುದ್ಧ ಆಂತರಿಕ ರಕ್ಷಣೆ ನೀಡುವ ಸಾಧ್ಯತೆ ಉಂಟು. ಲಸಿಕೆ ಹಾಕಿದ ಮೇಲೆ ರೋಗನಿರೋಧ ಸಾಮಥ್ರ್ಯ ಬರಲು ಮೂರು ತಿಂಗಳ ಕಾಲಾವಕಾಶ ಬೇಕು. ಒಂದು ಸಲ ಚುಚ್ಚಿದ ಲಸಿಕೆಯ ಪ್ರಭಾವ ಸುಮಾರು 6-7 ವರ್ಷಗಳ ಕಾಲ ಉಳಿದಿರುವುದು.[೧]
ಸಿಂಬಳರೋಗ
ಬದಲಾಯಿಸಿಶ್ವಾಸನಾಳಗಳಲ್ಲಿ ಮತ್ತು ಚರ್ಮದಲ್ಲಿ ಗಂಟುಗಳಾಗುವುದು ಅಥವಾ ಹುಣ್ಣುಗಳಾಗುವುದು ಈ ರೋಗದ ಮುಖ್ಯ ಲಕ್ಷಣ. ಕುದುರೆ ಜಾತಿಯ ಪ್ರಾಣಿಗಳಿಗೆ ಈ ರೋಗ ಬಲು ಅಪಾಯಕಾರಿ. ಕುದುರೆಸಿಂಬಳರೋಗ ಪೂರ್ವ ಯೂರೋಪ್, ಏಷ್ಯ ಮೈನರ್, ಏಷ್ಯ ಮತ್ತು ಉತ್ತರ ಆಫ್ರಿಕ ದೇಶಗಳಲ್ಲಿ ಕಂಡು ಬರುತ್ತದೆ. ಈ ರೋಗದಿಂದ ಸತ್ತ ಕುದುರೆಗಳ ಮಾಂಸವನ್ನು ನಾಯಿ, ನರಿ, ತೋಳ ಮುಂತಾದವು ತಿಂದರೆ ಅವುಗಳಿಗೂ ರೋಗ ಅಂಟಿಕೊಳ್ಳುತ್ತದೆ. ಕುರಿ ಮತ್ತು ಮೇಕೆಗಳಲ್ಲಿಯೂ ಈ ರೋಗ ಕಂಡುಬಂದಿದೆ. ಮನುಷ್ಯನಿಗೂ ಇದು ಅಂಟುವುದುಂಟು. ಇದರಿಂದಾಗಿ ಅವನಿಗೆ ಪ್ರಾಣಾಪಾಯ ಖಂಡಿತ. ಕುದುರೆಸಿಂಬಳ ರೋಗಕ್ಕೆ ಮೂಲಕಾರಣ ಒಂದು ಏಕಾಣುಜೀವಿ (ಆಕ್ಟಿನೋಬ್ಯಾಸಿಲ್ಲಸ್). ಲೋಫ್‍ಲರ್ ಮತ್ತು ಶುತ್ಜ್ ಎಂಬ ವಿಜ್ಞಾನಿಗಳು 1882ರಲ್ಲಿ ಈ ಕಾರಕವನ್ನು ಕಂಡುಹಿಡಿದರು. ಶ್ವಾಸನಾಳಗಳಲ್ಲಿ ಅಥವಾ ಚರ್ಮದಲ್ಲಿನ ಗಂಟುಗಳಲ್ಲಿ ಅಥವಾ ಹುಣ್ಣುಗಳಲ್ಲಿ ಅಥವಾ ಸಿಂಬಳದಲ್ಲಿ ಅಥವಾ ಸೋರುವ ರಸದಲ್ಲಿ ಈ ಜೀವಿ ಇರುತ್ತದೆ.[೨]
ರೋಗ ಪಸರಿಸುವ ರೀತಿ
ಬದಲಾಯಿಸಿಸಿಂಬಳ ರೋಗದಿಂದ ಬಳಲುವ ಅಥವಾ ಈ ರೋಗದಿಂದ ಗುಣಹೊಂದಿದ ಪ್ರಾಣಿಗಳು ಬೇರೆ ಪ್ರಾಣಿಗಳಿಗೆ ಪಸರಿಸುವ ಮುಖ್ಯ ಆಕರಗಳು. ಕುದುರೆಸಿಂಬಳರೋಗದ ಏಕಾಣುಜೀವಿಗಳಿಂದ ಕೂಡಿದ ಆಹಾರವಾಗಲಿ ತಿಂಡಿ ತಿನ್ನಿಸುವ ಪಾತ್ರೆಗಳಿಂದಾಗಲಿ ಈ ರೋಗ ಪಸರಿಸುತ್ತದೆ. ಕೆಲವು ಸಲ ಅಕಸ್ಮಾತ್ತಾಗಿ ಚರ್ಮದ ಗಾಯಗಳಿಂದ ಅಥವಾ ಚರ್ಮದಿಂದ ಮಾಡಿದ ಮಿಣಿಗಳಿಂದ ಜೀನುಗಳಿಂದ ಅಥವಾ ಕುದುರೆ ಮಾಲೀಸುಮಾಡುವ ಸಾಧನಗಳಿಂದ ಪ್ರಾಣಿಯ ಚರ್ಮದಲ್ಲಿ ಜೀವಿಗಳು ಸೇರಿ ರೋಗೋತ್ಪನ್ನ ಮಾಡುವುದುಂಟು.ರೋಗ ಲಕ್ಷಣಗಳು: ರೋಗ ತೀವ್ರವಾದಾಗ ಜ್ವರ, ಕೆಮ್ಮು ಬರುತ್ತವೆ. ಮೂಗಿನ ಸೊಳ್ಳೆಗಳಿಂದ ಸಿಂಬಳಸುರಿಯುವುದು, ಮೂಗಿನ ಒಳಭಾಗದಲ್ಲಿ ಹುಣ್ಣುಗಳಾಗುತ್ತವೆ. ಮತ್ತು ಕಾಲುಗಳ ಕೆಳಭಾಗಗಳಲ್ಲಿ ಅಥವಾ ಹೊಟ್ಟೆಯ ಮೇಲೆ ಗಂಟುಗಳು ತಲೆದೋರುತ್ತವೆ. ಇದರಿಂದಾಗಿ ರೋಗ ದೇಹದಲ್ಲಿ ಪಸರಿಸಿ ಕೆಲವೇ ದಿವಸಗಳಲ್ಲಿ ಪ್ರಾಣಿ ಸಾಯುತ್ತದೆ.
ರೋಗ ಪರೀಕ್ಷೆ: ಕುದುರೆಸಿಂಬಳ ರೋಗವನ್ನು ಕಂಡುಹಿಡಿಯಲು ಮೂರು ವಿಧಾನಗಳಿವೆ
ಬದಲಾಯಿಸಿ(i) ಮೆಲೀನ್ ಪರೀಕ್ಷೆ: ಕುದುರೆಸಿಂಬಳ ರೋಗದ ಏಕಾಣುಜೀವಿಗಳಿಂದ ತಯಾರಿಸಿದ ಪದಾರ್ಥವನ್ನು ರೋಗದಿಂದ ಬಳಲುವ ಪ್ರಾಣಿಯ ಕುತ್ತಿಗೆ ಚರ್ಮದಲ್ಲಿ ಅಥವಾ ಚರ್ಮದ ಅಡಿಯಲ್ಲಿ ಅಥವಾ ಕೆಲವು ಹನಿಗಳನ್ನು ಒಂದು ಕಣ್ಣಿನ ಕೆಳರೆಪ್ಪೆಯಲ್ಲಿ ಚುಚ್ಚಿದರೆ, ಆ ಪ್ರಾಣಿ 24ರಿಂದ 36 ಗಂಟೆಗಳ ಅನಂತರ ಚುಚ್ಚಿದ ಜಾಗದಲ್ಲಿ ನೋವನ್ನು ತೋರಿಸುತ್ತದೆ. (ii) ಈ ರೋಗದಿಂದ ಬಳಲುವ ಪ್ರಾಣಿಯ ರಕ್ತದಲ್ಲಿರುವ ರಸ (ಸೀರಂ) ಪರೀಕ್ಷೆಯನ್ನು ಪ್ರಯೋಗಶಾಲೆಯಲ್ಲಿ ಮಾಡಿಕಂಡುಹಿಡಿಯುವುದು (iii) ಹುಣ್ಣುಗಳಿಂದ ಕೀವು ಬರುವುದನ್ನು ಹಿಡಿದು ಪ್ರಯೋಗಶಾಲೆಯಲ್ಲಿ ಉಪಯೋಗಿಸುವ ಗಂಡು ಗಿನಿ ಹಂದಿಗೆ ಚುಚ್ಚಿದರೆ ಮುಂದೆ 2 ಅಥವಾ 3 ದಿವಸಗಳಲ್ಲಿ ಅದರ ತರಡು ಬೀಜಗಳಲ್ಲಿ ಬಾವು ಬಂದು ನೋವಾಗುತ್ತವೆ.
ಚಿಕಿತ್ಸಾ ಕ್ರಮ
ಬದಲಾಯಿಸಿಪೆನಿಸಿಲಿನ್ ಮತ್ತು ಸ್ಟ್ರೆಪ್ಟೊಮೈಸಿನ್ ಪ್ರಯೋಗ ಈ ರೋಗದಲ್ಲಿ ಉಪಯೋಗಕಾರಿಗಳಲ್ಲ. ಸೋಡಿಯಂ ಸಲ್ಫಾಡೈಯೋಜಿನ್ ಪ್ರಯೋಗ ಪರಿಣಾಮಕಾರಿ. ಇಂಥ ಪ್ರಸಂಗದಲ್ಲಿ ಸೋಡಿಯಂ ಸಲ್ಫಾಡೈಯೋಜಿನನ್ನು 20 ದಿವಸಗಳ ವರೆಗೆ ದಿವಸಂಪ್ರತಿ ಕೊಟ್ಟರೆ ಪ್ರಾಣಿ ಸಂಪೂರ್ಣ ಗುಣಹೊಂದುತ್ತದೆ. ಫಾರ್ಮಲಿನ್‍ನಲ್ಲಿ ಕೂಡಿಸಿದ ಕುದುರೆಸಿಂಬಳ ರೋಗದ ಏಕಾಣುಜೀವಿ ಮತ್ತು ಸಲ್ಫಾಡೈಯೋಜಿನ್ ಅಥವಾ ಸಲ್ಫಾಡಿಮಿಡಿನ್ ಚುಚ್ಚಿದರೆ ಬಹಳ ಗುಣವನ್ನು ತರುತ್ತದೆಂದು ತಿಳಿದುಬಂದಿದೆ. ಟೆರಮೈಸಿನನ್ನು ರಕ್ತದಲ್ಲಿ ಅಥವಾ ಸ್ನಾಯುಗಳಲ್ಲಿ ಚುಚ್ಚಿದರೆ ಮತ್ತು ಹೊಟ್ಟೆಯೊಳಗೆ ಸೇವಿಸಲು ಈ ರೋಗದಿಂದ ಗುಣಹೊಂದುವ ಸಂಭವವಿದೆ. ಈ ಔಷಧಿಯನ್ನು ಚರ್ಮದ ಮೇಲೆ ಆದ ಹುಣ್ಣುಗಳಿಗೂ ಹಚ್ಚಬಹುದು.
ರೋಗವನ್ನು ಹತೋಟಿಗೆ ತರುವ ಕ್ರಮ
ಬದಲಾಯಿಸಿಮೇಲೆ ಕಾಣಿಸಿದ ಔಷಧಿಗಳಿಂದ ಪ್ರಾಣಿ ಗುಣಹೊಂದಿದರೂ ಈ ರೋಗಕ್ಕೆ ಮುಕ್ತವಾಗಿ ಉಳಿಯುವುದಿಲ್ಲ. ಕೃತಕವಾಗಿ ಈ ರೋಗದ ವಿರುದ್ಧ ರಕ್ಷಣೆಯನ್ನು ಒದಗಿಸುವುದು ಸಾಧ್ಯವಾಗಿಲ್ಲ. ರೋಗದಿಂದ ಬಳಲುತ್ತಿರುವ ಪ್ರಾಣಿಯನ್ನು ಕೂಡಲೇ ಬೇರೆ ಯಾವ ಪ್ರಾಣಿಗಳ ಸಂಪರ್ಕವೂ ಬಾರದಂತೆ ಪ್ರತ್ಯೇಕಿಸಬೇಕು ರೋಗದಿಂದ ಬಳಲುತ್ತಿರುವ ಪ್ರತಿಯೊಂದು ಪ್ರಾಣಿಯನ್ನು ನಾಶ ಮಾಡುವುದು ಸರ್ವೋತ್ಕøಷ್ಟ. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಕುದುರೆಗಳನ್ನೂ ಮೆಲಿನ್ ಪರೀಕ್ಷೆಗೆ ಒಳಪಡಿಸಬೇಕು. ಆಹಾರ ಕೊಡುವ ಮತ್ತು ಕುದುರೆಗೆ ಮಾಲೀಸುಮಾಡುವ ಸಾಧನಗಳನ್ನು ಮತ್ತು ಪಾತ್ರೆಗಳನ್ನು ಚೆನ್ನಾಗಿ ಕ್ರಿಮಿನಾಶಕಗಳಿಂದ ತೊಳೆಯಬೇಕು. ರೋಗ ತಗುಲಿದ ಕುದುರೆಗಳ ವಠಾರದಿಂದ ಯಾವ ಕುದುರೆಗಳೂ ಹೊರಗಡೆ ಹೋಗದಂತೆ ಎಚ್ಚರಿಕೆ ಇಡಬೇಕು.
ಬಾಯಿಹುಣ್ಣು
ಬದಲಾಯಿಸಿಕುದುರೆಗಳಿಗೆ ಬರುವ ಚರ್ಮದ ಹೊರ ಪೊರೆಯ ರೋಗ. ಲೋಳೆಗೂಡಿದ ನಯಚರ್ಮ ಅಥವಾ ಪಾದದ ಚರ್ಮದ ಮೇಲೆ ಗುಳ್ಳೆಗಳು ಮತ್ತು ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಕೀವಿನ ಎರಡು ವೈರಸ್‍ಗಳು ಈ ಸ್ಥಿತಿಗೆ ಕಾರಣವಾಗಿವೆ.
ಲಕ್ಷಣಗಳು
ಬದಲಾಯಿಸಿತುಟಿಗಳಿಂದ ಜೊಲ್ಲು ಹರಿಯುವುದು ಮತ್ತು ಈ ಜೊಲ್ಲು ಆಹಾರದ ಮೇಲೆ ಇರುವುದು ಕಂಡುಬರುತ್ತದೆ. ಮೈ ಉಷ್ಣತೆ 104o ಫ್ಯಾ.ಗೆ ಏರಿದಾಗ ಕುದುರೆ ಮಂಕಾಗುತ್ತದೆ. ನೀರಿನ ದಾಹ ಹೆಚ್ಚಾಗಿ, ರೋಗಕ್ಕೆ ತುತ್ತಾದ ಪ್ರಾಣಿ ಆಹಾರ ತಿನ್ನುವುದನ್ನು ಕಡಿಮೆಗೊಳಿಸುತ್ತದೆ. ಬಾಯಿ ಮತ್ತು ನಾಲಿಗೆಗಳ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಗಾಯ ದೊಡ್ಡದಾಗುತ್ತ ಹೋಗಿ, ಸತ್ತ ಚರ್ಮದ ಹೊರಪೊರೆ ರಕ್ತ ಮಿಶ್ರಿತವಾಗಿ ಬಾಯಿಯ ಅಂಚುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಭುಜವನ್ನು ಒತ್ತಿದಾಗ ನೋವುಂಟಾಗಿ ಕುಂಟಲು ಪ್ರಾರಂಭಿಸುತ್ತದೆ.ರೋಗಚಿಹ್ನೆಗಳ ಆಧಾರದ ಮೇಲೆ ಚಿಕಿತ್ಸಾಕ್ರಮಗಳನ್ನು ತೆಗೆದುಕೊಳ್ಳಬೇಕು. ರೋಗ ತಗುಲಿದ ಕುದುರೆಗಳಿಗೆ ಸಾಕಷ್ಟು ನೀರನ್ನು ಮತ್ತು ಮೃದುವಾದ ಆಹಾರವನ್ನು ಕೊಡಬೇಕು. ಕುದುರೆಗಳನ್ನು ಕೀಟಗಳು ಕಚ್ಚದಂತೆ ಕಾಪಾಡಬೇಕು.
ಎನ್‍ಸೆಫಲೋಮೈಲಿಟಿಸ್ ಎಂಬ ಸೋಂಕು ವೈರಸಿನಿಂದುಂಟಾಗುವ ರೋಗ
ಬದಲಾಯಿಸಿಅಸ್ತವ್ಯಸ್ತವಾದ ಪ್ರಜ್ಞೆ, ಚಾಲಕ ನಗರಗಳ ಇರಿತ ಮತ್ತು ಪಾಶ್ರ್ವವಾಯು (ಲಕ್ವ) ಇದರ ಲಕ್ಷಣಗಳು. ಪ್ರಾರಂಭದಲ್ಲಿ 24ರಿಂದ 48ಗಂಟೆಗಳ ವರೆಗೆ ಮಾತ್ರ 1060 ಫ್ಯಾ. ಜ್ವರವಿರುತ್ತದೆ. ಅನಂತರ ಕಂಪನ ಲಕ್ಷಣಗಳು ಕಂಡುಬರುತ್ತವೆ. ಶಬ್ದವಾದರೆ ಮುಟ್ಟಿದರೆ ಮತ್ತು ಉದ್ರೇಕವಾದರೆ ಕುದುರೆ ತುಂಬ ಸೂಕ್ಷ್ಮಪ್ರತಿಕ್ರಿಯೆ ತೋರುತ್ತದೆ. ಸ್ಪಷ್ಟವಾಗಿ ಕಣ್ಣು ಕಾಣದಿರುವುದರಿಂದ ಕುದುರೆಯಲ್ಲಿ ತೀವ್ರ ಅಸ್ವಾಸ್ಥ್ಯ ಎದ್ದುಕಾಣುತ್ತದೆ. ಪಾಶ್ರ್ವವಾಯುವಿನ ಒಂದು ಹಂತ ಮುಂದುವರಿಯುತ್ತದೆ. ತಲೆಯನ್ನು ಎತ್ತಿನಿಲ್ಲಲು ಸಾಧ್ಯವಾಗದೆ ಯಾವುದಾದರೂ ವಸ್ತುವಿನ ಮೇಲೆ ಇಡಲು ಹವಣಿಸುತ್ತದೆ. ಕೆಳತುಟಿ ತೂಗಾಡುತ್ತ ನಾಲಿಗೆ ಹೊರಕ್ಕೆ ಜೋತುಬೀಳುತ್ತದೆ. ಪ್ರಾಣಿ ತನ್ನ ಎಲ್ಲ ಭಾರವನ್ನು ಮುಂದಿನ ಕಾಲುಗಳಲ್ಲಿ ಹೊರುತ್ತದೆ. ನಡೆಯುವಾಗ ಹಿಂದಿನ ಕಾಲುಗಳನ್ನು ಅಪ್ಪಿತಪ್ಪಿ ಹಾಕುತ್ತ ತೊಡರುತ್ತ ಸುತ್ತುಹಾಕುತ್ತದೆ. ಮಲಮೂತ್ರವಿಸರ್ಜನೆ ಕಡಿಮೆಯಾಗುತ್ತ ಹೋಗಿ ಆಹಾರ ತಿನ್ನುವುದು ಕಷ್ಟವಾಗುತ್ತದೆ. ಪೂರ್ಣ ಪಾಶ್ರ್ವವಾಯು ಕಂಡುಬರುವುದು ರೋಗದ ಕೊನೆಯ ಹಂತ. ಕುದುರೆ ದಿನೇ ದಿನೇ ಕ್ಷೀಣಿಸುತ್ತ ಚೇತರಿಸಿಕೊಳ್ಳಲು ಸಾಧ್ಯವಾಗದೆ, ಕಾಯಿಲೆ ಕಾಣಿಸಿಕೊಂಡ ಎರಡು ಮೂರು ದಿವಸಗಳಲ್ಲಿ ಸತ್ತುಹೋಗುತ್ತದೆ.
ಚಿಕಿತ್ಸೆ
ಬದಲಾಯಿಸಿಇದಕ್ಕೆ ಹೈಪರ್ ಇಮ್ಯೂನ್ ಸೀರಂ ನಿರ್ದಿಷ್ಟವಾದ ಚಿಕಿತ್ಸೆ.ಕುದುರೆಗೆ ತನ್ನ ಭಾರವನ್ನು ಹೊತ್ತುನಿಲ್ಲಲು ಆಸರೆಮಾಡಿಕೊಡಬೇಕು. ಮಲವಿಸರ್ಜನೆಗೆ ಸಹಾಯಕವಾದ ಔಷಧಿ ಮತ್ತು ಪೌಷ್ಟಿಕವಾದ ಆಹಾರವನ್ನು ಕೊಡಬೇಕು. ಕುದುರೆಗಳನ್ನು ನೆರಳಿನಲ್ಲಿಟ್ಟು, ನೊಣ ಮತ್ತು ಶಾಖದಿಂದ ಕಾಪಾಡಬೇಕು. ಕೀಟನಿವಾರಕಗಳ ಉಪಯೋಗದಿಂದ ಕೀಟಗಳ ಹಾವಳಿಯನ್ನು ತಡೆಗಟ್ಟಬೇಕು. ಒಂದು ಮಿಲಿಲೀಟರ್ ಪ್ರಮಾಣದ ಮೊಟ್ಟೆ ಗ್ರಹಿಸಿದ ಹೈಪರ್ ಇಮ್ಯೂನ್ ಸೀರಂ ಅನ್ನು ವಾರದಲ್ಲಿ ಎರಡು ಬಾರಿ ಚರ್ಮದೊಳಗೆ ಚುಚ್ಚುವುದರಿಂದ ಪ್ರಾಣಿಗೆ ಒಂದು ವರ್ಷದ ವರೆಗೆ ರೋಗ ಬರದಂತೆ ನೋಡಿಕೊಳ್ಳಬಹುದು.
ರಕ್ತಕ್ಷಯ
ಬದಲಾಯಿಸಿವೈರಸ್ನಿಂದ ಉಂಟಾಗುವ ಅಂಟುಜಾಡ್ಯ. ಪ್ರಾರಂಭದಲ್ಲಿ ವಿಪರೀತ ತೊಂದರೆ ಕೊಟ್ಟು ಅನಂತರ ಕಾಯಿಲೆ ಬೇರೂರುತ್ತದೆ. ಇದರ ಲಕ್ಷಣಗಳು ಹೀಗಿವೆ: ಪ್ರಾರಂಭದಲ್ಲಿ ಕುದುರೆ ಹೆಚ್ಚು ನಿಶ್ಯಕ್ತಿ ಹೊಂದಿ ಸವೆಯುತ್ತ ಹೋಗುತ್ತದೆ. ಮಧ್ಯೆ ಮಧ್ಯೆ 1060 ಫ್ಯಾ. ವರೆಗೂ ಏರುವ ಜ್ವರ ಬರುತ್ತದೆ. ಕಾಮಾಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮೇಲು ಹೊಟ್ಟೆ, ಕಾಲು ಶಿಶ್ನಾಗ್ರದ ಮುಂದೊಗಲು, ಕಣ್ಣಿನ ಅರ್ಧಚರ್ಮ ಇವುಗಳಲ್ಲಿ ಊತ ಪ್ರಾರಂಭವಾಗುತ್ತದೆ. ಗರ್ಭಿಣಿ ಕುದುರೆಗಳಲ್ಲಿ ಗರ್ಭಸ್ರಾವವಾಗುವುದು. ಇಷ್ಟಾದರೂ ಕೆಲವು ಕುದುರೆಗಳು ತಾತ್ಕಾಲಿಕವಾಗಿ ಚೇತರಿಸಿಕೊಳ್ಳುತ್ತವೆ. ಆದರೆ ದಿನೇ ದಿನೇ ನಿಶ್ಯಕ್ತಿ ಹೊಂದುತ್ತ ಹೋಗಿ ಕಾಯಿಲೆ ಬಂದ 10-14 ದಿವಸಗಳಲ್ಲಿ ಅಸುನೀಗುತ್ತದೆ. ಈ ಕಾಯಿಲೆಗೆ ಸರಿಯಾದ ಅಥವಾ ನಿರ್ದಿಷ್ಟವಾದ ಚಿಕಿತ್ಸೆ ಇನ್ನೂ ಕಂಡುಬಂದಿಲ್ಲ. ಕುದುರೆಯ ಮಲಮೂತ್ರ ಮತ್ತು ಇತರ ಉಳಿಕೆಗಳನ್ನು ಒಟ್ಟುಗೂಡಿಸಿ ನಾಶಗೊಳಿಸಬೇಕು. ಉಷ್ಣತಾಮಾಪಿಯಿಂದ ಜ್ವರ ನೋಡಿಕೊಂಡು, ಕುದುರೆಗಳನ್ನು ಎಚ್ಚರಿಕೆಯಿಂದ ಕಾಪಾಡಬೇಕು. ಕಚ್ಚುವ ಕೀಟಗಳ ಹತೋಟಿ ಅಗತ್ಯ.
ಇನ್‍ಫ್ಲುಯೆನ್‍ಜó
ಬದಲಾಯಿಸಿಇದು ಹಂದಿಗೆ ಮತ್ತು ಮನುಷ್ಯನಿಗೆ ಬರುವಂಥ ಇನ್‍ಫ್ಲುಯೆನ್‍ಜó ಕಾರಕ ವೈರಸ್‍ನಂಥ ಮೈಕೊ ವೈರಸ್‍ನಿಂದ ಕುದುರೆಗೆ ಬರುವ ತೀವ್ರಜ್ವರ. ಜ್ವರದಿಂದ ಪ್ರಾರಂಭವಾಗಿ ಅನಂತರ ಜಡತೆ, ಹಸಿವಾಗದಿರುವಿಕೆ ಮತ್ತು ಬಳಲಿಕೆ ಮುಂತಾದವು ಕಾಣಿಸಿಕೊಳ್ಳುತ್ತವೆ. ಮೈ ಉಷ್ಣತೆ 106o ಫ್ಯಾ.ಗೆ ಏರಿ, ಹಾಗೆಯೇ 7ರಿಂದ 10 ದಿವಸಗಳ ವರೆಗೆ ಮುಂದುವರಿಯುತ್ತದೆ: ನಾಡಿ ಮತ್ತು ಉಸಿರಾಡುವ ವೇಗ ಹೆಚ್ಚಾಗುತ್ತದೆ. ಮೂಗಿನ ಒಳಚರ್ಮ ಸಂಕುಚಿತವಾಗುತ್ತದೆ. ಜ್ವರದೊಡನೆ ಒಣಕೆಮ್ಮು ಇರುತ್ತದೆ. ಸ್ವಲ್ಪ ದಿವಸಗಳ ಅನಂತರ ಮೂಗಿನಲ್ಲಿ ಸಿಂಬಳ ಸುರಿಯುವುದು ಪ್ರಾರಂಭವಾಗುತ್ತದೆ. ಇನ್ನೇನು ತೊಂದರೆ ಇಲ್ಲದಿದ್ದಲ್ಲಿ ಕುದುರೆ ಒಂದು ಎರಡು ವಾರಗಳಲ್ಲಿ ಚೇತರಿಸಿಕೊಳ್ಳುತ್ತದೆ. ಯುಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ವಿಶ್ರಾಂತಿಗಳಿಂದ ಈ ರೋಗವನ್ನು ಗುಣಪಡಿಸಬಹುದು.
ಸೋಂಕು ಕೆಮ್ಮು
ಬದಲಾಯಿಸಿಶ್ವಾಸಕೋಶದ ಮೇಲಿನ ನಾಳಗಳಲ್ಲಿ ಸಾಧಾರಣವಾದ ಶೀತ ಮತ್ತು ಸತತವಾದ ಕೆಮ್ಮುವಿಕೆ ಈ ರೋಗದ ಸಾಮಾನ್ಯ ಲಕ್ಷಣಗಳು. ಒಂದು ರೀತಿಯ ವೈರಸ್‍ನಿಂದ ಈ ರೋಗ ಉಂಟಾಗುತ್ತದೆ ಎಂದು ನಂಬಿಕೆಯಿದೆ. ನೆಗಡಿ ಹನಿ ಉಸಿರಿನೊಡನೆ ಒಳಹೋಗಿ ಈ ರೋಗ ಹರಡುತ್ತದೆ.
ಗರ್ಭಪಾತ
ಬದಲಾಯಿಸಿಗರ್ಭಪಾತವೆಂದರೆ ಭ್ರೂಣವಸ್ತು ಜೀವಶಕ್ತಿಬರುವ ಮೊದಲೇ ಹೊರದೂಡಲ್ಪಡುವುದು. ಕುದುರೆಗೆ ಗರ್ಭಧಾರಣೆಯಾಗಿರುವುದನ್ನು ಕಂಡುಕೊಳ್ಳಬೇಕಾದರೆ ಕೊನೆಯ ಪಕ್ಷ 30 ದಿವಸಗಳಾದರೂ ಬೇಕು. ಗರ್ಭಧಾರಣೆಯ ಒಂದು ತಿಂಗಳ ಅನಂತರದಿಂದ ಹತ್ತು ತಿಂಗಳುಗಳ ಕಾಲದಲ್ಲಿ ಜೀವವಿರುವ ಅಥವಾ ಜೀವವಿಲ್ಲದಿರುವ ಭ್ರೂಣ ನಷ್ಟವಾಗಿ ಹೋಗುವುದನ್ನು ಗರ್ಭಪಾತವೆಂದು ಪರಿಗಣಿಸಲಾಗುತ್ತದೆ.
ಕಾರಣಗಳು
ಬದಲಾಯಿಸಿ(i) ಕುದುರೆ ಇನ್‍ಫ್ಲುಯೆನ್‍ಜó ; (ii) ಸಾಲ್‍ಮೊನೆಲ್ಲ. ಅಬಾರ್ವಸ್ ಈಕ್ವೈ, ಸ್ಟ್ರೆಪ್ಟೊಕಾಕಸ್ ಈಕ್ವೈ, ಎಷರೀಕಿಯಾ ಕೋಲೈ, ಸ್ಟಾಫಿಲೋಕಾಕೈ, ಪಿಗೆಲ್ಲಾ ಈಕ್ವೆವೇಲಿಸ್, ಇವೇ ಮೊದಲಾದ ಏಕಾಣುಜೀವಿಗಳು; (iii) ಆಸ್ಟರ್‍ಜಿಲಸ್ ಬೂಷ್ಟು ; (iv) ಟ್ರಿಪಟ್ರಿಪ್ಯಾನಸೋಮ ಎಂಬ ಪ್ರೊಟೋಜೋವ-ಇವು ಗರ್ಭಪಾತಕ್ಕೆ ಕಾರಕಗಳು. ಕಡಿಮೆ ಪೌಷ್ಟಿಕ ಆಹಾರವನ್ನು ಪಡೆಯುವ ಪ್ರಾಣಿಗಳು ತಮ್ಮ ದೇಹಸ್ಥಿತಿಯನ್ನು ಕಾಪಾಡಿಕೊಳ್ಳಲಾಗದೆ ಗರ್ಭಪಾತಕ್ಕೆ ಈಡಾಗುತ್ತವೆ. ಎ ಮತ್ತು ಡಿ ಜೀವಸತ್ತ್ವ, ಸುಣ್ಣ ಮತ್ತು ರಂಜಕದ ಕೊರತೆ ಕೂಡ ಗರ್ಭಪಾತಕ್ಕೆ ಕಾರಣವಾಗಬಹುದು. ಅನುವಂಶೀಯ ವೈಪರೀತ್ಯ, ಉದ್ರೇಕ ಮುಂತಾದವು ಗರ್ಭಪಾತದ ಇತರ ಕಾರಣಗಳು.ನೆರಡಿರೋಗ ಅಥವಾ ಕೆಟ್ಟಕುರು : ಇದು ಎಲ್ಲ ಕುದುರೆಗಳಿಗೂ ಬರಬಹುದಾದ ತೀವ್ರವಾದ ರಕ್ತವಿಷದ ಅಂಟುರೋಗ. ಆಂತ್ರಾಕ್ಸ್ ಎಂಬ ದಂಡಾಣು ಜೀವಿಯಿಂದ ಈ ರೋಗ ಉಂಟಾಗುತ್ತದೆ.
ಲಕ್ಷಣಗಳು
ಬದಲಾಯಿಸಿರೋಗದ ತೀವ್ರತೆ ರೋಗ ಹೇಗೆ ತಗುಲಿತು ಎಂಬುದನ್ನು ಅವಲಂಬಿಸಿದೆ. ಮೇವಿನ ಮೂಲಕ ರೋಗ ಹರಡಿದರೆ, ರಕ್ತ ವಿಷವಾಗಿ ಕರುಳಿನ ಊತ ಮತ್ತು ಹೊಟ್ಟೆಶೂಲೆಯಾಗುತ್ತದೆ. ಕೀಟಗಳಿಂದ ರೋಗ ಹರಡಿದರೆ ಗಂಟಲು, ಕುತ್ತಿಗೆಯ ಕೆಳಭಾಗ, ಎದೆಯ ಮತ್ತು ಹೊಟ್ಟೆಯ ಮೇಲೆ ನೋವನ್ನುಂಟುಮಾಡುವ ಬಿಸಿಯಾದ ಊದುಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚು ಜ್ವರ ಬಂದ ಕುದುರೆ ಕ್ಷೀಣಿಸುತ್ತದೆ. ಗಂಟಲಿನಲ್ಲಿ ಊದುಗುಳ್ಳೆಗಳು ಬೆಳೆಯುವುದರಿಂದ ಉಸಿರು ಕಟ್ಟಿಬಿಡುತ್ತದೆ. ಕರುಳಿನ ಇರಿತ, ಹೊಟ್ಟೆಯ ಶೂಲೆ ಕಾಣಿಸಿಕೊಳ್ಳಬಹುದು. ಕಾಯಿಲೆಯ ಅವಧಿ 48ರಿಂದ 96 ಗಂಟೆಗಳು.
ಚಿಕಿತ್ಸೆ
ಬದಲಾಯಿಸಿರೋಗಾಣು ಮಾದಕಗಳನ್ನು ಮತ್ತು ಆಂತ್ರಾಕ್ಸ್ ಮಾದಕ ಸೀರಂಗಳನ್ನು ಈ ರೋಗದ ಚಿಕಿತ್ಸೆಗೆ ಬಹಳವಾಗಿ ಉಪಯೋಗಿಸುತ್ತಾರೆ. ಕಾಯಿಲೆಗೆ ತುತ್ತಾಗಿ ಸತ್ತಿರುವ ಪ್ರಾಣಿಯ ದೇಹವನ್ನು ಸುಡುವುದರ ಅಥವಾ ಸುಣ್ಣವನ್ನು ಬೆರೆಸಿ ಹೂಳುವುದರ ಮುಖಾಂತರ ರೋಗ ಹರಡುವುದನ್ನು ತಡೆಗಟ್ಟಬಹುದು. ಸಂಪರ್ಕ ನಿಷೇಧಕ್ರಮಗಳಿಂದ ಮತ್ತು ಕುದುರೆ ಸುತ್ತಮುತ್ತಲಿನ ಪ್ರದೇಶವನ್ನು ಸೋಂಕು ನಿವಾರಕ ಔಷಧಿಗಳಿಂದ ಶುಚಿಗೊಳಿಸಬೇಕು. ರೋಗವಾಹಕಗಳನ್ನು ಮತ್ತು ಕೀಟಗಳನ್ನು ಹತೋಟಿಮಾಡುವುದು ಮತ್ತು ರೋಗದ ಸೋಂಕು ತಗುಲಿದ ಗೊಬ್ಬರವನ್ನು ನಾಶಮಾಡುವುದು ಆವಶ್ಯಕ. ಕಾಯಿಲೆಯಿರುವಂಥ ಕುದುರೆಗಳನ್ನು ಗುರುತಿಸಿ ಅವನ್ನು ಚಿಕಿತ್ಸೆಗೆ ಬೇರ್ಪಡಿಸಬೇಕು. ಆರೋಗ್ಯದಿಂದಿರುವ ಪ್ರಾಣಿಗಳಿಗೆ ಮುನ್ನೆಚ್ಚರಿಕೆಯ ಚಿಕಿತ್ಸೆಗೆ ವ್ಯವಸ್ಥೆಮಾಡಬೇಕು.
ದುಗ್ಧರಸಸ್ರಾವಣ ವ್ಯಾಧಿ
ಬದಲಾಯಿಸಿಇದು ಕುದುರೆಗಳಿಗೆ ಬರುವ ಸಾಧಾರಣವಾದ ಸಾಂಕ್ರಾಮಿಕ ರೋಗ. ಕೆಳಕಾಲಿನ ಚರ್ಮ ಬಿಳಿಚಿಕೊಳ್ಳುವುದರಿಂದ ಈ ರೋಗ ಬಂದಿದೆ ಎನ್ನುವುದು ವ್ಯಕ್ತವಾಗುತ್ತದೆ. ಕೋರಿನಿಬ್ಯಾಕ್ಟೀರಿಯಂ ಸ್ಯೂಡೋಟ್ಯುಬರ್ ಕ್ಯುಲೋಸಿಸ್ ಇದಕ್ಕೆ ಕಾರಣ. ಈ ರೋಗ ಹಿಂದಿನ ಕಾಲಿನಲ್ಲಿ ದುಗ್ಧರಸನಾಳಗಳಿಗೆ ಸೀಮಿತವಾಗಿರುವುದು. ಸ್ಥಳೀಯ ದುಗ್ಧನಾಳ ಗೆಣ್ಣುಗಳಲ್ಲಿ ಗೆಡ್ಡೆಗಳು ಅಂಕುರವಾಗಿ ಹುಣ್ಣು, ಊತ ಹೆಚ್ಚುತ್ತವೆ. ಈ ಸ್ಥಿತಿ ಸಾಮಾನ್ಯವಾಗಿ ಗೊರಸಿನ ಕುಚ್ಚಗೂದಲ ಪ್ರದೇಶದಲ್ಲಿ ಕಂಡುಬರುತ್ತದೆ. ಆದರೆ ಇದು ವಿರಳವಾಗಿ ಕಾಲಿನ ಮೇಲ್ಭಾಗಕ್ಕೆ ಹಬ್ಬಬಹುದು. ಬಿರುಕುಬಿಟ್ಟ ಗೆಣ್ಣಿನಿಂದ ಸುರಿಯುವ ಕೀವು ಹಳದಿಮಿಶ್ರಿತ ಬಿಳಿಯಾಗಿದ್ದು ರಕ್ತದಿಂದ ತೋಯ್ದಿರುತ್ತದೆ, ರೋಗ ಹಬ್ಬುವುದು ನಿಧಾನ ಮತ್ತು ಸಾಮಾನ್ಯವಾಗಿ ಹಿಂದಿನ ಕಾಲಿನ ಕೆಳಭಾಗದಲ್ಲಿ ನೋವಾಗುವಂಥ ಊತದಿಂದ ಮೊದಲಾಗುತ್ತದೆ. ಈ ಕಾಯಿಲೆ ಬಂದಾಗ ಐದು ದಿವಸಗಳಿಗೊಂದರಂತೆ ಒಂದು ಪೌಂಡು ದೇಹದ ತೂಕಕ್ಕೆ 2 ಮಿಲಿಗ್ರಾಂಗಳಷ್ಟು. ಆಕ್ಸಿಟೆಟ್ರಸೈಕ್ಲಿನ್ ಕೊಡುವುದರಿಂದ ಒಳ್ಳೆಯ ಪರಿಣಾಮವಾಗುತ್ತದೆ. ಹುಣ್ಣು ಜಾಗವನ್ನು ಸ್ವಚ್ಛಗೊಳಿಸಿ ಆಕ್ಸಿಟೆಟ್ರಸೈಕ್ಲಿನ್ ಮುಲಾಮನ್ನು ಹಚ್ಚಬಹುದು.
ಸಾಂಕ್ರಾಮಿಕ ದುಗ್ಧರಸವ್ರಣವ್ಯಾಧಿ
ಬದಲಾಯಿಸಿಇದು ಕುದುರೆಗಳ ತೀವ್ರ ಸಾಂಕ್ರಾಮಿಕ ರೋಗ. ಸದಾ ಕೀವು ತುಂಬಿದ ಬಿರುಕುಗಳು, ಚರ್ಮ ವ್ರಣ ಇಲ್ಲವೇ ನ್ಯೂಮೋನಿಯ ಇದರ ಕುರುಹುಗಳು. ಹಿಸ್ಟೋಪ್ಲಾಸ್ಮ ಫಾರ್ಸಿಮಿನೋಸಮ್ ಎಂಬ ಬೂಷ್ಟು ಇದಕ್ಕೆ ಕಾರಣ. ಈ ರೋಗ ಚರ್ಮರೂಪದಲ್ಲಿದ್ದಾಗ ದುಗ್ಧರಸನಾಳದ ಪ್ರದೇಶದೆಡೆಯಲ್ಲಿ ಹುಣ್ಣು ಬೆಳೆಯುತ್ತದೆ. ಹುಣ್ಣು ಮುಂದುವರಿದು ದುಗ್ಧರಸದ ನಾಳಗಳು ದಪ್ಪವಾಗುತ್ತ ಉಬ್ಬಿ ನಾಳಗಳ ಉದ್ದಕ್ಕೂ ಗಂಟುಗಳು ಬೆಳೆಯುತ್ತವೆ. ಈ ಗಂಟುಗಳು ಗಟ್ಟಿಯಾದ ಹಳದಿಯ ಎಣ್ಣೆಯಂಥ ಕೀವು ತುಂಬಿದ ಒಳಕುರುಗಳಾಗಿ ಮಾರ್ಪಾಡಾಗುತ್ತವೆ. ದುಗ್ಧರಸನಾಳದ ಗಂಟುಗಳು ಉಬ್ಬಿ ಹರಿದುಹೋಗಬಹುದು. ರೋಗಕ್ಕೆ ತುತ್ತಾದ ಕಾಲಿನ ಆವರಣ ದಪ್ಪವಾಗಬಹುದು. ಪೂರ್ಣ ಕಾಲು ಉಬ್ಬುವುದು ಸ್ವಾಭಾವಿಕ. ಗಾಯದ ಭಾಗದಲ್ಲಿ ನೋವಿರುವುದಿಲ್ಲ. ಗಾಯ ಕಾಲಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಬೆನ್ನು, ಹೊಟ್ಟೆ, ಕತ್ತು ಮತ್ತು ಜನನೇಂದ್ರಿಯಗಳಲ್ಲಿಯೂ ಕಂಡುಬರಬಹುದು. ಈ ರೋಗಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ತಿಳಿದಿಲ್ಲ.
ಕ್ಷಯ
ಬದಲಾಯಿಸಿಮೈಕೋ ಬ್ಯಾಕ್ಟೀರಿಯಂ ಟ್ಯುಬರ್‍ಕ್ಯುಲೊಸಿಸ್‍ನಿಂದ ಉಂಟಾಗುವ ಈ ರೋಗ ಯಾವ ಅಂಗಾಂಗಗಳಲ್ಲಿಯಾದರೂ ದಿನೇ ದಿನೇ ಬೆಳೆಯುತ್ತಿರುವ ಕ್ಷಯಗ್ರಂಥಿಗಳಿಂದ ವ್ಯಕ್ತವಾಗುತ್ತದೆ. ಕುತ್ತಿಗೆಯ ಬಳಿಯ ಬೆನ್ನುಮೂಳೆ ಗಾಯಕ್ಕೆ ತುತ್ತಾಗುವುದು ತೀರ ಸಾಮಾನ್ಯ. ಮೂಳೆ ಮೆದುವಾಗಿ ನೋವು ಕಂಡು ಕುತ್ತಿಗೆಯನ್ನು ಅಲುಗಾಡಿಸಲು ಆಗುವುದಿಲ್ಲ. ಕುದುರೆ ಭೂಮಿಗೆ ಬಗ್ಗಿ ಹುಲ್ಲು ಮೇಯಲು ಆಗದಂತೆ ಆಗುತ್ತದೆ. ಶ್ವಾಸಕೋಶದ ಗಾಯದಿಂದ ಕೆಮ್ಮು, ದುಗ್ಧನಾಳ ಗೆಣ್ಣುಗಳ ಉಬ್ಬುವಿಕೆ, ಮೂಗಿನಿಂದ ಹರಿಯುವುದು ಮತ್ತು ಏರಿಳಿಯುವ ಜ್ವರ ಮುಂತಾದವು ಈ ರೋಗದ ಇತರ ಲಕ್ಷಣಗಳು. ರೋಗವಿರುವ ಕುದುರೆಗಳನ್ನು ಚಿಕಿತ್ಸೆಗೆ ಒಳಪಡಿಸಬಾರದು. ಏಕೆಂದರೆ ಇದು ರೋಗಹರಡುವಿಕೆಗೆ ಒಂದು ಮೂಲವಾಗಬಹುದು. ಕ್ಷಯರೋಗದ ಪರೀಕ್ಷೆಯ ಅನಂತರ ರೋಗವಿರುವ ಕುದುರೆಗಳನ್ನು ಬೇರ್ಪಡಿಸಬೇಕು.
ಡೌರಿನ
ಬದಲಾಯಿಸಿಇದು ಕುದುರೆಗಳ ಒಂದು ರತಿರೋಗ ಅಥವಾ ಗುಹ್ಯರೋಗ. ಬಾಹ್ಯಜನನೇಂದ್ರಿಯ ಊದಿಕೊಳ್ಳುವಿಕೆ, ಚರ್ಮದಲ್ಲಿ ಗಾಯಗಳು ಆಗುವಿಕೆ, ಮತ್ತು ಪಾಶ್ರ್ವವಾಯು ಈ ಕಾಯಿಲೆಯ ಮುಖ್ಯ ಲಕ್ಷಣಗಳು. ಪ್ರೊಟೋeóÉೂೀವನ್ ಪರತಂತ್ರಜೀವಿ ಇದಕ್ಕೆ ಕಾರಣ. ಗಂಡುಕುದುರೆಗಳಿಗೆ ವೃಷಣ ಊದಿಕೊಳುತ್ತದೆ ಮತ್ತು ಅಂಗಶೋಫವಾಗುತ್ತದೆ. ಸುಮಾರಾಗಿ ಚÀರ್ಮ ಹಂತಗಳೊಡಗೂಡಿದ ಮೂತ್ರ ವಿಸರ್ಜನೆ ಆಗುತ್ತದೆ. ಹೆಣ್ಣುಕುದುರೆಗಳಲ್ಲಿ ಅಂಗಶೋಫ, ಯೋನಿಯಿಂದ ಹೇರಳವಾಗಿ ಹರಿಯುವಿಕೆ ಮತ್ತು ಯೋನಿಯ ಮುಖಚರ್ಮದಲ್ಲಿ ಹುಣ್ಣಾಗುವಿಕೆ ತಲೆದೋರಬಹುದು. ಅಂಗಶೋಫ ಮೊಲೆ ಮತ್ತು ಹೊಟ್ಟೆಯ ಕೆಳಭಾಗಗಳಿಗೂ ಹರಡುತ್ತದೆ. ಅಲುಗಾಡದಿರುವಿಕೆ ಮತ್ತು ಕಾಲುಗಳಲ್ಲಿ ನಿಶ್ಯಕ್ತಿ ಕಂಡುಬಂದು, ನಡೆಯುವಾಗ ಕುದುರೆಗಳು ಕಾಲುಗಳನ್ನು ಅನ್ಯೋನ್ಯವಾಗಿ ಹಾಕುವುದಿಲ್ಲ. ಹಿಂದಿನ ಕಾಲಿನ ಕ್ಷೀಣತೆಯಿಂದ ಕುದುರೆ ಬಡಕಲಾಗಿ ಕ್ಷೀಣಿಸುತ್ತದೆ. ರೋಗಗ್ರಸ್ತ ಪ್ರಾಣಿಯನ್ನು ಚಿಕಿತ್ಸೆಗೆ ಒಳಪಡಿಸಿ ಪ್ರಯೋಜನವಿಲ್ಲ.
ಸುರ್ರಾ
ಬದಲಾಯಿಸಿಕುದುರೆಗಳಿಗೆ ಮತ್ತು ಒಂಟೆಗಳಿಗೆ ಬರುವ ಪ್ರಧಾನರೋಗ. ಆನೆ, ಕುರಿ, ಮೇಕೆ ಮತ್ತು ವಿರಳವಾಗಿ ನಾಯಿಗಳಿಗೂ ಈ ರೋಗ ಬರುತ್ತದೆ. ಇದು ಟ್ರೆಪ್ಯಾನಸೋಮ ಈವಾನ್ಸ್ ಎಂಬ ಏಕಾಣುಜೀವಿಯಿಂದ ಉಂಟಾಗುತ್ತದೆ. ರಕ್ತದ ಮೂಲಕ ಹರಡುವ ಈ ರೋಗದ ಮೂಲವಾಹಕಗಳು ಕಚ್ಚುವ ನೊಣ, ಸ್ವೊಮ್ಯಾಕ್ಸಿಸ್ ಮತ್ತು ಲೈಪ್‍ರೋಸಿಯ. ಚಿಕಿತ್ಸೆ ಮಾಡದಿದ್ದಲ್ಲಿ ಈ ರೋಗದಿಂದ ವಿಪರೀತ ಪ್ರಾಣನಷ್ಟವಾಗುತ್ತದೆ. ಪದೇ ಪದೇ ಜ್ವರ ಬಂದು ಕುದುರೆ ಇಳಿಮುಖವಾಗುತ್ತದೆ. ಆಧಾರ ಭಾಗಗಳಲ್ಲಿ ಕೀವಾಗುವುದು, ಕುರು ಆಗಿ ವೇದನೆಯಾಗುವುದು, ರಕ್ತಹೀನತೆ, ಕರುಳಿನ ತೊಂದರೆ, ಜನನಾಂಗ ಊದಿಕೊಳ್ಳುವುದು ಇವೇ ಇನ್ನಿತರ ಲಕ್ಷಣಗಳು. ಯುಕ್ತಚಿಕಿತ್ಸೆಯಿಂದ ಈ ರೋಗವನ್ನು ಗುಣಪಡಿಸಬಹುದು.
ಕುದುರೆಯ ಆಂತರಿಕ ಪರೋಪಜೀವಿಗಳು
ಬದಲಾಯಿಸಿಕುದುರೆಗಳು ನಾನಾ ತರಹದ ಪರೋಪಜೀವಿಗಳನ್ನು ಅಂಟಿಸಿಕೊಳ್ಳುತ್ತವೆ. ದೇಹದ ಒಳಭಾಗದಲ್ಲಿ ಕಂಡು ಬರುವ ಪರೋಪಜೀವಿಗಳಾದ ನೆಮಟೋಡ್ಸ್, ಸೆಸ್ಟೋಡ್ಸ್, ಟ್ರೆಮಟೋಡ್‍ಗಳಿಗೆ ಅವಕಾಶಮಾಡಿಕೊಡುತ್ತವೆ. ನೆಮಟೋಡ್‍ಗಳು ತುಂಬ ತೊಂದರೆಯನ್ನುಂಟು ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವು : (i) ಸ್ಟ್ರಾಂಜಿಲಸ್ ವಲ್ಗ್ಯಾರಿಸ್ : ಇದರ ಮರಿ ಹುಳ ರಕ್ತನಾಳದ ಮೂಲಕ ಹರಡುತ್ತದೆ. ಈ ರಕ್ತನಾಳದ ಚರ್ಮ ಕೆಲವೆಡೆ ನಾರುನಾರಾಗಿ ದಪ್ಪಗಟ್ಟಿಕೊಂಡು ತೊಂದರೆ ಕೊಡುತ್ತದೆ. (ii) ಸ್ಟ್ರಾಂಜಿಲಸ್ ಎಡೆಂಟೇಸ್ : ಪೂರ್ಣವಾಗಿ ಬೆಳೆದ ಈ ಪರೋಪಜೀವಿ ದೊಡ್ಡಕರುಳಿನಲ್ಲಿ ವಾಸ ಮಾಡಿಕೊಂಡು ಎನ್. ವಲ್ಗಾರಿಸ್‍ಗಳಂತೆ ಚರ್ಮದ ಅಂಗಾಂಶಗಳಿಂದ ಆಹಾರವನ್ನು ಹೀರುತ್ತದೆ. (iii) ಸ್ಟ್ರಾಂಜಿಲಸ್ ಈಕ್ವಿನಾಸ್ : ಪೂರ್ಣಬೆಳೆದ ಈ ಪರೋಪಜೀವಿ ದೊಡ್ಡಕರುಳಿನಲ್ಲಿ ವಾಸಮಾಡುತ್ತದೆ. (iv) ಸಣ್ಣ ಸ್ಟ್ರಾಂಜಿಲಸ್ : ಪೋಟಿರಿಯೋ ಸ್ಟಮನ್, ಸ್ವೀ ; ಟ್ರೈಯಾಡೋಫರಸ್, ಸ್ವೀ ; ಒಸೋಫೇಗೆ ಡೊಂಟಸ್ ರೋಬಸ್ಟಸ್ ಈ ಹುಳುಗಳು ದೊಡ್ಡಕರುಳು ಮತ್ತು ಮಲದ್ವಾರಗಳಲ್ಲಿ ಕಂಡುಬರುತ್ತವೆ. (v) ಸ್ಟ್ರೆಕೊಸ್ಟ್ರಾಂಜಿಲಸ್ ಆಕ್ಸೈ : ಜಠರದಲ್ಲಿ ವಾಸಿಸುತ್ತದೆ. (vi) ಆಕ್ಸಿಯಾರಸ್ ಈವಿನೈ : ಆಹಾರ ನಾಳದ ಹಿಂದಿನ ಭಾಗಗಳಲ್ಲಿ ವಾಸಿಸುತ್ತದೆ. (vii) ಪೋರೋಸೀರಸ್ ಈಕ್ವೆರಮ್ : ದಪ್ಪನಾದ ಬಿಳಿಯ ಈ ಹುಳುಗಳು 6"-9"ಗಳಿದ್ದು ಸಣ್ಣ ಕರುಳಿನಲ್ಲಿ ವಾಸಿಸುತ್ತವೆ. ಈ ಹುಳುಗಳು ಹೆಚ್ಚಾಗಿ ಕಂಡುಬಂದಲ್ಲಿ ಕರುಳನ್ನು ತೂತುಗೊಳಿಸುತ್ತವೆ. ಮರಿಹುಳುಗಳು ಶ್ವಾಸಕೋಶವನ್ನು ತೊಂದರೆಗೀಡುಮಾಡುತ್ತವೆ. (viii) ಸ್ಟ್ರಾಂಜಿಲಸ್ ವೆಸ್ಟರಿ : ಈ ಪರೋಪಜೀವಿ ಚಿಕ್ಕದಾಗಿದ್ದು ಸಣ್ಣಕರುಳಿನಲ್ಲಿ ಹುದುಗಿಕೊಂಡು ಜೀವಿಸುತ್ತದೆ. (ix) ಥೆಲಿಸಿಯ ಲಾಕ್ರಿಮೇಲಿಸ್: ಈ ಹುಳು ಕಣ್ಣಿನ ನಾಳದಲ್ಲಿ ವಾಸಿಸುತ್ತದೆ. ಇದರಿಂದ ಗುಡ್ಡೆಹುಣ್ಣಾಗಿ ವ್ರಣವಾಗುತ್ತದೆ.
ಕುದುರೆಗಳ ಬಾಹ್ಯ ಪರೋಪಜೀವಿಗಳು
ಬದಲಾಯಿಸಿಹಲವು ವಿಧಾನಗಳಲ್ಲಿ ಕುದುರೆ ಹಲವು ಕೀಟಗಳ ಹಾವಳಿಗೆ ತುತ್ತಾಗುತ್ತದೆ. ಅವುಗಳಲ್ಲಿ ಬಹುಮುಖ್ಯವಾದವು: (i) ಸೊಳ್ಳೆ, ಕರಿನೊಣ, ಕುದುರೆನೊಣ, ಕೊಟ್ಟೆಗೆನೊಣ, ಹೇನು ಮತ್ತು ಉಣ್ಣೆಗಳು. (ii) ತಿರುವುಹುಳ, ಕುದುರೆ ಬಾಟನೊಣ ಮತ್ತು ಇತರ ನೊಣಗಳು (iii) ಪರತಂತ್ರಜೀವಿಗಳ ಮತ್ತು ರೋಗಗಳ ಸಾಗಾಣಿಕೆ. ಕ್ರಿಮಿನಾಶಕಗಳನ್ನು ಉಪಯೋಗಿಸಿ ಅವನ್ನು ಹತೋಟಿಯಲ್ಲಿ ಇಡಬೇಕು.
ಸಾಂಕ್ರಾಮಿಕ ನೆಗಡಿ
ಬದಲಾಯಿಸಿಕುದುರೆ ಮರಿಗಳಿಗೆ, ವಿಶೇಷವಾಗಿ 6 ತಿಂಗಳಿನಿಂದ 5 ವರ್ಷ ವಯಸ್ಸಿನವುಗಳಲ್ಲಿ, ಸಾಂಕ್ರಾಮಿಕವಾಗಿ ಹರಡುವ ಒಂದು ತೀವ್ರವ್ಯಾಧಿ. ಮಲಿನ ಆಹಾರ ಹಾಗೂ ನೀರು ಈ ರೋಗ ಹುಟ್ಟಿ ಹರಡಲು ಪ್ರಮುಖ ಕಾರಣಗಳು. ಕೆಚ್ಚಲಿನಿಂದ ಹಾಲು ಕುಡಿಯುವಾಗ ಕುದುರೆ ಮರಿಗಳಿಗೆ ಈ ಬೇನೆ ತಗಲುವುದು. ವರ್ಷವಿಡೀ ಇದು ಸುಪ್ತವಾಗಿದ್ದರೂ ವಸಂತಋತುವಿನ ಶೀತಮಾರುತಕ್ಕೆ ಕುದುರೆಗಳು ಒಳಗಾದಾಗ ರೋಗ ಉಲ್ಬಣಿಸುತ್ತದೆ. ಈ ಕಾಯಿಲೆಯ ಕಾರಕ ಸ್ಟ್ರೆಪ್ಟೊಕಾಕಸ್ ಈಕ್ವೈ ಎನ್ನುವ ಏಕಾಣುಜೀವಿಗಳು. ಇವು ಪೋಣಿಸಿದ ಮಣಿಹಾರದಂತಿರುವ ಸೂಕ್ಷ್ಮದರ್ಶಕೀಯ ಜೀವಿಗಳು. ಹೊಲಸು ಮಲಿನತೆಯಲ್ಲಿ ಇವು ವೃದ್ಧಿಗೊಂಡು ಶೀತವಾತಾವರಣದಲ್ಲಿರುವ ಪ್ರಾಣಿಯ ದೇಹದಲ್ಲಿ ಒಮ್ಮೆಗೆ ವರ್ಧಿಸುತ್ತವೆ. ಸೋಂಕು ತಟ್ಟಿದ ಕುದುರೆಯಲ್ಲಿ 4 ಮತ್ತು 8 ದಿವಸಗಳಲ್ಲಿ ರೋಗ ಹೊರಹೊಮ್ಮುವುದು. ಮೂಗಿನ ಮೃದು ಚರ್ಮದಲ್ಲಿ ಉರಿಯೂತವಾಗಿ ಕುದುರೆಗೆ ಜ್ವರಬರುವುದು. ಅದರ ದೇಹಸ್ಥಿತಿ ಕೆಟ್ಟು ಮನಸ್ಸಿನ ಮೇಲೆ ಆಘಾತವಾಗುವುದು. ನಾಸಿಕ ದ್ವಾರದ ಅದಿಬದಿಯಲ್ಲಿರುವ ದುಗ್ಧರಸಗ್ರಂಥಿಗಳು ಊದಿಕೊಂಡು ಅವುಗಳ ಮೇಲೆ ಸಣ್ಣ ಸಣ್ಣ ಕುರುಗಳು ಹುಟ್ಟುತ್ತವೆ. ಕುರುಗಳಲ್ಲಿ ಕೀವಾಗಿ ನಂಜಾಗಿ ಅದರಿಂದ ರಕ್ತಪರಿಚಲನೆಯ ಮೇಲೆ ದುಷ್ಪರಿಣಾಮವಾಗುತ್ತದೆ. ಮುಂದೆ ಕರುಳಿನ ಪಟಲದ ಮೇಲಿರುವ ದುಗ್ಧರಸಗ್ರಂಥಿಗಳಲ್ಲಿ ಸಣ್ಣ ಸಣ್ಣ ಕುರುಗಳೆದ್ದು ಕೀವುಕುರುಗಳಾಗಿ ಸುತ್ತಮುತ್ತಲಿನ ಅಂಗಾಂಗಗಳ ಮೇಲೆ ರೋಗ ಸೇಚನೆಯಾಗುವುದು. ಅಣುಜೀವಿಗಳು ಸ್ಥಾನಾಂತರಗೊಂಡು ಅನೇಕ ರೀತಿಯ ತೊಡಕುಗಳನ್ನು ಉಂಟುಮಾಡುವುವು. ಶ್ವಾಸಕೋಶರೋಗದಿಂದ ನರಳುತ್ತಿರುವ ಹಾಗೂ ಕಾಲಕಾಲಕ್ಕೆ ಪ್ರಯಾಣದಲ್ಲಿ ತೊಡಗಿರುವ ಕುದುರೆಗಳಲ್ಲಿ ಮುನ್ನರಿವು ಹೇಳಲು ಬಾರದು.
ಚಿಕಿತ್ಸೆ
ಬದಲಾಯಿಸಿಸಮತೂಕದ ಆಹಾರ, ಶೀತದಿಂದ ರಕ್ಷಣೆ ಹಾಗೂ ಸಾಕಷ್ಟು ವಿಶ್ರಾಂತಿ ನೀಡುವುದು ಈ ರೋಗಕ್ಕೆ ಮುನ್ನೆಚ್ಚರಿಕೆಗಳು. ರೋಗ ಸ್ಪಷ್ಟವಾಗಿ ಕಾಣಿಸಿಕೊಂಡಾಗ ಪೊಟ್ಯಾಷ್ ಕ್ಲೋರೇಟನ್ನು ಕುಡಿಯುವ ನೀರಿನಲ್ಲಿ ಬೆರೆಸುವುದು, ಕುರುಗಳಿಂದ ಸ್ರವಿಸುವ ಕೀವನ್ನು ತೊಳೆಯುವುದು, ಸಲ್ಫಾ ಔಷಧ ನೀಡುವುದು, ಹಾಗೂ ಚುಚ್ಚಿ ಚಿಕಿತ್ಸಕಗಳನ್ನು ಉಪಯೋಗಿಸುವುದು ಕೆಲವು ಚಿಕಿತ್ಸಾ ವಿಧಾನಗಳು.
ಚುಂಚುಕಾಲಿನ ಉಸುಬುಕೀಲು (ಬಾಗ್ ಸ್ಪಾವಿನ್)
ಬದಲಾಯಿಸಿಈ ಬೇನೆಯಿಂದ ಮೊಣಕಾಲಿನ ಕೀಲಿನ ಪೊರೆಯ ಮುಚ್ಚಳ ಊದಿಕೊಂಡು ಕೀಲಿನ ಪೊರೆಯ ಒಳಗೆ ಉರಿಯೂತವಾಗುವುದು. ಕೀಲಿನ ಮೂರು ಕಡೆ ಊತ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಊತದ ಒಂದು ಕಡೆ ಕೈಯಿಂದ ಒತ್ತಿದರೆ ಉಳಿದೆರಡು ಕಡೆಗಳಲ್ಲಿ ಉಬ್ಬರ ಕಾಣಿಸಿಕೊಳ್ಳುವುದು. ಇಂಥ ಲಕ್ಷಣಗಳಿಂದ ಅತಿ ಸುಲಭವಾಗಿ ಈ ರೋಗವನ್ನು ಗುರುತಿಸಬಹುದು. ಅಲ್ಲಿಯ ಮಲಿನ ರಕ್ತನಾಳ (ಸೆಫಿನ) ಸ್ವಷ್ಟವಾಗಿ ಕಾಣಿಸಿಕೊಳ್ಳುವುದು ರಕ್ತದ ಒತ್ತಡ ಕೀಲಿನ ಭಾಗದಲ್ಲಿ ವಿಪರೀತವಾಗಿ ಕಾಣುವುದರಿಂದ ಕುದುರೆಯ ಲಾಲನೆ ಪಾಲನೆ ಮಾಡುವವರು ಇದನ್ನು ಒಮ್ಮೊಮ್ಮೆ ನೆತ್ತರ ಕೀಲು ಎಂದು ಕರೆಯುವುದುಂಟು. ಕುದುರೆಯ ದೇಹಶಕ್ತಿ ನಶಿಸಿ, ದೇಹಶ್ರಮ ಜಾಸ್ತಿಯಾದಾಗ ಹಿಂಗಾಲುಗಳು ಶ್ರಮಗೊಳ್ಳುವುವು. ಚುಂಚುಕಾಲು ಮತ್ತು ಮಂಡಿಯ ಮಧ್ಯೆಯ ಕೀಲು ದುರ್ಬಲಗೊಳ್ಳುವುದು. ಸ್ವಾಭಾವಿಕವಾಗಿ ನಸುಬಾಗಿದಂತೆ ಕಾಣುವ ಹಿಂಗಾಲು ಅದರ ನೈಜಸ್ಥಿತಿಯನ್ನು ಕಳೆದುಕೊಂಡು ನೇರವಾಗುವುದು. ಆಗ ಉಸುಬುಕೀಲಿನ ಕಾಲಿನಲ್ಲಿ ಶಕ್ತಿ ಕಡಿಮೆಯಾಗುವುದರಿಂದ ಉಳಿದ ಕಾಲನ್ನು ಕುದುರೆ ಕೆಲಸದಲ್ಲಿ ಬಹಳ ಉಪಯೋಗಿಸಿಕೊಂಡಾಗ ಎರಡು ಕಾಲಿನ ಕೀಲುಗಳು ಈ ರೋಗಕ್ಕೊಳಗಾಗುವುವು. ಹಿಂಗಾಲಿನಲ್ಲಿ ಕುಂಟುಕಾಣಿಸಿಕೊಂಡರೆ ರೋಗದ ಮುನ್ನರಿವು ಅಷ್ಟೇನು ಆಶಾದಾಯಕವಾಗುವುದಿಲ್ಲ. ಆದರೂ ಒಮ್ಮೊಮ್ಮೆ ಕೀಲಿನಲ್ಲಿ ಈ ರೋಗವಿದ್ದರೂ ಕುದುರೆ ಕುಂಟದೆ ಕೆಲಸದಲ್ಲಿ ಭಾಗಿಯಾಗುವುದು ಸಹಜ.ಉಸುಬುಕೀಲು ಕುದುರೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬೇನೆ. ಚಿಕಿತ್ಸೆಯನ್ನು ವಿವಿಧ ರೂಪದಲ್ಲಿ ನೀಡಬಹುದು. ಆದರೂ ದೇಹದಾಢ್ರ್ಯ ಹಾಗೂ ಹಿಂಗಾಲುಗಳ ನೈಜತೆಯನ್ನು ವೈದ್ಯಕೀಯ ಸಲಹೆಯಿಂದ ಕಾಪಾಡುವುದು ಒಳ್ಳೆಯದು. ಉಸುಬುಕೀಲಿನ ಚಿಕಿತ್ಸೆಯ ಔಷಧಿ ಟಿಂಚರ್ ಅಯೋಡಿನ್ 4 ಔನ್ಸ್, ಟರ್ಪೆಂಟೈನ್ 1 ಔನ್ಸ್, ಜಾಪಾಳತೈಲ 10 ಹನಿಗಳು ಇವುಗಳ ಮಿಶ್ರಣ. ಪ್ರತಿದಿನ ಈ ಔಷಧಿಯನ್ನು ಉಸುಬಿರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಉಜ್ಜಬೇಕು. ಆಗ ಕೀಲಿನ ಚರ್ಮದ ಮೇಲೆ ಉಜ್ಜುಬೊಬ್ಬೆ ಏಳುವುವು. ಬೊಬ್ಬೆಗಳ ಮೂಲಕ ಕೀಲಿನ ದ್ರವ ಹೊರಗೆ ಬಂದು ಉಸುಬು ಕಡಿಮೆಯಾಗುವುದು. ಬಹಳ ಬೊಬ್ಬೆಗಳು ಮೂಡಿಬಂದರೆ ಔಷಧಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಕೀಲಿನ ಉಸುಬು ತಗ್ಗುವ ವರೆಗೂ ಈ ಚಿಕಿತ್ಸೆಯನ್ನು ಮುಂದುವರಿಸಬೇಕು. ಇತ್ತೀಚಿನ ದಿನಗಳಲ್ಲಿ ಪಶುವೈದ್ಯರು ಮೇಲೆ ಹೇಳಿದ ಚಿಕಿತ್ಸೆಗೆ ಬದಲಾಗಿ ಕಾರ್ಟಿಕೊಸ್ಟೀರಾಯ್ಡ್ ಔಷಧಿಗಳನ್ನು ಬಳಸುತ್ತಾರಲ್ಲದೆ, ಹೆಚ್ಚಿನ ದ್ರವವನ್ನು ಕೀಲಿನಿಂದ ಹೊರತೆಗೆದು ಚಿಕಿತ್ಸೆಯನ್ನು ಸಹ ಮಾಡುತ್ತಾರೆ.
ಚುಂಚುಕಾಲಿನ ಕೀಲಿನ ಜಡ್ಡು (ಬೋನ್‍ಸ್ಟಾವಿನ್)
ಬದಲಾಯಿಸಿಕೀಲಿನ ರೂಪದಲ್ಲಿ ತೊಡಕಾದಾಗ ಹಿಂಗಾಲಿನ ನೈಜರೂಪ ಬದಲಾಯಿಸಿದಾಗ ಮುಖ್ಯವಾಗಿ ಈ ಜಡ್ಡು ಬರುವುದು. ಆಹಾರದಲ್ಲಿ ಅನ್ನಾಂಗಗಳ ಕೊರತೆ, ರಂಜಕ ಅಂಶವಿಲ್ಲದಿರುವುದು, ಕೆಲವೊಮ್ಮೆ ಆನುವಂಶಿಕ ಕಾರಣಗಳಿಂದ ಕೂಡಿ ವ್ಯಾಧಿ ಕಾಣಿಸಿಕೊಳ್ಳುವುದು. ಇದರ ಲಕ್ಷಣಗಳು ಹೀಗಿವೆ : (i) ಹೆಚ್ಚಾಗಿ ಹೊರಗೆ ಕಾಣುವಂತೆ ಕಾಲಿನ ತುಂಡುಮೂಳೆ ಬೆಳೆಯುವುದು ವ್ಯಕ್ತಜಡ್ಡು ; (ii) ಮೇಲೆ ಹೇಳಿದ ರೀತಿ ಕಾಣದೆ ಕೀಲಿನೊಳಗೆ ಜಡ್ಡುಮೂಡುವುದು-ಅವ್ಯಕ್ತಜಡ್ಡು. (iii) ಚುಂಚುಕಾಲಿಗೂ ಮಂಡಿಗೂ ಮಧ್ಯೆ ಇರುವ ಕೀಲಿನ ಸಮೀಪದಲ್ಲಿಯೇ-ಕಡುಜಡ್ಡು (iv) ಕೀಲಿನ ಪೊರೆಯನ್ನುಳಿದು ಮಿಕ್ಕ ಕಡೆ ಬೆಳೆಯುವುದು-ಮೊಳಕಾಲ ಜಡ್ಡು. ಈ ರೀತಿ ಅನೇಕ ರೂಪವಾಗಿ ಕಾಣಿಸಿಕೊಳ್ಳುವ ಜಡ್ಡಿನಿಂದ ಕುದುರೆ ನಡೆಯುವಾಗ ಮೊದಲ ಕೆಲವು ಹೆಜ್ಜೆಗಳಲ್ಲಿ ಕುಂಟುಕಾಣಿಸಿಕೊಂಡು ಅನಂತರ ಕಾಣದಾಗುವುದು. ಹಿಂಗಾಲಿಗೆ ಕೆಲಸದಿಂದ ಬಿಸಿ ತಟ್ಟಿದರೆ ಜಡ್ಡಿನ ನಿಲುವೇ ಇಲ್ಲದಂತಾಗುವುದು. ಆದರೆ ಕುದುರೆ ವಿಶ್ರಾಂತಿಗೊಂಡು ಮತ್ತೆ ನಡೆಯಲು ಆರಂಭಿಸಿದರೆ ಹಿಂದಿನಂತೆ ಕುಂಟುಕಾಣಿಸಿಕೊಳ್ಳುವುದು. ಜಡ್ಡುರೋಗದಿಂದ ಮೂಡುವ ಕುಂಟು ಕೆಲವೊಮ್ಮೆ ಕಂಡು ಮುಂದೆ ಅದು ಕಾಣದೆ ಹೋದರೂ ಕೆಲವಾರು ಕುದುರೆಗಳಲ್ಲಿ ಯಾವಾಗಲೂ ಕುಂಟುಕಾಣಬಹುದು. ಅಂಥ ಬೇನೆಯನ್ನು ನೀರಸ ಜಡ್ಡು ಎಂದು ಕರೆಯುತ್ತಾರೆ.
ಜಡ್ಡಿನ ಕುಂಟ
ಬದಲಾಯಿಸಿಈ ಜಡ್ಡಿನ ಕುಂಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೀಲುಗಳನ್ನು ಮಡಚುವುದರಲ್ಲಿ ಕಾಣುವ ಅಸಂಬದ್ಧತೆ, ಮೇಲೆದ್ದು ಕಾಣುವ ರೊಂಡಿಯ ಭಾಗ, ಆಗಾಗ್ಗೆ ಕಾಲನ್ನು ಎತ್ತಿ ಎತ್ತಿ ಇಡುವುದನ್ನು ಗುರುತಿಸಬಹುದು. ಹಿಂಗಾಲನ್ನು ಸೂಕ್ಷ್ಮವಾಗಿ ಎಲ್ಲ ಕಡೆಯಿಂದಲೂ ನೋಡಿ, ಕಾಲಿನ ಒಳಭಾಗವನ್ನು ಪರೀಕ್ಷಿಸಿ, ಮತ್ತೊಂದು ಕಾಲಿಗೆ ಹೋಲಿಸಿ ಚುಂಚುಕಾಲಿನ ಮೇಲೆ ಮೂಡುವ ಊತವನ್ನು ಗಮನಿಸಬಹುದು. ಈ ನರಳಿಕೆಯನ್ನು ಸ್ಪಷ್ಟಪಡಿಸಲು ಜಡ್ಡುಪರೀಕ್ಷೆಯನ್ನು ಪಶುವೈದ್ಯರು ಮಾಡುವರು. ಹಿಂಗಾಲಿನ ಕೀಲನ್ನು ಮಡಿಚಿ, ಸ್ವಲ್ಪ ಹೊತ್ತಿನಲ್ಲಿಯೇ ಕುಕ್ಕುಲೋಟದಲ್ಲಿ ಕುದುರೆಯನ್ನು ಓಡಿಸಿದಾಗ, ಸ್ವಲ್ಪ ದೂರದ ವರೆಗೆ ಸ್ಪಷ್ಟವಾಗಿ ಕುಂಟುತೋರುವುದರಿಂದ ಚುಂಚುಕಾಲಿನ ಜಡ್ಡಿನ ಇರವನ್ನು ಕಂಡುಹಿಡಿಯಬಹುದು. ಆದರೆ ಪರೀಕ್ಷೆ ಪೂರ್ಣ ಸಾಧ್ಯವಿಲ್ಲ. ಮೇಲಾಗಿ ವಯಸ್ಸಾದ ಕುದುರೆಗಳಲ್ಲಿ ಫಲಕಾರಿಯೂ ಅಲ್ಲ. ಈ ರೋಗದ ಮುನ್ನರಿವು ಸಮಾಧಾನವನ್ನುಂಟುಮಾಡುವುದು. ಪಶುವೈದ್ಯ ಶಸ್ತ್ರಚಿಕಿತ್ಸಕರಿಂದ ಕುಂಟಿಗೆ ಸಂಬಂಧಿಸಿದ ಸ್ನಾಯುತಂತನ್ನು ಶಸ್ತ್ರದಿಂದ ತೆಗೆಸುವುದರಿಂದ ಜಡ್ಡು ನಿವಾರಣೆಯಾಗುವುದು.ಕುದುರೆಗೆ ಬರುವ ಇತರ ರೋಗಗಳು ಕಜ್ಜಿ, ಬಿಗಿದುಕೊಳ್ಳುವ ಸಿಂಡ್ರೋಮ್, ಪಪ್ರ್ಯುರ ಹೆಮೊರೇಜಿಕ, ಜಂತುಹುಳು, ಬೇಬಿಯಾಸಿಸ್, ಇತ್ಯಾದಿ.
ಉಲ್ಲೇಖಗಳು
ಬದಲಾಯಿಸಿ- ↑ http://www.prajavani.net/news/article/2013/10/01/198089.html
- ↑ "ಆರ್ಕೈವ್ ನಕಲು". Archived from the original on 2016-08-04. Retrieved 2016-11-01.