ಹರಿಕಥೆ
ಹರಿಕಥೆಯು (ಅಕ್ಷರಶಃ "ದೇವರ ಕಥೆ", ತೆಲುಗಿನಲ್ಲಿ ಹರಿಕಥಾ ಕಾಲಕ್ಷೇಪಮ್ ಎಂದು ಕರೆಯಲ್ಪಡುತ್ತದೆ) ಹಿಂದೂ ಧಾರ್ಮಿಕ ಪ್ರವಚನದ ಒಂದು ರೂಪ. ಇದರಲ್ಲಿ ಕಥೆಗಾರನು ಒಂದು ಧಾರ್ಮಿಕ ವಿಷಯವನ್ನು ಅನ್ವೇಷಿಸುತ್ತಾನೆ, ಸಾಮಾನ್ಯವಾಗಿ ಒಬ್ಬ ಸಂತನ ಜೀವನ ಅಥವಾ ಒಂದು ಭಾರತೀಯ ಮಹಾಕಾವ್ಯದಲ್ಲಿನ ಒಂದು ಕಥೆ. ಹರಿಕಥೆಯು ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತು ತತ್ತ್ವಶಾಸ್ತ್ರ ಸೇರಿರುವ ಒಂದು ಸಂಯುಕ್ತ ಕಲೆಯಾಗಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಯಾವುದೇ ಹಿಂದೂ ಧಾರ್ಮಿಕ ವಿಷಯವು ಹರಿಕಥೆಯ ವಿಷಯವಾಗಿರಬಹುದು. ಅದರ ಅತ್ಯುಚ್ಛ್ರಾಯದ ಕಾಲದಲ್ಲಿ ಹರಿಕಥೆಯು ಒಂದು ಜನಪ್ರಿಯ ಮನೋರಂಜನಾ ಮಾಧ್ಯಮವಾಗಿತ್ತು, ಮತ್ತು ಜನರಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಪ್ರಸರಿಸುವಲ್ಲಿ ನೆರವಾಯಿತು. ಜನರ ಮನಸ್ಸುಗಳಲ್ಲಿ ಸತ್ಯ ಮತ್ತು ಸದ್ಗುಣನಿಷ್ಠತೆಯನ್ನು ತುಂಬುವುದು ಮತ್ತು ಭಕ್ತಿಯ ಬೀಜಗಳನ್ನು ಬಿತ್ತುವುದು ಹರಿಕಥೆಯ ಮುಖ್ಯ ಗುರಿಯಾಗಿದೆ. ಅವರಿಗೆ ಕಥೆಗಳ ಮೂಲಕ ಅತ್ಮಜ್ಞಾನದ ಬಗ್ಗೆ ಕಲಿಸುವುದು ಮತ್ತು ಮುಕ್ತಿಯ ಮಾರ್ಗವನ್ನು ತೋರಿಸುವುದು ಮತ್ತೊಂದು ಗುರಿಯಾಗಿದೆ.
ಹಿಂದೂ ಪುರಾಣದಲ್ಲಿ, ವಿಷ್ಣುವಿಗಾಗಿ ಹಾಡಿದ ನಾರದ ಋಷಿಯು ಮೊದಲ ಹರಿಕಥಾ ಗಾಯಕನಾಗಿದ್ದನು. ರಾಮನ ಅವಳಿ ಜವಳಿ ಪುತ್ರರಾದ ಲವ ಮತ್ತು ಕುಶರು ಇತರ ಪ್ರಖ್ಯಾತ ಗಾಯಕರಾಗಿದ್ದರು. ಇವರು ಅಯೋಧ್ಯಾದಲ್ಲಿ ರಾಮನ ಆಸ್ಥಾನದಲ್ಲಿ ರಾಮಾಯಣವನ್ನು ಹಾಡಿದರು.
ಹರಿಕಥೆಯು ಕರಾವಳಿ ಆಂಧ್ರದಲ್ಲಿ ೧೯ನೇ ಶತಮಾನದ ಅವಧಿಯಲ್ಲಿ ಹುಟ್ಟಿಕೊಂಡಿತು.[೧] ಈಗಲೂ ಕೂಡ ಬುರ್ರ ಕಥಾದ ಜೊತೆಗೆ ಹರಿಕಥಾ ಕಾಲಕ್ಷೇಪಮ್ ಆಂಧ್ರದಲ್ಲಿ ಅತ್ಯಂತ ಪ್ರಚಲಿತವಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಮೊದಲು ಬರುವ ಧನುರ್ಮಾಸದ ಅವಧಿಯಲ್ಲಿ ಹರಿದಾಸರು ಹಳ್ಳಿಹಳ್ಳಿಗಳನ್ನು ಸುತ್ತುತ್ತ ಭಕ್ತಿಗೀತೆಗಳನ್ನು ಹಾಡುವುದು ದೀರ್ಘಕಾಲದ ಸಂಪ್ರದಾಯವಾಗಿದೆ. ಅಜ್ಜಡ ಆದಿಭಟ್ಲ ನಾರಾಯಣ ದಾಸು ತೆಲುಗು ಹರಿಕಥಾ ಸಂಪ್ರದಾಯದ ಜನಕರಾಗಿದ್ದರು, ಮತ್ತು ತಮ್ಮ ಕಾವ್ಯಗಳು ಹಾಗೂ ಪ್ರಬಂಧಗಳಿಂದ ಅದನ್ನು ಒಂದು ವಿಶೇಷವಾಗಿ ಕಲಾ ರೂಪವನ್ನಾಗಿ ಮಾಡಿದ್ದಾರೆ.
ಹರಿಕಥೆಯು ಒಂದು ಕಥೆಯ ನಿರೂಪಣೆ, ಮತ್ತು ಕಥೆಗೆ ಸಂಬಂಧಿಸಿದ ವಿವಿಧ ಹಾಡುಗಳ ಒಗ್ಗೂಡಿಕೆಯನ್ನು ಒಳಗೊಳ್ಳುತ್ತದೆ. ಸಾಮಾನ್ಯವಾಗಿ, ನಿರೂಪಣೆಯು ಮುಖ್ಯ ಕಥೆಯ ವಿವಿಧ ಅಂಶಗಳ ಮೇಲೆ ಒತ್ತುಕೊಡಲು ಬಳಸಲಾದ ಅಸಂಖ್ಯಾತ ಉಪಕಥೆಗಳು ಮತ್ತು ಕಿರುಕತೆಗಳನ್ನು ಒಳಗೊಳ್ಳುತ್ತದೆ. ಮುಖ್ಯ ಕಥೆಗಾರನಿಗೆ ಸಾಮಾನ್ಯವಾಗಿ ಹಾಡುಗಳನ್ನು ವಿಸ್ತರಿಸುವ ಒಬ್ಬರು ಅಥವಾ ಹೆಚ್ಚು ಸಹ ಗಾಯಕರು, ಮತ್ತು ಒಬ್ಬ ಮೃದಂಗ ಪಕ್ಕವಾದ್ಯದವನು ನೆರವು ನೀಡುತ್ತಾರೆ. ಕಥೆಗಾರನು ತಾಳಗತಿಯನ್ನು ಕಾಪಾಡಲು ತಾಳಗಳನ್ನು ಬಳಸುತ್ತಾನೆ.
ಉಲ್ಲೇಖಗಳು
ಬದಲಾಯಿಸಿ