ಕಿನ್ನರಿ ಜೋಗಿ
ಕರ್ನಾಟಕ ಜನಪದ ಗಾಯಕರಲ್ಲಿ ಜನಪ್ರಿಯರೆನಿಸಿದ ಕಲಾವಿದರೆಂದರೆ ಈ ಕಿನ್ನರಿ ಜೋಗಿಗಳು. ಇವರು ಮಲೆನಾಡು, ಬಯಲುನಾಡುಗಳಲ್ಲಿ ಕಂಡುಬರುತ್ತಾರೆ. ಕಿನ್ನರಿಯನ್ನು ಬಳಸುವುದರಿಂದ ಇವರು ಕಿನ್ನರಿ ಜೋಗಿಗಳೆಂದು ಕರೆಯುವರು. ಇವರನ್ನು 'ಜೋಗಯ್ಯ' 'ಜೋಗಪ್ಪ' ಎಂದು ಕರೆಯುವರು. ಇವರಲ್ಲಿ ಭೈರವ ಸ್ವಾಮಿಗೆ ನಡೆದುಕೊಳ್ಳುವ ಕೆಲವರು 'ನಾವು ಚುಂಚನಗಿರಿ ಸಂಪ್ರದಾಯದವರು' ಎನ್ನುತ್ತಾರೆ. ಭೈರವನೇ ಕಿನ್ನರಿಯನ್ನು ನುಡಿಸುತ್ತಾ ಸೂಜಿಗಲ್ಲಿನ ಮೇಲೆ ಕುಳಿತಿದ್ದನೆಂಬುದು ಕಲಾವಿದರ ನಂಬಿಕೆ.
ಉದಾಹರಣೆಗೆ:
"ಚುಂಚನ ಗಿರಿಯಪ್ಪನೆ ಸೂಜಿಗಲ್ಲಿನ ಮೇಲೆ
ನಿಂತು ಕಿನ್ನಡಿಯ ನುಡಿಸೋನೆ-ಗಂಗಾಧರ
ನಿನ್ನ ಸೊಲ್ಲಾದವೆಲ್ಲ ಅಪರಂಜಿ"
ಜನಪದ ಪ್ರೇಮಗೀತೆಗಳಲ್ಲಿ 'ಲೋಲು ಕಿನ್ನಡಿ' ನುಡಿಸುವ ಕಿನ್ನರಿ ಜೋಗಿಯ ಮಾತು ಬರುತ್ತದೆ.
ಉದಾಹರಣೆಗೆ:
"ಚೆಲುವಯ್ಯ ಚೆಲುವೋ ತಾನಿ ತಂದಾನಾ
ನೀ ಮಾಯಾರಿಪೇ ಕೋಲನ್ನ ಕೋಲೆ
ಬೆಟ್ಟದ ಮ್ಯಾಗಳ ಜಲ್ಲೆ ಬಿದಿರು
ಬೇಲಿ ಮ್ಯಾಗಳ ಸೋರೆ ಬುರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯಾ..."
ಜೋಗಿಯ ಚೆಲುವು ಮತ್ತು ಅವನ ಕಿನ್ನರಿಯ ರಚನೆಯ ಚಿತ್ರಣವನ್ನು ಈ ಗೀತೆಗಳಲ್ಲಿ ಕಾಣಬಹುದಾಗಿದೆ.
ಕಿನ್ನರಿ ಜೋಗಿಗಳ ವೇಷಭೂಷಣ
ಬದಲಾಯಿಸಿಈ ಕಲಾವಿದರು ತಲೆಗೆ ಮಣಿಗಳಿಂದ ಅಲಂಕರಿಸಿರುವ ರುಮಾಲು, ಬಣ್ಣದ ನಿಲುವಂಗಿ. ಅದರ ಮೇಲೆ ಮಣಿ ಸರಗಳು, ಕೊರಳಿಗೆ ಮಣಿ, ರುದ್ರಾಕ್ಷಿ ಮಾಲೆ, ಕಿವಿಗೆ ಕರ್ಣಕುಂಡಲ, ಹಣೆಗೆ ವಿಭೂತಿ, ಗಂಧ, ಹೆಗಲಿಗೆ ಜೋಳಿಗೆ, ಹೆಬ್ಬೆರಳಿಗೆ ಸಿಕ್ಕಿಸಿದ ಒಂದೆರಡು ಗಗ್ಗರಗಳು ಇತ್ಯಾದಿ. ಅರ್ಜುನನೇ ಈ ವೇಷ ಹಾಕಿದ್ದನೆಂದೂ ತಾವು ಅವನ ಪರಂಪರೆಗೆ ಸೇರಿದವರೆಂದೂ ಜೋಗಿಗಳು ಅಭಿಮಾನದಿಂದ ಹೇಳುತ್ತಾರೆ. ಕುಂತಿಯ ಮನೆಯ ಮುಂದೆ ಈ ಜೋಗಿ ವೇಷದ ಅರ್ಜುನ ಮಹಾಭಾರತ ಪ್ರಕರಣಗಳನ್ನು ವರ್ಣಿಸಿದನಂತೆ. ಅವನ ಸುಂದರ ರೂಪು. ಇಂಪಾದ ದನಿ ಕೇಳಿ ಕುಂತಿಗೆ ಮಾತೃವಾತ್ಸಲ್ಯ ಉಕ್ಕಿ ಬಂದು ತನ್ನ ಮಗನ ನೆನಪು ಬಂದಿತಂತೆ. ಎಂದು ಹೇಳುವರು.
ಕಿನ್ನರಿ ಜೋಗಿಗಳ ವಾದ್ಯಗಳು
ಬದಲಾಯಿಸಿಕಿನ್ನರಿ ಜೋಗಿಗಳು ಕೈಯಲ್ಲಿ ಹಿಡಿಯುವ ಕಿನ್ನರಿ ಸೋರೆ ಬುರುಡೆಯಿಂದ ಮಾಡಿದ ಒಂದು ವಾದ್ಯ. ಮೂರು ಮೊಳದ ಉದ್ದದ ಬಿದಿರಿನ ಗಳುವಿನ ಒಂದು ಬದಿಯುದ್ದ್ದಕ್ಕೂ ಹತ್ತು ಅಥವಾ ಹನ್ನೆರಡು 'ಸಾರಿ'ಗಳನ್ನು ಒಂದರ ಪಕ್ಕದಲ್ಲೊಂದು ಇರುವಂತೆ ಗಟ್ಟಿಯಾದ ಚೆಕ್ಕೆಗಳನ್ನು ಜೇನುಮೇಣದಿಂದ ಜೋಡಿಸಲಾಗುವುದು. ಅದರ ಮೇಲೆ ಒಂದು ತಂತಿ ಹಾದು ಹೋಗುವುದು. ಸ್ವಲ್ಪ ಉದ್ದವಾದ ಕಬ್ಬಿಣದ ಮೊಳೆಯೊಂದರ ಮೇಲೆ ಇನ್ನೆರಡು ತಂತಿ ಇರುತ್ತವೆ. ಗಳುವಿನ ಇನ್ನೊಂದು ಬದಿಗೆ ಮೂರು ಸೋರೆ ಬುರುಡೆಗಳಿಗೆ 'ಉಸಲು'ಗಳನ್ನು ಮಾಡಿ ದಾರ ಅಥವಾ ತಂತಿಯಿಂದ ಕಟ್ಟಿ ಅದರ ಮೇಲೆ ಜೇನು ಮೇಣವನ್ನು ಮೆತ್ತಲಾಗುವುದು. ಮೂರು ಬುರುಡೆಗಳಲ್ಲಿ ಮಧ್ಯದ ಬುರುಡೆ ಮಾತ್ರ ಮೇಣಕ್ಕೆ ಅಂಟಿರುತ್ತದೆ. ಜೋಗಿಯು ಸಾರಿಗಳಿಗೆ ಹೊಂದಿಸಿದಂತಹ ತಂತಿಯನ್ನು ಮಿಡಿದು ಬರುವಂತಹ ನಾದಕ್ಕೆ ಶೃತಿಗೆ ಸರಿಯಾಗುವಂತೆ ಹಾಡನ್ನು ಹಾಡುತ್ತಾರೆ. ನಾದಕ್ಕೆ ಬಲಗೈ ಹೆಬ್ಬೆರಳಿಗೆ ಸಿಕ್ಕಿಸಿದ ಗಗ್ಗರಗಳಿಂದ ಸೋರೆ ಬುರುಡೆಯನ್ನು ಮೆಲ್ಲನೆ ಬಡಿದು ಗತ್ತು ಮೂಡಿಸುವರು.
ಕಿನ್ನರಿ ಜೋಗಿಗಳ ಪಂಗಡಗಳು
ಬದಲಾಯಿಸಿ೧. ಹಂಡೆ ಜೋಗಿ ೨. ಬಾಲ ಜೋಗಿ ೩. ಎಣ್ಣೆ ಜೋಗಿ
ಕಿನ್ನರಿ ಹಿಡಿದು ಹಾಡುವವರನ್ನು 'ಹರಕೆ ಜೋಗಿ'ಗಳೆಂದೂ ಕರೆಯುತ್ತಾರೆ. ಇವರನ್ನು 'ಅರ್ಜುನ ಜೋಗಿ', 'ಭೈರವ ಜೋಗಿ' ಎಂದು ಕರೆಯುವರು. ಪಾಂಡವರ ವಂಶದವರೆಂದು ಹೇಳಿಕೊಳ್ಳುವ ಈ ಜೋಗಿಗಳು ಹಾಡುವ ಹಾಡುಗಳಲ್ಲಿ ಅರ್ಜುನ ಜೋಗಿಯ ಹಾಡು ಪ್ರಸಿದ್ಧವಾದದ್ದು. ಜೊತೆಗೆ ಬಗಿನಿ ಹೂವು, ಅರುಣ ಕುಮಾರ, ಚೌಳಭಿಕ್ಷರಾಜ ಮುಂತಾದ ಕಥೆಗಳನ್ನು ಹಾಡುತ್ತಾರೆ. ಮಹಾಭಾರತದ ಹದಿಮೂರು ಪರ್ವಗಳನ್ನು ಹಾಡುವ ಜೋಗಿಗಳೂ ಇದ್ದಾರೆ. 'ಬಾಲಜ್ನಾನಿ'ಗಳು ಕಾಲಜ್ನಾನವನ್ನು ಹೇಳುತ್ತಾರೆ. ಜೋಗಿಗಳು ಅಲೆಮಾರಿಗಳ ಗುಂಪಿಗೆ ಸೇರಿದವರು. ಸಂಸಾರದ ಸಮೇತ ಊರಿಂದ ಊರಿಗೆ ಹೋಗುವ ಇವರು ಅಲ್ಲಲ್ಲಿ ಬಿಡಾರವನ್ನು ಹೂಡುವರು. ಮನೆ ಮನೆಯ ಮುಂದೆ ಹಾಡು ಹೇಳಿ ದವಸ ಧ್ಯಾನಗಳನ್ನು ಸಂಗ್ರಹಿಸುತ್ತಾರೆ. ದೊಡ್ಡವರ ಜೊತೆಗೆ ಸಣ್ಣ ಹುಡುಗರು ಸೇರಿಕೊಂಡು ರೂಢಿ ಮಾಡಿಕೊಳ್ಳುವರು. ಹಳ್ಳಿಗಳಲ್ಲಿ ಹಬ್ಬ, ಜಾತ್ರೆ, ವಿಶೇಷ ಸಂದರ್ಭದಲ್ಲಿ ಜೋಗಿಗಳನ್ನು ಆಹ್ವಾನಿಸಿ ಕಥೆಗಳನ್ನು ಹಾಡಿಸುವುದು ಕೆಲವು ಕಡೆ ರೂಢಿಯಲ್ಲಿರುವುದು.
ಉಲ್ಲೇಖಗಳು
ಬದಲಾಯಿಸಿ- ಕರ್ನಾಟಕ ಜನಪದ ಕಲೆಗಳು: ಸಂಪಾದಕ-ಗೊ.ರು.ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ೧೯೭೭.