ಕಾರ್ಮಿಕ ಸಂಘ ಚಳವಳಿ

ಕೈಗಾರಿಕಾಕ್ರಾಂತಿಯ ಇನ್ನೊಂದು ಪರಿಣಾಮವೆಂದರೆ ಕಾರ್ಮಿಕ ಸಂಘಟನೆಯ ಚಳವಳಿ. ಕ್ರಾಂತಿ ನಡೆದಾಗ ಕೂಲಿಗಾರರು ಹಳ್ಳಿಗಳಿಂದ ಪಟ್ಟಣಕ್ಕೆ ವಲಸೆ ಬಂದರು. ಅವರ ಬಳಿ ಮಾರಲು ತಮ್ಮ ಕುಶಲತೆ, ಶ್ರಮ ಇವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಹೀಗಾಗಿ ಬಂಡವಾಳಗಾರರು ಅವರನ್ನು ಶೋಷಿಸುವ ಸಾಧ್ಯತೆ ಉಂಟಾಯಿತು. 18ನೆಯ ಶತಮಾನದ ಆರಂಭದ ವೇಳೆಗೆ ಇಂಗ್ಲೆಂಡ್ ನ ಕೈಗಾರಿಕೆಯ ರಂಗ ಸಾಕಷ್ಟು ಬಂಡವಾಳಪ್ರಧಾನವಾಗಿ ಬೆಳೆದು ಕಾರ್ಮಿಕ ಹಾಗೂ ಮಾಲಿಕರ ನಡುವೆ ಸಾಕಷ್ಟು ಬಿರುಕನ್ನುಂಟುಮಾಡಿತ್ತು.[]

ಇತಿಹಾಸ

ಬದಲಾಯಿಸಿ

16ನೆಯ ಶತಮಾನದ ಕೊನೆಯ ಭಾಗದಲ್ಲಿ ವೃತ್ತಿಸಂಘಗಳು ಕ್ಷಯಿಸಿದ ಅನಂತರ ಕಾರ್ಮಿಕರೇ ಕೆಲವು ಸಂಘಗಳನ್ನು ರಚಿಸಿಕೊಂಡರು. ಆದರೆ ಸರ್ಕಾರದ ಮನೋಭಾವ ಇದಕ್ಕೆ ವಿರೋಧವಾಗಿತ್ತು. ಕೆಲವು ವೃತ್ತಿಗಳಿಗೆ ಗರಿಷ್ಠ ಕೂಲಿಯನ್ನು ಸರ್ಕಾರ ನಿಗದಿ ಮಾಡಿ, ಆ ವೃತ್ತಿಗಳಲ್ಲಿ ಸಂಘಗಳನ್ನು ನಿಷೇಧಿಸಿತು. 1720 ಮತ್ತು 1725ರ ಕಾಯಿದೆಗಳ ಮೂಲಕ ದರ್ಜಿಗಳಲ್ಲಿ, ನೇಕಾರರಲ್ಲಿ ಹೆಣಿಗೆ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಸಂಘಗಳನ್ನು ನಿಷೇಧಿಸಲಾಗಿತ್ತು.ಕೈಗಾರಿಕಾಕ್ರಾಂತಿಯೊಡನೆ ಕಾರ್ಮಿಕ ಸಂಘಗಳಿಗೆ ಹೊಸ ಚೇತನ ದೊರೆತಂತಾಯಿತು. 1790ರ ವೇಳೆಗೆ ಕಾರ್ಮಿಕ ಸಂಘಗಳ ಆವಶ್ಯಕತೆಯ ತೀವ್ರತೆಯನ್ನು ಕಾರ್ಮಿಕರು ಮನಗಂಡರು. ಫ್ರಾನ್ಸಿನಲ್ಲಿ ನಡೆದ ಕ್ರಾಂತಿ ಇಂಗ್ಲೆಂಡಿನ ಕಾರ್ಮಿಕರಿಗೆ ಉತ್ತೇಜಕವಾಯಿತು. ಕಾರ್ಮಿಕರು ಕೆಲವು ಸಂಘಗಳನ್ನು ರಚಿಸಿಕೊಂಡರು. ಆದರೆ 1793ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಯುದ್ಧ ಪ್ರಾರಂಭವಾದುದರಿಂದ 1797 ಮತ್ತು 1800ರ ಕಾಯಿದೆಗಳ ಮೂಲಕ, ಕೂಲಿಯ ಹೆಚ್ಚಳ, ಕೆಲಸ ಗಂಟೆಗಳಲ್ಲಿ ಇಳಿಕೆ, ಬೇಡಿಕೆಗಳ ಪುರೈಕೆಗಾಗಿ ಮುಷ್ಕರ-ಇವುಗಳಿಗಾಗಿ ರಚಿತವಾಗುವ ಸಂಘಗಳನ್ನು ನಿಷೇಧಿಸಲಾಯಿತು. ಉದ್ಯಮಪದ್ಧತಿಗಳಲ್ಲೂ ಸಂಘರಚನೆಯನ್ನು ನಿಷೇಧಿಸಲಾಯಿತು. ವೃತ್ತಿಸಂಘಗಳ ರಚನೆ ಪಾತಕವೆಂದು ತೀರ್ಮಾನಿಸಲಾಗಿದ್ದರೂ ಕಾರ್ಮಿಕರ ರಹಸ್ಯ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರಿಸಿದವು.[]

ನೆಪೋಲಿಯನ್ನನ ಯುದ್ಧ

ಬದಲಾಯಿಸಿ

1815ರಲ್ಲಿ ನೆಪೋಲಿಯನ್ನನ ಯುದ್ಧ ಮುಗಿದ ಅನಂತರ ಕಾರ್ಮಿಕರ ಪಾಡು ಇನ್ನೂ ಶೋಚನೀಯವಾಯಿತು. ಆರ್ಥಿಕ ಕುಸಿತ ಅವರ ಸ್ಥಿತಿಯನ್ನು ಮತ್ತೂ ಉಲ್ಬಣಗೊಳಿಸಿತು. ಕೂಲಿಯ ದರ ಕಡಿಮೆಯಾದುದಲ್ಲದೆ ನಿರುದ್ಯೋಗ ಉಲ್ಬಣಿಸಿತು. ಫ್ರಾನ್ಸಿಸ್ ಪ್ಲೇಸ್ ಎಂಬ ಆಚಾರ್ಯ ದರ್ಜಿ ಕಾರ್ಮಿಕರ ಸ್ಥಿತಿಯನ್ನು ಉತ್ತಮಪಡಿಸುವುದರಲ್ಲಿ ಮುಂದಾದ. ಆತ ರ್ಯಾಡಿಕಲ್ ಪಾರ್ಟಿಯ ಜೋಸೆಫ್ ಹ್ಯೂಮನ್ ಸಹಾಯದಿಂದ 1824ರಲ್ಲಿ ಸಂಘ ರಚನೆಯ ಕಾನೂನನ್ನು ತಿದ್ದುಪಡಿ ಮಾಡಿಸುವುದರಲ್ಲಿ ಯಶಸ್ವಿಯಾದ. ಆಗ ಮುಷ್ಕರವನ್ನು ಕಾಯಿದೆಬದ್ಧ ಮಾಡಲಾಯಿತು. ಪರಿಣಾಮವಾಗಿ 1824ರಲ್ಲಿ ಅನೇಕ ಮುಷ್ಕರಗಳಾದವು. ಆದ್ದರಿಂದ 1825ರಲ್ಲಿ 1824ರ ಕಾನೂನಿಗೆ ಒಂದು ತಿದ್ದುಪಡಿ ಜಾರಿಗೆ ಬಂತು. ಅದು ಮುಷ್ಕರ ಹಾಗೂ ರಾಷ್ಟ್ರೀಯ ಕಾರ್ಮಿಕ ಸಂಘವನ್ನು ಸಂಘಟಿಸುವ ಯತ್ನ ನಡೆಯಿತು. ಅದರ ಪರಿಣಾಮವಾಗಿ 1834ರಲ್ಲಿ ಬೃಹತ್ ರಾಷ್ಟ್ರೀಯ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯ ಸದಸ್ಯರ ಸಂಖ್ಯೆ ಒಂದು ಕಾಲಕ್ಕೆ ಐದು ಲಕ್ಷದಷ್ಟಿತ್ತೆಂದು ಹೇಳಲಾಗಿದೆ. ರಾಬರ್ಟ್ ಓವೆನ್ ಇದರ ಸ್ಥಾಪಕ. ಆದರೆ ಇದು ಬಹಳ ಕಾಲ ಬಾಳಲಿಲ್ಲ. ಕಾರ್ಮಿಕರು ಮುಖ್ಯ ಉದ್ಯಮಗಳನ್ನು ತಾವೇ ವಶಪಡಿಸಿಕೊಳ್ಳಬೇಕೆಂಬುದು ಇವನ ವಾದವಾಗಿದ್ದುದೇ ಕಾರಣ. ಈ ಸಂಸ್ಥೆಗೆ ಇಂಥ ಕೆಲಸ ಸಾಧ್ಯವಾಗಲಿಲ್ಲ. ಇದಕ್ಕೆ ಅಗತ್ಯವಿದ್ದ ನಿಧಿ ಸಹ ಸಂಸ್ಥೆಯ ಬಳಿ ಇರಲಿಲ್ಲ.1850ರ ವೇಳೆಗೆ ಮತ್ತೆ ಕಾರ್ಮಿಕ ಸಂಘಗಳು ತಲೆ ಎತ್ತಲಾರಂಭಿಸಿದುವು. ಈಗ ಅವು ತಮ್ಮ ಕ್ರಾಂತಿಕಾರಕ ಭಾವನೆಗಳನ್ನು ಬಿಟ್ಟು ಕಾರ್ಮಿಕರ ಸ್ಥಿತಿಗತಿಗಳನ್ನು ಸರಿಪಡಿಸುವ ಯೋಚನೆಯನ್ನಿಟ್ಟುಕೊಳ್ಳಲಾರಂಭಿಸಿದವು.

ರಾಷ್ಟ್ರೀಯ ಕಾರ್ಮಿಕ ಸಂಘ

ಬದಲಾಯಿಸಿ

ರಾಷ್ಟ್ರೀಯ ಕಾರ್ಮಿಕ ಸಂಘಗಳನ್ನು ಸಂಘಟಿಸುವ ಯೋಜನೆಯನ್ನು ಕೈಬಿಡಲಾಯಿತು. ಬದಲಾಗಿ ಪ್ರತಿಯೊಂದು ವೃತ್ತಿಯಲ್ಲೂ ನಿರತರಾಗಿದ್ದ ಕಾರ್ಮಿಕರ ಸಂಘಗಳ ಸ್ಥಾಪನೆಗೆ ಯತ್ನ ನಡೆಸಲಾಯಿತು. ಎಂಜಿನಿಯರಿಂಗ್ ಉದ್ಯಮದಲ್ಲಿ ತೊಡಗಿದ್ದ ಕಾರ್ಮಿಕರು 1851ರಲ್ಲಿ ಎಂಜಿನಿಯರುಗಳ ಸಂಯೋಜಿತ ಸಂಸ್ಥೆಯೊಂದನ್ನು ಸ್ಥಾಪಿಸಿ ಇಂಥ ಸಂಘಗಳ ರಚನೆಗೆ ಮುಂದಾಳುಗಳಾದರು. ಇದು ರಾಷ್ಟ್ರದ ಎಲ್ಲ ಕುಶಲ ಶಿಲ್ಪ ಕೆಲಸಗಾರರನ್ನೂ ಸದಸ್ಯರನ್ನಾಗಿ ಪಡೆಯುವ ಉದ್ದೇಶವಿಟ್ಟುಕೊಂಡಿತ್ತು. ಇದಕ್ಕೆ ಅಪಾರ ನಿಧಿ ಸಂಗ್ರಹವಾಗಿ ಪ್ರೋತ್ಸಾಹ ದೊರೆಯಿತು. ಕಾರ್ಮಿಕರ ನಿರುದ್ಯೋಗ ಕಾಲದಲ್ಲಿ ಪರಿಹಾರ, ವೈದ್ಯಸೌಲಭ್ಯ, ನಿವೃತ್ತಿವೇತನ, ಮುಷ್ಕರಸಂದರ್ಭದಲ್ಲಿ ಧನ ಸಹಾಯ ಇವುಗಳಿಗೆ ಈ ನಿಧಿಯನ್ನು ಉಪಯೋಗಿಸಿಕೊಳ್ಳಲಾಯಿತು. ಎಲ್ಲ ವೃತ್ತಿಗಳಲ್ಲೂ ಇಂಥ ಸಂಘಗಳು ಹುಟ್ಟಿಕೊಂಡವು. 1869ರ ಕಾರ್ಮಿಕಸಂಘದ ಕಾಯಿದೆಯ ಪ್ರಕಾರ ಕಾರ್ಮಿಕ ಸಂಘಗಳ ನಿಧಿಗೆ ರಕ್ಷಣೆ ಕೊಡಲಾಯಿತು. 1871ರ ಕಾರ್ಮಿಕ ಸಂಘದ ಕಾಯಿದೆ, ಕಾರ್ಮಿಕ ಸಂಘಗಳಿಗೆ ಹೊಸ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿತು. ಕಾನೂನಿನ ದೃಷ್ಟಿಯಲ್ಲಿ ಈ ಕಾಯಿದೆಗಳಿಂದಾಗಿ ಕಾರ್ಮಿಕ ಸಂಘಗಳಿಗೆ ಒಂದು ಗೌರವದ ಸ್ಥಾನ ದೊರೆಯಿತು. 1868ರಲ್ಲಿ ಕಾರ್ಮಿಕ ಸಂಘಗಳ ಪರಿಷತ್ತು ಸ್ಥಾಪಿತವಾಯಿತು.19ನೆಯ ಶತಮಾನದ ಕೊನೆಯ ವೇಳೆಗೆ ಕಾರ್ಮಿಕ ಸಂಘ ಬಹಳ ವೇಗವಾಗಿ ಎಲ್ಲ ದಿಕ್ಕುಗಳಿಗೂ ಹಬ್ಬಲು ಪ್ರಾರಂಭಿಸಿತು. 1880ಕ್ಕಿಂತ ಮುಂಚೆ ಕಾರ್ಮಿಕ ಸಂಘಗಳು ಕುಶಲಕಾರ್ಮಿಕರಿಗೆ ಮಾತ್ರ ಮೀಸಲಾಗಿರುತ್ತಿತ್ತು. ಆದರೆ ಅನಂತರ ಕುಶಲಕಾರ್ಮಿಕರೆಲ್ಲರೂ ಕಾರ್ಮಿಕ ಸಂಘಗಳಲ್ಲಿ ಪ್ರವೇಶ ದೊರಕಲಾರಂಭವಾಯಿತು. 1889ರ ಹಡಗುಕೂಲಿಗಳ ಮುಷ್ಕರದ ವಿಜಯ ಕುಶಲರಲ್ಲದ ಕಾರ್ಮಿಕರ ಸಂಘಗಳಿಗೆ ಆದರ್ಶಪ್ರಾಯವಾಗಿ ಅನೇಕ ಸಂಘಗಳು ಹುಟ್ಟಿಕೊಂಡವು. ಕೃಷಿರಂಗದ ಕಾರ್ಮಿಕರು ಕೂಡ ಕಾರ್ಮಿಕ ಸಂಘ ಆರಂಭಿಸಿದರು. ಆದರೆ ಹಣವಂತರ ವಿರೋಧ ಇದಕ್ಕೆ ಮೊದಲಿಂದಲೂ ಇತ್ತು.

ಸಮಾಜವಾದದ ಪ್ರಭಾವ

ಬದಲಾಯಿಸಿ

ಈ ಅವಧಿಯ ಮುಖ್ಯವಾದ ಬೆಳವಣಿಗೆಯೆಂದರೆ ಕಾರ್ಮಿಕರ ಮೇಲೆ ಸಮಾಜವಾದದ ಪ್ರಭಾವ. ಇದರಿಂದಾಗಿ ಕಾರ್ಮಿಕಸಂಘಗಳ ಗುರಿಗಳಲ್ಲೂ ಸ್ವಲ್ಪ ಬದಲಾವಣೆಯಾಯಿತು. 1893ರಲ್ಲಿ ಸಮಾಜವಾದದ ಗುರಿಗಳನ್ನುಳ್ಳ ಕಾರ್ಯಕ್ರಮಗಳನ್ನು ಕಾರ್ಮಿಕರಲ್ಲಿ ಪ್ರತಿನಿಧಿಸುವ ಲೇಬರ್ ಪಕ್ಷ ಸ್ಥಾಪಿತವಾಯಿತು. 1898ರಲ್ಲಿ ಕಾರ್ಮಿಕ ಸಂಘಗಳ ಪರಿಷತ್ತು (ಟ್ರೇಡ್ ಯೂನಿಯನ್ ಕಾಂಗ್ರೆಸ್) ಅದಕ್ಕೆ ಮನ್ನಣೆ ನೀಡಿತು.20ನೆಯ ಶತಮಾನದ ಪ್ರಾರಂಭದಲ್ಲೇ ಕಾರ್ಮಿಕ ಸಂಘಗಳು ಅನೇಕ ಕಠಿಣ ದಿನಗಳನ್ನು ಕಾಣಬೇಕಾಯಿತು. ಲ್ಯಾನ್ಸ್ ವಾಲ್ ರೈಲ್ವೆ ಕಾರ್ಮಿಕರು ಮುಷ್ಕರ ಹೂಡಿದಾಗ ಕಂಪನಿ ಅದರ ವಿರುದ್ಧ ಮೊಕದ್ದಮೆ ಹೂಡಿ ಕಾರ್ಮಿಕ ಸಂಘದಿಂದ ನಷ್ಟವನ್ನು ವಸೂಲಿ ಮಾಡಿಕೊಂಡಿತು. ಇದರಿಂದ ಕಾರ್ಮಿಕ ಸಂಘದ ನಿಧಿಗೆ ಬಹಳ ನಷ್ಟವಾಯಿತು. 1908ರಲ್ಲಿ ಆಸ್ ಬಾರ್ನ್ ಎಂಬ ವ್ಯಕ್ತಿ ತನ್ನ ಸಂಘ ಚುನಾವಣೆಯಲ್ಲಿ ಹಣ ತೊಡಗಿಸುವುದರ ವಿರುದ್ಧ ಮೊಕದ್ದಮೆ ಹೂಡಿದ. ಆತ ಮೊಕದ್ದಮೆಯಲ್ಲಿ ವಿಜಯಿಯೂ ಆದ. 1913ರಲ್ಲಿ ಜಾರಿಗೆ ಬಂದ ಕಾರ್ಮಿಕ ಸಂಘಗಳ ಕಾಯಿದೆ, ಕಾರ್ಮಿಕ ಸಂಘಗಳು ತಮ್ಮ ರಾಜಕೀಯ ಚಟುವಟಿಕೆಗಳಿಗೆ ಪ್ರತ್ಯೇಕ ಹಣಸಂಗ್ರಹ ಮಾಡಬಹುದೆಂಬ ನಿಯಮಮಾಡಿತು.

ಮೊದಲನೆಯ ಮಹಾಯುದ್ಧ

ಬದಲಾಯಿಸಿ

ಮೊದಲನೆಯ ಮಹಾಯುದ್ಧ ಪ್ರಾರಂಭವಾಗುವ ವೇಳೆಗೆ ಕಾರ್ಮಿಕ ಸಂಘಗಳು ಇಂಗ್ಲೆಂಡಿನಲ್ಲಿ ಪ್ರಬಲ ಸ್ಥಿತಿಯಲ್ಲಿದ್ದುವು. 1920ರಲ್ಲಿ ಅವುಗಳ ಸದಸ್ಯರ ಸಂಖ್ಯೆ 40 ಲಕ್ಷದಿಂದ 80 ಲಕ್ಷಕ್ಕೇರಿತು. 1922ರ ಚುನಾವಣೆಯಲ್ಲಿ ಕಾರ್ಮಿಕಪಕ್ಷ ಕಾಮನ್ಸ್ ಸಭೆಯಲ್ಲಿ 122 ಸ್ಥಾನಗಳನ್ನು ದೊರಕಿಸಿಕೊಂಡಿತು. ಸಂಯೋಜಿತ ಕಾರ್ಮಿಕ ಸಂಘಗಳು ಹೆಚ್ಚು ಅಸ್ತಿತ್ವಕ್ಕೆ ಬರಲಾರಂಭಿಸಿದುವು. ಪ್ರತಿಯೊಂದು ರಂಗದಲ್ಲೂ ಬೃಹದಾಕಾರದ ಕಾರ್ಮಿಕರ ಸಂಘಗಳು ಬೆಳೆದುಕೊಂಡುವು. ರೈಲ್ವೆ ಸಾರಿಗೆ, ಮುದ್ರಣ ಇವುಗಳಲ್ಲಿ ಬೃಹದಾಕಾರದ ಕಾರ್ಮಿಕ ಸಂಘಗಳು ಪ್ರಾರಂಭವಾದುವು. ಇಡೀ ಕೈಗಾರಿಕಾ ರಂಗದಲ್ಲಿ ಕಾರ್ಮಿಕರ ಸಹಕಾರವಿರಬೇಕೆಂದು ಇವುಗಳ ಉದ್ದೇಶವಿತ್ತು. ಮುಷ್ಕರಗಳಲ್ಲಿ ಎಲ್ಲ ಕಾರ್ಮಿಕ ಸಂಘಗಳೂ ಸಹಕರಿಸಿ ಉದ್ದೇಶಗಳನ್ನು ಪುರೈಸಿಕೊಳ್ಳುವ ವಿಚಾರ ಪ್ರಧಾನವಾಯಿತು. 1920ರಲ್ಲಿ ಕಲ್ಲಿದ್ದಲ ಕೈಗಾರಿಕೆಯಲ್ಲಿ ನಡೆದ ಮುಷ್ಕರಕ್ಕೆ ಎಲ್ಲ ಕಾರ್ಮಿಕ ಸಂಘಗಳೂ ಸೇರಿ ಸಹಾನುಭೂತಿ ಮುಷ್ಕರ ಹೂಡಿದವು. ಆದರೆ ಈ ಮುಷ್ಕರ ಯಶಸ್ಸು ಸಾಧಿಸಲಿಲ್ಲ. ಸರ್ಕಾರ 1922ರಲ್ಲಿ ಕಾರ್ಮಿಕ ವಿಚಾರ ಹಾಗೂ ಕಾರ್ಮಿಕ ಸಂಘಗಳ ಕಾಯಿದೆಯನ್ನು ಜಾರಿಗೆ ತಂದು ಎಲ್ಲ ಕಾರ್ಮಿಕ ಸಂಘಗಳೂ ಸೇರಿ ಮಾಡುವ ಮುಷ್ಕರವನ್ನು ಕಾನೂನುಬಾಹಿರವೆಂದು ಘೋಷಿಸಿತು. ಈ ಕಾಯಿದೆಯಿಂದ ಕಾರ್ಮಿಕ ಸಂಘದ ಸದಸ್ಯತ್ವ ಬಹಳ ಕಡಿಮೆಯಾಯಿತು. 1930ರಲ್ಲಿ ಸದಸ್ಯರ ಸಂಖ್ಯೆ 37.5 ಲಕ್ಷಕ್ಕಿಳಿಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕಾರ್ಮಿಕ ಸಂಘಗಳು ದೇಶರಕ್ಷಣೆಯ ವಿಷಯವಾಗಿ ಹೆಚ್ಚು ಜವಾಬ್ದಾರಿ ವಹಿಸಿ ಹೆಚ್ಚಿನ ಉತ್ಪಾದನೆಗೆ ಸಹಾಯಕವಾದವು. ಯುದ್ಧಾನಂತರ ಕಾರ್ಮಿಕ ಪಕ್ಷ ಆಡಳಿತ ಪಕ್ಷವಾಯಿತು. ಈ ಅವಧಿಯಲ್ಲಿ ಕಾರ್ಮಿಕ ಸಂಘಗಳ ಚಟುವಟಿಕೆ ಹೆಚ್ಚಿ ಅವುಗಳ ಸದಸ್ಯರ ಸಂಖ್ಯೆಯೂ ಬೆಳೆಯಿತು. 1939ರಲ್ಲಿ 1,019 ಕಾರ್ಮಿಕ ಸಂಘಗಳಿದ್ದು ಅವುಗಳ ಸದಸ್ಯ ಸಂಖ್ಯೆ 63 ಲಕ್ಷದಷ್ಟಿತ್ತು. ಕಾರ್ಮಿಕ ಸಂಘಗಳು ಪರಸ್ಪರ ವಿಲಯನವಾಗುತ್ತ ನಡೆದು 1959ರ ವೇಳೆಗೆ ದೇಶದಲ್ಲಿ 651 ಕಾರ್ಮಿಕ ಸಂಘಗಳಿದ್ದು ಅವುಗಳ ಸದಸ್ಯ ಸಂಖ್ಯೆ 96 ಲಕ್ಷದಷ್ಟಿತ್ತು. ಆದರೆ ಮಹಾಯುದ್ಧಾನಂತರದ ಅಹಿತಕರ ವಿಷಯವೆಂದರೆ ಕಾರ್ಮಿಕ ಹಾಗೂ ಉದ್ಯಮಪತಿಗಳ ನಡುವೆ ಸಾಮರಸ್ಯ ಕಡಿಮೆಯಾಗಿ ಕಾರ್ಮಿಕವಿವಾದಗಳು ಹೆಚ್ಚಿದುವು. 1957ರಲ್ಲಿ ಸುಮಾರು 2,855 ವಿವಾದಗಳಿದ್ದು 84 ಲಕ್ಷ ಕೆಲಸದ ದಿನಗಳು ನಷ್ಟವಾದುವೆಂದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂಬುದು ಅರ್ಥವಾಗುತ್ತದೆ. ಯುದ್ಧಾನಂತರ ಮತ್ತೊಂದು ಬೆಳವಣಿಗೆಯೆಂದರೆ ಕೈಗಾರಿಕೆಯಲ್ಲೇ ಅಲ್ಲದೆ ಇತರ ವರ್ಗಗಳಲ್ಲೂ ಕಾರ್ಮಿಕ ಸಂಘಗಳು ಹಬ್ಬಿದ್ದು. ಕೃಷಿರಂಗದಲ್ಲಿ ಕಾರ್ಮಿಕ ಸಂಘಗಳು ಹೆಚ್ಚಿದವು.

ರಾಜಕೀಯ ಹಾಗೂ ಆರ್ಥಿಕ ವಿಚಾರ

ಬದಲಾಯಿಸಿ

ಕಾರ್ಮಿಕ ಸಂಘಗಳು ಈಗ ದೇಶದ ರಾಜಕೀಯ ಹಾಗೂ ಆರ್ಥಿಕ ವಿಚಾರಗಳಲ್ಲಿ ಸಕ್ರಿಯವಾದ ಪಾತ್ರ ವಹಿಸುತ್ತಿವೆ. ಬ್ರಿಟನ್ನಿನ ಕಾರ್ಮಿಕ ಸಂಘದ ಚಟುವಟಿಕೆಗಳು ಕಾರ್ಮಿಕ ಸಂಘ ಕಾಂಗ್ರೆಸ್ಸಿನ ನಿರ್ದೇಶಕ್ಕನುಗುಣವಾಗಿ ನಡೆಯುತ್ತವೆ. ಪ್ರತಿ ಸೆಪ್ಟಂಬರಿನಲ್ಲಿ ನಡೆಯುವ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ ಅಧಿವೇಶನದ ಪ್ರಣಾಳಿಕೆಗಳು ಕಾರ್ಮಿಕಪಕ್ಷಕ್ಕೆ ಹೆಚ್ಚು ಕಡಿಮೆ ಆಜ್ಞೆಗಳಿದ್ದಂತೆ. ಕಾರ್ಮಿಕಪಕ್ಷ ಈ ಸಂಘಗಳ ಸದಸ್ಯರ ಬೆಂಬಲ ಪಡೆದುಕೊಂಡು ರಾಜಕೀಯವಾಗಿ ಪ್ರಬಲವಾಗಿದೆ. ಕಾರ್ಮಿಕ ಸಂಘಗಳು ರಾಜಕೀಯ ಹಾಗೂ ಆರ್ಥಿಕ ರಂಗದಲ್ಲಿ ಈಗ ಪ್ರಧಾನ ಪಾತ್ರವಹಿಸುತ್ತಿವೆ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-10-08. Retrieved 2016-10-31.
  2. http://schoolserver.xsce.org:3000/wikisource_kn_all_2016-05/A/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6_%E0%B2%87%E0%B2%82%E0%B2%97%E0%B3%8D%E0%B2%B2%E0%B3%86%E0%B2%82%E0%B2%A1%E0%B2%BF%E0%B2%A8_%E0%B2%86%E0%B2%B0%E0%B3%8D%E0%B2%A5%E0%B2%BF%E0%B2%95_%E0%B2%AC%E0%B3%86%E0%B2%B3%E0%B2%B5%E0%B2%A3%E0%B2%BF%E0%B2%97%E0%B3%86.html


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: