ಕಾರಣರು
ಕಾರಣರು ಅಂದರೆ ಕಾರಣ ಪುರುಷರು; ಒಂದು ವಂಶ ಅಥವಾ ಮನೆತನದ ಮೂಲಪುರುಷರು ಎಂದರ್ಥ. ಬೇರೆ ಯಾವದೇ ದೇವರಿಗಿಂತ ಮುಖ್ಯವಾಗಿ ಕೊಡವರು ತಮ್ಮ ಕಾರಣರನ್ನು ಪೂಜಿಸುತ್ತಾರೆ. ಕೊಡಗಿನಲ್ಲಿ ಕೊಡವರ ಪ್ರತಿ ಮನೆತನಕ್ಕೂ ಹಿರಿಯರು ಕಟ್ಟಿಸಿದ ಐನ್ ಮನೆ ಇದೆ. ಇಲ್ಲಿ ಮೀದಿಕೋಂಬರೆ ಅಥವಾ ಕನ್ನಿಕೋಂಬರೆ ಎಂದು ಕರೆಯಲ್ಪಡುವ ದೇವರ ಕೋಣೆಯಿರುತ್ತದೆ.ಇದರೊಳಗಿನ ಪೂರ್ವಾಭಿಮುಖವಾಗಿರುವ ಗೋಡೆಯ ಎದುರು ಒಂದು ತೂಗುದೀಪವಿರುತ್ತದೆ. ಇದಕ್ಕೆ ತೂಕ್೦ಬೊಳ್‌ಚ ಎನ್ನುವರು. ಇದನ್ನು ಪ್ರತಿದಿನ ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ಕಳೆದ ಬಳಿಕ ಹಚ್ಚಿ, ತಮ್ಮ ಮನೆತನದ ಕಾರಣ ಪುರುಷರಿಗೆ ಪ್ರಾರ್ಥನೆಯನ್ನು ಸಲ್ಲಿಸುವರು. ಗೋಡೆಯ ಮೇಲ್ಭಾಗದಲ್ಲಿ ಒಂದು ಸಣ್ಣ ಗೂಡಿನಲ್ಲಿ ಬೆಳ್ಳಿಯ ಒಂದು ಸಣ್ಣ ಬಟ್ಟಲು ಮತ್ತು ಬೆಳ್ಳಿಯ ಒಂದು ಸಣ್ಣ ಗಿಂಡಿಯಿರುತ್ತದೆ. ನಿತ್ಯವೂ ರಾತ್ರಿಯೂಟದ ಮೊದಲು ಅಂದಿನ ಅಡುಗೆಯನ್ನು ಈ ಬೆಳ್ಳಿಯ ಬಟ್ಟಲಲ್ಲಿ ಮೀದಿಯಿ(ನೈವೇದ್ಯ)ವಿಡುತ್ತಾರೆ. ಗಿಂಡಿಯಲ್ಲಿ ಹಾಲು, ಇಲ್ಲವೇ ನೀರಿಡುತ್ತಾರೆ. ವಿಶೇಷ ಔತಣವನ್ನು ತಯಾರಿಸಿದಾಗಲೂ ನೈವೇದ್ಯವಿಡುತ್ತಾರೆ. ಗಿಂಡಿಯಲ್ಲಿ ಮದ್ಯವನ್ನಿಡುವದೂ ಇದೆ. ಹೆಣ್ಣುಮಕ್ಕಳು ತಮ್ಮ ತವರು ಮನೆಗೆ ಬಂದಾಗ ಮೀದಿಯಿಡುತ್ತಾರೆ. ತಮ್ಮ ಮನೋಭಿಲಾಷೆಯನ್ನು ನಡೆಸಿಕೊಡಲು ಕಾರಣರಿಗೆ ಮೀದಿಯಿಡುವದಾಗಿ ಹರಕೆಹೊರುವದೂ ಸಾಮಾನ್ಯ.
ಹಲವು ಮನೆತನಗಳಿಗೆ ಮನೆಯ ಮುಂಭಾಗದಲ್ಲಿ ಕಾರಣರಿಗೆ ಪ್ರತ್ಯೇಕವಾದ ಸಣ್ಣಗುಡಿಯೊಂದನ್ನು ಪೂರ್ವಾಭಿಮುಖವಾಗಿ ಕಟ್ಟಿರುತ್ತಾರೆ. ಇದಕ್ಕೆ ಕೈಮಡ (ಕೈಮಠ)ವೆನ್ನುತ್ತಾರೆ. ಇವರು ಇಲ್ಲಿ ಮೀದಿಯಿಡುತ್ತಾರೆ. ಕೆಲವೆಡೆ ವರ್ಷಕ್ಕೊಮ್ಮೆ, ಇಲ್ಲವೇ ನಿಯತಕಾಲಕ್ಕೊಮ್ಮೆ, ಕಾರಣತೆರೆ ಕಟ್ಟುತ್ತಾರೆ. ಇದು ಕಾರಣಪುರುಷರ ಹೆಸರಿನಲ್ಲಿ ಆ ಮನೆತನದವರು ಆಚರಿಸುವ ಉತ್ಸವ. ಕಾರಣರು ಆ ಮನೆತನದ ಗಂಡಸೊಬ್ಬನ ಮೇಲೆ ಆವೇಶ ಮಾಡುವದೂ ಉಂಟು.
ಪ್ರತಿ ಮನೆತನದಲ್ಲೂ ವರ್ಷಕ್ಕೊಮ್ಮೆ ಕಾರಣಂಗ್ ಕೊಡ್‌ಪ ವ್ರತಾಚರಣೆಯಿದೆ. ಇದು ಐನ್ ಮನೆಯಲ್ಲಿ ನಡೆಯುವ ಸಾಮೂಹಿಕ ಶ್ರಾದ್ಧ ಕ್ರಿಯೆ. ಮನೆತನದ ಕಾರಣರಿಗೇ ಅಲ್ಲದೆ, ಗತಿಸಿದ ಎಲ್ಲರಿಗೂ ಎಡೆಯಿಡುವ ಪದ್ಧತಿ. ಇದಕ್ಕೆ ಆ ಮನೆತನದಿಂದ ಮದುವೆಯಾಗಿ ಹೋದ ಹೆಣ್ಣುಮಕ್ಕಳೆಲ್ಲರೂ ಬರುವರು. ಎಡೆಯಿಡಲು ಬೇಕಾದ ಅಡುಗೆಯ ಕೆಲಸವೆಲ್ಲ ಇವರದು. ಸಂಜೆಯ ಹೊತ್ತು ಇಟ್ಟ ಎಲ್ಲಾ ಎಡೆಗಳನ್ನು ಶ್ಮಶಾನಕ್ಕೆ ಒಯ್ದಿಡುತ್ತಾರೆ.