ಕಾಮಳ್ಳಿ
ಪಕ್ಷಿವರ್ಗದ ಸ್ಟರ್ನಿಡೀ ಕುಟುಂಬಕ್ಕೆ ಸೇರಿದ ಸುಂದರವಾದ ಹಕ್ಕಿ. ಇದರ ವ್ಶೆಜ್ಞಾನಿಕ ನಾಮ ಗ್ರಾಕ್ಯುಲ ರಿಲಿಜಿಯೋಸ (ಗ್ರ್ರಾಕಲ್ ಅಥವಾ ಹಿಲ್ ಮೈನ). ಇದರ ದೇಹದ ಬಣ್ಣ ಮಿನುಗುವ ಅಚ್ಚಕಪ್ಪು. ರೆಕ್ಕೆಗಳ ಮೇಲೆ ಎದ್ದುಕಾಣುವ ಬಿಳಿಯ ಮಚ್ಚೆಗಳಿವೆ. ಕೊಕ್ಕು ಮತ್ತು ಕಾಲುಗಳು ಹಳದಿ ಬಣ್ಣದವು. ತಲೆಯ ಮೇಲೆ ಕಿತ್ತಳೆ-ಹಳದಿ ಬಣ್ಣದ ಬೆತ್ತಲೆಯಾದ ಮಾಂಸದ ಭಾಗವಿದೆ (ವ್ಯಾಟಲ್). ಗಂಡು ಹೆಣ್ಣು ಹಕ್ಕಿಗಳೆರಡೂ ಒಂದೇ ರೀತಿ ಇವೆ. ಸಾಮಾನ್ಯವಾಗಿ ನಿತ್ಯ ಹರಿದ್ವರ್ಣ ಕಾಡುಗಳು ಮತ್ತು ಬೆಟ್ಟಗಳಲ್ಲಿ ವಾಸಿಸುತ್ತವೆ. ೧೦೦೦ ದಿಂದ ೪೦೦೦ ಅಡಿ ಎತ್ತರದ ಗುಡ್ಡಗಾಡುಗಳಲ್ಲಿ ಇವುಗಳ ವ್ಯಾಪ್ತಿ ಹೆಚ್ಚು.
ಆಹಾರ, ಜೀವನ ವಿಧಾನ
ಬದಲಾಯಿಸಿಕಾಮಳ್ಳಿಗಳು ವೃಕ್ಷವಾಸಿಗಳು. ಸಾಧಾರಣವಾಗಿ ಗಂಡು ಹೆಣ್ಣು ಹಕ್ಕಿಗಳು ಜೊತೆಯಾಗಿಯೊ ಇಲ್ಲವೆ ಸಣ್ಣಸಣ್ಣ ಗುಂಪುಗಳಲ್ಲಿಯೂ ಇರುತ್ತವೆ. ಇವುಗಳ ಆಹಾರ ಅತ್ತಿ, ಅಂಜೂರ ಮುಂತಾದ ಹಣ್ಣುಗಳು ಮತ್ತು ಹೂವಿನ ಮಕರಂದ. ಬಲು ಗಲಾಟೆ ಸ್ವಭಾವದವಾದ ಇವು ಕೀರಲು ಧ್ವನಿಯಿಂದ ಯಾವಾಗಲೂ ಕೂಗುತ್ತಿರುತ್ತವೆ. ಬಹಳ ಚೆನ್ನಾಗಿ ಇತರ ಹಕ್ಕಿಗಳ ಕೂಗನ್ನು ಇವು ಅನುಕರಿಸಬಲ್ಲುವು. ಅಲ್ಲದೆ ಇವಕ್ಕೆ ಗಿಳಿಗಳಂತೆ ಮಾತನಾಡುವುದನ್ನೂ ಕಲಿಸಬಹುದು. ಇದರಿಂದ ಪಂಜರದ ಹಕ್ಕಿಗಳಾಗಿ ಇವನ್ನು ಸಾಕುವುದೂ ಉಂಟು.
ಮಾರ್ಚ್-ಅಕ್ಟೋಬರ್ ತಿಂಗಳುಗಳ ಅವಧಿಯಲ್ಲಿ ಇವು ಗೂಡು ಕಟ್ಟುತ್ತವೆ. ಎತ್ತರವಾದ ಮರಗಳ ಪೊಟರೆಗಳಲ್ಲಿ ಹುಲ್ಲು, ಎಲೆ, ಗರಿಗಳನ್ನು ಜೋಡಿಸಿ ಗೂಡು ಕಟ್ಟುವುದು ವಾಡಿಕೆ. ಮೊಟ್ಟೆಗಳ ಸಂಖ್ಯೆ ೨-೩; ಬಣ್ಣ ಗಾಢನೀಲಿ. ಅಲ್ಲಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣದ ಅಥವಾ ಚಾಕೊಲೇಟ್ ಬಣ್ಣದ ಮಚ್ಚೆಗಳಿವೆ.
ಕಾಮಳ್ಳಿಗಳಲ್ಲಿ ಸುಮಾರು 5 ಬಣಗಳಿವೆ: ಹಿಮಾಲಯದ ಬುಡದ ಬೆಟ್ಟಗಳ ಶ್ರೇಣಿಯಲ್ಲಿ ಆಲ್ಮೋರದಿಂದ ಅಸ್ಸಾಂನವರೆಗೆ ಒಂದು ಬಣ ವ್ಯಾಪಿಸಿದೆ. ಇನ್ನೊಂದು ಒರಿಸ್ಸಾ, ಮಧ್ಯಪ್ರದೇಶದ ಆಗ್ನೇಯ ಭಾಗದಲ್ಲಿ ಕಾಣಬರುತ್ತದೆ. ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಬಣ ಕಾಣಸಿಗುತ್ತದೆ. ಅಂಡಮಾನ್ ದ್ವೀಪಗಳು ಶ್ರೀಲಂಕಾ ಮತ್ತು ದಕ್ಷಿಣ ಬರ್ಮ(ಇಂದಿನ ಮಾಯನ್ಮಾರ್)ಗಳಲ್ಲಿ ಒಂದು ಬಗೆಯ ಕಾಮಳ್ಳಿ ವಾಸಿಸುತ್ತದೆ.
ಉಲ್ಲೇಖ
ಬದಲಾಯಿಸಿButterfield, Kathy. http://www.aacc.ca/mynahs.html Archived 2015-07-12 ವೇಬ್ಯಾಕ್ ಮೆಷಿನ್ ನಲ್ಲಿ.