ಕಾಮಕಸ್ತೂರಿಯು  ಲೇಬಿಯೇಟೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಶಾಸ್ತ್ರೀಯ ನಾಮ ಆಸಿಮಮ್ ಬೇಸಿಲಿಕಮ್. ಇಂಗ್ಲಿಷಿನ ಸಾಮಾನ್ಯ ಬಳಕೆಯ ಹೆಸರು ಸ್ವೀಟ್ ಬೇಸಿಲ್.

ಕಾಮಕಸ್ತೂರಿ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
O. basilicum
Binomial name
Ocimum basilicum

ವಿವರಣೆ

ಬದಲಾಯಿಸಿ

ತುಳಸಿ ಗಿಡದ ಹತ್ತಿರ ಸಂಬಂಧಿಯಾದ ಇದೂ ಪರಿಮಳಯುಕ್ತವಾಗಿದೆ. ಮಧ್ಯ ಏಷ್ಯ ಮತ್ತು ವಾಯವ್ಯ ಭಾರತ ಇದರ ಮೂಲ ಸ್ಥಾನ. ಈಗ ಭಾರತದಾದ್ಯಂತ ಬೆಳೆಯುತ್ತದೆ. ಸುಗಂಧಪೂರಿತ ಎಣ್ಣೆಗಾಗಿ ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ. ಗಿಡ ನೆಲದಿಂದ ನೇರವಾಗಿ 30-90 ಸೆಂ ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ; ಆಕಾರ ಈಟಿಯಂತೆ ಅಥವಾ ಅಂಡದಂತೆ; ತುದಿ ಚೂಪು; ಅಂಚು ಗರಗಸದಂತೆ; ರೋಮರಹಿತ. ಹೂಗಳು ಬಿಳಿ ಅಥವಾ ತಿಳಿ ಊದಾಬಣ್ಣದವು. ಸರಳವಾದ ಅಥವಾ ಕವಲೊಡೆದ ಅಂತ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. 4 ಪುಷ್ಪಪತ್ರಗಳು ಕೂಡಿಕೊಂಡು ಆಗಿರುವ ಪುಷ್ಪಪಾತ್ರೆ 2 ತುಟಿಗಳಂತೆ ಭಾಗವಾಗಿದೆ. ಇದರ ಆಕಾರ ಗಂಟೆಯಂತೆ. ಪುಷ್ಪಪಾತ್ರೆ ಹಣ್ಣಿನಲ್ಲೂ ಉಳಿದಿರುತ್ತದೆ. ಪುಷ್ಪದಳ ಸಮೂಹ 4 ದಳಗಳಿಂದ ಕೂಡಿದೆ. ಇದೂ ಕೂಡ 2 ತುಟಿಗಳಂತೆ ಇಬ್ಭಾಗವಾಗಿದೆ. ಕೇಸರಗಳು 4. ಇವುಗಳಲ್ಲಿ 2 ಉಳಿದೆರಡಕ್ಕಿಂತ ದೊಡ್ಡವು. ಅಂಡಾಶಯ ಉಚ್ಚಸ್ಥಾನದ್ದು; 2 ಕಾರ್ಪೆಲುಗಳಿಂದ ಕೂಡಿದೆ. ಫಲ 4 ಭಾಗಗಳಿಂದ ಕೂಡಿದ ವಿಶಿಷ್ಟ ಬಗೆಯದಾಗಿದೆ. ಇದಕ್ಕೆ ನಟ್‍ಲೆಟ್ಸ್ ಗುಂಪು ಎಂದು ಹೆಸರು. ಒಂದೊಂದು ನಟ್‍ಲೆಟಿನಲ್ಲಿಯೂ ಒಂದೊಂದೇ ಬೀಜ ಇದೆ. ಬೀಜವನ್ನು ನೀರಿಗೆ ಹಾಕಿದಾಗ ಉಬ್ಬಿಕೊಂಡು ಒಂದು ಬಗೆಯ ಅರ್ಧ ಪಾರದರ್ಶಕ ವಸ್ತುವಿನಿಂದ ಆವೃತವಾಗುತ್ತದೆ. ಕಾಮಕಸ್ತೂರಿಯಲ್ಲಿ ಗಾತ್ರ, ಬೆಳೆವಣಿಗೆ, ರೋಮರಾಶಿ, ಎಲೆ, ಹೂ, ಕಾಂಡಗಳ ಬಣ್ಣಗಳಲ್ಲಿ ವ್ಯತ್ಯಾಸವನ್ನು ತೋರಿಸುವ ಅನೇಕ ಬಗೆಗಳಿವೆ. ಇವುಗಳಲ್ಲಿ ಬೇಸಿಲಿಕಮ್. ಪೈಲೋಸಮ್, ಮೇಜಸ್, ಡಿಫಾರ್ಮೆ (ಸುರುಳಿ ಎಲೆಯ ಬೇಸಿಲ್), ಪರಿಪ್ಯೂರೆಸೆನ್ಸ್ (ನಸುಕೆಂಪು ಬೇಸಿಲ್) ಮತ್ತು ಗ್ಲಾಬ್ರೇಟಮ್ (ಬಿಳಿ ಬೇಸಿಲ್)-ಎಂಬುವು ಮುಖ್ಯವಾದವು.

 ಕಾಮಕಸ್ತೂರಿಗೆ ಲವಂಗದಂಥ ಪರಿಮಳವೂ ಸ್ವಲ್ಪ ಉಪ್ಪಿನಂಥ ರುಚಿಯೂ ಇದೆ.

ಬೀಜಗಳಿಂದ ತಳಿ ವೃದ್ಧಿ. ಭಾರತದ ಮೈದಾನ ಪ್ರದೇಶಗಳಲ್ಲಿ ಅಕ್ಟೋಬರ್-ನವಂಬರ್ ತಿಂಗಳುಗಳಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲೂ ಬಿತ್ತನೆ ಮಾಡುತ್ತಾರೆ. ಮೊದಲು ಒಟ್ಲುಪಾತಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಆಮೇಲೆ ಬೇರೆಡೆಗೆ ನಾಟಿ ಹಾಕುತ್ತಾರೆ. ನಾಟಿ ಮಾಡಿದ ಎರಡು ಮೂರು ತಿಂಗಳಲ್ಲಿ ಕೊಯ್ಲು ಮಾಡಬಹುದು. ಗಿಡಗಳನ್ನು ನೆಲಮಟ್ಟಕ್ಕೆ ಕತ್ತರಿಸಿ ಕಂತೆಕಟ್ಟಿ, ಒಣಗಿಸುತ್ತಾರೆ. ಒಣಗಿದ ಎಲೆ ಮತ್ತು ಹೀವಿರುವ ರೆಂಬೆಗಳನ್ನು ಮುಖ್ಯಕಾಂಡದಿಂದ ಬೇರ್ಪಡಿಸಿ ಗಾಳಿಯ ಸಂಪರ್ಕಕ್ಕೆ ಬಾರದಂತೆ ಡಬ್ಬಗಳಲ್ಲಿ ಶೇಖರಿಸಿಡುತ್ತಾರೆ. ಒಂದು ಫಸಲಿನಿಂದ ಹಲವಾರು ಬಾರಿ ಕುಯ್ಲು ಮಾಡಬಹುದು. ಹೆಕ್ಟೇರ್ ಒಂದಕ್ಕೆ ಸುಮಾರು 6800 ಕೆಜಿ ಉತ್ಪನ್ನವಿದೆ.

ಬೇರೆ ಭಾಷೆಗಳಲ್ಲಿನ ಹೆಸರುಗಳು

ಬದಲಾಯಿಸಿ

ಸಂ: ಮುಂಜರಕಿ

ಹಿಂ: ಸಬ್‍ಜಾ, ಬೂಬಾಯ್

ಮ: ಸಬ್‍ಜಾ

ಗು: ಸಬ್‍ಜಾ

ತೆ: ಕರ್ಪೂರ ತುಲಸಿ

ತ: ಕಪೂರಂ ತಲಸಿ

ವರ್ಣನೆ

ಬದಲಾಯಿಸಿ

ಮನೆಗಳ ಮುಂದೆ ಅಲಂಕಾರಕ್ಕಾಗಿ ಮತ್ತು ಸುವಾಸನೆಗಾಗಿ ಬೆಳೆಸುತ್ತಾರೆ. ಎಲೆಗಳು ಹಸಿರಾಗಿದ್ದು ಸ್ವಲ್ಪ ಅಗಲವಾಗಿರುತ್ತದೆ. ಇದರ ಎಲೆಗಳು ತುಳಸಿ ಎಲೆಗಳನ್ನು ಹೋಲುತ್ತವೆ ಮತ್ತು ಸ್ವಲ್ಪ ದೊಡ್ಡವಿರುತ್ತದೆ. ಇದರ ಹೂವುಗಳು ಬಿಳಿ ಮತ್ತು ಗುಲಾಬಿ ಬಣ್ಣಗಳನ್ನು ಹೊಂದಿರುತ್ತದೆ. ಹೂವು ಕಟ್ಟುವವರು ಇದನ್ನು ಹೂವಿನ ಮಧ್ಯೆ ಸೇರಿಸಿ ಹೂವನ್ನು ಕಟ್ಟುತ್ತಾರೆ. ಹೆಣ್ಣುಮಕ್ಕಳು ಇದನ್ನು ತಲೆಗೆ ಮುಡಿಯುತ್ತಾರೆ. ಕಾಮಕಸ್ತೂರಿಯ ತೆನೆಯು ಅತ್ಯಂತ ಸುವಾಸನೆಯಿಂದ ಕೂಡಿರುತ್ತದೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಮಲಬದ್ಧತೆ ಮತ್ತು ಮೂಲವ್ಯಾಧಿಗಳ ನಿವಾರಣೆಗೆ

ಬದಲಾಯಿಸಿ

ಕಾಮಕಸ್ತೂರಿ ಬೀಜಗಳು ಗ್ರಂಧಿಗೆ ಅಂಗಡಿಗಳಲ್ಲಿ ನಮಗೆ ದೊರೆಯುತ್ತದೆ. ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ಶರೀರಕ್ಕೆ ತಂಪು ನೀಡುತ್ತವೆ. ಆದ್ದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಉಪಯೋಗಕಾರಿಯಾಗಿದೆ.

ಗಂಟಲು ಬೇನೆ, ರಕ್ತ ಭೇದಿ ನಿವಾರಣೆಗೆ

ಬದಲಾಯಿಸಿ

ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ರಕ್ತ ಭೇದಿಗೆ ಉಪಯೋಗಕಾರಿ. ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿದರೆ ಗಂಟಲು ಬೇನೆ ಗುಣಮುಖವಾಗುತ್ತದೆ.

ಗಂಟಲು ಬೇನೆ

ಬದಲಾಯಿಸಿ

ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದು.

ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತುಜ್ವರಕ್ಕೆ

ಬದಲಾಯಿಸಿ

ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು.

ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ

ಬದಲಾಯಿಸಿ

ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿಅರೆದು ಶೋಧಿಸಿ, ಸ್ವಲ್ಪಜೇನು ಕೂಡಿಸಿ ಸೇವಿಸುವುದು.ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.

ಬೇಸಿಗೆಯಲ್ಲಿ ತಂಪಾದ ಶರಬತ್ತು- ಬಾಯಾರಿಕೆ ಶಮನಕ್ಕೆ

ಬದಲಾಯಿಸಿ

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ಸಕ್ಕರೆ, ಸ್ವಲ್ಪ ಮಂಜುಗಡ್ಡೆ ಪುಡಿ ಬೆರೆಸಿ, ಅದಕ್ಕೆ ಸ್ವಲ್ಪ ಕೇಸರಿ ಬಣ್ಣ ಸೇರಿಸಿ ಶರಬತ್ತು ತಯಾರಿಸುತ್ತಾರೆ. ಇದರಿಂದ ಬಾಯರಿಕೆ ನಿವಾರಣೆಯಾಗುತ್ತದೆ. ಅಲ್ಲದೆ ಇದು ಶರೀರಕ್ಕೆ ತಂಪು ನೀಡುತ್ತವೆ.[]

ಇತರ ಉಪಯೋಗಗಳು

ಬದಲಾಯಿಸಿ

ಎಲೆ ಮತ್ತು ಹೂಗೊಂಚಲುಗಳಿಂದ ಒಂದು ಬಗೆಯ ಸುಗಂಧಪೂರಿತ ಚಂಚಲ ತೈಲವನ್ನು ಇಳಿಸಬಹುದು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಹಳ ಉಪಯೋಗಿಸುತ್ತಾರೆ. ಈ ಎಣ್ಣೆಯ ರಾಸಾಯನಿಕ ಸಂಯೋಜನೆ ಮತ್ತು ಗುಣ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಇದರ ಆಧಾರದ ಮೇಲೆ ಎಣ್ಣೆಯನ್ನು ನಾಲ್ಕು ಮುಖ್ಯ ವಿಧಗಳಾಗಿ ವಿಂಗಡಿಸಬಹುದು: 1 ಐರೋಪ್ಯ ವಿಧ-ಇದರಲ್ಲಿ ಮೀಥೈಲ್ ಚಾವಿಕಾಲ್ ಮತ್ತು ಲಿನಲೂಲ್ ಎಂಬ ವಸ್ತುಗಳಿವೆ. ಇದರ ವಾಸನೆ ಉತ್ಕøಷ್ಟವಾದುದು. ಇದರಿಂದ ಇದಕ್ಕೆ ಬಹಳ ಬೆಲೆ. 2 ರಿಯೂನಿಯನ್ ವಿಧ-ಇದನ್ನು ರಿಯೂನಿಯನ್ ದ್ವೀಪದಲ್ಲಿ ಪ್ರಥಮವಾಗಿ ಬಟ್ಟಿ ಇಳಿಸಲಾಯಿತು. ಈಗ ಮಡಗಾಸ್ಕರ್‍ನಲ್ಲೂ ತಯಾರಿಸುತ್ತಿದ್ದಾರೆ. ಇವುಗಳಲ್ಲಿರುವ ಮುಖ್ಯ ಘಟಕಗಳೆಂದರೆ ಮೀಥೈಲ್ ಚಾವಿಕಾಲ್ ಮತ್ತು ಕರ್ಪೂರ. ಲಿನಲೂಲ್ ಇಲ್ಲ. ಇದು ಯೂರೋಪಿಯನ್ ವಿಧಕ್ಕಿಂತ ಕೆಳದರ್ಜೆಯದು. 3 ಮೀಥೈಲ್ ಸಿನ್ನಮೇಟ್ ಬಗೆ-ಇದರ ಘಟಕಾಂಶಗಳು ಮೀಥೈಲ್ ಚಾವಿಕಾಲ್, ಲಿನನೂಲ್ ಮತ್ತು ಮೀಥೈಲ್ ಸಿನಮೇಟ್. ಬಲ್ಗೇರಿಯ, ಸಿಸಿಲಿ, ಭಾರತ, ಈಜಿಪ್ಟ್‍ಗಳಲ್ಲಿ ಇದನ್ನು ತಯಾರಿಸುತ್ತಾರೆ. 4 ಯೂಜಿನಾಲ್ ಬಗೆ-ಇದರ ಮುಖ್ಯ ಘಟಕ ಯೂಜಿನಾಲ್, ರಷ್ಯ, ಜಾವ ಮತ್ತು ಸಮೋವ ದ್ವೀಪಗಳಲ್ಲಿ ಇದನ್ನು ತಯಾರಿಸುತ್ತಾರೆ.

 ಐರೋಪ್ಯ ಬಗೆಯ ಎಣ್ಣೆಯನ್ನು ಸಿಹಿ ತಿಂಡಿ ತಯಾರಿಕೆಯಲ್ಲಿ, ಚಟ್ನಿ ತಯಾರಿಸುವಾಗ, ಟೊಮ್ಯಾಟೊ ಹಣ್ಣಿನ ಕಣಕದ ಜೊತೆಗೆ, ಉಪ್ಪಿನಕಾಯಿಯೊಂದಿಗೆ, ಮಾಂಸಾಹಾರದಲ್ಲಿ ಮಸಾಲೆಯೊಂದಿಗೆ ರುಚಿ ಮತ್ತು ಸುವಾಸನೆ ಕೊಡಲು ಉಪಯೋಗಿಸುತ್ತಾರೆ. ಮಲ್ಲಿಗೆ ಎಣ್ಣೆ ಜೊತೆ ಮಿಶ್ರಮಾಡಿ ದಂತಧಾವನ ವಸ್ತುಗಳ ತಯಾರಿಕೆಯಲ್ಲಿ ಬಳಸುವುದೂ ಉಂಟು. ರಿಯೂನಿಯನ್ ಬಗೆಯ ಎಣ್ಣೆ ಕೂಡ ಇದೇರೀತಿ ಉಪಯೋಗಿಸಲ್ಪಡುತ್ತದೆ. ಅದಲ್ಲದೆ ಸಾಬೂನು ತಯಾರಿಕೆಯಲ್ಲಿ ಹಾಗೂ ಕೀಟನಾಶಕ ಮತ್ತು ಕೀಟನಿವಾರಕ ಆಗಿ, ಪೂತಿನಾಶಕವಾಗಿ ಉಪಯೋಗಿಸುವುದುಂಟು. ಬೀಜಗಳಿಂದ ತಯಾರಿಸಿದ ಎಣ್ಣೆಗೂ ಈ ಮೇಲಿನ ಔಷಧೀಯ ಗುಣಗಳಿವೆ. ಸಸ್ಯದಿಂದ ತಯಾರಿಸಿದ ಎಣ್ಣೆಯನ್ನು ಹೊಟ್ಟೆನೋವಿನ ನಿವಾರಣೆಗೆ, ಜ್ವರಶಮನಕ್ಕಾಗಿ ಜಂತು ನಿವಾರಣೆಗೆ, ವಾತಹರಣಕ್ಕೆ ಮತ್ತು ಹೆಚ್ಚಿನ ಚೈತನ್ಯಕ್ಕೆ ಉಪಯೋಗಿಸುತ್ತಾರೆ. ನಿದ್ರೆ ಬರಿಸುವ ಗುಣವೂ ಇದಕ್ಕೆ ಇದೆ. ಎಲೆಯ ರಸ ಮತ್ತು ಬೀಜಗಳಿಗೆ ಕಿವಿನೋವನ್ನು ತಡೆಯುವ, ಬಲಾದ ಉಸಿರಾಟಕ್ರಿಯೆಯನ್ನು ಸರಿಯಾಗಿಸುವ, ಗಂಟಲು ತುರಿಕೆಯನ್ನು ನಿಲ್ಲಿಸುವ, ಮಲಬದ್ಧತೆಯನ್ನು ನಿವಾರಿಸುವ ತಂಪುಗೊಸಿಸುವ ಶಕ್ತಿಯೂ ಇದೆ. ಮಿಕ್ಕಂತೆ ಇದರ ಎಲೆ ಕುಡಿಗಳನ್ನು ಹೂವಿನೊಂದಿಗೆ ಕಟ್ಟಿ ಮುಡಿಯುವ ಪದ್ಧತಿ ಭಾರತದಲ್ಲಿ ಬಳಕೆಯಲ್ಲಿದೆ.

ಉಲ್ಲೇಖ

ಬದಲಾಯಿಸಿ
  1. ಅಪೂರ್ವ ಗಿಡಮೂಲಿಕೆಗಳು ಮತ್ತು ಸರಳ ಚಿಕಿತ್ಸೆಗಳು, ವೈದ್ಯ: ಎ. ಆರ್. ಎಂ. ಸಾಹೇಬ್ ನಿವೃತ್ತ ವಲಯಾರಣ್ಯಾಧಿಕಾರಿಗಳು, ಪ್ರಕಾಶಕರು:ದಿವ್ಯಚಂದ್ರ ಪ್ರಕಶನ, ಪುಟ ಸಂಖ್ಯೆ-೭೬
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: