ಪೂರ್ಣಚಂದ್ರ ತೇಜಸ್ವಿಯವರ "ಕಾಡಿನ ಕಥೆಗಳು-೧,೨,೩,೪" ಕೆನೆತ್ ಅಂಡರ್ಸನ್ನರ ಕಥೆಗಳ ಭಾವಾನುವಾದ. 'ಮುನಿಸ್ವಾಮಿ ಮತ್ತು ಮಾಗಡಿ ಚಿರತೆ', 'ಜಾಲಹಳ್ಳಿಯ ಕುರ್ಕ', 'ಬೆಳ್ಳಂದೂರಿನ ನರಭಕ್ಷಕ' ಮತ್ತಿತರೆ ಕೃತಿಗಳು ಈ ಸಂಗ್ರಹದಲ್ಲಿ ಒಳಗೊಂಡಿವೆ. ದೆವ್ವಗಳೇ ಇಲ್ಲದಿದ್ದರೂ ದೆವ್ವದ ಕತೆಗಳನ್ನು ಓದಿ ಅನಂದಿಸುವವರಂತೆ ಹುಲಿಗಳೇ ಇಲ್ಲದಿದ್ದರೂ ನರಭಕ್ಷಕರ ಕತೆಗಳನ್ನು ಓದಿ ಆನಂದಿಸಬೇಕಾದ ದುಸ್ಥಿತಿ ಬಾರದಂತೆ ನಮ್ಮ ಎಳೆಯರಿಗೂ ಯುವಕರಿಗೂ ಈ ಕಥೆಗಳು ಸ್ಪೂರ್ತಿ ನಿಡಲಿ ಎಂಬ ವಿಚಾರಗಳನ್ನಿಟ್ಟುಕೊಂಡು ಆಂಡರ್ಸನ್ನರ ಅನುಭವಗಳನ್ನು-ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರು ತಮ್ಮ ಅನುಭವಗಳೊಂದಿಗೆ ಭಾವಾನುವಾದ ಮಾಡಿರುವ ಈ ಪುಸ್ತಕಗಳ ಎಲ್ಲ ಕಥೆಗಳಲ್ಲೂ ಅವರು ಚಿತ್ರಿಸಿರುವ ಕಾಡು, ಕಾಡಿನ ಪಾತ್ರಗಳು, ಸಾಮಾಜಿಕ ಚಿತ್ರಣ, ಜೀವನದ ಸಾಹಸಗಳು, ಅತೀ ಮೆಚ್ಚಿನವು.

'ನರಭಕ್ಷಕ' ಎಂಬ ಪದವೇ ಸಾಕು, ಎದೆ ಝಲ್ ಎನ್ನಿಸುವಂತೆ ಮಾಡುತ್ತದೆ. ಮನುಷ್ಯರ ಬಗ್ಗೆ ಕಾಳಜಿ, ಪ್ರಾಣಿಗಳ ಬಗ್ಗೆ ಅಕ್ಕರೆ ಬರೀ ಶಬ್ದದಿಂದಲೇ ಇಂಥದ್ದೇ ಪ್ರಾಣಿ ಅಥವಾ ಪಕ್ಷಿ ಎಂದು ಗುರುತಿಸುವಷ್ಟರ ಮಟ್ಟಿಗೆ ಪರಿಣತಿ ಪಡೆದಿರುವ ಕೆನೆತ್ ಆಂಡೆರ್ಸನ್ ಜನರ ರಕ್ಷಣೆಗಾಗಿ ನರಭಕ್ಷಕ ಪ್ರಾಣಿಗಳನ್ನಷ್ಟೇ ಕೊಲ್ಲುತ್ತಿದ್ದರು.

ಸಾಮಾನ್ಯವಾಗಿ ಮನುಷ್ಯನನ್ನು ಹುಲಿಗಳು ತಮ್ಮ ಆಹಾರಕ್ಕೆ ಬೇಟೆಯಾಡುವದಿಲ್ಲ. ಸಾಮಾನ್ಯವಾಗಿ ಗಾಯಗೊಂಡು ಜಿಂಕೆ ಮುಂತಾದ ಪ್ರಾಣಿಗಳನ್ನು ಬೆನ್ನಟ್ಟಿ ಹಿಡಿಯುವ ಸಾಮರ್ಥ್ಯ ಕಳೆದುಕೊಂಡಾಗ ನರಭಕ್ಷಕ ಆಗಿ ಪರಿವರ್ತನೆಗೊಳ್ಳುತ್ತವೆ. ಮನುಷ್ಯನ ಭಯ ಹುಲಿಗೆ ಹೋಯಿತೆಂದರೆ ಅದು ಅತ್ಯಂತ ಭಯಾನಕ ಪ್ರಾಣಿಯೇ ಸರಿ.

ಹುಲಿಗಳಿಗೆ ಬೇಕಾದ ನಿರ್ಭಯ ಹಾಗು ಮಾನವನ ತೊಂದರೆಗಳಿಂದ ಮುಕ್ತವಾದ ಕಾಡಿನ ಅವಾಸ ಸ್ಥಾನ ಸಿಗದೇ ಇರುವುದು. ಹೆಚ್ಚು ಹೆಚ್ಚು ಕಾಡು ಬೆಳದಂತೆ ಹುಲಿಯ ಬಲಿ ಪ್ರಾಣಿಗಳೂ ಕೂಡ ಅಲ್ಲಿ ಬೆಳೆಯುತ್ತವೆ. ಹುಲಿಗಳೂ ಕೂಡಾ ಅವುಗಳ ಮೇಲೆ ಅವಲಂಭಿತವಾಗಿ ಹೆಚ್ಚು ಹೆಚ್ಚು ಬೆಳೆಯುತ್ತವೆ. ಯಾವಾಗ ಅಲ್ಲಿ ಮಾನವನ ಪ್ರವೇಶವಾಗಿ ತೊಂದರೆಗಳು ಹುಟ್ಟುತ್ತವೆಯೋ ಆಗ ಅಲ್ಲಿ ಇಂತಹ ಸಮಸ್ಯೆಗಳು ಬಂದೇ ಬರುತ್ತವೆ . ಕಾಡನ್ನು ಹೆಚ್ಚು ಬೆಳಿಸಿ ಹುಲಿಗಳೂ ಬೆಳೆಯಲು ಅವಕಾಶ ನೀಡಬೇಕಿದೆ. ಕಾಡಿನಲ್ಲಿ ಹಾಗು ಕಾಡಿನಂಚಿನ ಜನಗಳಿಗೆ ಈ ಬಗ್ಗೆ ತಿಳುವಳಿಕೆಯನ್ನು ನೀಡಿ ಇಂತಹ ಸಂಧರ್ಭಗಳನ್ನು ನಿಭಾಯಿಸುವ ಬಗ್ಗೆ ಅರಿವು ಮೂಡಿಸಬೇಕಿದೆ.

ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು