ಕಲೆ ಮತ್ತು ಪ್ರಕೃತಿ
ಕಲೆ ಮತ್ತು ಪ್ರಕೃತಿಗೆ ನಿಕಟ ಸಂಬಂಧವಿದೆ ಯಾದರೂ ಅದು ಆನ್ಯೋನ್ಯವಲ್ಲ. ಎಂದರೆ, ಪ್ರಕೃತಿಯಿಂದ ಸ್ಫೂರ್ತಿಗೊಂಡ ಭಾವನೆ ಅಥವಾ ಕೃತಿ ಕಲೆ ಎನಿಸಿಕೊಂಡರೂ ಕಲೆಯಿಂದ ಪ್ರಕೃತಿಗೆ ಆಗಬೇಕಾದ್ದೇನೂ ಇಲ್ಲ. ನಮ್ಮ ಭಾವನೆ ಅಥವಾ ದೃಷ್ಟಿ ಪ್ರಕೃತಿಯನ್ನು ಸುಂದರ ಎನ್ನಿಸುವಂತೆ ಮಾಡುತ್ತದೆ, ಆದರೆ ಪ್ರಕೃತಿಯನ್ನು ಸೃಷ್ಟಿಸುವುದಿಲ್ಲ. ಕಲೆಗೂ ಪ್ರಕೃತಿಗೂ ಇರುವ ವ್ಯತ್ಯಾಸ ಇಲ್ಲಿ ಕಂಡುಬರುತ್ತದೆ. ಕಲೆ ಮಾನವ ನಿರ್ಮಿತ, ಪ್ರಕೃತಿ ಸಹಜ. ಪ್ರಕೃತಿಯಲ್ಲಿ ಸಿಗುವ ಅಥವಾ ಸಂಭವಿಸಬಹುದಾದ ವಸ್ತುಗಳನ್ನೇ ಮಾಧ್ಯಮವಾಗಿ ಬಳಸಿಕೊಂಡು ದಕ್ಷನಾದವ ಸೃಷ್ಟಿಸುವ ಕೃತಿ ಕಲೆ. ಹೀಗೆ ಮಾಡುವಲ್ಲಿ ಆತ ಪ್ರಕೃತಿಯ ಅಂಶಗಳನ್ನು ಸಂಪಾದಿಸುತ್ತಾನೆ. ಎಂದರೆ ಕತ್ತರಿ ಪ್ರಯೋಗ ಮಾಡುತ್ತಾನೆ.
ಪ್ರಕೃತಿ
ಬದಲಾಯಿಸಿತೇಪೆ ಹಾಕುತ್ತಾನೆ, ಜೋಡಿಸುತ್ತಾನೆ, ಅದಕ್ಕೊಂದು ಚೌಕಟ್ಟು ನೀಡುತ್ತಾನೆ. ಪ್ರಕೃತಿಯನ್ನು ಚೌಕಟ್ಟಿನೊಳಗಿಡುವ ತಂತ್ರದಿಂದ ಅದನ್ನು ಪುನರ್ ಸೃಷ್ಟಿ ಮಾಡುತ್ತಾನೆ. ಈ ಕಾರಣದಿಂದ ಅದರ ಚೆಂದ ಅಥವಾ ಸೊಬಗು ಹೆಚ್ಚುತ್ತದೆ. ಎಂದರೆ ಚೌಕಟ್ಟಿನಲ್ಲಿರುವ ದೃಶ್ಯ ಪ್ರಕೃತಿಯೂ ಆಗಿರಬಹುದು, ಸಂಪಾದಿಸಿದ ನವೀನ ರಚನೆಯೂ ಆಗಿರಬಹುದು. ಕಲಾವಿದನ ಹಿರಿಮೆ ಎರಡನೆಯದರಲ್ಲಿ ಕಾಣುವಂತೆ ಮೊದಲನೆಯದರಲ್ಲಿ ಕಂಡುಬರುವುದಿಲ್ಲ. ಕ್ರಿಯಾತ್ಮಕವಾಗಿ, ಭಾವ ಪ್ರಚೋದಕ ಮತ್ತು ಪ್ರಬೋಧಕವಾಗಿ ಸೌಂದರ್ಯಾನುಭವವನ್ನು ನೀಡಿವ ಕೃತಿ ಕಲೆ ಎನಿಸಿಕೊಳ್ಳುತ್ತದೆ. ಎಂದರೆ ಮಾನವ ಮಾಡಿದ್ದೆಲ್ಲ ಕಲೆ ಆಗುವುದಿಲ್ಲ. ಅದರ ವಿಶಿಷ್ಟಗುಣ ಲೋಕ ವ್ಯವಹಾರದಲ್ಲಿ ಪಾಲುಗೊಳ್ಳದಿರುವುದು, ವ್ಯಾವಹಾರಿಕ ಅಥವಾ ಭೌತಿಕ ಮೌಲ್ಯವನ್ನು ನೀಡದಿರುವುದು. ಈ ಕಾರಣದಿಂದ ಅದು ಅಲೌಕಿಕ ಎನಿಸುತ್ತದೆ; ನಾಲಗೆಗೆ ಸಿಗುವ ರುಚಿಗಿಂತ ಹೆಚ್ಚಾಗಿ ವಿಭಿನ್ನವಾಗಿ ಅದು ಆತ್ಮ ಸಂತೃಪ್ತಿಯನ್ನುಂಟುಮಾಡುತ್ತದೆ. ಆದ್ದರಿಂದ ಕಲೆ ನಮ್ಮನ್ನು ನಿರ್ಲಿಪ್ತಗೊಳಿಸುವ ಸುಲಭಸಾಧನ ಎಂದೆನ್ನುತ್ತಾರೆ. ಪ್ರಕೃತಿಯ ಭೌತಿಕ ಅಂಶವಾದ ನಾವು ಪ್ರಕೃತಿಯಿಂದ ಈ ನಿರ್ಲಿಪ್ತತೆಯನ್ನು ಸಾಧಿಸುವುದು ಬಹಳ ಅಪರೂಪ. ಪ್ರಕೃತಿ ನಮಗೆ ಬಾಹ್ಯವಾಗಿಯೇ ಎಂದರೆ ವಾಸ್ತವವಾಗಿಯೇ ಯಾವಾಗಲೂ ನಿಲ್ಲಬಹುದಾಗಿದ್ದರೆ, ನಮ್ಮ ಸಂತಸ ಹೆಚ್ಚಿರುತ್ತಿತ್ತು. ಈ ತೆರನಾದ ಬಾಹ್ಯತೆ, ನಿರ್ಲಿಪ್ತತೆಗಳನ್ನು ಸಂಪಾದಿಸಿದ ಕವಿಗಳೂ ಕಲಾವಿದರೂ ಇತರ ಸಾಮಾನ್ಯರಿಗಿಂತ ಭಿನ್ನರಾಗಿರುವುದು ಈ ಕಾರಣದಿಂದಲೇ. ನಮಗೂ ಪ್ರಕೃತಿಗೂ ಮಧ್ಯೆ ಒಂದು ಸಂಖ್ಯೆಯನ್ನೋ ವಿಗ್ರಹ ರೇಖೆಯನ್ನೋ ಎಳೆದುಕೊಂಡೆವಾದರೆ, ಅದರ ಬಂಧನದಿಂದ ಕಳಚಿಕೊಂಡು ನಾವು ಆತ್ಮಾರಾಮರಾಗುತ್ತೇವೆ ಎಂದು ಸಾಂಖ್ಯರ ಮತ. ಇದು ಸೌಂದರ್ಯ ದೃಷ್ಟಿಯೂ ಹೌದು. ಎಂದರೆ ಆ ರೇಖೆ ಪ್ರಕೃತಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಕಲೆ ಅದನ್ನು ಸಾಧಿಸಬಹುದೆಂದೇ ಅದರ ಮಹಿಮೆ. ಎಲ್ಲ ಸೌಂದರ್ಯನುಭಾವಗಳಲ್ಲೂ ಈ ತೆರನಾದ ಸಂಧಿ ಅಥವಾ ವಿಗ್ರಹರೇಖೆ ಏರ್ಪಟ್ಟೂ ನಮ್ಮ ಲಿಪ್ತತೆ ದೂರವಾಗುವುದಕ್ಕೆ ಎಡ್ವರ್ಡ್ ಬುಲ್ಲೋ ಎಂಬಾತ ಸೈಕಿಕಲ್ ಡಿಸ್ಟೆನ್ಸ್ ಎಂದು ಕರೆದಿದ್ದಾನೆ. ಎಂದರೆ ಇಲ್ಲಿ ಆಗುವುದು ವಸ್ತುವಿನ ಅಥವಾ ಪ್ರಕೃತಿಯಿಂದ ದೂರೀಕರಣವಲ್ಲ. ಅದರ ದೃಷ್ಟಿಸತ್ಯದೊಂದಿಗೆ ದೂರೀಕರಣ ಮತ್ತು ಸಾರ್ವತ್ರಿಕವಾಗಿ ಸಾಮಾನ್ಯವಾದ ಅಂತಃ ಸತ್ಯದೊಂದಿಗೆ ನಮ್ಮ ಭಾವೈಕ್ಯ. ಈ ಅಂಶವನ್ನು ಥಿಯೋಡರ್ ಲಿಪ್ಸ್ ಎಂಬಾತ ಭಾವೈಕ್ಯತೆ (ಎಂಪತಿ) ಎಂದು ಕರೆದಿದ್ದಾನೆ. ಒಂದೇ ಸೌಂದರ್ಯಾನುಭವದಲ್ಲೇ ಮಾನಸಿಕ ದೂರೀಕರಣ ಮತ್ತು ಭಾವೈಕ್ಯವಾಗುವ ಈ ತಂತ್ರ ಬಹು ಸೋಜಿಗದ್ದು. ಸೌಂದರ್ಯ ಮೀಮಾಂಸಕರು ಅಥವಾ ವಿಮರ್ಶಕರು ಈ ವಿರುದ್ಧ ತತ್ತ್ವಗಳು ಒಂದೇ ಅನುಭವದಲ್ಲಿ ಹೇಗೆ ಪರ್ಯವಸಾನವಾಗಬಲ್ಲವು ಎನ್ನುವುದನ್ನು ಎಂದರೆ ವಿರುದ್ಧವಾಗಿ ಕೆಲಸ ಮಾಡಿ ಹೇಗೆ ಒಂದೇ ಅನುಭವವನ್ನುಂಟುಮಾಡಬಲ್ಲವು ಎಂಬುದನ್ನು ವಿವರಿಸಿಲ್ಲ. ಆದರೆ ಅದರ ಸೂಕ್ಷ್ಮ ಇಲ್ಲಿದೆ. ನಮಗೂ ಪ್ರಕೃತಿಗೂ ಮಧ್ಯೆ ನಾವು ಎಳೆದುಕೊಂಡ ರೇಖೆ ಸಂಧಿರೇಖೆಯಾದರೆ ಅದು ಭಾವೈಕ್ಯತೆಯಲ್ಲೂ ಅದೇ ರೇಖೆ ವಿಗ್ರಹರೇಖೆಯಾದಲ್ಲಿ ದೂರೀಕರಣದಲ್ಲೂ ಮುಕ್ತಾಯಗೊಳ್ಳುತ್ತದೆ.
ನಿರ್ಲಿಪ್ತತಾಸಾಧಕವಾದ ಚೌಕಟ್ಟ
ಬದಲಾಯಿಸಿನಿರ್ಲಿಪ್ತತಾಸಾಧಕವಾದ ಚೌಕಟ್ಟನ್ನು ಒದಗಿಸುವಾತ ಕಲಾವಿದ. ಆತ ಸೃಷ್ಟಿಸಿದ ಪ್ರತಿಭಾನ್ವಿತ ಕೃತಿ ಸ್ವತಂತ್ರ ವಸ್ತುವಾಗಿ ಪ್ರಕೃತಿಯಿಂದ ಬೇರೆ ನಿಂತು, ಪ್ರಕೃತಿ ತೋರಿಸಿದರೂ ಸಾಮಾನ್ಯನಿಗೆ ಕಾಣದ ಚೈತನ್ಯವನ್ನು ಘನೀರೂಪಗೊಳಿಸಿ ಸುಲಭವಾಗಿ ಆತ ಆಸ್ವಾದಿಸುವಂತೆ ಮಾಡುತ್ತದೆ. ಎಂದರೆ ಆನಂದಾನುಭವಕ್ಕೆ ಅಗತ್ಯವಾಗುವ ಈ ಮಾನಸಿಕ ಬಾಹ್ಯತೆಯನ್ನು ಕಲಾಕೃತಿಯಲ್ಲಿ ಸಿದ್ಧರೂಪದಲ್ಲಿ ನಮಗೆ ಸಿಗುವಂತೆ ಮಾಡುವವನೇ ಕಲಾವಿದ. ಕಲಾವಿದನ ಕೃತಿ ಎನ್ನುವುದು ಅಶಿಕ್ಷಿತನಾದ ಸಾಮಾನ್ಯನಿಗೆ ಕಡಿದು, ಮೆರುಗುಕೊಟ್ಟು, ತಯಾರಿಸಿಟ್ಟ ವಜ್ರದಂತೆ. ಸಾಮಾನ್ಯನಿಗೆ ಕಾಣದ ಬಣ್ಣ, ರೇಖೆ, ಸಂಯೋಜನೆ ಕಲಾವಿದನ ದೃಷ್ಟಿಯ ಮೂಲಕ ಹಾದು ನಮಗೆ ಕೃತಿಯಾಗಿ ಬಂದಿರುತ್ತವೆ. ರವಿ ಕಾಣದ್ದನ್ನು ಕವಿ ಕಂಡಿದ್ದರೆ, ಅದರ ಅರಿವು ನಮಗಾಗುವುದು ಈ ಕೃತಿಗಳಿಂದ. ಜೀವನದಲ್ಲೂ ಕೃತಿಯಲ್ಲೂ ನಿರ್ಲಿಪ್ತತೆಯನ್ನು ಸಾಧಿಸಿದ ಕಲಾವಿದರು ಸಾಮಾನ್ಯರಿಗಿಂತ ಉತ್ಕøಷ್ಟರೆಂಬ ವಿಷಯದಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
ವ್ಯಾವಹಾರಿಕ ದೃಷ್ಟಿ
ಬದಲಾಯಿಸಿಪ್ರಾಕೃತಿಕವಾದ ನಮ್ಮ ಜೀವನದಲ್ಲಿ ಸ್ವಾಭಾವಿಕವಾಗಿ ನಾವು ಪ್ರಕೃತಿಯೊಡನೆ ಬೇರೆಯಲ್ಲವೆಂಬಂತೆ ಅಭಿನ್ನ ಜೀವನವನ್ನು ಜರುಗಿಸುತ್ತಿದ್ದೇವೆ. ಆದ್ದರಿಂದಲೇ ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ಕಂಡು ಯಾವುದು ಉಪಯುಕ್ತ ಯಾವುದು ಭೌತಿಕವಾಗಿ ಸುಖಕರ ಎಂಬುದನ್ನೇ ಹುಡುಕುವ ನಾವು ಅವುಗಳಿಗೆ ಸಾಪೇಕ್ಷವಾದ, ಆದರೆ ನಮಗೆ ಅನಪೇಕ್ಷವಾದ ಕಷ್ಟ, ದುಃಖಗಳನ್ನು ಅನುಭವಿಸುತ್ತೇವೆ. ಇದೊಂದು ಸ್ವಾಭಾವಿಕ ಬಂಧನ, ಇದರಿಂದಲೇ ಪ್ರಕೃತಿಯಲ್ಲಿನ ಸೌಂದರ್ಯವನ್ನು ಅಸ್ವಾದಿಸಲು ಅನೇಕರಿಗೆ ಆಗಿದಿರುವುದು. ಕಲಾಕೃತಿ ವಿಶಿಷ್ಟವಾದ ರೀತಿಯಲ್ಲಿ ನಮ್ಮನ್ನು ವ್ಯಾವಹಾರಿಕ ತನ್ಮಯತೆ, ವ್ಯಾಹಾರಿಕ ಉಪಯುಕ್ತತೆ ಎನ್ನುವ ಕಾರ್ಪಣ್ಯಗಳಿಂದ ತಪ್ಪಿಸಿ ಭಾವಶುದ್ಧಿಯ ಮೂಲಕ ಪ್ರಕೃತಿ ನೀಡಬಹುದಾದ ಎಲ್ಲ ಅನುಭವಗಳನ್ನೂ ನೀಡುತ್ತದೆ; ಆದರೆ ಇಲ್ಲಿ ಆನುಭವ ಉದಾತ್ತವಾಗಿರುತ್ತದೆ ; ವ್ಯಕ್ತಿ-ಪರಿಮಿತಿಗಳಿಂದ ನಮ್ಮನ್ನು ಮುಕ್ತಿಗೊಳಿಸಿ ಸಾಧಾರಣ ಅಥವಾ ಸಾರ್ವತ್ರಿಕ ವೈಶಾಲ್ಯದ ಅನುಭವದಲ್ಲದು ಲೀನಗೊಳಿಸುತ್ತದೆ. ಎಂದರೆ ಸದ್ಯದಲ್ಲೇ ಪರನಿರ್ವೃತಿಯನ್ನು ಸಾಧಿಸಿ ಆತ್ಮ ಸಂವಾದದಲ್ಲಿ ತೊಡಗಿಸುವಂತೆ ಮಾಡುವ ಸಾಧನೆಯಾಗುತ್ತದೆ. ಕಲಾಕೃತಿ ಅವ್ಯಾವಹಾರಿಕ ಮತ್ತು ಅಲೌಕಿಕ ಎಂದರೆ ಇದೇ ಅರ್ಥ, ಭಾರತೀಯ ಸೌಂದರ್ಯ ಮೀಮಾಂಸಕನಾದ ಮಮ್ಮಟನ ದೃಷ್ಟಿಯಲ್ಲಿ ಕಲಾಕೃತಿ ಪ್ರಕೃತಿಗಿಂತ ಭಿನ್ನವಾದುದಕ್ಕೆ ಗುರುತು ಇದು ಃ ಕಲೆ ನಿಯತಿಕೃತ ನಿಯಮ ರಹಿತ, ಹ್ಲಾದೈಕಮಯ, ಅನನ್ಯ ಪರಿತಂತ್ರ, ನವರಸರುಚಿರ. ಈ ನಿಯತಿಕೃತ ನಿಯಮಗಳನ್ನು ಮೀರುವ ಶಕ್ತಿ ಮಾನವನ ಭಾವನೆಗೆ ಇಲ್ಲದಿದ್ದರೆ ಆತ ಕೇವಲ ಭೌತಿಕ ಅಥವಾ ವಾಸ್ತವಿಕ ಘಟಕವಾಗಿಯೇ ಇರುತ್ತಿದ್ದ. ಭಾವನೆಗೆ ಒಂದು ಸೃಷ್ಟಿಶಕ್ತಯಿದೆ ಎಂದು ತೋರಿಸಿಕೊಡುವುದೆಂದರೆ ಅದು ಕಲೆ.[೧]
ತಾರ್ಕಿಕ ನಿಯಮ
ಬದಲಾಯಿಸಿಇತ್ತೀಚೆಗೆ ತಾರ್ಕಿಕ ನಿಯಮಗಳನ್ನೂ ಮೀರುವ ಸರ್ರಿಯಲಿಸಂ (ಅತಿವಾಸ್ತವಿಕತೆ) ಎನ್ನುವ ಶೈಲಿಗೆ ಸೇರಿದ ಕಲಾಕೃತಿಗಳು ಮಾನವನ ಭಾವನಾ ಸ್ವಾತಂತ್ರ್ಯವನ್ನೂ ನಿರ್ಮಾಣಶಕ್ತಿಯನ್ನೂ ಸೂಚಿಸುತ್ತವೆ. ಸುಪ್ತಚೇತನದ ಮಟ್ಟದಲ್ಲಿ ಅಡಗಿರುವ ಅನೇಕ ಗುಹ್ಯ ಅನುಭವಗಳನ್ನು ಅಭಿವ್ಯಕ್ತಿಗೊಳಿಸುವ ಈ ತೆರನಾದ ಅರ್ಥಕೃತಿಗಳು ಪ್ರಕೃತಿಯ ದೃಶ್ಯಗಳಲ್ಲಿ, ಸೃಷ್ಟಿಯಲ್ಲಿ ಕಾಣಬರುವುದಿಲ್ಲ. ಪ್ರಕೃತಿಯ ಸ್ವಾಭಾವಿಕ ಅಥವಾ ಭೌತಿಕ ನಿಯಮಾವಳಿಗಿಂತ ವಿಶಿಷ್ಟವಾದ ರೀತಿಯ ನಿಯಮಗಳಿಂದ ಸೃಷ್ಟಿ ಜರುಗಬಹುದೆಂದು ತೋರಿಸಿಕೊಡುವ ಧೀಮಂತ ನಿದರ್ಶನ ಕಲೆಯಲ್ಲಿ ಕಂಡುಬರುತ್ತದೆ. ಪ್ರಕೃತಿಯಿಂದ ಮೇಲೆದ್ದ, ಪ್ರಕೃತಿಗಿಂತ ಮಿಗಿಲಾದ, ಹೊಸತಾದ ಮಾನವ ಚೈತನ್ಯದ ಹೆಗ್ಗುರುತು ಕಲೆ. ನವೀನತೆಯ ಅಳತೆ ಮಾನವನಲ್ಲಿ ಸಿಗುತ್ತದೆ. ಇದೇ ಮಾನವ ಎನ್ನುವ ಪದದ ಅರ್ಥ. ಮಾ+ನವ ಸೃಷ್ಟಿಯಲ್ಲಿ ನವೀನತೆಯ ಮಾಪನವೇ ಮಾನವ. ಮಾನವತೆಯ ಅಭಿವ್ಯಕ್ತಿಕಲೆ. ಇಲ್ಲಿ ಮಾನವತನ್ನೊಡನೆಯೇ ಸಹಚಿಂತನೆ ಮಾಡಲೆಳೆಸುವ ಪ್ರಯತ್ನ ಕಾಣುತ್ತದೆ.[೨]
ವಾಸ್ತವಿಕ ಚಿತ್ರಕೃತಿ
ಬದಲಾಯಿಸಿಈ ಚೈತನ್ಯದ ಅಭಿವ್ಯಕ್ತಿ ವಾಸ್ತವಿಕ ಚಿತ್ರಕೃತಿಗಳಿಗಿಂತ ಅನುಕರಣಾತ್ಮಕ ಕೃತಿಗಳಿಗಿಂತ ಹೆಚ್ಚಿಗೆ ಸಂಜ್ಞಾತ್ಮಕ ಅಥವಾ ಭಾವಪ್ರಧಾನ ಚಿತ್ರಕೃತಿಗಳಲ್ಲಿ ಕಾಣಸಿಗುತ್ತದೆ. ಪ್ರಕೃತಿಯ ಗರ್ಭದಲ್ಲಿ ಅಡಗಿಕೊಂಡಿರುವ ಸರಳರೇಖೆಗಳನ್ನು ಮೂಲ ಆಧಾರಸ್ತಂಭ ಅಥವಾ ಅಸ್ಧಿಪಂಜರವನ್ನು ವಾಸ್ತವಿಕ ಹಾಗೂ ಅನುಕರಣಾತ್ಮಕ ಚಿತ್ರಗಳು ತೋರಿಸಲು ಅಸಮರ್ಥವಾದಾಗ ಸಂಜ್ಞಾತ್ಮಕ ಅಥವಾ ಸಾಂಕೇತಿಕ (ಸಿಂಬಾಲಿಕ್) ಮತ್ತು ಭಾವಪ್ರಧಾನ ಅಥವಾ ಅಭಿವ್ಯಕ್ತಿ ಪ್ರಧಾನ (ಎಕ್ಸ್‍ಪ್ರೆಷನಿಸ್ಟಿಕ್) ಕೃತಿಗಳು ಯಶಸ್ವಿಯಾಗುತ್ತವೆ. ಕಲೆ ಪ್ರಕೃತಿಯ ಪ್ರತಿಬಿಂಬವಾಗಿಯೇ ಉಳಿಯದೆ ಅದರ ವ್ಯಾಖ್ಯಾನವಾಗುವುದರಲ್ಲಿ ಮೌಲ್ಯವನ್ನು ನಾವು ಕಾಣಬಯಸುವುದಾದರೆ ಮಾನವ ಜೀವನದಲ್ಲಿ ಪ್ರಕೃತಿಗೆ ಇದ್ದಂತೆಯೇ ಕಲೆಗೂ ಸ್ಥಾನವಿರುವುದನ್ನೂ ಒಪ್ಪಬೇಕಾಗುತ್ತದೆ. ಅಷ್ಟೇಅಲ್ಲದೆ, ಅನೇಕ ಸಲ ಪ್ರಕೃತಿಯನ್ನೇ ಮೀರಿಸಿ ನಮ್ಮ ಸಂಸ್ಕøತಿ ಅಥವಾ ಬೆಳೆವಣಿಗೆಯನ್ನು ತೋರಿಸುವ ಮಾಪಕ ಈ ಕಲೆ. ಮಾನವನ ಅಂತರ್ಗತ ಶಕ್ತಿಯ ವೈಪುಲ್ಯವೇ ಕಲೆಯಾಗಿ ಕಾಣುತ್ತದೆಂದು ಭಾವಿಸುವುದಾದರೆ ಕಲೆಯ ಅರ್ಥ ನಮಗಾದಂತೆಯೇ.
ಉಲ್ಲೇಖಗಳು
ಬದಲಾಯಿಸಿ- ↑ http://kn.vikaspedia.in/health/c8fca8ccd-c86cb0ccd-cb9cc6c9accd-c8ec82/caaccdcb0c95cc3ca4cbf-c9acbfc95cbfca4ccdcb8cc6
- ↑ http://www.kanaja.in/%E0%B2%AC%E0%B2%A4%E0%B3%8D%E0%B2%A4%E0%B2%A6-%E0%B2%9A%E0%B2%BF%E0%B2%B2%E0%B3%81%E0%B2%AE%E0%B3%86-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-%E0%B3%A8-%E0%B2%B5%E0%B2%BF%E0%B2%9C/