ಕರ್ಣಾಟಕ ಬ್ಯಾಂಕ್

ಭಾರತದ ಒಂದು ಬ್ಯಾಂಕ
(ಕರ್ನಾಟಕ ಬ್ಯಾಂಕ್ ಇಂದ ಪುನರ್ನಿರ್ದೇಶಿತ)

ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ಭಾರತದ ಖಾಸಗಿ ಬ್ಯಾಂಕುಗಳಲ್ಲೊಂದು. ಇದರ ಕೇಂದ್ರ ಕಾರ್ಯಾಲಯ ಮಂಗಳೂರು ನಗರದಲ್ಲಿದೆ. ಭಾರತದ ರಿಸರ್ವ್ ಬ್ಯಾಂಕ್ ಇದನ್ನು A-ಕ್ಲಾಸ್ ಅನುಸೂಚಿತ ವಾಣಿಯ ಬ್ಯಾಂಕ್ ಎಂದು ಪರಿಗಣಿಸಿದೆ. ಅಖಿಲ ಭಾರತದಲ್ಲೇ ಆರ್ಥಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ನವವಿಕ್ರಮ ಸಾಧಿಸಿದ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ. 1906-1945, ಈ ನಾಲ್ಕು ದಶಕಗಳು ಜಿಲ್ಲೆಯ ಮಟ್ಟಿಗೆ ದಾಖಲೆ. 22 ಸಣ್ಣ ಹಾಗೂ ದೊಡ್ಡ ಬ್ಯಾಂಕುಗಳ ಉಗಮ. ಈ ಜಿಲ್ಲೆಯ ನೆಲ ಬ್ಯಾಂಕಿಂಗ್ ರಂಗಕ್ಕೆ ತೊಟ್ಟಿಲು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ, ಮಹಾತ್ಮಾಜಿ ನೀಡಿದ ಸ್ವದೇಶಿ ಆಂದೋಳನದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜನ್ಮತಳೆಯಿತು ಕರ್ನಾಟಕ ಬ್ಯಾಂಕು ಇದೀಗ ದೇಶದ ಉದ್ದಗಲಗಳನ್ನು ವ್ಯಾಪಿಸಿ ಎಂಟು ದಶಕಗಳ ನಿರಂತರ ಸೇವೆಯಿಂದ ಖಾಸಗಿರಂಗದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿದೆ.

ಕರ್ನಾಟಕ ಬ್ಯಾಂಕ್ ನಿಯಮಿತ
ಸಂಸ್ಥೆಯ ಪ್ರಕಾರಸಾರ್ವಜನಿಕ
ಸ್ಥಾಪನೆ18 February 1924; 36791 ದಿನ ಗಳ ಹಿಂದೆ (18 February 1924)
ಮುಖ್ಯ ಕಾರ್ಯಾಲಯಮಂಗಳೂರು, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು)
  • ಪಿ. ಪ್ರದೀಪ್ ಕುಮಾರ್
    (ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ )
  • ಶ್ರೀಕೃಷ್ಣನ್ ಹರಿಹರ ಶರ್ಮಾ
    (ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ)
ಉದ್ಯಮಬ್ಯಾಂಕಿಂಗ್
ಉತ್ಪನ್ನಚಿಲ್ಲರೆ ಬ್ಯಾಂಕಿಂಗ್, ಕಾರ್ಪೊರೇಟ್ ಬ್ಯಾಂಕಿಂಗ್, ಖಜಾನೆ ಸೇವೆಗಳು, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಖಾತರಿ ಸೇವೆಗಳು
ಆದಾಯIncrease ೮,೨೧೩ ಕೋಟಿ (೨೦೨೩)[]
ಆದಾಯ(ಕರ/ತೆರಿಗೆಗೆ ಮುನ್ನ)Increase ೨,೨೦೮.೨೩ ಕೋಟಿ (೨೦೨೩)[]
ನಿವ್ವಳ ಆದಾಯIncrease ೧,೧೮೦.೨೪ ಕೋಟಿ (೨೦೨೩)[]
ಒಟ್ಟು ಆಸ್ತಿIncrease ೯೯,೦೫೮ ಕೋಟಿ (೨೦೨೩)[]
ಉದ್ಯೋಗಿಗಳು೮,೬೫೨ (೨೦೨೩)[]
ಜಾಲತಾಣwww.karnatakabank.com

ಸ್ಥಾಪನೆ ಮತ್ತು ಬೆಳವಣಿಗೆ

ಬದಲಾಯಿಸಿ

ಬಿ.ಆರ್. ವ್ಯಾಸರಾಯಾಚಾರ್ ಅವರ ಅಧ್ಯಕ್ಷತೆಯಲ್ಲಿ 18 ಫೆಬ್ರವರಿ 1924ರಂದು ಮಂಗಳೂರಿನಲ್ಲಿ ತನ್ನ ನೋಂದಾಯಿತ ಕಚೇರಿ ತೆರೆದ ಬ್ಯಾಂಕಿನ ಬಂಡವಾಳ ಕೇವಲ ರೂ. 11,580/-. ಒಂದು ರೀತಿಯಲ್ಲಿ ಕಾಲದೊಂದಿಗೆ ಬೆಳೆದು ಬಂದ ಕರ್ನಾಟಕ ಬ್ಯಾಂಕು, ಇಂದು ಅಗಾಧ ವಿಸ್ತಾರಕ್ಕೆ ಬೆಳೆದಿದ್ದರೆ ಶ್ರೀಸಾಮಾನ್ಯರು ಬ್ಯಾಂಕಿನ ಮೇಲಿಟ್ಟ ವಿಶ್ವಾಸ, ಕಾಲದಿಂದ ಕಾಲಕ್ಕೆ ಬ್ಯಾಂಕನ್ನು ನಿಸ್ವಾರ್ಥ ಸೇವೆಯಿಂದ ಮುಂದೊಯ್ದ ಅಧ್ಯಕ್ಷರುಗಳು. ಆಡಳಿತ ವರ್ಗ ಮತ್ತು ಸಿಬ್ಬಂದಿಯ ಸೇವಾ ತತ್ಪರತೆಗಳೇ ಅದಕ್ಕೆ ಕಾರಣ,.1945 ಕರ್ನಾಟಕ ಬ್ಯಾಂಕ್ ಚರಿತ್ರೆಯಲ್ಲಿ ಒಂದು ಗಮನಾರ್ಹ ವರ್ಷ. ಕೇವಲ 31ರ ಹರೆಯದ ಕೆ. ಸೂರ್ಯನಾರಾಯಣ ಅಡಿಗರು ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರಾದರು. ಆಗ ಒಟ್ಟು ಠೇವಣಿ ಕೇವಲ ರೂ. 39.33 ಲಕ್ಷ. ಮುಂಗಡ ರೂ. 20.81 ಲಕ್ಷ. ಶಾಖಾ ಸಂಖ್ಯೆ ಕೇವಲ 6. ನಿರ್ದೇಶಕರಾಗಿ ಬಳಿಕ ಬ್ಯಾಂಕಿನ ಪೂರ್ಣಕಾಲೀನ ಅಧ್ಯಕ್ಷರಾಗಿ ಕರ್ನಾಟಕ ಬ್ಯಾಂಕಿನ ಬೆಳೆವಣಿಗೆಯಲ್ಲಿ ಅಡಿಗರ ಕೊಡುಗೆ ಬ್ಯಾಂಕ್ ಇತಿಹಾಸದಲ್ಲಿ ನಿಜಕ್ಕೂ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಅಡಿಗರ ನಂತರ ಬಂದ ಅಧ್ಯಕ್ಷರುಗಳಾದ ಕೆ.ಎನ್. ಬಾಸ್ರಿ, ಪಾಂಗಾಳ ರಘುರಾಮರಾವ್, ಪಿ. ಸುಂದರರಾವ್, ಎಚ್.ಎಂ. ರಾಮರಾವ್, ಯು.ವಿ. ಭಟ್, ಎಂ.ಎಸ್. ಕೃಷ್ಣಭಟ್ ತಮ್ಮ ತಮ್ಮ ಸಾಧನೆಗಳಿಂದ ಬ್ಯಾಂಕನ್ನು ರಾಷ್ಟ್ರೀಯ ವ್ಯಾಪ್ತಿಗೆ ಏರಿಸುವಲ್ಲಿ ಸಮರ್ಥರಾದರು.ಕರ್ತವ್ಯ ದಕ್ಷತೆ, ಪ್ರಾಮಾಣಿಕತೆ ತುಂಬಿಕೊಂಡ ಅನಂತಕೃಷ್ಣ ಕರ್ನಾಟಕ ಬ್ಯಾಂಕ್ ಸೇರಿದ್ದು 1971ರಲ್ಲಿ ಅಧಿಕಾರಿಯಾಗಿ. ಜುಲೈ 2000ದಲ್ಲಿ ಅನಂತಕೃಷ್ಣ ಕರ್ನಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಅದರ ಸಾರಥ್ಯ ವಹಿಸಿಕೊಂಡಾಗ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಕ್ಷೇತ್ರಗಳಲ್ಲಿ ಒಂದು ರೀತಿಯ ನಿರಾಶಾದಾಯಕ ಮಬ್ಬು ಬೆಳಕು ಕವಿದಿತ್ತು. ಒಂದು ರೀತಿಯಲ್ಲಿ ಬ್ಯಾಂಕಿಂಗ್ ರಂಗಕ್ಕೆ ಸವಾಲಾದ ನಾನಾ ಸ್ಪರ್ಧೆಗಳು. ಉದಾರೀಕರಣ, ವಿಶ್ವ ವಾಣಿಜ್ಯೀಕರಣ, ವಿದೇಶಿ ಬ್ಯಾಂಕುಗಳ ಆಗಮನ-ಸ್ಪರ್ಧೆ, ಆರ್ಥಿಕ ಕ್ಷೇತ್ರದ ಸತತ ಹಿನ್ನಡೆ, ಪ್ರಾಕೃತಿಕ ವೈಪರೀತ್ಯಗಳಿಂದಾಗಿ ವಾಣಿಜ್ಯ ಕ್ಷೇತ್ರಕ್ಕಾದ ಸರಿಪಡಿಸಲಾಗದ ದುರಂತಗಳ ಹಿನ್ನೆಲೆ, ಬ್ಯಾಂಕ್ ವ್ಯವಹಾರಕ್ಕೆ ಪೆಡಂಭೂತವಾಗಿ ಇದಿರಾದ ಅನುತ್ಪಾದಕ ಸಾಲದ ಹೊರೆಗಳು ಹೀಗೆ ಒಂದೆರಡಲ್ಲ. ಅವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ, ಅಹರ್ನಿಶಿ ದುಡಿದು ಕೇವಲ ನಾಲ್ಕು ವರ್ಷಗಳಲ್ಲಿ ಅನಂತಕೃಷ್ಣ ಕರ್ನಾಟಕ ಬ್ಯಾಂಕನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದರು ಕರ್ನಾಟಕ ಬ್ಯಾಂಕು, ಅದರ ಪರಂಪರೆಗೆ ಅನುಗುಣವಾಗಿ ಮುನ್ನಡೆಯುತ್ತಿದೆ. ಆಧುನಿಕ ಬ್ಯಾಂಕಿಂಗ್ನತ್ತ ಸಂಪೂರ್ಣ ಹೊರಳಿದರೂ ತನ್ನ ಪರಂಪರಾಗತ ಶ್ರದ್ಧೆ, ಶ್ರೀಸಾಮಾನ್ಯರ ನಿಕಟ ಸಂಪರ್ಕವನ್ನು ಎಂದಿಗೂ ತ್ಯಜಿಸಲಿಲ್ಲ. ಒಂದು ಪರಂಪರಾಗತ ಬ್ಯಾಂಕು, ಎಲ್ಲಾ ಮೈ ಚಳಿ ಬಿಟ್ಟು, ಕಾಲ ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಗೆದ್ದು ಹೊಸತಲೆಮಾರಿನ ಬ್ಯಾಂಕುಗಳೊಂದಿಗೆ ಸ್ಪರ್ಧಿಸುವಂತಹ ಮಟ್ಟ ಮುಟ್ಟಲು ಹಳೆ ತತ್ತ್ವ ಹೊಸ ಸತ್ವಗಳ ಸಮ್ಮಿಲನದಿಂದ ಸಾಧ್ಯವಾಯ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್ನ ನಿಕಟ ಪರಿಚಯ, ನಿಡುಗಾಲದ ಅಧ್ಯಯನ, ಸಂಶೋಧನೆ, ನಿರಂತರ ಸಂಚಾರದ ಫಲಶ್ರುತಿಯಾಗಿ ಕರ್ನಾಟಕ ಬ್ಯಾಂಕಿಗೆ ಹೊಸ ಸ್ವರೂಪ ದೊರೆಯಿತು.

ದಾಖಲೆಗಳು

ಬದಲಾಯಿಸಿ

ಕರ್ನಾಟಕ ಬ್ಯಾಂಕ್ ಅನೇಕ ದಾಖಲೆಗಳನ್ನು ದಾಖಲಿಸಿದೆ. ಬ್ಯಾಂಕಿನ ವ್ಯವಹಾರ ದುಪ್ಪಟ್ಟುಗೊಂಡಿದ್ದು 7,625 ಕೋಟಿ ರೂಪಾಯಿಗಳಿಂದ 14,000 ಕೋಟಿ ರೂಪಾಯಿಗೆ ಏರಿದ್ದು, ನಿವ್ವಳ ಲಾಭ ಮೂರು ಪಟ್ಟು ಹೆಚ್ಚುವರಿಗೊಂಡಿದೆ. 4 ವರ್ಷಗಳ ಹಿಂದೆ 40.71 ಕೋಟಿ ರೂ.ಗಳಷ್ಟಿದ್ದ ಲಾಭ 2004 ಮಾರ್ಚ್ ಅಂತ್ಯಕ್ಕೆ ರೂ 133.17 ಕೋಟಿಗೆ ಏರಿತು. 23 ಹೊಸ ಶಾಖೆಗಳು ಸ್ಥಾಪಿಸಲ್ಪಟ್ಟು ಶಾಖಾ ಸಂಖ್ಯೆ 370ಕ್ಕೆ ಏರಿದೆ. 225 ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು ಶೇ. 87ರಷ್ಟು ವ್ಯವಹಾರವನ್ನು ಇದರ ವ್ಯಾಪ್ತಿಗೆ ತರಲಾಗಿದೆ.

ಕರ್ನಾಟಕ ಬ್ಯಾಂಕ್ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಈ ವ್ಯವಸ್ಥೆಯನ್ನು ಅಳವಡಿಸಿದ ಹಿಂದಿನ ಪೀಳಿಗೆಯ ಖಾಸಗಿರಂಗದ ಪ್ರಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಬ್ಯಾಂಕು ಎ.ಟಿ.ಎಂ. ಸೇವೆ ಪ್ರಾರಂಭಿಸಿದುದಲ್ಲದೇ ದೇಶ, ವಿದೇಶಗಳ ಪ್ರತಿಷ್ಠಿತ ವಿಮಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿಮಾ ಸೇವೆಗಳನ್ನು ತನ್ನ ಗ್ರಾಹಕರಿಗೆ ವಿಸ್ತರಿಸಿದೆ. ಅನೇಕ ಗ್ರಾಹಕ ಸ್ನೇಹಿ ಸಾಲ ಯೋಜನೆಗಳನ್ನು ಅತ್ಯಂತ ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಬ್ಯಾಂಕು ನೀಡುತ್ತಿದೆ.

ಈಗ ಈ ಬ್ಯಾಂಕು ಮಂಗಳೂರು ನಗರದ ಕಂಕನಾಡಿಯ ಬಳಿ 1,25,000 ಘನ ಅಡಿ ವಿಸ್ತಾರದ ಬಹುಮಹಡಿಯ ಸಂಪೂರ್ಣ ಹವಾನಿಯಂತ್ರಿತ ಸ್ವಂತ ಕಾರ್ಪೋರೇಟ್ ಕಚೇರಿಗೆ ಸ್ಥಳಾಂತರಗೊಂಡು ನಗರದ ಅತ್ಯಾಕರ್ಷಕ ಸೌಧಗಳಲ್ಲಿ ಒಂದೆನ್ನುವ ಕೀರ್ತಿಗೆ ಪಾತ್ರವಾಯ್ತು.

ಬ್ಯಾಂಕು 2002ರಲ್ಲಿ ಅಂಗೀಕರಿಸಿದ ಧ್ಯೇಯ ವಾಕ್ಯ ಹೀಗಿದೆ. “ತಾಂತ್ರಿಕ ಜ್ಞಾನ ಸಂಪನ್ನ, ಗ್ರಾಹಕ ಕೇಂದ್ರೀಕೃತ, ಅತ್ಯುತ್ತಮ ಸಾಂಸ್ಥಿಕ ಆಡಳಿತ ಹೊಂದಿದ, ನೈತಿಕ ಮೌಲ್ಯಗಳಿಂದ ಪ್ರೇರಿತ. ರಾಷ್ಟ್ರ ವ್ಯಾಪಿ ಪ್ರಗತಿಶೀಲ ಬ್ಯಾಂಕ್ ಎನಿಸುವುದೇ ನಮ್ಮ ಪರಮ ಧ್ಯೇಯ”. ಈ ಧ್ಯೇಯ ವಾಕ್ಯದ ಪಥದಲ್ಲಿಯೇ ಬ್ಯಾಂಕು ನಡೆದಿದೆ.

ಹೊಸ ತಲೆಮಾರಿನ ವಿದೇಶಿ ಬ್ಯಾಂಕುಗಳು ಭಾರತೀಯ ನೆಲದ ಮೇಲೆ ಕಾರ್ಯವೆಸಗತೊಡಗಿದಾಗ, ವಿಶ್ವಮಾರುಕಟ್ಟೆ, ಅಂತಾರಾಷ್ಟ್ರೀಯ ವೇದಿಕೆ ಬ್ಯಾಂಕಿಂಗ್ ರಂಗಕ್ಕೆ ಉಪಲಬ್ಧವಾದಾಗ, ಭಾರತೀಯ ಪರಂಪರಾಗತ ಬ್ಯಾಂಕುಗಳು ಹೊಸ ಪಂಥಾಹ್ವಾನಗಳನ್ನು ಎದುರಿಸಬೇಕಾಯಿತು. ರಾಷ್ಟ್ರೀಯ - ಅಂತಾರಾಷ್ಟ್ರೀಯ ಆರ್ಥಿಕ ರಂಗ ಸತತ ಹಿನ್ನೆಡೆ ಕಂಡಿದ್ದರಿಂದಲೂ ಬ್ಯಾಂಕಿಂಗ್ ಉದ್ಯಮವು ದಾರುಣವಾಗಿ ಬಾಧೆಗೊಳಗಾಗಿ ಪ್ರತಿ ಆರ್ಥಿಕ ವರ್ಷಾಂತ್ಯಕ್ಕೂ ಅಗ್ನಿ ಪರೀಕ್ಷೆಗೆ ಒಳಗಾಗಬೇಕಾದ ಸ್ಥಿತಿ ಒದಗಿತು.

ದಿನೇ ದಿನೇ ಬ್ಯಾಂಕಿಂಗ್ ಕ್ಷೇತ್ರವು ಬಹುಮುಖೀ ಹಾಗೂ ಬಹುರೂಪಿ ಸವಾಲುಗಳನ್ನು ಎದುರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆ, ಅತ್ಯಾಧುನಿಕ ತಂತ್ರಜ್ಞಾನದ ನಿರೀಕ್ಷೆ, ಬದಲಾಗುತ್ತಿರುವ ಗ್ರಾಹಕರ ಆವಶ್ಯಕತೆಗಳು, ಜತೆಗೆ ಭಾರತದಲ್ಲಿ ಬ್ಯಾಂಕಿಂಗ್ ಉದ್ಯಮವನ್ನು ನಿರ್ವಹಿಸುವ ರೀತಿಗಳಲ್ಲಿ ಉಂಟಾಗಿರುವ ಸಮಗ್ರ ಬದಲಾವಣೆ ಮುಂತಾದ ಎಲ್ಲಾ ಸವಾಲುಗಳನ್ನು ಜಾಗರೂಕತೆಯಿಂದ ಮತ್ತು ಸ್ವಸಾಮಥರ್ಯ್‌ದಿಂದ ಎದುರಿಸಿಕೊಂಡು ಕರ್ನಾಟಕ ಬ್ಯಾಂಕ್ ಇಂದು ಯಶೋಗಾಥೆ ಹಾಡಿದೆ.

ಪ್ರಸಕ್ತ ಸ್ಥಿತಿಗತಿ

ಬದಲಾಯಿಸಿ

ಈಗ ಕರ್ನಾಟಕ ಬ್ಯಾಂಕಿನಲ್ಲಿ ಅತ್ಯುನ್ನತ ಮಟ್ಟದ ಕಾರ್ಪೋರೇಟ್ ಆಡಳಿತ. ಇಲ್ಲಿ ಅತ್ಯಂತ ಪಾರದರ್ಶಕತೆಗೆ ಆದ್ಯ ಸ್ಥಾನ. ಬ್ಯಾಂಕು ಸಮಗ್ರವಾಗಿ ಎದುರಿಸುವ ಸಂಭಾವ್ಯ ಅಪಾಯಗಳನ್ನು ಗುರುತಿಸಲು, ನಿಗಾವಹಿಸಲು ಮತ್ತು ನಿಭಾಯಿಸಲು ಜತೆಗೆ ತನ್ನ ಆಯವ್ಯಯಗಳ ಮೇಲೆ ಇವುಗಳು ಬೀರುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆಗೊಳಿಸಲು ಪರ್ಯಾಪ್ತ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಸಂಕುಚಿತಗೊಳ್ಳುತ್ತಿರುವ ಬಡ್ಡಿಯ ವಿಸ್ತಾರ ಮತ್ತು ಕ್ಷಿಪ್ರ ಬದಲಾವಣೆಗೊಳ್ಳುತ್ತಿರುವ ಭವಿಷ್ಯತ್ತಿನ ಬಗ್ಗೆ ಬ್ಯಾಂಕು ಸಂಪೂರ್ಣ ಅರಿವು ಹೊಂದಿದ್ದು, ಸೇವಾವಿಧಾನಗಳಲ್ಲಿ ಹೆಚ್ಚುತ್ತಿರುವ ‘ವೇಗ’ವನ್ನು ತನ್ನಲ್ಲಿ ಅಳವಡಿಸಿಕೊಂಡಿತು. ಕೋರ್ ಬ್ಯಾಂಕಿಂಗ್ ಸೆಲ್ಯೂಶನ್ - ‘ಫಿನ್ಯಾಕಲ್’, ಕಂಪ್ಯುಟರ್ ತಂತ್ರಜ್ಞಾನದ ಅಳವಳಿಕೆಯ ಬಳಿಕ ಬ್ಯಾಂಕಿನ 370 ಶಾಖೆಗಳಲ್ಲಿ 225 ಶಾಖೆಗಳು ಪಿನ್ಯಾಕಲ್ ಜಾಲಕ್ಕೆ ಸೇರಿ ಅತ್ಯಂತ ತ್ವರಿತ ಸೇವೆಯೊಂದಿಗೆ ಗ್ರಾಹಕರಿಗೆ ಸೇವೆ ನೀಡುತ್ತಿದೆ. “ನಿಮ್ಮ ಕುಟುಂಬದ ಬ್ಯಾಂಕ್ - ಭಾರತದಾದ್ಯಂತ” ಎನ್ನುವುದು ಬ್ಯಾಂಕಿನ ಧೋರಣಾ ಘೋಷಣೆಯೂ ಆಗಿದೆ. ಇಂದು ‘ವೇಗ’ ಅನ್ನುವುದು ನಿರ್ವಹಣೆಯ ಗಾತ್ರ ಮತ್ತು ವಿಸ್ತಾರಕ್ಕಿಂತಲೂ ಹೆಚ್ಚು ಮಹತ್ವಪೂರ್ಣ ಅಂಶವಾಗುತ್ತಾ ಇದೆ. “ಸಾಮಥರ್ಯ್‌ವುಳ್ಳವನು ಉಳಿಯುತ್ತಾನೆ” ಎನ್ನುವ ಬದಲಾಗಿ “ವೇಗೋತ್ಕರ್ಷವುಳ್ಳವನು ಉಳಿಯುತ್ತಾನೆ” ಅನ್ನುವುದು ಇಂದಿನ ಕಾಲಕ್ಕೆ ಪ್ರಸ್ತುತವಾದ ಧ್ಯೇಯ ವಾಕ್ಯ ಎಂದು ಕರ್ನಾಟಕ ಬ್ಯಾಂಕು ಭಾವಿಸಿದೆ. ಬ್ಯಾಂಕಿನ ಕೇಂದ್ರೀಕೃತ ಬ್ಯಾಂಕಿಂಗ್ ಪ್ರಕ್ರಿಯೆ ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಮನ ಸೆಳೆದಿವೆ. ‘ಪಿನ್ಯಾಕಲ್’ನ ಯಶಸ್ಸು ಅನೇಕ ರಾಷ್ಟ್ರೀಯ ಬ್ಯಾಂಕುಗಳ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕುಗಳ ಅಧ್ಯಯನ ತಂಡಕ್ಕೆ ಸಂಶೋಧನಾ ವಿಷಯವಾಗಿದೆ. ಅನೇಕ ಅಧ್ಯಯನ ತಂಡಗಳು ಬ್ಯಾಂಕ್ ಪ್ರಧಾನ ಕಚೇರಿಯನ್ನು ಸಂದರ್ಶಿಸಿವೆ. ಸೆಪ್ಟೆಂಬರ್ ೨೦೧೪ರ ವೇಳೆಗೆ ಬ್ಯಾಂಕು ೬೧೮ ಶಾಖೆಗಳನ್ನು ಹಾಗೂ ೭೫೮ ಎ.ಟಿ.ಎಂ.ಗಳನ್ನು ಹೊಂದಿದೆ.೮.೪ಮಿಲಿಯ ಗ್ರಾಹಕರು ಬ್ಯಾಂಕಿನ ಸೇವೆಯನ್ನು ಪಡೆಯುತ್ತಿದ್ದಾರೆ.೭೩,೯೧೪ ಕೋಟಿ ರುಪಾಯಿಗಳ ವ್ಯವಹಾರ ನಡೆಸಿದೆ.[]

ಇದನ್ನೂ ನೋಡಿ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ [೧] Archived 2023-05-28 ವೇಬ್ಯಾಕ್ ಮೆಷಿನ್ ನಲ್ಲಿ. karnatakabank.com
  2. "InvestorsRelations". Archived from the original on 2015-12-05. Retrieved 2014-12-12.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: