ಕರಿಬಂಟ : ಕನ್ನಡ ಜನಪದ ಗದ್ಯ ಕಥೆಗಳಲ್ಲಿ, ಲಾವಣಿಗಳಲ್ಲಿ ಮತ್ತು ಬಯಲಾಟಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಕಥೆ. ಯಕ್ಷಗಾನಗಳಲ್ಲಿ ಸಾಮಾನ್ಯವಾಗಿ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದ ಆರಿಸಿದ ಪೌರಾಣಿಕ ಕಥೆಗಳೇ ಹೆಚ್ಚಾಗಿದ್ದರೂ ನಾಡಿನ ವೀರರ ಕಥೆಗಳೂ ಇವೆ. ಇಂಥ ಕಥೆಗಳಲ್ಲಿ ಕರಿಬಂಟನ ಕಾಳಗ ಪ್ರಖ್ಯಾತವಾಗಿದೆ. ಕರಿರಾಜ ಒಬ್ಬ ಸುಂದರ, ಸಾಹಸಿ, ಮೇಲಾಗಿ ವೀರ. ದುರ್ಗಮ ಪ್ರದೇಶಮೊಂದರಲ್ಲಿ ವಾಸವಾಗಿದ್ದ ಮಾವ,ಹೆಣ್ಣು ಕೊಡುತ್ತೇನೆಂದು ಆಹ್ವಾನಿಸಿದಾಗ ಇದು ಅವನಿಗೆ ತನ್ನ ಪರಾಕ್ರಮವನ್ನು ಪ್ರಶ್ನಿಸುವ ಆಹ್ವಾನವಾಗುತ್ತದೆ. ಕರಿರಾಜ ಹೆಣ್ಣು ವರಿಸಲು ಪ್ರಯಾಣ ಹೊರಡುತ್ತಾನೆ. ಬಹಳ ದೂರ ಹೋದ ಅನಂತರ ಒಂದು ಕೆರೆಯ ಏರಿಯ ಮೇಲೆ ಆಯಾಸ ಪರಿಹಾರಕ್ಕಾಗಿ ಕೂತಿದ್ದಾಗ ಅವನ ಸೌಂದರ್ಯವನ್ನು ಕಂಡು ತೊಂಡನೂರು (ತೊಣ್ಣೂರು) ರಾಕ್ಷಸಿಯ ಮಗಳಾದ ಪುಂಡರೀಕಾಕ್ಷಿಯ ಗೌಡೀರು (ಸೇವಕಿಯರು) ಮೂbsರ್ೆ ಹೋಗುವರು. ಅನಂತರ ಚೇತರಿಸಿಕೊಂಡು ಬಂದು ತಮ್ಮ ಒಡತಿಗೆ ತಾವು ಕಂಡ ಸುಂದರನ ಸುದ್ದಿ ಮುಟ್ಟಿಸುವರು. ಕರಿರಾಜನನ್ನು ನೋಡಲು ಬಂದ ಪುಂಡರೀಕಾಕ್ಷಿ ಅವನ ರೂಪಿಗೆ ಮನಸೋತು ಮೂbsರ್ೆ ಹೋಗುವಳು. ಅನಂತರ ಚೇತರಿಸಿಕೊಂಡು ಕರಿರಾಜನನ್ನು ಒಲಿಸಿ ಮನೆಗೆ ಕರೆದೊಯ್ಯುವಳು. ತಾಯಿ ರಕ್ಕಸಿಯಿಂದ ತನ್ನ ಪ್ರಿಯತಮನನ್ನು ಪಾರು ಮಾಡಲು ಪ್ರಯತ್ನಿಸುವಳು. ತನ್ನ ತಮ್ಮ ಬೊಮ್ಮಣ್ಣ ರಾಕ್ಷಸನಿಗೆ ಮಗಳನ್ನು ಕೊಟ್ಟು ಮದುವೆ ಮಾಡುವ ಹಂಚಿಕೆಯಲ್ಲಿದ್ದ ತೊಂಡನೂರು ರಾಕ್ಷಸಿ ಕೋಪವನ್ನು ತಾಳಿ ಮಗಳನ್ನು ವಂಚಿಸಿ ಕರಿಬಂಟನನ್ನು ಕೊಲ್ಲಲು ಪ್ರಯತ್ನಿಸುವಳು. ಆದರೆ ಪುಂಡರೀಕಾಕ್ಷಿಯ ತಂತ್ರದಿಂದ ರಾಕ್ಷಸಿಯ ತಮ್ಮ ಬೊಮ್ಮಣ್ಣ ತನ್ನ ಅಕ್ಕನಿಂದಲೇ ಹತನಾಗುವನು. ತಮ್ಮನನ್ನು ತನ್ನ ಕೈಯಿಂದಲೇ ಕೊಂದ ರಾಕ್ಷಸಿ ತಲೆ ಮರೆಸಿಕೊಂಡು ಹೊರ ಬಿದ್ದ ಕರಿಬಂಟನನ್ನು ಅಟ್ಟಿಸಿಕೊಂಡು ಹೋಗುವಳು. ತನ್ನ ಕತ್ತಿಯನ್ನು ಬಾವಿಯ ಕಟ್ಟೆಯ ಮೇಲಿಟ್ಟು ನೀರು ಕುಡಿಯಲು ಇಳಿದಿದ್ದ ಕರಿಬಂಟ ರಾಕ್ಷಸಿ ಬೆನ್ನಟ್ಟಿ ಬರುವುದನ್ನು ಕಂಡು ಕತ್ತಿಯನ್ನು ಬಿಟ್ಟು ಓಡಿಹೋಗುವನು. ರಾಕ್ಷಸಿ ಕತ್ತಿಯನ್ನು ತೆಗೆದುಕೊಂಡು ಅದನ್ನು ಒಂದು ಮಗುವನ್ನಾಗಿ ಮಾಡಿಕೊಂಡು ಬಾಣಂತಿಯಂತೆ ಕರಿಬಂಟನನ್ನು ಹಿಂಬಾಲಿಸಿ ಒಂದೆಡೆ ಸೇರಿದ್ದ ಏಳೂರ ಗೌಡರಿಗೆ ತನ್ನ ಗಂಡ ಬಾಣಂತಿಯನ್ನು ಬಿಟ್ಟು ಹೋಗುತ್ತಿದ್ದಾನೆಂದು ನ್ಯಾಯವನ್ನು ಒಪ್ಪಿಸುವಳು. ಕರಿಬಂಟ ನ್ಯಾಯದವರಿಗೆ ತನ್ನ ನಿಜಸ್ಥಿತಿಯನ್ನು ಹೇಳಿ, ಪರಿಪರಿಯಾಗಿ ಬೇಡಿಕೊಂಡರೂ ಅವನ ಮಾತನ್ನು ನಂಬದ ಗೌಡರು ಅವರಿಬ್ಬರನ್ನೂ ಆ ರಾತ್ರಿ ಊರ ಚಾವಡಿಯಲ್ಲಿ ಕೂಡುವರು. ನಡುರಾತ್ರಿಯಲ್ಲಿ ರಾಕ್ಷಸಿ ಕರಿಬಂಟನನ್ನು ಕೊಂದು ಓಡಿಹೋಗುವಳು. ಹೀಗೆ ಮಡಿದ ಕರಿಬಂಟನಿಗಾಗಿ ಪುಂಡರೀಕಾಕ್ಷಿ ಮತ್ತು ಏಳೂರ ಗೌಡರು ವ್ಯಥೆಪಟ್ಟು ಅಗ್ನಿಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದಾಗ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಸತ್ತವನನ್ನು ಬದುಕಿಸಿ ಹರಸುವರು. ಕೊನೆಗೆ ಕರಿಬಂಟ ತನ್ನ ಮಾವನ ಊರಿಗೆ ಹೋಗಿ ಮಾವನ ಮಗಳನ್ನು ಮದುವೆಯಾಗುವನು. ಕಥೆಯ ಬಹುಭಾಗ ಒಂದೆಡೆ ರಾಕ್ಷಸಿ ಹಾಗೂ ಅವಳ ತಮ್ಮ ಬೊಮ್ಮ, ಇನ್ನೊಂದೆಡೆ ಕರಿಬಂಟ ಮತ್ತು ರಾಕ್ಷಸಿಯ ಮಗಳಾದ ಪುಂಡರೀಕಾಕ್ಷಿ -ಈ ಎರಡು ಪಕ್ಷಗಳಿಗೂ ನಡೆಯುವ ವಾದ, ಜಗಳ, ಹೋರಾಟವೇ ಆಗಿದೆ. ಒಂದು ಸಾಮಾನ್ಯ ಕಥೆ ಯಕ್ಷಗಾನವಾಗಿರುವುದು ಇಲ್ಲಿಯ ವೈಶಿಷ್ಟ್ಯ. ಕರಿಬಂಟನ ಕಥೆಯನ್ನು ಹೇಳುವ ಯಕ್ಷಗಾನಗಳು ಅನೇಕವಿದ್ದು ಇವುಗಳಲ್ಲಿ ಈ ಕಥೆಯನ್ನು ಶಿವ ಪಾರ್ವತಿಗೆ ಹೇಳಿದಂತೆ ಹೇಳಿದೆ. ಅತಿಮಾನುಷ ಘಟನೆಗಳು ಬಂದರೂ ಕಥೆಯ ಓಟ ಕುಂಟದೆ ಮುಂದುವರಿಯುತ್ತದೆ. ಯಕ್ಷಗಾನ ಪ್ರೇಮಿಗಳು ಇದನ್ನು ಮೆಚ್ಚುವುದು ಬಹಳ. ಯಕ್ಷಗಾನಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಕಂಡುಬರುತ್ತವೆ. ವೀರನಗೆರೆ ಪುಟ್ಟಣ್ಣ ವಿರಚಿತ ಕೃತಿಯಲ್ಲಿ ಹಳೆಯಬೀಡಿನ ರಾಜಕುಮಾರಿ ಭುವನಮೋಹಿನಿಯನ್ನು ಸುಮತಿ ನಗರದ ರಾಜನ ಮಗ ಕರಿಬಂಟ ಮದುವೆಯಾಗುತ್ತಾನೆ. ಭಾಳಾಕ್ಷ ವಿರಚಿತ ಯಕ್ಷಗಾನದಲ್ಲಿ ವೀರಬಲ್ಲಾಳನ ಮಗಳನ್ನು ಕರಿಬಂಟ ಮದುವೆಯಾಗುತ್ತಾನೆ. ಇವನ ತಂದೆತಾಯಿಗಳು ಮಾರಭೂಪ, ಬಲವಂತಾದೇವಿ. ಜೀಶಂಪ ಅವರು ಪ್ರಕಟಿಸಿರುವ ಹೆಳವರ ಕಾವ್ಯಗಳು ಎಂಬ ಸಂಕಲನದಲ್ಲಿ ಬರುವ ಮಲ್ಲರಾಜ ಎಂಬ ಲಾವಣಿ ಕರಿಬಂಟನ ಕಥೆಯೇ ಆಗಿದೆ. ಇಲ್ಲಿ ಕರಿಬಂಟನ ತಂದೆ ಮಲ್ಲರಾಜ; ಇವನಿಗೆ ದುಂಡೋಜಿ, ಮಲ್ಲೋಜಿ ಎಂಬ ಇಬ್ಬರು ಹೆಂಡತಿಯರು. ಇವರಲ್ಲಿ ದುಂಡೋಜಿಯ ಮಗ ಕರಿಬಂಟ. ಇಲ್ಲಿಯೂ ಈತ ಒಬ್ಬ ರಾಜಕುಮಾರಿಯನ್ನು ಮದುವೆಯಾಗುತ್ತಾನೆ. ಕಾಳೇಗೌಡ ನಾಗವಾರ ಅವರ ಬಂiÀÄಲು ಸೀಮೆಯ ಲಾವಣಿಗಳು ಎಂಬ ಸಂಕಲನದಲ್ಲಿ ಕರಿರಾಯಬಂಟ 1 ಎಂಬ ಲಾವಣಿಯಲ್ಲಿ ಕರಿಬಂಟನ ತಂದೆ ತಾಯಿಗಳ ಹೆಸರಿಲ್ಲ, ಆದರೆ ಮಾವ ತಿಮ್ಮರಾಜು ಹೆಣ್ಣು ಕೊಡುವ ಪ್ರಸ್ತಾಪವಿದೆ. ಕರಿರಾಯಬಂಟ 2 ಎಂಬ ಲಾವಣಿಯಲ್ಲಿ ಕರಿಬಂಟನ ತಂದೆ ತಾಯಿಗಳು ಬಾಲರಾಯ ಮತ್ತು ಮಾರ್ಬಲ ದೇವಿ. ಸೋದರಮಾವ ಹೆಣ್ಣು ಕೊಡುವ ಸುದ್ದಿ ಇದೆ. ಈ ಮೇಲ್ಕಂಡ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಬಿಟ್ಟರೆ ಮೂಲಕಥೆಯ ವಸ್ತು ಮತ್ತು ಆಶಯ ಯಕ್ಷಗಾನಗಳಲ್ಲೂ ಲಾವಣಿಗಳಲ್ಲೂ ಒಂದೇ ಆಗಿರುವುದು ಕಂಡುಬರುತ್ತದೆ. ರಾಕ್ಷಸಿ ಮತ್ತು ಅವಳ ಮಗಳ ಹೆಸರು ಪುಂಡುಲಕ್ಷ್ಮಿ, ಪುಂಡಲಕಾಂತೆ ಎಂದು ಬಯಲುಸೀಮೆ ಲಾವಣಿಗಳಲ್ಲಿಯೂ ಪುಂಡರೀಕಾಕ್ಷಿ ಎಂದು ಹೆಳವರ ಕಾವ್ಯ ಹಾಗೂ ಯಕ್ಷಗಾನ ಕೃತಿಗಳಲ್ಲಿಯೂ ಕಂಡುಬರುತ್ತದೆ. ಸಿದ್ಧೇಶನ ಯಕ್ಷಗಾನದಲ್ಲಿ ಕರಿರಾಜ ಕಾಶ್ಮೀರ ದೇಶದ, ಧಾರಾಪುರದ ರಾಜ ಮಾರಭೂಪನ ಮಗ ಎಂದು ಹೇಳಿದೆ.[೧]

ಉಲ್ಲೇಖಗಳು ಬದಲಾಯಿಸಿ

  1. http://www.kemmannu.com/index.php?action=kannada&type=286
"https://kn.wikipedia.org/w/index.php?title=ಕರಿಬಂಟ&oldid=754604" ಇಂದ ಪಡೆಯಲ್ಪಟ್ಟಿದೆ