ಕಮಲಾಪುರ
ಕಮಲಾಪುರವಿಜಯನಗರದ ವೈಭವದ ಕಾಲದಲ್ಲಿ ಆ ರಾಜಧಾನಿಯ ಒಂದು ವಿಸ್ತರಣ. ಈಗ ಇದು ಪ್ರತ್ಯೇಕ ಸ್ಥಳ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿಗೆ ಸೇರಿದ್ದು. ಹೊಸಪೇಟೆಯಿಂದ 13 ಕಿಮೀ ದೂರದಲ್ಲಿದೆ.
ಕಮಲಾಪುರ | |
---|---|
ಪಟ್ಟಣ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಬಳ್ಳಾರಿ |
ಭಾಷೆಗಳು | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 583221 |
Telephone code | 08472 |
ಚರಿತ್ರೆಸಂಪಾದಿಸಿ
ಇದು ರಾಣಿವಾಸಕ್ಕೆಂದು ಚಿಕ್ಕದಾಗಿಯೂ ಚೊಕ್ಕವಾಗಿಯೂ ಸಮಸ್ತ ಸೌಲಭ್ಯಗಳನ್ನೊಳಗೊಂಡು ರಚಿತವಾಯಿತು. ರಾಣಿಯ ಹೆಸರೇ (ಕಮಲಾದೇವಿ) ಈ ಊರಿಗೂ ಬಂತೆಂದು ಹೇಳಲಾಗಿದೆ. ಸ್ವಲ್ಪ ತಗ್ಗಿನ ಪ್ರದೇಶದಲ್ಲಿರುವ ಈ ಊರಿನ ಮುಂಭಾಗದಲ್ಲಿ 476 ಎಕರೆ ಒಳ ಆಯ ಹೊಂದಿರುವ ಸುಂದರವಾದ ಕೆರೆ ಇದೆ. ಅಕ್ಕಪಕ್ಕ ಕಲ್ಲುಗುಡ್ಡಗಳೇ ಹೆಚ್ಚು. ಕಮಲಾಪುರದ 5000 ಮನೆಗಳೂ ಸುತ್ತುಗಟ್ಟಿದ ಕೋಟೆಯ ಒಳಗಡೆಯೇ ಇವೆ. ಊರ ಸುತ್ತಳತೆ 6.4 ಕಿಮೀ. ಜನಸಂಖ್ಯೆ 25,552 (2011) ಎಂದು ಅಂದಾಜು.
ಬೇಸಾಯಸಂಪಾದಿಸಿ
ಇಲ್ಲಿಯ ಕೆಂಪು ಮಿಶ್ರಿತ ಮಣ್ಣುನೆಲ ಫಲವತ್ತು.ಕಬ್ಬನ್ನು ಯಥೇಚ್ಛವಾಗಿ ಬೆಳೆಸುತ್ತಾರೆ. ಬತ್ತ ಮತ್ತು ಬಾಳೆ ಇತರ ಬೆಳೆಗಳು. ನೀರೆತ್ತುವ ಯಂತ್ರದ ಸಹಾಯದಿಂದಲೂ ಕೃಷಿಕಾರ್ಯ ನಡೆಯುತ್ತಿದೆ. ಹೊಸಪೇಟೆಯ ಬಳಿ ನಿರ್ಮಿಸಿರುವ ತುಂಗಭದ್ರಾ ಅಣೆಕಟ್ಟಿನಿಂದ ದೊರಕುವ ಸದಾಕಾಲದ ನೀರಿನ ಸಹಾಯದಿಂದ ಊರಿಗೆ ಹೆಚ್ಚು ಪ್ರಯೋಜನವಾಗಿದೆ.
ಕೈಗಾರಿಕೆಸಂಪಾದಿಸಿ
ಕಮಲಾಪುರ ಕೈಗಾರಿಕೆಯಲ್ಲೂ ತಕ್ಕಮಟ್ಟಿಗೆ ಮುಂದುವರಿದಿದೆ. ಊರಿಗೆ ಸಮೀಪದಲ್ಲಿ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಆ ಸ್ಥಳದಲ್ಲಿ ಕಾರ್ಮಿಕರೂ ಸೇರಿದಂತೆ 3,000 ಜನರಿದ್ದಾರೆ. ಇಲ್ಲಿ ನೀರಾವರಿ ಸೌಲಭ್ಯವಿರುವುದರಿಂದ ಸು. 2,000 ಎಕರೆಗಳಲ್ಲಿ ಕಬ್ಬು ಯಥೇಚ್ಛವಾಗಿ ಬೆಳೆದು ಬೆಲ್ಲ ತಯಾರಿಸಲಾಗುತ್ತಿದೆ. ಹತ್ತಿರದ ಹೊಸಪೇಟೆಯ ಸಕ್ಕರೆ ಕಾರ್ಖಾನೆಗೂ ಕಬ್ಬು ಸಾಗುತ್ತದೆ.
ಜನ ಜೀವನಸಂಪಾದಿಸಿ
ಜನರ ಉಡಿಗೆ-ತೊಡಿಗೆ ಅತ್ಯಂತ ಸರಳ. ಭಾಷೆ ಕನ್ನಡ, ತೆಲುಗೂ ಬಳಕೆಯಲ್ಲಿ ಉಂಟು.
ದೇವಾಲಯಗಳುಸಂಪಾದಿಸಿ
ಚಾರಿತ್ರಿಕವಾಗಿ ಈ ಊರಿಗೆ ಪ್ರಾಮುಖ್ಯವಿದೆ. ಅರಸರ ಕಾಲದ ಅನೇಕ ಭವ್ಯ ದೇವಾಲಯಗಳು ಇಲ್ಲಿವೆ. ಮೊದಲನೆಯದಾಗಿ ಶ್ರೀನಗರೇಶ್ವರ ದೇವಾಲಯ, ವಿಜಯನಗರ ರಾಜ್ಯದ ಲಾಂಛನವಾದ ಗಂಡಭೇರುಂಡ ಪಕ್ಷಿಯನ್ನು ಕೋಟೆಯ ಪ್ರಮುಖ ದ್ವಾರದ ಮೇಲೆ ಕಡೆದಿದ್ದಾರೆ. ಈ ದೇವಾಲಯ ಬಹಳ ಪ್ರಸಿದ್ಧ. ವೈಶಾಖ ಮಾಸದಲ್ಲಿ ಇಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ಶ್ರೀ ಪಟ್ಟಾಭಿರಾಮ ದೇವಾಲಯವೂ ಪ್ರೇಕ್ಷಣೀಯ. ಕಂಪ್ಲಿಗೆ ಹೋಗುವ ದಾರಿಯಲ್ಲಿ ಒಂದು ಗುಡ್ಡದ ಮೇಲೆ ಮಾಲ್ಯವಂತ ರಘುನಾಥ ದೇವಸ್ಥಾನವಿದೆ.ಇಲ್ಲಿಯದು ಪ್ರೇಕ್ಷಣೀಯ ಸನ್ನಿವೇಶ. ಇಲ್ಲಿ ಶ್ರೀರಾಮದೇವರ ವಿಗ್ರಹದ ಸುಖಾಸೀನ ಭಂಗಿ ಆಕರ್ಷಕವಾಗಿದೆ. ಇನ್ನೂ ಅನೇಕ ಸಣ್ಣಪುಟ್ಟ ದೇವಾಲಯಗಳು ಇಲ್ಲುಂಟು. ಹಂಪಿ 4 ಕಿಮೀ ದೂರದಲ್ಲಿದೆ. ಈ ಊರಿನಿಂದ ಪುರ್ವಾಭಿಮುಖವಾಗಿ ಪಯಣ ಬೆಳೆಸಿದರೆ ಅಕ್ಕತಂಗಿಯರ ಕಲ್ಲು, ಮಹಾನವಮಿ ದಿಬ್ಬ, ರಾಣಿಯ ಸ್ನಾನಗೃಹ, ವಾಸಗೃಹ, ಪ್ರಸಿದ್ಧವಾದ ಕಮಲಮಹಲ್, ಅರಮನೆಯ ನಿವೇಶನ, ಹಜಾರರಾಮನ ಗುಡಿ-ಮುಂತಾದವು ಸಿಗುತ್ತವೆ. ಇಲ್ಲಿಂದ ಕೊಂಚ ದೂರ ಸಾಗಿದರೆ ಹಂಪಿಯ ಗತವೈಭವದ ಪುರ್ಣದರ್ಶನವಾಗುತ್ತದೆ. ವಿಜಯನಗರ ಕಾಲೇಜ್ ಉಂಟು. ಕಮಲಾಪುರನಗರ ಪಂಚಾಯಿತಿ ಕೇಂದ್ರ, ವಸ್ತುಸಂಗ್ರಹಾಲಯ ಮತ್ತು ಸಣ್ಣಪುಟ್ಟ ಗೃಹಕೈಗಾರಿಕೆಗಳೂ ವಿದ್ಯುತ್ ಮತ್ತು ರಕ್ಷಿತನೀರಿನ ಸರಬರಾಜು ವ್ಯವಸ್ಥೆಗಳೂ ಇವೆ.
ಬಾಹ್ಯ ಸಂಪರ್ಕಗಳುಸಂಪಾದಿಸಿ
- Municipality website Archived 2011-08-01 ವೇಬ್ಯಾಕ್ ಮೆಷಿನ್ ನಲ್ಲಿ.