ಕಥೆಯಾದಳು ಹುಡುಗಿ : ಯಶವಂತ ಚಿತ್ತಾಲ

ನವ್ಯಪಂಥದ ಲೇಖಕ ಮತ್ತು ಕಥೆಗಾರ, ಕಾದಂಬರಿಕಾರರಲ್ಲಿ ಒಬ್ಬರಾದ ಚಿತ್ತಾಲರು; ವಿಶಿಷ್ಟ ಕಥೆಗಳನ್ನು ಸೃಜಿಸುವುದರ ಮೂಲಕ ಪ್ರಮುಖ ಕಥೆಗಾರರ ಸಾಲಲ್ಲಿ ನಿಲ್ಲುತ್ತಾರೆ. ಯಶವಂತಚಿತ್ತಾಲರು 1928 ಆಗಸ್ಟ್ 3 ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲ್ಲೋಕಿನ ಹನೇಹಳ್ಳಿಯಲ್ಲಿ ಶ್ರೀಮತಿ ರುಕ್ಮಿಣಿ ಹಾಗೂ ವಿಠೋಬಾ ದಂಪತಿಗಳಿಗೆ ಜನಿಸಿದರು.

ಹನೇಹಳ್ಳಿ, ಕುಮಟಾ, ಧಾರವಾಡ, ಮುಂಬಯಿ ಮುಂತಾದೆಡೆ ಶಿಕ್ಷಣ ಪಡೆದ ಇವರು ಅಲ್ಲಿನ ವೈಶಿಷ್ಟ್ಯಗಳನ್ನು ತಮ್ಮ ಕಥೆಗಳಲ್ಲಿ ತಂದಿದ್ದಾರೆ. ಇವರ ಅಣ್ಣಂದಿರಾದ ಗಂಗಾಧರ ಚಿತ್ತಾಲರು; ಉತ್ತರ ಕನ್ನಡದ ಬುದ್ದಿಜೀವಿಗಳಾದ ಗೌರೀಶ ಕಾಯ್ಕಿಣಿಯವರು, ಗೆಳೆಯ ಶಾಂತಿನಾಥ ದೇಸಾಯಿಯವರು ಚಿತ್ತಾಲರ ಮೇಲೆ ಪ್ರಭಾವ ಬೀರಿದ್ದರು. ಆದರೆ ಅಂದಿನ ಸಾಹಿತ್ಯ ವಾತಾವರಣ ಚಿತ್ರಕಲೆಯಲ್ಲಿ ಪರಿಣಿತರಾದ ಚಿತ್ತಾಲರನ್ನು ಕತೆಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವಂತೆ ಮಾಡಿತು. ಇದಕ್ಕೆ ಸೂಕ್ತ ನಿದರ್ಶನ ಅವರ ‘ಕಥೆಯಾದಳು ಹುಡುಗಿ.’ ಚಿತ್ತಾಲರ ಕಥೆಗಳೆಲ್ಲವೂ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲೇ ಬೇರು ಬಿಡುತ್ತವೆ. ಈ ಹಳ್ಳಿಯಲ್ಲಿ ನಡೆದ, ನಡೆಯುವ, ಊಹಿಸಿದ, ಊಹಿಸುವ ವ್ಯಕ್ತಿಚಿತ್ರಗಳು, ಅಲ್ಲಿನ ತಾಪತ್ರಯ, ಸನ್ನಿವೇಶಗಳು ಇವರ ಕಥೆಗಳಲ್ಲಿನ ಜೀವಾಳವಾಗಿವೆ. ಚಿತ್ತಾಲರೇ ಹೇಳಿಕೊಳ್ಳುವಂತೆ ‘ಉತ್ತರ ಕನ್ನಡ ಜಿಲ್ಲೆ; ಅದರಲ್ಲೂ ಹನೇಹಳ್ಳಿ ಇವು ನನ್ನ ಮಟ್ಟಿಗೆ ಬರೀ ನೆಲದ ಹೆಸರುಗಳಲ್ಲ; ಬದಲು ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ನನ್ನ ಚೈತನ್ಯಕ್ಕೆ ನಿರಂತರವಾದ ಜೀವಸೆಲೆಯಾಗಿ ನಿಂತ ಮೂಲಭೂತವಾದ ಪ್ರೇರಕ ಶಕ್ತಿಗಳು’ ಎಂದಿದ್ದಾರೆ. ಚಿತ್ತಾಲರ ಈ ಕಥಾಸಂಕಲನದ ಎಲ್ಲಾ ಕತೆಗಳಲ್ಲೂ ಚಿತ್ತಾಲರ ಆತ್ಮಚರಿತ್ರೆಯ ಅಂಶಗಳಿವೆ. ಅವರ ವೈಯಕ್ತಿಕ ಬದುಕಿನ ಬೇರುಗಳಿವೆ. ಮಾನವಜಗತ್ತನ್ನು ‘ಕಂಡುಹಿಡಿದು’ ಅದನ್ನು ದಾಖಲೆಗಳೊಳಿಸುವಂಥ ಕಥಾಸಾಹಿತ್ಯದ ನಿಜವಾದ ಉದ್ದೇಶವನ್ನು ಸಾಧಿಸುವ ಈ ಕತೆಗಳು ಒಂದು ಕ್ರಿಯಾಶೀಲ ಮನಸ್ಸಿನ ಹರಹಿಗೆ ಸಾಕ್ಷಿಯಾಗುತ್ತವೆ. ಕಾರ್ಲ್‍ಮಾಕ್ರ್ಸ್, ಯೂಂಗ್, ಕಾನ್ರಾಡ್, ಲೊರೆಂಜ್, ಕೆಸಿರರ್ ಮೊದಲಾದವರ ವಿಚಾರಗಳಿಂದ ಪ್ರಭಾವಿತರಾಗಿರುವ ಚಿತ್ತಾಲರ ವೈಚಾರಿಕ ಪ್ರಪಂಚ ಲೇಖಕರಾಗಿ ಅವರು ನಮ್ಮ ಬದುಕನ್ನು ಮತ್ತು ಅದನ್ನು ನಿರ್ಮಿಸುತ್ತಿರುವ ಮಾನವರನ್ನು ಹೊಸ ಬೆಳಕಿನಲ್ಲಿ ನೋಡಲು ನೆರವಾಗುತ್ತದೆ. ಇವತ್ತಿನ ಮನುಷ್ಯನ ಬಗ್ಗೆ ಹೊಸದೊಂದನ್ನೇ ಹುಡುಕಿ ಹೇಳಲು ಪ್ರಯತ್ನಿಸುತ್ತಿರುವ ಚಿತ್ತಾಲರು ಈ ಸಂಕಲನದಲ್ಲಿ ಮಾಡಿರುವ ಪ್ರಯೋಗಗಳೂ ಸಹ ವಸ್ತುವಿನ ಸಂಕೀರ್ಣತೆಯಿಂದ ಅನಿವಾರ್ಯವೆನ್ನಿಸಿ ಯಶಸ್ಸು ಪಡೆದಿವೆ. ಒಂದು ಸಾಹಿತ್ಯ ಕೃತಿ ಅನನ್ಯವಾಗುವುದು ಅದು ತನ್ನ ಸಂಪೂರ್ಣ ಅರ್ಥವನ್ನು ವ್ಯಾಖ್ಯಾನಕ್ಕೆ ವಿಮರ್ಶೆಗೆ ಬಿಟ್ಟುಕೊಡದಿದ್ದಾಗ ಮಾತ್ರ. ಹಾಗೆ ನೋಡಿದರೆ ಇಲ್ಲಿನ ಯಾವ ಕತೆಯ ಬಗೆಗೂ ತೀರ್ಮಾನ ಸಾಧ್ಯವಿಲ್ಲವೆಂದೇ ನನ್ನ ಭಾವನೆ ಎಂದು ಕಥಾಸಂಕಲನ ಕುರಿತು ಮುನ್ನುಡಿಯಲ್ಲಿ ಎಸ್.ದಿವಾಕರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಕತೆಯಾದಳು ಹುಡುಗಿ ಕಥಾಸಂಕಲನದಲ್ಲಿ ‘ಕತೆಯಲ್ಲಿ ಬಂದಾತ ಮನೆಗೂ ಬಂದು ಕದತಟ್ಟಿದ’, ‘ಕತೆಯಾದಳು ಹುಡುಗಿ’, ‘ತ್ರಯೋದಶ ಪುರಾಣ’, ‘ಅಶ್ವತ್ಥಾಮ’, ‘ಮುಖಾಮುಖಿ’, ‘ಚಕ್ರವ್ಯೂಹ’, ‘ಉದ್ಧಾರ’, ‘ಬೀಗ ಮತ್ತು ಬೀಗದಕೈ’ ಎಂಬ 8 ಸಣ್ಣಕತೆಗಳನ್ನು ಒಳಗೊಂಡಿದ್ದು; ಈ ಕಥಾ ಸಂಕಲನವು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಹಾರಾಷ್ಟ್ರ ಸರ್ಕಾರದ ಗೌರವ ಪುರಸ್ಕಾರ ಪಡೆದುಕೊಂಡಿದೆ. ಚಿತ್ತಾಲರ ಇತರೆ ಕಥಾಸಂಕಲನಗಳೆಂದರೆ; 1957ರಲ್ಲಿ ಬಂದ ‘ಸಂದರ್ಶನ’, 1960ರ ‘ಆಬೋಲಿನಾ’, 1969ರ ‘ಆಟ’, 1976ರ ‘ಆಯ್ದಕತೆಗಳು’, 1983ರ ‘ಬೇನ್ಯಾ’, 1988ರ ‘ಸಿದ್ಧಾರ್ಥ’, 1997 ‘ಕುಮಟಿಗೆ ಬಂದಾ ಕಿಂದರಿಜೋಗಿ’, 2000ದಲ್ಲಿನ ‘ಐವತ್ತೊಂದು ಕಥೆಗಳು’ ಪ್ರಮುಖವಾದವುಗಳು. ಜೊತೆಗೆ ‘ಮೂರುದಾರಿಗಳು’, ‘ಶಿಕಾರಿ’, ‘ಛೇದ’, ‘ಪುರುಷೋತ್ತಮ’, ‘ಕೇಂದ್ರವೃತ್ತಾಂತ’ ಎಂಬ ಐದು ಕಾದಂಬರಿಗಳನ್ನು ಬರೆದಿದ್ದಾರೆ. ‘ಕತೆಯಾದಳು ಹುಡುಗಿ’ ಕಥಾಸಂಕಲನವನ್ನು ಮೆಲ್ವಿನ್ ಡಿ ಸಿಲ್ವ ಅವರು ಕೊಂಕಣಿ ಭಾಷೆಗೆ ಅನುವಾದಿಸಿದ್ದಾರೆ. ‘ಕತೆಯಾದಳು ಹುಡುಗಿ’ ಸಂವೇದಾನಶೀಲ ಲೇಖಕನೊಬ್ಬನ ವೇದನೆಯ ಇನ್ನೊಂದು ಮುಖವನ್ನು ತೋರಿಸುವುದು. ಇಲ್ಲಿ ಜಾನಕಿಯ ಮೇಲೆ ನಡೆದ ಅತ್ಯಾಚಾರವು ಕ್ರೌರ್ಯದ ಕಾಮಕ್ಕೆ ನಿದರ್ಶನವಾಗಿದೆ. ಇದು ರಕ್ತದ ಕ್ಯಾನ್ಸರ್‍ನಿಂದ ಸತ್ತ ಮಗಳ ಸಾವನ್ನು ಭದ್ರವಾಗಿ ನೆಲೆಗೊಳಿಸಲು ವೈಭವೀಕರಿಸಿ ಬರೆದದ್ದು. ಈ ಹಿನ್ನೆಲೆಯಲ್ಲಿ ಜಾನಕಿಯ ಸ್ಥಾನಮಾನ, ವರ್ಗ, ಸಾಮಾಜಿಕ ಪ್ರತಿಕ್ರಿಯೆ ಇವುಗಳನ್ನು ಉದ್ದೇಶ ಪೂರ್ವಕವಾಗಿ ಗಮನಿಸಲೆಂದೇ ನಿರೂಪಕರು ಸಾಕಷ್ಟು ಪ್ರಯತ್ನಿಸಿದ್ದಾರೆ. ಇಲ್ಲಿ ಇರುವುದು ಯಾಂತ್ರಿಕವಾದ ಸಂಘರ್ಷ. ಕತೆಯ ದೃಷ್ಠಿಯಿಂದ ಅಷ್ಟೇನೂ ಮುಖ್ಯವಲ್ಲದ ಹಲವಾರು ವಸ್ತುಸಂಗತಿಗಳು ಲೇಖಕರನ್ನು ಗೊಂದಲಗೊಳಿಸಿವೆ. ಸಾಹಿತ್ಯಿಕ ವಾತಾವರಣದಲ್ಲಿ ವೈಯಕ್ತಿಕ ಅನುಭವಗಳಾದ ದುಃಖ, ಸಾವು ಇವುಗಳಿಗೆ ಸಾಮಾಜಿಕ ಮಹತ್ವ ಇರುವುದಿಲ್ಲ. ಸಾಮಾಜಿಕ ಹಿನ್ನೆಲೆ ಇರದಿದ್ದರೆ ಅದಕ್ಕೆ ಯಾವ ಮಹತ್ವವೂ ಇರುವುದಿಲ್ಲ. ಹಾಗೆಯೇ ಲೇಖಕನ ಮಗಳ ಸಾವು ಸಹ ಆತನಿಗೆ ತನ್ನ ಸಾಹಿತ್ಯ ಸೃಷ್ಟಿಗೆ ವಸ್ತುವಾಗದು. ಆದರೂ ಅಭಿವ್ಯಕ್ತಿಗೊಳಿಸದೆ ಇರಲೂ ಆತನಿಗೆ ಸಾಧ್ಯವಿಲ್ಲ. ಆದ್ದರಿಂದಲೇ ತನ್ನ ಮಗಳನ್ನೇ ಝೋಪಡ ಪಟ್ಟಿಯಲ್ಲಿ ವಾಸಮಾಡುತ್ತಿರುವ ಕಾರ್ಮಿಕನೊಬ್ಬನ ಮಗಳಾಗಿ ಕಲಾತ್ಮಕವಾಗಿ ಚಿತ್ರಿಸಿ, ಅವಳ ಮೇಲೆ ಸ್ಕೂಟರಲ್ಲಿ ಬರುವ ಇಬ್ಬರು ಯುವಕರು ಅತ್ಯಾಚಾರ ಮಾಡುವುದನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ನವ್ಯಪಂಥದ ಲೇಖಕರು ತಮ್ಮ ಕಥೆಗಳಲ್ಲಿ ವಾಸ್ತವವನ್ನು ನೇರ ದೃಷ್ಠಿಕೋನದಿಂದ ನೋಡುವುದರಿಂದಲೇ ಲೈಂಗಿಕತೆ, ಅನೈತಿಕತೆ, ಅತ್ಯಾಚಾರಗಳ ಅತಿಯಾದ ವಿಜೃಂಭಣೆ ಮಾಡುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಇದಕ್ಕೆ ಮತ್ತೊಂದು ತಿರುವು ಬರುವಂತೆಯೂ ಕತೆಗಾರರೂ ಬೇರೊಂದು ಸನ್ನಿವೇಶ ಜೋಡಿಸಿದ್ದಾರೆ. ಛಸ್ನಾಲ ಗಣಿ ಕಾರ್ಮಿಕನ ಮಗಳಾದ ಆ ಜಾನಕಿ, ಗಣಿಯಲ್ಲಿ ನೀರು ನುಗ್ಗಿ ನೂರಾರು ಜನ ಮೃತಪಟ್ಟ ದಿನ ತಂದೆಯ ದಾರಿ ಕಾಯುತ್ತಿರುವಾಗ ಈ ಅತ್ಯಾಚಾರ ಸಂಭವಿಸುವುದು. ಜಾನಕಿಯ ಸಾವಿನ ಬಗೆಗೆ ಸಮಾಜ ಪ್ರತಿಕ್ರಿಯಿಸುವ ಬಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸ್ಥಿತಿ ಸೃಜನಶೀಲ ಬರಹಕ್ಕೆ ಬೇಕಾಗಿರಲಿಲ್ಲವೇನೋ ಅನ್ನಿಸುತ್ತದೆ. ಆದರೆ ಈ ಕತೆ ಹಾಗೂ ಚಿತ್ತಾಲರ ಬಹುಪಾಲು ಕತೆಗಳು ಹೊರಗಿನಿಂದ ಹೇರಲ್ಪಟ್ಟ ಅಂಶಗಳಿಂದ ನರಳುತ್ತವೆ. ಅಂದರೆ ಈ ಕತೆ ಎಲ್ಲರಿಂದಲೂ ಪ್ರಚಂಡ ಪ್ರಶಂಸೆಗೆ ಒಳಗಾಗುವುದು. ಕತೆಗಾರನ ಮೊದಲ ದುರಂತಕ್ಕೆ ಇದು ಇನ್ನೊಂದು ದುರಂತ. ಕತೆಯುದ್ದಕ್ಕೂ ವ್ಯಂಗ್ಯ, ಕತೆಗೆ ಹೊಸ ಆಯಾಮ ಕೊಡುವುದು, ಕತೆಯ ಕೊನೆಯಲ್ಲಿ ಕತೆಗಾರ ಮತ್ತು ಆತನ ಹೆಂಡತಿ ಅನಾಥಾಶ್ರಮಕ್ಕೆ ಹೋಗಿ ಒಂದು ಹೆಣ್ಣು ಮಗುವನ್ನು ತಂದು ಅವಳಿಗೆ ‘ಜಾನಕಿ’ ಎಂದೇ ಹೆಸರಿಡುವಂತಹ ಅಂಶಗಳಿಂದ ಕತೆಯು ಅರಗಿಸಿಕೊಳ್ಳಲಾಗದ ದೌರ್ಬಲ್ಯದಿಂದ ನರಳುತ್ತದೆ. ಹಾಗೂ ಮತ್ತೆ ಮತ್ತೆ ಬರುವಂತ ಸಾವಿನ ಮತ್ತು ಕಾಮದ ಸಂಕೇತಗಳು ಬೇಸರಗೊಳಿಸುತ್ತವೆ. ಈ ಬಗೆಯ ದೋಷದಿಂದ ಸೃಜನಶೀಲತೆಯ ಕಾಣ್ಕೆ ಕುಸಿಯುತ್ತದೆ. ಬದುಕಿನಲ್ಲಿ ಆಸೆಗಳನ್ನು ತುಂಬಿಕೊಂಡಿದ್ದ ಎಳೆಯ ಕಂಗಳ ಹದಿಮೂರರ ಮುಗ್ಧೆಯೊಬ್ಬಳು ಅತೀತವಾದ ಖಾಯಿಲೆಗೆ ಬಲಿಯಾದರೆ; ಇನ್ನೊಬ್ಬಳು ಮಾನವನ ಪಾಶವೀ ಕೃತ್ಯವಾದ ಕಾಮಕ್ಕೆ ಬಲಿಯಾದಳು. ಇಬ್ಬರ ಸಾವು ಸಾವೇ ಆಗಿದ್ದರೂ ಎರಡರ ಸಾವು ವಿಚಿತ್ರ ರೀತಿಯ ವಿರುದ್ಧ ದಿಕ್ಕಿನದು. ಸಾವನ್ನು ತಾನು ಮಾತ್ರ ಅರಿತವಳಂತೆ ‘ನನ್ನ ಕಥೆ ಬರೆಯಿರಿ’ ಎಂದು ಹೇಳಿಕೊಂಡ ಬಾಲೆ ಅಂದೇ ಕಾಲನ ವಶಕ್ಕೆ ಹೋದರೆ, ಹೆತ್ತವರ ನಿರೀಕ್ಷೆಯಲ್ಲಿದ್ದ ಇನ್ನೊಬ್ಬ ಮುಗ್ಧೆ ಕಾಮುಕ ರಕ್ಕಸರ ಕಾಮ ಪಿಪಾಸೆಗೆ ಬಲಿಯಾದಳು. ಒಬ್ಬ ವ್ಯಕ್ತಿಯ ಹುಟ್ಟಿನಿಂದಲೇ ಅವನ ಸಮಗ್ರ ವ್ಯಕ್ತಿತ್ವ ಎಂತಹದಾಗುವುದೆಂದು ನಿರ್ಧರಿಸಲಾಗುತ್ತಿರುವ ಈ ಕಾಲದಲ್ಲಿ; ಚಿತ್ತಾಲರು ಮಾನವನ ಕ್ರೌರ್ಯಗಳನ್ನು ಧ್ವನಿಸುವ ಮೂಲಕ ಹೊಸ ಮಾನವೀಯತೆಯೊಂದಕ್ಕೆ ಕರೆಕೊಡುತ್ತಾರೆ. ಉತ್ತಮ ಮಾನವನಾಗಿ ಅರಳಬೇಕಾದ ವ್ಯಕ್ತಿ ಹೇಗೆ ಸಮಾಜವ್ಯವಸ್ಥೆಯ ಶೋಷಣೆಗೆ ಗುರಿಯಾಗುತ್ತಾನೆಂಬುದನ್ನು ಕಲಾತ್ಮಕವಾಗಿ ವಿಶ್ಲೇಷಿಸುವುದರಲ್ಲೇ ಈ ಮಾನವೀಯತೆ ಇದೆ. ಸಮಾಜದ ಕಡೆ ಯಾವತ್ತೂ ಒಂದು ಕಣ್ಣಿಟ್ಟಿರುವ ಲೇಖಕ ಅದೇ ಸಮಾಜದ ಕಣ್ಣು ತೆರೆಸುವಂತಹ ಸಾಹಿತ್ಯಕೃತಿ ರಚಿಸುವಾಗ ಅನುಭವಿಸಲೇಬೇಕಾದ ಸಂದಿಗ್ಧತೆಯನ್ನು ಚಿತ್ತಾಲರು ಈ “ಕತೆಯಾದಳು ಹುಡುಗಿ” ಕತೆಯಲ್ಲಿ ಬಹು ಮಾರ್ಮಿಕವಾಗಿ ನಿರೂಪಿಸುತ್ತಾರೆ. ಹಾಗೆ ನೋಡಿದರೆ ಕತೆಯಾದಳು ಹುಡುಗಿ ಏಕಕಾಲಕ್ಕೆ ಒಂದು ಸಮಾಜವ್ಯವಸ್ಥೆಯ ದುರಂತವೂ ಹೌದು. ಜವಾಬ್ಧಾರಿಯಿಂದ ಬರೆಯ ಬಯಸುವ ಸಂವೇದನಾಶೀಲ ಲೇಖಕನೊಬ್ಬನ ದುರಂತವೂ ಹೌದು. ಕತೆಯಲ್ಲಿ ಹದಿಮೂರೇ ವರ್ಷದ ಜಾನಕಿ ರಕ್ತದ ಕ್ಯಾನ್ಸರ್‍ನಿಂದ ಸಾಯುತ್ತಾಳೆ. ಸಾಯುವ ಮುನ್ನ ‘ನನ್ನನ್ನು ನಿನ್ನ ಕತೆಯಲ್ಲಿ ಹಾಕು’ ಎಂದ ಅವಳ ಕೋರಿಕೆಯನ್ನು ನೆರವೇರಿಸಹೊರಡುವ ಲೇಖಕನಿಗೆ ಎದುರಾಗುವುದು ಅನೇಕ ಸಮಸ್ಯೆಗಳು. ಈ ಸಾವಿಗೆ, ಈ ದುಃಖಕ್ಕೆ ಯಾವ ಸಾಮಾಜಿಕ ಮಹತ್ವವೂ ಇಲ್ಲ ಎಂದು ಕೂಗುತ್ತಿರುವ ಸಾಹಿತ್ಯವಾತಾವರಣದ ಪ್ರಚೋಧನೆಯಿಂದಾಗಿ ಇಲ್ಲಿನ ನಾಯಕ ಬರೆಯುವ ಕತೆ ಇನ್ನೊಂದು ಕಲ್ಪನೆಯ ದುರಂತವೇ ಆಗುತ್ತದೆ. ನವ್ಯ ಮತ್ತು ನವ್ಯದಲ್ಲೇ ಪ್ರಗತೀಶೀಲ ನವ್ಯರು ಎಂದು ಗುರುತಿಸಿಕೊಂಡ ತೇಜಸ್ವಿ, ಪಿ.ಲಂಕೇಶರ ಗುಂಪಿಗೆ ಸೇರುವ ಚಿತ್ತಾಲರು ಭೂತವನ್ನು ವರ್ತಮಾನದ ಪ್ರಸ್ತುತದೊಡನೆ ಮುಖಾಮುಖಿಯಾಗಿಸುವ ಕತೆಯ ತಿರುವುಗಳು ಕಥಾದೃಷ್ಠಿಯಿಂದ ಸಮಾಜಮುಖಿ ಸ್ಥಾನವನ್ನು ಪಡೆದುಕೊಳ್ಳುತ್ತವೆ. ನಮ್ಮ ಜಾಣರು ನಮಗೆಲ್ಲ ಒದಗಿಸಿದ ವಿಷಯ ಸೂಚಿಯನ್ನು ಕಣ್ಣ ಮುಂದೆ ಇಟ್ಟುಕೊಂಡೇ ಕತೆ ಬರೆಯಲು ಆರಂಭಿಸಿದೆ. ನನಗೆ ಅರಿವಾಗುವ ಮೊದಲೇ ಜಾನಕೀ ಇಲ್ಲಿಯದೇ ಝೋಪಡಪಟ್ಟಿಯೊಂದರಲ್ಲಿ ವಾಸಿಸುವ ಹುಡುಗಿಯಾಗಿದ್ದಳು. ಬಾಂದ್ರಾದಲ್ಲಿ ಮಾಹಿಮ್ ಕಾಜ್‍ವೇ ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ಹಾಯ್‍ವೇಗಳ ಕೂಟಸ್ಥಾನದ ಅದಿಬದಿಗಳಲ್ಲಿ ಎದ್ದುನಿಂತ ಝೋಪಡಪಟ್ಟಿಗಳ ವರ್ಣನೆಯಿಂದ ಕತೆ ಆರಂಭವಾಗುತ್ತ ನೇರವಾಗಿ ಪ್ರಸ್ತುತದೊಡನೆ ಅನಾವರಣಗೊಳ್ಳುತ್ತದೆ. ಇಂಥ ಸಂದಿಗ್ಧದಲ್ಲೂ ಕತೆಗಾರ ಜಾನಕಿಯನ್ನು ಝೋಪಡಪಟ್ಟಿಯೊಂದರಲ್ಲಿ ತಿಂಗಳುಗಟ್ಟಲೆ ಸ್ನಾನ ಕಂಡಿರದ, ಕೂದಲು ಅಲ್ಲಲ್ಲಿ ಜಡೆಗಟ್ಟಿದಂತೆ, ಗ್ರೀಜ್ ಹತ್ತಿದ ಹಾಗೆ ತಕತಕನೆ ಹೊಳೆಯುತ್ತಿದ್ದ ಮೋರೆಗೆ ಕಪ್ಪು ಮೆತ್ತಿಕೊಂಡಂತಿರುವ, ಚಿಂದಿಯಾದ ಕಿರುಗಣೆ ಉಟ್ಟ ಬಾಲಕಿಯನ್ನಾಗಿ ರೂಪಿಸುತ್ತಾನೆ. ಇಲ್ಲಿ ನಾವು ಗಮನಿಸಬೇಕಾದದ್ದೆಂದರೆ ಪ್ರಸ್ತುತ ಇಂದಿಗೂ ಈಸ್ಥಿತಿ ಮುಂದುವರೆದುಕೊಂಡು ಹೋಗುತ್ತಿರುವುದು. ಜಾಗತೀಕರಣದ ಸಂದರ್ಭದಲ್ಲೂ ಕೂಡ ನಿರುದ್ಯೋಗ, ಬಡತನ, ಅನಕ್ಷರತೆ ಎನ್ನುವುದು ತಾಂಡವವಾಡುತ್ತಿರುವ ಮತ್ತು ಚರ್ಚೆಗೆ ವಸ್ತುವಾಗುತ್ತಿರುವ ಸಮಸ್ಯೆಯಾಗಿವೆ. ಸ್ವಾತಂತ್ರ್ಯ ಬಂದು ಅರ್ಧಶತಮಾನ ಕಳೆದರೂ ಕೂಡ ಸಮಾಜವ್ಯವಸ್ಥೆಯಲ್ಲಿ ಇಂತಹ ನಿಕೃಷ್ಟ ಜೀವನ ನಡೆಸುತ್ತಿರುವ ಜನರನ್ನು ಇಲ್ಲಿ ಲೇಖಕರು ಆಯ್ಕೆಮಾಡಿಕೊಂಡು ತಮ್ಮ ಕಥಾವಸ್ತುವನ್ನಾಗಿಸಿಕೊಂಡು ಕಲಾತ್ಮಕವಾಗಿ ವೈಭವೀಕರಿಸಿದ್ದಾರೆ. ಸ್ಕೂಟರ್ ಮೇಲೆ ಬರುವ ಇಬ್ಬರು ಯುವಕರು ಎಲ್ಲೋ ಆಕಾಶದಲ್ಲಿಯ ಚಿಕ್ಕೆಗಳಲ್ಲಿ ದೃಷ್ಠಿನೆಟ್ಟು ನಿಂತ ಈ ಅಸಹಾಯ ದೇಹದ ಮೇಲೆ ಪಶುವಿಗೂ ಕಡೆಯಾಗಿ ಅತ್ಯಾಚಾರವೆಸಗುತ್ತಾರೆ. ಮಾನವ ಹೇಗೆ ರಾಕ್ಷಸನಾಗಬಲ್ಲ ಎಂಬ ಉದಾಹರಣೆ ಇಲ್ಲಿದೆ. ತನಗೆ ಬೇಕಾದ್ದನ್ನು ಪಡೆಯಬೇಕೆನ್ನುವುದು ಆತನ ಸಹಜ ಗುಣವೇ ಆಗಿರಬಹುದು. ಆದರೆ ಪಡೆದ ತನ್ನ ಕೃತ್ಯದ ಬಗ್ಗೆ ಸಾಕ್ಷಿಗಳಾವುವೂ ಉಳಿದಿರಬಾರದು ಎಂಬ ಕ್ರೂರ ಬಯಕೆಯಲ್ಲಿ ಆತ ಎಂತಹ ಹೇಯ ಕೃತ್ಯಕ್ಕೂ ಸಿದ್ಧನಾಗಿರುತ್ತಾನೆ. ಮೊದಲೇ ಹಾಕಿಕೊಂಡ ಸಂಚಿನ ಪ್ರಕಾರವೇ ಬಂದಂತಿದ್ದ ಸ್ಕೂಟರ್ ಸವಾರರು ಪಶುವಿಗೂ ಕಡೆಯಾಗಿ ಆ ಅಸಹಾಯಕ ದೇಹದ ಮೇಲೆ ಎಸಗಿದ ಅತ್ಯಾಚಾರಕ್ಕೆ ನಿಶ್ಚೇಷ್ಟವಾಗಿ ಬಿದ್ದ ಮಗುವನ್ನು ಅಷ್ಟಕ್ಕೇ ಬಿಡದೆ ಚಾಕುವಿನಿಂದ ಇರಿದು ಅಲ್ಲಿಂದ ಓಟ ಕಿತ್ತಿದ್ದರು. ಸತ್ತವಳು ಕಾರ್ಮಿಕನ ಮಗಳಾಗಿದ್ದಳು. ಅವಳನ್ನು ಕೊಂದ ಯುವಕ ಪಶುಗಳು ಖನಿಗಳ ಒಡೆಯರ ಮಕ್ಕಳಾಗಿದ್ದರು. ಹಾಗೆ ನೋಡಿದರೆ ಸತ್ತ ಜಾನಕಿಗೂ, ಅತ್ಯಾಚಾರಕ್ಕೆ ಬಲಿಯಾದ ಅದೇ ಪ್ರಾಯದ ಈ ಹುಡುಗಿಗೂ ಯಾವ ಸಂಬಂಧವೂ ಇಲ್ಲ. ಆದರೆ ಮಾನವೀಯತೆ ಇಲ್ಲಿ ಸಂಬಂಧವನ್ನು ಪರಿಗಣಿಸುವುದಿಲ್ಲ. ನಮಗೇನೂ ಸಂಬಂಧವಿಲ್ಲದಿದ್ದರೂ ಕೇವಲ ಮಾನವೀಯ ಸಂಬಂಧವೇ ಮುಖ್ಯವಾಗುವುದು. ಈ ಸಾವಿಗೆ ಪ್ರತಿಯಾಗಿ ಏನು ಮಾಡಲಾಗದಿದ್ದರೂ ಕನಿಷ್ಠ ಪಕ್ಷ ನಾಳೆ ಇಂತಹದೇ ದುರ್ಘಟನೆಗೆ ಬಲಿಯಾಗಬಹುದಾದ ಅನಾಥ ಜೀವಿಯೊಂದಕ್ಕೆ ಬದುಕು, ಜೀವನ ಕೊಡಲೆತ್ನಿಸುವ ಮಾನವತೆಗೆ ಮೀರಿದ ದೈವತ್ವಗುಣ ಕಂಡುಬರುವುದು. ಇದರಿಂದ ಸಾವುಗಳಿಂದ; ಸಾವಿನ ರೀತಿಯಿಂದ ಭಾರವಾದ ಮನಸ್ಸಿಗೆ ಸಮಾಧಾನ ಚಿಂತನವಾಗುತ್ತದೆ. ಯಾರ ಸಾವೇ ಆಗಲಿ ಅದು ನಮ್ಮನ್ನು ತಟ್ಟಬೇಕಲ್ಲವೇ? ಆದರೆ ಅನೇಕ ಸಂದರ್ಭಗಳಲ್ಲಿ ಅದು ಏಕೆ ಹಾಗಾಗುತ್ತಿಲ್ಲ? ಬೆಳಗಿನ ಉಪಹಾರ, ನಂತರದ ಕೆಲಸ, ರಾತ್ರಿಯ ಊಟ, ನಿದ್ದೆ, ಇವುಗಳಷ್ಟೇ ಸಹಜವಾಗಿ ದಿನನಿತ್ಯದ ಅನೇಕ ಸಾವುಗಳನ್ನು ತಡೆದುಕೊಳ್ಳುವ ನಾವು ಅದಕ್ಕಾಗಿ ದುಃಖಿಸುವುದಿಲ್ಲ. ಯೋಚಿಸುವುದೂ ಇಲ್ಲ. ಇದರ ನಡುವೆ ಜಾತಿ, ಧರ್ಮ, ಅಂತಸ್ತಿನ ಪರಿಗಣನೆ ಬೇರೆ; ಇಂತಹ ಯಾಂತ್ರಿಕ ಬದುಕಿನ ಸಹಚರರನ್ನು ಲೇಖಕರು ಇಲ್ಲಿ ಕೇಳುವ ರೀತಿಯೇ ಬೇರೆಯದ್ದಾಗಿದೆ ಹಾಗೂ ಮಾರ್ಮಿಕವಾಗಿದೆ. “ಪಾಶವೀ ಅತ್ಯಾಚಾರಕ್ಕೆ ಬಲಿಯಾದ ಮುಗ್ಧಬಾಲೆಯ ಸಾವು ತನ್ನಷ್ಟಕ್ಕೆ ಸಾಮಾಜಿಕ ಮಹತ್ವವನ್ನು ಪಡೇದೀತೇ? ಅಂಥಹದ್ದನ್ನು ಪಡೆಯದೇ ನಮ್ಮ ಅಂತಃಕರಣವನ್ನು ಮುಟ್ಟೀತೇ? ಸತ್ತವಳ, ಕೊಂದವರ ಜಾತಿ-ಧರ್ಮ, ವರ್ಗ, ಅಂತಸ್ತು ಮೊದಲಾದವು ಗೊತ್ತಾಗುವ ಮೊದಲೇ ನಮ್ಮ ಕಣ್ಣುಗಳು ತಟಕ್ಕನೆ ಹನಿಗೂಡಿಯಾವೆ? ಚಕ್ಕನೆ ಹನಿಗೂಡಿ ಬಿಟ್ಟಿದ್ದೇ ಆದರೆ ಹಾಗೆ ಆಗುವುದು. ತಾತ್ವಿಕ, ಭೌದ್ದಿಕ ಕಾಳಜಿಗಳಿಲ್ಲದ ಪೆದ್ದುತನವೆಂದೂ ಬರೀ ಬೆರಗುಗೊಳಿಸುವುದಕ್ಕೆ ತಂದ ಕೊಲೆಯೆಂದೂ ತೋರದೆ ಇದ್ದೀತೆ? ಹಾಗಾದರೆ, ಸತ್ತವಳು ಯಾವ ಜಾತಿಯವಳಾಗಿ, ಕೊಂದವರು ಯಾವ ಜಾತಿಯವರಾದರೆ, ಇಲ್ಲ ಯಾವ ಧರ್ಮದವರಾದರೆ? ಇಲ್ಲ ಯಾವ ವರ್ಗದವರಾದರೆ? ಈ ಅತ್ಯಾಚಾರ ಮಹತ್ವಪೂರ್ಣವಾದೀತೇ? ನಾಗರೀಕ ಸಮಾಜದ ನಾಗರೀಕನಿಗೆ, ಹೃದಯವಂತ ಶ್ರೀಸಾಮಾನ್ಯನಿಗೆ ಇವುಗಳಿಗಿಂತ ಇನ್ನೇನು ತಾನೇ ಕೇಳಬಹುದು? ಸಮಕಾಲೀನ ಸಾಹಿತ್ಯದ ವಸ್ತುವಾಗುವ ಯೋಗ್ಯತೆ ಪಡೆದು ನಾವು ಸುರಿಸಬಹುದಾದ ಕಣ್ಣೀರಿಗೆ ಸಾರ್ಥಕತೆ ತಂದುಕೊಟ್ಟೀತು? ಈಗ ಎದುರಾಗುವುದು ಜಾನಕಿಯ ವರ್ಗಪ್ರಶ್ನೆ. ತಲೆಯಲ್ಲಿರುವ ಕತೆ ಮಾತುಗಳಲ್ಲಿ ಮೂಡಿದಾಗ ಜಾನಕಿ ಛಸ್ನಾಲದ ಗಣಿ ಕಾರ್ಮಿಕನೊಬ್ಬನ ಮಗಳಾಗಿರುತ್ತಾಳೆ. ಲೇಖಕರು ಕಥೆಯ ತಿರುವನ್ನು ಕೂಡ ತುಂಬಾ ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ. ಗಣಿಯಲ್ಲಿ ನೀರು ನುಗ್ಗಿ ನೂರಾರು ಕಾರ್ಮಿಕರು ಅಸು ನೀಗಿದಾಗ ಇದೇ ಜಾನಕಿ ಮೂರು ತಿಂಗಳ ತೊಟ್ಟಿಲ ಕೂಸನ್ನು ಕಾಯುತ್ತಾ ನಿಂತಿದ್ದಾಳೆ. ಅಮ್ಮ ತಮ್ಮ ಮೂವರು ಮಕ್ಕಳೊಡನೆ ಅಪ್ಪನನ್ನು ಹುಡುಕಲು ಗಣಿಗೆ ಹೋಗಿದ್ದಾರೆ. ಸ್ಕೂಟರ್ ಸವಾರರು ಬರುವುದು ಈಗಲೇ; ಶಬ್ಧಗಳಲ್ಲಿ ಮೂಡಿಬಂದ ಜಾನಕಿಯನ್ನು ಕಂಡದ್ದೇ ಏಕಕಾಲಕ್ಕೆ ನಗು, ಅಳು ಎರಡೂ ಬಂದವು ಎನ್ನುವಾ ಕತೆಗಾರ ಈ ಕತೆಗೆ ಪಡೆಯುವ ಮೆಚ್ಚಿಗೆ ಅಷ್ಟಿಷ್ಟಲ್ಲ, ಜೊತೆಗೆ ಅವರ ಸ್ನೇಹಿತರ ಮೆಚ್ಚುಗೆ! ಸಮಾಜ ಜೀವಿಗಳಾದ ನಾವು ಸ್ಪಂದಿಸಲೇಬೇಕು. ಏಕಾಂಗಿಯಂತೆ ಈ ಸಮಾಜದಲ್ಲಿರುವುದು ಎಂದಿಗೂ ಸಾಧ್ಯವಿಲ್ಲ. ನಮ್ಮಲ್ಲಿರುವ ಹಣ, ಅಂತಸ್ತು, ರೂಪ, ಯೌವನ ಎಷ್ಟು ದಿನ ತಾನೆ ಉಳಿದೀತು? ಸಹೃದಯ ಸ್ಪಂದನದಿಂದ ತಾನೇ ಬದುಕಿನ ಬಗ್ಗೆ ಆಶಾಭಾವನೆ ಬೆಳೆಸಿಕೊಳ್ಳಬಹುದು? ಇಲ್ಲದಿದ್ದರೆ ನಮ್ಮದೆಲ್ಲವೂ ಶಾಶ್ವತ ಎನ್ನುವಂತಹ ಅಹಂಭಾವವೇ ಮನಸ್ಸಿಗೆ ಹೆಚ್ಚು ಸಮಾಧಾನಕರವಾಗಿ ಕಂಡರೂ ನಾಳೆಯನ್ನು ಬಲ್ಲವರು ಯಾರೂ ಇಲ್ಲವಾದ್ದರಿಂದ ಇಂತಹ ಅಹಂಭಾವ ಎಷ್ಟು ದಿನ ಸಾಧ್ಯ. ಜಾನಕಿಯನ್ನು ಬಹಳ ಕಾಲದಿಂದಲೂ ಬಲ್ಲ ಸ್ನೇಹಿತರು ಆಕೆಯ ಬಗ್ಗೆ ಕೇಳುವುದೇ ಇಲ್ಲ. ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ನೆಪದಲ್ಲಿ ಬಿಯರು ಬಾಟಲಿಗಳೊಂದಿಗೆ ಲೇಖಕರ ಮನೆಗೆ ಬಂದ ಸ್ನೇಹಿತರು, ತಮ್ಮ ಸಂತೋಷವನ್ನು ತಾವು ನೋಡಿಕೊಂಡರಾಯಿತು ಎಂಬಂತೆ ವರ್ತಿಸಿ ಕೇವಲ ಖುಷಿಯನ್ನು ಅನುಭವಿಸಬಯಸಿದರೇ ಹೊರತು ತಮ್ಮ ಮಿತ್ರರ ಹೃದಯವನ್ನು ಅರಿಯಲು ಹೋಗಲಿಲ್ಲ. ಹಲವು ವರ್ಷಗಳ ಒಡನಾಟದ ಪರಿಚಯದಿಂದಲೂ ಸ್ನೇಹಿತರನ್ನು ಅರ್ಥಮಾಡಿಕೊಳ್ಳಲಾಗಲಿಲ್ಲವೆಂದರೆ ಅದನ್ನೆಂತು ಸ್ನೇಹವೆಂದು ಕರೆಯಬಹುದು? ಅಥವಾ ಇಂತಹವರಲ್ಲಿ ಕನಿಷ್ಟ ಮಾನವೀಯ ಗುಣಗಳನ್ನು ನಿರೀಕ್ಷಿಸುವುದೂ ಈ ವ್ಯಾವಹಾರಿಕ ಜಗತ್ತಿನಲ್ಲಿ ತಪ್ಪು ಎಂದೇ ಪರಿಗಣಿಸಬಹುದೇ? ಮಗಳು ಜಾನಕಿಯ ಸಾವಿನಿಂದ ತಪ್ತಳಾದ ಕತೆಗಾರನ ಹೆಂಡತಿಗೆ ಮನೆಗೆ ಬಂದು ಬೀರು ಹೀರುತ್ತ ಈ ಕತೆಯ ವೈಶಿಷ್ಟ್ಯದ ವಿಶ್ಲೇಷಣೆ ನಡೆಸುವ ಸ್ನೇಹಿತರನ್ನು ಕಂಡು ದುಃಖ ಇಮ್ಮಡಿಸುತ್ತದೆ. ಇಲ್ಲೆ ಉದ್ದಕ್ಕೂ ಕೆಲಸ ಮಾಡುವ Iಡಿoಟಿಥಿ (ಹಾಸ್ಯ, ವ್ಯಂಗ್ಯ) ಹೆಂಡತಿಯಾಡುವ ಮಾತಿನಿಂದ ನಿಜವಾದ ಮಾನವೀಯತೆಯತ್ತ ಬೆರಳುಮಾಡುತ್ತದೆ. “ನಿಮ್ಮ ಗೆಳೆಯರಲ್ಲಿ ಒಬ್ಬನಿಗೂ ಮಗೂನ ನೆನಪೇ ಆಗಬಾರದ ಹಾಗೆ ಅದೆಂಥ ಕತೆ ಬರಿದಿರೋ, ಅವಳ ಬಗ್ಗೇ ಕತೆ ಬರೆಯುತ್ತೇನೆ ಎಂದವರು? ಅಥವಾ ನಿಮ್ಮ ಗೆಳಯರೇ ಅಂಥವರೊ? ಬಿಯರ್ ಕುಡಿದು ಪಕೋಡಾ ತಿಂದು ಸಂತೋಷಿಸುವಂತೆ ಅದು ಹೇಗೆ ಹೊಟ್ಟೆಯ ಮಗುವಿನ ಸಾವನ್ನು ಚಿತ್ರಿಸಿದಿರೋ... ಬೆಂಕಿ ಬಿತ್ತು ನಿಮ್ಮ ಸಾಹಿತ್ಯಕ್ಕೆ... ಸುಟ್ಟುಹಾಕಿ... ಎನ್ನುವ ಲೇಖಕರ ಪತ್ನಿಯ ಮಾತು ಶೋಷಿತವರ್ಗದ ಪ್ರತಿನಿಧಿಯಾಗಿ ಪ್ರತಿಧ್ವನಿಸುತ್ತದೆ. ಲೇಖಕರು ಇಲ್ಲಿ ಸಮಾಜದ ಅಸಮತೋಲನದ ಬಗ್ಗೆ, ಅವರಿಗೆ ದೊರೆಯಬೇಕಾದ ನ್ಯಾಯ ಮತ್ತು ಸವಲತ್ತು ಇತ್ಯಾದಿಗಳ ಬಗ್ಗೆ ತಮ್ಮ ಪತ್ನಿಯನ್ನು ಪ್ರತಿಧ್ವನಿಯಾಗಿ ಬಳಸಿದ್ದಾರೆ. ಇಲ್ಲಿ ಒಬ್ಬ ಕವಿಯು, ಲೇಖಕನು ಸಮಾಜವನ್ನು ವಿವಿಧ ದೃಷ್ಟಿಯಲ್ಲಿ ನೋಡುವ ಆಯಾಮಗಳನ್ನು ಗುರುತಿಸಬಹುದು. ಆದರೆ ಇಂದಿನ ಸಾಹಿತ್ಯ ವಾತಾವರಣದ ಕಟುಅನುಭವವೊಂದೇ ಇಂಥ ಕತೆ ರೂಪುಗೊಳ್ಳಲು ಕಾರಣವಾಗಿದ್ದರೂ; ಚಿತ್ತಾಲರು ನೋವಿನ ನೆಲೆಗಳನ್ನು ಹುಡುಕುವ ರೀತಿ ಅನನ್ಯವಾಗಿದೆ. ನಮ್ಮ ಕಾಲದ ಪ್ರಕ್ಷುಬ್ಧ ಪರಿಸರದಲ್ಲಿ ‘ಪ್ರೀತಿ’ ಇನ್ನು ಬದುಕಿರುವುದೇ ನಿಜವಾದರೆ; ಅದು ವ್ಯಕ್ತವಾಗುವುದು ಜೀವಂತ ಪ್ರಕೃತಿಯೊಡನೆ, ಹಾಗೂ ನಮ್ಮಲ್ಲೇ ಮನೆಮಾಡಿಕೊಂಡಿರುವ ಕ್ರೌರ್ಯದೊಡನೆ ನಾವು ಪ್ರಾಮಾಣಿಕವಾಗಿ ಮುಖಾಮುಖಿಯಾಗುವುದರಲ್ಲಿ. ಇಲ್ಲಿ ಮುಖ್ಯವಾಗಿ ಇನ್ನು ಒಂದು ಗಮನಾರ್ಹವಾದ ಅಂಶವನ್ನು ಗಮನಿಸಬಹುದು. ಅದೇನೆಂದರೆ, ಸ್ವಾರ್ಥವೆನ್ನುವುದು ಯಾರನ್ನೂ ಬಿಟ್ಟಿಲ್ಲ. ಅಪರೂಪದ ಮಾನವೀಯ ಗುಣಗಳನ್ನು ಹೊಂದಿರುವ ಲೇಖಕರೂ ಕೆಲವೊಮ್ಮೆ ಸ್ವಾರ್ಥಕ್ಕೆ ಬಲಿಯಾಗುತ್ತಾರೆ. ಆದರೆ ತಮ್ಮನ್ನು ತಾವೇ ವಿಶ್ಲೇಷಿಸಿಕೊಳ್ಳುವಂತಹ ದೊಡ್ಡ ಗುಣಗಳನ್ನು ಮೈಗೂಡಿಸಿಕೊಂಡಿರುವ ಅವರು ತಮ್ಮ ಸಣ್ಣತನವನ್ನು ಮೆಟ್ಟಿನಿಲ್ಲುತ್ತಾರೆ. ತಮ್ಮ ಆತ್ಮಸಮರ್ಥನೆಯ ಬಗ್ಗೆ ಅವರೇ ಅಸಹ್ಯಿಸಿಕೊಳ್ಳುತ್ತಾರೆ. ಬದುಕಿರಬೇಕು; ಯಾಕೆ ಬದುಕಬೇಕು, ಹೇಗೆ ಬದುಕಿರಬೇಕೆಂಬ ಪ್ರಶ್ನೆಗಳು ಅವರಲ್ಲಿ ಮೂಡುವುದೂ ಅವರು ಮೈಗೂಡಿಸಿಕೊಂಡಿರವ ಮಾನವೀಯ ಲಕ್ಷಣಗಳ ಹಿನ್ನೆಲೆಯಲ್ಲಿ. ಕೊಲೆಯಾದ ಹುಡುಗಿ ಅಂದರೆ ಅತ್ಯಾಚಾರದಿಂದ ಕೊಲೆಗೀಡಾದ ಹುಡುಗಿ, ಸತ್ತು ಹೋದ ಹುಡುಗಿ ಲೇಖಕರ ಮಗಳು ಜಾನಕಿ ಇವರು ಒಂದು ರೀತಿಯಲ್ಲಿ ಮಾನವೀಯ ಸಂಬಂಧಗಳ ನೆಲೆಯಲ್ಲಿ ನೇರ ಸಂಬಂಧವುಳ್ಳವರೇ ಆಗಿರುತ್ತಾರೆ. ಇಡೀ ಜಗತ್ತು ಅದರ ಪಾಡಿಗೆ ಅದು ಕಿವುಡಾಗಿದ್ದರೂ ಅಳುವ ದಾದಿಯರು, ಸಂತೈಸುವ ವೈದ್ಯ, ಲೇಖಕ-ಆತನ ಪತ್ನಿ ಇವರ ಮಾನವೀಯ ಮೌಲ್ಯ ನಾಳೆಯ ಬಗ್ಗೆ ಭರವಸೆಯ ಕಿರುಬೆರಳನ್ನು ಹೊರದೂಡುತ್ತದೆ. ಸತ್ತವರ ಬಗ್ಗೆ ಏನನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತು ಇರುವವರ ಬಗ್ಗೆ ಏನಾದರೂ ಮಾಡೋಣ ಎಂಬ ತುಡಿತವೇ ಅವರು ಅನಾಥ ಮಗುವನ್ನು; ಅದೂ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಲು ಕಾರಣವಾಗುತ್ತದೆ. ಈ ಮಗುವು ನಾಳೆಯ ಇನ್ನೊಂದು ಜಾನಕಿಯಾಗದೇ ಹೋದರೆ ಅದೇ ಮನುಕುಲಕ್ಕೆ ನಾವು ನೀಡುವ ಕಾಣಿಕೆ ಎಂದು ಅರಿಯಬೇಕು. ಅನಾಥಾಶ್ರಮದಿಂದ ತಂದ ಪುಟ್ಟ ಮಗುವಿಗೆ ‘ಜಾನಕಿ’ ಎಂದೇ ಹೆಸರಿಡುವುದು ಬದುಕಿನ ಸಾತತ್ಯಕ್ಕೆ ಸಾಕ್ಷಿಯಾಗಿದೆ. ಮಾನವೀಯ ಸಂಬಂಧಗಳನ್ನು ಮೈಗೂಡಿಸಿಕೊಂಡರೆ ನಾವೆಲ್ಲರೂ ಒಂದು ಎಂಬ ಭಾವನಾತ್ಮಕ ಸಂಬಂಧದಿಂದ ನೋಡಿಕೊಂಡರೆ ಆ ಸಂಬಂಧವೇ ಬದುಕನ್ನು ಅರಳಿಸುವ ರೀತಿ ಎಂಬುದು ಲೇಖಕರ ಮಾತಲ್ಲಿ ಹೀಗೆ ವ್ಯಕ್ತವಾಗಿದೆ. ನಮ್ಮಿಬ್ಬರನ್ನು ಮತ್ತೆ ಬದುಕಿನತ್ತ ಮುಖ ಮಾಡಲು ಹಚ್ಚಿದ ಈ ಚೈತನ್ಯವನ್ನು ನೀವೂ ನೋಡಿ, ಮಲಗಿಸಿದಲ್ಲೇ ಮಲಗಿರದೆ ಎದ್ದು ಕೂಡ್ರಬೇಕು ಎನ್ನುವ, ಕೂರಿಸಿದರೇ ಕೂತಿರದೆ ಎದ್ದು ನಿಲ್ಲಬೇಕು ಎನ್ನುವ, ಪುಟಾಣಿ ಕೈಗಳೆರಡರಲ್ಲಿ ನಾಲ್ಕು ದಿಕ್ಕುಗಳನ್ನು ಹಿಡಿಯಬೇಕೆನ್ನುವ ಅದರ ಹುಮ್ಮಸ್ಸಿನ ಕೇಕೆಯನ್ನು ನೀವೂ ಕೇಳಿ... ಚಸ್ನಾಲಾದ ನಂತರದ ಕೃತಿ ನಮ್ಮ ಮನೆಯ ತೊಟ್ಟಿಲಲ್ಲಿ ನಗುತ್ತಿರುವುದನ್ನು ನೋಡುವಿರಂತೆ, ಮನೆ ಸ್ವಲ್ಪ ಚಿಕ್ಕದು. ಆದರೇನಂತೆ? ಮನೆಯ ಮುಂದಿರುವ ನುಗ್ಗೆ ಮರ, ಸಣ್ಣ ಬಾಳೆಯ ಹಿಂಡು, ಸೀತಾಫಲದ ಗಿಡ, ಗುಲಾಬಿ ಗಿಡಗಳ ಎರಡು ಕುಂಡಗಳು ಮತ್ತು ಮನೆಯೊಳಗೆ ಜಾನಕಿಯ ಉಲ್ಲಾಸದ ಹೂಂಕಾರ; ಇವು ಕತೆಯ ಅರ್ಥವಿಸ್ತಾರಕ್ಕೆ ದುಡಿಯುತ್ತವೆ. ಇವೇ ಜೀವಂತಿಕೆಯ ಲಕ್ಷಣಗಳು ಹಾಗೂ ನಾಳೆಯ ಸಿಹಿ ನೆನಪಿನ ಚಿಗುರುಗಳಾಗಿ ನಮ್ಮ ಅಂತಃಕರಣವನ್ನು ಹೊಕ್ಕುತ್ತವೆ.

ಉಲ್ಲೇಖ

ಬದಲಾಯಿಸಿ

ಪರಾಮರ್ಶನ ಗ್ರಂಥಗಳು

ಬದಲಾಯಿಸಿ

* ಕತೆಯಾದಳು ಹುಡುಗಿ (ಕಥಾಸಂಕಲನ) – ಯಶವಂತಚಿತ್ತಾಲ

* ಯಶವಂತ ಚಿತ್ತಾಲ ಕೆಲವು ಅಧ್ಯಯನಗಳು - ಸಂಗ್ರಹ: ಜಿ.ಎಸ್.ಭಟ್ಟ

* ಕತೆಯಾದಳು ಹುಡುಗಿ ವಿಮರ್ಶೆ ಲೇಖನ – ಪ್ರದೀಪ್‍ಕುಮಾರ್ ಹೆಬ್ರಿ

* ಕನ್ನಡ ಸಾಹಿತ್ಯದಲ್ಲಿ ಸಾಂಸ್ಕøತಿಕ ಸಂಘರ್ಷ – ಎನ್.ಕೆ.ಕೋದಂಡರಾಮ

* ಸಮಕಾಲೀನ ಕಥೆ – ಕಾದಂಬರಿ ಹೊಸ ಪ್ರಯೋಗಗಳು – ಜಿ.ಎಸ್.ಅಮೂರ