ಕಡಿರಿ ರಾಜ್ಯ
11ನೆಯ ಶತಮಾನದ ಆದಿಭಾಗದಲ್ಲಿ ಜಾವದಲ್ಲಾಳುತ್ತಿದ್ದ ಏರ್ಲಂಗದೊರೆ ತನ್ನ ಇಬ್ಬರು ಮಕ್ಕಳಿಗೆ ಹಂಚಿಕೊಟ್ಟ ರಾಜ್ಯದ ಎರಡು ಭಾಗಗಳಲ್ಲೊಂದು; ಪಶ್ಚಿಮಾರ್ಧ. ಪಂಜುಲು ಇದರ ಮುಂಚಿನ ಹೆಸರು; ರಾಜಧಾನಿ ಕಡಿರಿ. ಕಡಿರಿ ಎಂದೇ ಈ ರಾಜ್ಯ ಪ್ರಸಿದ್ಧವಾಯಿತಲ್ಲದೆ ಕ್ರಮೇಣ ಹೆಚ್ಚು ಪ್ರಬಲವಾಗಿ ಇನ್ನೊಂದು ಭಾಗವನ್ನೂ ವಶಪಡಿಸಿಕೊಂಡಿತು. ಪಶ್ಚಿಮ ಜಾವದಲ್ಲಿರುವ ಸುಣ್ಣ ಮತ್ತು ಸು-ಕಿ-ತಾನ್ಗಳನ್ನು ಬಿಟ್ಟು ಜಾವದ ಮಿಕ್ಕೆಲ್ಲ ನೆಲವೂ ಕಡಿರಿ ರಾಜ್ಯಕ್ಕೆ ಒಳಪಟ್ಟಿತ್ತೆಂದು ಚೌ ಜು-ಕ್ವ ಎಂಬ ಚೀನೀ ಅಧಿಕಾರಿಯೊಬ್ಬನ ಬರಹದಿಂದ ತಿಳಿದುಬರುತ್ತದೆ. ಆತ ಸ್ವತಃ ಕಡಿರಿಯನ್ನು ಕಂಡಿರಲಿಲ್ಲ. ಅಲ್ಲಿಗೆ ಹೋಗಿ ಬಂದವರಿಂದ ಕೇಳಿ ತಿಳಿದಿದ್ದನ್ನೆ ಬರೆದ. ಕಡಿರಿಯನ್ನಾತ ಪೊ-ಪೊ ಅಥವಾ ಯುವ ಎಂದು ಕರೆದಿದ್ದಾನೆ. ಜಾವದ ಒಳಗೂ ಹೊರಗೂ ಪೊ-ಪೊಗೆ ಅಧೀನವಾಗಿದ್ದ 15 ರಾಜ್ಯಗಳ ಪಟ್ಟಿಯೊಂದನ್ನೂ ಆತ ಕೊಟ್ಟಿದ್ದಾನೆ. ಇವುಗಳ ಪೈಕಿ ಬಲಿ ಮತ್ತು ನೈಋತ್ಯ ಬೋರ್ನಿಯೋಗಳು ಮುಖ್ಯವಾದವು.[೧]
ಇತಿಯಾಸ
ಬದಲಾಯಿಸಿ12ನೆಯ ಶತಮಾನದಲ್ಲಿ ಅನೇಕ ರಾಜರು ಕಡಿರಿಯನ್ನಾಳಿದರು. ಅವರ ಪೈಕಿ ಜಯವರ್ಷ, ಕಾಮೇಶ್ವರ ಮತ್ತು ಜಯಭಯರು ಮುಖ್ಯ. ಆಯಾ ಕಾಲಗಳಲ್ಲಿ ಬರೆದ ಕಾವ್ಯಗಳಲ್ಲಿ ಇವರ ಹೆಸರುಗಳು ಚಿರಸ್ಥಾಯಿಯಾಗಿವೆ. ಜಯವರ್ಷನ ಆಶ್ರಯದಲ್ಲಿ ಕಣ್ವ ಕವಿ ಜಾವ ಭಾಷೆಯಲ್ಲಿ ಕೃಷ್ಣಾಯನವೆಂಬ ಕಾವ್ಯ ರಚಿಸಿದ್ದಾನೆ. ಇವನ ಅನಂತರ ಕಡಿರಿಯ ದೊರೆಯಾದ ಕಾಮೇಶ್ವರನ ಹೆಸರು ಸ್ಮರದಹನ ಕಾವ್ಯದಲ್ಲಿ ಉಲ್ಲೇಖಿತವಾಗಿದೆ. ಕಾಮೇಶ್ವರನ ಮಗನಾದ ಜಯಾಭಯನದು ನರಸಿಂಹ ಲಾಂಛನ. ಪ್ರಜೆಗಳು ಇವನನ್ನು ವಿಷ್ಣುವಿನ ಅವತಾರವೆಂದು ಗೌರವಿಸುತ್ತಿದ್ದರು. ಇವನ ಆಶ್ರಯದಲ್ಲಿ ಪನುಲುಹ್ ಕವಿ ಭಾರತಯುದ್ಧ ಕಾವ್ಯವನ್ನು ಪುರ್ಣಗೊಳಿಸಿದ. ಹರಿವಂಶ ಮತ್ತು ಘಟೋತ್ಕಚ-ಇವು ಈ ಕವಿಯ ಇತರ ಎರಡು ಕಾವ್ಯಗಳು. ಜಯಭಯನ ಅನಂತರ ಬಂದ ರಾಜರ ವಿಚಾರವಾಗಿ ಅಷ್ಟೇನೂ ತಿಳಿಯದು. ಕಡಿರಿ ರಾಜ್ಯದ ಕೊನೆಯ ರಾಜನಾದ ಕೃತಜಯನ ವಿಚಾರವಾಗಿ ಪರರತನ್ ಎಂಬ ಗ್ರಂಥದಿಂದ ಅನೇಕ ವಿಷಯಗಳು ತಿಳಿಯುತ್ತವೆ. ಆದರೆ ಇದರಲ್ಲಿ ಕೊಟ್ಟಿರುವುದೆಲ್ಲ ವಾಸ್ತವವೆನ್ನಲಾಗುವುದಿಲ್ಲ. ಈ ದೊರೆ ತಾನೇ ದೇವರೆಂದು ಸಾರಿಕೊಂಡು, ಪುರೋಹಿತರೂ ತನಗೆ ನಮಸ್ಕಾರ ಮಾಡಬೇಕೆಂದು ಆಜ್ಞೆ ಮಾಡಿದನಂತೆ. ಇದರಿಂದ ಕೋಪಗೊಂಡ ಪುರೋಹಿತರು ನೆರೆ ಪ್ರದೇಶದ ಒಡೆಯನಾದ ಆಂಗ್ರೋಕನ ಆಶ್ರಯ ಪಡೆದರು. ಆಂಗ್ರೋಕ ಮೊದಲು ದರೋಡೆಗಾರನಾಗಿದ್ದ. ತನ್ನ ಯಜಮಾನನಾಗಿದ್ದ ತುಮಾಪೆಲಿನ ಗವರ್ನರನ್ನು ಕೊಂದು ಅವನ ಹೆಂಡತಿಯನ್ನು ಮದುವೆಯಾಗಿ ಕವಿಪರ್ವತದ ಪುರ್ವ ಭಾಗವನ್ನಾಳುತ್ತಿದ್ದ. ದೊರೆಗೂ ಪುರೋಹಿತರಿಗೂ ನಡುವೆ ಸಂಭವಿಸಿದ್ದ ವಿರಸದ ದುರುಪಯೋಗ ಪಡೆದುಕೊಂಡು ಆತ ರಾಜಸನೆಂಬ ಬಿರುದು ತಳೆದು ತಾನೇ ದೊರೆಯೆಂದು ಘೋಷಿಸಿಕೊಂಡ. 1222ರಲ್ಲಿ ಎರಡು ಬಾರಿ ಕೃತಜಯನ ಮೇಲೆ ಯುದ್ಧ ನಡೆಯಿತು. ಕಡಿರಿ ಅವನ ವಶವಾಯಿತು.[೨]
ಜಾವ ಸಾಮ್ರಾಜ್ಯಕ್ಕೆ ನಿಜವಾದ ಅಸ್ತಿಭಾರ ಹಾಕಿದ ಕಡಿರಿ ರಾಜ್ಯದ ಸಾಹಿತ್ಯ ಮತ್ತು ಕಲೆಗಳು ಬಹಳ ಮಟ್ಟಿಗೆ ಬೆಳೆದುವು. ಜಾವದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಜಾವ ಭಾಷೆಯಲ್ಲಿ ಅನೇಕ ಕಾವ್ಯಗಳು ರಚಿತವಾದುವು. ಇವುಗಳಿಂದ ಸ್ಫೂರ್ತಿಗೊಂಡ ಶಿಲ್ಪಿಗಳು, ಮಹಾಭಾರತ ಕಥೆಗಳನ್ನು ದೇವಾಲಯಗಳ ಗೋಡೆಗಳ ಮೇಲೆ ಕೆತ್ತಿದರು. ಕಡಿರಿ ರಾಜರು ಅನೇಕ ಕವಿಗಳಿಗೆ ಪ್ರೋತ್ಸಾಹ ನೀಡಿದರು. ತ್ರಿಗುಣ ಕವಿಯ ಕೃಷ್ಣಾಯನ ಕಾವ್ಯದಲ್ಲಿ ಕೃಷ್ಣ-ರುಕ್ಮಿಣಿಯರ ಕಥೆ ಹೃದಯಂಗಮವಾಗಿ ಚಿತ್ರಿತವಾಗಿದೆ. ಭಾರತಯುದ್ಧ ಈ ಕಾಲದ ಅತ್ಯಂತ ಮುಖ್ಯಗ್ರಂಥ. ಮ್ಪುಸೆಡ ಕವಿಯಿಂದ ಪ್ರಾರಂಭವಾದ ಈ ಕಾವ್ಯವನ್ನು ಪುನಲುಹ್ ಕವಿ ಪುರ್ಣಗೊಳಿಸಿದ. ಧಮ್ಙೀಯನ ಸ್ಮರದಹನವೂ ಒಂದು ಉತ್ತಮ ಕಾವ್ಯ. ಇದು ಕಾಳಿದಾಸನ ಕುಮಾರಸಂಭವದ ಆಧಾರದ ಮೇಲೆ ರಚಿತವಾದದ್ದು. ಜಾವದ ಚರಿತ್ರೆಯಲ್ಲಿ ಕಡಿರಿ ರಾಜ್ಯದ ಕಾಲದಲ್ಲಿ ಆದಷ್ಟು ಸಾಹಿತ್ಯನಿರ್ಮಾಣ ಮತ್ತೆ ಯಾವಾಗಲೂ ಆಗಲಿಲ್ಲವೆಂದು ಹೇಳಬಹುದು. ಅಷ್ಟೇ ಅಲ್ಲ. ಭಾರತೀಯ ಸಾಹಿತ್ಯದ ಪ್ರಭಾವ ಜಾವದಲ್ಲಿ ಎಷ್ಟೊಂದು ಗಾಢವಾಗಿದ್ದಿತೆಂಬುದೂ ಇದರಿಂದ ವ್ಯಕ್ತವಾಗುತ್ತದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ http://cdma.ap.gov.in/Kadiri/Basic_information_Municipality.html
- ↑ http://www.thehindu.com/todays-paper/tp-national/tp-andhrapradesh/anantapur-gets-two-more-revenue-divisions/article4855117.ece
- ↑ https://web.archive.org/web/20040616075334/http://www.censusindia.net/results/town.php?stad=A&state5=999