ಕಂಧ : ವೇದತತ್ತ್ವವೇತ್ತನಾದ ಒಬ್ಬ ಋಷಿ. ಕಂಡು ಎಂದೂ ಹೆಸರು. ಗೋಮತೀ ನದಿಯ ತೀರದಲ್ಲಿ ತೀವ್ರವಾದ ತಪಸ್ಸನ್ನು ಮಾಡುತ್ತಿದ್ದ. ಬೇಸಿಗೆಯ ಬಿರು ಬಿಸಿಲಿನಲ್ಲಿ ತಪಸ್ಸು ಮಾಡುತ್ತಿದ್ದ, ಮಳೆಗಾಲದ ಹಸಿ ನೆಲದಲ್ಲಿ ಮತ್ತು ಚಳಿಗಾಲದಲ್ಲಿ ಹಸಿ ಬಟ್ಟೆಯಲ್ಲಿ ತಪಸ್ಸನ್ನು ಮಾಡುತ್ತಿದ್ದ. ಇದನ್ನು ನೋಡಿ ದೇವೇಂದ್ರ ಬೆಚ್ಚಿ ಬೀಳುತ್ತಾನೆ. ತಪೋಭಂಗ ಮಾಡಲೋಸುಗ ದೇವೇಂದ್ರ, 'ಪ್ರಮ್ಲೋಚಾ' ಎಂಬ ಅಪ್ಸರ ಸ್ತ್ರೀಯನ್ನು ಕಳುಹಿಸಿದ. ಆ ದಿವ್ಯಾಂಗನೆಯೊಡನೆ ಕಂಧ ಋಷಿ ಒಂಬೈನೂರು ವರ್ಷಗಳ ಕಾಲ ಸಂಸಾರಜೀವನ ನಡೆಸಿದ. ಒಂದು ದಿನ ಜ್ಞಾನೋದಯವಾಗಿ ಇಂದ್ರಿಯಾಧೀನ ಜೀವನಕ್ಕೂ ದೇವತೆಗಳ ತಪೋಭಂಗ ಪ್ರಯತ್ನಕ್ಕೂ ಧಿಕ್ಕಾರ ಹೇಳಿ ಬ್ರಹ್ಮಪಾರವೆಂಬ ಮಹಾತಪಸ್ಸು ಮಾಡಲು ಪುರುಷೋತ್ತಮ ಕ್ಷೇತ್ರಕ್ಕೆ ಹೋದ. ಅವನು ಪ್ರಮ್ಲೋಚಾಳನ್ನು ಶಾಪಿಸುವುದಿಲ್ಲ. ಅವಳು ಹೆಂಡತಿಯಾದ್ದರಿಂದ ಅವಳನ್ನು ಶಾಪಿಸದೆ, ಮತ್ತೆ ಸ್ವರ್ಗಕ್ಕೆ ಕಳುಹಿಸುತ್ತಾನೆ. ಇವರ ಮಗಳಾದ 'ಮಾರಿಷೆ'ಯನ್ನು ಪ್ರಚೇತಸ್ ಮುನಿಯು ವರಿಸಿದ. ಪ್ರೇಮಬಂಧ ಎಷ್ಟು ಪ್ರಬಲವಾದುದೆಂಬುದಕ್ಕೆ ಕಂಧ ವೃತ್ತಾಂತ ಉತ್ತಮ ನಿದರ್ಶನವಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಂಧ&oldid=719663" ಇಂದ ಪಡೆಯಲ್ಪಟ್ಟಿದೆ