ಓಸೈರಿಸ್
ಈಜಿಪ್ಟ್ ದೇಶದ ಪುರಾಣ ಕಥೆಗಳಲ್ಲಿ ಬರುವ ಪ್ರಸಿದ್ಧ, ದೇವತೆ. ಗೆಬ್ (ಭೂದೇವತೆ) ಮತ್ತು ನಟ್ (ಜಲದೇವತೆ) ದೇವತೆಗಳ[೧] ನಾಲ್ವರು ಮಕ್ಕಳಲ್ಲಿ ಮೊದಲನೆಯವ. ಉಳಿದ ಮೂವರು ಐಸಿಸ್ (ಹೆಣ್ಣು), ಸೆತ್ ಮತ್ತು ನೆಫ್ತಿಸ್. ಓಸೈರಿಸ್ ತನ್ನ ತಂಗಿ ಐಸಿಸ್ಳನ್ನೇ ಮದುವೆಯಾಗಿ ಹೋರಸನನ್ನು ಪಡೆದಳೆಂದು ಪುರಾಣ ಕಥೆ.
ಈಜಿಪ್ಟ್ ಜನರ ನಂಬಿಕೆ
ಬದಲಾಯಿಸಿಈಜಿಪ್ಟ್ ಜನರ ನಂಬಿಕೆಯಂತೆ ಭೂಮಿ ಗಂಡು, ಆಕಾಶ ಹೆಣ್ಣು, ಜಲ ಹಾಗೂ ಸಸ್ಯವರ್ಗಗಳ ಅಧಿದೇವತೆಯಾದ ಓಸೈರಿಸ್ ಅತ್ಯಂತ ಜನಪ್ರಿಯ ದೇವತೆ. ಈತ ಜೀವದಾತನೆಂದು ಪುಜೆಗೊಳ್ಳುತ್ತಿದ್ದ.
ಓಸೈರಿಸ್
ಬದಲಾಯಿಸಿಕೆಲ ವಿದ್ವಾಂಸರ ಮತದಂತೆ ಓಸೈರಿಸ್ ಕೆಳ ಈಜಿಪ್ಟನ್ನು ಆಳಿದ ದೊರೆ. ಬರಬರುತ್ತ ಪಶ್ಚಿಮದ ದೊರೆಯೆನಿಸಿದ. ಅಂದರೆ ಸತ್ತ ಆನಂತರ ಜೀವಾತ್ಮಗಳು ತಂಗುವ ಪರಲೋಕದ ಅರಸು-ಎಂದು ಪ್ರಸಿದ್ಧಿ ಪಡೆದ. ಪರಲೋಕ ಸೇರಿದ ಜೀವಾತ್ಮಗಳ ಧರ್ಮಕರ್ಮಗಳನ್ನು ನ್ಯಾಯದ ತಕ್ಕಡಿಯಲ್ಲಿ ತೂಗಿ ನೋಡುವ ಆಧಿದೈವ ಓಸೈರಿಸ್ನನ್ನು ಮರಣಾನಂತರ ಒದಗುವ ಒಳಿತು ಕೆಡಕುಗಳಲ್ಲಿ ಅಪಾರ ಶ್ರದ್ಧೆಯುಳ್ಳ ಈಜಿಪ್ಟಿನ ಜನ ಪ್ರಮುಖ ದೇವತೆಯೆಂದು ಪರಿಗಣಿಸಿದುದರಲ್ಲಿ ಔಚಿತ್ಯವಿತ್ತು.
ಪುರಾಣ
ಬದಲಾಯಿಸಿಸು. 85ರಲ್ಲಿ ರಚಿತವಾದ ಪ್ಲುಟಾರ್ಕನ ಡಿ ಐಸೈಡ್ ಎಟ್ ಓಸಿರೈಡ್ ಗ್ರಂಥದ ಪ್ರಕಾರ ಓಸೈರಿಸ್ನನ್ನು ಸೆತ್ ಕೊಂದನೆಂದೂ ಅವನ ದೇಹವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ನೈಲ್ ನದಿಗೆ ಎಸೆಯಲಾಯಿತೆಂದೂ ಅದು ತೇಲಿಕೊಂಡು ಬಂದು ಸಿರಿಯದ ನದೀ ದಂಡೆಯ ಮೇಲಿದ್ದುದನ್ನು ಐಸಿಸ್ ಕಂಡು ಈಜಿಪ್ಟ್‌ಗೆ ತಂದಳೆಂದೂ ಅಲ್ಲಿ ಓಸೈರಿಸ್ನ ದೇಹದ ಎದೆಭಾಗ ಮಾತ್ರ ಇರುವುದನ್ನು ಗಮನಿಸಿದ ಐಸಿಸ್ ಆತನ ಉಳಿದೆಲ್ಲ ಭಾಗಗಳನ್ನು ಸಂಗ್ರಹಿಸಿ ಕೂಡಿಸಿದಳೆಂದೂ ಆಗ ದೇವತೆಗಳು ಓಸೈರಿಸ್ಗೆ ಜೀವದಾನಮಾಡಿ ದೇವತ್ವ-ಅಮರತ್ವಗಳನ್ನು ಕರುಣಿಸಿದರೆಂದೂ ಕಥೆ. ವ್ಯವಸಾಯ ಮತ್ತು ಸೌಂದರ್ಯಾಭಿಜ್ಞತೆಯನ್ನು ಕರುಣಿಸುವ ಈ ದೇವತೆಯ ಆಕಾರ ಮಮ್ಮಿಯಂತಿದ್ದು ತಲೆಯಲ್ಲಿ ಕಿರೀಟ, ಕೈಯಲ್ಲಿ ಚಾವುಟಿ, ಮತ್ತೊಂದು ಕೈಲಿ ಬಾಗುದಂಡವಿದೆ. ಅಬಿಡಾಸ್ ನಗರ ಒಂದು ಕಾಲದಲ್ಲಿ ಈ ದೇವತೆಯ ಆರಾಧನೆಯ ಮುಖ್ಯ ಕೇಂದ್ರವಾಗಿತ್ತು.
ಉಲ್ಲೇಖಗಳು
ಬದಲಾಯಿಸಿ- ↑ Wilkinson, Richard H. (2003). The Complete Gods and Goddesses of Ancient Egypt. London: Thames & Hudson. p. 105. ISBN 0-500-05120-8.