ಐಸ್ಲೆಂಡಿಕ್ ಸಾಹಿತ್ಯ
ಐಸ್ಲೆಂಡಿಕ್ ಸಾಹಿತ್ಯ ಚರಿತ್ರೆಯನ್ನು ಮುಖ್ಯವಾಗಿ ಮೂರು ಕಾಲ ವಿಭಾಗಗಳಲ್ಲಿ ಅವಲೋಕಿಸಬಹುದು: ಪ್ರಾಚೀನಕಾಲ (9-14ನೆಯ ಶತಕದವರೆಗೆ) ಮಧ್ಯಕಾಲ (14-19ನೆಯ ಶತಕದವರೆಗೆ) ಆಧುನಿಕ ಕಾಲ (19ನೆಯ ಶತಕದಿಂದ ಇಂದಿನವರೆಗೆ).
ಪ್ರಾಚೀನ ಸಾಹಿತ್ಯ
ಬದಲಾಯಿಸಿಪ್ರಾಚೀನ ಸಾಹಿತ್ಯದಲ್ಲಿ ಎಡಸಾಹಿತ್ಯ, ಸ್ಕಾಲ್ಡಿಡ್ ಕಾವ್ಯ, ಸಾಗಾ (ವಂಶಾವಳಿ ಕಥನಕಾವ್ಯ) ಎಂಬ ಮೂರು ಪ್ರಕಾರಗಳನ್ನು ಕಾಣಬಹುದು. ಪೌರಾಣಿಕ ಅಂದರೆ ದೈವೀಮಹಿಮೆಗಳ ಕಥೆಯೊ, ವೀರರ ಸಾಹಸಗಳ ಕಥೆಯೊ, ಧರ್ಮಬೋಧೆಯೊ ವಸ್ತುವಾಗಿದ್ದ ಕಾವ್ಯ ಮೊದಲನೆಯದು. ಇವುಗಳ ಸಂಕಲನವೆ ಎಡ ಸಾಹಿತ್ಯವೆನಿಸಿತು. ಸರಳವಾದ ಛಂದಸ್ಸು, ಗಂಭೀರವಾದ ಗತಿ, ಪ್ರಾಸ-ಅನುಪ್ರಾಸಗಳ ಸರಣಿ-ಇವು ಈ ಕಾವ್ಯದ ಮುಖ್ಯ ಲಕ್ಷಣ. ಇವನ್ನು ಬರೆದ ಕವಿಗಳ ಬಗ್ಗೆ ಏನೂ ತಿಳಿದಿಲ್ಲ. ಸಂಗ್ರಹಿಸಿದವರು ಯಾರು ಎಂಬ ಬಗ್ಗೆಯೂ ವಾದವಿವಾದಗಳಿವೆ. 13ನೆಯ ಶತಕದಲ್ಲಿ ಗ್ರಂಥ ರೂಪದಲ್ಲಿ ಮೊದಲಬಾರಿಗೆ ಬೆಳಕು ಕಂಡ ಗದ್ಯ ಎಡದ ಸಂಗ್ರಹಕಾರ ಸ್ನೋರಿ ಸ್ಟ್ಯೂಲೂರ್ಯ್‌ಸನ್ ಎಂದೂ 16ನೆಯ ಶತಕದಲ್ಲಿ ಪ್ರಕಟವಾದ ಕಾವ್ಯ ಎಡದ ಸಂಗ್ರಹಕಾರ ಪಂಡಿತ ಸೀಮುಂಡ್ ಸೀಗ್ಫ್ಯೂಸುನ್ ಎಂದೂ ತಿಳಿಯಲಾಗಿದೆ. ವಿಜಯಗೀತೆಗಳು, ಶೋಕಗೀತೆಗಳು, ಸುಭಾಷಿತಗಳು ಸಹ ಈ ಕಾವ್ಯಭಂಡಾರದಲ್ಲಿವೆ. ಪೌರಾಣಿಕ ಕಾವ್ಯಗಳಲ್ಲಿ ವಾಲ್ಯೂಸ್ಪಾ, ರಾಗ್ನೋರೊಕ್ ಮೊದಲಾದ ಶ್ರೇಷ್ಠಕೃತಿಗಳಿವೆ. ಇವುಗಳ ಕವಿ, ಕಾಲ,ನಿರ್ಣಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಛಂದೋವೈವಿಧ್ಯ, ಪ್ರೌಢವಾದ ಭಾಷೆ, ಶೈಲಿ, ರಚನಾಪರಿಣತಿಗಳನ್ನು ಮೆಚ್ಚುವಲ್ಲಿ ಒಮ್ಮತವಿದೆ.
10ನೆಯ ಶತಕದಿಂದ 13ನೆಯ ಶತಕದವರೆಗೆ ಪ್ರಧಾನವಾಗಿ ಬೆಳೆದ ಸ್ಕಾಲ್ಡಿಕ್ ಕಾವ್ಯಮಾದರಿ ಆಸ್ಥಾನ ಕವಿಗಳ ಕಾಣಿಕೆ. ರಾಜರ ಇಲ್ಲವೆ ಶ್ರೀಮಂತರ ಕೃಪಾ ಪೋಷಿತರಾದ ಪಂಡಿತಕವಿಗಳು ತಮ್ಮ ಆಶ್ರಯದಾತರ ಸ್ತುತಿಯನ್ನೊ ಕೀರ್ತಿವಾಚನವನ್ನೊ ಸಾಹಸಗಳ ಕಥೆಯನ್ನೊ ರಂಜಕವಾಗಿ ಆಲಂಕಾರಿಕ ಭಾಷೆಯಲ್ಲಿ ಬರೆದರು. ಸಂಕೀರ್ಣ ರಚನೆಯೇ ಇವುಗಳ ವಿಶಿಷ್ಟ ಲಕ್ಷಣ. ರಚನೆಯಲ್ಲಿ ಕೇವಲ ಆಡಂಬರ, ಕಥನದಲ್ಲಿ ಒಂದೇ ಧಾಟಿ ಇದ್ದು ಅಂತಃಕರಣದ ಮಿಡಿತವೇ ಇಲ್ಲದ ಈ ಕಾವ್ಯಗಳಿಗೆ ಐತಿಹಾಸಿಕ ಮಹತ್ತ್ವವೊಂದು ಬಿಟ್ಟರೆ ಬೇರೆ ಯಾವ ಶ್ರೇಷ್ಠ ಸಾಹಿತ್ಯದ ಬೆಲೆಯೂ ಇಲ್ಲ. ಈ ಕಾವ್ಯಪರಂಪರೆಯ ಆದ್ಯಪ್ರವರ್ತಕ 9ನೆಯ ಶತಕದ ನಾರ್ವೆಯ ಬ್ರಾಗಿ ಎಂಬ ಕವಿ.
ಐಸ್ಲೆಂಡಿನಲ್ಲಿ ಈಗಿಲ್ ಸ್ಕ್ಯೂಲ್ಲಾಗ್ರಿಮ್ಸುನ್ (10ನೆಯ ಶತಕ) ಈ ಪರಂಪರೆಯ ಮೊದಲ ಹಾಗೂ ಶ್ರೇಷ್ಠ ಕವಿ. ಅನಂತರದ ಕವಿಗಳಲ್ಲಿ ಹಾಲ್ ಫ್ರೆಡೃಊಟ್ಟಾರ್ ಸುನ್, 11ನೆಯ ಶತಕದಲ್ಲಿ ಅಪಾರ ಮನ್ನಣೆ ಗಳಿಸಿದ ಸಿಗ್ಫಾತೃಥೂರ್ಡಾರ್ಸುನ್ (ಈತ ಓಲಾಫ್ ಹಾರಾಲ್ಡ್‌ಸುನ್ ದೊರೆಯ ಆಪ್ತಮಿತ್ರ ಮತ್ತು ಆಸ್ಥಾನಕವಿ.) ಮತ್ತು ಆನೂರ್ಯ್‌ರ್ ಯಾರ್ಲಾಸ್ಕಾಲ್ ಮುಖ್ಯರು. 12ನೆಯ ಶತಕದ ಅನಂತರ ಈ ಬಗೆಯ ಕಾವ್ಯರಚನೆ ಕ್ರಮೇಣ ಖಿಲವಾಯಿತು. ಸ್ಕಾಲ್ಡಿಕ್ ಕಾವ್ಯಲಕ್ಷಣಗಳನ್ನೂ ವಿಶಿಷ್ಟ ಪ್ರಯೋಗವೆನಿಸಿದ ಕೇನ್ನಿಂಗ್ಸ್ ಎಂಬ ರೂಪಕ ನುಡಿಗಟ್ಟುಗಳ ಬಹು ಸೊಗಸಾದ ವಿವರಣೆಗಳನ್ನೂ ಗದ್ಯ ಎಡದಲ್ಲಿ ನೋಡಬಹುದು.
ಸಾಗಾ ಎಂಬುದು ಐಸ್ಲೆಂಡಿನ ವಿಶಿಷ್ಟ ಸೃಷ್ಟಿ. ಇಂಥ ಸಾಹಿತ್ಯರೂಪ ಬೇರೆ ಯಾವ ಸಾಹಿತ್ಯದಲ್ಲೂ ಇಲ್ಲ. ವೀರ ವಂಶಾವಳಿ ಕಥೆಯೇ ಸಾಗಾ ರೂಪ ತಾಳಿ ತಮ್ಮ ತಮ್ಮ ವಂಶದ ಬಗ್ಗೆ, ಕುಲಸ್ಥರ ಬಗ್ಗೆ ಇದ್ದ ಉತ್ಕಟವಾದ ಗೌರವ ಅಭಿಮಾನಗಳೇ ಅನೇಕ ತಲೆಮಾರುಗಳ ವಂಶಾವಳಿ ಕಥೆಗಳು ಬೆಳೆಯಲು ಕಾರಣವಾದುವು. ಐತಿಹಾಸಿಕ ಘಟನೆಗಳ ಸುತ್ತ ಹೆಣೆದ ರಮ್ಯವಾದ ಕಾಲ್ಪನಿಕ ಕಥೆ ಸಾಗಾದ ಸಾಧಾರಣ ಮಾದರಿ. 12-15ನೆಯ ಶತಕದವರೆಗೂ ಈ ಸಾಹಿತ್ಯ ಪ್ರಕಾರ ಬಹು ಜನಪ್ರಿಯವಾಗಿತ್ತು. ಕಥನ ಕೌಶಲ ಐಸ್ಲೆಂಡಿನವರಲ್ಲಿ ರಕ್ತಗತವಾಗಿ ಬಂದದ್ದು. ಐರಿಷ್ ಪ್ರಭಾವದಿಂದ ಈ ನೈಪುಣ್ಯ ಹೆಚ್ಚು ಕಲಾತ್ಮಕವಾಯಿತು. ವಂಶಾವಳಿ ಕಥೆಗಳಲ್ಲಿ ಸುಮಾರು 35 ಕೃತಿಗಳು ಅಮೋಘವಾಗಿವೆ. ಕೆಲವು ಗಣ್ಯ ಮನೆತನಗಳ ಚರಿತ್ರೆ ಇವುಗಳ ವಸ್ತು. ಕಥೆಯ ಉದ್ದಕ್ಕೂ ಒಂದು ಬಗೆಯ ವಿಷಾದದ ಛಾಯೆ ಹರಡಿದರೂ ಅಲ್ಲಲ್ಲಿ ಹಾಸ್ಯ, ಶೃಂಗಾರಗಳ ಅಂಶಗಳೂ ಸೇರಿ ಉಲ್ಲಾಸವುಂಟುಮಾಡುತ್ತವೆ. ಇವು ಉತ್ತಮ ಐತಿಹಾಸಿಕ ದಾಖಲೆಗಳಾಗದಿದ್ದರೂ ಅಂದಿನ ಜನಜೀವನ ಸಂಸ್ಕೃತಿಗಳನ್ನು ಬಹಳ ಚೆನ್ನಾಗಿ ಪ್ರತಿಬಿಂಬಿಸುತ್ತವೆ. ಸರಳವಾದ ಗದ್ಯದಲ್ಲಿರುವ ಈ ಕಥೆಗಳು ಅಚ್ಚುಕಟ್ಟಾಗಿವೆ, ಸ್ವಾರಸ್ಯವಾಗಿವೆ, ಪರಿಣಾಮಕಾರಿಯಾಗಿವೆ. ಕತೆಗಾರ ಕಥೆಯ ಪಾತ್ರಗಳ ಘಟನೆಗಳ ಬಗ್ಗೆ ಯಾವ ಟೀಕೆ, ವ್ಯಾಖ್ಯಾನವನ್ನೂ ಮಾಡದೆ, ಯಾವ ನೀತಿ ತತ್ತ್ವಗಳ ಪ್ರತಿಪಾದನೆಗೂ ಕೈಹಾಕದೆ, ಕೇವಲ ವಸ್ತುನಿಷ್ಠವಾಗಿ ಕಥೆಯನ್ನು ಹೇಳುವುದು ಸಾಗಾ ಮಾದರಿಯ ವಿಸ್ಮಯಕರ ವಿಶೇಷ ಗುಣ. ನಿರ್ವಿಕಾರವಾಗಿ ಕಥೆ ಹೇಳುವುದಷ್ಟೆ ಕಥೆಗಾರನ ಕೆಲಸ. ಉಳಿದುದು ಓದುಗರ ಆಲೋಚನೆಗೆ, ಕಲ್ಪನೆಗೆ ಬಿಟ್ಟದ್ದು. ಸಂವಿಧಾನ ಕೌಶಲದಲ್ಲಿ ಸಂಭಾಷಣೆಯ ಚುರುಕಿನಲ್ಲಿ ಪ್ರತಿಭೆಯ ಹೊಳಪು ಕಾಣುತ್ತದೆ. ಕಥೆಯ ಘಟನೆಗಳೆಲ್ಲಕ್ಕೂ ವಿಧಿಯೇ ಅವ್ಯಕ್ತ ಸೂತ್ರಧಾರಿ ಎಂಬ ಮನೋಭಾವ ಕಥೆಗೆ ಗಾಂಭೀರ್ಯವನ್ನೊದಗಿಸುತ್ತದೆ. ಜೀವಪುರ್ಣವಾದ ಪಾತ್ರಸೃಷ್ಟಿ ಇನ್ನೊಂದು ವಿಶೇಷ ಗುಣ. ನ್ಯಾಲ್ಸ್ ಸಾಗಾ ಈ ಎಲ್ಲ ಗುಣಗಳಿಂದಲೂ ಕೂಡಿದ ಶ್ರೇಷ್ಠ ಕೃತಿ. ಈಗಿಲ್ಸ್ ಸಾಗಾ, ಲಾಕ್ಸ್ ಡ್ಯೂಲ ಸಾಗಾ, ಗ್ರೆಟ್ಟಿಸ್ ಸಾಗಾ, ದಿ ವೊಲ್ಯ್ಸೂಂಗಾ ಸಾಗಾ, ಗುನ್ನ ಲೌಗ್ಸ್ ಸಾಗಾ ಮುಂತಾದುವು ಪ್ರಖ್ಯಾತವಾಗಿವೆ. 12-13ನೆಯ ಶತಕಗಳಲ್ಲಿ ರಚಿತವಾದ ಸಾಗಾಗಳಲ್ಲಿ ಐತಿಹಾಸಿಕ ಅಂಶ ಹೆಚ್ಚು. ಪೌರಾಣಿಕ ಮತ್ತು ರಮ್ಯಾದ್ಭುತ ಅಂಶ ಹೆಚ್ಚಾಗಿರುವ ಕೆಲವು ಕೃತಿಗಳೂ ಇವೆ. ಅನಂತರ 16ನೆಯ ಶತಕದವರೆಗೂ ಬಂದ ಕೃತಿಗಳಲ್ಲಿ ಅನುಕರಣೆಯೇ ಹೆಚ್ಚು. ಹಿಂದೆ ರಚಿತವಾದ ವಂಶಾವಳಿಗಳನ್ನು ಪ್ರತಿಮಾಡುವ, ಸಂಪಾದಿಸುವ ಕಾರ್ಯ ಈ ಕಾಲದಲ್ಲಾಯಿತು. ಕ್ರಮೇಣ ಕ್ರೈಸ್ತಧರ್ಮದ ಕಥೆಗಳೂ ಸಂತರ ಪವಾಡಗಳೂ ಸಾಗಾ ಬರೆವಣಿಗೆಗೆ ಸಾಮಗ್ರಿಯಾದುವು. ಪಾದ್ರಿ ಐನಾರ್ ಸ್ಯ್ಕೂಲಾಸುನ್ನ ಗೈಸ್ಲಿ, ಸಾಧು ಐಸ್ಟೈನ್ ಆಸ್ಗ್ರಿಮ್ಸುನ್ನ ಲೀಲ್ಯಾ ಅಮೋಘವಾದ ಕೃತಿಗಳು. ಲ್ಯೋಮ್ಯೂರ್ ಸಾಗಾದ ಕರ್ತೃ ಪಾದ್ರಿಯೋನ್ ಆರಾಸುನ್ 16ನೆಯ ಶತಮಾನದ ಆದಿಯಲ್ಲಿ ಒಂದು ಮುದ್ರಣಯಂತ್ರವನ್ನು ಬಳಕೆಗೆ ತಂದನಾಗಿ ಅನೇಕ ಧಾರ್ಮಿಕ ಹಾಗೂ ಸಾಹಿತ್ಯ ಗ್ರಂಥಗಳನ್ನು ಅನ್ಯಭಾಷೆಗಳಿಂದ ಐಸ್ಲೆಂಡಿಕ್ ಭಾಷೆಗೆ ಅನುವಾದ ಮಾಡಲಾಯಿತು.
ಮಧ್ಯಕಾಲ
ಬದಲಾಯಿಸಿ14ನೆಯ ಶತಮಾನದಲ್ಲಿ ರಿಮ್ಯೂರ್ ಎಂಬ ಹೊಸಬಗೆಯ ಕಾವ್ಯವೊಂದು ಉದಯವಾಗಿ ಸುಮಾರು 500 ವರ್ಷಕಾಲ ಜನಪ್ರಿಯ ಕಾವ್ಯಮಾರ್ಗವಾಯಿತು. ಈ ಮಾದರಿಯಲ್ಲಿ ನೃತ್ಯಗೀತೆ, ಹಾಡು, ಗಾಥೆಗಳು ಹೆಚ್ಚು, ಪ್ರಣಯವೊ ಸಾಹಸದ ಕಥನವೊ, ಹೀನವಿಡಂಬನೆಯೊ ಇವುಗಳ ವಸ್ತು. ಭಾಷೆ ಸಂಸ್ಕೃತಿಗಳ ಅಧ್ಯಯನದ ದೃಷ್ಟಿಯಿಂದ ಗಮನಾರ್ಹವಾಗಬಹುದಾದ ಈ ಕವನಗಳಲ್ಲಿ ಸಾಹಿತ್ಯಗುಣ ಕಡಿಮೆ. ಲೂಥರನ ಧರ್ಮಸುಧಾರಣೆಯ ಅನಂತರ ಈ ಕಾವ್ಯಪದ್ಧತಿ ಹೆಚ್ಚು ಬಳಕೆಗೆ ಬಂತು. 20ನೆಯ ಶತಮಾನದ ಆದಿಯವರೆಗೂ ಐಸ್ಲೆಂಡಿಕ್ ಸಾಹಿತ್ಯದ ಪ್ರಬಲ ಅಭಿವ್ಯಕ್ತಿ ಸಾಧನವಾಗಿದ್ದ ಈ ಕಾವ್ಯಶೈಲಿ ಕ್ರಮೇಣ ಸವೆದ ಜಾಡಾಗಿ ಕೃತಕವೂ ಸಾಂಪ್ರದಾಯಿಕವೂ ಆದ ಸಿದ್ಧರೂಪ ಪಡೆಯಿತು. ಈ ಸಂಪ್ರದಾಯದ ಹಾಡುಗಬ್ಬಗಳಲ್ಲಿ ಟಿಸ್ಟ್ರ್ಯಾಮ್ಸ್‌ಕ್ವೈದಿ ಮನಸೆಳೆವ ಕಥೆ ಮತ್ತು ಹಾಡಿನ ಮೋಡಿಗಳು ಮೇಳವಿಸಿದ ಸುಂದರಗಾಥೆ. ಧರ್ಮಸುಧಾರಣೆಯ ಪ್ರಭಾವದಿಂದ ಸ್ತೋತ್ರಗಳ ರಚನೆ ಜನಪ್ರಿಯವಾಯಿತು. ಪಾದ್ರಿ ಗ್ಯೂಡ್ ಬ್ರಾಂಡ್ಯೂರ್ ಥೂರ್ಲಾಕ್ಸೂನ್ ಅನೇಕ ಸುಂದರ ಸ್ತೋತ್ರಗಳನ್ನು ರಚಿಸಿದ. ಐನಾರ್ ಸಿಗ್ಯೂರ್ಡ್ಸೂನ್ 16ನೆಯ ಶತಕದ ಬಹು ದೊಡ್ಡ ಕವಿ. ಇದೇ ಕಾಲದಲ್ಲಿ ವೀಕಿ ವಾಕರ್ ಎಂಬ ನವೀನ ಶೈಲಿಯ ಗಾಥೆಗಳು ಪ್ರಚಾರಕ್ಕೆ ಬಂದುವು. ಮುಂದೆ ಮೂರು ಶತಕಗಳ ಕಾಲ ಇವುಗಳ ಪ್ರಭಾವವಿತ್ತು. ಇತಿಹಾಸ ಪುರಾತತ್ವಗಳ ಬಗ್ಗೆ ಬೆಳೆದ ಆಸಕ್ತಿಯಿಂದ ಅನೇಕ ಇತಿಹಾಸ ವೃತ್ತಾಂತಗಳು ರಚಿತವಾದುವು. ಪ್ರಾಚ್ಯ ಗ್ರಂಥ ಸಂಪಾದನಕಾರ್ಯವೂ ಆಯಿತು. ಯೋನ್ ಎಸ್ಟೊಲಿನ್ನನ ಆನಲ್ಸ್ ಆಫ್ ಐಸ್ಲೆಂಡ್ ಸೂಕ್ಷ್ಮ ಐತಿಹಾಸಿಕ ಅವಲೋಕನವಾಗಿದೆ. ಉಜ್ಜ್ವಲ ಸಾಹಿತ್ಯಕೃತಿಯೂ ಆಗಿದೆ. ಪಾದ್ರಿ ಬ್ರಿನ್ಯೋಲ್ಫ್ ಸ್ವೀನ್ಸನ್ ಎಡ ಕಾವ್ಯವನ್ನು ಸಂಗ್ರಹಿಸಿ ಸಂಪಾದಿಸಿದ. 17ನೆಯ ಶತಕದ ಇಬ್ಬರು ಹಿರಿಯ ಕವಿಗಳಲ್ಲಿ ಹಾಲ್ ಗ್ರಿಮ್ಯೂರ್ ಪೀಟರ್ಸುನ್ ಸ್ತೋತ್ರಗೀತೆಗಳಲ್ಲಿ ಅಗ್ರಗಣ್ಯ. ಸ್ಟೀಫ್ಯಾನ್ ಓಲಾಫ್ಸುನ್ ಭಾವಗೀತೆಗಳಿಗೂ ನಿತ್ಯಜೀವನದ ವಾಸ್ತವಚಿತ್ರಣಕ್ಕೂ ಕೆಲವು ಹಾಸ್ಯ ವಿಡಂಬನ ಕೃತಿಗಳಿಗೂ ಖ್ಯಾತನಾದ. ಈ ಕಾಲ ಜ್ಞಾನಶೋಧನೆಗೆ ಹೆಸರಾದಂತೆ ವಾಮಾಚಾರಕ್ಕೂ ಪ್ರಸಿದ್ಧವಾಗಿತ್ತು. ಯೋನ್ ಗ್ಯೂಮ್ಯುಂಡ್ಸುನ್ನನ ವೈಜ್ಞಾನಿಕ ಗ್ರಂಥಗಳೂ ಯೋನ್ ಮಾಗ್ನೂಸುನ್ನ ಅಪ್ರತಿಮ ಕೃತಿ ಪೀಸ್ಲಾರ್ ಸಾಗಾ (ವಾಮಾಚಾರದ ವಿರುದ್ಧ ನಡೆಸಿದ ಹೋರಾಟದ ಕಥೆ), ಭಾರತಪ್ರವಾಸ ಮಾಡಿಬಂದ ಯೋನ್ ಊಲಾಫ್ಸುನ್ನನ ಐಫಿ ಸಾಗಾ ಎಂಬ ಆತ್ಮಕಥೆ ಈ ಯುಗದ ವಿವಿಧ ಮನೋಧರ್ಮಗಳನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ. 18ನೆಯ ಶತಮಾನ ವೈಚಾರಿಕ ವೈಜ್ಞಾನಿಕ ಯುಗ. ಭೂವಿವರಣೆ, ಬೇಸಾಯ, ಉದ್ಯಾನಕಲೆ ಮುಂತಾದವಲ್ಲಿ ಅನೇಕ ಶಾಸ್ತ್ರಗ್ರಂಥಗಳು ರಚಿತವಾದುದು ಈಗಲೇ. ಹಾಲ್ಫ್‌ಡ್ಯಾನ್ ಐನಾರ್ ಸುನ್ ಬರೆದ ಐಸ್ಲೆಂಡಿನ ಸಮಗ್ರ ಇತಿಹಾಸ ಪ್ರಕಟವಾದದ್ದು ಈಗಲೇ. ಅನೇಕ ಸ್ವತಂತ್ರ ಕೃತಿಗಳಿಂದಲೂ ಅದಕ್ಕೂ ಮಿಗಿಲಾಗಿ ಮಿಲ್ಟನ್ ಮತ್ತು ಪೋಪರ ಇಂಗ್ಲಿಷ್ ಕಾವ್ಯಗಳ ಅನುವಾದದಿಂದಲೂ ಯೋನ್ ಥೂರ್ಲಾಕ್ಸುನ್ ಈ ಶತಕದ ಶ್ರೇಷ್ಠ ಕವಿಯೆನಿಸಿದ. ಮುಂದಿನ ಪೀಳಿಗೆಯ ಕವಿಗಳ ಮೇಲೆಲ್ಲ ಈತನ ಪ್ರಭಾವ ಬಿತ್ತು.
ಆಧುನಿಕ ಕಾಲ
ಬದಲಾಯಿಸಿರಾಷ್ಟ್ರದ ಹಾಗೂ ಸಾಹಿತ್ಯದ ನವೋದಯಕಾಲ 19ನೆಯ ಶತಮಾನದೊಂದಿಗೇ ಆರಂಭವಾದರೂ ಅದರ ಪುರ್ವ ಸೂಚನೆಗಳು 18ನೆಯ ಶತಕದ ಅಂತ್ಯಭಾಗದಲ್ಲೇ ಕಾಣತೊಡಗಿದ್ದವು. ಕೈಗಾರಿಕಾ ಕ್ರಾಂತಿ, ವಾಣಿಜ್ಯ ಸುಧಾರಣೆಗಳಿಂದ ಐಸ್ಲೆಂಡಿನ ಜನಜೀವನದಲ್ಲಿ ನವಜಾಗೃತಿಯುಂಟಾಯಿತು. ಹೊಸ ವಿಚಾರಧಾರೆಯ ಬಗ್ಗೆ ಹುಟ್ಟಿದ ಆಸಕ್ತಿ ಪ್ರಾಚೀನ ಪರಂಪರೆಯಲ್ಲಿ ಇದ್ದ ಅಪಾರ ಶ್ರದ್ಧೆಯನ್ನು ತಗ್ಗಿಸಲಿಲ್ಲ. ಜೊತೆಗೆ ಉತ್ಕಟ ರಾಷ್ಟ್ರೀಯ ಭಾವನೆ ಬದುಕಿಗೊಂದು ಧೈರ್ಯವನ್ನು ಕಲ್ಪಿಸಿತು. ವೈವಿಧ್ಯಪುರ್ಣವಾಗಿ ಸತ್ತ್ವಯುತವಾಗಿ ಸಾಹಿತ್ಯ, ಕಲೆ ಬೆಳೆದು ಸಮೃದ್ಧವಾದುವು. ಹೊಸ ಮುದ್ರಣಯಂತ್ರದ ಸ್ಥಾಪನೆ ಕ್ರೈಸ್ತಮಠಗಳ ಅಚ್ಚುಕೂಟದ ಏಕಸ್ವಾಮಿತ್ವವನ್ನು ಭಂಗಗೊಳಿಸಿ ಸಾಹಿತ್ಯದ ಹೊಸ ಯುಗದ ನಾಂದಿಯನ್ನು ಹಾಡಿತು. ಅನೇಕ ಸಾಹಿತ್ಯ ಸಂಸ್ಥೆಗಳು ಆರಂಭವಾಗಿ ಹಲವಾರು ಗ್ರಂಥಗಳ ಪ್ರಕಾಶನ ಕಾರ್ಯದಲ್ಲಿ ತೊಡಗಿದುವು. ರಾಸ್ಮುಸ್ ಕ್ರಿಶ್ಚಿಯನ್ ರಾಸ್ಕ್ ಎಂಬ ಡೇನಿಷ್ ಭಾಷಾಪಂಡಿತ ಸ್ಥಾಪಿಸಿದ ಐಸ್ಲೆಂಡಿಕ್ ಲಿಟರರಿ ಸೊಸೈಟಿ, ಆತ ಆರಂಭಿಸಿದ ಸ್ಕಿರ್ನಿರ್ ಎಂಬ ಸಾಹಿತ್ಯಪತ್ರಿಕೆ, ಯೋನ್ ಸಿಗ್ಯೂರೂಸುನ್ ನಡೆಸುತ್ತಿದ್ದ ಪ್ಯುಲ್ನಿರ್ ಎಂಬ ರೊಮ್ಯಾಂಟಿಕ್ ಸಾಹಿತ್ಯ ಪತ್ರಿಕೆ ಐಸ್ಲೆಂಡಿಕ್ ಸಾಹಿತ್ಯ ಸಂಪತ್ತನ್ನು ಉಳಿಸಿ ಬೆಳೆಸುವುದರಲ್ಲಿ ಮುಖ್ಯಪಾತ್ರ ವಹಿಸಿದವು. ಬ್ಯಾರ್ನಿ ಥೂರ್ ಆರೆನ್ಸುನ್ ರೊಮ್ಯಾಂಟಿಕ್ ಕಾವ್ಯದ ಆದ್ಯಪ್ರವರ್ತಕನಾದ ಶ್ರೇಷ್ಠಕವಿ. ಯೋನಾಸ್ ಹಾಲ್ ಗ್ರಿಮ್ಸುನ್ ಬಹು ಅಚ್ಚುಮೆಚ್ಚಿನ ಇನ್ನೊಬ್ಬ ರೊಮ್ಯಾಂಟಿಕ್ ಕವಿ. ರಿಮ್ಯೂರ್ ಶೈಲಿಯ ಕಾವ್ಯರಚನೆಯಲ್ಲಿ ಮಹತ್ತಾದ ಯಶಗಳಿಸಿದ ಸಿಗ್ಯುರ್ದುರ್ ಬ್ರೀಡ್ಫೋರ್ಡ್, ಗತಕಾಲದ ಚಿತ್ರ ಕಣ್ಣಿಗೆ ಕಟ್ಟುವಂಥ ಐತಿಹಾಸಿಕ ಕವನಗಳನ್ನು ರಚಿಸಿದ ಗ್ರಿಮ್ಯೂರ್ ಥಾಮ್ಸುನ್, ತಾತ್ತ್ವಿಕ ಕವನಗಳಿಗೆ ಹೆಸರಾದ ಬ್ಯೂರ್ನ್ಗುನ್ನಲಾಗ್ಸುನ್ ಇವರು ಕಾವ್ಯಭಂಡಾರಕ್ಕೆ ತಮ್ಮ ವಿಶಿಷ್ಟ ಕಾಣಿಕೆಗಳನ್ನು ಸಲ್ಲಿಸಿದರು. ಹಿರಿಯ ಬೆನಿಡಿಕ್ಟ್ ಗ್ರ್ಯೂಂದಾಲ್ ಹೆಚ್ಚಿನ ಮನ್ನಣೆಗಳಿಸಿದಂತೆ ಕಿರಿಯ ಬೆನಿಡಿಕ್ಟ್ ಗ್ರ್ಯೂಂದಾಲ್ ತನ್ನ ವಿಡಂಬನ ಕವಿತೆಗಳಿಂದ ಗಮನವನ್ನು ಸೆಳೆದ. ಗೈಸ್ಲಿ ಬ್ರಿನ್ಯೋಲ್ಫ್‌ಸುನ್ನನ ಪ್ರೇಮಗೀತೆಗಳು ಗಮನಾರ್ಹವಾದುವು. ಸುಂದರವೂ ಲಲಿತವೂ ಆದ ಪ್ರೇಮಗೀತೆಗಳನ್ನೂ ಪ್ರಕೃತಿಗೀತೆಗಳನ್ನೂ ರಚಿಸಿ ಹೆಸರಾದ ಸ್ಟೈನ್ ಗ್ರಿಮ್ಯೂರ್ಥೂರ್ ಸ್ಟೈನ್ಸುನ್, ಅನೇಕ ಶ್ರೇಷ್ಠ ಚಾಟೂಕ್ತಿಗಳನ್ನೂ ವಿಡಂಬನ ಕವನಗಳನ್ನೂ ಬರೆದುದಲ್ಲದೆ ಷೇಕ್ಸ್‌ಪಿಯರನ ಕಿಂಗ್ಲಿಯರ್ ನಾಟಕವನ್ನೂ ಅರೇಬಿಯನ್ ನೈಟ್ಸ್ ಕಥೆಗಳನ್ನೂ ಭಾಷಾಂತರ ಮಾಡಿ ಮೆಚ್ಚುಗೆ ಗಳಿಸಿದ. ಪಾದ್ರಿ ಮಾಥ್ಯಾಸ್ ಯೋಹ್ಯೂಮ್ಸುನ್ 19ನೆಯ ಶತಮಾನದ ಸರ್ವಶ್ರೇಷ್ಠ ಕವಿ. ಸೊಗಸಾದ ಭಾವಗೀತೆಗಳನ್ನೂ ಸ್ತೋತ್ರಗಳನ್ನೂ ನಾಟಕಗಳನ್ನೂ ಬರೆದಿದ್ದಾನೆ; ರೂಢಿಯಲ್ಲಿದ್ದ ಎಲ್ಲ ಕವನ ಮಾದರಿಗಳಲ್ಲೂ ಪ್ರಾವೀಣ್ಯವನ್ನು ಸಾಧಿಸಿದ್ದ ಈ ಕವಿ ತನ್ನದೇ ಆದ ಹೊಸ ಮಾದರಿಗಳನ್ನೂ ಸೃಷ್ಟಿಸಿದ. ಉದಾತ್ತ ಮಾನವೀಯತಾವಾದಿಯೂ ಅಸಾಧಾರಣ ಪ್ರತಿಭಾಶಾಲಿಯೂ ಆದ ವರಕವಿ ಈತ. ಕಿರಿಯ ಪ್ರಾಯದಲ್ಲೇ ಅಕಾಲ ಮೃತ್ಯುವಿಗೊಳಗಾದ ಕ್ರಿಸ್ತ್ಯಾನ್ ಯೋನ್ಸುನ್ನನ ವರ್ಣನಾತ್ಮಕ ಭಾವಗೀತೆಗಳು ಉತ್ತಮ ದರ್ಜೆಯವು. ರಾಜಕಾರಣಿ ಪತ್ರಿಕೋದ್ಯಮಿ ಯೋನ್ ಊಲಾಫ್ಸುನ್ ಸಾಹಿತಿಯಾಗಿಯೂ ಕೀರ್ತಿವಂತನಾದ. ಈತನ ಸೋದರ ಪಾಲ್ ಊಲಾಫ್ಸುನ್ ಶಾಲಾಶಿಕ್ಷಣ ಪಡೆಯದಿದ್ದರೂ ಬಹು ಜನಪ್ರಿಯನಾದ ಕವಿಯೆನಿಸಿದ. ಹಾಸ್ಯ, ವಿಡಂಬನೆ, ಪ್ರೇಮಗಳನ್ನು ವಸ್ತುವಾಗುಳ್ಳ ಇವನ ಕವಿತೆಗಳು ಸಹಜಸ್ಫೂರ್ತಿಯಿಂದ ಹೊಮ್ಮಿದ ಗೀತೆಗಳಾಗಿ ಜನಸಾಮಾನ್ಯರ ನಾಲಗೆಯ ಮೇಲೆ ಸದಾ ನಲಿದಾಡಿದುವು. ಪಾದ್ರಿ ವಾಲ್ಡಿಮ್ಯೂರ್ ಬ್ರೀಮನ ಸ್ತೋತ್ರಗಳೂ ಬೈಬಲಿಗೆ ಸಂಬಂಧಿಸಿದ ಹಾಡುಗಳೂ ಶ್ರೇಷ್ಠ ಪಂಕ್ತಿಯಲ್ಲಿ ನಿಲ್ಲತಕ್ಕವಾಗಿವೆ. ಯೋನ್ಸ್ಟೈನ್ ಗ್ರಿಮ್ಸುನ್ನನ ಆತ್ಮಕಥೆ ಗದ್ಯಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಯೋನ್ ಆರ್ನಾಸುನ್ ವಿಪುಲವಾಗಿ ಸಂಗ್ರಹಿಸಿದ ಜಾನಪದ ಕಥೆಗಳಲ್ಲಿ ಜನಸಾಮಾನ್ಯರ ನಾಡಿಯ ಮಿಡಿತವನ್ನು ಕೇಳಬಹುದು. ಉತ್ತಮ ಸಾಹಿತಿ ಎನ್ನಲಾಗದಿದ್ದರೂ ಸಿಗ್ಯುದೂರ್ಯ್‌ರ್ ಪೀಟರ್ಸುನ್ ನಾಟಕಸಾಹಿತ್ಯದ ಮೊದಲಿಗನಾಗಿ ಗಣ್ಯನಾಗಿದ್ದಾನೆ. ಸ್ಟೈನ್ಯೋರ್ನ್ ಈಗಿಲ್ಸುನ್ನನ ಲೆಕ್ಸಿಕನ್ ಪೊಯೆಟಿಕಮ್ ಎಂಬ ಸ್ಕಾಲ್ಡಿಕ್ ಕಾವ್ಯದ ಅರ್ಥಕೋಶ ಒಂದು ಅಮೋಘವಾದ ಚಿರಸ್ಮರಣೀಯ ಕೃತಿ. ಈಗಿಲ್ಸುನ್ ಸ್ವತಃ ಕವಿ. ಆದರೆ ಸ್ವಂತ ಕವಿತೆಗಳಿಗಿಂತ ಈತ ಭಾಷಾಂತರಿಸಿದ ಹೋಮರನ ಕಾವ್ಯಗಳು ಅದ್ವಿತೀಯವಾಗಿವೆ.
19ನೆಯ ಶತಮಾನದ ಕೊನೆಯ ವೇಳೆಗೆ ಕಾವ್ಯದಿಂದ ಕಾದಂಬರಿಯ ಕಡೆಗೂ, ಕಲ್ಪನಾವಿಲಾಸದಿಂದ ವಾಸ್ತವತೆಯ ಕಡೆಗೂ ಅಭಿರುಚಿ ವಾಲಿತು. ಯೋನ್ ಊಲಾಫ್ಸುನ್ನನ ಬರೆಹಗಳಲ್ಲಿ ಆಗಲೆ ವಾಸ್ತವ ಪಂಥದ ಸೂಚನೆಗಳು ಕಾಣಿಸಿದ್ದವು. ಜಾರ್ಜ್ ಬ್ರ್ಯಾಂಡಿಸ್ ವಾಸ್ತವತೆಯ ಮೊದಲ ಪ್ರವರ್ತಕ. ಈತ ಕೋಪನ್ಹೇಗನ್ ಕಾಲೇಜಿನಲ್ಲಿ ಶಿಕ್ಷಕನಾಗಿದ್ದ. ಈತನ ಪ್ರಭಾವದಿಂದ ಸ್ಫೂರ್ತಿಗೊಂಡ ಗೆಸ್ಟ್ಯೊರ್ ಪಾಲ್ಸುನ್ ಈನಾರ್ ಹ್ಯೋರ್ ಲೈಫ್ಸುನ್ ಕ್ವಾರನ್, ಕವಿ ಹ್ಯಾನಿಸ್ ಹಾಲ್ಫ್‌ಸ್ಟೈನ್ ತಮ್ಮ ಅತ್ಯುತ್ತಮ ಕಥೆ ಕಾದಂಬರಿಗಳಲ್ಲಿ ವಾಸ್ತವತೆಯನ್ನು ಎತ್ತಿಹಿಡಿದು ಪ್ರಸಿದ್ಧರಾದರು. 1882ರಲ್ಲಿ ಇವರೆಲ್ಲರೂ ಸೇರಿ ವೆರ್ಡಂಡಿ ಸಾಹಿತ್ಯಪತ್ರಿಕೆಯನ್ನು ವಾಸ್ತವತೆಯ ಪ್ರಸಾರಕ್ಕೆಂದೇ ಆರಂಭಿಸಿದರು. ಬಂದುದು ಅದರ ಒಂದೇ ಸಂಪುಟವಾದರೂ ಸಾಹಿತ್ಯವೃತ್ತಗಳಲ್ಲಿ ಅದು ಹೊಸ ವಿಚಾರದ ಕ್ರಾಂತಿಯನ್ನು ಪ್ರಚೋದಿಸಿತು. ಇಷ್ಟು ಪ್ರಗತಿಶೀಲವಾಗಿದ್ದರೂ ಸಾಂಪ್ರದಾಯಿಕ ಸಾಹಿತ್ಯದ ಬಗ್ಗೆ ಇದ್ದ ಶ್ರದ್ಧೆ ಕಡಿಮೆಯಾಗಲಿಲ್ಲ. ಹಾಲ್ಫ್‌ಸ್ಟೈನ್ ಈ ಕಾಲದ ಬಹು ಪ್ರತಿಭಾಶಾಲಿಯಾದ ಕವಿ. ಈತ ಐಸ್ಲೆಂಡ್ ರಿಪಬ್ಲಿಕ್ಕಿನ ಪ್ರಥಮ ದೇಶೀಯ ಪ್ರಧಾನಿ. ಈತನ ದೇಶಭಕ್ತಿಯ ಗೀತೆಗಳಲ್ಲೂ ಪ್ರೇಮಗೀತೆಗಳಲ್ಲೂ ಬಿಸಿರಕ್ತದ ಉತ್ಸಾಹ ಉಲ್ಲಾಸಗಳು ತುಂಬಿವೆ. ವೆರ್ಡಂಡಿ ಗುಂಪಿನವನಲ್ಲವಾದರೂ ಥೊರೆಸ್ಟೈನ್ ಎರ್ಲಿಂಗ್ಸುನ್ ವಾಸ್ತವ ಪಂಥದ ಅನುಯಾಯಿ. ದುರಭಿಮಾನದಿಂದ ಕೂಡಿದ ಜಾತೀಯತೆಯನ್ನೂ ಸಾಮಾಜಿಕ ಅನ್ಯಾಯಗಳನ್ನೂ ಈತ ತೀವ್ರವಾಗಿ ಖಂಡಿಸಿದ. ಬಹು ಸುಂದರವಾದ ದೇಶಭಕ್ತಿ ಗೀತೆಗಳನ್ನು, ಪ್ರಕೃತಿ ಗೀತೆಗಳನ್ನೂ ರಚಿಸಿದ; ಪ್ರಯೋಗಶೀಲನಾದರೂ ಸಾಂಪ್ರದಾಯಿಕ ಚೌಪದಿ ರಚನೆಯಲ್ಲಿ ಅದ್ವಿತೀಯನೆನಿಸಿದ.
ಡಾಕ್ಟರ್ ಯೋನ್ಥೂರ್ ಕೆಲ್ಸನ್, ಸಿಗ್ಯುರ್ಯೋನ್ ಫ್ರಿಡ್ಯೋನ್ಸುನ್, ಥೂರ್ ಸ್ಟೈನ್ ಗೈಸ್ಲಾಸುನ್, ಗ್ಯೂಡ್ ಮ್ಯುಂಡ್ಯುರ್ ಫ್ರಿಡ್ ಯೋನ್ಸುನ್, ಗ್ಯೂಡ್ಮ್ಯುಂಡ್ಯುರ್ ಗ್ಯೂಡ್ ಮ್ಯುಂಡ್ಸುನ್, ಸಿಗ್ಯುಡೂರ್ಯ್‌ರ್ ಸಿಗ್ಯುರ್ಡ್ಸುನ್, ಯೋರ್ನಿಯೋನ್ಸುನ್ ಮೊದಲಾದ ಹೆಸರಾಂತ ಸಾಹಿತಿಗಳಲ್ಲದೆ ಸಣ್ಣಕಥೆ ಕಾದಂಬರಿಗಳ ಕ್ಷೇತ್ರದಲ್ಲಿ ಅಗ್ರಗಣ್ಯನೆನಿಸಿದ ಗ್ಯೂಡ್ ಮ್ಯುಂಡರ್ ಮಾಗ್ನಾಸುನ್, ರಾಷ್ಟ್ರದ ಹಿರಿಯ ಕವಿಗಳ ಸಾಲಿನಲ್ಲಿ ನಿಲ್ಲುವ ಈನಾರ್ ಬೆನಿಡಿಕ್ಟ್‌ಸುನ್ ಮತ್ತು ಸ್ಟೀಫನ್ ಜಿ.ಸ್ಟೀಫನ್ಸುನ್ ಆಧುನಿಕ ಐಸ್ಲೆಂಡಿಕ್ ಸಾಹಿತ್ಯದ ಪ್ರಗತಿಗೆ ಕಾರಣರಾದರು. ಸ್ಟೀಫನ್ಸುನ್ ಕೆನಡ ಮತ್ತು ಅಮೆರಿಕಗಳಲ್ಲಿರುವ ಐಸ್ಲೆಂಡಿಕ್ ಸಾಹಿತಿಗಳಲ್ಲಿ ಅಗ್ರಪಂಕ್ತಿಯ ಕವಿ.
ಪ್ರಚಲಿತ ಸಾಹಿತ್ಯ
ಬದಲಾಯಿಸಿವಾಸ್ತವವಾದ, ಸಮಾಜವಾದ, ನವರೊಮ್ಯಾಂಟಿಕ್ ಮಾರ್ಗ, ಸಮತಾವಾದ ಮುಂತಾದ ಹಲವಾರು ಮನೋಧರ್ಮಗಳನ್ನು ಇಂದಿನ ವಿವಿಧ ಸಾಹಿತ್ಯಾಭಿವ್ಯಕ್ತಿಗಳಲ್ಲಿ ಕಾಣಬಹುದು. ಅನೇಕ ಪ್ರತಿಭಾವಂತ ಸಾಹಿತಿಗಳು ತಮ್ಮ ವಿವಿಧ ಕಾಣಿಕೆಗಳಿಂದ ಪ್ರಚಲಿತ ಸಾಹಿತ್ಯಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ನವ್ಯಕಾವ್ಯ ವೈವಿಧ್ಯಪುರ್ಣವಾಗಿದೆ. ಸಮೃದ್ಧವಾಗಿದೆ. ಊರ್ನ್ಆರ್ನಾರ್ಸುನ್ (ಮಾಗ್ನುಸ್ ಸ್ಟೀಫ್ಯಾನ್ಸುನ್ 1884-1942) ಅವರ ಕಾವ್ಯದಲ್ಲಿ ಭಾವ ಭಾಷೆಗಳೆರಡರ ಮಧುರ ಸಂಗಮವನ್ನೂ ಗಮನ ಸೆಳೆಯುವ ತನ್ನತನವನ್ನೂ ಕಾಣಬಹುದು. ಯೇಕಬ್ ಯೋಹಾನ್ನಸುನ್ ಉತ್ಕೃಷ್ಟ ಸಾನೆಟ್ಟುಗಳನ್ನೂ ಆಧ್ಯಾತ್ಮಿಕ ಕವನಗಳನ್ನೂ ಪ್ರಬಂಧ ಹಾಗೂ ವಿಮರ್ಶಾಲೇಖನಗಳನ್ನೂ ಬರೆದಿದ್ದಾನೆ, ಯೋನ್ಮಾಗ್ನಾಸುನ್ (1896-1944) ಐಸ್ಲೆಂಡ್ ಹಿರಿಮೆಗೆ ಶಾಶ್ವತ ಸಾಕ್ಷಿ ಎನ್ನಬಹುದಾದ ಬ್ಯೋರ್ನ್ ಎ ರೆಯ್ಡಾರ್ ಫೆಲ್ಲಿ ಎಂಬ ಮಹಾಕಾವ್ಯವನ್ನು ರಚಿಸಿದ್ದರೆ ಟೋಮಸ್ ಗ್ಯೂಡ್ಮ್ಯುಂಡ್ಸುನ್ (1901- ) ರಾಜಧಾನಿ ರಿಕ್ಝವಿಕ್ ನಗರ ಜೀವನದ ವಿಲಕ್ಷಣ ಚಿತ್ರಗಳನ್ನು ತನ್ನ ಕವನಗಳಲ್ಲಿ ಸೆರೆ ಹಿಡಿದಿದ್ದಾನೆ. ಗ್ರಾಮ ಜೀವನ ಕುರಿತು ಬರೆದಿರುವ ಕವಿಗಳಲ್ಲಿ ಸ್ಟೈನ್ ಸ್ಟೈನಾರ್ ಪ್ರತ್ಯೇಕವಾಗಿ ನಿಲ್ಲಬಲ್ಲ ಸಮರ್ಥ, ಡೇವಿಡ್ ಸ್ಟೀಫ್ಯಾನ್ಸುನ್ ಈ ತಲೆಮಾರಿನ ಅತ್ಯಂತ ಜನಪ್ರಿಯ ಕವಿ. ನಾಟಕ ಕಾದಂಬರಿ ಕ್ಷೇತ್ರಗಳಲ್ಲೂ ಈತನ ಪ್ರತಿಭೆ ಹರಿದಿದೆ.
ಸಾಗಾ ಸಾಹಿತ್ಯ ಪ್ರಕಾರದ ತೌರಾಗಿದ್ದ ಐಸ್ಲೆಂಡಿನಲ್ಲಿ ಇಂದು ಕಾದಂಬರಿ ಅತ್ಯಂತ ಜನಪ್ರಿಯ ಸಾಹಿತ್ಯವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕಲ್ಪನಾಶೀಲ ಮನೋಭಾವಕ್ಕೂ ವಾಸ್ತವದೃಷ್ಟಿಗೂ ನಡೆವ ನಿರಂತರ ಘರ್ಷಣೆ ಈ ಕಾದಂಬರಿಗಳ ಸಾಮಾನ್ಯ ವಸ್ತು, ವಾಸ್ತವವಾದಿಗಳು ಸಣ್ಣ ಕಥೆ ಕಾದಂಬರಿಗಳಿಗೆ ಹೊಸ ಸೊಬಗನ್ನೂ ಔನ್ನತ್ಯವನ್ನೂ ತಂದು ಕೊಟ್ಟಿದ್ದಾರೆ. 19ನೆಯ ಶತಕದ ಮಧ್ಯಭಾಗದಲ್ಲೇ ಪ್ರಥಮ ಕಾದಂಬರಿಕಾರ ಯೋನ್ಥೂರ್ ಊಡ್ಸುನ್ ಸೊಗಸಾದ ಎರಡು ಕಾದಂಬರಿಗಳನ್ನು ಪ್ರಕಟಿಸಿ ದಾರಿಮಾಡಿದ್ದ. ಗ್ರಾಮಜೀವನದ ವಾಸ್ತವ ಚಿತ್ರಣ, ಜೀವಂತ ಪಾತ್ರಸೃಷ್ಟಿ, ಕಲಾತ್ಮಕವಾದ ರಚನೆ ಈತನ ಕಾದಂಬರಿಗಳನ್ನು ಶ್ರೇಷ್ಠವೆನಿಸಿದವು. 1882ರಲ್ಲಿ ಪ್ರಕಟವಾದ ಪ್ರಥಮ ಐತಿಹಾಸಿಕ ಕಾದಂಬರಿಯನ್ನು ಬರೆದದ್ದು-ಟೂರ್ಫ್‌ಹಿಲ್ ದೂರ್ ಥೂರ್ಸ್ಟೈನ್ಸ್ ದೂತ್ತೀರ್ ಎಂಬ ಮಹಿಳೆ. ಐನಾರ್ ಹ್ಯೋರ್ಲೈಫ್ಸುನ್ ಕ್ವಾರನ್ ವಾಸ್ತವ ಪಂಥದ ಶ್ರೇಷ್ಠ ಕಾದಂಬರಿಕಾರ. ಹಾಲ್ಡ್ಯೂರ್ ಕೀಲ್ಯಾನ್ ಲಾಕ್ಸ್‌ನೆಸ್ ಅಸಾಧಾರಣ ಪ್ರತಿಭಾಶಾಲಿ. ಅತ್ಯುತ್ತಮ ಕಥೆ ಕಾದಂಬರಿಗಳನ್ನು ಬರೆದದ್ದು ಮಾತ್ರವಲ್ಲದೆ ಈತ ಅನೇಕ ಕಿರಿಯ ಲೇಖಕರ ಮೇಲೆ ಪ್ರಭಾವ ಬೀರಿದ್ದಾನೆ. ಈತನ ಕಾದಂಬರಿಗಳು ಇತರ ಭಾಷೆಗಳಿಗೂ ಅನುವಾದವಾಗಿವೆ. ಊಲಾಪ್ಯುರ್ ಯೋಹಾನ್ ಸಿಗ್ಯುರ್ಡ್ಸುನ್ (1918- ) ಪ್ರಖ್ಯಾತ ಕಾದಂಬರಿಕಾರ. ಕೆಲವು ಅತ್ಯುತ್ಕೃಷ್ಟ ಸಣ್ಣಕಥೆಗಳನ್ನೂ ಬರೆದಿದ್ದಾನೆ. ಗ್ಯೂಡ್ ಮುಂಡೂೖರ್ ಗೀಸ್ಲಾಸುನ್ ಹಾಗಲಿಸ್ನ್ ಮತ್ತೊಬ್ಬ ಶ್ರೇಷ್ಠ ಕಥೆಗಾರ. ಆಕ್ಸೈಲ್ ಥೂರ್ಸ್ಟೈನ್ ಸುನ್ ಮೊದಲ ಮಹಾಯುದ್ಧಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಸಣ್ಣಕಥೆಗಳನ್ನು ಬರೆದಿದ್ದಾನೆ. ಹಾಲ್ಡೋರ್ ಸ್ಟೀಫ್ಯಾನ್ ಸುನ್ನ ಕಥೆಗಳಲ್ಲಿ ಮಾನವೀಯ ಅನುಕಂಪ, ಮನೋವಿಶ್ಲೇಷಣೆ ಕಾಣುತ್ತವೆ. ನಾಟಕ ಸಾಹಿತ್ಯದಲ್ಲೂ ಸಾಕಷ್ಟು ಕೃಷಿ ನಡೆದಿದೆ. 19ನೆಯ ಶತಕದ ದೊಡ್ಡ ನಾಟಕಕಾರ ಇಂಡ್ರೀಡಿ ಐನಾರ್ ಸುನ್ 20ನೆಯ ಶತಮಾನದ ನಾಟಕಗಳ ಪಿತಾಮಹ ಎನ್ನಬಹುದು. ಯೋಹಾನ್ ಸಿಗ್ಯುರ್ಯೋನ್ ಸುನ್ ಅತ್ಯಂತ ಶ್ರೇಷ್ಠ ನಾಟಕಕಾರ. ಅಂತಾರಾಷ್ಟ್ರೀಯ ಮನ್ನಣೆಗೂ ಪಾತ್ರನಾದ ಪ್ರತಿಭಾಶಾಲಿ. ಐವಿಂಡ್ ಆಫ್ ದಿ ಹಿಲ್ಸ್ ಈತನ ಅತ್ಯಂತ ಹೃದಯಸ್ಪರ್ಶಿಯಾದ ದುರಂತನಾಟಕ. ಗ್ಯುಡ್ ಮ್ಯುಂಡುರ್ ಕಂಬಾನ್ ಅಂತಾ ರಾಷ್ಟ್ರೀಯ ಖ್ಯಾತಿಯನ್ನು ಪಡೆದ ಇನ್ನೊಬ್ಬ ನಾಟಕಕಾರ. ಕಾದಂಬರಿಯಲ್ಲೂ ಈತನ ಕೀರ್ತಿ ದೊಡ್ಡದು. ಸಿಗ್ಯುರೆಡ್ಯುರ್ ಎಗ್ಗೆರ್ಜ್ ಅನೇಕ ಸಾಂಕೇತಿಕ ನಾಟಕಗಳನ್ನು ಬರೆದಿದ್ದಾನೆ. ಈ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಮಹಿಳೆಯರೇನೂ ಹಿಂದೆ ಬಿದ್ದಿಲ್ಲ. ಪ್ರಥಮ ಐತಿಹಾಸಿಕ ಕಾದಂಬರಿಯನ್ನು ಬರೆದದ್ದು ಒಬ್ಬ ಮಹಿಳೆ. ಊಲೂಫ್ ಸಿಗ್ಯುರ್ ಥೂರ್ ದೊತ್ತೀರ್, ಥಿಯೊಡೋರಾ ಥೂರ್ ಊಡ್ಸುನ್, ಗ್ಯೂಡ್ ಫಿನ್ನಾಯೋನ್ಸ್ ದೊತ್ತೀರ್, ಥಿಯೊಡೋರಾ ಥೂರ್ ಊಡ್ಸುನ್, ಗ್ಯೂಡ್ ಫಿನ್ನಾಯೋನ್ಸ್ ದೊತ್ತೀರ್ ಮೊದಲಾದ ಕವಯತ್ರಿಯರಲ್ಲಿ ಊನ್ನೂರ್ ಬೆನೆಡಿಕ್ಟ್ ದೊತ್ತೀರ್ ಅಗ್ರಗಣ್ಯಳಾಗಿದ್ದಾಳೆ. ಈಕೆ ದೊಡ್ಡ ಕಾದಂಬರಿಯೊಂದನ್ನೂ ಸಣ್ಣಕಥೆಯ, ವ್ಯಕ್ತಿಚಿತ್ರ, ಅದ್ಭುತಕಥೆಗಳನ್ನೂ (ಫೇರಿ ಟೇಲ್ಸ್) ಬರೆದಿದ್ದಾಳೆ. ಕ್ರಿಸ್ಟಿನ್ ಸಿಗ್ಫ್ಯೂಸ್ ದೊತ್ತೀರ್ ಬರೆದಿರುವ ಉತ್ತಮ ನಾಟಕಗಳು ರಂಗದ ಮೇಲೂ ಯಶಸ್ವಿಯಾಗಿವೆ. ಅನೇಕ ವಿದೇಶೀ ಪ್ರಭಾವಗಳಿದ್ದು, ರಾಜಕೀಯ ಒತ್ತಡಗಳ ವಿರುದ್ಧ ಹೋರಾಡುವುದರ ನಡುವೆಯೂ ಸಾಗಾ ಮತ್ತು ಕಾವ್ಯಗಳ ನೆಲೆವೀಡಾದ ಐಸ್ಲೆಂಡಿನ ಸಾಹಿತ್ಯಲೋಕದಲ್ಲಿ ಮಬ್ಬುಕವಿದಿಲ್ಲ. ಪ್ರಾಚೀನ ಸಾಹಿತ್ಯ ಈ ಪ್ರಬಲ ರಾಷ್ಟ್ರೀಯ ದೃಷ್ಟಿಗೂ ನವಸಾಹಿತ್ಯಸೃಷ್ಟಿಗೂ ನಿರಂತರ ಸ್ಫೂರ್ತಿಯ ಆಗರವಾಗಿದೆ. ಕಳೆದ ಒಂದು ಶತಕದಲ್ಲಿ ಐಸ್ಲೆಂಡ್ ಸಾಧಿಸಿರುವ ಸಾಹಿತ್ಯಸಿದ್ಧಿ ಅಪುರ್ವವಾದುದು. ಒಂದೂಕಾಲು ಲಕ್ಷಕ್ಕೆ ಮೀರದಷ್ಟು ಮಾತ್ರ ಜನ ಇರುವ ಈ ಪುಟ್ಟ ದೇಶ ತನ್ನ ಮಿತಿಗೆ ಮೀರಿದ ಸಾಧನೆಯನ್ನು ತೋರಿದೆ. ಇಂದಿನ ಐಸ್ಲೆಂಡಿನ ಸಾಹಿತ್ಯ ಭಾಷಾಂತರ ಸೌಲಭ್ಯದಿಂದ ದೇಶವಿದೇಶಗಳಿಗೆಲ್ಲ ಪರಿಚಿತವಾಗುತ್ತಿದೆ. ಸಾಹಿತ್ಯ, ಜ್ಞಾನ, ವಿಜ್ಞಾನಗಳೆಲ್ಲದರ ಪ್ರಗತಿಯ ಕಾರ್ಯದಲ್ಲಿ 1911ರಲ್ಲಿ ಸ್ಥಾಪಿತವಾದ ಐಸ್ಲೆಂಡಿನ ವಿಶ್ವವಿದ್ಯಾಲಯ ವಹಿಸುತ್ತಿರುವ ಪಾತ್ರ ಬಹು ದೊಡ್ಡದು.
ಉಲ್ಲೇಖಗಳು
ಬದಲಾಯಿಸಿಹೆಚ್ಚಿನ ಓದು
ಬದಲಾಯಿಸಿ- Einarsson, Stefan (1957). A History of Icelandic Literature. New York: Johns Hopkins University Press.
ಬಾಹ್ಯ ಕೊಂಡಿಗಳು
ಬದಲಾಯಿಸಿ- Icelandic Saga Database - Icelandic sagas in translation
- Old Norse Prose and Poetry
- Northvegr.org
- Nat.is: little but good page on Icelandic literature Archived 2006-02-15 ವೇಬ್ಯಾಕ್ ಮೆಷಿನ್ ನಲ್ಲಿ.
- Electronic Gateway for Icelandic Literature (EGIL)
- Sagnanetið - digital images of Icelandic manuscripts and texts
- Icelandic Literature Information on contemporary authors
- Netútgáfan Literary works in Icelandic.
- The complete Sagas of Icelanders
- Icelandic Online Dictionary and Readings from the University of Wisconsin Digital Collections Center. Collection includes interactive Icelandic dictionary; bilingual readings about Iceland and Icelandic history, society, and culture; readings in Icelandic about contemporary Iceland and Icelanders; and Icelandic literature.