ಐಸೊಯೆಟೀಸ್
Isoetes | |
---|---|
Isoetes lacustris[೧] | |
Scientific classification | |
ಸಾಮ್ರಾಜ್ಯ: | Plantae
|
Division: | |
ವರ್ಗ: | |
ಗಣ: | |
ಕುಟುಂಬ: | Isoetaceae |
ಕುಲ: | Isoetes |
ಐಸೊಯೆಟೀಸ್: ಐಸೊಯೆಟೇಲ್ಸ್ ಗಣದ, ಅರವತ್ತು ಪ್ರಭೇದಗಳಿರುವ ಬೆಳ್ಳುಳ್ಳಿ ಗಿಡದಂತೆ ಕಾಣುವ ನೀರಿನಲ್ಲಿ ಅಥವಾ ಜವುಗು ಪ್ರದೇಶಗಳಲ್ಲಿ ಬೆಳೆಯುವ ಸಸ್ಯ.
ಪ್ರಭೇದಗಳು
ಬದಲಾಯಿಸಿನಮ್ಮ ದೇಶದಲ್ಲಿ ಐ. ಕೊರಮಂಡಲಿಯಾನ ಐ. ಸಹ್ಯಾದ್ರಿಯೈ, ಐ. ದೀಕ್ಷಿತಿಯೈ, ಐ. ಇಂಡಿಕ ಐ. ಪಂಚಾನನೈ ಮತ್ತು ಐ. ಸಂಪತ್ಕುಮಾರಿನೈ ಎನ್ನುವ ಆರು ಪ್ರಭೇದಗಳು ಬೆಳೆಯುತ್ತವೆ. ಐಸೊಯೆಟೀಸ್ó ಸಸ್ಯವನ್ನು ಭೂಮಿಯ ಒಳಗೆ ಬೆಳೆಯುವ ಎರಡು ಮೂರು ಹಾಲೆಗಳಂತೆ (ಲೋಬ್ಸ್) ಹರಡಿರುವ ಗೆಡ್ಡೆ, ಅದರ ಸಂದುಗಳ ಕೆಳಭಾಗಗಳಿಂದ ಬೆಳೆಯುವ ಬೇರುಗಳು ಮತ್ತು ಗೆಡ್ಡೆಯ ಮೇಲ್ಭಾಗದಲ್ಲಿ 10-50 ಸೆಂಮೀಗಳ ಉದ್ದ ಬೆಳೆಯುವ ಗರಿಕೆ ಹುಲ್ಲಿನಂತೆ ಕಾಣುವ ಅಲೈಂಗಿಕ ಸಂತಾನ ಕಣಗಳ (ಸ್ಪೋರ್ಸ್) ಉತ್ಪಾದಕ ಎಲೆಗಳು ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು. ಗೆಡ್ಡೆಯ ಬೆಳವಣಿಗೆ ಬಲು ನಿಧಾನ. ಇದು ಮೇಲ್ಭಾಗದಲ್ಲಿ ಎಲೆಗಳನ್ನೂ ಕೆಳಭಾಗದಲ್ಲಿ ಬೇರುಗಳನ್ನೂ ಉತ್ಪಾದಿಸುವುದರಿಂದ ಕೆಲವು ಸಸ್ಯಶಾಸ್ತ್ರಜ್ಞರು ಇದನ್ನು ಒಂದು ರೀತಿಯ ಮಿಶ್ರಲಾಂಡವೆಂದು ಅಭಿಪ್ರಾಯಪಡುತ್ತಾರೆ. ಗೆಡ್ಡೆಯ ಮೇಲ್ಭಾಗಕ್ಕೆ ರ್ಹೈಸೊóಮಾರ್ಫ್ ಎಂದೂ ಕೆಳಭಾಗಕ್ಕೆ ರ್ಹೈಸೊóಫೋರ್ ಎಂದೂ ಹೆಸರುಗಳಿವೆ. ಅಲ್ಲದೆ ಗೆಡ್ಡೆಯ ಅಂಗರಚನೆಯನ್ನೂ (ಅನಾಟಮಿ) ಪರೀಕ್ಷಿಸಿದಾಗ ಅದು ಮೇಲ್ಭಾಗದಲ್ಲಿ ಕಾಂಡದಂತೆಯೂ ಕೆಳಭಾಗದಲ್ಲಿ ಬೇರಿನಂತೆಯೂ ಕಾಣುವುದರಿಂದ ಮಿಶ್ರಕಾಂಡದ ಅಭಿಪ್ರಾಯವನ್ನು ಒಪ್ಪಬಹುದು.
ಬೇರಿನ ಅಂಗರಚನೆ
ಬದಲಾಯಿಸಿನೀರು ಮತ್ತು ಆಹಾರ ಸರಬರಾಜು ಅಂಗಾಂಶಗಳು (ವ್ಯಾಸ್ಕ್ಯುಲರ್ ಟಿಶ್ಯೂಸ್) ಮಧ್ಯಭಾಗದಲ್ಲಿರದೆ ಒಂದು ಪಕ್ಕದಲ್ಲಿ ಅ ಆಕಾರದಲ್ಲಿರುತ್ತವೆ. ಈ ಅಂಗಾಂಶದ ಎದುರು ಭಾಗದಲ್ಲಿ ಒಂದು ದೊಡ್ಡ ಕುಹರ (ಕ್ಯಾವಿಟಿ) ಇದೆ. ಈ ಅಂಗರಚನೆ ಸ್ಟಿಗ್ಮೇರಿಯ ಎಂಬ ಪ್ರಾಚೀನ ಸಸ್ಯದ ಬೇರಿನ ಅಂಗರಚನೆಯನ್ನು ಹೋಲುತ್ತದೆ. ಗೆಡ್ಡೆಯ ಹಾಲೆಗಳ ತುದಿ ಮತ್ತು ಸಂದು ಪ್ರದೇಶಗಳಲ್ಲಿರುವ ವರ್ಧನ ಅಂಗಾಂಶಗಳ (ಮೆರಿಸ್ಟಮ್ಯಾಟಿಕ್ ಟಿಶ್ಯೂಸ್) ಪ್ರಸರಣೆಯಿಂದ ಬೇರುಗಳ ಉತ್ಪಾದನೆಯಾಗುತ್ತದೆ. ಅಲೈಂಗಿಕ ಸಂತಾನಕಣ ಉತ್ಪಾದಕ ಎಲೆಗಳು (ಸ್ಟೋರೋಫಿಲ್ಲುಗಳು) ಉದ್ದವಾಗಿವೆ. ಇವುಗಳ ಕೆಳಭಾಗ ಸ್ವಲ್ಪ ಅಗಲವಾಗಿ ಹೂಜಿ ಆಕಾರದಲ್ಲಿದೆ. ಆ ಭಾಗದಲ್ಲಿ ಸಣ್ಣ ಸಂತಾನಕಣಗಳ ಚೀಲ ಮತ್ತು ದೊಡ್ಡ ಸಂತಾನಕಣ ಚೀಲಗಳು ಉತ್ಪತ್ತಿಯಾಗುವುದರಿಂದ ಅಂಥ ಎಲೆಗಳಿಗೆ ಕ್ರಮವಾಗಿ ಸಣ್ಣಸಂತಾನಕಣ ಉತ್ಪಾದಕ ಎಲೆಗಳು (ಮೈಕ್ರೋಸ್ಪೋರೋಫಿಲ್ಸ್) ಮತ್ತು ದೊಡ್ಡ ಸಂತಾನಕಣ ಉತ್ಪಾದಕ ಎಲೆಗಳು (ಮೆಗಸ್ಟೋರೋಫಿಲ್ಸ್) ಎಂದು ಹೆಸರು. ಸಂತಾನಕಣ ಚೀಲದ ಮೇಲ್ಭಾಗದಲ್ಲಿ Ä ಆಕಾರದ ಒಂದು ಸಣ್ಣ ಎಲೆಯಂಥ ಅಂಗವಿದೆ. ಇದಕ್ಕೆ ಲಿಗ್ಯೂಲ್ ಎಂದು ಹೆಸರು. ಇದರ ಕೆಳಭಾಗದಿಂದ ಬೆಳೆದ ಒಂದು ತೆಳುಪೊರೆ ಸಂತಾನಕಣ ಚೀಲವನ್ನು ಮುಚ್ಚಿಕೊಂಡಿರುತ್ತದೆ. ಈ ತೆಳುಪೊರೆಯ ಹೆಸರು ವೀಲಮ್. ಎಲೆಗಳ ಅಡ್ಡಸೀಳಿಕೆಗಳನ್ನು ಪರೀಕ್ಷಿಸಿದರೆ, ಮಧ್ಯದಲ್ಲಿ ಆಹಾರ-ನೀರು ಸರಬರಾಜು ಅಂಗಾಂಶ ಅಥವಾ ನಾಳಕೂರ್ಚ ಮತ್ತು ನಾಲ್ಕು ಮೂಲೆಗಳಲ್ಲಿ ನಾಲ್ಕು ವಾಯು ಕುಹರಗಳು ಕಾಣುತ್ತವೆ. ನೀರಿನ ಒಳಗೆ ಬೆಳೆಯುವ ಅಥವಾ ಅಂತರ್ಜಲ ಪ್ರಭೇದದ ಎಲೆಗಳಲ್ಲಿ ಹೊರಚರ್ಮ (ಎಪಿಡರ್ಮಿಸ್) ಅಂಗಾಂಶದಲ್ಲಿ ವಾಯುದ್ವಾರ ಇರುವುದಿಲ್ಲ. ಸಾಮಾನ್ಯವಾಗಿ ಅತ್ಯಂತ ಹೊರಸುತ್ತುಗಳಲ್ಲಿರುವ ಎಲೆಗಳು ಸ್ಪೊರಾಂಜಿಯಂಗಳನ್ನು ಉತ್ಪಾದಿಸುವುದಿಲ್ಲ. ಒಳಸುತ್ತುಗಳಲ್ಲಿ ಮೊದಲು ಮೆಗಸ್ಪೋರೋಫಿಲ್ಲುಗಳಿದ್ದು ಅವು ಮೈಕ್ರೋಸ್ಪೋರೋಫಿಲ್ಲುಗಳನ್ನು ಸುತ್ತುವರಿದುಕೊಂಡಿರುತ್ತವೆ. ಸ್ಪೊರಾಂಜಿಯಮುಗಳು ಹುರುಳಿ ಬೀಜದ ಆಕಾರದಲ್ಲಿರುವುವು ಮತ್ತು ವ್ಯಾಸ್ಕ್ಯೂಲಾರ್ ಸಸ್ಯಗಳಲ್ಲಿ ಕಂಡುಬರುವ ಇತರ ಎಲ್ಲ ಸ್ಪೊರಾಂಜಿಯಮುಗಳಿಗಿಂತ ಅತ್ಯಂತ ದೊಡ್ಡ ಸ್ಪೋರಾಂಜಿಯಮುಗಳಾಗಿರುವುವು. ಸ್ಪೋರಾಂಜಿಯಮಿನ ಒಳಭಾಗದಲ್ಲಿ ಟ್ರೆಬ್ಯಾಕ್ಯುಲೇ ಎಂಬ ಅಡ್ಡ ಗೋಡೆಗಳಿವೆ. ಸ್ಪೋರಾಂಜಿಯಮುಗಳು ಕೆಲವು ವಿಶಿಷ್ಟ ಕೋಶಗಳ ವಿಭಜನೆಗಳಿಂದ ಉತ್ಪತ್ತಿಯಾಗಿ ಮುಂದೆ ಅಲೈಂಗಿಕ ಸಂತಾನಕಣಗಳನ್ನು ಉತ್ಪಾದಿಸುತ್ತವೆ. ಇಂಥ ಕೋಶಗಳಿಗೆ ಅಲೈಂಗಿಕ ಸಂತಾನಕಣ ಉತ್ಪಾದಕಕೋಶಗಳು (ಸ್ಪೋರಾಂಜಿಯಲ್ ಇನಿಷಿಯಲ್ಸ್) ಎಂದು ಹೆಸರು. ಸ್ಪೋರಾಂಜಿಯಲ್ ಇನಿಷಿಯಲಿನ ವಿಭಜನೆಗಳಿಂದ ಹೊರಭಾಗದಲ್ಲಿ ಸ್ಪೋರಾಂಜಿಯಮಿನ ಗೋಡೆ ಮತ್ತು ಒಳಭಾಗದಲ್ಲಿ ಸಂತಾನಕಣ ತಾಯಿಕೋಶಗಳು (ಸ್ಪೋರ್ಮದರ್ ಸೆಲ್ಸ್) ಉತ್ಪತ್ತಿಯಾಗುತ್ತವೆ. ಇವುಗಳಲ್ಲಿ ಮೈಕ್ರೊಸ್ಪೋರ್ ತಾಯಿಕೋಶಗಳು ಮತ್ತು ಮೆಗಾಸ್ಪೋರ್ ತಾಯಿಕೋಶಗಳು ಎಂಬ ಎರಡು ರೀತಿಯ ಕೋಶಗಳಿವೆ. ಮೈಕ್ರೊಸ್ಪೋರಾಂಜಿಯಮಿನಲ್ಲಿ ಸುಮಾರು 1 ಲಕ್ಷದಿಂದ 10 ಲಕ್ಷ ಮೈಕ್ರೊಸ್ಪೋರುಗಳು ಮತ್ತು ಮೆಗಸ್ಪೋರಾಂಜಿಯಮಿನಲ್ಲಿ ಕೇವಲ 30-50 ಮೆಗಸ್ಪೋರುಗಳು ಉತ್ಪತ್ತಿಯಾಗುವುವು. ಈ ಎರಡು ರೀತಿಯ ಸಂತಾನಕಣಗಳು (ಸ್ಪೋರ್ಸ್) ತಮ್ಮ ಬೆಳೆವಣಿಗೆಯಲ್ಲಿ 4 ರಂತೆ ಒಟ್ಟಾಗಿ ಸೇರಿ ಚತುಸ್ಸಂತಾನಕಣಗಳಾಗುತ್ತವೆ (ಟೆಟ್ರಾಡ್ಸ್ ಆಫ್ ಸ್ಪೋರ್ಸ್). ಸಂತಾನಕಣಗಳು ಗಾಳಿ ಮತ್ತು ನೀರುಗಳ ಮೂಲಕ ಪ್ರಸಾರವಾಗುತ್ತವೆ. ಮೈಕ್ರೊಸ್ಟೋರ್ ಮೊಳೆತು ಗಂಡು ಗ್ಯಾಮೀಟೊಫೈಟ್ ಸಸ್ಯವನ್ನು ಉತ್ಪಾದಿಸುತ್ತದೆ. ಈ ಸಸ್ಯ ಮೈಕ್ರೊಸ್ಪೋರಿನ ಒಳಗೆ ಬೆಳೆಯುವುದು ಮತ್ತು 256 ಗಂಡು ಗ್ಯಾಮೀಟುಗಳನ್ನು ಉತ್ಪಾದಿಸುತ್ತದೆ. ಪ್ರತಿ ಗ್ಯಾಮೀಟಿನಲ್ಲಿಯೂ ಅನೇಕ ಸ್ಪಂದನ ಲೋಮಾಂಗಗಳಿವೆ (ಸಿಲಿಯಾ). ಅವುಗಳ ಆಕಾರ ಕೊಕ್ಕೆಯಂತೆ. ಮೆಗಸ್ಪೋರ್ ಮೊಳೆತು ಹೆಣ್ಣು ಗ್ಯಾಮೀಟೊಫೈಟ್ ಸಸ್ಯವಾಗಿ ಬೆಳೆಯುತ್ತದೆ. ಈ ಸಸ್ಯ ಒಂದು ದೊಡ್ಡ ಅಂಡವನ್ನು ಉತ್ಪಾದಿಸುತ್ತದೆ. ನೀರಿನ ಮೂಲಕ ಗಂಡು ಗ್ಯಾಮೀಟು ಅಂಡದ ಜೊತೆ ಬೆರೆತಾಗ ಗರ್ಭಾಂಕುರವಾಗುತ್ತದೆ. ಈ ಭ್ರೂಣ ಬೆಳೆದು ಹೊಸ ಐಸೊಯೆಟೀಸ್ó ಮೊಳಕೆಯಾಗುತ್ತದೆ. ಮೊಳಕೆ ಏಕದಳ ಸಸ್ಯದಂತೆ ಕಾಣುತ್ತದೆ.
ಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Checklist of World Ferns, Family Isoetaceae, genus Isoetes; world species list. (143 species) Archived 2006-02-21 ವೇಬ್ಯಾಕ್ ಮೆಷಿನ್ ನಲ್ಲಿ.
- Flora of North America - Isoetes