ಏಣಗಿ ನಟರಾಜ

ಭಾರತೀಯ ನಟ, ರಂಗಕರ್ಮಿ

ಏಣಗಿ ನಟರಾಜ ಅವರು ನಾಡೋಜ ಡಾ. ಏಣಗಿ ಬಾಳಪ್ಪನವರ ಪುತ್ರರಾಗಿ ೧೮-೯-೧೯೫೮ರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯಲ್ಲಿ ಜನಿಸಿದರು.ತಂದೆ ಏಣಗಿ ಬಾಳಪ್ಪನವರಂತೆಯೇ ರಕ್ತಗತ ನಟನಾ ಕೌಶಲ್ಯ ಹೊಂದಿದ್ದ ನಟರಾಜ್ ಚಿಕ್ಕಂದಿನಲ್ಲಿಯೇ ಅಪ್ಪನ ಗರಡಿಯಲ್ಲಿ ಹತ್ತು ಹಲವು ನಾಟಕಗಳ ಪಾತ್ರ ಮಾಡಿ ಸೈ ಎನಸಿಕೊಂಡಿದ್ದರು. ಮುಂದೆ ನೀನಾಸಂನಲ್ಲಿ ತರಬೇತಿ ಪಡೆದು ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟರಾಜ, ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಅವರ ವಿಶಿಷ್ಟ ನಟನೆ ಮತ್ತು ಕಂಠಕ್ಕೆ ಮಾರು ಹೋಗದವರೇ ಇರಲಿಲ್ಲ. ನೀನಾಸಂ ತಿರುಗಾಟದಲ್ಲಿ ನಾಡಿನಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಏಣಗಿ ನಟರಾಜನವರದ್ದು. ಧಾರವಾಡದಲ್ಲಿ ನೆಲೆ ನಿಂತ ನಂತರ ತಮ್ಮದೇ ಸಂಸ್ಥೆಯೊಂದನ್ನು ಕಟ್ಟಿಕೊಂಡ ಅವರು, ನೂರಾರು ಪ್ರದರ್ಶನಗಳನ್ನು ಏರ್ಪಡಿಸಿ ರಂಗಭೂಮಿಗೆ ತನ್ನದೇ ಆದ ಕೊಡುಗೆ ನೀಡಿದ್ದರು.ನೀನಾಸಂ ರಂಗ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದಿದ್ದ ಏಣಗಿ ಬಳಿಕ ನೀನಾಸಂ ತಿರುಗಾಟದಲ್ಲಿಯೇ ಅನೇಕ ನಾಟಕಗಳಲ್ಲಿ ನಟಿಸಿದ್ದರು. ಹಿರಿಯ ರಂಗಕರ್ಮಿ ಪ್ರಸನ್ನ ಮತ್ತು ಜಂಬೆ ನಿರ್ದೇಶನದ ಹಲವಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಬಿರುದಂತೆಂಬರ ಗಂಡ, ತದ್ರೂಪಿ, ನಾ ತುಕಾರಾಂ ಅಲ್ಲ, ಸಾಂಬಶಿವ ಪ್ರಹಸನ ಮೊದಲಾದ ನಾಟಕಗಳನ್ನು ಉದಾಹರಿಸಬಹುದು.

ಏಣಗಿ ನಟರಾಜ

ಉತ್ತರ ಕರ್ನಾಟಕ ಶೈಲಿಯ ಧಾರಾವಾಹಿಗಳನ್ನು ವಿವಿಧ ಚಾನೆಲ್‌ಗಳಿಗೆ ನಿರ್ದೇಶಿಸುವ ಮೂಲಕವೂ ಹೆಸರುವಾಸಿಯಾದರು. ಅವರಿಗೆ ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾನವಮಿ. ಚಿನ್ನರಿ, ಇದು ಎಂಥಾ ಲೋಕವಯ್ಯ, ಸಂಕ್ರಾಂತಿ ಮುಂತಾದ ಧಾರಾವಾಹಿಗಳು, ಟಿ.ಎಸ್. ನಾಗಾಭರಣ ನಿರ್ದೇಶನದ ಸಿಂಗಾರೆವ್ವ, ಸಿ.ಪಿ. ಯೋಗೀಶ್ವರ್ ನಾಯಕನಾಗಿದ್ದ ಸೈನಿಕ (ಚಲನಚಿತ್ರ) ಸೇರಿದಂತೆ ಹಲವು ಸಿನಿಮಾಗಳಲ್ಲೂ ಏಣಗಿ ನಟರಾಜ ಅಭಿನಯಿಸಿದ್ದರು.ಮೂಡಲ ಮನೆ ಧಾರಾವಾಹಿಯಲ್ಲಿ ಅವರ ವಾಡೆ ಯಜಮಾನನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರದೇ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲೂ ಅವರದೇ ಛಾಪಿತ್ತು.ವಾಡೆಯ ಯಜಮಾನನಾಗಿ ಅವರು ತಮ್ಮ ಅಭಿನಯದಲ್ಲಿ ತೋರುತ್ತಿದ್ದ ಗತ್ತು-ಗೈರತ್ತು ಜನಮಾನಸದಲ್ಲಿ ಯಾವತ್ತೂ ಹಸಿರಾಗಿರುವಂತಾದ್ದು.

ನಟರಾಜ್ ಅವರು ಇತ್ತೀಚೆಗಷ್ಟೇ ಧಾರವಾಡದ ರಂಗಾಯಣದ ಜವಾಬ್ದಾರಿಯನ್ನು ಹೊತ್ತಿದ್ದರು. ಅದನ್ನೊಂದು ಪ್ರಗತಿಪರ ಸಂಘಟನೆಯಾಗಿ ರೂಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದರು. ಮೈಸೂರು ರಂಗಾಯಣದಲ್ಲಿ ೧೯೯೧ ರಿಂದ ೧೯೯೩ ರವರೆಗೆ ಅಭಿನಯ ತರಬೇತಿದಾರರಾಗಿ ಕಾರ್ಯ ನಿರ್ವಹಿಸಿದ ನಟರಾಜ,೧೯೯೩ ರಿಂದ ೧೯೯೪ ರವರೆಗೆ ತ್ರಿಶ್ಯೂರ್ ನ ಕ್ಯಾಲಿಕಟ್ ಯುನಿವರ್ಸಿಟಿ ಥೇಟರ್ ಇನ್ಸಿಟ್ಯೂಟ್ದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಪ್ರತಿಭಾವಂತ ಕಲಾವಿದ. ಅಪಾರ ಬಣ್ಣದ ಗೀಳು ಹೊಂದಿದ್ದ ಅವರು ಸುಮಾರು ೪೦ ನಾಟಕಗಳಿಗೆ ನಿರ್ದೇಶನ ನೀಡಿ ೨೦೦ ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ೩೦ಕ್ಕೂ ಹೆಚ್ಚು ಕಿರು ತೆರೆಯಲ್ಲಿನ ಧಾರಾವಾಹಿ ಹಾಗೂ ೨೫ ಚಲನಚಿತ್ರಗಳಲ್ಲಿ ಆಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ತಂದೆ ಏಣಗಿ ಬಾಳಪ್ಪನವರ ಜತೆ ರಂಗಭೂಮಿಯ ಡಾಕ್ಯುಮೆಂಟರಿಗಾಗಿ ಕಠಿಣ ಶ್ರಮವಹಿಸಿದ್ದರು. ವಿಶಿಷ್ಟ ನಾಟಕ ಪ್ರಯೋಗದ ಮೆಗಾ ಪ್ರಾಜೆಕ್ಟ್ ಕನಸೊಂದು ಅವರಲ್ಲಿತ್ತು. ಸುಮಾರು ೫೦ ಲಕ್ಷ ರೂಪಾಯಿ ವೆಚ್ಚದ ನಿರಂತರ ನಾಟಕ ಪ್ರದರ್ಶಿಸುವ ಬೃಹತ್ ವೇದಿಕೆಯಲ್ಲಿ ಜೀವಂತ ಆನೆ, ಕುದುರೆಗಳನ್ನು ಬಳಸುವ ಬಗ್ಗೆ ಚಿಂತನೆ ನಡೆಸಿದ್ದರು. ಈ ಮೆಗಾ ಪ್ರಾಜೆಕ್ಟ್ ಯೋಜನೆಯ ಹಂತದಲ್ಲಿದ್ದಾಗಲೇ ಏಣಗಿ ನಟರಾಜ ಅಗಲಿಕೆಯ ಆಘಾತ ನೀಡಿದ್ದಾರೆ. ಜೂನ್ ೨ರಂದು ಅಸ್ವಸ್ಥರಾಗಿದ್ದ ನಟರಾಜ್ ಅವರು ಹುಬ್ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಶನಿವಾರ ೯.೬.೨೦೧೨ ರಂದು ಹುಬ್ಬಳ್ಳಿಯಲ್ಲಿ ತಮ್ಮ ೫೪ ನೇ ವಯಸ್ಸಿನಲ್ಲಿ ನಿಧನರಾದರು.

  1. http://vijaykarnataka.indiatimes.com/articleshow/13958024.cms