ಎ.ವಿ. ವರದಾಚಾರ್
ಜನನ2-2-1869
ಚಿತ್ರದುರ್ಗ (ಬೆಂಗಳೂರು?)
ಮರಣದಿ.4-4-1926
ವೃತ್ತಿರಂಗ ಕಲಾವಿದ - ನಟ, ನಾಟಕ ಕರ್ತ.
ವಿಷಯರಂಗ ಕಲಾವಿದ

ವಿಶ್ವ ರಂಗಭೂಮಿ ದಿನದಂದು ಎ.ವಿ. ವರದಾಚಾರ್ ನೆನಪು

ಬದಲಾಯಿಸಿ
  • ಕನ್ನಡ ರಂಗಭೂಮಿಯನ್ನು ದಕ್ಷಿಣ ಭಾರತದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಎ.ವಿ. ವರದಾಚಾರ್ಯರಿಗೆ ಸಲ್ಲಬೇಕು. ಆದ್ದರಿಂದ ಅವರು ಮೊದಲ ನಮನಕ್ಕೆ ಅರ್ಹರು. ಮಾರ್ಚ್ 27 ವಿಶ್ವ ರಂಗಭೂಮಿ ದಿನ. ವರದಾಚಾರ್ಯರು .ಕನ್ನಡ ರಂಗಭೂಮಿಯ ನವೋದಯ ಕಾಲದಲ್ಲಿ ಕಲಾದೀವಿಗೆಯ ಬೆಳಕನ್ನು ಜನಸಾಮಾನ್ಯರ ಹೃದಯದಲ್ಲಿ ಬೆಳಗಿಸಿದವರು ಪ್ರಸಿದ್ಧ ನಾಟಕಕಾರ ಬಿ. ಪುಟ್ಟಸ್ವಾಮಯ್ಯನವರು ಆಚಾರ್ಯರ ಪ್ರತಿಭೆಯನ್ನೂ–ಹಿರಿಮೆಯನ್ನು ಬಣ್ಣಿಸಿದ್ದಾರೆ. ವೃತ್ತಿ ರಂಗಭೂಮಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೆರುಗು, ರಂಗಪ್ರದರ್ಶನದ ವೈಭವ, ಪಾತ್ರಗಳಿಗೆ ವೇಷಭೂಷಣಗಳ ಸಹಜತೆಯನ್ನು ಅವರು ತಂದುಕೊಟ್ಟರು.
  • ಫೋಟೊ:ಕನ್ನಡ ರಂಗಮಂಚದ ‘ಆಚಾರ್ಯ’ ಪ್ರತಿಭೆ:ಎ.ವಿ. ವರದಾಚಾರ್ Archived 2017-03-25 ವೇಬ್ಯಾಕ್ ಮೆಷಿನ್ ನಲ್ಲಿ.

ಆರಂಭಿಕ ಜೀವನ

ಬದಲಾಯಿಸಿ
  • ಅನಮಲಪಲ್ಲಿ ವೆಂಕಟ ವರದಾಚಾರ್ಯ (ಎ.ವಿ. ವರದಾಚಾರ್ - 2-2-1869 - 4-4-1926) ಹುಟ್ಟಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ. ಎಳೆವೆಯಿಂದಲೇ ಸಂಗೀತ ಹಾಗೂ ಅಭಿನಯ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ತಂದೆ ಶಿರಸ್ತೆದಾರ್‌ ರಂಗಸ್ವಾಮಿ ಅಯ್ಯಂಗಾರರು ಸ್ವತಃ ಸಂಗೀತ ಪ್ರಿಯರಾಗಿದ್ದರು. ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಮಗನಿಗೆ ಆಸಕ್ತಿ ಇದ್ದ ಸಂಗೀತ ಶಿಕ್ಷಣವನ್ನು ಕೊಡಿಸಿದರು. ಶಾಲೆಯಲ್ಲಿ ಕಲಿಕೆ, ಭಜನಾಮಂದಿರದಲ್ಲಿ ಸಂಗೀತ ಕಲಿತ ವರದಾಚಾರ್ಯ ಅವರದು ಉತ್ತಮ ಕಂಠಸಿರಿ. ದುರ್ಗದಿಂದ ಬೆಂಗಳೂರಿಗೆ ಬಂದ ವರದಾಚಾರ್ಯರು ಓದಿನ ಜೊತೆಗೆ ನಾಟಕದ ಗೀಳನ್ನೂ ಹಚ್ಚಿಕೊಂಡಿದ್ದರು. ಸೆಂಟ್ರಲ್ ಕಾಲೇಜಿನಿಂದ ಎಫ್.ಎ. ಪಾಸಾದ ನಂತರ ತಮ್ಮ ದೇಹದಾರ್ಢ್ಯ ಹಾಗೂ ಸುಮಧುರ ಕಂಠದಿಂದ ಕಲಾವಿಲಾಸಿಗಳ ಗಮನ ಸೆಳೆದರು.

ನಾಯಕ ಪುರೂರವರನ ಪಾತ್ರ

ಬದಲಾಯಿಸಿ
  • ಆ ಕಾಲದಲ್ಲಿ ಬೆಂಗಳೂರಿನಲ್ಲಿ ನಾಟಕಗಳು ಹೆಚ್ಚು ನಡೆಯುತ್ತಿರಲಿಲ್ಲ. ರೆಸಿಡೆನ್ಸಿ ಕಚೇರಿಯಲ್ಲಿ ನೌಕರಿ ಹಿಡಿದರೂ ವರದಾಚಾರ್ಯರಿಗೆ ಕಲಾಸಕ್ತಿಯನ್ನು ಮುಂದುವರೆಸುವ ಆಸೆ. ‘ಬೆಂಗಳೂರು ಯೂನಿಯನ್‌ ಹವ್ಯಾಸಿ ನಾಟಕ ಸಂಸ್ಥೆ’ ಅಭಿನಯಿಸುತ್ತಿದ್ದ ನಾಟಕಗಳಲ್ಲಿ ಅವರ ನಟನಾಪ್ರತಿಭೆ ಹೊರ ಬಂತು. ಅದೇ ಕಾಲಕ್ಕೆ ಮಿಲಿಟರಿ ಕಂಟ್ರಾಕ್ಟರ್‌ ಬುಳ್ಳಪ್ಪ ಎಂಬ ಸಿರಿವಂತ ಶುರು ಮಾಡಿದ್ದ ವೃತ್ತಿ ಸಂಸ್ಥೆಯ ನಾಟಕಗಳಲ್ಲೂ ವರದಾಚಾರ್ಯರು ಕಾಣಿಸಿಕೊಂಡರು. 1892ರಲ್ಲಿ ಗೌರಿನರಸಿಂಹಯ್ಯನವರ ‘ಶ್ರೀ ಸರಸ್ವತಿ ವಿಲಾಸ ರತ್ನಾವಳಿ ನಾಟಕ ಸಭಾ ಮಂಡಲಿ’ಯನ್ನು ಸೇರಿ ನಾಯಕನ ಪಾತ್ರ. ವಹಿಸಿದರು. ಆದರೆ ಆ ಮಂಡಲಿ ನಿಂತುಹೋದ್ದರಿಂದ ಬೆಂಗಳೂರಿಗೆ ಬಂದು ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ನೌಕರಿ ಹಿಡಿದರು.
  • ಸಂಸ್ಕೃತಿ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದ್ದ ಮೈಸೂರಿನಲ್ಲಿ ನೃತ್ಯ, ಸಂಗೀತ, ಕಲಾ ಪ್ರದರ್ಶನಗಳು ಸಾಮಾನ್ಯವಾಗಿದ್ದ ಕಾಲ ಅದು. ಅರಮನೆಯಲ್ಲಿ ‘ನಾಟಕ ಸಂಘ’ವೂ ಇತ್ತು. ಅರಮನೆ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದ ಗಮಕಿ, ಸಂಗೀತ ವಿದ್ವಾಂಸ ಗೌರೀ ನರಸಿಂಹಯ್ಯನವರಿಗೆ ಸ್ತ್ರೀಪಾತ್ರಗಳೆಂದರೆ ಬಹಳ ಅಚ್ಚುಮೆಚ್ಚು. ಕಾಳಿದಾಸನ ‘ವಿಕ್ರಮೋರ್ವಶೀಯ’ ನಾಟಕ ಪ್ರದರ್ಶನದ ಸಂದರ್ಭದಲ್ಲಿ ನಿರ್ಧರಿಸಿದಾಗ ಗೌರೀ ನರಸಿಂಹಯ್ಯನವರು(ಊರ್ವಶಿ ಪಾತ್ರಧಾರಿ) ಪುರೂರವರನ ಪಾತ್ರಕ್ಕೆ ವರದಾಚಾರ್ಯರು ಸುಕ್ತವೆಂದು ತೀಮಾನಿಸಿದರು. ಅವರ ಒತ್ತಾಯಕ್ಕೆ ಮಣಿದು ಮುಖ್ಯ ನಟರಾಗಲು ಒಪ್ಪಿದ ವರದಾಚಾರ್ಯರು ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟರು. ವರದಾಚಾರ್ಯ’ ಪುರೂರವನ ಪಾತ್ರ ಒಪ್ಪಿಕೊಂಡರು. ಮುಂದೆ ಅವರು ರಂಗಭೂಮಿಯನ್ನು ತಮ್ಮ ಜೀವನದ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.
  • ಅಷ್ಟರೊಳಗೆ ರಂಗದ ಗೀಳುಹತ್ತಿ ಬೆಂಗಳೂರಿನ ‘ಯೂನಿಯನ್ ಕ್ಲಬ್’ ಸೇರಿದ್ದರು. ಕೆಲವು ಅಹಿತಕರ ಕಾರಣಗಳಿಂದಾಗಿ ವರದಾಚಾರ್ಯರು ರಂಗಭೂಮಿಯಿಂದಲೇ ದೂರವಾಗಲು ಯೋಚಿಸುತ್ತಿದ್ದ ಸಂದರ್ಭವದು. ರಂಗಭೂಮಿ ಕಿತ್ತಾಟಗಳಿಂದ ದೂರವಾಗಲು ಮನಸ್ಸು ಮಾಡಿದ್ದ ವರದಾಚಾರ್ಯರಿಗೆ ಮೈಸೂರಿನಿಂದ ಬಂದ ಆಹ್ವಾನ ಆಪ್ಯಾಯವೆನ್ನಿಸಿತು
  • ಊರ್ವಶಿ ಪಾತ್ರಧಾರಿ ಗೌರೀ ನರಸಿಂಹಯ್ಯನವರು ಆರಂಭಿಸಿದ ಕಂಪನಿಯಲ್ಲಿ, ಊರ್ವಶಿಗಾಗಿ ಪರಿತಪಿಸುವ, ಶಾಪಕ್ಕೆ ಗುರಿಯಾಗಿ ಬಳ್ಳಿಯಾಗುವ ಊರ್ವಶಿಯನ್ನು ಹುಡುಕುವ ಪುರೂರವನ ಪಾತ್ರಧಾರಿಯಾಗಿ ವರದಾಚಾರ್ಯ ನಾಟಕ ವಲಯಗಳಲ್ಲಿ ಜನಪ್ರಿಯರಾಗಿ ಮನೆ ಮಾತಾದರು. ವಾರಕ್ಕೊಂದೇ ನಾಟಕ ಪ್ರದರ್ಶನವಿದ್ದರೂ ಅದರ ಮುಖ್ಯ ಆಕರ್ಷಣೆಯಾಗಿದ್ದ ವರದಾಚಾರ್ಯರ ಆದಾಯಕ್ಕೇನೂ ಕಡಿಮೆ ಇರಲಿಲ್ಲ. ‘ಚಂದ್ರಾವಳಿ’, ‘ಮೃಚ್ಛಕಟಿಕ’ ನಾಟಕಗಳೂ ಜನಪ್ರಿಯವಾಗಿದ್ದವು.[]

ನಾಟಕ ಮಂಡಲಿ ಜವಾಬ್ದಾರಿ

ಬದಲಾಯಿಸಿ
  • ಅದೇ ಸಮಯಕ್ಕೆ ಗೌರೀ ನರಸಿಂಹಯ್ಯನವರು ಅಕಾಲಿಕ ಮರಣಕ್ಕೆ ತುತ್ತಾದರು. ಇದು ವರದಾಚಾರ್ಯರಿಗೆ ದೊಡ್ಡ ಆಘಾತವಾಗಿ ಪರಿಣಮಿಸಿತು. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಪ್ಲೇಗುಮಾರಿಗೆ ವರದಾಚಾರ್ಯರ ಹೆಂಡತಿ, ಮಗ ಇಬ್ಬರೂ ಬಲಿಯಾದರು. ಪೆಟ್ಟಿನ ಮೇಲೆ ಪೆಟ್ಟು ತಿಂದ ವರದಾಚಾರ್ಯರನ್ನು ಏಕಾಂಗಿಯಾಗಿ ಬಿಡಬಾರದೆಂದು ನಿಶ್ಚಯಿಸಿದ ಗೆಳೆಯರ ಗುಂಪು, ಗೌರೀ ನರಸಿಂಹಯ್ಯ ಸ್ಥಾಪಿಸಿದ್ದ ‘ಸರಸ್ವತಿ ವಿಲಾಸ ನಾಟಕ ಮಂಡಲಿ’ಯನ್ನು ಆಚಾರ್ಯರ ಹೆಗಲಿಗೆ ವರ್ಗಾಯಿಸಿತು
  • ಅದು 1900ರ ಆರಂಭದ ಕಾಲ. ವೃತ್ತಿ ನಾಟಕ ಕಂಪನಿಗಳು ತೆರೆದುಕೊಳ್ಳುತ್ತಿದ್ದ ಸಮಯ. ವೈಯಕ್ತಿಕ ಬದುಕಿನಲ್ಲಿ ಆಘಾತ ಅನುಭವಿಸಿ ಚಿಂತೆಗೀಡಾಗಿದ್ದ ವರದಾಚಾರ್ಯರು ತಮ್ಮ ಮುಂದಿನ ದಿನಗಳನ್ನು ರಂಗಭೂಮಿಯೊಂದಿಗೆ ಕಳೆಯುವ ನಿರ್ಧಾರಕ್ಕೆ ಬಂದರು. ‘ರತ್ನಾವಳಿ’ ನಾಟಕದಿಂದ ಪ್ರಸಿದ್ಧಿ ಪಡೆದಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ವರದಾಚಾರ್ಯರು ನಾಟಕಸಂಸ್ಥೆಗೆ ಮರು ನಾಮಕರಣ ಮಾಡಿದರು. ಆ ಕಂಪನಿಯೇ ‘ಶ್ರೀ ರತ್ನಾವಳಿ ನಾಟಕ ಮಂಡಲಿ’

ಕನ್ನಡ ರಂಗಭೂಮಿಯ ಸುವರ್ಣ ಕಾಲ

ಬದಲಾಯಿಸಿ
  • ಮುಂದಿನ ಇಪ್ಪತ್ತೈದು ವರ್ಷ ಕನ್ನಡ ರಂಗಭೂಮಿಯ ಸುವರ್ಣ ಕಾಲ. ಅದಕ್ಕೆ ಬಹುಮಟ್ಟಿನ ಕಾರಣ ವರದಾಚಾರ್ಯರು. ಕನ್ನಡ ರಂಗಭೂಮಿ ಕನ್ನಡನಾಡು ಮಾತ್ರವಲ್ಲದೆ ಆಂಧ್ರ. ತಮಿಳುನಾಡುಗಳಿಗೂ ವ್ಯಾಪಿಸಿದ್ದು ಇದೇ ಅವಧಿಯಲ್ಲಿ. ಮೂರು ದಶಕಗಳ ಅವಧಿಯಲ್ಲಿ ವರದಾಚಾರ್ ಕೈಗೆತ್ತಿಕೊಂಡಿದ್ದು ಸುಮಾರು 20 ನಾಟಕಗಳು. ರಾಜರು ಹಾಗೂ ಪಂಡಿತರ ನೆಚ್ಚಿನ ರಂಗಭೂಮಿಯನ್ನು ಸಾಮಾನ್ಯ ಜನರೂ ಆಸ್ವಾದಿಸುವಂತೆ ಮಾಡಿದ್ದು ಅವರ ಹೆಗ್ಗಳಿಕೆ.
  • ಪ್ರಯೋಗಗಳಲ್ಲಿ ವೈವಿಧ್ಯವನ್ನು ಸಾಧಿಸಿದ ಅವರು, ಪಾತ್ರ ನಿರ್ವಹಣೆಯಲ್ಲಿ ಹೊಸತನ ತಂದರು. ಬೆಳಕಿನಿಂದಲೇ ಸನ್ನಿವೇಶ ಪರಿಣಾಮಕಾರಿಯಾಗುವ ವಿಧಾನ ಕಂಡುಹಿಡಿದರು. ಸಂಗೀತ, ಸಾಹಿತ್ಯಗಳೇ ಹೆಚ್ಚಿದ್ದ ರಂಗಭೂಮಿಯಲ್ಲಿ ಅಭಿನಯ ಕಲೆಗೆ ಮಾನ್ಯತೆ ದಕ್ಕುವಂತೆ ಮಾಡಿದರು. ಸಂಸ್ಕೃತಿ ಪ್ರಸಾರಕ್ಕೆ ನಾಟಕಗಳನ್ನು ಒಗ್ಗಿಸಿದರು. ಹೀಗೆ ಆಚಾರ್ಯರು ಕೈಗೊಂಡ ಸುಧಾರಣೆಗಳು ಸಾಮಾನ್ಯ ಪ್ರೇಕ್ಷಕರನ್ನು ರಂಗಮಂದಿರದೊಳಕ್ಕೆ ಆಕರ್ಷಿಸಲು ಕಾರಣವಾದವು.

ನಾಟಕಗಳ ದಿಗ್ವಿಜಯ

ಬದಲಾಯಿಸಿ
  • ನಾಯಕ, ಗಾಯಕರಾಗಿದ್ದ ವರದಾಚಾರ್ ‘ರತ್ನಾವಳಿ’ ನಾಟಕದಲ್ಲಿ ‘ವಸಂತ’, ‘ಭಕ್ತ ಪ್ರಹ್ಲಾದ’ದಲ್ಲಿ ಹಿರಣ್ಯ ಕಶಿಪು, ‘ಶಾಕುಂತಲ’ದಲ್ಲಿ ದುಷ್ಯಂತ, ‘ರಾಮಮರ್ಮ – ಲೀಲಾವತಿ’ ನಾಟಕದಲ್ಲಿ ಸಂತಾಪಕನಾಗಿ ನಿರ್ವಹಿಸಿದ್ದು, ನೋಡುಗರ ಮನಸ್ಸಿನಲ್ಲಿ ಬಹುಕಾಲ ಉಳಿಯಿತು. ತಾವೇ ರಚಿಸಿದ ‘ಇಂದಿರಾ ನಂದ’ ಹಾಗೂ ‘ವಿಮಲಾ ವಿಜಯ’ ನಾಟಕಗಳಲ್ಲೂ ಆಚಾರ್ಯರದು ಪರಿಣಾಮಕಾರಿ ಪಾತ್ರಗಳು. ‘ಶಾಕುಂತಲ’, ‘ರತ್ನಾವಳಿ’, ‘ಪ್ರಹ್ಲಾದ’, ‘ಮನ್ಮಥ ವಿಜಯ’, ‘ಧ್ರುವ ಚರಿತ್ರೆ’, ‘ಇಂದಿರಾನಂದ’, ‘ನಿರುಪಮ’, ‘ಸದಾರಮೆ’, ‘ಗುಲಾಬಿ ಕಾವಲಿ’ – ಹೀಗೆ ಹಲವು ಜನಪ್ರಿಯ ನಾಟಕಗಳನ್ನು ಕಳೆಗಟ್ಟಿಸಿದ ಖ್ಯಾತಿ ವರದಾಚಾರ್ಯರದು
  • ತಮ್ಮ ನಾಟಕ ಕಂಪನಿ ಮೂಲಕ ಮತ್ತು ನಟನಾ ಕೌಶಲದ ಮೂಲಕ ಇಡೀ ಮೈಸೂರು ಸಂಸ್ಥಾನದ ರಂಗಭೂಮಿಯನ್ನು ದಕ್ಷಿಣ ಭಾರತದ ಪ್ರೇಕ್ಷಕರು ಬೆರಗಾಗುವಂತೆ ಮಾಡಿದರು.

ರಾಷ್ಟ್ರಕವಿ ಠಾಕೂರ್ ಮೆಚ್ಚುಗೆ

ಬದಲಾಯಿಸಿ
  • ರವೀಂದ್ರನಾಥ ಟ್ಯಾಗೋರ್ ಅವರನ್ನು ತಮ್ಮ ನಾಟಕ ವೀಕ್ಷಿಸಲು ವರದಾಚಾರ್ಯರು ಆಹ್ವಾನಿಸಿದ್ದರು. ಕಾರ್ಯಕ್ರಮಗಳ ಒತ್ತಡದಿಂದಾಗಿ ಮುಕ್ಕಾಲು ಗಂಟೆಯಷ್ಟೇ ನಾಟಕ ನೋಡುವುದಾಗಿ ಹೇಳಿದ್ದ ರವೀಂದ್ರರು – ಆಚಾರ್ಯರು ಪ್ರದರ್ಶಿಸಿದ ‘ಪ್ರಹ್ಲಾದ ಚರಿತ್ರೆ’ಯನ್ನು ನೋಡಲು ಶುರು ಮಾಡಿದವರು ಕೊನೆಯವರೆಗೆ ಕುಳಿತ ಕಡೆಯಿಂದ ಕದಲಲೇ ಇಲ್ಲವಂತೆ. ಇನ್ನೊಮ್ಮೆ ತಿರುಚನಾಪಲ್ಲಿ ಮೊಕ್ಕಾಂನಲ್ಲಿ ನಾಟಕ ವೀಕ್ಷಿಸಲು ಡಾ. ಆನಿಬೆಸೆಂಟ್‌ರನ್ನು ಆಚಾರ್ಯರು ಆಹ್ವಾನಿಸಿದ್ದರು. ಆಗ ಪ್ರದರ್ಶನಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಕಾಳಿದಾಸನ ಸಂಸ್ಕೃತ ನಾಟಕ ‘ಶಾಕುಂತಲೆ’ಯ ಕನ್ನಡ ಅವತರಣಿಕೆಯನ್ನು. ಸಂಸ್ಕೃತದಲ್ಲಿ ‘ಶಾಕುಂತಲ’ ನಾಟಕ ಅಧ್ಯಯನ ಮಾಡಿದ್ದ ಅನಿಬೆಸೆಂಟ್, ದುಷ್ಯಂತ ಪಾತ್ರ ನಿರ್ವಹಣೆ ಮಾಡಿದ ವರದಾಚಾರ್ಯರಿಗೆ ‘ನಾಟಕ ಶಿರೋಮಣಿ’ ಎಂಬ ಬಿರುದು ನೀಡಿ, ಆಚಾರ್ಯರ ಕೈಗೆ ತೋಡ ತೊಡಿಸಿದರು.

ರೋಮಿಯೊ ಅಂಡ್ ಜೂಲಿಯೆಟ್ ನಾಟಕ

ಬದಲಾಯಿಸಿ
  • ನಾಟಕ ಪ್ರದರ್ಶನದ ವೈಭವವನ್ನು ಹೆಚ್ಚಿಸಿ, ಕರ್ನಾಟಕ ಸಂಗೀತಕ್ಕೆ ಗಮಕದ ಸ್ಪರ್ಶ ಕೊಡಲು ಆರಂಭಿಸಿದ ಅವರು ಹಾಸ್ಯಕ್ಕೆ ಮಹತ್ವ ಕೊಟ್ಟರು. ರಂಗಮಂಚದ ಮೇಲೆ ಎಲ್ಲಾ ನಟರು ತಮ್ಮ ಪಾತ್ರಗಳಿಗೆ ಅನುಗುಣವಾದ ದೇಹ ಭಾಷೆಯನ್ನು ಬಳಸುವ ಪರಿಪಾಠವನ್ನು ತಂದರಲ್ಲದೆ, ನೈಜ ವೇಷಾಲಂಕಾರಗಳಿಗೆ ಆದ್ಯತೆ ನೀಡಿದರು. ಇಂಗ್ಲಿಷ್‌ ನಾಟಕಗಳ ಅನುವಾದಗಳು ಕನ್ನಡ ರಂಗಭೂಮಿಯಲ್ಲಿ ಕಾಣಿಸಿಕೊಳ್ಳಲು ಶುರುವಾದಾಗ, ಷೇಕ್ಸ್‌ಪಿಯರ್‌ನ ‘ರೋಮಿಯೊ ಅಂಡ್ ಜೂಲಿಯೆಟ್’ ನಾಟಕವನ್ನು ಭಾರತೀಯಗೊಳಿಸಿ, ‘ರಾಮ ವರ್ಮ – ಲೀಲಾವತಿ’ ಹೆಸರಿನಲ್ಲಿ ಕನ್ನಡ ರಂಗಭೂಮಿಗೆ ತಂದರು. ರಾಮವರ್ಮನ (ರೋಮಿಯೊ) ಪಾತ್ರದಲ್ಲಿ ಸ್ವತಃ ಅವರೇ ಅಭಿನಯಿಸಿದ್ದರು. ಚಿಕ್ಕಮಗಳೂರು ಮೊಕ್ಕಂನಲ್ಲಿ ಕಾಫಿ ಪ್ಲಾಂಟೇಷನ್‌ಗಳಲ್ಲಿದ್ದ ಬ್ರಿಟಿಷ್ ಕುಟುಂಬಗಳನ್ನು ಆಹ್ವಾನಿಸಿ ‘ರಾಮ ವರ್ಮ– ಲೀಲಾವತಿ’ ಪ್ರದರ್ಶಿಸಿದಾಗ, ದಂಗಾಗುವ ಸರದಿ ಬಿಳಿಯರದು. ನಾಟಕ ವೀಕ್ಷಿಸಿದ ಬ್ರಿಟಿಷ್ ಮಹಿಳೆಯೊಬ್ಬರು ಭಾವಪರವಶರಾಗಿ ರಂಗಮಂಚವೇರಿ ವರದಾಚಾರ್ ಅವರಿಗೆ ತಮ್ಮ ಕುತ್ತಿಗೆಯಲ್ಲಿದ್ದ ಸರವನ್ನೇ ಹಾಕಿದರು.

ಅವರ ಸಂಸ್ಮರಣೆಗೆ ‘ಭಕ್ತ ಧ್ರುವ’ಸಿನೇಮಾ

ಬದಲಾಯಿಸಿ

  • ಆಚಾರ್ಯರ ನಿಧನಾನಂತರ (4 ಏಪ್ರಿಲ್ 1926) ಟಿ.ಪಿ. ಕೈಲಾಸಂ ಪ್ರಯತ್ನದಿಂದ ‘ರತ್ನಾವಳಿ ನಾಟಕ ಕಂಪನಿ’ ಎರಡು ವರ್ಷ ಮುಂದುವರೆಯಿತು. ಕನ್ನಡ ರಂಗಭೂಮಿಗೆ ದಿಕ್ಕು ತೋರಿದ ಅವರ ಸಂಸ್ಮರಣೆಯಲ್ಲಿ ‘ಭಕ್ತ ಧ್ರುವ’ ಎನ್ನುವ ವಾಕ್ಚಿತ್ರವೊಂದು ತಯಾರಾಯಿತು. ವರದಾಚಾರ್ಯರ ಬಂಧುಗಳೇ ನಿರ್ಮಿಸಿದ ಈ ಚಿತ್ರ ಕನ್ನಡ ವಾಕ್ಚಿತ್ರ ಪರಂಪರೆಯಲ್ಲಿ ಮೊದಲು ನಿರ್ಮಾಣ ಆರಂಭಿಸಿದ ಸಿನಿಮಾ. ‘ಸತಿ ಸುಲೋಚನಾ’ ಮೊದಲು ತೆರೆಕಂಡಿದ್ದಾಗಿ ‘ಭಕ್ತಧ್ರುವ’ ಎರಡನೇ ವಾಕ್ಚಿತ್ರ ಎನ್ನುವ ಕೀರ್ತಿಗೆ ಪಾತ್ರವಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. ಎ.ವಿ. ವರದಾಚಾರ್
  2. "ಕನ್ನಡ ರಂಗಮಂಚದ 'ಆಚಾರ್ಯ' ಪ್ರತಿಭೆ;ಪ್ರಜಾವಾಣಿ::ಎನ್. ಜಗನ್ನಾಥ್ ಪ್ರಕಾಶ್;26 Mar, 2017". Archived from the original on 2017-03-25. Retrieved 2017-03-26.

ಉಲ್ಲೇಖ

ಬದಲಾಯಿಸಿ