ತಿರುಮಲೆ ತಾತಾಚಾರ್ಯ ಶರ್ಮ

ತಿರುಮಲೆ ತಾತಾಚಾರ್ಯ ಶರ್ಮ (ಏಪ್ರಿಲ್ ೨೭, ೧೮೯೭ - ಅಕ್ಟೋಬರ್ ೨೦, ೧೯೭೩) ಅವರು ತಿ. ತಾ. ಶರ್ಮ ಎಂಬ ಹೆಸರಿನಿಂದ ಕನ್ನಡ ನಾಡಿನಲ್ಲಿ ಚಿರಪರಿಚಿತರು. ಬಹುಮುಖ ಪ್ರತಿಭೆಯ ಅಪೂರ್ವ ಸಂಗಮವಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮರು ಅಸಾಧಾರಣ ವ್ಯಕ್ತಿತ್ವದಿಂದಾಗಿ 20ನೆಯ ಶತಮಾನದ ಶಕಪುರಷರಲ್ಲೊಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂಚಭಾಷಾಕೋವಿದ, ಪತ್ರಿಕೋದ್ಯಮಿ, ಸಾಹಿತಿ, ವಾಗ್ಮಿ, ದುಭಾಷಿ, ತರ್ಜುಮೆದಾರ, ಅಧ್ಯಾಪಕ, ಕಲಾವಿದ, ಶಾಸನತಜ್ಞ, ಸಂಶೋಧಕ, ಇತಿಹಾಸಕಾರ, ಹಸ್ತಪ್ರತಿ ಪ್ರೇಮಿ, ಹವ್ಯಾಸಿ ನಾಮಶಾಸ್ತ್ರಜ್ಞ, ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣವಾದಿ ಪ್ರಕಾಶಕ, ಸಂಘಟನಾ ಚತುರ, ಸಮಾಜಸೇವಕ, ರಾಜಕಾರಣಿ – ಹೀಗೆ ಹತ್ತು ಹಲವು ವೈಶಿಷ್ಟ್ಯಗಳ ಆಗರವಾಗಿದ್ದ ಶರ್ಮರು ಕರ್ನಾಟಕದ ಸಾರಸ್ವತ ಲೋಕದ ಧ್ರುವತಾರೆಯಾಗಿದ್ದು ಯುವಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ. ಸುಮಾರು 8 ದಶಕಗಳ ಅರ್ಥಪೂರ್ಣ ತುಂಬು ಜೀವನ ನಡೆಸಿದ ಶರ್ಮರು, ಬದುಕಿನುದ್ದಕ್ಕೂ ತಮ್ಮನ್ನು ತೊಡಗಿಸಿಕೊಂಡ ವೈವಿಧ್ಯಮಯ ಕ್ಷೇತ್ರಗಳಲ್ಲಿ ಮೂಡಿಸಿರುವ ಛಾಪು ಅದಮ್ಯ; ತೆರೆದಿಟ್ಟ ಹರವು ಅನುಪಮ.

ತಿರುಮಲೆ ತಾತಾಚಾರ್ಯ ಶರ್ಮ
ಜನನಲಕ್ಷ್ಮೀಕುಮಾರ
ಏಪ್ರಿಲ್ ೨೭, ೧೯೮೫
ಚಿಕ್ಕಬಳ್ಳಾಪುರ
ಮರಣಅಕ್ಟೋಬರ್ ೨೦, ೧೯೭೩
ವೃತ್ತಿಸಾಹಿತಿಗಳು, ಇತಿಹಾಸ ತಜ್ಞರು, ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಾರರು
ವಿಷಯಕನ್ನಡ ಸಾಹಿತ್ಯ

ಶ್ರೀನಿವಾಸ ತಾತಾಚಾರ್ಯ – ಜಾನಕಿ ದಂಪತಿಗಳ ಮಗನಾಗಿ 1897ರ ಏಪ್ರಿಲ್ 27ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ತಿ.ತಾ. ಶರ್ಮರಿಗೆ ಸಹಜವಾಗಿ ಲಭ್ಯವಿದ್ದ ವೈದಿಕ ವಾತಾವರಣ, ತೆಲುಗು ಪರಿಸರಗಳಿಂದಾಗಿ ಬಾಲ್ಯದಲ್ಲೇ ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು. ಅವರ ಜನ್ಮನಾಮ ‘ಲಕ್ಷ್ಮೀಕುಮಾರ’. ಮನೆಮಂದಿಗೆಲ್ಲ ‘ರಾಜ’ ಆಗಿದ್ದ ಶರ್ಮರು ಮಕ್ಕಳಿಲ್ಲದ ತಮ್ಮ ಚಿಕ್ಕ ತಾತ ಶ್ರೀರಂಗಾಚಾರ್ಯರ ದತ್ತುಮಗನಾಗಿ ಸೂಲಿಕುಂಟೆ, ವಾಟದ ಹೊಸಳ್ಳಿ, ಹಾಗೂ ಗೌರಿಬಿದನೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಈ ಅವಧಿಯಲ್ಲಿ ಸಾಕು ತಾಯಿ ಅಲಮೇಲಮ್ಮನವರು ಶರ್ಮರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಶರ್ಮರು ಗೌರಿಬಿದನೂರಿನಲ್ಲಿ ಓದುತ್ತಿದ್ದಾಗ ‘ವಂದೇ ಮಾತರಂ’ ಚಳುವಳಿ ಪ್ರತಿಧ್ವನಿಸಿದಾಗ, ಗೆಳೆಯರೊಡಗೂಡಿ ಎಲ್ಲರ ಮನೆ ಬಾಗಿಲ ಮೇಲೆ ‘ವಂದೇ ಮಾತರಂ’ ಎಂದು ಬರೆದು ಎಳೆಯದರಲ್ಲೇ ಸ್ವಾತಂತ್ರ್ಯಪ್ರೇಮ ಮೆರೆದಿದ್ದರು.

ಇಂಗ್ಲಿಷ್ ಕಲಿಯುವ ಆಸೆಯೊಂದಿಗೆ ಚಿಕ್ಕಬಳ್ಳಾಪುರಕ್ಕೆ ಮಾಧ್ಯಮಿಕ ಶಿಕ್ಷಣ ಪಡೆಯಲು ಬಂದ ಶರ್ಮರು ಬಂಧುಗಳ ಮನೆಯಲ್ಲಿ ಉಳಿದು ಎ.ವಿ. ಸ್ಕೂಲನ್ನು ಸೇರಿದರು. ಇವರು ಅಲ್ಲಿದ್ದಾಗ, ಆ ಶಾಲೆಯ ಹಿಂದಿನ ವಿದ್ಯಾರ್ಥಿಗಳಾಗಿದ್ದ, ದಿವಾನ್ ವಿಶ್ವೇಶ್ವರಯ್ಯನವರು ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣ, ಉತ್ಸಾಹದ ಚಿಲುಮೆಯಾಗಿದ್ದ ಶರ್ಮರ ಮೇಲೆ ಗಾಢ ಪ್ರಭಾವ ಬೀರಿತು. ಲಂಡನ್ ಮಿಷನರಿ ಶಾಲೆಯಲ್ಲಿ ಓದುತ್ತಿದ್ದಾಗ ಇ.ಪಿ. ರೈಸ್ ಅವರು ಶರ್ಮರ ದೃಷ್ಟಿದೋಷವನ್ನು ನಿವಾರಿಸಿ ಕನ್ನಡಕ ನೀಡುವುದರ ಮೂಲಕ ದೃಷ್ಟಿದಾನ ಮಾಡಿಸಿದ್ದನ್ನು ಶರ್ಮ ಅವರು ಮರೆಯಲೇ ಇಲ್ಲ. ದತ್ತಕ ತಂದೆಯ ಇಚ್ಚೆಯಂತೆ ಸೋದರತ್ತೆಯ ಮಗಳು ಮುಂದೆ ‘ಭಾರತಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದ ತಿರುಮಲೆ ರಾಜಮ್ಮ ಅವರನ್ನು ೧೯೧೩ರಲ್ಲಿ ವಿವಾಹವಾದರು. ಹಾಸನದಲ್ಲಿದ್ದ ಹೆಂಡತಿಯ ಮನೆಯಲ್ಲಿದ್ದುಕೊಂಡೇ ಪ್ರೌಢಶಾಲಾ ವ್ಯಾಸಂಗವನ್ನು ಪೂರೈಸಿದರು. ಹಾಸನದಲ್ಲಿದ್ದಾಗ ಶಾಲೆಯಲ್ಲಿ ಅಮೆಚೂರ್ ನಾಟಕ ಕ್ಲಬ್ಬನ್ನು ರಚಿಸಿ ‘ಆಚಾರ್ಯ’, ‘ಮೌಲ್ವಿ’ ಪಾತ್ರಗಳನ್ನು ಅಭಿನಯಿಸಿ ಸಕಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮುಂದೆ ಇಂಟರ್ ಮೀಡಿಯೇಟಿಗೆಂದು ಮೈಸೂರು ಮಹಾರಾಜಾ ಕಾಲೇಜಿಗೆ ಸೇರಿದರು. ಅಲ್ಲಿ ‘ಪೂರ್ವಮುಖಿ’ ಎಂಬ ಸಾಂಸ್ಕ್ರತಿಕ ಗುಂಪನ್ನು ಸಂಘಟಿಸಿ ಸಹಪಾಠಿಗಳಲ್ಲಿ ನಾಡು-ನುಡಿಗಳ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ನಿರ್ವಹಿಸಿದರು. ಸಂಘದ ವತಿಯಿಂದ ನಾಟಕಗಳಲ್ಲಿ ‘ಕುರುಬ’, ‘ಭರತ’ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿ ಎಲ್ಲರ ವಿಶ್ವಾಸಕ್ಕೂ ಪಾತ್ರರಾದರು. ಈ ಅವಧಿಯಲ್ಲಿ ಶರ್ಮರು ಪ್ರೊ. ಎನ್. ಎಸ್. ಸುಬ್ಬರಾವ್ ಹಾಗೂ ಸಿ. ಆರ್. ರೆಡ್ಡಿ ಅವರಿಂದ ಪ್ರಭಾವಿತರಾಗಿದ್ದು, ಬಿಎಂಶ್ರೀ ಇವರ ಗುರುಗಳಲ್ಲೊಬ್ಬರಾಗಿದ್ದರು. ಕನ್ನಡ ಭಾಷೆ ಹಾಗೂ ಸಾಹಿತ್ಯದಲ್ಲಿ ಶರ್ಮರು ಪರಿಣತಿ ಪಡೆದದ್ದು ಆಗಲೇ. ಆದರೆ ಆರ್ಥಿಕ ತೊಂದರೆ ಹಾಗೂ ಅನಾರೋಗ್ಯಗಳಿಂದಾಗಿ ಮೈಸೂರಿನಲ್ಲಿ ಶಿಕ್ಷಣ ಮುಂದುವರಿಸಲಾಗದೆ ಶರ್ಮರು ಬೆಂಗಳೂರಿಗೆ ಬಂದು ಮಾವನ ಮನೆಯಲ್ಲೇ ಉಳಿಯಬೇಕಾಯಿತು.

ರಂಗಭೂಮಿಯಲ್ಲಿ

ಬದಲಾಯಿಸಿ

ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಲಾಗದೆ ನಿರಾಶರಾಗಿದ್ದ ಶರ್ಮರು ೧೯೧೮ರಲ್ಲಿ ಎ.ವಿ. ವರದಾಚಾರ್ಯರ ಅಮೆಚೂರ್ ನಾಟಕ ಮಂಡಳಿಗೆ ಸೇರುವುದರ ಮೂಲಕ ಎ.ವಿ. ವರದಾಚಾರ್ಯ, ಟಿ.ಪಿ.ಕೈಲಾಸಂ, ತಾಡಪತ್ರಿ ರಾಘವಾಚಾರ್ಯರಂತಹ ಕಲಾ ತ್ರಿರತ್ನಗಳ ಒಡನಾಟದಲ್ಲಿ ತಮ್ಮೆಲ್ಲಾ ನೋವುಗಳನ್ನೂ ಮರೆಯಲು ಸಾಧ್ಯವಾಯಿತು. ತೆಲುಗು ನಾಟಕಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಿಸಲ್ಪಡುತ್ತಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಟಕಕ್ಕೆ ಒತ್ತಾಯಿಸಿ ಪ್ರಯೋಗಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಅವರು ಹಲವಾರು ತೆಲುಗು ನಾಟಕಗಳನ್ನು ಕನ್ನಡಿಸಬೇಕಾಯಿತು. ಆ ಸಂದರ್ಭದಲ್ಲಿ ನಾಟಕ ರಚನೆಗೂ ಮುಂದಾದ ಶರ್ಮರ ‘ಶ್ರೀರಂಗಪಟ್ಟಣ ಪತನ’ ‘ಟಿಪ್ಪು ಸುಲ್ತಾನ’ ನಾಟಕಗಳು ಪ್ರಯೋಗಿಸಲ್ಪಟ್ಟು ಹೆಚ್ಚು ಜನಪ್ರಿಯತೆ ಗಳಿಸಿದವು. ಹುಟ್ಟು ಕಲಾವಿದರಾದ ಶರ್ಮರು ಬಣ್ಣ ಬಳಿದುಕೊಂಡು ಅಭಿನಯಿಸುವುದರ ಮೂಲಕ ತಾವು ಉತ್ತಮ ಕಲಾವಿದರೆಂಬ ಅಂಶವನ್ನು ಮತ್ತೊಮ್ಮೆ ಪ್ರಕಟಿಸಿದರು.

ಪ್ರಾಚ್ಯ ಶಾಸನ ತಜ್ಞರಾಗಿ

ಬದಲಾಯಿಸಿ

೧೯೨೦ರ ಜನವರಿಯಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಶಾಸನತಜ್ಞ ಹೊಸಕೋಟೆ ಕೃಷ್ಣಶಾಸ್ತ್ರಿಗಳು ತಿರುಮಲೆ ಕುಟುಂಬದ ಮಿತ್ರರಾಗಿದ್ದು ಕೇಂದ್ರ ಶಾಸನ ಇಲಾಖೆಯಲ್ಲಿ ನೂತನವಾಗಿ ಮಂಜೂರಾಗಿದ್ದ ಮದ್ರಾಸಿನಲ್ಲಿನ ತೆಲುಗು-ಕನ್ನಡ ರೀಡರ್ ತಾತ್ಕಾಲಿಕ ಹುದ್ದೆಗೆ ಸೇರುವಂತೆ ಶರ್ಮರನ್ನು ಆಹ್ವಾನಿಸಿದರು. ಕೃಷ್ಣಶಾಸ್ತ್ರಿಗಳು ಮತ್ತು ಸಿ. ಆರ್. ಕೃಷ್ಣಮಾಚಾರಿ ಅವರ ಮಾರ್ಗದರ್ಶನದಲ್ಲಿ ಬಹುಬೇಗ ಪರಿಣತಿ ಗಳಿಸಿದ ಶರ್ಮರು ಸಿಂಹಾಚಲ, ಧರ್ಮಪುರಿ, ಉದಕಮಂಡಲ, ಮಂಗಳೂರು, ಪೆನುಗೊಂಡೆ, ಗೂಟಿ ಮುಂತಾದ ಸ್ಥಳಗಳಲ್ಲಿ ಪ್ರವಾಸ ಕೈಗೊಂಡು ಶಾಸನ ಪರಿವೀಕ್ಷಣೆ ಹಾಗೂ ಶಾಸನ ಪಾಠ ಪರಿಶೀಲನೆಯಲ್ಲಿ ಪಾಲ್ಗೊಂಡರು. ಶರ್ಮ ಅವರು ಈ ಇಲಾಖೆಯಲ್ಲಿದ್ದ ಈ ತಾತ್ಕಾಲಿಕವಾದ ಹುದ್ದೆಯ ಅವಧಿಯಲ್ಲಿ “ಶಿಲಾಶಾಸನಗಳಲ್ಲಿ ಕಂಡು ಬಂದ ಕನ್ನಡ ಕವಿಗಳು’ ಎಂಬ ಲೇಖನವನ್ನು ಕನ್ನಡದಲ್ಲಿ ಬರೆದಿದ್ದು ಶಾಸನ ಇಲಾಖೆಯು ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿದ್ದ ಈ ಲೇಖನವನ್ನು ತನ್ನ ‘ಮೆಮಾರ್ಯ್ಸ್’ ಸರಮಾಲೆಯಲ್ಲಿ ಪ್ರಕಟಿಸಿದ್ದು ಗಮನಾರ್ಹವಾಗಿದೆ.

ಗಾಂಧೀ ಸಾನ್ನಿಧ್ಯ

ಬದಲಾಯಿಸಿ

ಈ ಮಧ್ಯೆ ಶರ್ಮರು ತಮ್ಮ ಶ್ರೀಮತಿಯವರಾದ ರಾಜಮ್ಮನವರೊಂದಿಗೆ ಅಹಮಾದಾಬಾದಿನಲ್ಲಿ ಗಾಂಧೀಜಿಯವರ ಆಶ್ರಮಕ್ಕೆ ತೆರಳಿ ಅಲ್ಲಿನ ವಾಸದಲ್ಲಿ ದಂಪತಿಗಳಿಬ್ಬರೂ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದರು. ಶಾಸನ ಇಲಾಖೆಯಲ್ಲಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯತ್ತ ಸೆಳೆಯಲ್ಪಟ್ಟ ಶರ್ಮರು ಆಂಧ್ರದ ಸ್ವಾತಂತ್ರ್ಯ ಹೋರಾಟಗಾರರಾದ ಟಿ. ಪ್ರಕಾಶಂ ಅವರಂತಹವರ ನೇರ ಪ್ರಭಾವಕ್ಕೆ ಒಳಗಾಗಿದ್ದರು. ಶರ್ಮರು ಮದ್ರಾಸಿನಲ್ಲಿದ್ದ ಅವಧಿಯಲ್ಲಿ ಬೆನಗಲ್ ರಾಮರಾವ್, ಪಂಜೆ ಮಂಗೇಶರಾವ್, ಗೋವಿಂದ ಪೈ ಅಂತಹವರ ಸಂಪರ್ಕ ಅಲ್ಲಿಯ ಸುಗುಣ ವಿಲಾಸಿ ಸಭೆಯಲ್ಲಿ ಲಭಿಸುವುದರೊಂದಿಗೆ ಅವರಲ್ಲಿದ್ದ ಕನ್ನಡ ಪ್ರೇಮ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಾಯಿತು. ಅವರ ಸಂಪರ್ಕದಿಂದ ಗ್ರಾಮ ನಾಮಗಳ ಅಧ್ಯಯನದತ್ತ ಸೆಳೆಯಲ್ಪಟ್ಟ ಶರ್ಮರು ಮೈಸೂರು ರಾಜ್ಯದ ಎಂಟು ಜಿಲ್ಲೆಗಳ ಗ್ರಾಮನಾಮಗಳ ಅಧ್ಯಯನಮಾಡಲು ಸಾಧ್ಯವಾಯಿತು.

ತುಂಟರ ಗುಂಪು

ಬದಲಾಯಿಸಿ

ಶಾಸನ ಇಲಾಖೆಯ ತಾತ್ಕಾಲಿಕ ಹುದ್ದೆಯ ಅವಧಿ ಮುಗಿದ ಬಳಿಕ ಶರ್ಮರು ಪ್ರಕಾಶಂರ ‘ಸ್ವರಾಜ್ಯ’ ಪತ್ರಿಕಾಲಯದ ಆಗುಹೋಗುಗಳಿಂದ ಪ್ರಭಾವಿತರಾಗಿ ಅಂತಹ ಒಂದು ಪತ್ರಿಕೆಯನ್ನು ಕನ್ನಡದಲ್ಲೂ ತರಬೇಕೆಂಬ ಪ್ರಯತ್ನಗಳನ್ನು ಪ್ರಾರಂಭಿಸಿದರು. ಅದೇ ಗುಂಗಿನಲ್ಲಿ ಮದ್ರಾಸಿನಿಂದ ಬೆಂಗಳೂರಿಗೆ ಬಂದ ಶರ್ಮರು ದೇಶೀಯ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲಾರಂಭಿಸಿದರು. ವಿದ್ಯಾಶಾಲೆಯಲ್ಲಿ ತುಂಟರ ಗುಂಪನ್ನು(ಕೋಲಾರ ಸಂಪದ್ಗಿರಿರಾವ್, ಕಂದಾಡೆ ಕೃಷ್ಣಯ್ಯಂಗಾರ್, ಕೆ. ಎಸ್. ಕೃಷ್ಣಯ್ಯರ್, ದ. ಕೃ. ಭಾರದ್ವಾಜ, ಕೈಲಾಸಂ, ಕೆ. ಎ. ವೆಂಕಟರಾಮಯ್ಯ, ಅ.ನ.ಕೃ ಮುಂತಾದವರ ಗುಂಪು ಇದಾಗಿತ್ತು) ಕಟ್ಟಿ, ಶಾಲಾ ಪತ್ರಿಕೆಯನ್ನು ಆರಂಭಿಸಿದರು. ಈ ಶಾಲೆಯಲ್ಲಿ ನಿಟ್ಟೂರು ಶ್ರೀನಿವಾಸರಾವ್, ಕೆ. ನಂಜುಂಡಯ್ಯ, ಎ. ಕೆ. ಪುಟ್ಟರಾವ್, ಕೆ. ಎಲ್. ಸುಬ್ಬರಾವ್ ಮುಂತಾದವರು ಶಿಕ್ಷಕರಾಗಿದ್ದು, ದೇಶಾಭಿಮಾನ ಎಲ್ಲೆಡೆ ಅಬ್ಬರಿಸಲಾರಂಭಿಸಿತು. ಬೆಳಗಾವಿಯಲ್ಲಿ ೧೯೨೪ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನಕ್ಕಾಗಿ ರಚಿಸಲ್ಪಟ್ಟ ‘ಕರ್ನಾಟಕ ಕೈಪಿಡಿ’ ಗ್ರಂಥದ ಇತಿಹಾಸ ಭಾಗವನ್ನು ಬರೆದ ಕೀರ್ತಿ ಶರ್ಮರದಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ರಾಜಮ್ಮನವರ ಸಂಗೀತ ಕಚೇರಿಯನ್ನು ಗಾಂಧೀಜಿಯವರ ಅಪೇಕ್ಷೆಯಂತೆ ಏರ್ಪಡಿಸಲಾಗಿತ್ತು. ಇದರಿಂದಾಗಿ ಶರ್ಮದಂಪತಿಗಳಿಗೆ ಗಾಂಧೀಜಿಯವರ ನಿಕಟ ಸಂಪರ್ಕ ಮತ್ತಷ್ಟು ಲಭಿಸಿತು.

ಪತ್ರಿಕೋದ್ಯಮದಲ್ಲಿ

ಬದಲಾಯಿಸಿ

ತುಮಕೂರಿನ ವಕೀಲ ಕೆ. ರಂಗಯ್ಯಂಗಾರ್ ನಡೆಸುತ್ತಿದ್ದ ‘ಮೈಸೂರು ಕ್ರಾನಿಕಲ್’ ವಾರಪತ್ರಿಕೆಗೆ ಈಗಾಗಲೇ ಲೇಖನ ಬರೆಯುತ್ತಿದ್ದ ಶರ್ಮರು ೧೯೨೫ ಆಗಸ್ಟ್ ೨ರಂದು ಆ ಪತ್ರಿಕೆಯ ಜವಾಬ್ಧಾರಿಯನ್ನೂ ಹೊತ್ತರು. ತತ್ಪರಿಣಾಮವಾಗಿ ಕೆಲವೇ ವಾರಗಳಲ್ಲಿ ಅದು ‘ವಿಶ್ವ ಕರ್ನಾಟಕ’ವಾಗಿ ಪ್ರಕಟವಾಗಲಾರಂಭಿಸಿತು. ಗಾಂಧೀ ತತ್ವದ ಪ್ರಚಾರ, ದೇಶದ ಸ್ವಾತಂತ್ರ್ಯ, ಕರ್ನಾಟಕದ ಏಕೀಕರಣ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಭ್ಯುದಯವನ್ನೇ ಕಾರ್ಯೋದ್ದೇಶವನ್ನಾಗಿಸಿಕೊಂಡು ಆರಂಭಗೊಂಡ ಶರ್ಮರ ‘ವಿಶ್ವಕರ್ನಾಟಕ’ ವಾರಪತ್ರಿಕೆ ತನ್ನ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ‘ವಾರ್ (WAR) ಪತ್ರಿಕೆ’ ಆಗಿತ್ತೆಂದು ಶರ್ಮರು ದಾಖಲಿಸಿದ್ದಾರೆ. ಶರ್ಮರ ಆಗಮನದಿಂದ ಕರ್ನಾಟಕದ ಪತ್ರಿಕೋದ್ಯಮ ರಂಗದಲ್ಲಿ ಹೊಸ ಆಯಾಮವೇ ಸೃಷ್ಠಿಯಾಯಿತು. ಈ ಪತ್ರಿಕೆ ನಾಡಿನುದ್ದಗಲಕ್ಕೂ ಜನಮೆಚ್ಚುಗೆ ಗಳಿಸಿತು. ಬಿ.ಎಂ.ಶ್ರೀ, ಕುವೆಂಪು, ಹೊಸಕೊಪ್ಪ ಕೃಷ್ಣರಾಯರಂತಹವರ ಬೆಂಬಲವೂ ಇತ್ತು. ಶರ್ಮರು ‘ಪತ್ರಿಕಾ ಭೀಷ್ಮ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕಣಿಯರ ಚಳುವಳಿ, ಬಿನ್ನಿಮಿಲ್ ಗಲಭೆ, ಸುಲ್ತಾನ ಪೇಟೆ ಗಣಪತಿ ಗಲಭೆ ಮುಂತಾದ ಸಂದರ್ಭಗಳಲ್ಲಿ ನೀಡಿದ ನಿಷ್ಪಕ್ಷಪಾತ ವರಧಿ, ಪತ್ರಿಕಾ ಕರಾಳ ಶಾಸನಕ್ಕೆ ವಿರೋಧ, ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹಗಳ ಸಂದರ್ಭಗಳಲ್ಲಿ ಪ್ರಕಟವಾದ ಲೇಖನಗಳಿಂದ ಪತ್ರಿಕೆ ಸಾಕಷ್ಟು ಪ್ರಚಾರ ಪಡೆಯಿತು. ಹಲವಾರು ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ನಿಷೇದಿಸಲ್ಪಟ್ಟಿತ್ತು. ೧೯೩೧ರಲ್ಲಿ ಯುಗಾದಿ ಸಂಚಿಕೆಯನ್ನು ಹೊರತಂದು ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಚಳುವಳಿಗಳ ಸಂದರ್ಭದಲ್ಲಿ ಶರ್ಮರ ಮನೆ ಹೆಚ್ಚೂ ಕಡಿಮೆ ಕಾಂಗ್ರೆಸ್ ಕಚೇರಿಯೇ ಆಗಿತ್ತು.

ಶರ್ಮರ ನಿರಂತರ ಪರಿಶ್ರಮ, ಸತತ ಹೋರಾಟಗಳಿಂದ ‘ವಿಶ್ವಕರ್ನಾಟಕ’ ಪತ್ರಿಕೆಯು ೧೯೩೪ರ ವರ್ಷದಲ್ಲಿ ದಿನಪತ್ರಿಕೆಯಾಗಿ ಪ್ರಕಟಗೊಳ್ಳುವುದ ಮೂಲಕ ದೇಶದ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಪಾತ್ರವಹಿಸಲು ಸಾಧ್ಯವಾಯಿತು. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನಿರ್ಭೀತ ವರದಿಗಳು ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದು ಅಧಿಕಾರಿಗಳ ಬೆದರಿಗೆ ಆಮಿಷಗಳಿಗೆ ತಲೆಬಾಗದ ಶರ್ಮರ ಧೀಮಂತ ವ್ಯಕ್ತಿತ್ವ ಅಸಾಧಾರಣವಾಗಿತ್ತು. ಹಲವು ಬಾರಿ ಪತ್ರಿಕೆ ‘ಕರಿಪೆಟ್ಟಿಗೆ’ ಸೇರಿ ನಿಷೇದಿಸಲ್ಪಟ್ಟಿತ್ತು. ಶರ್ಮರು ೧೯೩೫ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಸುವರ್ಣ ಮಹೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ಹೊರತಂದರು. ೧೯೩೬ರಲ್ಲಿ ಆರಂಭಿಸಿದ ‘ಬಡಬೋರೆಗೌಡ’ ಅಂಕಣವು ನಿರೀಕ್ಷೆಗೂ ಮೀರಿ ಜನಾದರವನ್ನು ಗಳಿಸಿತು. ೧೯೩೮-೩೯ರಲ್ಲಿ ಪತ್ರಿಕೆಯು ವಿದುರಾಶ್ವತ್ಥ ಘಟನೆ, ಗೋಲಿಬಾರುಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿದ ವಿವರವಾದ ವರದಿಯು ಅಂದಿನ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಸಂಸ್ಥಾನದ ಸರ್ಕಾರದೊಂದಿಗೆ ಜವಾಬ್ಧಾರಿ ಸರ್ಕಾರಕ್ಕಾಗಿ ಒತ್ತಾಯ ಹೇರುವುದರ ಮೂಲಕ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ ಈ ಪತ್ರಿಕೆಗೆ ೧೯೩೪-೧೯೩೭ರ ಅವಧಿಯಲ್ಲಿ ಸರ್ಕಾರ ಮೂರು ಬಾರಿ ಎಚ್ಚರಿಕೆ ನೋಟೀಸ್ ನೀಡಿತು. ೧೯೩೭ರಿಂದ ಸರ್ಕಾರ ಜಾಹಿರಾತು ನೀಡುವುದನ್ನು ನಿಲ್ಲಿಸಿತು. ಅನಾರೋಗ್ಯದಿಂದ ಶರ್ಮರು ಹಾಸಿಗೆ ಹಿಡಿದಾಗ ಸಿದ್ಧನಹಳ್ಳಿ ಕೃಷ್ಣಶರ್ಮರು ಪತ್ರಿಕೆಯ ಹೊಣೆ ಹೊತ್ತರು. ಕ್ವಿಟ್ ಇಂಡಿಯಾ ಚಳುವಳಿಗೆ ಪತ್ರಿಕೆಯು ಪೂರ್ಣ ಬೆಂಬಲ ನೀಡಿತು. ‘ಸಿಡಿಲಮರಿ’ ಪತ್ರವನ್ನು ಪ್ರಕಟಿಸಿದ್ದಕ್ಕೆ ಪತ್ರಿಕೆಯನ್ನು ಮೂರು ತಿಂಗಳು ನಿರ್ಬಂಧಿಸಲಾಯಿತು. ೧೯೪೬ರಲ್ಲಿ ದಿವಾನ್ ಮಾಧವರಾಯರನ್ನು ಉದ್ದೇಶಿಸಿ ಬರೆದಿದ್ದ ‘ಮಾಡಿದ್ದುಣ್ಣೋ ಮಾರಾಯ’ ಲೇಖನಕ್ಕಾಗಿ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡು ಎರಡು ತಿಂಗಳು ಪತ್ರಿಕೆಯನ್ನು ನಿರ್ಬಂಧಿಸಲಾಯಿತು. ಮುಂದೆ ಪತ್ರಿಕೆ ಶಾಶ್ವತವಾಗಿ ಶರ್ಮರ ಕೈಯಿಂದ ಜಾರಿಹೋಯಿತು. ಮುಂದೆ ಸಂಸ್ಥಾನದಲ್ಲಿ ಜರುಗಿದ “ಮೈಸೂರು ಚಲೋ” ಚಳುವಳಿಯಲ್ಲಿ ಭಾಗವಹಿಸಿದ ಶರ್ಮರು ಬಂಧಿಸಲ್ಪಟ್ಟು ಸೆರೆಮನೆ ಸೇರಿದರು.

ಸುಮಾರು ಎರಡು ದಶಕಗಳ ಮೇಲೊಂದು ವರ್ಷದಷ್ಟು ಅವಧಿ ಜನಮನವನ್ನು ಸೂರೆಗೊಂಡ “ವಿಶ್ವಕರ್ನಾಟಕ’ ಪತ್ರಿಕೆಯಲ್ಲಿ ಶರ್ಮರು ಪ್ರಕಟಿಸಿದ ಸತ್ಯನಿಷ್ಠ ವರದಿಗಳು, ವಿದ್ವತ್ಪೂರ್ಣ ಬರಹಗಳು ಸಾವಿರಾರು. ‘ವಿಶ್ವಕರ್ನಾಟಕ’ ೧೯೪೬ರಲ್ಲಿ ಶರ್ಮರ ಹಿಡಿತದಿಂದ ದೂರವಾದ ಮೇಲೂ ಅವರು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ನಾಡಿನ ರಾಜಕಾರಣ, ಸಂಸ್ಕೃತಿ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಲೇಖನ ಬರೆದರು.

ನಗರಸಭಾ ಸದಸ್ಯರಾಗಿ

ಬದಲಾಯಿಸಿ

೧೯೪೪-೪೫ ಅವಧಿಯಲ್ಲಿ ಬೆಂಗಳೂರು ನಗರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಗರದ ನೈರ್ಮಲ್ಯತೆ ಮತ್ತು ದೇವಲಾಯದ ರಕ್ಷಣೆಗೆ ವಿಶೇಷ ಗಮನ ನೀಡುವಂತೆ ಒತ್ತಾಯಿಸಿದ್ದ ಅವರು ಸಾರ್ವಜನಿಕ ಸೇವೆಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದರು.

ಸಾಹಿತ್ಯ ಸಮ್ಮೇಳನ ಮತ್ತು ಸಾಹಿತ್ಯ ಪರಿಷತ್ತಿನಲ್ಲಿ

ಬದಲಾಯಿಸಿ

ಶರ್ಮ ಅವರು ಜೈಲಿನಿದ್ದಾಗಲೇ ಅವರನ್ನು ಕಾಸರಗೋಡಿನ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಪೀಠದಿಂದ ‘ಕನ್ನಡಕ್ಕೆ ಕನ್ನಡದ ಮೂಲಕವೇ ಮೋಕ್ಷ’ ಎಂದು ಘೋಷಿಸಿದ್ದರು. ಇವರು ೧೯೪೭-೪೯ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಪರಿಷತ್ತಿನ ಗ್ರಂಥಭಂಡಾರ ಹಾಗೂ ಅಚ್ಚುಕೂಟಗಳು ಇವರ ಕಾಲದಲ್ಲಿ ಸುವ್ಯವಸ್ಥಿತಗೊಂಡವು. ಶಾಸನ ಅಧ್ಯಯನಕ್ಕೆ ಸುಭದ್ರ ತಳಪಾಯ ಹಾಕಿದರು. ರಾಷ್ಟ್ರೋತ್ಥಾನ ಪರಿಷತ್ತಿನಲ್ಲೂ ಸಂಶೋಧನ ವಿಭಾಗವನ್ನು ಆರಂಭಿಸಿದರು. ಗಾಂಧೀ ಸಾಹಿತ್ಯ ಸಂಘ, ಲೋಕಮಾನ್ಯ ಸಂಘ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗಳೊಂದಿಗೆ ಅವರು ನಿಕಟ ಸಂಪರ್ಕವನ್ನು ಹೊಂದಿದ್ದರು.

ಏಕೀಕರಣ

ಬದಲಾಯಿಸಿ

ಕರ್ನಾಟಕ ಏಕೀಕರಣ ಸಲಹಾ ಸಮಿತಿಯ ಅಧ್ಯಕ್ಷರ ಅಪೇಕ್ಷೆಯಂತೆ ನಾಡಿನೆಲ್ಲೆಡೆ ಸಂಚರಿಸಿ ನಾಡಿನ ಪ್ರಧಾನ ಪತ್ರಿಕೆಗಳಿಗೆ ಬರೆದು ಜನಜಾಗೃತಿಯನ್ನುಂಟುಮಾಡಿದರು. ಕನ್ನಡ ಬೆರಳಚ್ಚು ಯಂತ್ರದ ವಿನ್ಯಾಸವನ್ನು ರೂಪಿಸಲು ನೆರವಾದರು. ೧೯೬೦ರ ವರ್ಷದಲ್ಲಿ ಸರ್ ಎಂ. ವಿ. ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಸರ್ ಎಂ ವಿ ಅವರ 1000ಕ್ಕೂ ಹೆಚ್ಚೂ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿ ತಮ್ಮ ಗೌರವವನ್ನು ಸಲ್ಲಿಸಿದರು. ೧೯೬೯-೭೩ರ ಅವಧಿಯಲ್ಲಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿದ್ದರು.

ಬರಹಗಳು

ಬದಲಾಯಿಸಿ

ಪತ್ರಿಕಾರಂಗದ ಭೀಷ್ಮರಾಗಿದ್ದ ಶರ್ಮ ಅವರ ಬರಹದಲ್ಲಿಯ ವಿಷಯ ವೈವಿಧ್ಯತೆ ವಿಶಿಷ್ಟವಾಗಿದೆ. ಶಾಸನ, ಸಾಹಿತ್ಯ, ವಿಮರ್ಶೆ, ಇತಿಹಾಸ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ಹಸ್ತಪ್ರತಿ ಸಂಪಾದನೆ, ನೀಳ್ಗತೆ ಹೀಗೆ ವಿವಿಧ ಪ್ರಕಾರಗಳಿಗೆ ಸೇರಿದ ಸುಮಾರು ನಲ್ವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ‘ವಿಕ್ರಾಂತ ಭಾರತ’, ‘ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ’, ‘ವಿಚಾರ ಕರ್ನಾಟಕ’ ಕೃತಿಗಳ ಮೂಲಕ ಶರ್ಮರ ದೇಶಾಭಿಮಾನದ ಸುದೀರ್ಘ ಅರಿವು ಮೂಡುತ್ತದೆ.

ಇತಿಹಾಸ ಸಂಶೋಧನೆಯಲ್ಲಿ ‘ಜಗನ್ಮೋಹನ ಬಂಗಲೆಯಿಂದ ವಿದುರಾಶ್ವತ್ಥದವರೆಗೆ’, ‘ಚಾರಿತ್ರಿಕ ದಾಖಲೆಗಳು’, ‘ಇತಿಹಾಸದ ಸಂದರ್ಭಗಳು’, ಹಾಗೂ ‘ಮೈಸೂರು ಇತಿಹಾಸದ ಹಳೆಯ ಘಟಕಗಳು’ ಗ್ರಂಥಗಳು ಪ್ರತಿಬಿಂಬಿಸುತ್ತವೆ. ಶರ್ಮರ ಶಾಸನ ವ್ಯಾಸಂಗವನ್ನು ಅವರ ‘ಶಿಲಾಶಾಸನಗಳಲ್ಲಿ ಕಂಡು ಬರುವ ಕನ್ನಡ ಕವಿಗಳು’, ‘ವಿಚಾರ ಕರ್ನಾಟಕ’ ಹಾಗೂ ‘ನಮ್ಮ ಜನ ನಡೆಸಿದ ಜೀವನ’ ಕೃತಿಗಳು ಮಾರ್ದನಿಸುತ್ತವೆ.

ಶರ್ಮರ ಸಾಹಿತ್ಯಜ್ಞಾನವನ್ನು ‘ಕನ್ನಡ ಗದ್ಯದ ಕಥೆ’, ‘ಪ್ರಗತಿಶೀಲ ಸಾಹಿತ್ಯ’, ಪ್ರೆಮಫಲ’, ‘ಹೂಬುಟ್ಟಿ’ ಮುಂತಾದ ಸಂಕಲನಗಳು ನಿರೂಪಿಸಿದರೆ, ಅವರಲ್ಲಿದ್ದ ವಿಮರ್ಶನ ಸಾಮರ್ಥ್ಯವನ್ನು ಅವರ ‘ಮಾಸ್ತಿಯವರ ಮನೋಧರ್ಮ’ ಕೃತಿ ಚೆನ್ನಾಗಿ ನಿರೂಪಿಸುತ್ತದೆ. ‘ಶ್ರೀಕೃಷ್ಣ’, ‘ಅಶೋಕ ಚಕ್ರವರ್ತಿ’, ‘ಅಕ್ಬರ್’ ಮುಂತಾದ ಪೌರಾಣಿಕ – ಚಾರಿತ್ರಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನಷ್ಟೇ ಅಲ್ಲದೆ ‘ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ’ ಬಾಲ ಗಂಗಾಧರ ತಿಲಕ್’, ‘ಸರ್ದಾರ್ ವಲ್ಲಭಬಾಯಿ ಪಟೇಲ್’, ‘ಸುಭಾಷ್ ಚಂದ್ರಭೋಸ್’, ‘ಲಾಲಾ ಲಜಪತರಾಯ್’’, ‘ಇಂದಿರಾಗಾಂಧಿ’ ಮುಂತಾದ ರಾಷ್ಟ್ರನಾಯಕರ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ.

ಹಸ್ತಪ್ರತಿ ಸಂಪಾದನೆಯಲ್ಲಿ ವಿಶೇಷ ಆಸ್ಥೆ ಹೊಂದಿದ್ದ ಶರ್ಮರು ‘ರಾಮರಾಯನ ಬಖೈರು’, ‘ಹೈದರ್ ನಾಮೆ’, ‘ಕಂಠೀರವ ನರಸಿಂಹರಾಜ ವಿಜಯಿ’, ‘ಸಿರಿಭೂವಲಯ’ ಮುಂತಾದ ಹಸ್ತಪ್ರತಿಗಳ ಸಂಪಾದನೆಗೆ ಮುಂದಾದರು. ಉತ್ತಮ ಭಾಷಾಂತರಕಾರರೂ ಆಗಿದ್ದ ಶರ್ಮರು ಮೆನನ್ ಹಾಗೂ ನೆಹರೂರವರ ಆಂಗ್ಲಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಉತ್ತಮ ವಾಗ್ಮಿಗಳಾಗಿದ್ದ ಶರ್ಮರು ಅನೇಕ ಭಾಷಣಗಳನ್ನು ಕೃತಿಗಳಾಗಿಸಿದ್ದು ‘ಪೀಟರ್ ಜಂಗ್’ ಅಂತಹ ಒಂದು ಉದಾಹರಣೆಯಾಗಿದೆ. ಶ್ರೇಷ್ಠ ಭಾಷಣ ತರ್ಜುಮೆದಾರರೂ ಆಗಿದ್ದ ಶರ್ಮರು ಗಾಂಧೀಜಿ, ನೆಹರೂ, ರಾಜಾಜಿ, ಸರೋಜಿನಿ ನಾಯ್ಡು ಮುಂತಾದ ರಾಷ್ಟ್ರನಾಯಕರ ತರ್ಜುಮೆ ಭಾಷಣಕಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹೀಗೆ ಬಾಳಿನುದ್ದಕ್ಕೂ ನಾಡು ನುಡಿಗಾಗಿ ಅರ್ಪಣಾ ಮನೋಭಾವದಿಂದ ದುಡಿದ ಶರ್ಮರಿಗೆ ಆತ್ಮೀಯ ಮಿತ್ರ ಸಿದ್ಧನಹಳ್ಳಿ ಕೃಷ್ಣ ಶರ್ಮರ ಅಗಲಿಕೆಯ ಆಘಾತವನ್ನು ಎದುರಿಸುವುದು ದುಸ್ಸಾಧ್ಯವೆನಿಸಿತು. ದಿವಂಗತ ಕೃಷ್ಣಶರ್ಮರಿಗೆ ಗಾಂಧೀ ಸಾಹಿತ್ಯ ಸಂಘದವರು ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾರನೆಯ ದಿನ ಭಾಗವಹಿಸಬೇಕಿದ್ದ ಶರ್ಮರು ಅಕ್ಟೋಬರ್ ೨೦. ೧೯೭೩ರಂದು ರಾತ್ರಿ ತಮ್ಮ ಪ್ರೀತಿಯ ಮಡದಿ ತಿರುಮಲೆ ರಾಜಮ್ಮ (ಭಾರತಿ) ಇಬ್ಬರು ಪುತ್ರರು ಮತ್ತು ಬಂಧುವರ್ಗದವರನ್ನು ಅಗಲಿ ಇಹಲೋಕವನ್ನು ತ್ಯಜಿಸಿ ಪರಲೋಕದಲ್ಲಿದ್ದ ಗೆಳೆಯ ಕೃಷ್ಣಶರ್ಮರಲ್ಲಿ ಒಂದಾಗಿ ಪ್ರಕೃತಿಯಲ್ಲಿ ಬೆರೆತು ಹೋದರು.[][]

ಶರ್ಮರ ಸಾಹಿತ್ಯ

ಬದಲಾಯಿಸಿ
  • ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ
  • ಹೈದರನಾಮೆ
  • ವಿಚಾರ ಕರ್ನಾಟಕ
  • ವಿಕ್ರಾಂತ ಭಾರತ
  • ಜೂಲಿಯಸ್ ಸೀಜರ
  • ಇಂದಿರಾ ಗಾಂಧಿ
  • ಮೋಕ್ಷಗುಂಡಂ ವಿಶ್ವೇಶ್ವರಯ್ಯ
  • ಕರ್ಮಫಲ
  • ರಾಮರಾಯನ ಬಖೈರು.

ಉಲ್ಲೇಖಗಳು

ಬದಲಾಯಿಸಿ
  1. ಶಿ. ರಾಜೇಂದ್ರಪ್ಪ ಅವರು ‘ಸಾಲುದೀಪಗಳು’ ಕೃತಿಯಲ್ಲಿ ತಿರುಮಲೆ ತಾತಾಚಾರ್ಯರ ಕುರಿತು ಬರೆದ ಲೇಖನ.
  2. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೭;ಅಧ್ಯಕ್ಷರು : ತಿರುಮಲೆ ತಾತಾಚಾರ್ಯ ಶರ್ಮ (೧೯೪೭– ೧೯೪೯);ಜೀವನ

ಉಲ್ಲೇಖ

ಬದಲಾಯಿಸಿ