ಎಡಿತ್ ಜಾಯ್ ಸ್ಕೋವೆಲ್


ಎಡಿತ್ ಜಾಯ್ ಸ್ಕೋವೆಲ್ ಬ್ರಿಟನ್ ದೇಶದ ಕವಯಿತ್ರಿ.ಈಕೆ ೧೯೦೭ರಲ್ಲಿ ಸೌತ್ ಯಾರ್ಕ್ಶೈರಿನ ಶೆಫೀಲ್ಡ್ ನಲ್ಲಿ ಜನಿಸಿದರು. ಜಾಯ್ ಎಂದೂ ಕರೆಯಲ್ಪಡುತ್ತಿದ್ದ ಇ.ಜೆ.ಸ್ಕೋವೆಲ್ ಎಂಟು ಜನ ಮಕ್ಕಳಲ್ಲಿ ಒಬ್ಬರಾಗಿದ್ದರು. ಇವರ ತಂದೆ ಎಫ್. ಜಿ. ಸ್ಕೋವೆಲ್ ಅವರು ಶೆಫೀಲ್ಡ್ ಸಮೀಪದ ಅಂಗ್ಲಿಕನ್ ಚರ್ಚಿನಲ್ಲಿ ಪ್ಯಾರಿಷ್ ಪ್ರೀಸ್ಟ್ ಆಗಿದ್ದರೂ ಇ.ಜೆ.ಸ್ಕೋವೆಲ್ ರವರಲ್ಲಿ ಧಾರ್ಮಿಕ ಭಾವನೆಗಳು ಇರಲಿಲ್ಲ. ತಮ್ಮ ಬಾಲ್ಯದಲ್ಲೇ ಧರ್ಮದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾಗಿ ಈಕೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇವರು ತಮ್ಮ ಕವನಗಳಲ್ಲೂ ಧರ್ಮವನ್ನು ಪ್ರಶ್ನಿಸಿದ್ದಾರೆ.

ಶೆಫೀಲ್ಡ್ ನಗರದ ಟೌನ್ ಹಾಲ್ (ಸಭಾಂಗಣ)


ವಿದ್ಯಾಭ್ಯಾಸ

ಬದಲಾಯಿಸಿ
 
ಸೋಮರ್ವಿಲ್ ಕಾಲೇಜು ಗ್ರಂಥಾಲಯ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ

ಇವರು ಮೊದಲಿಗೆ ತಮ್ಮ ಮನೆಯಲ್ಲಿಯೇ ಕಲಿತು ನಂತರ ಕ್ಯಾಸ್ಟರ್ಸ್ಟನ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದರು. ಮುಂದೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸೋಮರ್ವಿಲ್ ಕಾಲೀಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ವಿದ್ಯಾರ್ಥಿನಿಯಾಗಿ ಇವರು ಕಾಲೇಜಿನ ಪತ್ರಿಕೆಗಳನ್ನು ಸಂಪಾದಿಸುವುದಲ್ಲದೇ ತಮ್ಮ ಸ್ವರಚಿತ ಕವನಗಳನ್ನೂ ಪ್ರಕಟಿಸುತ್ತಿದ್ದರು. ಸ್ಕೋವೆಲ್ ೧೯೩೦ರಲ್ಲಿ ಆಂಗ್ಲ ಭಾಷಾ ಸಾಹಿತ್ಯದ ವಿಷಯದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಲಂಡನ್ನಿನಲ್ಲಿ ಹಲವು ಕಾರ್ಯದರ್ಶಿತ್ವದ ಕೆಲಸಗಳನ್ನು ಮಾಡುತ್ತಾ ಆಗಾಗ "ಟೈಮ್ ಅಂಡ್ ಟೈಡ್" ಎಂಬ ಪತ್ರಿಕೆಗೆ ಪುಸ್ತಕ ವಿಮರ್ಶೆಗಳನ್ನು ಬರೆಯುತ್ತಿದ್ದರು.

ವೈವಾಹಿಕ ಜೀವನ

ಬದಲಾಯಿಸಿ

ಇ. ಜೆ. ಸ್ಕೋವೆಲ್ ೧೯೩೭ರಲ್ಲಿ ಖ್ಯಾತ ಪರಿಸರವಿಜ್ಙಾನಿ ಚಾರ್ಲ್ಸ್ ಎಲ್ಟನ್ ರನ್ನು ವಿವಾಹವಾದರು. ಈ ವಿವಾಹದ ಕುರುಹಾಗಿ ೧೯೪೦ರಲ್ಲಿ ಕ್ಯಾಥರೀನ್ ಎಂಬ ಮಗಳನ್ನೂ ೧೯೪೩ರಲ್ಲಿ ರಾಬರ್ಟ್ ಎಂಬ ಮಗನನ್ನೂ ಪಡೆದರು. ಸ್ಕೋವೆಲ್ ಸಂದರ್ಶನವೊಂದರಲ್ಲಿ ತಮ್ಮ ಪತಿಯಿಂದ ಹಲವು ವಿಷಯಗಳನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಕೋವೆಲ್ ಅವರು ಡಬ್ಲ್ಯು. ಎಚ್. ಆಡನ್ ರ ಸಮಕಾಲೀನರಾಗಿದ್ದರು. ೨೦ನೇ ಶತಮಾನದ ಕವಿಗಳಲ್ಲಿ ಈಕೆಯ ಬರವಣಿಗೆಗಳು ಶಾರ್ಲೆಟ್ ಮ್ಯೂ, ಎಲಿನೊರ್ ವಯ್ಲಿ ಮತ್ತು ಲೂಯಿಸ್ ಬಾಗನ್ ಇವರುಗಳನ್ನು ಹೋಲುತ್ತದೆ.

ತಮ್ಮ ಜೀವನದ ಮೂರನೇ ದಶಕದಲ್ಲಿ ಸ್ಕೋವೆಲ್ ಬರವಣಿಗೆಯನ್ನು ಮುಂದುವರೆಸಿದರೂ ಆಕೆ ವಿರಳವಾಗಿ ಪ್ರಕಟಿಸುತ್ತಿದ್ದರು. ಅವರ ಕವನಗಳ ಧಾಟಿ ಹಾಗೂ ಬರವಣಿಗೆಯ ಶೈಲಿ ಅಪೂರ್ವವಾಗಿತ್ತಾದರೂ ಪ್ರಚಲಿತ ಶೈಲಿಗಿಂತ ಭಿನ್ನವಾಗಿದ್ದಿತು.

ಪ್ರಶಂಸೆ

ಬದಲಾಯಿಸಿ

ಸ್ಕೋವೆಲ್ ರವರು ೧೯೩೦ರ ದಶಕದ ಕವಯಿತ್ರಿಯಾಗಿ ಜನಪ್ರಿಯರಾದದ್ದು, ಮಾನವಶಾಸ್ತ್ರಜ್ಞ ಜಿಯೋಫ್ರೀ ಗ್ರಿಗ್ಸನ್ ೧೯೪೯ರಲ್ಲಿ ತಮ್ಮ ಪುಸ್ತಕ "ಪೋಯೆಟ್ರಿ ಆಫ್ ದಿ ಪ್ರೆಸೆಂಟ್: ಆನ್ ಆಂಥಾಲಜಿ ಆಫ್ ದಿ ಥರ್ಟೀಸ್ ಅಂಡ್ ಆಫ್ಟರ್" ನಲ್ಲಿ ಸ್ಕೋವೆಲ್ ಅವರ ಎಂಟು ಕವನಗಳನ್ನು ಸೇರಿಸಿದಾಗ. ಗ್ರಿಗ್ಸನ್ ಅವರು ಸ್ಕೋವೆಲ್ ರವರ ಅವಲೋಕನಾ ಕೌಶಲ್ಯವನ್ನು ಮೆಚ್ಚಿಕೊಂಡು ಅವರನ್ನು "ನಮ್ಮ ಕಾಲದ ಪರಿಶುದ್ಧ ಕವಯಿತ್ರಿಗಳಲ್ಲಿ ಒಬ್ಬರು" ಎಂದು ಹೊಗಳಿದ್ದಾರೆ. ದುರದೃಷ್ಟವಶಾತ್ ಈ ಹೊಗಳಿಕೆಗಳಾವುವೂ ಸ್ಕೋವೆಲ್ ಅವರ ಜನಪ್ರಿಯತೆಯನ್ನು ಹೆಚ್ಚಿಸಲಿಲ್ಲ.

ಸ್ಕೋವೆಲ್ ಅವರ ಚೊಚ್ಚಲ ಕವನಸಂಕಲನ "ಶ್ಯಾಡೋ ಆಫ್ ಕ್ರೈಸಾಂತಮಮ್ಸ್" ೧೯೪೪ರಲ್ಲಿ ಪ್ರಕಟವಾಯಿತು. ಸ್ಕೋವೆಲ್ ಅವರ ೩೭ನೇ ವಯಸ್ಸಿನಲ್ಲಿ ಪ್ರಕಾಶಿತವಾದ ಈ ಕವನಸಂಕಲನದ ವಿಷಯವು ಯುದ್ಧಕಾಲದ ಸಂಯಮವಾಗಿದ್ದಿತು. ನಂತರ ೧೯೪೬ರಲ್ಲಿ "ಮಿಡ್ ಸಮ್ಮರ್ ಮೆಡೋಸ್" ಪ್ರಕಾಶನವಾಯಿತು. ಅವರ ಮೂರನೆಯ ಕವನಸಂಕಲನ "ದಿ ರಿವರ್ ಸ್ಟೀಮರ್" ಹೊರಬರುವಷ್ಟರಲ್ಲಿ ಒಂದು ದಶಕವೇ ಸರಿದಿತ್ತು. ಆದರೆ, ಅವರ ನಾಲ್ಕನೇ ಕವನಸಂಕಲನ "ದಿ ಸ್ಪೇಸ್ ಬಿಟ್ವೀನ್" ಪ್ರಕಾಶನವಾಗಿದ್ದು ಎರಡೂವರೆ ದಶಕಕ್ಕೂ ಹೆಚ್ಚು ಕಾಲದ ನಂತರ. ಈ ಕಾಲದಲ್ಲಿ ಇವರ ಕವನಗಳು ಇತರ ಸಂಕಲನಗಳಲ್ಲಿ ಕಂಡುಬರುತ್ತಿದ್ದವು. ತಮ್ಮ ವಿರಾಮದ ವರ್ಷಗಳಲ್ಲಿ ಸ್ಕೋವೆಲ್ ಅವರು ತಮ್ಮ ಮಕ್ಕಳನ್ನು ಬೆಳೆಸುತ್ತಾ ಆಗಾಗ ತಮ್ಮ ಪತಿಯೊಂದಿಗೆ ಪ್ರಯಾಣಗಳನ್ನು ಕೈಗೊಂಡರು. ಜೊತೆಜೊತೆಗೆ, ತಾವು ಬರೆದ ಕವನಗಳನ್ನು ಆಪ್ತರೊಡನೆ ಹಂಚಿಕೊಳ್ಳುತ್ತಿದ್ದರು.ಆದರೆ, ಅವರ ಬರವಣಿಗೆಗಳಲ್ಲಿ ಆತ್ಮವಿಶ್ವಾಸ ಕುಂದಿದ್ದು ಮತ್ತು ಬರವಣಿಗೆ ವಿರಳವಾಗಿದ್ದು ಸತ್ಯ ಎಂದು ಹಲವು ವಿಮರ್ಶಕರ ಅಭಿಪ್ರಾಯ.

ತಮ್ಮ ವಿರಾಮದ ಈ ಅವಧಿಯಲ್ಲಿ ಸ್ಕೋವೆಲ್ ಅವರು ಸ್ವಂತ ಕವನಗಳನ್ನು ಕಡಿಮೆ ಬರೆದರಾದರೂ ಇಟಾಲಿಯನ್ ಕವಿ ಜಿಯೊವಾನಿ ಪ್ಯಾಸ್ಕೋಲಿ ಅವರ ಹಲವಾರು ಕವನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದರು. ಈ ಅನುವಾದಗಳು ಮೂಲಕ್ಕೆ ಧಕ್ಕೆ ಬಾರದಂತೆ ಇದ್ದುದರ ಜೊತೆಗೆ ಸೊಗಸಾದ ಆಂಗ್ಲ ಪದ್ಯಗಳೂ ಆಗಿದ್ದವು. ಇವರು ನಿಸ್ವಾರ್ಥ ಅನುವಾದಕಿಯಾಗಿಯಾಗಿ ಕಂಡುಬರುತ್ತಾರೆ. ಮಧ್ಯವರ್ತಿಯಾಗಿ ತಮ್ಮ ಮೇಲೆ ಗಮನ ಸೆಳೆದುಕೊಳ್ಳಲು ಪ್ರಯತ್ನಿಸದೇ ಜಿಯೊವಾನಿಯವರ ಜಗತ್ತನ್ನು ಓದುಗರಿಗೆ ಸಮರ್ಥವಾಗಿ ಪರಿಚಯಿಸಿದರು. ಜಿಯೊವಾನಿಯವರ ಶೈಲಿ ಹಲವು ರೀತಿಗಳಲ್ಲಿ ಸ್ಕೋವೆಲ್ ಅವರ ಶೈಲಿಗೆ ಹತ್ತಿರವಾಗಿದ್ದಿತು. ಈ ಕಾರಣದಿಂದಾಗಿ ಸ್ಕೋವೆಲ್ ಅವರು ಜಿಯೊವಾನಿಯವರ ಕವನದ ಶೈಲಿ, ಪ್ರಾಸಗಳನ್ನು ಆಂಗ್ಲ ಭಾಷೆಗೆ ಒಗ್ಗಿಸಲು ಹೆಚ್ಚು ಶ್ರಮದ ಅವಶ್ಯಕತೆಯಿರಲಿಲ್ಲ. ಈ ಅನುವಾದಗಳು ೧೯೮೨ರಲ್ಲಿ ಪ್ರಕಟವಾದ "ದಿ ಸ್ಪೇಸ್ ಬಿಟ್ವೀನ್" ಎಂಬ ಕವನ ಸಂಕಲನದಲ್ಲಿ ಕಂಡುಬಂದಿತು.

ಸ್ಕೋವೆಲ್ ಅವರ ಕವನಗಳು ಮುದ್ರಣದ ಕಡೆಯ ದಿನಗಳಲ್ಲಿ ಸ್ವಲ್ಪ ಮಟ್ಟದ ಜನಪ್ರಿಯತೆ ಗಳಿಸಿಕೊಂಡವು. ೧೯೮೬ರಲ್ಲಿ ಜಾನ್ ಮೋಲ್ ಮತ್ತು ಪೀಟರ್ ಸ್ಕುಪ್ಹಾಮ್ ಪ್ರಕಟಿಸಿದ ಕರಪತ್ರ "ಲಿಸನಿಂಗ್ ಟು ಕಾಲರ್ಡ್ ಡವ್ಸ್" ನಲ್ಲಿ ಸ್ಕೋವೆಲ್ ಅವರ ಕವನಗಳು ಕಂಡುಬಂದವು. ಇದರ ನಂತರ ಅವರನ್ನು "ದೇಶದ ನಿರ್ಲಕ್ಷಿಸಲ್ಪಟ್ಟ ಅತ್ಯುತ್ತಮ ಕವಿ" ಎಂದು ಪೋಯೆಟ್ರಿ ರಿವ್ಯೂ ಕರೆಯಿತು. ಸ್ಕೋವೆಲ್ ಅವರು ೧೯೮೮ರಲ್ಲಿ ಕಾರ್ಕಾನೆಟ್ ಪಬ್ಲಿಕೇಷನ್ ಪ್ರಕಾಶನ ಸಂಸ್ಥೆಯ ಮೂಲಕ ತಮ್ಮ "ಸೆಲೆಕ್ಟೆಡ್ ಪೋಯೆಮ್ಸ್" ಕವನಸಂಕಲನವನ್ನು ಹೊರತಂದರು. ಇದೇ ಪ್ರಕಾಶನ ಸಂಸ್ಥೆಯು ೧೯೯೧ರಲ್ಲಿ ಸ್ಕೋವೆಲ್ ಅವರ "ಕಲೆಕ್ಟೆಡ್ ಪೋಯೆಮ್ಸ್" ಕವನ ಸಂಕಲನವನ್ನೂ ಹೊರತಂದಿತು.

ಮುಪ್ಪು

ಬದಲಾಯಿಸಿ

ಸ್ಕೋವೆಲ್ ಅವರ ಮುಪ್ಪಿನಲ್ಲಿ ಅವರ ಬರವಣಿಗೆಯ ಗುಣಮಟ್ಟ ಹಾಗೂ ಪ್ರಮಾಣಕ್ಕೆ ಯಾವುದೇ ಕೊರತೆಯಿರಲಿಲ್ಲ.೭೦-೯೦ ವರ್ಷಗಳ ವಯಸ್ಸಿನಲ್ಲಿ ಇವರು ಬರೆದ ಕವನಗಳು ಅವರ ಯೌವನದ ಕವನಗಳಿಗಿಂತ ಹೆಚ್ಚು ಪ್ರಬುದ್ಧವಾಗಿಯೂ, ಪರಿಣಾಮಕಾರಿಯಾಗಿಯೂ ಇದ್ದಿತು. ತಮ್ಮ ಕಾಲವನ್ನು ಬಳಿಸಾರುತ್ತಿದ್ದಂತೆ ಅವರ ಬರವಣಿಗೆಯ ಶೈಲಿಯು ನಿಧಾನವಾಗಿ ಬದಲಾಗತೊಡಗಿತು. ಅವರ ಕವನಗಳ ಸ್ವರೂಪ ಸರಳವಾಗತೊಡಗಿತು. ಸಾಮಾನ್ಯವಾಗಿ ಜಠಿಲವಾದ ಧಾಟಿಯಲ್ಲಿ ಬರೆಯುತ್ತಿದ್ದ ಸ್ಕೋವೆಲ್ ಅವರು ತಮ್ಮ ಕೊನೆಯ ದಿನಗಳಲ್ಲಿ ಸುಲಭವಾಗಿ ಅರ್ಥೈಸಬಹುದಾದ ಸಲೀಸಾದ ಭಾಷೆಯಲ್ಲಿ ಬರೆಯುತ್ತಿದ್ದರು. ಅವರ ಕಡೆಯ ದಶಕದಲ್ಲಿ ಪ್ರಕಾಶನಗೊಂಡ ಕವನಗಳು ಅವರನ್ನು ಹೊಸ ಎತ್ತರಕ್ಕೆ ಕೊಂಡೊಯ್ದವು.

ಎಡಿತ್ ಜಾಯ್ ಸ್ಕೋವೆಲ್ ಅವರು ೧೯೯೯ರ ಅಕ್ಟೋಬರ್ ನಲ್ಲಿ ೯೨ನೇ ವಯಸ್ಸಿನಲ್ಲಿ ಆಕ್ಸ್ಫರ್ಡ್ ನಲ್ಲಿ ವಿಧಿವಶರಾದರು.

ಉಲ್ಲೇಖಗಳು

ಬದಲಾಯಿಸಿ


  1. http://www.carcanet.co.uk/
  2. https://www.poetryfoundation.org/poets/giovanni-pascoli
  3. https://www.poets.org/poetsorg/poet/w-h-auden