ಎಜೆಕಿಯಲ್
ಕ್ರಿ. ಪೂ. ಸು.592. ಯೆಹೂದಿ ಪ್ರವಾದಿಗಳಲ್ಲಿ ಒಬ್ಬ. ಈತನ ಸಿದ್ಧಿ-ಸಾಧನೆಗಳನ್ನೊಳಗೊಂಡ ಗ್ರಂಥದ ಬೈಬಲಿನಲ್ಲಿದೆ. ಎಜೆಕೆಯೆಲನ ಗ್ರಂಥದ ರೂಪರೇಷೆಗಳು ಇತರ ಪ್ರವಾದಿಗಳ ಗ್ರಂಥಗಳಿಗಿಂತ ಸುವ್ಯವಸ್ಥಿತವಾಗಿವೆ. ಆದರೆ ಅನೇಕ ಪ್ರಕರಣಗಳ ಪುನರ್ ನಿರೂಪಣೆ, ಅಪೂರ್ವ ಘಟನಾವಳಿಗಳ ಮಧ್ಯೆ ಬರುವ ಸುದೀರ್ಘ ಉಪನ್ಯಾಸಗಳು-ಇತ್ಯಾದಿಗಳನ್ನು ವಿಶ್ಲೇಷಿಸಿದಾಗ, ಗ್ರಂಥವನ್ನು ಎಜೆಂಕಿಯೆಲನೇ ಬರೆದಿರಲಾರ; ಶಿಷ್ಯನೊಬ್ಬ ಗುರುವಿನ ಹೇಳಿಕೆಗಳನ್ನು, ಸಾಧನೆ-ಬೋಧನೆಗಳನ್ನು ಸಂಕಲನ ಮಾಡಿ ಕೃತಿರೂಪಕ್ಕೆ ಇಳಿಸಿರಬಹುದು ಎಂಬ ವಾದ ಬೈಬಲ್ ಶಾಸ್ತ್ರಜ್ಞರಲ್ಲಿ ಮಾನ್ಯವಾಗಿದೆ. ಆದರೆ ಆ ಶಿಷ್ಯ ಮೂಲದ ಸಂದೇಶಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಿದ್ದಾನೆ. ಕ್ರಿ.ಪೂ. ಸು.587ರಲ್ಲಿ ಬ್ಯಾಬಿಲೋನಿಯದ ಆಳರಸರು ಯೆಹೂದ್ಯರನ್ನು ಬಗ್ಗುಬಡಿದು ತಮ್ಮ ರಾಜಧಾನಿಗೆ ಸೆರೆಯಾಳುಗಳನ್ನಾಗಿ ಕೊಂಡೊಯ್ದರು. ಕ್ರಿ.ಪೂ. 593-587ರ ಅವಧಿಯಲ್ಲಿ ಎಜೆóಕಿಯಲ್ ಬ್ಯಾಬಿಲೋನಿಯದಲ್ಲಿದ್ದು ಈ ಯೆಹೂದ್ಯ ದೇಶಭ್ರಷ್ಟರ ಮಧ್ಯೆ ಸೇವಾನಿರತನಾಗಿದ್ದನೆಂದು ಭಾವಿಸಲು ಎಜೆಂಕಿಯೆಲನ ಗ್ರಂಥವೇ ಆಧಾರ. ಕ್ರಿ.ಪೂ. 587ಕ್ಕೆ ಮುಂಚಿತವಾಗಿ ಲೆಸ್ಟೈನಿನಲ್ಲಿದ್ದು ಅನಂತರ ಬ್ಯಾಬಿಲೋನಿಯಕ್ಕೆ ಈತ ಹೋಗಿದ್ದಿರಬಹುದೆಂಬ ವಾದವೂ ಇದೆ. ಎಜೆಕಿಯೆಲನ ಬೋಧನೆ-ಸಾಧನೆಗಳನ್ನು ಪರಿಭಾವಿಸಿದಾಗ ಆತ ಪ್ರಭಾವಶಾಲಿ ವ್ಯಕ್ತಿತ್ವವುಳ್ಳವನಾಗಿದ್ದಿರಬೇಕೆಂದು ತೀರ್ಮಾನಿಸಬಹುದು. ಅವನದು ಯಾಜಕವೃತ್ತಿ. ದೇವಾಲಯದಲ್ಲಿ ಅವನಿಗೆ ಹೆಚ್ಚಿನ ಆಸಕ್ತಿ. ಗ್ರಂಥದ ತುಂಬ ದೇವಾಲಯವನ್ನು ಕುರಿತ ಉಲ್ಲೇಖಗಳಿವೆ, ಸಂದೇಶಗಳಿವೆ. ಪುರೋಹಿತನಾಗಿದ್ದುದರಿಂದ ನ್ಯಾಯ ನೀತಿಗಳ ಪರಿಪಾಲನೆಯಲ್ಲಿ ಈತ ತುಂಬ ಎಚ್ಚರ ವಹಿಸುತ್ತಿದ್ದ. ಎಜೆóಕಿಯೆಲ್ ದಾರ್ಶನಿಕನೂ ಆಗಿದ್ದ. ಅನೇಕ ಕಡೆ ಇವನ ಭವಿಷ್ಯದರ್ಶನಕ್ಕೆ ಉದಾಹರಣೆಗಳಿವೆ. ಮಾಡಿದ ಅನಾಚಾರಕ್ಕಾಗಿ ಜೂಡಳಿಗೆ ಒದಗಿದ ಕಷ್ಟಗಳು, ಜೆರೂಸಲೆಂ ಆಕ್ರಮಣ, ಪತನ, ನವ ಜೆರೂಸಲೆಂನ ಕನಸು-ಇವು ಈ ಗ್ರಂಥದಲ್ಲಿ ವರ್ಣಿತವಾಗಿವೆ. ಸಚಿತ್ರ ಕಲ್ಪನಾವಿಲಾಸ ಹೇರಳವಾಗಿದ್ದರೂ ಈತನ ಶೈಲಿಯಲ್ಲಿ ವೈವಿಧ್ಯವಿಲ್ಲ. ಅದು ನೀರಸವಾಗಿದೆ, ಸತ್ತ್ವಹೀನವಾಗಿದೆ. ದೈವಿಕ ರಹಸ್ಯಗಳನ್ನು ಕುರಿತು ವಿಸ್ಮಯವನ್ನಷ್ಟೆ ಉಂಟುಮಾಡುವಂತಿದೆ. ಅದುವರೆಗೆ ಯೆಹೂದ್ಯರಲ್ಲಿ ಜನಜನಿತವಾಗಿದ್ದ ಸಾಮೂಹಿಕ ಪ್ರತಿಫಲದ ತತ್ತ್ವವನ್ನು (ಕಲೆಕ್ಟಿವ್ ರಿಟ್ರಿಬ್ಯೂಷನ್) ಎಜೆಂಕಿಯೆಲ್ ಒಪ್ಪುವುದಿಲ್ಲ. ವ್ಯಕ್ತಿ ತನ್ನ ಪಾಪಪುಣ್ಯಕ್ಕನುಗುಣವಾಗಿ ಪ್ರತಿಫಲ ಪಡೆಯುತ್ತಾನಲ್ಲದೆ ರಾಷ್ಟ್ರದ ಪಾಪಪುಣ್ಯಕ್ಕನುಗುಣವಾಗಿ ಅಲ್ಲ ಎಂದು ಸಾರಿದ. ಇವನು ಜೆರಿಮೈಯನ ಬೋಧನೆಯಿಂದ ಪ್ರಭಾವಿತನಾಗಿದ್ದಂತೆ ತೋರುತ್ತದೆ.