ಎಂ. ಎಸ್. ನಂಜುಂಡರಾವ್

ಎಂ. ಎಸ್. ನಂಜುಂಡರಾವ್ (ಜುಲೈ ೫, ೧೯೩೨ - ಮೇ ೨, ೨೦೦೩) ಕಲಾವಿದರಾಗಿ, ಕಲಾಶಿಕ್ಷಕಾರಾಗಿ ಶ್ರೇಷ್ಠ ಮಟ್ಟದ ಕಲಾಶಿಕ್ಷಣ ಸಂಸ್ಥೆಯನ್ನು ಕತ್ತಿದವರಾಗಿ ಈ ಕಲಾ ಲೋಕದಲ್ಲಿ ಪ್ರಖ್ಯಾತರಾಗಿದ್ದಾರೆ. ಬೆಂಗಳೂರು ಚಿತ್ರಕಲಾ ಪರಿಷತ್ತನ್ನು ಬಲ್ಲವರಿಗೆಲ್ಲಾ ಎಂ. ಎಸ್. ನಂಜುಂಡರಾಯರ ಪರಿಚಯವೂ ಇದ್ದೇ ಇರುತ್ತದೆ. ಅವರು ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು.

ಎಂ. ಎಸ್. ನಂಜುಂಡರಾವ್
ಜನನಜುಲೈ ೫, ೧೯೩೨
ಮಧುಗಿರಿ ತಾಲ್ಲೂಕಿನ ಸುದ್ದೇಗುಂಟೆಪಾಳ್ಯ
ಮರಣಮೇ ೨, ೨೦೦೩
ವೃತ್ತಿ(ಗಳು)ಚಿತ್ರಕಲಾ ಪರಿಷತ್ ಸ್ಥಾಪಕರು, ಕಲಾಶಿಕ್ಷಕರು, ಕಲಾವಿದರು

ಎಂ. ಎಸ್. ನಂಜುಂಡರಾವ್‌ ಅವರು ಮಧುಗಿರಿ ತಾಲ್ಲೂಕಿನ ಸುದ್ದೇಗುಂಟೆಪಾಳ್ಯದಲ್ಲಿ ಜುಲೈ 5, 1932ರ ವರ್ಷದಲ್ಲಿ ಜನಿಸಿದರು.. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಂ.ಎಸ್‌. ದಾಸಪ್ಪನವರು. ತಾಯಿ ಗೌರಮ್ಮನವರು. ಚಾಮರಾಜೇಂದ್ರ ವೃತ್ತಿ ಶಿಕ್ಷಣ ಕಲಾ ಶಾಲೆಯಲ್ಲಿ ಶಿಕ್ಷಣ ಪಡೆದ ನಂಜುಂಡರಾವ್ ಅವರಿಗೆ ಎಸ್‌. ಎನ್‌. ಸ್ವಾಮಿ, ಎಂ. ವೀರಪ್ಪ, ವೈ. ಸುಬ್ರಹ್ಮಣ್ಯ ರಾಜು ಮುಂತಾದ ಶಿಕ್ಷಕರ ಮಾರ್ಗದರ್ಶನ ಲಭಿಸಿತು.

ಚಿತ್ರಕಲೆ

ಬದಲಾಯಿಸಿ

ಎಂ. ಎಸ್. ನಂಜುಂಡರಾವ್ ಅವರು ಹಲವಾರು ಕಲಾ ಕೃತಿಗಳನ್ನು ರಚಿಸಿದ್ದು ಮಹಾತ್ಮಗಾಂಧಿ, ವಲ್ಲಭಾಯ್‌ ಪಟೇಲ್‌ ಮುಂತಾದ ವ್ಯಕ್ತಿಚಿತ್ರಗಳು, ತಲಕಾವೇರಿ, ಶೃಂಗೇರಿ, ನಂದಿಬೆಟ್ಟ ಮುಂತಾದ ನಿಸರ್ಗ ಚಿತ್ರಗಳು ಪ್ರಖ್ಯಾತಿ ಪಡೆದಿವೆ. ಇವರ ಕಲಾಕೃತಿಗಳು ದೆಹಲಿಯ ಕೆಂಪುಕೋಟೆ, ಲಲಿತಕಲಾ ಅಕಾಡೆಮಿ, ಖಾದಿಮಂಡಲಿ, ವಿಧಾನಸೌಧ, ಅಮೆರಿಕಾದ ನಟರಾಜ ಆರ್ಟ್‌ಗ್ಯಾಲರಿ ಮುಂತಾದೆಡೆಗಳಲ್ಲಿ ಸಂಗ್ರಹಿತಗೊಂಡಿವೆ.

ಕರ್ನಾಟಕ ಚಿತ್ರಕಲಾ ಪರಿಷತ್ತು

ಬದಲಾಯಿಸಿ

ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಸ್ಥಾಪಕ ಕಾರ್ಯದರ್ಶಿಯಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಎಂ. ಎಸ್. ನಂಜುಂಡರಾವ್ ಅವರು ಸಲ್ಲಿಸಿದ ಸೇವೆ ಅಪಾರವಾದದ್ದು. ಇದಲ್ಲದೆ ನಂಜುಂಡರಾವ್ ಅವರು ಹಲವಾರು ಚಿತ್ರಸಂಸ್ಥೆ, ಲಲಿತಕಲಾ ಅಕಾಡೆಮಿ, ಕೋಲ್ಕತ್ತಾದ ರವೀಂದ್ರಭಾರತಿ ವಿಶ್ವವಿದ್ಯಾಲಯದ ಪರಿಶೀಲನಾ ಮಂಡಲಿಗಳಲ್ಲಿ ಸಹಾ ಸದಸ್ಯರಾಗಿದ್ದು ಮಹತ್ವದ ಕೊಡುಗೆಗಳನ್ನು ನೀಡಿದವರೆನಿಸಿದ್ದಾರೆ ಮತ್ತು ಬಹಳಷ್ಟು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಗ್ರಂಥ ರಚನೆ

ಬದಲಾಯಿಸಿ

ನಂಜುಂಡರಾವ್ ಅವರು ಕಲೆಯ ಬಗ್ಗೆ ಲಲಿತಕಲಾ ಅಕಾಡಮಿಗಾಗಿ ನಿಕೊಲಾಯ್‌ ರೋರಿಕ್‌, ಸ್ವೆತಾಸ್ಲಾಯ್‌ ರೋರಿಕ್‌ ಕುರಿತು ಪುಸ್ತಕಗಳನ್ನು ರಚಿಸಿದ್ದಾರೆ. ತೊಗಲು ಬೊಂಬೆಯ ಬಗ್ಗೆ ಸಂಶೋಧನಾಗ್ರಂಥ ಮೂಡಿಸಿದ್ದಾರೆ. ಹಲವಾರು ಬಾರಿ ವಿದೇಶ ಪ್ರವಾಸ ಕೈಗೊಂಡ ಅವರು ಡೆನ್ಮಾರ್ಕ್‌, ಜರ್ಮನಿ, ಮಾಸ್ಕೊ ಮುಂತಾದೆಡೆಗಳಲ್ಲಿ ಜರುಗಿದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ನಂಜುಂಡರಾವ್ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಅವರ ಕುರಿತು ನಂಜುಂಡಸಿರಿ ಮತ್ತು ಚಿತ್ರಕಲೆ ಪುಸ್ತಕಗಳನ್ನು ಅವರ ಅಭಿಮಾನಿಗಳು ಹೊರತಂದಿದ್ದಾರೆ. ನಂಜುಂಡರಾವ್ ಅವರಿಗೆ ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಮಾಸ್ಕೋದ ರೋರಿಕ್‌ ಅಂತಾರಾಷ್ಟ್ರೀಯ ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿದ್ದವು.

ಸುದೀರ್ಘ ಕಾಲದವರೆಗೆ ತಮ್ಮನ್ನು ಕಲೆ ಮತ್ತು ಚಿತ್ರಕಲಾ ಪರಿಷತ್ತಿನ ಏಳಿಗೆಗೆ ಸಮರ್ಪಿಸಿಕೊಂಡಿದ್ದ ಪ್ರೊ. ಎಂ. ಎಸ್. ನಂಜುಂಡರಾವ್ ಅವರು ಮೇ 2, 2003ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೊಂಡಿಗಳು

ಬದಲಾಯಿಸಿ

ಕಣಜ Archived 2016-05-26 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದೂ ಪತ್ರಿಕೆಯಲ್ಲಿ ಲೇಖನ Archived 2012-04-01 ವೇಬ್ಯಾಕ್ ಮೆಷಿನ್ ನಲ್ಲಿ. ಅನನ್ಯ ಕಲಾಸಾರಥಿಯ ಅಕ್ಷರ ಚಿತ್ರ - ಕನ್ನಡಪ್ರಭ ಲೇಖನ