ಉಪ್ರುಂಜ ಗಿಡ
Indian mangrove
Scientific classification
ಸಾಮ್ರಾಜ್ಯ:
Plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. officinalis
Binomial name
Avicennia officinalis

ಉಪ್ರುಂಜ ಗಿಡ: ವರ್ಬಿನೇಸಿ ಕುಟುಂಬದ (ಫ್ಯಾಮಿಲಿ) ಅವಿಸಿನಿಯ ಜಾತಿಯ (ಜಿನೆರ) ಆಫಿಸಿನ್ಯಾಲಿಸ್ ಪ್ರಭೇದದ (ಸ್ಟೀಶೀಸ್) ಒಂದು ಗಿಡ (ಅವಿಸಿನಿಯ ಆಫಿಸಿನ್ಯಾಲಸ್). ಮ್ಯಾನ್ಗ್ರೂವ್ ಜಾತಿಗೆ ಸೇರಿದೆ. ಭಾರತ ಮತ್ತು ಇತರ ದೇಶಗಳ ಕರಾವಳಿ ಪ್ರದೇಶಗಳಲ್ಲಿ - ಉಪ್ಪಿನ ಅಂಶ ಅಧಿಕವಾಗಿರುವ ನೀರು ಮತ್ತು ನೆಲಗಳಲ್ಲಿ - ಮ್ಯಾನ್ಗ್ರೂವ್ ಸಸ್ಯ ಬೆಳೆಯುತ್ತದೆ. ನೆಲದಲ್ಲಿ ಉಪ್ಪಿನ ಅಂಶ ಹೆಚ್ಚು. ಆದ್ದರಿಂದ ಗಿಡಕ್ಕೆ ಸಿಗುವ ನೀರಿನ ಪ್ರಮಾಣ ಕಡಿಮೆ. ಹೀಗಾಗಿ ಈ ಪ್ರದೇಶದ ಇತರ ಗಿಡಗಂಟೆಗಳಂತೆ ಇದೂ ಶುಷ್ಕಸಸ್ಯ. ಭಾರತದಲ್ಲಿ ಇದು ಬೆಳೆಯುವ ಪ್ರದೇಶಗಳು ರತ್ನಗಿರಿ ಜಿಲ್ಲೆಯ ಮಾಲವಣ, ಕಾರವಾರ, ಮುಂಬಯಿ ಕರಾವಳಿ, ಇತ್ಯಾದಿ. ಇದೊಂದು ಪೊದೆಸಸ್ಯ, ಎಲೆಗಳು ತೊಗಲಿನಂತೆ, ನೀರು ಆರಿಹೋಗುವುದನ್ನು ತಡೆಯಲು ಇಂಥ ರಚನೆ ಆವಶ್ಯ. ಕಾರಣವಿಷ್ಠೆ - ನೀರು ಆರಿದಾಗ ಬೇರಿನ ಮೂಲಕ ಒಳಸೇರುವ ನೀರಿನ ಪ್ರಮಾಣ ಹೆಚ್ಚುತ್ತದೆ; ಆಗ ಉಪ್ಪು ಒಳಸೇರಿ ರಸಾಭಿಸರಣದ ನಾಳಗಳನ್ನು ಮುಚ್ಚಿ ಗಿಡ ನಾಶವಾಗುವ ಸಂಭವವಿದೆ. ಆದ್ದರಿಂದ ಬೆಳೆಯುವುದು ತೇವವಾದ ನೆಲದಲ್ಲಾದರೂ ಬೇರಿನ ಮುಖಾಂತರ ಹೀರಿಕೊಳ್ಳುವ ನೀರಿನ ಪರಿಮಾಣ ಮಾತ್ರ ಕಡಿಮೆ. ಇದಲ್ಲದೆ ಭೂ ಗಾಳಿ ಮತ್ತು ಸಮುದ್ರ ಗಾಳಿಗಳಿಗೆ ಈ ಗಿಡ ಸದಾಕಾಲ ಮೈಯೊಡ್ಡುವುದರಿಂದ ನೀರು ಹೆಚ್ಚಾಗಿ ಬೆವರಿಹೋಗುವ ಸಂಭವವೂ ಇದೆ. ಇದನ್ನು ತಡೆಯಲು ಎಲೆಗಳಿಗೆ ದಪ್ಪ ತೊಗಲಿನಂಥ ಹೊದಿಕೆ ಅನಿವಾರ್ಯ. ಉಪ್ರುಂಜ ಗಿಡ ಬೆಳೆಯುವಂಥ ನೆಲ ಪೊಳ್ಳಾಗಿಯೂ ಕೆಸರಾಗಿಯೂ ಇರುವುದರಿಂದ ನೀರಿನ ಭರತ ಇಳಿತಗಳು ಗಿಡವನ್ನು ಅಲುಗಿಸಿ ಗಿಡ ಬೇರುಸಹಿತ ಕಿತ್ತು ಬರುವ ಸಂಭವವಿದೆ. ಇಂಥ ಅಪಾಯವನ್ನು ಅದು ತನ್ನ ದಂಟು ಬೇರುಗಳಿಂದ ಎದುರಿಸುತ್ತದೆ. ಇವು ಸಾಧಾರಣವಾಗಿ ಮುಖ್ಯಕಾಂಡ ಕೆಳಭಾಗದಿಂದ ಬೆಳೆದು ಕೆಸರಿನಲ್ಲಿ ನಾಟಿಕೊಂಡು ಗಿಡಕ್ಕೆ ದೃಢತೆಯನ್ನು ಕೊಡುತ್ತವೆ. ಬೆಳೆಯುವ ಪ್ರತಿಯೊಂದು ಗಿಡಕ್ಕೂ ಆಮ್ಲಜನಕ ಅವಶ್ಯವಷ್ಟೆ. ಕೆಸರಿನಲ್ಲಿರುವ ಆಮ್ಲಜನಕ ಸಸ್ಯಜನ್ಯವಾದ ಪದಾರ್ಥಗಳನ್ನು ಕೊಳೆಯಿಸಿ ಬೇರ್ಪಡಿಸುವಲ್ಲಿಯೇ ವ್ಯಯವಾಗುತ್ತದೆ. ಆದ್ದರಿಂದ ಉಪ್ರುಂಜದ ಬೇರುಗಳಿಗೆ ಆವಶ್ಯಕವಾದ ಆಮ್ಲಜನಕ ನೆಲದಲ್ಲಿ ಸಾಕಷ್ಟು ದೊರೆಯುವುದಿಲ್ಲ. ಆದಕಾರಣ ಅವು ನೆಲದ ಮೇಲ್ಗಡೆಯೇ ಅಧಿಕವಾಗಿ ಬೆಳೆದು ಬರುತ್ತವೆ. ಬೇರುಗಳು ಗುರುತ್ವಾಕರ್ಷಣದ ಕಡೆಗೆ ಬೆಳೆಯದೆ ಅದರ ವಿರುದ್ಧ ಕಡೆಗೆ ಬೆಳೆಯುವುದು ಒಂದು ವಿಚಿತ್ರ ಅಂಶ. ಇವುಗಳಿಗೆ ಸಣ್ಣ ಸಣ್ಣ ರಂಧ್ರಗಳಿವೆ (ಲೆಂಟಿಕಲ್ಸ್‌). ರಂಧ್ರಗಳ ಮುಖಾಂತರ ಗಿಡ ಆಮ್ಲಜನಕವನ್ನು ಪಡೆಯುತ್ತದೆ. ಆದ್ದರಿಂದಲೇ ಈ ಬೇರುಗಳನ್ನು ಉಸಿರಾಡುವ ಬೇರುಗಳೆಂದು ಕರೆಯುವರು. ಹಣ್ಣುಗಳ ಉದ್ದ 1 -1 1/2 , ಆಕಾರ ತತ್ತಿಯಂತೆ. ಬೀಜ ಬಹಳ ದೊಡ್ಡದಾಗಿದ್ದು ಹಣ್ಣಿನ ಒಳಭಾಗವನ್ನು ಪುರ್ತಿಯಾಗಿ ತುಂಬಿಕೊಂಡಿರುತ್ತದೆ. ಬೀಜ ಹಣ್ಣಿನ ಒಳಗೇ ಮೊಳೆತು ಬೆಳೆಯಲಾರಂಭಿಸುವುದು. ಭ್ರೂಣದ ಬೇರು ಫಲದ ತುದಿಯನ್ನು ದಾಟಿ ಹೊರಬಂದು ಉಬ್ಬಿಕೊಳ್ಳುವುದು. ಅನಂತರ ಚಿಕ್ಕ ಚಿಕ್ಕ ಮತ್ತು ಗಂಟುಗಂಟಾದ ಉಬ್ಬುಗಳು ಬೇರಿನ ಮೇಲೆಲ್ಲ ಕಂಡುಬರುವುವು. ಇವೇ ಮುಂದೆ ಹುಟ್ಟಿ ಬರುವ ದಂಟುಬೇರುಗಳು. ಕೆಲವು ತಿಂಗಳ ತರುವಾಯ ಈ ಚಿಕ್ಕ ಸಸಿ ಕೆಳಗೆ ಬಿದ್ದು ಬೇರುಗಳು ಕೆಸರಿನಲ್ಲಿ ಹೂತು ಹೋಗುತ್ತವೆ. ಅನಂತರ ಗಂಟುಬೇರುಗಳು ಬೇಗನೆ ಹುಟ್ಟಿಕೊಂಡು ಎಲ್ಲ ದಿಕ್ಕುಗಳಲ್ಲೂ ಹರಡುವುವು. ಆಗ ಗಿಡ ಎದ್ದು ನೇರವಾಗಿ ನಿಲ್ಲುವುದು. ಈ ತೆರನಾಗಿ ತಾಯಿ ಗಿಡದಲ್ಲಿರುವ ಹಣ್ಣುಗಳಲ್ಲಿ ಬೀಜಗಳು ಮೊಳೆಯುವುದನ್ನು ಜರಾಯುಜತ್ವ (ವಿವಿಪ್ಯಾರಸ್) ಎನ್ನುವರು. ಉಪ್ರುಂಜಗಿಡದ ತೊಗಟೆ ಕಂದುಬಣ್ಣದ್ದಿದ್ದರೂ ಭಾರತದಲ್ಲಿ ಇದನ್ನು ಬಿಳಿಯ ಮ್ಯಾನ್ಗ್ರೋವ್ ಎಂದು ಕರೆಯುವುದುಂಟು. ತೊಗಟೆಯಲ್ಲಿ ಚರ್ಮವನ್ನು ಹದ ಮಾಡುವ ವಿಶೇಷ ಗುಣವಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: