ಉಡುತಡಿ
ಉಡುತಡಿ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಊರು. 12ನೆಯ ಶತಮಾನದ ಪ್ರಸಿದ್ಧ ಶಿವಶರಣೆ ಅಕ್ಕಮಹಾದೇವಿಯ ಜನ್ಮಸ್ಥಳ. ಶಾಸನಗಳಲ್ಲಿ ಈ ಪ್ರದೇಶವನ್ನು ತಡಗಣಿ ಸೀಮೆ ಎಂದು ಶಾಸನಗಳಲ್ಲಿ ಕರೆಯಲಾಗಿದೆ. ಈಗ ಪ್ರಸಿದ್ಧವಾಗಿರುವ ಉಡುಗಣಿ-ತಡಗಣಿ ಪ್ರದೇಶವನ್ನೇ ಹಿಂದೆ ಉಡುತಡಿ ಎಂದು ಕರೆಯುತ್ತಿದ್ದಂತೆ ಕಾಣುತ್ತದೆ. ಇದು ಬಳ್ಳಿಗಾವೆ-ಶಿರಾಳಕೊಪ್ಪಗಳಿಂದ ಸು. 7-8 ಕಿಮೀ ದೂರ ಅಂತರದಲ್ಲಿದೆ. ಶಿಕಾರಿಪುರಕ್ಕೆ 6-7 ಕಿಮೀಗಳಾಗಬಹುದು.[೧]
ಇತಿಹಾಸ
ಬದಲಾಯಿಸಿಪಿಡುಪರ್ತಿ ಸೋಮನಾಥ ಇದನ್ನು ಉದತಡಿ ಎಂದು ಕರೆದಿದ್ದಾನೆ. ಉದ ಎಂದರೆ ಉದಕ ಅಥವಾ ನೀರು ಎಂದರ್ಥವಾಗುತ್ತದೆ. ಆದ್ದರಿಂದ ಉದತಡಿ (ಜಲಾಶಯದ ಸನಿಹದ ಊರು) ಉಡುತಡಿ ಎಂದಾಗಿರುವ ಸಂಭವವಿದೆ. ಬಳ್ಳಿಗಾವೆಯ ಬಳಿ (ಮೂರು ಮೈಲಿ) 5 ಕಿಮೀ ಗಳ ಅಂತರದಲ್ಲಿ ಒಂದು ವಿಶಾಲವಾದ ಕೆರೆಯಿದೆ. ಈ ಜಲಾಶಯದಿಂದಾಗಿ ಈ ಪ್ರದೇಶಕ್ಕೆ ಉಡುತಡಿ ಎಂಬ ಹೆಸರು ಬಂದಿರಬೇಕು. ಈ ಕೆರೆಯ ದಂಡೆಯಲ್ಲಿಯೇ ಕಲ್ಲಿನಲ್ಲಿ ಕೆತ್ತಿದ ಕಮಲ ಗಂಗವ್ವನ ವಿಗ್ರಹವಿದೆ. ಈ ಮೂರ್ತಿಯ ಶಿರೋಭಾಗವನ್ನು ಕಮಲಾಕೃತಿಯಲ್ಲಿ ಕೆತ್ತಲಾಗಿದೆ. ಕಂಠದಿಂದ ಕೆಳಗಿನ ಭಾಗ ನಗ್ನವಾಗಿದೆ. ಇದನ್ನೇ ಮಹಾದೇವಿಯ ಮೂರ್ತಿ ಎಂದು ಕರೆಯುತ್ತಾರೆ. ಈ ಅಭಿಪ್ರಾಯವನ್ನು ವಿರೋಧಿಸುವವರೂ ಇದ್ದಾರೆ. ಇದರ ಸಮೀಪದಲ್ಲಿಯೇ ತಡಗಣಿ ಎಂಬ ಇನ್ನೊಂದು ಊರುಂಟು. ಉಡುಗಣಿ-ತಡಗಣಿ ಎಂಬ ಎರಡು ಊರುಗಳೂ ಆ ಕೆರೆಯ ಇಕ್ಕೆಡೆಗಳಲ್ಲಿ ಇವೆ. ಇವೆರಡೂ ಹಿಂದಿನ ಕಾಲದಲ್ಲಿ ಒಂದೇ ಆಗಿದ್ದು ಉಡುತಡಿ ಎಂಬ ಊರಾಗಿತ್ತೆಂದು ಮತ್ತೆ ಕೆಲವರ ಊಹೆ. ಗಣಿ ಉಡು + ತಡ = ಉಡುತಡ> ಉಡುತಡಿ ಆಗಿರಬೇಕು.
ಉಡುತಡಿಯಲ್ಲಿ ಮಲ್ಲಿಕಾರ್ಜುನ ದೇವಾಲಯವೊಂದಿದೆ. ಮಹಾದೇವಿಯಕ್ಕ ತನ್ನ ವಚನಗಳಲ್ಲಿ ಅಂಕಿತವಾಗಿ ಹೆಸರಿಸುವ ಚೆನ್ನಮಲ್ಲಿಕಾರ್ಜುನ ದೇವರು ಇದೇ ಇರಬೇಕೆಂದು ಹೇಳುತ್ತಾರೆ. ಇದನ್ನು ಜನ ಈಗ ಪರದೇಶಿ ಮಲ್ಲಪ್ಪನ ಗುಡಿ ಎಂದು ಕರೆಯುತ್ತಾರೆ. ಇದರ ಸಮೀಪದಲ್ಲಿಯೇ ಹಿರೇಕಸವಿ, ಚಿಕ್ಕಕಸವಿ ಎಂಬ ಎರಡು ಗ್ರಾಮಗಳಿವೆ. ಇವು ಮಹಾದೇವಿಯನ್ನು ಮದುವೆಯಾದನೆಂದು ಹೇಳಲಾಗಿರುವ ಕೌಶಿಕನ ಹೆಸರಿನಲ್ಲಿ ಕರೆದ ಊರುಗಳೋ ಏನೋ ಎನ್ನುವಂತೆ ಭಾಸವಾಗುತ್ತದೆ. ಈ ಊರಿನ ಹತ್ತಿರವಿರುವ ಬಳ್ಳಿಗಾವೆಯೇ (ನೋಡಿ) ಅಲ್ಲಮಪ್ರಭು ಜನಿಸಿದ ಊರು. ಉಡುತಡಿಯಲ್ಲಿ ಇತ್ತೀಚೆಗೆ ಒಂದು ಹೆಣ್ಣುವಿಗ್ರಹ ಸಿಕ್ಕಿದ್ದು ಅದನ್ನು ಮಹಾದೇವಿಯಕ್ಕನ ವಿಗ್ರಹವೆಂದು ಪುಜಿಸುತ್ತಿದ್ದಾರೆ. ಇಲ್ಲಿ ರಾಮೇಶ್ವರ ದೇವಾಲಯವೊಂದಿದೆ. ಈ ಪ್ರಾಂತ್ಯ ವೀರಶೈವ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದುದರಿಂದ ಈ ಭಾಗದಲ್ಲಿ ಶಿವಶರಣರ ಸಂಸ್ಮರಣೆಯ ಸ್ಥಳಗಳು ಇಂದಿಗೂ ಕಂಡುಬರುತ್ತವೆ. ಇಲ್ಲಿರುವ ಹಳೆಯ ಕೋಟೆಯೊಂದನ್ನು ಕೌಶಿಕನ ಕೋಟೆಯೆಂದು ಅಲ್ಲಿನ ಜನ ತೋರಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ