ಉಚ್ಚಾಟನೆ: ಸ್ವಾಮ್ಯದ ಹಕ್ಕು ಚಲಾಯಿಸಿ ಒಂದು ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವ ನ್ಯಾಯಬದ್ಧ ಕ್ರಮ (ಇಜೆಕ್ಟ್‌ಮೆಂಟ್). ಗೇಣಿದಾರನನ್ನು (ಲೆಸೀ) ಗೇಣಿದಾತನೋ (ಲೆಸರ್) ಆತನಿಂದ ಸ್ವತ್ತಿನ ಹಕ್ಕಿನ ವರ್ಗಾವಣೆ ಪಡೆದವನೋ ಗೇಣಿದಾರಿಯಿಂದ (ಲೀಸ್) ಬಿಡುಗಡೆ ಮಾಡಿ ಸ್ವತ್ತು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಉಚ್ಚಾಟನೆಯೆಂಬ ಶಬ್ದ ಬಳಸಲಾಗಿದೆ. ಭಾರತದಲ್ಲಿ ಸ್ವತ್ತು ವರ್ಗಾವಣೆ ಕಾಯಿದೆಯಲ್ಲೂ ಮನೆ ಬಾಡಿಗೆ ನಿಯಂತ್ರಣ ಕಾಯಿದೆಗಳಲ್ಲೂ ಭೂ ಹಿಡುವಳಿಯ ಕಾಯಿದೆಗಳಲ್ಲೂ ವಿವಿಧ ಉಚ್ಚನ್ಯಾಯಾಲ ಯಗಳ ನಾನಾ ತೀರ್ಪುಗಳಲ್ಲೂ ಉಚ್ಚಾಟನೆಗೆ ಸಂಬಂಧಿಸಿದ ನ್ಯಾಯ ಅಂತರ್ಗತವಾಗಿದೆ. ಸ್ವತ್ತು ವರ್ಗಾವಣೆ ಕಾಯಿದೆ: ಸ್ವತ್ತು ವರ್ಗಾವಣೆ ಕಾಯಿದೆ 1882ರ ಜುಲೈ 1ರಿಂದ, ಅಲ್ಲಿಂದಾಚೆಗೆ ಆಗಿಂದಾಗ್ಗೆ ಮಾಡಲಾದ ಅನೇಕ ತಿದ್ದುಪಡಿಗಳನ್ನು ಕೂಡಿಸಿಕೊಂಡು ಜಾರಿಯಲ್ಲಿದೆ. ಈ ಕಾಯಿದೆ ಸಮಗ್ರವಲ್ಲ. ಇದರಲ್ಲಿ ಹೇಳದ ವಿಚಾರಗಳಲ್ಲಿ ನ್ಯಾಯಾಲಯಗಳಿಗೆ ಸಾಮ್ಯನ್ಯಾಯವನ್ನು ಪರಾಮರ್ಶಿಸಿ ತೀರ್ಪು ಕೊಡುವ ಹಕ್ಕಿದೆ. ಈ ಕಾಯಿದೆಯ ಐದನೆಯ ಅಧ್ಯಾಯದಲ್ಲಿ ಉಚ್ಚಾಟನೆಗೆ ಸಂಬಂಧಿಸಿದ ಅನೇಕ ಕಲಮುಗಳಿವೆ. ಸಂಬಂಧಪಟ್ಟ ರಾಜ್ಯಗಳು ತಮ್ಮ ಗೆಜೆಟ್ಟುಗಳಲ್ಲಿ ಕೃಷಿ ಭೂಮಿಗಳಿಗೆ ಅನ್ವಯಿಸುವಂತೆ ಪ್ರಕಟಣೆ ನೀಡಿದ ಹೊರತು ಈ ಅಧ್ಯಾಯ ಆ ಭೂಮಿಗಳಿಗೆ ಅನ್ವಯವಾಗತಕ್ಕದ್ದಲ್ಲ. ಆದರೆ ನ್ಯಾಯಾಲಯಗಳು ಈ ಅಧ್ಯಾಯದಲ್ಲಿರುವ ಕಲಮುಗಳ ತತ್ತ್ವಗಳನ್ನು ಕೃಷಿಸಂಬಂಧವಾದ ಒಕ್ಕಲುತನಕ್ಕೂ ಸಾಮ್ಯನ್ಯಾಯದ ದೃಷ್ಟಿಯಿಂದ ಅನ್ವಯಿಸಿವೆ. ಕೃಷಿ ಅಥವಾ ಉತ್ಪಾದನೆಯ ಉದ್ದೇಶಕ್ಕಾಗಿ ಸ್ಥಿರ ಸ್ವತ್ತೊಂದನ್ನು ಗೇಣಿಗೆ ಕೊಟ್ಟಿದ್ದ ಪಕ್ಷದಲ್ಲಿ, ತದ್ವಿರುದ್ಧವಾದ ಯಾವ ಕರಾರಾಗಲಿ ಸ್ಥಳೀಯ ಕಾಯಿದೆಯಾಗಲಿ ರೂಢಿಯಾಗಲಿ (ಯೂಸೆಜ್) ಇಲ್ಲದಿದ್ದ ಸಂದರ್ಭದಲ್ಲಿ, ಅದು ವರ್ಷದಿಂದ ವರ್ಷಕ್ಕೆ ಮುಂದುವರಿಯುವ ಗೇಣಿದಾರಿಯೆನಿಸಿಕೊಳ್ಳುತ್ತದೆ. ಗೇಣಿದಾತನಾಗಲಿ ಗೇಣಿದಾರನಾಗಲಿ ಆ ಗೇಣಿದಾರಿ ವರ್ಷದೊಂದಿಗೆ ಮುಗಿಯುವಂತೆ ಆರು ತಿಂಗಳ ನೋಟೀಸು ಕೊಡುವುದರ ಮೂಲಕ ಕೊನೆಗಾಣಿಸಬಹುದು. ಬೇರೆ ಯಾವ ಉದ್ದೇಶದಿಂದ ಕೊಡಲಾದ ಸ್ಥಿರಸ್ವತ್ತಿನ ಗೇಣಿದಾರಿ ಯಾಗಿದ್ದರೂ ಅದು ತಿಂಗಳಿಂದ ತಿಂಗಳಿಗೆ ಮುಂದುವರಿಯುವ ಗೇಣಿದಾರಿಯೆಂದು ತಿಳಿಯಬೇಕು. ಅದನ್ನು ಕೊನೆಗಾಣಿಸಲು ಈ ಇಬ್ಬರಲ್ಲಿ ಯಾರಾದರೂ ಆ ಗೇಣಿದಾರಿಯ ತಿಂಗಳ ಅಂತ್ಯದೊಂದಿಗೆ ಮುಗಿಯುವಂತೆ ಹದಿನೈದು ದಿನಗಳ ನೋಟೀಸು ಕೊಡಬೇಕು (ಸ್ವತ್ತು ವರ್ಗಾವಣೆ ಕಾಯಿದೆ, ಕಲಂ 106). ಉಚ್ಚಾಟನೆಗೆ ಸಂಬಂಧಪಟ್ಟ ಎಲ್ಲ ವ್ಯವಹಾರಗಳಿಗೂ ನೋಟೀಸೇ ಬುನಾದಿ. ಇದು ಸರಿಯಿಲ್ಲದಿದ್ದರೆ ಉಚ್ಚಾಟನೆಗೆ ಸಂಬಂಧಿಸಿದ ಯಾವುದೊಂದು ವ್ಯವಹಾರವೂ ನಿಲ್ಲಲಾರದು. ಮೇಲೆ ಸೂಚಿಸಿದಂತೆ ಗೇಣಿದಾತನಾಗಲಿ ಗೇಣಿದಾರನಾಗಲಿ ಕೊಟ್ಟ ನೋಟೀಸಿನ ಅವಧಿ ತೀರಿದ ಅನಂತರವೇ ಅಲ್ಲದೆ ಇನ್ನೂ ಹಲವು ಸಂದರ್ಭಗಳಲ್ಲಿ ಗೇಣಿದಾರಿ ಅಂತ್ಯವಾಗಬಹುದು (ಕಲಂ 111): 1 ಗೇಣಿ ಕರಾರಿನಲ್ಲಿ ಕ್ಲುಪ್ತ ಮಾಡಲಾದ ಕಾಲ ಸಂದುಹೋದಾಗ (ಎಫ಼ಕ್ಸ್‌ ಆಫ್ ಟೈಂ): 2. ಯಾವುದೋ ಒಂದು ಘಟನೆಯ ಸಂಭವಕ್ಕೆ ಅನುಗುಣವಾಗಿ ಈ ಕಾಲವನ್ನು ಕ್ಲುಪ್ತಗೊಳಿಸಬೇಕೆಂಬ ಷರತ್ತಿದ್ದರೆ ಆ ಘಟನೆ ಸಂಭವಿಸಿದಾಗ: 3. ಯಾವುದೋ ಒಂದು ಘಟನೆಯ ಸಂಭವದಿಂದ ಈ ಸ್ವತ್ತಿನಲ್ಲಿ ಗೇಣಿದಾರನ ಹಿತಾಸಕ್ತಿ ಅಂತ್ಯವಾಗುವುದಿದ್ದರೆ ಅಥವಾ ಇದನ್ನು ಹಸ್ತಾಂತರ ಮಾಡುವ ಅಧಿಕಾರ ಆ ಘಟನೆಯ ಸಂಭವದವರೆಗೆ ಮಾತ್ರ ಮುಂದುವರಿಯತಕ್ಕದ್ದಾಗಿದ್ದರೆ ಆ ಘಟನೆ ಸಂಭವಿಸಿದಾಗ; 4. ಗೇಣಿದಾರ-ಗೇಣಿದಾತರಿಬ್ಬರ ಹಿತಾಸಕ್ತಿಗಳೂ ಏಕಕಾಲದಲ್ಲಿ ಏಕವ್ಯಕ್ತಿಯಲ್ಲಿ ಏಕಪಾತ್ರದಲ್ಲಿ (ಸೇಮ್ ರೈಟ್ಸ್‌) ನಿಹಿತಗೊಂಡಾಗ (ವೆಸ್ಟೆಡ್); 5. ಗೇಣಿದಾರ ವ್ಯಕ್ತವಾಗಿಯೋ (ಎಕ್ಸ್‌ಪ್ರೆಸ್) ಧ್ವನಿತವಾಗಿಯೋ (ಇಂಪ್ಲೈಡ್) ತನ್ನ ಗೇಣಿದಾರಿ ಹಿತಾಸಕ್ತಿಯನ್ನು ಗೇಣಿದಾತನಿಗೆ ಅಧ್ಯರ್ಪಣ (ಸರೆಂಡರ್) ಮಾಡಿದಾಗ ಮತ್ತು 6 ಕರಾರಿನ ಯಾವುದೊಂದು ಷರತ್ತನ್ನು ಉಲ್ಲಂಘಿಸಿದ ಪಕ್ಷದಲ್ಲಿ ಗೇಣಿದಾತ ಪುನಃ ಪ್ರವೇಶಿಸಬಹುದೆಂದು ಅಥವಾ ಗೇಣಿದಾರಿಯೇ ಶೂನ್ಯವಾಗುವುದೆಂದು (ವಾಯ್ಡ್‌) ನಮೂದಿಸಿದ್ದು, ಈ ಷರತ್ತನ್ನು ಗೇಣಿದಾರ ಮುರಿದರೆ ಅಥವಾ ಗೇಣಿದಾರ ತನ್ನ ಆ ಸ್ವರೂಪವನ್ನು (ಕ್ಯಾರೆಕ್ಟರ್) ಬಿಟ್ಟುಕೊಟ್ಟರೆ; ಗೇಣಿದಾರ ತನ್ನ ಗೇಣಿದಾರತನವನ್ನು ನಿರಾಕರಿಸಿ ತನ್ನಲ್ಲಿ ಅಥವಾ ಬೇರೆಯವರಲ್ಲಿ ಸ್ವತ್ತಿನ ಹಕ್ಕನ್ನು ಆರೋಪಿಸಿದರೆ; ಗೇಣಿದಾರ ದಿವಾಳಿಯಾದರೆ ಮತ್ತು ದಿವಾಳಿಯಾದಂದು ಗೇಣಿದಾತನಿಗೆ ಸ್ವತ್ತಿನ ಪ್ರವೇಶದ ಹಕ್ಕು ಇರತಕ್ಕದ್ದೆಂದು ಕರಾರಿನಲ್ಲಿ ನಮೂದಿಸಿದ್ದರೆ-ಈ ಯಾವ ಕಾರಣಕ್ಕಾಗಿಯಾದರೂ ಗೇಣಿದಾರಿಯನ್ನು ರದ್ದುಪಡಿಸಿ ಗೇಣಿದಾತ ನೋಟೀಸು ಕೊಟ್ಟ ಪರಿಣಾಮವಾಗಿ ಗೇಣಿದಾರನ ಗೇಣಿದಾರಿ ಹಕ್ಕಿನ ಮುಟ್ಟುಗೋಲಾದಾಗ (ಫಾರ್ಫಿಚರ್)-ಗೇಣಿದಾರಿ ಅಂತ್ಯಗೊಳ್ಳುತ್ತದೆ. ಉಚ್ಚಾಟನೆಯ ಷರತ್ತುಗಳು: ಕಾನೂನು ರೀತ್ಯಾ ಯಾವುದಾದರೂ ಒಂದು ಕಾರಣ ದಿಂದ ಗೇಣಿದಾರಿ ರದ್ದಾಗದಿದ್ದಲ್ಲಿ ಗೇಣಿದಾರನನ್ನು ಅಕ್ರಮ ಪ್ರವೇಶದ ಕಾರಣದಿಂದ ಸ್ವತ್ತಿನಿಂದ ಹೊರಹಾಕಲು ಅಸಾಧ್ಯ. ಆದರೆ ಗೇಣಿದಾತ ಕೇವಲ ಹಕ್ಕಿನ ಮೇಲೆ ಮಾಡಬಹುದಾದ ವ್ಯವಹಾರ ನಿಲ್ಲಲಾರದು. ಗೇಣಿದಾರನಿಂದ ಬೇರೆಯವರು ಪಡೆದ ಹಕ್ಕುಗಳೂ (ಉಪಗೇಣಿದಾರಿ, ಒಳಗೇಣಿದಾರಿ) ಗೇಣಿದಾರಿಯ ರದ್ದಿನೊಂದಿಗೇ ರದ್ದಾಗುತ್ತವೆ. ಆದರೆ ಗೇಣಿದಾರ ಸ್ವಂತ ಇಚ್ಛೆಯಿಂದ ತನ್ನ ಗೇಣಿದಾರಿ ಹಕ್ಕನ್ನು ಗೇಣಿದಾತನಿಗೆ ಬಿಟ್ಟುಕೊಟ್ಟಾಗ ಮೂರನೆಯವರಿಗೆ ಇರುವ ಹಕ್ಕು ನಶಿಸಿಹೋಗುವುದಿಲ್ಲ. ಗೇಣಿದಾರ ಕರಾರಿನ ಷರತ್ತು ಮುರಿದಾಗ ಗೇಣಿದಾತ ಸ್ವತ್ತನ್ನು ಸ್ವಾಧೀನಪಡಿಸಿಕೊಂಡು ಪ್ರವೇಶಿಸುವ ಅವಕಾಶವಿರಬೇಕಾದರೆ ಹೀಗೆಂದು ಕರಾರಿನಲ್ಲಿ ನಮೂದಿಸಿರಬೇಕೆಂಬುದಾಗಿ ಭಾರತದ ಕಾಯಿದೆಯಲ್ಲಿ ವಿಧಿಸಲಾಗಿದೆ. (ಇಂಗ್ಲಿಷ್ ನ್ಯಾಯದಲ್ಲಿ ಈ ವಿಧಿಯಿಲ್ಲ). ಅಲ್ಲದೆ ಗೇಣಿದಾತನಿಗೆ ಸ್ವತ್ತು ಸ್ವಾಧೀನ ಪಡಿಸಿಕೊಳ್ಳುವ ಹಕ್ಕನ್ನು ಕೊಡುವ ಷರತ್ತು ಊರ್ಜಿತವಾಗುವಂಥದಾಗಿರಬೇಕು. ಉದಾಹರಣೆಗಾಗಿ, ಗೇಣಿದಾತ ಏರ್ಪಡಿಸುವ ವಿಶೇಷ ಸಮಾರಂಭಗಳಲ್ಲಿ ಗೇಣಿದಾರ ಹಾಜರಿರಬೇಕೆಂಬ ಷರತ್ತು ಊರ್ಜಿತವಲ್ಲವೆಂದು ಪ್ರಿವಿ ಕೌನ್ಸಿಲ್ ಹೇಳಿದೆ. ಗೇಣಿದಾರನ ಹಕ್ಕಿನ ಮುಟ್ಟುಗೋಲಾದಾಗ ಗೇಣಿದಾತ ಸಾಧ್ಯವಿದ್ದಲ್ಲಿ ನೇರವಾಗಿ ಶಾಂತರೀತಿಯಿಂದ ಸ್ವತ್ತು ಸ್ವಾಧೀನ ಪಡೆಯಬಹುದು; ವ್ಯವಹರಣೆ ನಡೆಯಿಸಿಯೇ ಸ್ವಾಧೀನ ಹೊಂದಬೇಕೆಂದಿಲ್ಲ. ಬಲಪ್ರಯೋಗದಿಂದ ಗೇಣಿದಾರನನ್ನು ತಳ್ಳಿಹಾಕುವ ಷರತ್ತು ಊರ್ಜಿತವಾಗದು. ಗೇಣಿದಾರ ಬೇಕೆಂದೇ ತಪ್ಪು ಮಾಡಿ ಗೇಣಿದಾರಿ ಹಕ್ಕು ಕಳೆದುಕೊಳ್ಳಲು ಸಾಧ್ಯವಿಲ್ಲ. ಜೀತದ ಹಿಡುವಳಿ ಕರಾರಿನಂತೆ ಗೇಣಿದಾತ ಜೀತಮಾಡದೆ ಹೋದರೆ ಆತನ ಗೇಣಿದಾರಿ ಹಕ್ಕು ಕಳೆದುಹೋಗುತ್ತದೆ. ಜೀತಮಾಡಲು ಆತ ನಿರಾಕರಿಸಿದಾಗ ಗೇಣಿದಾರಿಯನ್ನು ಅಂತ್ಯಗೊಳಿಸಿ ನೋಟೀಸು ಕೊಡುವ ಅಗತ್ಯವಿಲ್ಲ. ಗೇಣಿದಾರನ ಹಕ್ಕಿನ ಮುಟ್ಟುಗೋಲಾದಾಗ ಗೇಣಿದಾರಿಯನ್ನು ಅಂತ್ಯಗೊಳಿಸಿ ನೋಟೀಸು ಕೊಡುವುದು ಅವಶ್ಯ. ಸ್ವತ್ತು ವರ್ಗಾವಣೆ ಕಾಯಿದೆಯಲ್ಲಿ ಹೇಳಲಾದ ಗೇಣಿದಾರ-ಗೇಣಿದಾತರ ಕರಾರುಗಳಿಗೆ ಮಾತ್ರ ಕ್ರಮಪ್ರಕಾರದ ನೋಟೀಸು ಅಗತ್ಯ. ಬೇರೆ ಕರಾರುಗಳಲ್ಲಿ ಸಾಮ್ಯನ್ಯಾಯಕ್ಕನುಗುಣವಾಗಿ ಗೇಣಿದಾರಿ ರದ್ದುಪಡಿಸುವ ನೋಟೀಸು ಸಾಕು. ನೋಟೀಸಿನಲ್ಲಿ ಹೇಳಿದ ಅವಧಿಯ ಬಳಿಕವೂ ಗೇಣಿದಾರ ಆ ಸ್ವತ್ತಿನ ಸ್ವಾಧೀನ ಹೊಂದಿದ್ದರೆ ಅದು ಅಕ್ರಮವಾಗುತ್ತದೆ. ಒಂದು ಸ್ವತ್ತಿಗೆ ಅನೇಕ ಒಡೆಯರಿದ್ದರೆ ಒಬ್ಬ ತನ್ನ ಹಕ್ಕಿನ ಭಾಗದ ಗೇಣಿದಾರಿ ರದ್ದುಪಡಿಸಿ ನೋಟೀಸು ಕೊಡುವುದು ಇಂಗ್ಲಿಷ್ ನ್ಯಾಯದ ಪ್ರಕಾರ ಸಾಧ್ಯ. ಆದರೆ ಭಾರತದಲ್ಲಿ ಎಲ್ಲರೂ ಸೇರಿ ನೋಟೀಸು ಕೊಡಬೇಕು. ಆದರೆ ಈ ಅನೇಕ ಒಡೆಯರು ಗೇಣಿ ಕರಾರಿನ ಬಳಿಕ ಪಾಲಾದರೆ ಇವರಲ್ಲಿ ಯಾರಾದರೊಬ್ಬ ತನ್ನ ಪಾಲಿಗೆ ಬಾಕಿ ಇರುವ ಗೇಣಿಯ (ಬಾಡಿಗೆ) ವಿಚಾರದಲ್ಲಿ ಗೇಣಿದಾರನ ಹಕ್ಕು ರದ್ದುಪಡಿಸಬಹುದು. ನ್ಯಾಯಪ್ರಕಾರ ಗೇಣಿದಾರಿ ಹಕ್ಕು ರದ್ದು ಮಾಡಿದ ಮೇಲೆ ಆ ಗೇಣಿದಾತ ಬೇರೆಯವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಆಸ್ತಿ ಸ್ವಾಧೀನಕ್ಕೆ ವ್ಯವಹರಣೆ ಮಾಡಬಹುದು. ಒಮ್ಮೆ ಗೇಣಿದಾರಿ ರದ್ದುಪಡಿಸಿಯಾದ ಮೇಲೆ ಮುಂದಿನ ಅವಧಿಗೆ ಗೇಣಿ (ಬಾಡಿಗೆ) ಪಡೆದುಕೊಂಡರೆ ಅಥವಾ ಅದರ ವಸೂಲಿಗಾಗಿ ನ್ಯಾಯಾಲಯದ ನೆರವು ಪಡೆದುಕೊಂಡರೆ ಅಥವಾ ಗೇಣಿ ಕರಾರು ಇನ್ನೂ ಜಾರಿಯಲ್ಲಿದೆಯೆಂಬ ಭಾವನೆ ಮೂಡಿಸುವ ಯಾವ ಕೃತಿಯನ್ನಾದರೂ ಗೇಣಿದಾತ ಮಾಡಿದರೆ ಆಗ ಗೇಣಿದಾರಿ ರದ್ದಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಗೇಣಿ ಕರಾರು ರದ್ದಾಗಿದೆಯೆಂಬ ಅರಿವು ಸ್ವತ್ತಿನ ಒಡೆಯನಿಗಿರಬೇಕು. ಗೇಣಿದಾರನನ್ನು ಉಚ್ಚಾಟನೆಗೊಳಿಸಲು ಮೊಕದ್ದಮೆ ಹೂಡಿದ ಮೇಲೆ ಗೇಣಿಯನ್ನು (ಬಾಡಿಗೆ) ಪಡೆದುಕೊಂಡಲ್ಲಿ ಗೇಣಿದಾರಿ ರದ್ದಾಗುವುದಿಲ್ಲ. (ಕಲಂ 112). 111ನೆಯ ಕಲಮಿನಂತೆ ಉಚ್ಚಾಟನೆಯ ನೋಟೀಸುಕೊಟ್ಟ ಮೇಲೂ ಇದನ್ನು ಮನ್ನಾ (ವೇವ್) ಮಾಡುವುದು ಕೆಲವು ಸಂದರ್ಭಗಳಲ್ಲಿ ಸಾಧ್ಯ. ಹೀಗೆ ಮಾಡಬೇಕಾದರೆ ಈ ನೋಟೀಸು ಯಾರಿಗೆ ಕೊಡಲಾಗಿದೆಯೋ ಆತನ ವ್ಯಕ್ತ ಅಥವಾ ಧ್ವನಿತ ಅನುಮತಿ ಪಡೆಯಬೇಕು. ಗೇಣಿದಾರಿ ಅಸ್ತಿತ್ವದಲ್ಲಿದೆಯೆಂದು (ಸಬ್ಸಿಸ್ಟಿಂಗ್) ಭಾವಿಸುವ ಉದ್ದೇಶವಿದೆಯೆಂದು ನೋಟೀಸು ಕೊಟ್ಟಾತ ತನ್ನ ಯಾವುದಾದರೂ ಕೃತಿಯಿಂದ ತೋರಿಸಬೇಕು (ಕಲಂ 113). ಉದಾಹರಣೆ: 1. ಕೊಟ್ಟ ನೋಟೀಸಿನ ಅವಧಿ ತೀರಿದ ಅನಂತರದ ಕಾಲಕ್ಕೆ ಗೇಣಿದಾರನಿಂದ ಗೇಣಿದಾತ ಶುಲ್ಕ ಸ್ವೀಕಾರ ಮಾಡಿದರೆ ಉಚ್ಚಾಟನೆಯ ನೋಟೀಸು ಮನ್ನಾ ಆಗುತ್ತದೆ. 2. ಗೇಣಿಯ ಸ್ವತ್ತು ಬಿಡಬೇಕೆಂದು ಗೇಣಿದಾರನಿಗೆ ಗೇಣಿದಾತ ಕೊಟ್ಟ ನೋಟೀಸಿನ ಅವಧಿ ತೀರಿದ ಮೇಲೂ ಗೇಣಿದಾರ ಆ ಸ್ವತ್ತಿನ ಸ್ವಾಧೀನ ಹೊಂದಿದ್ದು, ಆತನನ್ನು ಗೇಣಿದಾರನೆಂದೇ ಭಾವಿಸಿ ಸ್ವತ್ತಿನ ಒಡೆಯ ಆತನಿಗೆ ಇನ್ನೊಂದು ಬಿಡುಗಡೆ ನೋಟೀಸು ಕೊಟ್ಟರೆ ಆಗ ಮೊದಲನೆಯ ನೋಟೀಸು ಮನ್ನಾ ಆಗುತ್ತದೆ. ಗೇಣಿ (ಬಾಡಿಗೆ) ಬಾಕಿಯ ಕಾರಣದಿಂದ ಸ್ಥಿರ ಸ್ವತ್ತಿನ ಗೇಣಿದಾರಿ ಮುಟ್ಟುಗೋಲಾಗಿ ಗೇಣಿದಾರನನ್ನು ಉಚ್ಚಾಟನೆಗೊಳಿಸಲು ಗೇಣಿದಾತ ನ್ಯಾಯಾಲಯದಲ್ಲಿ ದಾವಾ ಹೂಡಿದ್ದು, ವಿಚಾರಣೆಯ ಸಮಯದಲ್ಲಿ ಗೇಣಿದಾತನಿಗೆ ಗೇಣಿ (ಬಾಡಿಗೆ) ಬಾಕಿಯನ್ನೂ ಅದರ ಮೇಲಣ ಬಡ್ಡಿಯನ್ನೂ ಆತನ ಪುರ್ತಿ ವೆಚ್ಚಗಳನ್ನೂ ಗೇಣಿದಾರ ಕೊಟ್ಟಲ್ಲಿ ಅಥವಾ ಒಪ್ಪಿಸಿದ್ದಲ್ಲಿ ಅಥವಾ ಹದಿನೈದು ದಿನಗಳೊಳಗೆ ಪಾವತಿ ಮಾಡಲು ನ್ಯಾಯಾಲಯದ ದೃಷ್ಟಿಯಿಂದ ಸೂಕ್ತವೆನಿಸಿದ ಜಾಮೀನು ಕೊಟ್ಟಲ್ಲಿ, ಉಚ್ಚಾಟನೆಯ ತೀರ್ಪು (ಡಿಕ್ರೀ) ಕೊಡುವ ಬದಲು ಗೇಣಿದಾರಿ ಮುಟ್ಟುಗೋಲಿನಿಂದ ಗೇಣಿದಾರನನ್ನು ವಿಮೋಚನೆಗೊಳಿಸಿ ನ್ಯಾಯಾಲಯ ಆಜ್ಞೆ ಜಾರಿಮಾಡಬಹುದು (ಇದು ಹಕ್ಕಲ್ಲ; ನ್ಯಾಯಾಲಯದ ವಿವೇಚನೆಗೆ ಒಳಪಟ್ಟ ವಿಚಾರ). ಮುಟ್ಟುಗೋಲು ಆಗದಿದ್ದರೆ ಹೇಗೋ ಹಾಗೆ ಗೇಣಿದಾರ ಆಗ ಸ್ವತ್ತನ್ನು ಹಿಡಿದಿರತಕ್ಕದ್ದು (114). ಸ್ವತ್ತಿಗೆ ಸಂಬಂಧಿಸಿದಂತೆ ಯಾವುದಾದರೂ ಒಳಗೇಣಿದಾರಿ ಇದ್ದಲ್ಲಿ ಗೇಣಿದಾರಿಯ ಮುಟ್ಟುಗೋಲಿನೊಂದಿಗೆ ಒಳಗೇಣಿದಾರಿಯೂ ಅನೂರ್ಜಿತವಾಗುತ್ತದೆ(ಅನಲ್); ಆದರೆ ಇಂಥ ಒಳಗೇಣಿದಾರರನ್ನು ವಂಚಿಸಿ ಗೇಣಿದಾತ ಮುಟ್ಟುಗೋಲು ಆಜ್ಞೆ ಪಡೆದಿದ್ದ ಪಕ್ಷದಲ್ಲಿ ಅಥವಾ ಮುಟ್ಟುಗೋಲಿನ ವಿರುದ್ಧ (114ನೆಯ ಕಲಮಿನಲ್ಲಿ ಹೇಳಿರುವಂತೆ) ವಿಮೋಚನೆಯನ್ನು ನೀಡಲಾಗಿದ್ದಲ್ಲಿ ಒಳಗೇಣಿದಾರಿ ಅನೂರ್ಜಿತವಾಗುವುದಿಲ್ಲ. ಗೇಣಿದಾರನೇ ಗೇಣಿದಾರಿಯನ್ನು ಅಧ್ಯರ್ಪಣ ಮಾಡಿದಲ್ಲಿ ಒಳಗೇಣಿದಾರಿಗೆ ಸಾಮಾನ್ಯವಾಗಿ ಯಾವ ಕುಂದೂ (ಪ್ರೆಜುಡಿಸ್) ಉಂಟಾಗುವುದಿಲ್ಲ. ಗೇಣಿ ಕರಾರು ರದ್ದಾದಲ್ಲಿ ಸ್ವತ್ತನ್ನು ಬಿಡುವ ಮೊದಲು ಗೇಣಿದಾರ ಅದರಲ್ಲಿರುವ ತನ್ನೆಲ್ಲ ಅನುವಂಶಿಕ ವಸ್ತುಗಳನ್ನು (ಫಿಕ್ಸ್‌ಚರ್ಸ್) ಬೇರ್ಪಡಿಸಿ ತೆಗೆದುಕೊಂಡು ಹೋಗಬಹುದು. ಆದರೆ ಆತ ಸ್ವತ್ತು ಸ್ವಾಧೀನಕ್ಕೆ ತೆಗೆದುಕೊಂಡಾಗ ಅದು ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಅದನ್ನು ಬಿಟ್ಟುಕೊಡಬೇಕು. ಆತ ಗೇಣಿ ಬಿಟ್ಟು ಕೊಡುತ್ತಿರುವುದು ತನ್ನ ತಪ್ಪಿನಿಂದಾಗಿಯೇ ಅಲ್ಲದಿದ್ದ ಪಕ್ಷದಲ್ಲಿ ತಾನು ನೆಟ್ಟ ಅಥವಾ ಬಿತ್ತಿದ ಬೆಳೆಯನ್ನೂ ತಾನೇ ತೆಗೆದುಕೊಂಡು ಹೋಗಬಹುದು. ಅದನ್ನು ಶೇಖರಿಸಿ ಸಾಗಿಸಲು ಸ್ವತ್ತನ್ನು ಪ್ರವೇಶಿಸುವ ಅಧಿಕಾರವೂ ಆತನಿಗುಂಟು. ಸ್ವತ್ತಿನ ಗೇಣಿದಾರ ಏನಾದರೂ ಮೇಲ್ಪಾಟು ಮಾಡಿದ್ದರೆ, ತನ್ನನ್ನು ಉಚ್ಚಾಟನೆ ಮಾಡುತ್ತಿರುವವನಿಂದ ಅಂಥ ಮೇಲ್ಪಾಟಿಗಾಗಿ ಪರಿಹಾರ ಕೇಳಿ ಪಡೆಯಬಹುದು; ಅಥವಾ ಅದನ್ನು ಆತನಿಗೆ ಮಾರಬಹುದು (51 ಮತ್ತು 108). ಇತರ ಕಾಯಿದೆಗಳು: ಮನೆಬಾಡಿಗೆ ನಿಯಂತ್ರಣ ಕಾಯಿದೆಗಳು ಮತ್ತು ಭೂ ಹಿಡುವಳಿ ಕಾಯಿದೆಗಳು ರಾಜ್ಯಗಳಲ್ಲಿ ಬಾಡಿಗೆದಾರರನ್ನು ಅಥವಾ ಗೇಣಿದಾರರನ್ನು ಸ್ವತ್ತುಗಳಿಂದ ಉಚ್ಚಾಟನೆ ಮಾಡುವುದನ್ನು ನಿಯಂತ್ರಿಸಿವೆ. ಈ ಕಾಯಿದೆಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯಾಗಿವೆ. ಮನೆಬಾಡಿಗೆ ನಿಯಂತ್ರಣ ಕಾಯಿದೆಗಳಲ್ಲಿ ಸಾಮಾನ್ಯವಾಗಿ ಬಾಡಿಗೆ ಬಾಕಿ ಮಾಡಿದರೆ, ಕಟ್ಟಡವನ್ನು ಹಾಳು ಮಾಡಿದರೆ ಅಥವಾ ವಿರೂಪಗೊಳಿಸಿದರೆ, ಆ ಕಟ್ಟಡ ಇರುವ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಬೇಕಿದ್ದರೆ, ಬಾಡಿಗೆದಾರ ಇರುವ ಕಟ್ಟಡ ಮಾಲೀಕನ ಉಪಯೋಗಕ್ಕೆ ನ್ಯಾಯವಾಗಿ ಬೇಕಿದ್ದರೆ ಬಾಡಿಗೆದಾರನನ್ನು ಮಾಲೀಕ ಉಚ್ಚಾಟಿಸಿ ಸ್ವತ್ತು ಸ್ವಾಧೀನ ಪಡೆಯಬಹುದು. ಗೇಣಿದಾರ ಹಾಗೂ ಭೂಮಾಲೀಕರ ಸಂಬಂಧವನ್ನೇ ತೊಡೆದುಹಾಕುವುದು ಭೂ ಹಿಡುವಳಿ ಕಾಯಿದೆಗಳ ಅಂತಿಮ ಧ್ಯೇಯ. ಆದ್ದರಿಂದ ಅಲ್ಲಿ ಗೇಣಿದಾರಿಯನ್ನು ರದ್ದುಪಡಿಸಲು ಆಸ್ಪದ ಕಡಿಮೆ. ಗೇಣಿದಾರ ಗೇಣಿ ಬಾಕಿ ಮಾಡಿದರೆ ಅಥವಾ ಅಲ್ಲಿ ನಿರೂಪಿಸಿರುವ ಇತರ ಕೆಲವು ಸಂದರ್ಭಗಳಲ್ಲಿ ಗೇಣಿದಾರಿ ರದ್ದುಗೊಳಿಸಿ ಗೇಣಿದಾರನನ್ನು ಉಚ್ಚಾಟನೆ ಮಾಡಬಹುದು. ಈ ಕಾಯಿದೆಗಳ ನಿರ್ವಹಣೆಗಾಗಿ ನಿಯುಕ್ತವಾದ ನ್ಯಾಯ ಮಂಡಲಗಳಿಗೆ ಈ ಅಧಿಕಾರವನ್ನು ಕೊಡಲಾಗಿದೆ. ಇಂಥ ಕಾಯಿದೆಗಳಿಂದಾಗಿ ಉಚ್ಚಾಟನೆಯ ಕಾನೂನು ತನ್ನ ಪ್ರಾಮುಖ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. (ಕೆ.ಜಿ.ಬಿ.)