ಈಜಿಪ್ಟಿನ ಭೂ ಇತಿಹಾಸ

ಗೊಂಡ್ವಾನ ಭೂಖಂಡದ ಮಂಚೂಣಿಯ ಪ್ರದೇಶಕ್ಕೆ ಸೇರಿದ ಭಾಗವೇ ಈಗಿನ ಈಜಿಪ್ಟ್. ಇಡೀ ದೇಶದುದ್ದಕ್ಕೂ ಅತಿ ಪ್ರಾಚೀನ ಆರ್ಕೀಯನ್ ಶಿಲೆಗಳ ಸಮೂಹ ಹರಡಿದೆ. ಈ ಸಮೂಹದ ಬಹುಭಾಗ ಮುಚ್ಚಿಹೋಗಿದ್ದು ಎಲ್ಲೋ ಕೆಲವು ಕಡೆ ಅಲ್ಪಸ್ವಲ್ಪ ದೃಷ್ಟಿಗೆ ಗೋಚರವಾಗುತ್ತದೆ. ದೇಶದ ಉತ್ತರ ಭಾಗದಲ್ಲಿ ಈ ಪುರಾತನ ಶಿಲೆಗಳ ಮೇಲೆ ಇತರ ಭೂಯುಗಗಳ ಶಿಲಾಪ್ರಸ್ತರಗಳು ಶೇಖರವಾಗಿವೆ. ಇವುಗಳಲ್ಲೆಲ್ಲ ನೂಬಿಯನ್ ಮರಳು ಶಿಲಾಪ್ರಸ್ತರಗಳೇ ಅಧಿಕ. ಇದನ್ನು ಬಿಟ್ಟರೆ ಇಯೋಸೀನ್ ಯುಗದ ಸುಣ್ಣಶಿಲಾಪ್ರಸ್ತರಗಳು ಮತ್ತು ಪ್ಲಿಸ್ಟೊಸೀನ್ ಯುಗದ ಜಲಜ ಶಿಲಾಪ್ರಸ್ತರಗಳನ್ನು ಹೆಸರಿಸಬಹುದು. ಆರ್ಕೀಯನ್ ಶಿಲಾಸಮೂಹದ ಅತ್ಯಂತ ಪ್ರಾಚೀನ ಶಿಲೆಯಾದ ಫಂಡಮೆಂಟಲ್ ನೈಸ್ (ಒಂದು ಬಗೆಯ ಗೀರು ಶಿಲೆ) ದೇಶದ ಆಗ್ನೇಯ ಮತ್ತು ನೈಋತ್ಯ ಭಾಗಗಳಲ್ಲಿ ಹರಡಿದೆ. ಈ ಗೀರು ಶಿಲೆಯ ಮೇಲೆ ಇತರ ಕಣಶಿಲೆಗಳು ಮತ್ತು ರೂಪಾಂತರಗೊಂಡಿರುವ ಜಲಜಶಿಲಾಪ್ರಸ್ತರಗಳನ್ನು ಗುರುತಿಸಲು ಸಾಧ್ಯ. ಇದೇ ಗುಂಪಿನ ಗ್ರಾನೈಟ್, ಸರ್ಪೆಂಟಿನೈಟ್ ಮತ್ತು ಪದರು ಶಿಲೆಗಳನ್ನು ಆಸ್ವಾನ್, ಪಶ್ಚಿಮ ಮರುಭೂಮಿ, ಪೂರ್ವ ಮರುಭೂಮಿ ಮತ್ತು ಸಿನಾಯ್ ಪ್ರಾಂತ್ಯಗಳಲ್ಲಿ ನೋಡಬಹುದು. ಪೂರ್ವ ಮರುಭೂಮಿ ಮತ್ತು ಸಿನಾಯ್‍ಗಳಲ್ಲಿ ಇಡೀ ಭೂಭಾಗವೇ ಮೇಲಕ್ಕೆದ್ದುದಕ್ಕೆ ಆಧಾರಗಳಿವೆ. ನೈಲ್ ಕಣಿವೆಯ ಹಲವಾರು ಜಲಪಾತಗಳಿಗೂ ಈ ಭೂಚಟುವಟಿಕೆಯೇ ಕಾರಣ. ಒಟ್ಟಿನಲ್ಲಿ ಸದ್ಯದ ಭೂಭಾಗದ ಹತ್ತನೆ ಒಂದು ಭಾಗ ಆರ್ಕೀಯನ್ ಶಿಲೆಗಳಿಂದ ಕೂಡಿದೆ. ಇವುಗಳಲ್ಲಿ ಚಿನ್ನ, ಬೆಳ್ಳಿ, ಕಬ್ಬಿಣ, ತಾಮ್ರ, ಮತ್ತು ಇತರ ಖನಿಜ ನಿಕ್ಷೇಪಗಳೂ ಅಮೃತಶಿಲೆ, ಸರ್ಪೆಂಟಿನೈಟ್, ಅಬ್ಸಿಡಿಯಾನ್, ಪಾರ್‍ಫಿರಿ ಮುಂತಾದ ಕಟ್ಟಡಶಿಲೆಗಳೂ ದೊರೆಯುತ್ತವೆ.

ಪೇಲಿಯೋಜೋಯಿಕ್ ಭೂಕಲ್ಪದ ಶಿಲಾಶ್ರೇಣಿಗಳು ಬದಲಾಯಿಸಿ

ಪೇಲಿಯೋಜೋಯಿಕ್ ಭೂಕಲ್ಪದ ಶಿಲಾಶ್ರೇಣಿಗಳು ಬಹು ಅಲ್ಪ ಪ್ರಮಾಣದಲ್ಲಿವೆ. ಸೂಯೆeóï ಕಾಲುವೆಯ ಅಕ್ಕಪಕ್ಕದಲ್ಲಿ ತೋರಿಬರುವ ಮರಳುಶಿಲೆಗಳು ಮತ್ತು ಸುಣ್ಣಶಿಲೆಗಳು ಈ ವರ್ಗದವು. ಈ ಕಲ್ಪದುದ್ದಕ್ಕೂ ಆರ್ಕೀಯನ್ ಶಿಲೆಗಳ ಸವೆತದಿಂದ ದೊರೆತ ಕಣಗಳ ಶೇಖರಣೆಯಿಂದ ವಿಸ್ತಾರವಾದ ಮರಳುಶಿಲಾನಿಕ್ಷೇಪಗಳುಂಟಾದುವು. ಕೆಲವೆಡೆ ಇವು 16,000' ಗೂ ಮೀರಿ ಮಂದವಾಗಿವೆ. ಇವುಗಳ ರಚನೆ ಮತ್ತು ಸಂಯೋಜನೆ ವೈವಿಧ್ಯಮಯ. ಇಲ್ಲಿ ಜೀವಾವಶೇಷಗಳ ಸುಳಿವೇ ಇಲ್ಲ. ವಯಸ್ಸಿನಲ್ಲಿ ಕಾರ್ಬಾನಿಫೆರಸ್ ಯುಗದಿಂದ ಕ್ರಿಟೇಷಿಯಸ್ ಯುಗದ ತನಕ ಹರಡಿವೆ. ದೇಶದ ಮೂರನೆಯ ಒಂದು ಭೂಭಾಗ ಇವುಗಳಿಂದ ಆವೃತವಾಗಿದೆ. ದಕ್ಷಿಣ ಈಜಿಪ್ಟ್‍ನ ಬಹುಭಾಗ ಇವುಗಳದು. ಅಲ್ಲದೆ ಗಡಿಯಾಚೆ ದಕ್ಷಿಣ ಮತ್ತು ಪಶ್ಚಿಮದತ್ತಲೂ ಇವನ್ನು ಗುರುತಿಸಬಹುದು. ಇವೇ ನೂಬಿಯನ್ ಮರಳು ಶಿಲೆಗಳು.[೧]

ಕ್ರಿಟೇಷಿಯಸ್ ಯುಗದ ಅಂತ್ಯಭಾಗ ಬದಲಾಯಿಸಿ

ಕ್ರಿಟೇಷಿಯಸ್ ಯುಗದ ಅಂತ್ಯಭಾಗದಲ್ಲಿ ದೇಶದ ಉತ್ತರಭಾಗ ಸಮುದ್ರದಿಂದ ಆವೃತ್ತವಾಗಿತ್ತು. ಅದು ಮೊದಲಾಗಿ ಪ್ಲಿಯೊಸೀನ್ ಯುಗ ಮುಗಿವ ತನಕ ಭೂಭಾಗಗಳನ್ನು ಹಲವಾರು ಬಾರಿ ಮೇಲಕ್ಕೆ ಒಯ್ದ, ಕೆಳಕ್ಕೆ ತುಯ್ದ ದಾಖಲೆಗಳಿವೆ. ಹೀಗಾಗಿ ಭೂಭಾಗಗಳನ್ನು ಪಕ್ಕದ ಸಮುದ್ರ ಪದೇ ಪದೇ ಆವರಿಸುತ್ತಿತ್ತು. ಇವುಗಳಲ್ಲೆಲ್ಲ ಕ್ರಿಟೇಷಿಯಸ್ ಯುಗದ ಸಮುದ್ರಾಕ್ರಮಣ ಬಹು ವಿಸ್ತಾರವಾದುದು. ಈಗಿನ ಕರಾವಳಿಯಿಂದ 600 ಮೈಲಿಯಷ್ಟು ಭೂಭಾಗ ನೀರಿನಲ್ಲಿ ಮುಳುಗಿತ್ತು. ಈ ಮುಳುಗಡೆಯ ಪ್ರದೇಶದಲ್ಲಿ 600' ಮಂದದ ಸುಣ್ಣ ಶಿಲಾಪ್ರಸ್ತರಗಳು ನಿಕ್ಷೇಪಗೊಂಡುವು. ಆದರೆ ಈಗ ಇದರ ಬಹುಭಾಗ ಇತರ ಕಿರಿಯ ಸಮುದ್ರಾಕ್ರಮಣ ಶಿಲಾಪ್ರಸ್ತರಗಳಿಂದ ಮುಚ್ಚಿಹೋಗಿ ಗೋಚರವಾಗುತ್ತಿಲ್ಲ.ಈಜಿಪ್ಟಿನ ಸಮುದ್ರನಿಕ್ಷೇಪದಲ್ಲಿ ಅತ್ಯಂತ ವಿಸ್ತಾರವಾದವು ಇಯೊಸೀನ್ ಯುಗದ ಸುಣ್ಣಶಿಲಾಪ್ರಸ್ತರಗಳು. ಇವು ಟರ್ಷಿಯರಿ ಕಲ್ಪದ ಆದಿಭಾಗದಲ್ಲಿ (ಅಂದರೆ ಕ್ರಿಟೇಷಿಯಸ್ ಯುಗ) ಭೂಭಾಗ ಸಮುದ್ರ ಗತವಾದುದನ್ನು ಸೂಚಿಸುತ್ತವೆ. ಪಶ್ಚಿಮ ಮರುಭೂಮಿಯ ಮಧ್ಯಭಾಗದುದ್ದಕ್ಕೂ ಇವು ಹರಡಿವೆ. ಈ ಭೂಭಾಗ ಸುಣ್ಣಶಿಲಾಪ್ರಸ್ತರಗಳಿಂದ ಕೂಡಿ ಮೇಲೆದ್ದು ತೋರುವ ಪ್ರಸ್ಥಭೂಮಿ. ಇದನ್ನು ನೈಲ್ ಕಣಿವೆ ಛೇದಿಸಿ ಮುಂಬರಿಯುತ್ತದೆ. ಈ ಶಿಲೆಯನ್ನು ನೈಲ್ ಕಣಿವೆ ಮತ್ತು ನದೀಮುಖಜಭೂಮಿಯ ಪ್ರಾಂತ್ಯಗಳಲ್ಲಿ ಕಟ್ಟಡಶಿಲೆಯಾಗಿ ಬಳಸಿದ್ದಾರೆ. ಆಲಿಗೊಸೀನ್ ಯುಗದಲ್ಲಿ ಸಮುದ್ರ ಮತ್ತೆ ಹಿಂಜರಿಯಿತು. ಅಲ್ಲಲ್ಲೆ ಸಣ್ಣಪುಟ್ಟ ಪ್ರಮಾಣದಲ್ಲಿ ನದೀಯ ಶಿಲಾನಿಕ್ಷೇಪಗಳು ಕಂಡುಬಂದುವು. ಇವು ಜೀವ್ಯವಶೇಷಗಳಿಲ್ಲದ ಮರಳುಶಿಲೆ ಮತ್ತು ನುರುಜಶಿಲಾಪ್ರಸ್ತರಗಳು, ಹಲವೆಡೆ ಮರಳುಗಲ್ಲಾಗಿರುವ ಪುರಾತನ ವೃಕ್ಷಗಳ ಕಾಂಡಗಳ ಅವಶೇಷಗಳು ದೊರೆತಿವೆ.[೨]

ಆಲ್ ಫಯೂಂ ಬದಲಾಯಿಸಿ

ಆಲ್ ಫಯೂಂ ತಗ್ಗಿನ ಉತ್ತರಕ್ಕಿರುವ ಪ್ರದೇಶದ ಜಲಜಶಿಲೆಗಳಲ್ಲಿ ಕೊಂಬುಳ್ಳ ಅಂಗುಲೇಟ ವರ್ಗದ ಪ್ರಾಣಿಗಳ ಪೂರ್ವಜ ಆರ್ಸಿನಾಥೀರಿಯಂ ಮತ್ತು ಆನೆಯ ಪೂರ್ವಜ ಮೋರಿಥೀರಿಯಂ ಮತ್ತು ಪೇಲಿಯೊಮ್ಯಾಸ್ಟಡಾನ್‍ಗಳ ಅವಶೇಷಗಳಿವೆ. ಇವು ಬಾಹ್ರಿಯಾ ಓಯಸಿಸ್ ಬಳಿಯೂ ಪೂರ್ವ ಮರುಭೂಮಿಯಲ್ಲಿ ಕೈರೊ ಮತ್ತು ಸೂಯೆeóï ನಡುವಿನ ಕಿರಿದಾದ ಶಿಲಾಶ್ರೇಣಿಯಲ್ಲೂ ಕಂಡುಬಂದಿವೆ. ಆಲಿಗೋಸೀನ್ ಯುಗದ ಅಂತ್ಯದಲ್ಲಿ ತಲೆದೋರಿದ ಆಲ್ಪೈನ್ ಪರ್ವತಜನ್ಯ ಶಕ್ತಿಗಳ ಪ್ರಭಾವದಿಂದ ಕೆಂಪುಸಮುದ್ರದ ತಗ್ಗು ಅದರ ಇಕ್ಕೆಲಗಳಲ್ಲಿನ ಪರ್ವತಶ್ರೇಣಿಗಳೂ ಉಂಟಾದುವು. ಮಯೊಸೀನ್ ಯುಗದ ಪ್ರಾರಂಭದಲ್ಲಿ ಕೊಂಚ ಮಟ್ಟಿಗೆ ಭೂಪ್ರದೇಶ ಕುಗ್ಗಿತು. ಹೀಗಾದ ತಗ್ಗಿನಲ್ಲಿ ಸುಣ್ಣ ಶಿಲಾಪ್ರಸ್ತರಗಳು ನಿಕ್ಷೇಪವಾದುವು. ಇವನ್ನು ಮೆಡಿಟರೇನಿಯನ್ ಮತ್ತು ಸಿವಾ-ಕ್ವಾಟ್ರಾ-ಮಘಾರ ತಗ್ಗುಗಳ ಮಧ್ಯೆ, ಕೈರೋ-ಸೂಯೆeóï ನಡುವೆ ಮತ್ತು ಪಶ್ಚಿಮ ಸಿನಾಯ್‍ಗಳಲ್ಲಿ ನೋಡಬಹುದು. ಮಯೋಸೀನ್ ಯುಗದ ಸಮುದ್ರದ ಶಾಖೆಯೊಂದು ಕೆಂಪುಸಮುದ್ರದ ತಗ್ಗನ್ನು ಆವರಿಸಿ ಅಲ್ಲಿ ಜಿಪ್ಸಂ ಮತ್ತು ಡಾಲೊಮಿಟಕ್ ಸುಣ್ಣಶಿಲಾಪ್ರಸ್ತರಗಳ ನಿಕ್ಷೇಪಕ್ಕೆ ಕಾರಣವಾಯಿತು. ಈ ಯುಗದ ಅಂತ್ಯದಲ್ಲಿ ಮತ್ತೆ ಸಂಭವಿಸಿದ ಆಲ್ಟೈನ್ ಭೂಚಟುವಟಿಕೆಗಳ ದೆಸೆಯಿಂದ ಈ ಶಿಲಾಪ್ರಸ್ತರಗಳು ಅನೇಕ ಕಡೆ ತೀವ್ರವಾಗಿ ಮಡಿಕೆ ಬಿದ್ದು ಸ್ತರಭಂಗಗಳೂ ಉಂಟಾಗಿವೆ. ಹಲವು ಕಡೆ ಭೂಭಾಗಗಳು ಮೇಲಕ್ಕೆ ಒಯ್ಯಲ್ಪಟ್ಟಿವೆ. ಕ್ರಮೇಣ ನೈಲ್ ಕಣಿವೆಯ ಕಂದರವೂ ಕಾಣಿಸಿಕೊಂಡಿತು. ಈ ಎಲ್ಲ ಭೂ ಬದಲಾವಣೆಗಳು ಪ್ಲಿಯೊಸೀನ್ ಯುಗದಲ್ಲೇ ಕೊನೆಗೊಂಡುವು.

ಕೆಂಪುಸಮುದ್ರ ಬದಲಾಯಿಸಿ

ಆದರೆ ನೈಲ್ ತಗ್ಗು ಮತ್ತು ಕೆಂಪುಸಮುದ್ರದ ಹಲಕೆಲವು ಅಂಚಿನ ಪ್ರದೇಶಗಳನ್ನು ಸಮುದ್ರ ಆಕ್ರಮಿಸಿತು. ಇದರಿಂದ ವಾಡಿ-ಆನ್‍ನಾಟ್ರುಕ್ ಶಿಲಾಸಮೂಹದ ಮರಳು ಶಿಲಾಪ್ರಸ್ತರಗಳೂ ಜಿಪ್ಸಂನಿಂದ ಕೂಡಿದ ಜೇಡು ಶಿಲಾಪ್ರಸ್ತರಗಳೂ ಉಂಟಾದುವು. ಇವುಗಳಲ್ಲಿ ಮೊಸಳೆ, ನೀರುಕುದುರೆ, ಆನೆ, ಜಿರಾಫೆ ಇತ್ಯಾದಿ ಪ್ರಾಣಿಗಳ ಅವಶೇಷಗಳು ಹುದುಗಿವೆ. ಅಲ್ಲದೆ ಕೆಂಪುಸಮುದ್ರ ತೀರ ಮತ್ತು ನೈಲ್ ನದಿಯ ತೀರಪ್ರದೇಶಗಳಲ್ಲಿ 600 ಅಡಿಯಷ್ಟು ಮಂದವಾಗಿರುವ ನದೀ ನಿಕ್ಷೇಪಗಳಾದ ಪೆಂಟೆಶಿಲೆ, ನುರುಜುಶಿಲೆ ಮತ್ತು ಮರಳುಶಿಲೆಗಳ ಪ್ರಸ್ತರಗಳಿವೆ.ಪ್ಲಿಸ್ಟೊಸೀನ್ ಮತ್ತು ಈಚಿನ ಯುಗಗಳ ನಿಕ್ಷೇಪಗಳನ್ನು-ಮುಖ್ಯವಾಗಿ ಊಲೈಟ್ ಸುಣ್ಣಶಿಲಾಪ್ರಸ್ತರಗಳನ್ನು-ಅಲೆಕ್ಸಾಂಡ್ರಿಯದ ಪಶ್ಚಿಮ ಕರಾವಳಿಯಲ್ಲೂ ನುರುಜುಶಿಲೆ. ಮರಳು ಮತ್ತು ಜೇಡನ್ನು ನೈಲ್ ಕಣಿವೆಯಲ್ಲೂ ಕಾಣಬಹುದು. ಈ ಯುಗದಲ್ಲಿ ಯೂರೋಪಿನ ಬಹು ಭಾಗ ಹಿಮದ ಹಾಳೆಗಳಿಂದ ಮುಚ್ಚಿಹೋಗಿತ್ತು. ಬಹುಶಃ ಈ ವಿಪರೀತ ಶೈತ್ಯಹವೆಯ ಕಾರಣ ಈಜಿಪ್ಟ್‍ನಲ್ಲಿ ಅಧಿಕ ಮಳೆ ಮತ್ತು ಪ್ರವಾಹಗಳ ಹಾವಳಿಯುಂಟಾಯಿತು. ಇದರಿಂದ ಅಧಿಕ ಪ್ರಮಾಣದಲ್ಲಿ ಮರಳು, ನುರುಜುಶಿಲೆ ಮತ್ತು ಶಿಲಾಪೆಂಟೆಗಳು ಶೇಖರವಾಗಿ ಮತ್ತೆ ಅವುಗಳ ಮೇಲೆ ಈಗಿನ ನದೀ ಮೆಕ್ಕಲು ಶೇಖರವಾಯಿತು. ಈ ಮೆಕ್ಕಲು ಬಹುಮಟ್ಟಿಗೆ ಇಥಿಯೋಪಿಯ ಪ್ರಸ್ಥಭೂಮಿಯ ಅಗ್ನಿಶಿಲೆಗಳ ಸವೆತದಿಂದಾದುದು.

ಉಲ್ಲೇಖಗಳು ಬದಲಾಯಿಸಿ