ಇಬ್ನ್ ಕಸೀರ್
ಅಬುಲ್ ಫಿದಾ ಇಮಾದುದ್ದೀನ್ ಇಸ್ಮಾಈಲ್ ಬಿನ್ ಉಮರ್ ಬಿನ್ ಕಸೀರ್ (أبو الفداء عماد الدين إسماعيل بن عمر بن كثير) (1302 – 1373) — ಖ್ಯಾತ ಇತಿಹಾಸಕಾರ ಮತ್ತು ಕುರ್‌ಆನ್ ವ್ಯಾಖ್ಯಾನಕಾರರು. ಇಬ್ನ್ ಕಸೀರ್ ಎಂದೇ ಚಿರಪರಿಚಿತರು. ಪ್ರತಿಷ್ಠಿತ ಕುರೈಷ್ ಬುಡಕಟ್ಟಿಗೆ ಸೇರಿದವರು. ಮಮ್ಲೂಕ್ ಆಡಳಿತಕಾಲದಲ್ಲಿ ಸಿರಿಯಾದಲ್ಲಿ ವಾಸವಾಗಿದ್ದ ಇವರು 14 ಸಂಪುಟಗಳನ್ನೊಳಗೊಂಡ ಅಲ್-ಬಿದಾಯ ವನ್ನಿಹಾಯ ಎಂಬ ಜಾಗತಿಕ ಇತಿಹಾಸ ಗ್ರಂಥ ಸೇರಿದಂತೆ ತಫ್ಸೀರ್ (ಕುರ್‌ಆನ್ ವ್ಯಾಖ್ಯಾನ) ಮತ್ತು ಫಿಕ್ಹ್ (ಕರ್ಮಶಾಸ್ತ್ರ) ವಿಷಯಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಇಮಾಂ ಇಬ್ನ್ ಕಸೀರ್ | |
---|---|
ابن كثير | |
ಜನನ | 1302 ಮಿಜ್ದಲ್, ಬಸ್ರ, ಸಿರಿಯಾ |
ಮರಣ | 1373 |
ವೃತ್ತಿ | ಧಾರ್ಮಿಕ ವಿದ್ವಾಂಸ |
ಹೆಸರಾಂತ ಕೆಲಸಗಳು |
|
ಜನನ
ಬದಲಾಯಿಸಿಇಬ್ನ್ ಕಸೀರ್ ಹಿಜರಿ 701 (ಕ್ರಿ.ಶ.1302) ರಲ್ಲಿ ಬಸ್ರ ನಗರದ ಹೊರವಲಯದಲ್ಲಿರುವ ಮಿಜ್ದಲ್ ಎಂಬ ಹಳ್ಳಿಯಲ್ಲಿ ಹುಟ್ಟಿದರು. 4 ವರ್ಷ ಪ್ರಾಯವಾದಾಗ ಅವರ ತಂದೆ ನಿಧನರಾದರು. ಸಹೋದರ ಶೈಖ್ ಅಬ್ದುಲ್ ವಹ್ಹಾಬ್‌ರಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಹಿಜರಿ 706ರಲ್ಲಿ (ಕ್ರಿ.ಶ. 1307) ತಮ್ಮ 5ನೇ ವಯಸ್ಸಿನಲ್ಲಿ ಡಮಾಸ್ಕಸ್‌ಗೆ ತೆರಳಿದರು.
ವಿದ್ಯಾಭ್ಯಾಸ
ಬದಲಾಯಿಸಿ- ಶೈಖ್ ಬುರ್ಹಾನುದ್ದೀನ್ ಇಬ್ರಾಹೀಮ್ ಬಿನ್ ಅಬ್ದುರ್‍ರಹ್ಮಾನ್ ಅಲ್‌ಫಝಾರಿ (ಇಬ್ನ್ ಫರ್ಕಾಹ್) ರಿಂದ ಫಿಕ್‌ಹ್ (ಕರ್ಮಶಾಸ್ತ್ರ) ಕಲಿತರು.
- ಡಮಾಸ್ಕಸ್‌ನಲ್ಲಿ ಈಸಾ ಬಿನ್ ಮುತ್‌ಇಮ್, ಅಹ್ಮದ್ ಬಿನ್ ಅಬೂ ತಾಲಿಬ್ (ಇಬ್ನ್ ಶಿಹ್ನ), ಇಬ್ನ್ ಹಜ್ಜಾರ್, ಶಾಮ್‌ನ ಹದೀಸ್ ವಿದ್ವಾಂಸರಾದ ಬಹಾಉದ್ದೀನ್ ಅಲ್‌ಕಾಸಿಮ್ ಬಿನ್ ಮುಝಫ್ಫರ್ ಬಿನ್ ಅಸಾಕಿರ್, ಇಬ್ನ್ ಶೀರಾಝೀ, ಝಾಹಿರಿಯ್ಯಗಳ ಗುರುಗಳಾದ ಇಸ್‌ಹಾಕ್ ಬಿನ್ ಯಹ್ಯಾ ಆಮಿದಿ ಮತ್ತು ಮುಹಮ್ಮದ್ ಬಿನ್ ಝರ್‍ರಾದ್ ಮುಂತಾದವರಿಂದ ಹದೀಸ್ ಕಲಿತರು.
- ಶೈಖ್ ಜಮಾಲುದ್ದೀನ್ ಯೂಸುಫ್ ಬಿನ್ ಝಕ್ಕೀ ಅಲ್-ಮಿಝ್ಝೀ (ಮರಣ ಹಿ. 742) ರೊಡನೆ ಅವರ ಮರಣದ ತನಕ ವಿದ್ಯೆ ಕಲಿಯುತ್ತಿದ್ದರು. ಅವರಿಂದ ಜ್ಞಾನ ಪಡೆದು, ಪಾರಂಗತರಾಗಿ ನಂತರ ಅವರ ಮಗಳನ್ನು ವಿವಾಹವಾದರು.
- ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ, ಶೈಖ್ ಹಾಫಿಝ್ ಝಹಬೀ ಮುಂತಾದವರಿಂದ ಕುರ್‌ಆನ್ ಕಲಿತರು.
- ಅಬೂ ಮೂಸಾ ಕರ್‍ರಾಫೀ, ಅಬುಲ್ ಫತ್‌ಹ್ ದಬ್ಬೂಸೀ, ಅಲಿ ಬಿನ್ಉ ಮರ್ ಸವ್ವಾತೀ ಮುಂತಾದ ಈಜಿಪ್ಟಿನ ವಿದ್ವಾಂಸರಿಂದ ಇಜಾಝತ್ (ವಿದ್ಯೆ ಕಲಿಸುವ ಅನುಮತಿ) ಪಡೆದರು.
ಕೃತಿಗಳು:
ಬದಲಾಯಿಸಿ- ಸಂಪೂರ್ಣ ಕುರ್‌ಆನ್ ವ್ಯಾಖ್ಯಾನ. ಇದು ಕುರ್‌ಆನ್ ವ್ಯಾಖ್ಯಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಇದು ಅನೇಕ ಮುದ್ರಣಗಳನ್ನು ಕಂಡಿದ್ದು ಅನೇಕ ವಿದ್ವಾಂಸರು ಇದನ್ನು ಸಂಕ್ಷಿಪ್ತಗೊಳಿಸಿದ್ದಾರೆ. ವಿಶ್ವದ ಅನೇಕ ಭಾಷೆಗಳಿಗೆ ಇದು ಭಾಷಾಂತರಗೊಂಡಿದೆ.
- ಅಲ್‌ಬಿದಾಯ. ಇದು ‘ಅಲ್‌ಬಿದಾಯ ವನ್ನಿಹಾಯ’ ಎಂಬ ಹೆಸರಿನಲ್ಲಿ 14 ಸಂಪುಟಗಳಲ್ಲಿ ಮುದ್ರಣ ಕಂಡಿದೆ. ಇದರಲ್ಲಿ ಪೂರ್ವ ಪ್ರವಾದಿಗಳ, ಪೂರ್ವ ಸಮುದಾಯಗಳ ಚರಿತ್ರೆಯಿದೆ, ಮುಹಮ್ಮದ್ ಪೈಗಂಬರರ ಚರಿತ್ರೆಯಿದೆ ಮತ್ತು ಲೇಖಕರ ಕಾಲದ ವರೆಗಿನ ಇಸ್ಲಾಮೀ ಚರಿತ್ರೆಯಿದೆ. ನಂತರ ಲೇಖಕರು ‘ಅಲ್‌ಫಿತನು ವಅಶ್ರಾತು ಸ್ಸಾಅತಿ ವಲ್ ಮುಲಾಹಿಮಿ ವಅಹ್ವಾಲಿಲ್ ಆಖಿರ’ ಎಂಬ ಕೃತಿಯನ್ನು ರಚಿಸಿದರು. ಇದನ್ನು ಅನ್ನಿಹಾಯ ಎಂದು ಕರೆಯಲಾಗುತ್ತದೆ.
- ಅತ್ತಕ್ಮೀಲ್ ಫೀ ಮಅ್‌ರಿಫತಿ ಸ್ಸಿಕಾತಿ ವದ್ದುಅಫಾಇ ವಲ್ ಮಜಾಹೀಲ್. ಇದು ಅವರು ತಮ್ಮ ಇಬ್ಬರು ಗುರುಗಳಾದ ಮಿಝ್ಝೀ ಮತ್ತು ಝಹಬೀಯವರ ‘ತಹ್ಝೀಬುಲ್ ಕಮಾಲ್ ಫೀ ಅಸ್ಮಾಇ ರ್‍ರಿಜಾಲ್’ ಮತ್ತು ‘ಮೀಝಾನುಲ್ ಇಅ್‌ತಿದಾಲ್ ಫೀ ನಕ್ದಿ ರ್‍ರಿಜಾಲ್’ ಎಂಬ ಎರಡು ಕೃತಿಗಳನ್ನು ಸಂಕ್ಷಿಪ್ತಗೊಳಿಸಿ ರಚಿಸಿದ ಕೃತಿ. ಇದಕ್ಕೆ ಅವರು ಉಪಯುಕ್ತ ಹೆಚ್ಚುವರಿ ಮಾಹಿತಿಯನ್ನೂ ಸೇರಿಸಿದ್ದಾರೆ.
- ಅಹದ್ಯು ವಸ್ಸುನನು ಫೀ ಅಹಾದೀಸಿಲ್ ಮಸಾನೀದಿ ವಸ್ಸುನನ್. ಇದು ‘ಜಾಮಿಉಲ್ ಮಸಾನೀದ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇದರಲ್ಲಿ ಅವರು ಇಮಾಮ್ ಅಹ್ಮದ್ ಬಿನ್ ಹಂಬಲ್, ಬಝ್ಝಾರ್, ಅಬೂ ಯಅ್‌ಲಾ ಮೂಸುಲಿ, ಇಬ್ನ್ ಅಬೀ ಶೈಬಾ ಮುಂತಾದವರ ಮುಸ್ನದ್ ಗ್ರಂಥಗಳಿಂದ ಮತ್ತು ಸಹೀಹುಲ್ ಬುಖಾರಿ, ಸಹೀಹ್ ಮುಸ್ಲಿಮ್, ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮುಂತಾದ ಹದೀಸ್ ಗ್ರಂಥಗಳಿಂದ ಹದೀಸ್‌ಗಳನ್ನು ಆರಿಸಿ, ಅವುಗಳನ್ನು ವಿಭಿನ್ನ ಅಧ್ಯಾಯಗಳನ್ನಾಗಿ ಮಾಡಿ ರಚಿಸಿದ್ದಾರೆ.
- ತಬಕಾತು ಶ್ಶಾಫಿಇಯ್ಯ. ಇದು ಇಮಾಮ್ ಶಾಫಿಈಯವರ ಶ್ರೇಷ್ಠತೆಗಳನ್ನು ವಿವರಿಸುವ ಕೃತಿ.
- ಅದಿಲ್ಲತು ತ್ತಂಬೀಹ್ ಎಂಬ ಗ್ರಂಥದ ಹದೀಸ್‌ಗಳ ನಿಜಸ್ಥಿತಿಯನ್ನು ವಿವರಿಸುವ ಕೃತಿ.
- ಸಹೀಹುಲ್ ಬುಖಾರಿಯ ವ್ಯಾಖ್ಯಾನ. ಇದು ಪೂರ್ಣವಾಗಿಲ್ಲ.
- ಧರ್ಮಶಾಸ್ತ್ರದ ವಿಷಯದಲ್ಲಿರುವ ಬೃಹತ್ ಸಂಪುಟಗಳ ಗ್ರಂಥ. ಇದನ್ನೂ ಅವರು ಪೂರ್ಣಗೊಳಿಸಿಲ್ಲ. ಹಜ್ಜ್‌ನ ಅಧ್ಯಾಯದ ತನಕ ತಲುಪಿದ್ದರು.
- ಅಲ್‌ಬೈಹಕಿಯವರ ‘ಅಲ್‌ಮದ್ಖಲ್’ ಎಂಬ ಗ್ರಂಥದ ಸಂಕ್ಷೇಪ ಕೃತಿ.
- ಮುಖ್ತಸರ್ ಉಲೂಮಿಲ್ ಹದೀಸ್. ಇದು ಅಬೂ ಅಮ್ರ್ ಇಬ್ನ್ ಸಲಾಹ್‌ರವರ ‘ಉಲೂಮುಲ್ ಹದೀಸ್’ ಎಂಬ ಗ್ರಂಥವನ್ನು ಸಂಕ್ಷಿಪ್ತಗೊಳಿಸಿ ರಚಿಸಿದ ಕೃತಿ. ಇದು ಅನೇಕ ಮುದ್ರಣಗಳನ್ನು ಕಂಡಿದೆ.
- ಅಸ್ಸೀರತು ನ್ನಬವಿಯ್ಯ. ಸಂಕ್ಷಿಪ್ತ ಮತ್ತು ವಿವರಣಾತ್ಮಕ ರೂಪದಲ್ಲಿರುವ ಎರಡು ಕೃತಿಗಳು. ಇವೆರಡೂ ಮುದ್ರಣವನ್ನು ಕಂಡಿವೆ.
- ಜಿಹಾದ್‌ನ ವಿಷಯದಲ್ಲಿರುವ ‘ಅಲ್‌ಇಜ್ತಿಹಾದ್ ಫೀ ತಲಬಿಲ್ ಜಿಹಾದ್’ ಎಂಬ ಕೃತಿ.
ಮರಣ
ಬದಲಾಯಿಸಿಇಬ್ನ್ ಕಸೀರ್ ತಮ್ಮ ಬದುಕಿನ ಕೊನೆಯ ಕಾಲದಲ್ಲಿ ದೃಷ್ಟಿಯನ್ನು ಕಳಕೊಂಡರು. ನಂತರ ಹಿಜರಿ 774 ರಲ್ಲಿ (ಕ್ರಿ.ಶ. 1373) ಡೆಮಾಸ್ಕಸ್‌ನಲ್ಲಿ ನಿಧನರಾದರು.
ಆಧಾರ
ಬದಲಾಯಿಸಿ- ಅಲ್-ಮಿಸ್ಬಾಹುಲ್-ಮುನೀರ್ ಫೀ ತಹ್ದೀಬಿ ತಫ್ಸೀರ್ ಇಬ್ನ್ ಕಸೀರ್, ಪ್ರ. ಕೆ.ಎಸ್.ಎ. ಪಬ್ಲಿಶಿಂಗ್ ವಿಂಗ್, ಮಂಗಳೂರು.