ಆನೆಗೊಂದಿ

ಭಾರತ ದೇಶದ ಗ್ರಾಮಗಳು
(ಆನೆಗುಂದಿ ಇಂದ ಪುನರ್ನಿರ್ದೇಶಿತ)

ಆನೆಗೊಂದಿ ಕರ್ನಾಟಕ ರಾಜ್ಯಕ್ಕೆ ಸೇರಿದ ಕೊಪ್ಪಳ ಜಿಲ್ಲೆಗಂಗಾವತಿ ತಾಲ್ಲೂಕಿನಲ್ಲಿ ಹೊಸಪೇಟೆಯಿಂದ ಸುಮಾರು 16 ಕಿ.ಮೀ.ಗಳ ಮೇಲಿನ ತುಂಗಭದ್ರಾ ನದಿಯ ದಂಡೆಯಲ್ಲಿನ ಚಿಕ್ಕದೊಂದು ಗ್ರಾಮ[] . ಇದು ರಾಮಾಯಣ ಕಾಲದಲ್ಲಿ ಕಪಿರಾಜನಾದ ವಾಲಿಯ ರಾಜಧಾನಿಯಾಗಿತ್ತು ಎಂದು ಪ್ರತೀತಿ.

Anegundi (Anegondi)
ಆನೆಗುಂದಿ(ಆನೆಗೊಂದಿ)
ಕಿಷ್ಕಿಂಧಾ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕೊಪ್ಪಳ ಜಿಲ್ಲೆ
Elevation
೫೬೮ m (೧,೮೬೪ ft)
Population
 (2001)
 • Total೩,೪೯೭
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
Sex ratio1740:1757[] /
 
Brooklyn Museum - Vali and Sugriva Fighting Folio from the Dispersed Shangri Ramayana

ಇದೇ ಕಿಷ್ಕಿಂಧವೆಂದು ಪ್ರಸಿದ್ಧವಾಗಿತ್ತು. ರಾಮಚಂದ್ರ ವಾಲಿಯನ್ನು ಕೊಂದು ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟನೆಂದೂ ಸುಗ್ರೀವ ಮಂತ್ರಿಯಾದ ಹನುಮಂತನ ದೌತ್ಯದಲ್ಲಿ ಕಪಿಸೇನೆಯನ್ನು ಒಯ್ದು ರಾವಣನನ್ನು ಸಂಹರಿಸಿ ಸೀತೆಯನ್ನು ಬಂಧನದಿಂದ ಬಿಡಿಸಿಕೊಂಡು ಬಂದನೆಂದೂ ರಾಮಾಯಣದಲ್ಲಿ ಹೇಳಿದೆ. ಪರ್ವತಾವಳಿಯ ಪರಿಸರದಲ್ಲಿ ನಿಸರ್ಗದ ರಕ್ಷಣೆಯಿರುವುದರಿಂದ ಸ್ವಾಭಾವಿಕ ದುರ್ಗವಾಗಿದ್ದು, ಇದು ಬಹು ಪ್ರಾಚೀನ ಕಾಲದಿಂದಲೂ ರಾಜಧಾನಿಯಾಗಿ ಪ್ರಸಿದ್ಧಿಯನ್ನೂ ಹೊಂದಿದೆ.

ಇತಿಹಾಸ

ಬದಲಾಯಿಸಿ
 
Pampa Sarovar at Anegundi

ಯಾದವ - ಹೊಯ್ಸಳರ ಕಾಲದಲ್ಲಿ ಬೇಡರು ಅಥವಾ ವಾಲ್ಮೀಕಿ ನಾಯಕ ಸಮುದಾಯದ ಕಂಪಿಲರಾಯನೆಂಬ ಚಿಕ್ಕ ಪಾಳೆಯಗಾರ ಕುಮ್ಮಟ ದುರ್ಗದ ರಾಜಧಾನಿಯಿಂದ ಆನೆಗೊಂದಿ ರಾಜ್ಯವನ್ನಾಳುತ್ತಿದ್ದ. ಅಲ್ಲಾವುದ್ದೀನ್‍ಖಿಲ್ಜಿಯ ದಂಡನಾಯಕನಾದ ಮಲ್ಲಿಕಾಫರ ಹೊಯ್ಸಳ ಯಾದವ ಕಾಕತೀಯ ರಾಜರನ್ನು ಸೋಲಿಸಿ ಇಡೀ ಹಿಂದೂಸ್ತಾನವನ್ನು ಪಾದಾಕ್ರಾಂತವಾಗಿ ಮಾಡಬೇಕೆಂದು ಹವಣಿಸಿದಾಗ ಕಂಪಿಲರಾಯ ಕುಮಾರರಾಮನೆಂಬ ತನ್ನ ಮಗನೊಂದಿಗೆ ಆ ದಂಡನಾಯಕನನ್ನು ಸೋಲಿಸಿ ವಿಫಲ ಪ್ರಯತ್ನನನ್ನಾಗಿ ಮಾಡಿದ. ಕಡಗೆ ಮಲ್ಲಿಕಾಫರ್ ಮೋಸದಿಂದ ಕಂಪಿಲರಾಯನನ್ನು ಬಂಧಿಸಿ ದಿಲ್ಲಿಗೆ ಒಯ್ದನೆಂದೂ ಮುಸಲ್ಮಾನ ಇತಿಹಾಸಕಾರರು ಬರೆದಿದ್ದಾರೆ. ಅವನ ಜೊತೆಯಲ್ಲಿ ಬೊಕ್ಕಸಿಗರಾಗಿದ್ದ ವಾಲ್ಮೀಕಿ ಕುಲದ ಸಂಗಮನ ಮಕ್ಕಳಾದ ಹಕ್ಕಬುಕ್ಕರು ಯುಕ್ತಿಯಿಂದಲೂ ಬಾಹುಬಲದಿಂದಲೂ ದೊಡ್ಡ ಸೈನ್ಯವನ್ನು ಶೇಖರಿಸಿ ಮಲ್ಲಿಕಾಫರ್‍ನ ಪ್ರತಿನಿಧಿಯನ್ನು ಹೊಡೆದೋಡಿಸಿ ಆನೆಗೊಂದಿಯ ಹತ್ತಿರ ವಿಜಯನಗರವನ್ನು (ವಿದ್ಯಾನಗರ) ಕಟ್ಟಿ, ಹೊಸದೊಂದು ರಾಜ್ಯವನ್ನು ಸ್ಥಾಪಿಸಿ ಮುಸಲ್ಮಾನರ ಆಕ್ರಮಣವನ್ನು ತಡೆದರು. ಎರಡನೆಯ ದೇವರಾಯನ ಕಾಲದಲ್ಲಿ ಈ ವಿದ್ಯಾನಗರ ಆನೆಗೊಂದಿಯನ್ನೊಳಗೊಂಡು ಜಗತ್ತಿನಲ್ಲಿಯೇ ಅತ್ಯಂತ ವಿಸ್ತಾರವುಳ್ಳ (20 ಕಿ.ಮೀ.) ಶ್ರೀಮಂತ ರಾಜಧಾನಿಯೆಂದೂ ಪ್ರಸಿದ್ಧವಾಗಿತ್ತು. ತುಳು ವಂಶದ ಕೃಷ್ಣದೇವರಾಯನ ಕಾಲದಲ್ಲಿಯಂತೂ ಇದರ ವೈಭವ ನಭೂತೋ ನಭವಿಷ್ಯತಿಯಾಗಿತ್ತು. ತುಂಗಭದ್ರಾ ನದಿಯ ದಂಡೆಯ ಮೇಲೆ ಸೆನಗೊಂದ್ಯಂ (ಆನೆಗೊಂದಿ) ಎಂಬ ಪಟ್ಟಣವಿತ್ತು. ಅದು ಪೂರ್ವಕಾಲದಲ್ಲಿ ರಾಜಧಾನಿಯಾಗಿತ್ತು. ಈಗಲೂ ಅದರ ಕೋಟೆಕೊತ್ತಳೆಗಳನ್ನು ಕಾಣಬಹುದು ಎಂದು ಪೇಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ 1530ರಲ್ಲಿ ಬರೆದಿದ್ದಾನೆ. ವಿಜಯನಗರದ ಪತನಾನಂತರ ಆನೆಗೊಂದಿಯಲ್ಲಿ ಚಿಕ್ಕಜಮನೆತನವೊಂದು ಆಳುತ್ತಿತ್ತು.

ಆನೆಗೊಂದಿ ಭೂಸುಧಾರಣಾ ನೀತಿ ಉಲೇಖಾರ್ಹವಾಗಿದೆ. ಕೃಷ್ಣದೇವರಾಯ ತನ್ನ ಮಂತ್ರಿಯಾದ ಅಪ್ಪಾಜಿಯ ಸಹಕಾರದಿಂದ ಭೂಮಿಯನ್ನು ರಾಯರೇಖಾ ಎಳೆಯುವುದರ ಮೂಲಕ ಅಳತೆ ಮಾಡಿದ, ಕಂದಾಯ ಮಾಡಿದ. ಈ ಪದ್ಧತಿಯನ್ನು ಮುಂದಿನ ಅನೇಕರು ತಮ್ಮ ರಾಜ್ಯಗಳಲ್ಲಿ ಜಾರಿಗೆ ತಂದರು. 1896ರಲ್ಲಿ ಭೂಸುಧಾರಣೆಗೆ ಕೈಹಾಕಿದ ಇಂಗ್ಲೀಷ್ ಅಧಿಕಾರಿಗಳು ಆನೆಗೊಂದಿಯ ವಿಧಾನವನ್ನು ಕೊಂಡಾಡಿದ್ದಾರೆ.

ಆಂಜನಾದ್ರಿ ದೇವಸ್ಥಾನ

ಬದಲಾಯಿಸಿ

೫೭೫ ಮೆಟ್ಟಿಲುಗಳನ್ನು ಹತ್ತಿದ ನಂತರ ಇಲ್ಲಿ ಈ ಬೆಟ್ಟದ ಮೇಲೆ ಆಂಜನೇಯನ ದೇವಸ್ಥಾನವಿದೆ. ಕಲ್ಲು ಬಂಡೆಗಳ ತುದಿಯಲ್ಲಿ ಈ ದೇವಸ್ಥಾನವಿದ್ದು ಇಲ್ಲಿ ಅಂಜನೇಯನ ಕಲ್ಲಿನ ವಿಗ್ರಹವನ್ನು ಇರಿಸಲಾಗಿದೆ. ಹಾಗೆ ಇಲ್ಲಿ ನೀರಿನ ಮೇಲೆ ತೇಲುವ ಕಲ್ಲು ಸಹ ಕಾಣಸಿಗುತ್ತದೆ. ಈ ಕಲ್ಲಿನ ಮೇಲೆ 'ಶ್ರೀರಾಮ' ಎಂದು ಬರೆದಿರುವುದು ನಾವು ನೋಡಬಹುದು. ಈ ದೇವಸ್ಥಾನದಲ್ಲಿ ಮಧ್ಯಾನ ಭಕ್ತಾದಿಗಳಿಗಾಗಿ ಪ್ರಸಾದವಾಗಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪ್ರದೇಶವು ಹಂಪಿಯ ಭಾಗವಾಗಿದೆ. ಇಲ್ಲಿನಿಂದ ಸುತ್ತಮುತ್ತಲಿನ ಹಂಪಿಯ ಬೇರೆ ಪ್ರದೇಶಗಳನ್ನು ಕಾಣಬಹುದು.[][]


ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ
 
Kishkindha Old Bridge at Anegundi
 
Anjaneya Parvat the hill, birthplace of Hanuman near Pampa

ಇಲ್ಲಿನ ಶೇಷಶಾಯಿ ಗುಹಾಂತರ ವಿಷ್ಣುವಿಗ್ರಹ ಪ್ರಸಿದ್ಧವಿದೆ. ಇಲ್ಲಿಯ ಹುಚ್ಚುಪ್ಪಯ್ಯನ ಮಠ, ಗಗನ ಮಹಲ್, ಗುತಂಗನಾಥಸ್ವಾಮಿ ದೇವಾಲಯ, ಪಾಳುಬಿದ್ದಿರುವ ಅರಮನೆ ಇವು ಸು. 16 - 17ನೆಯ ಶತಮಾನಕ್ಕಿಂತ ಈಚಿನವು. ಹತ್ತಿರವೇ ಮಾಧ್ವಯತಿಗಳ ಒಂಬತ್ತು ವೃಂದಾವನಗಳಿದ್ದು ಆ ಗುಂಪಿಗೆ ನವವೃಂದಾವನವೆಂಬ ಹೆಸರು ಉಂಟು.

ಉಲ್ಲೇಖಗಳು

ಬದಲಾಯಿಸಿ
  1. "View Population". Office of the Registrar General & Census Commissioner, India.
  2. "The Hindu - Anegundi bracing itself to charm tourists". Archived from the original on 2007-04-21. Retrieved 2016-04-19.
  3. https://www.lonelyplanet.com/india/anegundi/attractions/hanuman-temple/a/poi-sig/476348/1329539
  4. "ಆರ್ಕೈವ್ ನಕಲು". Archived from the original on 2018-06-29. Retrieved 2018-07-07.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: