ಪೀಠಿಕೆಸಂಪಾದಿಸಿ

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ಧವಾಗಿರುವ ಆಗುಂಬೆ ಹಲವು ಅದ್ಭುತಗಳ ಆಗರ. ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಬೆಸೆಯುವ ಆಗುಂಬೆ ಘಾಟಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಅತ್ಯಂತ ಕಡಿದಾದ ಹಾಗೂ ಕಿರುದಾದ ತಿರುವುಗಳನ್ನು ಒಳಗೊಂಡ ಆಗುಂಬೆ ಘಾಟಿಯಲ್ಲಿ ಒಟ್ಟು ಹದಿನಾಲ್ಕು ತಿರುವುಗಳಿದ್ದು, ಮೇಲ್ಭಾಗದ ಏಳು ಸುತ್ತುಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ, ಕೆಳಗಿನ ಏಳು ಸುತ್ತುಗಳು ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರುತ್ತವೆ. ಆಗುಂಬೆ ಘಾಟಿಯು ಅಪರೂಪದ ವನ್ಯಸಂಪತ್ತಿನ ತಾಣವಾಗಿದೆ. ಇಲ್ಲಿ ಹಲವು ಬಗೆಯ ಅಪರೂಪದ ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳನ್ನು ಕಾಣಬಹುದು. ಸಿಂಗಳೀಕ, ಸಿಂಹ ಬಾಲದ ಕೋತಿ, ಕೆಂಜಳಿಲು ಸೇರಿದಂತೆ ಅಳಿವಿನಂಚಿನಲ್ಲಿರುವ ಕೆಲ ಜೀವ ಪ್ರಬೇಧಗಳೂ ಇಲ್ಲಿ ನೆಲೆಸಿವೆ. ಆಗುಂಬೆ ಘಾಟಿಯಲ್ಲಿ ನಿಂತರೆ ಹಸಿರು ಹೊದ್ದ ಪರ್ವತ ಶ್ರೇಣಿಯಿಂದ ಹಿಡಿದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳ ಪಕ್ಷಿನೋಟವನ್ನು ಕಾಣಬಹುದು.

ಆನೆಕಲ್ಲುಸಂಪಾದಿಸಿ

ಆಗುಂಬೆ ಘಾಟಿಯ ಮೂರನೇ ಸುತ್ತಿನಲ್ಲಿ (ಕೆಳಗಿನಿಂದ) ಆನೆಕಲ್ಲು ಎಂದು ಗುರುತಿಸಲಾದ ರಸ್ತೆಗೆ ಚಾಚಿಕೊಂಡಿರುವ ಬೃಹದಾಕಾರದ ಬಂಡೆಕಲ್ಲು ಸಿಗುತ್ತದೆ. ದೂರದಿಂದ ನೋಡಲು ಆನೆಯ ಮುಖದ ಆಕಾರವಿರುವ ಕಾರಣ ಆ ಬಂಡೆಗೆ ಆನೆಕಲ್ಲು ಎಂಬ ಹೆಸರು ಬಂತೆಂಬ ಪ್ರತೀತಿ ಇದೆ. ಹಾಗೂ ಆನೆಕಲ್ಲು ಭೂಮಿಯ ಒಳಗೂ ಚಾಚಿಕೊಂಡಿರುವುದರಿಂದ ಬಂಡೆಯನ್ನು ತೆರವುಗೊಳಿಸಿದರೆ ರಸ್ತೆ ಕುಸಿತ ಉಂಟಾಗಬಹುದೆಂಬ ಕಾರಣಕ್ಕೆ ಅದನ್ನು ಹಾಗೆಯೇ ಬಿಡಲಾಗಿದೆ. ಆಗುಂಬೆ ಘಾಟಿಯಲ್ಲಿ ಪ್ರತಿನಿತ್ಯ ಐವತ್ತಕ್ಕೂ ಅಧಿಕ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಓಡಾಡುತ್ತವಾದರೂ ಇವುಗಳೆಲ್ಲವೂ ಮಿನಿ ಬಸ್ಸುಗಳೆಂಬುದು ಇಲ್ಲಿಯ ವಿಶೇಷ. ೨೦೧೭ ನೇ ಇಸವಿಯ ತನಕ ಈ ಮಾರ್ಗದಲ್ಲಿ ಕೇವಲ ಖಾಸಗಿ ಬಸ್ಸುಗಳು ಮಾತ್ರ ಓಡಾಡುತ್ತಿದ್ದು ಅನಂತರ ಮಿನಿ ಬಸ್ ಮಾದರಿಯ ಸರ್ಕಾರಿ ಬಸ್ಸುಗಳ ಓಡಾಟ ಆರಂಭವಾಯಿತು. ಭಾರೀ ತೂಕದ ವಾಹನಗಳ ಓಡಾಟಕ್ಕೆ ಆಗುಂಬೆ ಘಾಟಿಯಲ್ಲಿ ಅನುಮತಿಯಿಲ್ಲ. ಘಾಟಿಯಲ್ಲಿ ಹೇರ್ ಪಿನ್ ತಿರುವುಗಳು ಇರುವುದರಿಂದ ವಾಹನ ಅಪಘಾತದ ಸಾಧ್ಯತೆ ಅಧಿಕವಾಗಿದ್ದು ಅತಿ ವೇಗದ ಚಾಲನೆ ಅತ್ಯಂತ ಅಪಾಯಕಾರಿ. ಈ ಅಪಾಯವನ್ನು ಮನಗಂಡು ರಸ್ತೆಯನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ತಿರುವುಗಳಲ್ಲಿ ಕೆಳಗಿನಿಂದ ಮೇಲೆ ಸಾಗುವ ವಾಹನಗಳಿಗೆ ಅವಕಾಶ ನೀಡಬೇಕೆಂಬ ನಿಯಮವಿದೆ. ಮಳೆಗಾಲದ ಸಂದರ್ಭದಲ್ಲಿ ದಟ್ಟ ಮಂಜು ಮುಸುಕುವ ಕಾರಣ ವಾಹನ ಚಲಾಯಿಸುವುದು ಅತ್ಯಂತ ಕಷ್ಟದ ಕೆಲಸ. ಅಂತಹ ಸಂದರ್ಭದಲ್ಲಿ ಅಜಾಗರೂಕರಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಳು ಕಿಲೋ ಮೀಟರ್ ಉದ್ದವಿರುವ ಆಗುಂಬೆ ಘಾಟಿಯ ಮೇಲ್ಭಾಗದಲ್ಲಿ ಸಂಜೆಯ ವೇಳೆ ನಿಂತರೆ ಸೂರ್ಯಾಸ್ತಮಾನದ ದೃಶ್ಯ ಕಾಣಬಹುದು. ಸೂರ್ಯಾಸ್ತಮಾನವನ್ನು ಸವಿಯಲು ಸೂಕ್ತ ಜಾಗವನ್ನು ನಿರ್ಮಿಸಲಾಗಿದ್ದು ಯಾವುದೇ ಪ್ರವೇಶ ಶುಲ್ಕವಿಲ್ಲದೇ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಸಂಪೂರ್ಣ ಮಂಜು ಕವಿಯುವ ಕಾರಣ ಜೂನ್‌ನಿಂದ ಅಕ್ಟೋಬರ್ ತಿಂಗಳ ತನಕ ಸೂರ್ಯಾಸ್ತದ ದೃಶ್ಯ ಕಾಣುವುದು ಕಷ್ಟಸಾಧ್ಯ.

ಕೊಳಸಂಪಾದಿಸಿ

ಘಾಟಿ ಆರಂಭವಾಗುವ ಮೊದಲು ಮೇಲ್ಭಾಗದಲ್ಲಿ ಈಜು ಕೊಳವಿದ್ದು ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಗುಂಬೆಯ ಸೂರ್ಯಸ್ತಮಾನ, ಅಧಿಕ ಮಳೆ, ದಟ್ಟ ಮಂಜು, ಚಳಿ ಇವಿಷ್ಟನ್ನೇ ತಿಳಿದ ಪ್ರವಾಸಿಗರಿಗೆ ಆಗುಂಬೆಗೆ ಬಂದರೆ ಇನ್ನಷ್ಟು ಅಚ್ಚರಿಗಳು ತೆರೆದುಕೊಳ್ಳುತ್ತವೆ. ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಅಧ್ಯಯನ ಕೇಂದ್ರವೂ ಇದ್ದು, ದೇಶ, ವಿದೇಶಗಳಿಂದ ಆಗಮಿಸುವ ಉರಗಪ್ರಿಯರು ಇಲ್ಲಿ ಕಾಳಿಂಗ ಸರ್ಪಗಳ ಜೀವನಶೈಲಿ ಸೇರಿದಂತೆ ಹಲವು ವಿಶೇಷ ಮಾಹಿತಿಗಳನ್ನು ಪಡೆಯಬಹುದು. ಆಗುಂಬೆ ಘಾಟಿಯ ಸುತ್ತಮುತ್ತ ಇರುವ ಜಲಪಾತಗಳು ಸಹ ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ಒನಕೆ ಅಬ್ಬಿ, ಬರ್ಕಣ, ಜೋಗಿಗುಂಡಿ ಎಂಬ ಜಲಪಾತಗಳು ಆಗುಂಬೆಯ ಸುತ್ತಮುತ್ತಲಿವೆ.

ಪರಿಸರವಾದಸಂಪಾದಿಸಿ

ಆಗುಂಬೆ ಘಾಟಿಯ ರಸ್ತೆ ಅಗಲೀಕರಣ ಆಗಬೇಕೆಂಬುದು ದಶಕಗಳ ಆಗ್ರಹ. ಆದರೆ, ಇದಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು ರಸ್ತೆ ಅಗಲೀಕರಣದಿಂದ ಅಪರೂಪದ ಸಸ್ಯ ಪ್ರಬೇಧಗಳು ಹಾಗೂ ಪ್ರಾಣಿಗಳ ಆವಾಸಸ್ಥಾನಕ್ಕೆ ತೊಂದರೆಯಾಗುವುದರಿಂದ ರಸ್ತೆ ಅಗಲೀಕರಣ ಆಗಬಾರದು ಎಂದು ಪಟ್ಟುಹಿಡಿದಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅತ್ಯಾಧುನಿಕ ಜಪಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಆಗುಂಬೆ ಘಾಟಿ ಸಂಪರ್ಕ ಕಲ್ಪಿಸುವ ಊರುಗಳಿಗೆ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದು ಕೇಳಿಬರುತ್ತಿದೆ. ಆದರೆ ಆಗುಂಬೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವುದರಿಂದ ಸುರಂಗ ಮಾರ್ಗದಂತಹ ಯೋಜನೆಗಳು ಅಪಾಯಕಾರಿ ಎಂಬ ವಾದವೂ ಇದೆ.

ಉಲ್ಲೇಖಗಳುಸಂಪಾದಿಸಿ

  1. https://www.tripadvisor.in/Attraction_Review-g2370709-d8145937-Reviews-Agumbe_Ghat-Agumbe_Shimoga_District_Karnataka.html
  2. https://www.deccanherald.com/content/368373/of-hairpin-bends-sharp-curves.html
  3. https://www.google.com/search?q=agumbe+ghat+hairpin+bends&sa=X&biw=1536&bih=763&tbm=isch&source=iu&ictx=1&fir=w41dL81eLYJ_fM%253A%252CalOMKWDBFWyS1M%252C_&vet=1&usg=AI4_-kQuZDfsP_fLR_Famx38HgjEHT1-sg&ved=2ahUKEwjlzYuiu6PnAhWUzTgGHcB6B3gQ9QEwGXoECAYQIQ#imgrc=w41dL81eLYJ_fM: