ಆಂತೋಸಯನಿನ್‍ಗಳು ನೈಸರ್ಗಿಕ ಸಸ್ಯಜನ್ಯ ವರ್ಣದ್ರವ್ಯಗಳು. ರಾಸಾಯನಿಕವಾಗಿ ಗ್ಲೈಕೊಸೈಡುಗಳೆಂಬ ವರ್ಗಕ್ಕೆ ಸೇರಿದ ಸಂಯುಕ್ತಗಳು. ಇವುಗಳಲ್ಲಿ ಸಕ್ಕರೆಯ ಭಾಗವೊಂದಿರುತ್ತದೆ. ಉಳಿದ ಭಾಗವೇ ಬಣ್ಣವನ್ನುಂಟುಮಾಡಲು ಕಾರಣ. ಆಂತೋಸಯನಿನ್‍ಗಳು ಸಸ್ಯದ ಜೀವರಸದಲ್ಲಿದ್ದುಕೊಂಡು, ಹೂಗಳ ವರ್ಣವೈವಿಧ್ಯಕ್ಕೆ ಮುಖ್ಯವಾಗಿ ಕೆಂಪು, ನೀಲಿ ಮತ್ತು ನೇರಳೆ ಬಣ್ಣಗಳು ಮತ್ತು ಅವುಗಳ ಎಲ್ಲ-ಛಾಯೆಗಳಿಗೆ ಕಾರಣವಾಗಿವೆ.[]

ನೇರಳೆ ಹೂಕೋಸಿನಲ್ಲಿ ಆಂತೋಸಯನಿನ್‍ಗಳಿರುತ್ತವೆ.

ಆಂತೋಸಯನಿನ್‍ಗಳ ಗುಣಗಳು

ಬದಲಾಯಿಸಿ

ವಿಲ್‍ಸ್ಟೆಟರ್ ಮತ್ತು ಸಹೋದ್ಯೋಗಿಗಳ ನಿರಂತರ ಶ್ರಮದಿಂದ ಕೆಳಕಂಡ ಅಂಶಗಳು ಸ್ಥಿರಪಟ್ಟಿವೆ:

i) ಹೂಗಳಲ್ಲಿ ತೋರಿಬರುವ ಎಲ್ಲ ಬಣ್ಣಗಳಿಗೂ ಮತ್ತು ಅವುಗಳ ಛಾಯೆಗಳಿಗೂ ಕೆಲವು ಸಂಯುಕ್ತಗಳು ಮಾತ್ರ ಕಾರಣ;

ii) ಈ ಬಣ್ಣಕಾರಕ ಸಂಯುಕ್ತಗಳಲ್ಲಿ ಇರುವ ಇಂಗಾಲದ ಚೌಕಟ್ಟು ಒಂದೇ ಆಗಿರುತ್ತದೆ;

iii) ಆ ಚೌಕಟ್ಟಿನಲ್ಲಿ ನಿರ್ದಿಷ್ಟಸ್ಥಾನಗಳಲ್ಲಿರುವ ಗುಂಪುಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.

ಆಂತೋಸಯನಿನ್‍ಗಳು ಆಂಫೊಟೆರಿಕ್ ವಸ್ತುಗಳಾದ್ದರಿಂದ ಆಮ್ಲೀಯ ಮತ್ತು[] ಪ್ರತ್ಯಾಮ್ಲೀಯ ಸ್ವಭಾವಗಳೆರಡನ್ನೂ ಪ್ರದರ್ಶಿಸುತ್ತವೆ. ಸಾಮಾನ್ಯವಾಗಿ ಅವುಗಳ ಆಮ್ಲೀಯ ಲವಣಗಳು ಕೆಂಪಾಗಿಯೂ ಲೋಹ ಲವಣಗಳು ನೀಲಿಯಾಗಿಯೂ ಮತ್ತು ತಟಸ್ಥ ವಾತಾವರಣವಿರುವ ದ್ರಾವಣದಲ್ಲಿ ನೇರಳೆ ಬಣ್ಣವನ್ನೂ ಹೊಂದಿರುತ್ತವೆ.

ಆಂತೋಸಯನಿನ್‍ಗಳಲ್ಲಿನ ಘಟಕಾಂಶಗಳು

ಬದಲಾಯಿಸಿ

ಆಂತೋಸಯನಿನ್‍ಗಳಲ್ಲಿರುವ ಸಕ್ಕರೆಯ ಭಾಗ ಸಾಮಾನ್ಯವಾಗಿ ಗ್ಲೂಕೋಸ್, ಗ್ಯಾಲಕ್ಟೋಸ್ ಅಥವಾ ರ್‍ಯಾಮ್ನೋಸ್ ಆಗಿರುತ್ತದೆ. ಕೆಲವು ವರ್ಣದ್ರವ್ಯಗಳಲ್ಲಿ ಆಮ್ಲೀಯ ಭಾಗವೂ ಇರುವುದುಂಟು. ಆಂತೋಸಯನಿನ್‍ಗಳಲ್ಲಿರುವ ಆಮ್ಲಗಳೆಂದರೆ, ಮೆಲೋನಿಕ್, ಪ್ಯಾರಾಹೈಡ್ರಾಕ್ಸಿ ಬೆಂಜೋಯಿಕ್, ಪ್ಯಾರಾಹೈಡ್ರಾಕ್ಸಿ ಸಿನಮಿಕ್ ಮತ್ತು ಪ್ಯಾರಾಕುಮರಿಕ್ ಆಮ್ಲಗಳು. ಆಮ್ಲೀಯ ಭಾಗ ಫೀನಾಲಿಕ್ ಹೈಡ್ರಾಕ್ಸಿಲ್ ಗುಂಪಿಗೆ ಅಥವಾ ಸಕ್ಕರೆಯ ಭಾಗಕ್ಕೆ ಜೋಡಣೆಯಾಗಿರುತ್ತದೆ.

ಆಂತೋಸಯನಿಡಿನ್‍ಗಳಿಗೆ ಸಕ್ಕರೆ ಅಂಶ ಸೇರಿಸಿದರೆ ಆಂತೋಸಯನಿನ್‍ಗಳು ಉತ್ಪತ್ತಿಯಾಗುತ್ತವೆ.[] ಆಂತೋಸಯನಿಡಿನ್‍ಗಳನ್ನು ಬೇರ್ಪಡಿಸದೆ ಅವುಗಳನ್ನು ಗುರುತಿಸಲು, ರಾಬಿನ್‍ಸನ್ ಅನೇಕ ಗುಣ ಪ್ರಯೋಗಗಳನ್ನು ಬಳಕೆಗೆ ತಂದಿದ್ದಾನೆ. ಅವು ಹೀಗಿವೆ:

i) ಅಲ್ಪ ಪ್ರಮಾಣದ ಫೆರಿಕ್ ಕ್ಲೋರೈಡ್ ಇರುವ ಸೋಡಿಯಂ ಅಸಿಟೇಟಿನ ಸಮಕ್ಷಮದಲ್ಲಿ, ಅಮೈಲ್ ಆಲ್ಕೋಹಾಲ್‍ನಲ್ಲಿ ವರ್ಣದ್ರವ್ಯವನ್ನೂ ವಿಲೀನ ಮಾಡಿದರೆ, ಸಯನಿಡಿನ್ ನೀಲಿ ಬಣ್ಣವನ್ನೂ ಡೆಲಿನಿಡಿನ್ ಅದಕ್ಕಿಂತ ತಿಳಿಯಾದ ನೀಲಿ ಬಣ್ಣವನ್ನು ಕೊಡುತ್ತದೆ. ಇತರ ಸಂದರ್ಭಗಳಲ್ಲಿ ಇನ್ನೂ ಮಾಸಲು ನೀಲಿ ಬರಬಹುದು. ಅಥವಾ ಬಣ್ಣವೇ ಬಾರದಿರಬಹುದು;

ii) ವರ್ಣದ್ರವ್ಯವನ್ನು ಇನ್ನೂ ದುರ್ಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ವಿಲೀನಗೊಳಿಸಿ ಗಾಳಿಯೊಡನೆ ಕುಲುಕಿದಾಗ ಡೆಲ್ಫನಿಡಿನ್ ಮಾತ್ರ ಬಣ್ಣ ಕಳೆದುಕೊಳ್ಳವುದು;

iii) ವರ್ಣವಿವರಣಾ ತಂತ್ರವನ್ನು (ಕ್ರೊಮಟಾಗ್ರಫಿ) ಉಪಯೋಗಿಸುವುದೂ ರೂಢಿಯಲ್ಲಿದೆ;

iv) ಆಂತೋಸಯನಿನ್‍ಗಳ ರೋಹಿತ 5000-5500 ಆ. ಪರಿಮಿತಿಯಲ್ಲಿ ಒಂದೇ ತೆರನಾಗಿರುತ್ತದೆ. ಆದರೆ ಕೆಲವು ಆಂತೋಸಯನಿನ್‍ಗಳ ದ್ರಾವಣಕ್ಕೆ ಅಲ್ಯೂಮಿನಿಯಂ ಕ್ಲೋರೈಡ್ ಸೇರಿಸಿದಾಗ, ಅವುಗಳ ಪರಮಾವಧಿ ಹೀರಿಕೆಯ ಎಲ್ಲೆ (ಅಬ್ಸಾರ್ಪ್ಷನ್ ಮ್ಯಾಕ್ಸಿಮಮ್) ಸ್ಥಳಾಂತರಗೊಳ್ಳುವುದೆಂದು ಗೈಸ್‍ಮನ್ ಮತ್ತು ಸಂಗಡಿಗರು ತೋರಿಸಿಕೊಟ್ಟಿದ್ದಾರೆ. 3':4' ಸ್ಥಾನಗಳಲ್ಲಿ ಬಿಡಿ ಹೈಡ್ರಾಕ್ಸಿಲ್ ಗುಂಪುಗಳನ್ನು ಹೊಂದಿರುವ ಆಂತೋಸಯನಿನ್‍ಗಳ ವರ್ಣಪಟಲದಲ್ಲಿ ಮಾತ್ರ ಈ ಸ್ಥಳಾಂತರ ವ್ಯಕ್ತವಾಗುತ್ತದೆ. ಆದ್ದರಿಂದ ಈ ಫಲಿತಾಂಶ ಆಂತೋಸಯನಿನ್‍ಗಳ ಮಿಶ್ರಣದ ವಿಶ್ಲೇಷಣೆಯಲ್ಲಿ ಸಹಕಾರಿಯಾಗಬಹುದು.

ಆಂತೋಸಯನಿಡಿನ್‍ಗಳೆಲ್ಲವೂ 3:5:7 ಟ್ರೈಹೈಡ್ರಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡಿನಿಂದ ಆದುವುಗಳು.

ಮುಖ್ಯವಾದ ಆಂತೋಸಯನಿಡಿನ್‍ಗಳು

ಬದಲಾಯಿಸಿ

ಕೆಲವು ಮುಖ್ಯವಾದ ಆಂತೋಸಯನಿಡಿನ್‍ಗಳನ್ನು ಕೆಳಗೆ ಪಟ್ಟಿ ಮಾಡಿದೆ.

ಸಂಕ್ಷಿಪ್ತ ನಾಮ ರಾಸಾಯನಿಕ ನಾಮ ಪ್ರಸರಣ
ಪೆಲಾರ್ಗೋನಿಡಿನ್ 3:4':5:7 ಟೆಟ್ರ ಹೈಡ್ರಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡ್ ಕಿತ್ತಳೆ ಮತ್ತು ಕೇಸರಿ ಬಣ್ಣಗಳ ಹೂಗಳಲ್ಲಿ
ಸಯನಿಡಿನ್ 3:3':4':5:7 ಪೆಂಟ ಹೈಡ್ರಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡ್ ಕಡುಗೆಂಪು ಮತ್ತು ನೀಲಿ ಮಿಶ್ರಿತ ಕೆಂಪು ಹೂಗಳಲ್ಲಿ ಉದಾ: ಕೆಂಪು ಗುಲಾಬಿ
ಡೆಲ್ಫಿನಿಡಿನ್ 5:5:'7 ಹೆಕ್ಸ ಹೈಡ್ರಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡ್ ನೇರಳೆ ಮತ್ತು ನೀಲಿ ಬಣ್ಣದ ಹೂಗಳಲ್ಲಿ
ಪಿಯೊನಿಡಿನ್ 3:4':5:7 ಟೆಟ್ರ ಹೈಡ್ರಾಕ್ಸಿ 3'-ಮೀಥಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡ್ ಸಯನಿಡಿನ್ ವರ್ಗಕ್ಕಿಂತ ತಿಳಿ ನೀಲಿ ಬಣ್ಣವಿರುವ ಹೂಗಳಲ್ಲಿ
ಮ್ಯಾಲ್ವಿಡಿನ್ (ಸಿರಿಂಜಿಡಿನ್) 3:4':5:7 ಟೆಟ್ರ ಹೈಡ್ರಾಕ್ಸಿ 3':5': ಡೈಮೀಥಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡ್ ಡೆಲ್ಫಿನಿಡಿನ್ ವರ್ಗಕ್ಕಿಂತ ತಿಳಿ ನೀಲಿ ಬಣ್ಣದ ಹೂಗಳಲ್ಲಿ
ಹಿರ್ಸೂಟಿಡಿನ್ 3:4':5 ಟ್ರೈ ಹೈಡ್ರಾಕ್ಸಿ 3':5':7 ಟ್ರೈಮೀಥಾಕ್ಸಿ ಫ್ಲ್ಯಾವಿಲಿಯಂ ಕ್ಲೋರೈಡ್ ಪ್ರಿಮ್ಯೂಲ ಹಿರ್ಸೂಟ ಜಾತಿಯ ಹೂಗಳಲ್ಲಿ

ಆಂತೋಸಯನಿಡಿನ್‍ಗಳ ರಚನಾವಿನ್ಯಾಸ ನಿರ್ಣಯ

ಬದಲಾಯಿಸಿ

ಅಂತೋಸಯನಿನ್‍ಗೆ ಹೈಡ್ರೊಕ್ಲೋರಿಕ್ ಆಮ್ಲವನ್ನು ಸೇರಿಸಿದರೆ, ಅದರಲ್ಲಿರುವ ಆಂತೋಸಯನಿಡಿನ್ ಅದರ ಕ್ಲೋರೈಡ್ ಆಗುವುದು. ಇದನ್ನು ಅನಂತರ ಬೇರ್ಪಡಿಸಲಾಗುವುದು. ರೂಢಿಯಲ್ಲಿರುವ ವಿಶ್ಲೇಷಣಾ ವಿಧಾನಗಳಿಂದ ಅಣುವಿನಲ್ಲಿ ಹೈಡ್ರಾಕ್ಸಿಲ್ (-OH. ಮೀಥಾಕ್ಸಿಲ್ (-OCH3 ಗುಂಪುಗಳ ಸಂಖ್ಯೆಯನ್ನು ನಿರ್ಧರಿಸುವರು). ಅನಂತರ 10% ಪ್ರಬಲತೆಯ ಬೇರಿಯಂ ಹೈಡ್ರಾಕ್ಸೆಡ್ ದ್ರಾವಣ ಅಥವಾ ಹೈಡ್ರೊಜನ್ನಿನ ಸಂಪರ್ಕದಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದೊಡನೆ ಆಂತೋಸಯನಿಡಿನ್ನನ್ನು ಕುದಿಸಲಾಗುವುದು. ಉತ್ಪನ್ನವಸ್ತುಗಳನ್ನು ಪರಿಶೀಲಿಸಿದರೆ ಮೂಲಾಣುವಿನ ರಚನಾವಿನ್ಯಾಸದ ಚಿತ್ರ ಮೂಡುವುದು. ಉದಾಹರಣೆಗೆ, ಸಯನಿಡಿನ್ ಕ್ಲೋರೈಡ್, ಫೊರೊಗ್ಲೂಸಿನಾಲ್ ಮತ್ತು ಪ್ರೋಟೊ ಕ್ಯಾಟಚೂಯಿಕ್ ಆಮ್ಲಗಳನ್ನು ಕೊಡುವುದು. ಶೇಷಾಂಶ ಸಕ್ಕರೆಯ ಭಾಗ ಮೂಲಾಣುವಿನಲ್ಲಿ ಆಂತೋಸಯನಿಡಿನ್ನಿನ ಯಾವ ಸ್ಥಾನಗಳಲ್ಲಿ ಜೋಡಣೆಯಾಗಿದೆ ಎಂಬುದನ್ನು ನಂತರ ತೀರ್ಮಾನಿಸಲಾಗುವುದು.

ಆಂತೋಸಯನಿಡಿನನ್ನು ಡೈಮೀಥೈಲ್ ಸಲ್ಫೇಟ್ ಮತ್ತು ಸೋಡಿಯಂ ಹೈಡ್ರಾಕ್ಸೈಡಿನ ಮಿಶ್ರಣದ ವರ್ತನೆಗೆ ಒಳಪಡಿಸಿದರೆ, ಬಿಡಿ ಹೈಡ್ರಾಕ್ಸಿಲ್ ಗುಂಪುಗಳು ಮೀಥಾಕ್ಸಿಲ್ ಗುಂಪುಗಳಾಗುತ್ತವೆ. ಫಲಿತವಸ್ತುವಿಗೆ ಹೈಡ್ರೊಕ್ಲೋರಿಕ್ ಆಮ್ಲವನ್ನು ಹಾಕಿದರೆ, ಸಕ್ಕರೆಯ ಭಾಗಗಳು ಬೇರ್ಪಡುತ್ತವೆ. ಅನಂತರ ಶೇಷವಸ್ತುವನ್ನು ಜಲಜನಕದ ವಾತಾವರಣದಲ್ಲಿ ಬೇರಿಯಂ ಹೈಡ್ರಾಕ್ಸೈಡ್ ದ್ರಾವಣದ ವರ್ತನೆಗೆ ಗುರಿಪಡಿಸಬೇಕು. ಇದರಿಂದಾಗಿ ದೊರೆತ ವಸ್ತುಗಳಲ್ಲಿ, ಎಲ್ಲೆಲ್ಲಿ ಬಿಡಿ ಹೈಡ್ರಾಕ್ಸಿಲ್ ಗುಂಪುಗಳು ಇರುತ್ತವೆಯೋ, ಅಲ್ಲೆಲ್ಲ ಸಕ್ಕರೆಯ ಅಣುಗಳು ಇದ್ದಿರಬೇಕೆಂದು ಊಹಿಸಲಾಗುವುದು.

ಆಂತೋಸಯನಿನ್ ಅಣುವಿನಲ್ಲಿ ಗ್ಲೂಕೋಸ್ ಭಾಗ ಸಾಮಾನ್ಯವಾಗಿ 3 ಅಥವಾ 3:5 ಸ್ಥಾನಗಳಲ್ಲಿ ಇರುವುದು ಕಂಡುಬಂದಿದೆ. ಆಂತೋಸಯನಿನ್ನಿನ ಸಂಯೋಜನಾಕಾರ್ಯ ಮುಂದುವರಿಯುತ್ತಿದೆ.

ಆಂತೋಸಯನಿಡಿನ್‍ಗಳನ್ನು ಸಂಯೋಜಿಸಲು ರಾಬಿನ್‍ಸನ್ ಹಲವು ಸಾರ್ವತ್ರಿಕ ವಿಧಾನಗಳನ್ನು ಅನುಷ್ಠಾನಕ್ಕೆ ತಂದಿದ್ದಾನೆ. ಆ ಕ್ರಿಯೆಗಳ ಮೂಲಸ್ವರೂಪ ಹೀಗಿದೆ: ಈಥೈಲ್ ಅಸಿಟೇಟ್ ದ್ರಾವಣದಲ್ಲಿ ಆರ್ಥೊ ಹೈಡ್ರಾಕ್ಸಿ ಬೆಂಜ಼ಾಲ್ಡಿಹೈಡ್ ಮತ್ತು ಅಸಿಟೋಫಿನೋನ್ ವರ್ತಿಸಲು ಬಿಟ್ಟು, ಅನಂತರ ಹೈಡ್ರೊಜನ್ ಕ್ಲೋರೈಡ್ ಅನಿಲದಿಂದ ದ್ರಾವಣವನ್ನು ಪರ್ಯಾಪ್ತಗೊಳಿಸಲಾಗುವುದು. ನಿರ್ದಿಷ್ಟ ಸ್ಥಾನಗಳಲ್ಲಿ, ಬೇಕಾದ ಗುಂಪುಗಳನ್ನು ಹೊಂದಿರುವ ಬೆಂಜಾಲ್ಡಿಹೈಡ್ ಮತ್ತು ಅಸಿಟೊಫೀನೋನನ್ನು ಒಟ್ಟೂಗೂಡಿಸಿ, ಬೇಕಾದಂಥ ಆಂತೋಸಯನನಿಡಿನ್‍ಗಳನ್ನು ಸಂಯೋಜಿಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. https://www.britannica.com/science/anthocyanin
  2. https://www.verywellhealth.com/the-scoop-on-anthocyanins-89522
  3. Andersen, Øyvind M (17 October 2001). "Anthocyanins". Encyclopedia of Life Sciences. John Wiley & Sons. doi:10.1038/npg.els.0001909. ISBN 978-0470016176.


ಹೆಚ್ಚಿನ ಓದಿಗೆ

ಬದಲಾಯಿಸಿ
  • Andersen, O.M. (2006). Flavonoids: Chemistry, Biochemistry and Applications. Boca Raton FL: CRC Press. ISBN 978-0-8493-2021-7.
  • Gould, K.; Davies, K.; Winefield, C., eds. (2008). Anthocyanins: Biosynthesis, Functions, and Applications. Springer. ISBN 978-0-387-77334-6.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: