ಅಸಂಗ
ಅಸಂಗ (೩೭೫-೪೫೦) - ಯೋಗಾಚಾರವೆಂಬ ಬೌದ್ಧಸಂಪ್ರದಾಯದ ಪ್ರವರ್ತಕ. ಈತ ಭಾರತದ ವಾಯವ್ಯಪ್ರದೇಶದ ಪುರುಷಪುರ (ಇಂದಿನ ಪಾಕಿಸ್ತಾನದ ಪೇಷಾವರ್) ಎಂಬಲ್ಲಿನ ಕೌಶಿಕಗೋತ್ರದ ಬ್ರಾಹ್ಮಣ. ಇವನ ತಮ್ಮ ವಸುಬಂಧುವೂ ಪ್ರಖ್ಯಾತನಾದ ಯೋಗಾಚಾರ(ಇದನ್ನು ವಿಜ್ಞಾನವಾದ ಎಂದೂ ಕರೆಯುತ್ತಾರೆ)ದ ದಾರ್ಶನಿಕ. ಮೊದಲಿಗೆ ಸರ್ವಾಸ್ತಿವಾದ ಪಂಥದ ಅನುಯಾಯಿಯಾಗಿದ್ದು, ಮಹಾಯಾನದಲ್ಲಿದ್ದ ಶುಷ್ಕಬೌದ್ಧಿಕ ಪ್ರಾಮುಖ್ಯದಿಂದ ಬೇಸರಗೊಂಡು ಸಮಾಧಿ-ಯೋಗ-ಧ್ಯಾನಗಳಿಗೆ ಪ್ರಾಧಾನ್ಯಕೊಡುವ ಸಲುವಾಗಿ ಹೊಸದೊಂದು ಶಾಖೆಯನ್ನೇ ಆರಂಭಿಸಿದ. ತುಷಿತ ಸ್ವರ್ಗದಲ್ಲಿ ಭವಿಷ್ಯದ್ಬುದ್ಧನಾದ ಮೈತ್ರೇಯನೇ ಅಸಂಗನಿಗೆ ಹಲವಾರು ಆಗಮಗಳನ್ನೂ ಕಾಣಿಸಿದನೆಂಬ ಶ್ರದ್ಧೆ ೪ ಅಥವಾ ೫ ನೆಯ ಶತಮಾನಗಳಲ್ಲಿ ಬಲವಾಗಿತ್ತು. ವಾಸ್ತವವಾಗಿ ಅಸಂಗನು ಮೈತ್ರೇಯನಾಥನೆಂಬ ಐತಿಹಾಸಿಕ ಗುರುವಿನ ಶಿಷ್ಯನಾಗಿದ್ದ. ಈ ಗುರುವಿನ ವಿಚಾರ ಹೆಚ್ಚಾಗಿ ತಿಳಿದುಬಂದಿಲ್ಲ.
ಗ್ರಂಥಗಳು
ಬದಲಾಯಿಸಿಮೈತ್ರೇಯನಾಥನು ಅಸಂಗನಿಗೆ ಕಾಣಿಸಿದನೆಂದು ಹೇಳಲಾದ ಯೋಗಾಚಾರ ಭೂಮಿಶಾಸ್ತ್ರದ ಒಂದು ಪರಿಚ್ಛೇದವಾದ ಬೋಧಿಸತ್ವಭೂಮಿ ಮಾತ್ರ ಸಂಸ್ಕೃತದಲ್ಲಿ ಉಳಿದುಬಂದಿದೆ. ಈ ಗ್ರಂಥ ಅಸಂಗನದೇ ಎಂದು ಟಿಬೆಟ್ ಸಂಪ್ರದಾಯ ಹೇಳುತ್ತದೆ. ಅಸಂಗನ ಗ್ರಂಥಗಳೆಲ್ಲ ಚೀನಿ ಭಾಷೆಯ ಪರಿವರ್ತನೆಗಳಲ್ಲಿ, ಟಿಬೆಟ್ ದೇಶದ ತಾನ್‌ಜೂರ್ ಸಂಗ್ರಹದಲ್ಲಿ ಉಪಲಬ್ಧವಿವೆ. ಅವನ ಮಹಾಯಾನ ಸಂಪರಿಗ್ರಹವೆಂಬ ಗ್ರಂಥವನ್ನು ಸಂಸ್ಕೃತ ಭಾಷೆಯಿಂದ ಪರಮಾರ್ಥನು (೪೯೯-೫೬೯) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ; ಅವನ ಇನ್ನೊಂದು ಗ್ರಂಥವಾದ ಮಹಾಯಾನಾಭಿಧರ್ಮ ಸಂಗೀತಿಶಾಸ್ತ್ರವನ್ನು ಯುವಾನ್‌ಚಾಂಗ್ ೬ರಲ್ಲಿ ಚೀನಿಭಾಷೆಗೆ ಪರಿವರ್ತಿಸಿದ. ವಜ್ರಚ್ಛೇದಿಕಾ ಎಂಬ ಗ್ರಂಥಕ್ಕೆ ಅಸಂಗ ಬರೆದ ಭಾಷ್ಯವನ್ನು ಧರ್ಮಗುಪ್ತವೆಂಬ ಭಿಕ್ಷು (೫೯೦-೬೧೬) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ. ಆತ ಅಸಂಗನ ಪಾಂಡಿತ್ಯವನ್ನೂ ಹೊಗಳಿದ್ದಾನೆ; ಅದರಲ್ಲಿ ಅಸಂಗನ ಜೀವಿತಕ್ರಮವೂ ನಿರೂಪಿತವಾಗಿದೆ. ವಸುಬಂಧುವಿನ ಮತಪರಿವರ್ತನೆಗೆ ಅಸಂಗನೇ ಕಾರಣನೆಂದು ಈ ಗ್ರಂಥದಿಂದ ತಿಳಿಯುತ್ತದೆ.