ಅಷ್ಟಮಿ
ತಿಥಿಗಳಲ್ಲಿ ಒಂದು. ಶುಕ್ಲಾಷ್ಟಮಿ, ಕೃಷ್ಣಾಷ್ಟಮಿ ಎಂದು ಎರಡು ವಿಧ. ಅಧಿಕಮಾಸ ಬರುವ ವರ್ಷಗಳಲ್ಲಿ ಎರಡು ಅಷ್ಟಮಿಗಳು ಅಧಿಕ. ಚೈತ್ರಮಾಸದ ಶುಕ್ಲಾಷ್ಟಮಿಯ ದಿವಸ ಎಂಟು ಅಶೋಕ ಚಿಗುರುಗಳಿಂದ ಕೂಡಿದ ನೀರಿನ ಪಾನ, ಬ್ರಹ್ಮಪುತ್ರಾ ನದಿಯಸ್ನಾನ ಮತ್ತು ಭವಾನಿಯ ದರ್ಶನ ಇವು ಪುಣ್ಯ ಫಲಪ್ರದಗಳು.
ವೈಶಿಷ್ಟ
ಬದಲಾಯಿಸಿಶ್ರಾವಣಮಾಸದ ಕೃಷ್ಣಾಷ್ಟಮಿಯೇ ಜನ್ಮಾಷ್ಟಮಿ. ಇದು ಕೇವಲಾಷ್ಟಮಿ, ಜಯಂತಿ ಎಂದು ಎರಡು ವಿಧ. ಶ್ರೀಕೃಷ್ಣನ ಜನ್ಮತಿಥಿಯಾದ ಅಷ್ಟಮಿ, ಜನನ ನಕ್ಷತ್ರವಾದ ರೋಹಿಣಿ ಇವು ಒಂದೇ ದಿವಸದಲ್ಲಾಗಲಿ, ಬೇರೆ ಬೇರೆ ದಿವಸದಲ್ಲಾಗಲಿ ಬರಬಹುದು. ಶುದ್ಧವಾದ ಅಷ್ಟಮೀ ತಿಥಿ, ರೋಹಿಣೀ ನಕ್ಷತ್ರ ಈ ಎರಡೂ ಅರ್ಧರಾತ್ರಿಯ ಕಾಲದಲ್ಲಿರುವುದು ಈ ವ್ರತದಲ್ಲಿ ಮುಖ್ಯವಾಗಿ ಗ್ರಾಹ್ಯ. ಈ ದಿವಸ ಉಪವಾಸವಿದ್ದು, ರಾತ್ರಿ ಪರಿವಾರದೊಡನೆ ಶ್ರೀಕೃಷ್ಣನನ್ನು ಪುಜಿಸಿ ಶಂಖತೀರ್ಥದಿಂದ ಮೊದಲು ಕೃಷ್ಣನಿಗೂ ಬಳಿಕ ರೋಹಿಣೀಸಹಿತ ನಾದ ಚಂದ್ರನಿಗೂ ಪ್ರತ್ಯೇಕವಾಗಿ ಮೂರು ಮೂರು ಸಲ ಅರ್ಘ್ಯಕೊಡಬೇಕು. ವ್ರತಾಂತ್ಯದಲ್ಲಿ ಪಾರಣೆ ವಿಹಿತವಾಗಿದೆ. ಇಂದಿಗೂ ಈ ವ್ರತವನ್ನು ಭಾರತದ ಎಲ್ಲೆಡೆಗಳಲ್ಲೂ ಆಚರಿಸುತ್ತಾರೆ. ಭಾದ್ರಪದ ಶುಕ್ಲಾಷ್ಟಮಿ ದೂರ್ವಾಷ್ಟಮಿ, ಇದೇ ತಿಂಗಳಿನ ಕೃಷ್ಣಾಷ್ಟಮಿ ಮಧ್ಯಾಷ್ಟಮಿ, ಆಶ್ವಯುಜ ಶುಕ್ಲಾಷ್ಟಮಿ ದುರ್ಗಾಷ್ಟಮಿ, ಮಾರ್ಗಶಿರ ಕೃಷ್ಣಾಷ್ಟಮಿ ಭೈರವಾಷ್ಟಮಿ, ಮಾಘಶುಕ್ಲಾಷ್ಟಮಿ ಭೀಷ್ಮಾಷ್ಟಮಿ. ಮಾರ್ಗಶಿರ ಮಾಸದಿಂದ ನಾಲ್ಕು ತಿಂಗಳಿನ ಕೃಷ್ಣಾಷ್ಟಮಿ ಗಳು ಅಷ್ಟಕಗಳು. ದೂರ್ವಾಷ್ಟಮಿಯ ದಿವಸ ದೂರ್ವೆಯಿಂದ ಶಂಕರನ ಪುಜೆ, ದುರ್ಗಾಷ್ಟಮಿಯ ದಿವಸ ದುರ್ಗಿಯ ಪುಜೆ, ಭೀಷ್ಮಾಷ್ಟಮಿಯ ದಿವಸ ಭೀಷ್ಮನನ್ನುದ್ದೇಶಿಸಿ ತರ್ಪಣ, ಮಧ್ಯಾಷ್ಟಮಿ ಮತ್ತು ಅಷ್ಟಕಗಳಲ್ಲಿ ಪಿತೃಗಳನ್ನುದ್ದೇಶಿಸಿ ಶ್ರಾದ್ಧಮಾಡುವುದು-ಇವು ಅಂದಂದಿನ ವಿಶೇಷ ಕಾರ್ಯಗಳು.
ಶ್ರೀ ಕೃಷ್ಣಜನ್ಮಾಷ್ಟಮಿ - ಆಚರಣೆ
ಬದಲಾಯಿಸಿತುಳುನಾಡಿನಲ್ಲಿ ಸೋಣ ತಿಂಗಳಲ್ಲಿ ನಡೆಯುವ ಅಷ್ಟಮಿ ಹಬ್ಬ ಮಹತ್ವವಾದುದು. ಅಷ್ಟಮಿಗೆ ಮನೆಯ ಯಜಮಾನನು ಮಧ್ಯಾಹ್ನ ಊಟವಿಲ್ಲದೆ ಸೀಯಾಳ ಕುಡಿದು ಏನಾದರೂ ಫಲಹಾರ ಸೇವಿಸುತ್ತಾನೆ =. ಇದಕ್ಕೆ ಅಷ್ಟಮಿ ಉಪವಾಸ ಎನ್ನುತ್ತಾರೆ. ಮನೆಯ ಹೆಂಗಸರು "ಸೇಮಿಯದಡ್ಡೆ" ಮತ್ತು "ಮೂಡೆಪೇರ್" ಇನ್ನಿತರ ಕೆಲವು ಬಗೆಯತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಸಾಯಾಂಕಾಲ ಮನೆಯಂಗಳದ ತುಳಸಿಕಟ್ಟೆಯನ್ನು ಸ್ವಚ್ಛೀಕರಿಸಿ ಸೇಡಿಯಿಂದ (ಜೇಡಿ ಮಣ್ಣಿನಿಂದ) ರಂಗೋಲಿ ಬಿಡಿಸಿ ಗೊಂಡೆ ಹೂವಿನ (ಚಿನ್ನಲಿಗೆ) ಹಾರ ಹಾಕಿ ನೆಲ್ಲಿಕಾಯಿ ಗೆಲ್ಲಿನೊಂದಿಗೆ ತುಳಸಿಯ ಜೊತೆಗೆ ನೆಡುತ್ತಾರೆ. ರಾತ್ರಿ ಗಂಟೆ ಹನ್ನೆರಡು ಅಥವಾ ಒಂದರವರೆಗೆ ಭಜನೆ, ಕೀರ್ತನೆ, ತಾಳಮದ್ದಳೆ, ಚೆನ್ನೆಯಾಟಗಳಿಂದ ಜಾಗರಣೆ ಮಾಡುವ ಕಾರ್ಯಕ್ರಮವಿರುತ್ತದೆ.ಚಂದ್ರೋದಯವಾದ ಕೂಡಲೇ ಹತ್ತಿರದ ಊರಿನ ದೇವಸ್ಥಾನಗಳಲ್ಲಿ ಕದನೆ(ಸಿಡಿಮದ್ದು) ಸಿಡಿದರೆ ಕೃಷ್ಣನ ಜನನವಾಯಿತೆಂದು ಅರ್ಥ. ಆ ಸಮಯದಲ್ಲಿ ಮನೆಯ ಯಜಮಾನ ಸ್ನಾನ ಮಾಡಿ ತುಳಸಿ ಕಟ್ಟೆಯ ಎದುರು ಅಗಲವಾದ ಮಣೆಯಲ್ಲಿ ಬಾಳೆ ಎಲೆ ಮೇಲೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಊದುಬತ್ತಿ, ಪಿಂಗಾರ, ಕೇದಗೆ(ಗಣಪತಿ) ಇಟ್ಟು ಹಣ್ಣುಕಾಯಿ ಮಾಡಿ ಸಾನಾದಿಗ ಕರ್ಪೂರಾದಿ, ದೀಪ ಹಚ್ಚಿ ಆರತಿಯನ್ನು ಬೆಳಗಿಸಿ ಕೇದಗೆಯಿಂದ ತುಳಸಿಗೆ ಹಾಲಿನ ಅರ್ಘ್ಯವನ್ನೀಯುತ್ತಾ ಪೂಜೆ ಸಲ್ಲಿಸುತ್ತಾರೆ. ಕೃಷ್ಣ ಕಾರಗ್ರಹದಲ್ಲಿ ಹುಟ್ಟುವಾಗ ತಂದೆ ವಸುದೇವ ತಾಯಿ ದೇವಕಿಗೆ ಬಹಳ ಕಷ್ಟವಿತ್ತು. ಆಗ ಮಥುರ ಮತ್ತು ದ್ವಾರಕೆಯ ನಾಗರಿಕರು ಅನ್ನ ನೀರು ಸೇವಿಸದೆ ಜಾಗರಣೆಯಿಂದಿದ್ದರು. ಮರುದಿವಸ ಮೊಸರು ಕುಡಿಕೆ ಸಂಭ್ರಮದಲ್ಲಿ ಕೃಷ್ಣನ ಹುಟ್ಟುಹಬ್ಬವನ್ನು ಆಚರಿಸುವ ಪದ್ಢತಿ ಪರಂಪರೆಯಿಂದ ನಡೆದು ಬಂದಿದೆ.[೧]
ಉಲ್ಲೇಖ
ಬದಲಾಯಿಸಿ- ↑ ತುಳುನಾಡಿನ ಕಟ್ಟು ಕಟ್ಟಳೆಗಳು ರಾಘು ಪಿ ಶೆಟ್ಟಿ ಪುಟ ೫೨ ಪ್ರಕಾಶಕರು ಲಕ್ಶ್ಮೀಛಾಯಾ ವಿಚಾರ ವೇದಿಕೆ, ಮುಂಬಯಿ