ಅವ್ಯವಸ್ಥೆ(ಕೇಯಾಸ್)

ಇಂದಿನ ವಿಶ್ವ ಸುವ್ಯವಸ್ಥಿತವಾದುದೆಂದೂ ಸಾಮಾನ್ಯ ನಿಯಮಗಳಿಗೆ ಒಳಪಟ್ಟಿದೆಯೆಂದೂ ನಿರೂಪಿಸಿ, ವಿಶ್ವಸೃಷ್ಟಿಗೆ ಮುನ್ನ ಇದ್ದ ಸ್ಥಿತಿಯನ್ನು ಸೂಚಿಸುವ ಪದ (ಕೇಯಾಸ್).

ವಿಶ್ವದ ಅವ್ಯವಸ್ಥಾಸ್ಥಿತಿ ವಿಶ್ವಶಾಸ್ತ್ರ (ಕಾಸ್ಮಾಲಜಿ) ಮತ್ತು ವಿಶ್ವಸೃಷ್ಟಿವಾದಗಳಿಗೆ ಸಂಬಂಧಪಟ್ಟದ್ದು. ಪೌರಸ್ತ್ಯರೂ ಪಾಶ್ಚಾತ್ಯರೂ ಈ ವಿಷಯವನ್ನು ವಿಶೇಷವಾಗಿ ಜಿಜ್ಞಾಸೆ ಮಾಡಿದ್ದಾರೆ.

  • ಸಾಮಾನ್ಯವಾಗಿ ಪಾಶ್ಚಾತ್ಯರು ವಿಶ್ವಸೃಷ್ಟಿಯ ಪುರ್ವದಲ್ಲಿ, ಅವ್ಯವಸ್ಥಿತ ಸ್ಥಿತಿ ಇದ್ದಿತೆನ್ನುತ್ತಾರೆ. ಗ್ರೀಕ್ ಭಾಷೆಯಲ್ಲಿ ಈ ಪದಕ್ಕೆ ಅಗಲವಾಗಿ ಬಾಯಿ ತೆರೆದಿರುವುದು ಎಂಬ ಅರ್ಥವಿದೆ. ಅಂದರೆ ವಿಶ್ವಸೃಷ್ಟಿ ಪೂರ್ವದಲ್ಲಿ ಆಕಳಿಸುವ ಆಕಾಶವಾಗಿ ಆದ್ಯ ಶೂನ್ಯವಿದ್ದಂತೆ ಇದ್ದಿತೆಂದು ಅರ್ಥವಾಗುತ್ತದೆ.
  • ಸ್ಟೊಯಿಕ್ ಪಂಥದ ತತ್ತ್ವಜ್ಞಾನಿಗಳು ಈ ಅವ್ಯವಸ್ಥಿತಸ್ಥಿತಿಯನ್ನು ಆದಿಜಲ ಸ್ಥಿತಿ ಎನ್ನುತ್ತಾರೆ.
  • ಫಿನೀಷಿಯದವರು ಆದಿಯ ಅವ್ಯವಸ್ಥಿತ ಸ್ಥಿತಿ ದೈವತ್ವದೊಂದಿಗೆ ಸಮಾಗಮ ಹೊಂದಿದಾಗ ಕಾಮ (ಇಚ್ಛೆ) ಉತ್ಪನ್ನವಾಯಿತೆಂದೂ ತದನಂತರ ಮೋಟ್ ಎಂಬ ಭೌತಜಲ ಮಿಶ್ರಣವುಂಟಾಯಿತೆಂದೂ ಆಮೇಲೆ ಒಂದು ಅಂಡ ಸೃಷ್ಟಿಯಾಯಿತೆಂದೂ ವಿಶ್ವಾಂಡ ಬ್ರಹ್ಮಾಂಡ ಎರಡಾಗಿ ಒಡೆದು ಭೂಲೋಕ ದೇವಲೋಕಗಳು ಸೃಷ್ಟಿಸಲ್ಪಟ್ಟವೆಂದೂ ಅನಿಲದ ಉಷ್ಣಾಂಶದಿಂದ, ಗುಡುಗು ಸಿಡಿಲುಗಳ ದೆಸೆಯಿಂದ ಜೀವಕೋಟಿಗಳು ಆವಿರ್ಭವಿಸಿದುವೆಂದೂ ಹೇಳುತ್ತಾರೆ.
  • ವೇದಗಳಲ್ಲಿ ಸೃಷ್ಟಿ ಮತ್ತು ಸೃಷ್ಟಿಕರ್ತನ ವಿಚಾರಗಳಿವೆ. ವಿಶ್ವಕರ್ಮ ಸೃಷ್ಟಿಯನ್ನು ಸುಸಜ್ಜಿತಗೊಳಿಸಿದನೆಂದು ಹೇಳಿದೆ. ಅನೇಕ ಸಂದರ್ಭಗಳಲ್ಲಿ ತಮಸ್, ಆಕಾಶ, ಅಸತ್ ಇತ್ಯಾದಿ ಅವ್ಯವಸ್ಥಿತ ಸ್ಥಿತಿಗಳು ಸೃಷ್ಟಿಯ ಮೂಲವೆಂದು ಹೇಳಿದೆ.
  • ಆದಿಯಲ್ಲಿ ಎಲ್ಲೆಲ್ಲೂ ಪ್ರಳಯರೂಪದ ಜಲವಿದ್ದಿತೆಂದೂ ಈ ಅವ್ಯವಸ್ಥಿತಸ್ಥಿತಿಯನ್ನು ಪರಬ್ರಹ್ಮನೇ ನಿರ್ಮಾಪಿಸಿ ಆ ಜಲದಲ್ಲಿ ತನ್ನ ಅಂಶವನ್ನು ಬಿತ್ತಿ, ಮುಂದೆ ತಾನೇ ಹಿರಣ್ಯಗರ್ಭವೆಂಬ ಒಂದು ಅಂಡವಾಗಿ ಆ ಅಂಡದಿಂದ ಚತುರ್ಮುಖ ಬ್ರಹ್ಮ ಹುಟ್ಟಿ ಅನಂತರ ಸೃಷ್ಟಿಯನ್ನು ಸಾಧಿಸಿದನೆಂದೂ ಹೇಳಿದೆ.
  • ಪುರುಷಸೂಕ್ತದಲ್ಲಿ ಆದಿಪುರುಷನ ಬಲಿಯಿಂದ (ಯಾಗ ಮಾಡುವುದರಿಂದ) ವಿಶ್ವಸೃಷ್ಟಿಯಾಯಿತೆಂದಿದೆ. ನಾರದೀಯ ಸೂಕ್ತದಲ್ಲಿ ಎಲ್ಲೆಲ್ಲೂ ದೀರ್ಘ ತಮಸ್, ಅಥವಾ ಗಾಢಾಂಧಕಾರವಿದ್ದಿ ತೆಂದೂ ಅನಂತ ಶೂನ್ಯವಿದ್ದಿತೆಂದೂ ಇವುಗಳ ನಡುವೆ ಪರಬ್ರಹ್ಮ ಏಕಾಂಗಿಯಾಗಿದ್ದು ತನ್ನ ಸಂಕಲ್ಪ ಮಾತ್ರದಿಂದ ವಿಶ್ವಸೃಷ್ಟಿ ಮಾಡಿದನೆಂದೂ ಇದರ ಮರ್ಮವನ್ನು ಯಾರೂ ತಿಳಿಯಲಸಾಧ್ಯವೆಂದೂ ಉಲ್ಲೇಖಿಸಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: