ಅಲ್ಯೂಮಿನಿಯಮ್ ತಾಪನ

ಅಲ್ಯೂಮಿನಿಯಮ್‌ನಿಂದ ಕೆಲವು ಲೋಹದ ಭಸ್ಮಗಳನ್ನು (ಆಕ್ಸೈಡ್) ಲೋಹವಾಗಿ ರೂಪಾಂತರಿಸುವ ವಿಧಾನ (ಅಲ್ಯೂಮಿನೋಥರ್ಮಿಕಸ್). ಸೂಕ್ಷ್ಮವಾಗಿ ವಿಭಜಿಸಿದ ಅಲ್ಯೂಮಿನಿಯಮ್ ಪುಡಿಯೊಡನೆ ಲೋಹಭಸ್ಮವನ್ನು ನಿಕಟವಾಗಿ ಬೆರೆಸಿ ಮಿಶ್ರಣವನ್ನು ಒಂದು ರಾಸಾಯನಿಕ-ಪ್ರಕ್ರಿಯಾ ಪಾತ್ರೆಯಲ್ಲಿ ದಹಿಸಲಾಗು ವುದು. ಲೋಹಭಸ್ಮದ ಮತ್ತು ಅಲ್ಯೂಮಿನಿಯಮ್ ಚೂರ್ಣದ ನಿಕಟ ಮಿಶ್ರಣವನ್ನು ದಹಿಸಿದಾಗ, ಅಲ್ಯೂಮಿನಿಯಮ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಕ್ರಿಯೆಯಲ್ಲಿ ಉಂಟಾಗುವ ಉಷ್ಣ ಬೇರೆ ಲೋಹಗಳ ಭಸ್ಮದ ಪೃಥಕ್ಕರಣದಲ್ಲಿ ಹೀರಿದ ಉಷ್ಣಕ್ಕಿಂತ ಅಧಿಕವಾಗಿರುವುದರಿಂದ ಉತ್ಪತ್ತಿಯಾದ ಅಲ್ಯೂಮಿನ ಕರಗಿದ ಪರಿಸ್ಥಿತಿಯಲ್ಲಿ ದ್ರವರೂಪಿ ಕಿಟ್ಟದಂತೆ ಇದ್ದು, ಲೋಹಗಳನ್ನು ಅದರಿಂದ ತ್ವರಿತವಾಗಿ ಬೇರ್ಪಡಿಸಲು ಅನುಕೂಲವಾಗಿರು ತ್ತದೆ. ದಹನ ಕ್ರಿಯೆಯನ್ನು ಪ್ರಾರಂಭಿಸಲು ಪ್ರಕ್ರಿಯಾ ಬೇರಿಯಂ ಪೆರಾಕ್ಸೈಡ್ ಮತ್ತು ಅಲ್ಯೂಮಿನಿಯಮ್ಗಳ ಸಕ್ರಿಯ ಮಿಶ್ರಣವನ್ನು ಉಪಯೋಗಿಸುತ್ತಾರೆ. ಅಪಘರ್ಷಣವಾಗಲು ಎರಡು ವಿಧಗಳಿವೆ. ಮೊದಲನೆಯದರಲ್ಲಿ ಪ್ರಕ್ರಿಯೆಯ ಪ್ರತ್ಯಾಘಾತದ ಪಾತ್ರೆಯನ್ನು ಭಸ್ಮ ಮತ್ತು ಅಲ್ಯೂಮಿನಿಯಮ್ ಮಿಶ್ರಣದಿಂದ ಭರ್ತಿಮಾಡಿ ಅದರ ಮೇಲೆ ಪ್ರಕ್ರಿಯೆಯ ಮಿಶ್ರಣ ಇದ್ದು ದಹನಕ್ಕೆ ಸಹಕಾರಿಯಾಗುವುದು. ಪ್ರಕ್ರಿಯೆ 50-90 ಸೆಕೆಂಡುಗಳಲ್ಲಿ ಪುರ್ತಿಯಾಗಿ ಲೋಹ ಪಾತ್ರೆಯ ತಳದಲ್ಲಿ ಉಳಿದು ಪಾತ್ರೆಯ ಮೇಲೆ ಕಿಟ್ಟ ಕಟ್ಟುವುದು. ಒಂದು ಟನ್ನಿನಷ್ಟು ಮಿಶ್ರಣವನ್ನು ಒಂದೇ ಸಲ ಈ ವಿಧಾನದಿಂದ ಕಾಯಿಸುವುದು ಸಾಧ್ಯ. ಎರಡನೆಯ ವಿಧಾನದಲ್ಲಿ ಮಿಶ್ರಣದ ಸ್ವಲ್ಪಭಾಗವನ್ನು ಪ್ರತ್ಯಾಘಾತದ ಪಾತ್ರೆಯಲ್ಲಿ ಹಾಕಿ, ಪ್ರಕ್ರಿಯೆಯನ್ನು ಪುಷ್ಟೀಕರಿಸಲು ಮತ್ತಷ್ಟು ಮಿಶ್ರಣವನ್ನು ಎಚ್ಚರಿಕೆಯಿಂದ ಸ್ವಲ್ಪವಾಗಿ ಸೇರಿಸಲಾಗುವುದು. ಕಿಟ್ಟ ಮತ್ತು ಲೋಹದಿಂದ ಪಾತ್ರೆಯನ್ನು ಪುರ್ತಿ ತುಂಬಿಸಬಹುದು. ಈ ರೀತಿ ಹಲವಾರು ಟನ್ನುಗಳಷ್ಟು ಪದಾರ್ಥವನ್ನು ಇಂಥ ಪ್ರಕ್ರಿಯೆಗೆ ಒಳಪಡಿಸಬಹುದು. ಬರಿಯ ಲೋಹಗಳಲ್ಲದೆ ಕಬ್ಬಿಣದ ಮಿಶ್ರಲೋಹಗಳನ್ನೂ ಈ ವಿಧಾನದಿಂದ ತಯಾರಿಸಬಹುದು. ಈ ವಿಧಾನ ಕೆಲವು ಪದಾರ್ಥಗಳನ್ನು ಇದ್ದಲ್ಲಿಯೇ ಬೆಸೆಯಲು ಉಪಯೋಗವಾಗುತ್ತದೆ. ಉದಾಹರಣೆಗೆ ರೈಲು ಕಂಬಿಗಳು ಮತ್ತು ಹಡಗಿನಲ್ಲಿರುವ ಚಾಲಕ ದಂಡಗಳು ಇವುಗಳನ್ನು ಇರುವ ಜಾಗದಲ್ಲಿಯೇ ಮಿಶ್ರಣ ಹೊಯ್ದು ಕರಗಿಸಿ ಬೆಸುಗೆ ಹಾಕಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: