ಈಕ್ವೆಡರ್ ಮತ್ತು ಪೆರುದೇಶಗಳಿಂದ ಪೆಟಗೋನಿಯ ಬಯಲುಗಳವರೆಗೆ ಹಬ್ಬಿರುವ ದಕ್ಷಿಣ ಅಮೆರಿಕದ ಕಾಡಿನಲ್ಲಿ ನೆಲೆಸಿರುವ ಗ್ವಾನಾಕೋ ಎಂಬ ಮೃಗಸಂತತಿಗೆ ಸೇರಿದ ಪ್ರಾಣಿ (ಲಾಮ ಪಕೋಸ್). ಇದು ಒಂಟೆಯ ವಂಶಕ್ಕೆ ಸೇರಿದೆ. ಆ ಜಾತಿಗಳಿಗಿರುವಂತೆಯೇ ನೀಳವಾದ ಕತ್ತಿದೆ; ಆದರೆ ಕೊಂಕಾಗಿಲ್ಲ. ಇದಕ್ಕೆ ಡುಬ್ಬವೂ ಇಲ್ಲ. ಇವು ಲಾಮಗಳಿಗಿಂತಲೂ ಸಣ್ಣವು. ಆ್ಯಲ್ಪಾಕ ನೋಡಲು ವಿಕಾರ. ಒರಗುವ ಕುರ್ಚಿಗೆ ಕಂಬಳಿ ಹೊದಿಸಿ ಅದಕ್ಕೆ ಒಂಟೆಯಂಥ ಉದ್ದನೆಯ ಕತ್ತನ್ನು ಜೋಡಿಸಿದಂತೆ ಇದರ ಆಕಾರ. ಏಷ್ಯ ಖಂಡದಲ್ಲಿ ಒಂಟೆಗಳು ಹಿಂದಿನಿಂದ ಉಪಯುಕ್ತವಾಗಿರುವಷ್ಟೇ ಬಹು ಪ್ರಾಚೀನ ಕಾಲದಿಂದ ದಕ್ಷಿಣ ಅಮೆರಿಕದ ಜನರಿಗೆ ಆ್ಯಲ್ಪಾಕಗಳು ಉಪಯುಕ್ತವಾಗಿವೆ. ಮತ್ತಾವ ಮೃಗವೂ ಏರಲಾರದ ಎತ್ತರದಲ್ಲಿ ನೂರು ಪೌಂಡುಗಳಿಗೂ ಹೆಚ್ಚಿನ ತೂಕವನ್ನು ಇವು ಹೊರಬಲ್ಲುವು. ಇದರ ಹಾಲು ಕುಡಿಯಬಹುದು, ಆದರೆ ಅಷ್ಟು ರುಚಿಯಾಗಿಲ್ಲ; ಮಾಂಸ ತಿನ್ನಬಹುದು. ಹೆಣ್ಣು ಆ್ಯಲ್ಪಾಕ 11 ತಿಂಗಳು ಗರ್ಭಧರಿಸಿ ಒಂದೇ ಒಂದು ಕರು ಈಯುತ್ತದೆ. ತುಂಬ ನವಿರಾಗಿಯೂ ಬಲವಾಗಿಯೂ ಇರುವ ಉಣ್ಣೆಗಾಗಿ ಆ್ಯಲ್ಪಾಕಗಳು ಪ್ರಖ್ಯಾತ. ಪೆರುವಿಯನ್ ಜನ ಇವನ್ನು ಸಹಸ್ರಾರು ವರ್ಷಗಳಿಂದ ಪಳಗಿಸಿಕೊಂಡು ಸಾಕುತ್ತಿದ್ದಾರೆ. ಈ ಉಣ್ಣೆ ಹೊಳೆಗೆಂಪಿನಿಂದ ಕಪ್ಪಿನವರೆಗೆ, ಬಿಳುಪಿನಿಂದ ಬಲು ಬಗೆಯ ಕಂದು ಬಣ್ಣಗಳವರೆಗೆ ಅನೇಕ ತರದ ಬಣ್ಣಗಳಲ್ಲಿ ದೊರೆಯುತ್ತದೆ. ಉಣ್ಣೆ ತುಂಬ ಉದ್ದವಾಗಿ ಜಡೆಗಟ್ಟಿರುತ್ತದೆ. ಬೊಲಿವಿಯ ಮತ್ತು ದಕ್ಷಿಣ ಪೆರುವಿನ ಪ್ರಸ್ಥಭೂಮಿಗಳಲ್ಲಿ, 15,000ಗಳಿಗೂ ಹೆಚ್ಚಿನ ಎತ್ತರದಲ್ಲಿ ಇವುಗಳನ್ನು ವರ್ಷಾದ್ಯಂತ ದೊಡ್ಡ ದೊಡ್ಡ ದೊಡ್ಡಿಗಳಲ್ಲಿ ಸಾಕುತ್ತಾರೆ. ಉಣ್ಣೆಯಿಳಿಸುವ ಕಾಲದಲ್ಲಿ ಪ್ರತಿವರ್ಷವೂ ಇವುಗಳನ್ನು ಹಳ್ಳಿಗಳಿಗೆ ಹೊಡೆಯುತ್ತಾರೆ. ಅದರ ಉಣ್ಣೆಯಲ್ಲಿ ಎರಡು ವಿಧವುಂಟು. ಹವಾಸ್ಕ ಎಂಬುದು ಉದ್ದವೂ ಒರಟೂ ಆದ ಉಣ್ಣೆ; ಅದಕ್ಕಿಂತ ನವಿರಾಗಿಯೂ ಸಣ್ಣದಾಗಿಯೂ ಇರುವ ಉಣ್ಣೆಗೆ ಕುಂಬಿ ಎಂದು ಹೆಸರು. ಇಂಗ್ಲೆಂಡ್ ದೇಶ ಆ್ಯಲ್ಪಾಕದ ಉಣ್ಣೆಯನ್ನು ತರಿಸಿಕೊಂಡು (1808) ಇದರಿಂದ ದಾರ ತೆಗೆಯಲು ಪ್ರಾರಂಭಿಸಿತು. ಈ ಉಣ್ಣೆಯನ್ನು ಹತ್ತಿಯ ನೂಲಿನೊಡನೆ ಮಿಶ್ರಿಸಿ ಹೊಳಪುಳ್ಳ ನಯವಾದ ಹಲವು ತರಹದ ನೂಲು ತಯಾರಿಸುತ್ತಾರೆ. ಆ್ಯಲ್ಪಾಕ ಉಣ್ಣೆಯಿಲ್ಲದಿರುವ ಕೆಲವು ಬಟ್ಟೆಗಳಿಗೂ ಈ ಗುಣವಿರುವ ಕಾರಣ ಆ್ಯಲ್ಪಾಕವೆಂದೇ ಹೆಸರು ಬಂದಿದೆ.[೧][೨]

ಅಲ್ಪಾಕ)

ಉಲ್ಲೇಖ

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲ್ಪಾಕ&oldid=1162799" ಇಂದ ಪಡೆಯಲ್ಪಟ್ಟಿದೆ