ಜಾನಪದ ಪ್ರದರ್ಶನ ಕಲೆಗಳ ಹರವು ವಿಸ್ತಾರವಾದುದು. ಗೀತ, ವಾದ್ಯ, ನೃತ್ಯ, ಚಿತ್ರ ಮುಂತಾದ ಮಾದ್ಯಮಗಳ ಮೂಲಕ ಸಂವಹನಗೊಂಡು ಜನ ಸಮುದಾಯದ ಮದ್ಯೆ ಜೀವಂತವಾಗಿರುವ ಪ್ರದರ್ಶನ ಕಲೆಗಳಲ್ಲಿ ಅರೆ ವಾದ್ಯವೂ ಒಂದು ಪ್ರಮುಖ ಜಾನಪದ ಪ್ರದರ್ಶನ ಕಲೆ. ಅರೆ ವಾದ್ಯದ ತಾಳದ ಸದ್ದಿಗೆ ಆ ನಾದಕ್ಕೆ ಹೆಜ್ಜೆ ಹಾಕದ ವ್ಯಕ್ತಿಯೇ ಇಲ್ಲ. ಇದೊಂದು ಸಾಂಪ್ರದಾಯಿಕ ಕಲೆ. ಹಬ್ಬ ಜಾತ್ರೆ ಶುಭ ಸಮಾರಂಭಗಳಲ್ಲಿ ಈ ವಾದ್ಯದ ಸದ್ದು ಕೇಳಿ ಬರುತ್ತದೆ. ತುಮಕೂರು ಜಿಲ್ಲೆಯಲ್ಲಿ ಹೆಣ್ಣು ದೇವತೆಗಳು ಹೊರಟವೆಂದರೆ ಈ ಅರೆ ವಾದ್ಯ ಅಲ್ಲಿ ಇದ್ದೇ ಇರುತ್ತದೆ.

ಅರೆವಾದ್ಯದ ಬಳಕೆ

ಬದಲಾಯಿಸಿ

ಅರೆವಾದ್ಯದ ಬಳಕೆಯು ಪ್ರಮುಖವಾಗಿ ಸೋಮನ ಕುಣಿತ ಪೂಜಾ ಕುಣಿತ ಮತ್ತು ಮಣೇವು ಕುಣಿತ ಇಂತಹ ಪ್ರದರ್ಶನ ಕಲೆಗಳಲ್ಲಿ ಅತೀ ಪ್ರಧಾನವಾದುದು. ಅರೆವಾದ್ಯಕ್ಕೆ ಗ್ರಾಮದೇವತೆಗಳು ಹೊರಟಾಗ ಜಾನಪದ ಹಾಡು ಹೇಳುವ ಪದಗಾರರು ಸಾಥ್ ನೀಡುತ್ತಾರೆ. ಅಲ್ಲದೇ ಕುಣಿಯುವ ಯುವಕರನ್ನು ಹುರಿದುಂಬಿಸುವ ಹೆಜ್ಜೆಗಳಿಗೆ ತಕ್ಕಂತ ತಾಳಗಳು ಇಲ್ಲಿ ಹೊರಹೊಮ್ಮುತ್ತವೆ, ಚಾಟಿ ಸೇವೆ ಮಾಡಿಕೊಳ್ಳುವ ಕೊಮಾರರಿಗಂತೂ ಈ ವಾದ್ಯದ ಸದ್ದು ಅವರನ್ನು ರೊಚ್ಚಿಗೇಳಿಸುತ್ತದೆ.

ಅರೆವಾದ್ಯದ ವಿಶೇಷತೆ

ಬದಲಾಯಿಸಿ

ಅರೆವಾದ್ಯ ಜಾನಪದ ಮಹಾಕಾವ್ಯವಾದ ಜುಂಜಪ್ಪನ ಪುರಾಣ ಮತ್ತು ಎತ್ತಪ್ಪನ ಪುರಾಣದಲ್ಲಿ ಪ್ರಚಲಿತದಲ್ಲಿದ್ದ ಪ್ರಾಚೀನ ಕಲೆ. ಈ ವಾದ್ಯವು ಕಂಚಿನಿಂದ ಮಾಡಿದ ಒಳಭಾಗವನ್ನು ಚರ್ಮವನ್ನು ಹದ ಮಾಡಿ ಮುಚ್ಚಲಾಗಿರುತ್ತದೆ. ಮಿಂಚುವ ಬಟ್ಟೆಗಳಿಂದ ಅಲಂಕರಿಸಿ ಇದನ್ನು ಹೆಗಲಿಗೇರಿಸಿ ಕೊಂಡು ಎಡಗೈಯಲ್ಲಿ ಉದ್ದನೆಯ ಜಿಗುರು (ಮರದಿಂದ ಕೆತ್ತಿ ಮಾಡಲಾದ ಉದ್ದನೆಯ ಕಟ್ಟಿಗೆ ಸಾಧನ) ಹಿಡಿದು ಬಲಗೈಯಲ್ಲಿ ಕುಡ (ಮರದಿಂದ ಕೆತ್ತಿ ಮತ್ತು ಉಜ್ಜಿ ಮಾಡಲಾದ ಉದ್ದನೆಯ ಡೊಂಕಾದ ಕಟ್ಟಿಗೆ ಸಾಧನ) ದಿಂದ ತಾಳಕ್ಕೆ ತಕ್ಕಂತೆ ರೆಟ್ಟೆ ಬಿಗಿಯಾಗಿ ಹಿಡಿದು ಬಡಿದರೆ ಇಂಪಾ ದ ನಾದ ಹೊರಹೊಮ್ಮುತ್ತದೆ.

ಅರೆವಾದ್ಯವನ್ನು ನುಡಿಸುವವರು ಆದಿದ್ರಾವಿಡ ಅಥವಾ ಛಲವಾದಿ ಜನಾಂಗಕ್ಕೆ ಸೇರಿದವರಾಗಿರುತ್ತಾರೆ. ಇವರೂ ಸಹ ಅನೇಕ ನಿಯಮ ಸಂಪ್ರದಾಯ ಮತ್ತು ಕಟ್ಟುಪಾಡುಗಳಿಗೆ ಒಳಪಟ್ಟು ಈ ವಾದ್ಯವನ್ನು ನುಡಿಸುತ್ತಾರೆ. ಶಿರಾ ತಾಲ್ಲೂಕು ಬೇವಿನಹಳ್ಳಿಯಲ್ಲಿ ಅರೆವಾದ್ಯ ಮತ್ತು ಸೋಮನ ಕುಣಿತಕ್ಕೆ ಹೆಸರಾದ ಅನೇಕ ಕಲಾವಿದರಿದ್ದಾರೆ. ಪ್ರತಿ ದೀಪಾವಳಿಯ ನಂತರದ ಸೋಮವಾರ ಇಲ್ಲಿ ಜಾನಪದ ಮತ್ತು ಸಾಂಸ್ಕøತಿಕ ವೀರ ಜುಂಜಪ್ಪ ದೇವರ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಇಡೀ ರಾತ್ರಿ ಜಾನಪದ ಪ್ರದರ್ಶನ ಕಲೆಗಳ ಜಾತ್ರೆಯೇ ನಡೆಯುತ್ತದೆ. ಈ ಕಾರ್ಯಕ್ರಮ ನೋಡಲು ರಾಜ್ಯದ ನಾನಾ ಭಾಗಗಳಿಂದ ಹಾಗೂ ನೆರೆಯ ಆಂದ್ರ ಪ್ರದೇಶದಿಂದ ಜನ ಆಗಮಿಸುತ್ತಾರೆ. ಈ ಸಮಯದಲ್ಲಿ ಸೋಮನಕುಣಿತ, ಕೋಲಾಟ, ಅರೆವಾದ್ಯಗಳ ಆರ್ಭಟ ಮುಗಿಲು ಮುಟ್ಟುತ್ತದೆ. ಇಲ್ಲಿಯ ಕಲಾವಿದರು ಸುಮಾರು 1000 ಕ್ಕೂ ಹೆಚ್ಚು ಅರೆವಾದ್ಯ ಜಾನಪದ ಕಲೆಯ ಕಾರ್ಯಕ್ರಮಗಳನ್ನು ತುಮಕೂರು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಹಾಗೂ ನೆರೆಯ ಆಂದ್ರ ರಾಜ್ಯದಲ್ಲಿಯೂ ನೀಡಿದ್ದಾರೆ. ಆದರೆ 2 ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕಾರ್ಯಕ್ರಮಗಳೂ ಯಾವುದೇ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಯಿಂದ ಆಯೋಜಿಸಿದ ಕಾರ್ಯಕ್ರಮಗಳಲ್ಲ. ಬದಲಿಗೆ ಜಾನಪದ ಕಲೆಯನ್ನು ಇಷ್ಟಪಡುವ ಸಾರ್ವಜನಿಕರೇ ಆಯೋಜಿಸಿರುವ ಕಾರ್ಯಕ್ರಮಗಳಿವು ಇಂತಹ ಅಪರೂಪದ ಜಾನಪದ ಕಲೆಗಳ ಗೂಡಾದ ಸಿರಾ ತಾಲ್ಲೂಕು ಬೇವಿನಹಳ್ಳಿ ಗ್ರಾಮದಲ್ಲಿ ಸೋಮನಕುಣಿತ, ಪಟಕುಣಿತ, ಮಣೇವು ಕುಣಿತ, ಕೋಲಾಟ, ಗಣೆವಾದ್ಯ, ಅರೆವಾದ್ಯ, ಭಜನೆ, ಸೋಬಾನೆಪದ, ಮುಖವೇಣಿ ಕಲಾವಿದರಿರುವ ಈ ಗ್ರಾಮವು ಜಾನಪದ ಕಲಾ ಗೂಡಾಗಿದೆ.