ಕಳುವರಹಳ್ಳಿ ಜುಂಜಪ್ಪ -ಕಾಡುಗೊಲ್ಲ ಜನಾಂಗದ ಸಾಂಸ್ಕೃತಿಕ ವೀರ. ಈ ಜನಾಂಗದ ಸಂಸ್ಕೃತಿಯನ್ನು ರೂಪಿಸಿ ಉನ್ನತಿಯನ್ನು ಬೆಳಗಿದವನೆಂದು ಪ್ರಸಿದ್ಧನಾದವ.ಶಿರಾ ತಾಲೋಕಿನ ಕಳುವರಹಳ್ಳಿ ಜಂಜಪ್ಪ ನ ಮೂಲ ನೆಲೆ ಕಳುವರಹಳ್ಳಿಯಲ್ಲಿ ಜಂಜಪ್ಪನ ತಾಯಿ ಚಿನ್ನಮ್ಮ ಸಾಕಿದ ಅರಳಿಮರ ಈಗಲೂ ಇದೆ ಜುಂಜಪ್ಪನನ್ನು ಕದ್ದು ತೆಗೆದು ಕೊಂಡು ಹೋಗಿ ಬೇವಿನಹಳ್ಳಿಯಲ್ಲಿ ಪೂಜಿಸುತ್ತಿದ್ದಾರೆ []

ಕಾಡುಗೊಲ್ಲ ಜನಾಂಗ

ಬದಲಾಯಿಸಿ

ಅತ್ಯಂತ ಭಯ, ಭಕ್ತಿ ಶ್ರದ್ಧೆಗಳಿಂದ ಜುಂಜಪ್ಪನಿಗೆ ಕಾಡುಗೊಲ್ಲರು ನಡೆದುಕೊಳ್ಳುತ್ತಾರೆ. ಇತರ ಜನಾಂಗದವರೂ ನಡೆದುಕೊಳ್ಳುತ್ತಾರೆ. ಹಾವು ಚೇಳುಗಳ ಅಧಿದೈವವಾಗಿ ಜುಂಜಪ್ಪ ಆರಾಧಿಸಲ್ಪಡುತ್ತಾನೆ. ಜುಂಜಪ್ಪನ ಹೆಸರೆತ್ತಿ ಕಾಣಿಕೆಯನ್ನು ಕಟ್ಟಿದರೆ ಹಾವು, ಚೇಳು ಕಾಣಿಸಿಕೊಳ್ಳುವುದಿಲ್ಲ ಎಂದು ಜನ ನಂಬುತ್ತಾರೆ. ಆಗಾಗ ಊರಾಡಲು ಬರುವ ಕಾಡುಗೊಲ್ಲರು 'ಜುಂಜಪ್ಪನ ಕಾಣಿಕೆಯವರು ಈ ಕಾಣಿಕೆಯ ಹಣವನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ತಾವು ಹಾಗಲವಾಡಿ ಮೂಲಕ್ಕೆ ಸಂಬಂಧಪಟ್ಟವರು ಎಂದು ಅವರೆಲ್ಲ ಹೇಳಿಕೊಳ್ಳುತ್ತಾರೆ.

ಕಾಡುಗೊಲ್ಲರು ಮಧ್ಯ ಕರ್ನಾಟಕದ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಗೋವುಗಳ ಸಂರಕ್ಷಣೆ ಹಾಗೂ ಬೆಣ್ಣೆ ತುಪ್ಪಗಳನ್ನು ಮಾರಿ ಜೀವಿಸುವುದು ಈ ಜನಾಂಗದ ಮುಖ್ಯ ಕಸಬು. ವ್ಯವಸಾಯವನ್ನು ಅವಲಂಬಿಸಿದರೂ ಕರುಸಾಕಣೆಯಲ್ಲಿ ತೊಡಗಿದವರೂ ಈಗ ಹೆಚ್ಚಾಗಿ ಕಂಡುಬರುತ್ತಾರೆ. ಪ್ರತ್ಯೇಕ ನೆಲೆಗಳಲ್ಲಿ ವಾಸಿಸುವ ಇವರು ಮುಖ್ಯ ಗ್ರಾಮವೊಂದರ ಸಮೀಪದಲ್ಲಿ ಹಟ್ಟಿಯೊಂದನ್ನು ಕಟ್ಟಿಕೊಂಡು ವಾಸಿಸುತ್ತಾರೆ. ಆ ಹಟ್ಟಿಗೆ ಪ್ರತ್ಯೇಕ ಹೆಸರಿರುವುದು ವಿರಳ. ಹಾಗಲವಾಡಿ ಹಟ್ಟಿ, ಜೀರಹಳ್ಳಿ ಹಟ್ಟಿ, ತರಮಕೋಟೆ ಹಟ್ಟಿ ಹೀಗೆ ಹತ್ತಿರವಿರುವ ಮುಖ್ಯ ಊರುಗಳ ಹೆಸರುಗಳೊಡನೆ ಸೇರಿದಂತೆ ಆ ಹಟ್ಟಿಗಳನ್ನು ಗುರುತಿಸಲಾಗುತ್ತದೆ. ಹಟ್ಟಿಗಳ ನಡುವೆ ಅವರ ಆರಾಧ್ಯ ದೈವಗಳ ದೇವಾಲಯಗಳು (ಗುಬ್ಬ) ಇರುತ್ತವೆ. ಜನಾಂಗದ ಮುಖಂಡನೇ ಅಲ್ಲಿನ ಪೂಜಾರಿ, ಮೂಲಸಂಸ್ಕೃತಿಯನ್ನು ಇಂದಿಗೂ ನಿಚ್ಚಳವಾಗಿ ಉಳಿಸಿಕೊಂಡು ಬಂದಿರುವ ಕಾಡುಗೊಲ್ಲ ಜನಾಂಗ ಊರುಗೊಲ್ಲರಿಗಿಂತ ಭಿನ್ನ.

ಕಾಡುಗೊಲ್ಲರು,ಗೊಲ್ಲರು ತಮ್ಮನ್ನು ಯಾದವಮೂಲಕ್ಕೆ ಆರೋಪಿಸಿಕೊಳ್ಳುತ್ತಾರೆ. ಅದರ ಪ್ರಕಾರ ಇವರು ಕೃಷ್ಣನ ಪರಂಪರೆಗೆ ಸೇರಿದವರಾಗುತ್ತಾರೆ.

ಸಂಪ್ರದಾಯದಲ್ಲಿ ಜುಂಜಪ್ಪ

ಬದಲಾಯಿಸಿ

ಸೋದರಮಾವ ಕಂಸನ ಕಿರುಕುಳವನ್ನು ಕೊನೆಯವರೆಗೂ ಸಹಿಸಿದ ಶ್ರೀ ಕೃಷ್ಣ ಅವನನ್ನು ಕೊಂದು ತನ್ನ ಸಾಮರ್ಥ್ಯವನ್ನು ಮೆರೆಯುತ್ತಾನಷ್ಟೆ. ಜುಂಜಪ್ಪನ ಕತೆಯೂ ಕೃಷ್ಣಕತೆಯ ಚೌಕಟ್ಟಿನಲ್ಲೇ ಬರುತ್ತದೆ. ಇವನೂ ಕಾಡುಮೇಡುಗಳಲ್ಲಿ ದನಗಳನ್ನು ಕಾದುಕೊಂಡು. ಗಣೆಯನ್ನು ಊದಿಕೊಂಡು, ತನ್ನ ವಿರೋಧಿಗಳನ್ನು ಸದೆಬಡೆದು ಮಹಿಮಾವಂತನೆನಿಸುತ್ತಾನೆ. ಇವನಿಗೆ ಕೊನೆಯವರೆಗೂ ಸೋದರಮಾವಂದಿರ ಕಿರುಕುಳವೇ ಹೆಚ್ಚಾಗಿರುತ್ತದೆ. ಏಳುಗೂಡಿನ ದನಗಳಿಗೆ ಒದಗಿದ ಕಷ್ಟಗಳಿಗೆಲ್ಲ ಅವನ ಸೋದರಮಾವಂದಿರ ಕಿರುಕುಳವೇ ಅಸೂಯೆಯೇ ಕಾರಣ. ಕೊನೆಗೆ ಅವರು ಜುಂಜಪ್ಪನಿಗೆ ವಿಷ ಉಣ್ಣಿಸಿ ಕೊಲ್ಲಲು ಪ್ರಯತ್ನಿಸುತ್ತಾರೆ. ಜುಂಜಪ್ಪ ವಿಷದ ಕಜ್ಜಾಯವನ್ನು ಸೇವಿಸುತ್ತಾನೆ. ಮಡಿದು ಮತ್ತೆ ಏಳು ದಿವಸಕ್ಕೆ ಕಾಣಿಸಿಕೊಳ್ಳುತ್ತಾನೆ. ಉರಿಬಾಣಗಳನ್ನು ಬಿಟ್ಟು ಸೋದರಮಾವಂದಿರಾದ ಕಂಬೆರಗೊಲ್ಲರ ಹಟ್ಟಿಯನ್ನು ನಾಶಮಾಡುತ್ತಾನೆ, ಮಾವಂದಿರನ್ನು ಕೊಲ್ಲುತ್ತಾನೆ.

ಜುಂಜಪ್ಪ ಐತಿಹಾಸಿಕ ಪುರಷನೆಂಬುದಕ್ಕೆ ಸ್ಪಷ್ಟವಾದ ಆಧಾರಗಳು ಸಿಕ್ಕದಿದ್ದರೂ ಹಾಗಲವಾಡಿ, ರಾಯಕಳವೇರಹಳ್ಳಿ ಮುಂತಾದ ಸ್ಥಳಗಳಲ್ಲಿ; ಗುಬ್ಬಿ, ಸಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ಕೆಲವು ನೆಲಗಳಿಗೆ ಸಂಬಂಧಿಸಿದ ಮಾಹಿತಿಗಳಲ್ಲಿ ಜುಂಜಪ್ಪ ಒಬ್ಬ ಮಹಿಮಾವಂತ ಮಾನವೀರನಾಗಿಯೇ ಬದುಕಿದ್ದವನು ಎಂಬುದು ಸ್ಪಷ್ಟವಾಗುತ್ತದೆ. ಜುಂಜಪ್ಪ ಕರಡಿಯ ಗೊಲ್ಲರ ವಂಶಕ್ಕೆ ಸೇರಿದವ. ಇವನ ತಂದೆ ಕೆಲವು ಜನಪದ ಕಾವ್ಯಗಳ ಪ್ರಕಾರ ಕೆಂಪನ ಮಲ್ಲೇಗೌಡ. ಕೆಲವು ಕಾವ್ಯಗಳ ಪ್ರಕಾರ ಕೆಂಗುರಿ ಮಲ್ಲೇಗೌಡ.

ಉತ್ತರ ಸಂಪ್ರದಾಯದ ಕತೆಯ ಪ್ರಕಾರ ಜುಂಜಪ್ಪನ ವಂಶದ ಮೂಲಪುರುಷ ಯಾರು ಎಂಬುದು ಸ್ಪಷ್ಟವಾಗುವುದಿಲ್ಲ. ಚಿತ್ರದೇವರ ಗುಡಿಯ ಏಳುಮಂದಿ ಗುರಿಕಾರರಲ್ಲಿ ದೇವರ ದಯಮಾರ ಕೊನೆಯವ. ಅವನ ಮಗ ಕೆಂಗುರಿ ಮಲ್ಲೇಗೌಡ. ಅವನ ಹಿರಿಯಮಗನೇ ಜುಂಜಪ್ಪ. ಅವನಿಗೆ ಇಬ್ಬರು ಸೋದರರು. ಮಾರಣ್ಣ, ಮೈಲಣ್ಣ ತಂಗಿ ಮಾರಕ್ಕ. ಜುಂಜಪ್ಪ ಕಾವ್ಯ(ಈ ಬಗ್ಗೆ ಮುಂದೆ ನೋಡಿ)ದ ಪ್ರಕಾರ ಜುಂಜಪ್ಪ ಅವತಾರ ಪುರುಷ. ವೀರಭದ್ರನೇ ಶಿವನ ಕೋರಿಕೆಯಂತೆ ಜುಂಜಪ್ಪನಾಗಿ ಹುಟ್ಟಿದ. ಕಲಿವೀರ ಜುಂಜಪ್ಪ ಎಂಬುದು ಇವನ ಪೂರ್ಣ ಹೆಸರು. ಈತನ ತಾಯಿ ಚಿನ್ನಮ್ಮ. ಅವಳು ಕಂಬೇರ ಗೊಲ್ಲರ ವಂಶದವಳು. ತಾಯಿಯ ಬೆನ್ನಿನಲ್ಲಿ ಹುಟ್ಟಿದ ಜುಂಜಪ್ಪ ತನ್ನ ಮಹಿಮೆಗಳಿಂದ ಗೊಲ್ಲಜನಾಂಗದ ನಾಯಕನೆನಿಸುತ್ತಾನೆ. ಅವನ ಸಂಸ್ಕೃತಿಯನ್ನು ರೂಪಿಸುತ್ತಾನೆ. ಅವರ ದೈವವೇ ಆಗಿ ಪೂಜೆಗೊಳ್ಳುತ್ತಾನೆ.

ಸಿರಾ ತಾಲ್ಲೂಕಿನ ರಾಯಕಳವೇರಹಳ್ಳಿ ಜುಂಜಪ್ಪನ ಮೂಲನೆಲೆಯೆಂದು ಆ ಸುತ್ತಿನವರೂ ಹಾಗಲವಾಡಿ ಮೂಲನೆಲೆಯೆಂದು ಆ ಸುತ್ತಿನವರೂ ಹೇಳುತ್ತಾರೆ. ಹಾಗಲವಾಡಿಯ ಹಟ್ಟಿಯಲ್ಲಿ ಜುಂಜಪ್ಪನ ದೇವಾಲಯವಿರುವುದಂತೂ ನಿಜ. ಅಲ್ಲಿ ದೀವಳಿಗೆಯಲ್ಲಿ ದೊಡ್ಡ ಜಾತ್ರೆಯೊಂದು ನಡೆಯುತ್ತದೆ.

ಜುಂಜಪ್ಪ ಸಂಚರಿಸಿದ ಅನೇಕ ಸ್ಥಳಗಳ ಪ್ರಸ್ತಾಪ ಜನಪದ ಕಾವ್ಯದಲ್ಲಿ ಬರುತ್ತದೆ. ಶಿವಗಂಗ, ಮಾಗಡಿ, ಚಿಕ್ಕಮಗಳೂರಿನ ಸಮೀಪದ ಬಾಬಾಬುಡನ್‍ಗಿರಿ, ಈಗಿನ ಮಾರಿಕಣಿವೆ ಪ್ರದೇಶ, ಮದಗದ ಗುಡ್ಡ,ಹೂವಿನಕಟ್ಟೆ,ಚೋಳೂರು, ಸಿರಾ ಮುಂತಾದ ಪ್ರದೇಶಗಳ ಹೆಸರು ಬರುತ್ತದೆ. ತನ್ನ ಏಳುಗೂಡಿನ ದನಗಳನ್ನು ಜುಂಜಪ್ಪ ಇಲ್ಲಿನ ಕಾವಲುಗಳಲ್ಲೆಲ್ಲ ಮೇಯಿಸಿದ, ಅಲ್ಲಲ್ಲಿನ ಬಲಿಷ್ಠ ವ್ಯಕ್ತಿಗಳನ್ನೆಲ್ಲ ಸದೆಬಡಿದ, ತನ್ನ ತಮ್ಮಂದಿರಾದ ಮಾರಣ್ಣ, ಮೈಲಣ್ಣ ಅವರನ್ನು ಕೂಡಿಕೊಂಡು ಗೋಪಾಲಕನಾಗಿಯೇ ತನ್ನ ಶಕ್ತಿ ಸಾಮಥ್ರ್ಯದಿಂದ ಅದ್ವಿತೀಯನಾಗಿ ಮೆರೆದ.

ಜುಂಜಪ್ಪನ ಹೆಸರಿನಲ್ಲಿ ಊರಾಡಲು ಬರುವ ಭಕ್ತರು ಜುಂಜಪ್ಪನ ಗಣೆ ಎಂಬ ಸಾಧನವನ್ನು ತಮ್ಮ ಹೆಗಲಲ್ಲಿ ಹೊತ್ತು ಅವರು ಜುಂಜಪ್ಪನ ಕಾಣಿಕೆ ಎಂದು ಸಾರಿಕೊಂಡು ಬರುತ್ತಾರೆ. ಜುಂಜಪ್ಪನ ಪ್ರತೀಕವಾದ ಈ ಗಣೆ ಒಂದು ಬಿದಿರ ಕೋಲು. ಅದಕ್ಕೆ ನಾನಾರೀತಿಯ ವಸ್ತ್ರಗಳನ್ನು ಸುತ್ತಿ, ನಾಗರ ಹೆಡೆಯನ್ನು ಸಿಕ್ಕಿಸಿ, ನವಿಲುಗರಿಗಳಿಂದ ಅಲಂಕರಿಸಿರುತ್ತಾರೆ. ಜುಂಜಪ್ಪನಿಗೆ ಹರಕೆ ಹೊತ್ತವರು ಈ ಗಣೆಯವರಿಗೆ ಕಾಣಿಕೆ ಸಲ್ಲಿಸುತ್ತಾರೆ.

ಜುಂಜಪ್ಪನ ಸಂಪ್ರದಾಯದ ಗಣೆ ಎಂಬ ಮತ್ತೊಂದು ವಾದ್ಯ ಅತ್ಯಂತ ಜನಪ್ರಿಯವಾಗಿದೆ. ಸುಮಾರು ಎರಡೂವರೆ ಅಡಿ ಉದ್ದದ ಈ ಬಿದಿರ ಕೊಳವೆ ಒಂದು ದೊಡ್ಡ ಕೊಳಲು. ಇದನ್ನು ಊದಿಕೊಂಡು ಗೊಲ್ಲರು ದೇವರನ್ನು ಮೈದುಂಬಿಸಿಕೊಂಡು ಕಣಿ ಹೇಳುತ್ತಾರೆ. ಜುಂಜಪ್ಪನ ಕಾವ್ಯವನ್ನು ಹಾಡುವಾಗ ಹಿಮ್ಮೇಳದ ಜೊತೆಗೆ ಶ್ರುತಿಗಾಗಿ ಈ ಕೊಳಲನ್ನೇ ಬಳಸಲಾಗುತ್ತದೆ. ಗಣೆಯನಾದ ಇಂಪಾದುದು, ಮಧುರಮೋಹಕವಾದುದು. ಕಂಚಿನ ಗಣೆಯನ್ನು ಜುಂಜಪ್ಪ ಬಳಸುತ್ತಿದ್ದನೆಂದೂ ಗಣೆಯೂದಿ ತನ್ನ ದನಗಳನ್ನೆಲ್ಲ ಅವನು ತಿರುವುತ್ತಿದ್ದನೆಂದೂ ಕಾವ್ಯದಲ್ಲಿ ವರ್ಣನೆ ಬರುತ್ತದೆ. 'ಬಟ್ಟನ್ನ ಬಡಮೈಲ ಎಂಬ ಜುಂಜಪ್ಪನ ನೆಚ್ಚಿನ ಹೋರಿಯನ್ನು ಚೋಳೂರು ಪಾಳೆಯಗಾರರು ಕೋಟೆಯಲ್ಲಿ ಕೂಡಿಕೊಳ್ಳುತ್ತಾರೆ. ಮದಗದ ಗುಡ್ಡವನ್ನೇರಿ ಜುಂಜಪ್ಪ ತನ್ನ ಗಣೆಯನ್ನು ಊದತೊಡಗುತ್ತಾನೆ. ಆ ಗಣೆಯ ನಾದಕ್ಕೆ ರೋಮಾಂಚನಗೊಂಡ ಬಡಮೈಲ ಕೋಟೆಯ ಮೇಲೆ ಹಾರಿ ತನ್ನ ಸ್ವಾಮಿಯನ್ನ ಸೇರಿಕೊಂಡ ಅದ್ಭುತವಾದ ವರ್ಣನೆ ಆ ಕಾವ್ಯದಲ್ಲಿ ಬರುತ್ತದೆ.

ಜುಂಜಪ್ಪನ ಹಟ್ಟಿ

ಬದಲಾಯಿಸಿ

ಹಾಗಲವಾಡಿ ಚಿಕ್ಕನಾಯ್ಕನಹಳ್ಳಿಯ ಸಮೀಪದ ಒಂದು ಐತಿಹಾಸಿಕ ನೆಲೆ. ಈ ಊರಿನ ಪಶ್ಚಿಮಕ್ಕೆ ಕೆಲವು ಕೂಗಿನ ದೂರದಲ್ಲಿ ಗಿರಿಶ್ರೇಣಿಯ ತಪ್ಪಲಿನಲ್ಲಿ ಜುಂಜಪ್ಪನ ಹಟ್ಟಿ ಇದೆ. ಈ ಹಟ್ಟಿಯಿಂದಾಗಿ ಹಾಗಲವಾಡಿಯ ಹೆಸರು ಹೆಚ್ಚಾಗಿ ಕೇಳಿಬರುತ್ತದೆ.

ಜುಂಜಪ್ಪನ ಕಾವ್ಯ

ಬದಲಾಯಿಸಿ

ಜನಪದ ಕಾವ್ಯಗಳಲ್ಲಿ ಜುಂಜಪ್ಪನನ್ನು ಕುರಿತ ಕಾವ್ಯವೂ ಪ್ರಮುಖವಾದದು. ಅದು `ಜುಂಜಪ್ಪನ ಪೂರ್ವಜರ ಕತೆ, 'ಜುಂಜಪ್ಪನ ಕತೆ-ಹೀಗೆ ಎರಡು ಮುಖವಾದದು. ಸಾಕಷ್ಟು ವಿಸ್ತಾರವಾದ ಈ ಕಾವ್ಯದಲ್ಲಿ ಗೊಲ್ಲಜನಾಂಗದ ಸಮಗ್ರ ಸಂಸ್ಕೃತಿಯ ಸಾರವನ್ನೇ ಕಾಣಬಹುದು. ಈ ದೃಷ್ಟಿಯಿಂದ ಇದನ್ನು ಅವರ ಕುಲಪುರಾಣ ಎಂದು ಕರೆಯಬಹುದು. ಜುಂಜಪ್ಪನ ಕಾವ್ಯ ನಮ್ಮ ಜನಪದ ಕಾವ್ಯಗಳಲ್ಲೆಲ್ಲ ಅತ್ಯುತ್ಕೃಷ್ಟವಾದುದು. ಕಾಡುಮೇಡುಗಳಲ್ಲಿ ದನದ ಹಿಂಡಿನ ಜೊತೆಯಲ್ಲಿ ಅಡ್ಡಾಡಿಕೊಂಡಿದ್ದ ಜುಂಜಪ್ಪನ ಮಹಿಮೆಯನ್ನಷ್ಟೇ ಅದು ಬಣ್ಣಿಸದೆ ಯಾವುದೇ ಗತಕಾಲದ ಜೀವನ ವೈವಿಧ್ಯವನ್ನೂ ಮಾಟ ಮಂತ್ರಗಳ ಪ್ರಭಾವವನ್ನೂ ಚಿತ್ರಿಸುತ್ತದೆ. ಮಂತ್ರವಾದಿಗಳನ್ನು ಮಾಟಗಾರರನ್ನು ಇತರ ದರ್ಪಿಷ್ಟರನ್ನು ಕ್ರಮವಾಗಿ ಜುಂಜಪ್ಪ ಗೆದ್ದುಕೊಂಡು ಹೋದ ಕೌತುಕದ ಕತೆಯೇ ಈ ಕಾವ್ಯದ ವಸ್ತು. ಆ ಉದಾತ್ತ ವೀರನ ಅಪೂರ್ವ ವ್ಯಕ್ತಿತ್ವವನ್ನು ಸುಂದರವಾಗಿ ಈ ಕಾವ್ಯದಲ್ಲಿ ಕಡೆಯಲಾಗಿದೆ. ಜುಂಜಪ್ಪನ ಸಂಪ್ರದಾಯ ಸಂಶೋಧಕರ ಕುತೂಹಲವನ್ನು ಕೆರಳಿಸುವ ಆಸಕ್ತಿದಾಯಕ ಕ್ಷೇತ್ರ.

ಉಲ್ಲೇಖಗಳು

ಬದಲಾಯಿಸಿ
  1. {{cite web}}: Empty citation (help)



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜುಂಜಪ್ಪ&oldid=1254699" ಇಂದ ಪಡೆಯಲ್ಪಟ್ಟಿದೆ