ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ
ಅರವಿಂದ್ ಕೇಜ್ರಿವಾಲ್ ರವರು ಆಮ್ ಆದ್ಮಿ ಪಕ್ಷ (Aam Aadmi Party)ದ ಸ್ಥಾಪಕರು. ಭಾರತ ದೇಶದ ಸುಶಿಕ್ಷಿತ ರಾಜಕಾರಣಿಗಳಲ್ಲೊಬ್ಬರಾಗಿರುವ ಇವರು ದೆಹಲಿಯ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಕೇಜ್ರಿವಾಲರು ಸಾಮಾಜಿಕ ಕಾರ್ಯಕರ್ತ ಮತ್ತು ಪರಿವರ್ತನಾ ಸಂಘದ ಸ್ಥಾಪಕ.
ಅರವಿಂದ್ ಕೇಜ್ರಿವಾಲ್ | |
---|---|
![]() | |
೭ನೆಯ ದೆಹಲಿಯ ಮುಖ್ಯಮಂತ್ರಿ
| |
ಹಾಲಿ | |
ಅಧಿಕಾರ ಸ್ವೀಕಾರ 28 ಡಿಸೆಂಬರ್ 2013 | |
ಪೂರ್ವಾಧಿಕಾರಿ | ಶೀಲಾ ದೀಕ್ಷಿತ್ |
ವೈಯಕ್ತಿಕ ಮಾಹಿತಿ | |
ಜನನ | ಸಿವಾನಿ, ಹರ್ಯಾಣ | ೧೬ ಆಗಸ್ಟ್ ೧೯೬೮
ರಾಜಕೀಯ ಪಕ್ಷ | ಆಮ್ ಆದ್ಮಿ ಪಕ್ಷ |
ಸಂಗಾತಿ(ಗಳು) | ಸುನಿತ ಕೇಜ್ರಿವಾಲ್ |
ಮಕ್ಕಳು | ಇಬ್ಬರು |
ವಾಸಸ್ಥಾನ | ಘಾಸಿಯಾಬಾದ್, ಉತ್ತರ ಪ್ರದೇಶ, ಭಾರತ (Private) |
ಅಭ್ಯಸಿಸಿದ ವಿದ್ಯಾಪೀಠ | ಐಐಟಿ ಖರಗ್ಪುರ |
ಧರ್ಮ | ಹಿಂದೂ ಧರ್ಮ |
ಪ್ರಶಸ್ತಿಗಳು | ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ |
ಬಾಲ್ಯ ಮತ್ತು ಶಿಕ್ಷಣ ಸಂಪಾದಿಸಿ
- ಅರವಿಂದ್ ಕೇಜ್ರಿವಾಲ್‌ರವರು,[೧] ಹರ್ಯಾಣದ ಹಿಸ್ಸಾರ್‌ನಲ್ಲಿ ಎಲೆಕ್ಟ್ರಿಕ್ ಇಂಜಿನಿಯರರಾಗಿದ್ದ ಗೋಬಿಂದ್ ರಣ್ ಕೇಜ್ರಿವಾಲ್ ಹಾಗೂ ಗೀತಾದೇವಿಯವರ ಪುತ್ರನಾಗಿ ಜೂನ್ ೧೬, ೧೯೬೮ರಲ್ಲಿ ಜನಿಸಿದರು.
- ಅಲ್ಲಿಯೇ ಇದ್ದ ಕ್ಯಾಂಪಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಖರಗ್‌ಪುರದ ಪ್ರತಿಷ್ಠಿತ ಐ ಐ ಟಿ ಯಲ್ಲಿ ೧೯೮೯ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದರು. ಆ ವರ್ಷವೇ ಟಾಟಾ ಸ್ಟೀಲ್‌ನಲ್ಲಿ ವಾರ್ಷಿಕ ೫-೮ ಲಕ್ಷ ವರಮಾನದ ನೌಕರಿ ಗಿಟ್ಟಿಸಿದರಾದರೂ ೧೯೯೨ರಲ್ಲಿ ಆ ಕೆಲಸಕ್ಕೆ ವಿದಾಯ ಹೇಳಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದು ೧೯೯೫ರಲ್ಲಿ ಕಂದಾಯ ಇಲಾಖೆಯ ಕೆಲಸಕ್ಕೆ ಸೇರಿಕೊಂಡರು.
ಪರಿವರ್ತನ ಸಂಘ ಸ್ಥಾಪನೆ ಸಂಪಾದಿಸಿ
- ಇಷ್ಟರ ಮಧ್ಯೆ ಕಲ್ಕತ್ತಾದ ಮದರ್ ತೆರೆಸಾರ “ಮಿಷನರೀಸ್ ಆಫ಼್ ಚಾರಿಟಿ”, ರಾಮಕೃಷ್ಣ ಮಿಷನ್, ನೆಹರೂ ಯುವ ಕೇಂದ್ರ ಮತ್ತಿತರ ಸಮಾಜ ಸೇವಾ ಸಂಸ್ಥೆಗಳ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮಾಜ ಸೇವೆಯಲ್ಲಿ ತೀವ್ರತರವಾದ ಆಸಕ್ತಿ ಹೊಂದಿದ್ದ ಇವರಿಗೆ ಸರ್ಕಾರಿ ಕಛೇರಿಗಳಲ್ಲಿ ವ್ಯವಹಾರಗಳು ಹಾಗೂ ರಾಜಕಾರಿಣಿಗಳ ಭ್ರಷ್ಟಾಚಾರ ಮಿತಿಮೀರಿದ ಮಟ್ಟದಲ್ಲಿರುವುದನ್ನು ಕಂಡು ಬಂತು.
- ಇವುಗಳ ವಿರುದ್ದ ಜನರಲ್ಲಿ ಅರಿವನ್ನು ಮೂಡಿಸುವ ಸಲುವಾಗಿಯೇ ೨೦೦೬ರಲ್ಲಿ ತಾವು ಹೊಂದಿದ್ದ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಭ್ರಷ್ಟಾಚಾರದ ವಿರುದ್ದ ಹೋರಾಡಲೆಂದೇ ದೆಹಲಿ ಮೂಲದ ನಾಗರೀಕರನ್ನೊಳಗೊಂಡ “ಪರಿವರ್ತನ” ಎಂಬ ಸಂಘವನ್ನು ಹುಟ್ಟು ಹಾಕಿದರು. ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಆಡಳಿತ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದು ಈ ಸಂಘದ ಉದ್ದೇಶವಾಗಿತ್ತು.
- ೨೦೦೬ ಡಿಸೆಂಬರ್ ನಲ್ಲಿ ಮನೀಷ್ ಸಿಸೋಡಿಯಾ ಹಾಗೂ ಅಭಿನಂದನ್ ಸೇಖರಿ ಎಂಬುವವರ ಜೊತೆಗೂಡಿ “ಪಬ್ಲಿಕ್ ಕಾಸ್ ಫ಼ಾರ್ ರೀಸರ್ಚ್ ಫ಼ೌಂಡೇಷನ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇಂಥಹ ಹಲವು ಹೋರಾಟಗಾರರ ಹೋರಾಟಕ್ಕೆ ಮಣಿದ ಸರ್ಕಾರ ೨೦೦೬ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು.
- ಇದನ್ನು ಸಾಮಾನ್ಯ ಜನರೂ ಸಹ ಪರಿಣಾಮಕಾರಿಯಾಗಿ ಬಳಸಬಹುದೆಂದು ಅರಿತಿದ್ದ ಕೇಜ್ರಿವಾಲ್ ತಂಡ ಭಾರತದಾದ್ಯಂತ ಸಂಚರಿಸಿ ಆರ್‌ಟಿಐನ ಮಹತ್ವವನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇಂತಹ ಸಮಾಜಪರ ಕಾರ್ಯಗಳಿಂದಾಗಿಯೇ ಆ ವರ್ಷದ “ರಾಮನ್ ಮ್ಯಾಗ್ಸೆಸ್ಸೆ” ಪ್ರಶಸ್ತಿಗೆ ಕೇಜ್ರಿವಾಲ್ ಭಾಜನರಾದರು.
ಜನ ಲೋಕಪಾಲ ಮಸೂದೆ ಸಂಪಾದಿಸಿ
- ಮಾಹಿತಿ ಹಕ್ಕು ಕಾಯ್ದೆ ಸಮರ್ಪಕವಾಗಿ ಬಳಕೆಯಾಗತೊಡಗಿದ ಪರಿಣಾಮವಾಗಿ ರಾಜಕಾರಿಣಿಗಳ ಹಾಗೊ ಸರ್ಕಾರಿ ಅಧಿಕಾರಿಗಳು ನಡೆಸಿದ ಅವ್ಯವಹಾರಗಳು ದಿನೇ ದಿನೇ ಹೊರಬರತೊಡಗಿದವು ಆದರೆ ಇವರೆಲ್ಲರೂ ಪ್ರಭಾವಿಗಳಾಗಿದ್ದರಿಂದಾಗಿ ಇವರನ್ನು ಶಿಕ್ಷಿಸಲು ಸೂಕ್ತ ಕಾನೂನು ಇಲ್ಲದಿರುವುದನ್ನು ಅರಿತ ಕೇಜ್ರಿವಾಲ್ ಕಿರಣ್ ಬೇಡಿ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಸಂತೋಷ್ ಹೆಗ್ಡೆ ಮುಂತಾದ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳ ಜೊತೆ ಸೇರಿ ಭ್ರಷ್ಟರನ್ನು ಶಿಕ್ಷಿಸುವ “ಜನ ಲೋಕಪಾಲ ಮಸೂದೆಯನ್ನು” ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಜನಾಭಿಪ್ರಾಯವನ್ನು ಸಂಗ್ರಹಿಸಲು ಮುಂದಾದರು. ಇದರ ನಿರ್ವಹಣೆಗೆಂದೇ “ಭ್ರಷ್ಟಾಚಾರ ವಿರುದ್ದ ಭಾರತ” ಎಂಬ ಸಂಘ ಸ್ಥಾಪನೆಯಾಯ್ತು.
- ೨೦೧೧ ಏಪ್ರಿಲ್ ೫ರಂದು ಜಂತರ್ ಮಂತರ್‌ನಲ್ಲಿ ಭಾರತೀಯ ಸೇನೆಯ ಮಾಜಿ ಯೋಧ ಮಹಾರಾಷ್ಟದಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಪದ್ಮ ಭೂಷಣ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ “ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಿಗೊಳಿಸೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಜನಾಂದೋಲನಕ್ಕೆ ಚಾಲನೆ ನೀಡಲಾಯ್ತು. ೨೦೧೧ರ ಆಗಷ್ಟ್ ೧೫ರ ಒಳಗಾಗಿ ಜನಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಲಾಯ್ತು.
- ಆದರೆ ಸರ್ಕಾರ ಆಗಸ್ಟ್ ೧೫ರ ತನಕವೂ ಇದರ ಬಗ್ಗೆ ತಲೆಕೆಡಿಸಿಕೊಳ್ಳದಿದ್ದನ್ನು ಕಂಡು ಆಗಸ್ಟ್ ೧೬ರಂದು ಇದೇ ತಂಡ ಉಪವಾಸ ಸತ್ಯಾಗ್ರಹ ಆರಂಭಿಸಿಯೇ ಬಿಟ್ಟಿತು. ಅನುಮತಿ ಪಡೆಯದೇ ಮೈದಾನದಲ್ಲಿ ಜನರನ್ನು ಸೇರಿಸಿದ ಕಾರಣ ನೀಡಿ ಸರ್ಕಾರ ಅಣ್ಣಾ ಹಜಾರೆ, ಕೇಜ್ರಿವಾಲ್ ಮತ್ತಿತರನ್ನು ೨ ದಿನಗಳ ಕಾಲ ತಿಹಾರ್ ಜೈಲಿನಲ್ಲಿಟ್ಟಿತ್ತು. ಜೈಲಿನಿಂದ ಹೊರಬಂದ ತಂಡ ರಾಮ್ ಲೀಲಾ ಮೈದಾನದಲ್ಲಿ ೧೨ ದಿನಗಳ ಕಾಲ ಸತ್ಯಾಗ್ರಹ ಮಾಡಿತು.
- ದೇಶಾದ್ಯಂತ ಪ್ರತಿಭಟನೆ ಕಾವೇರಿದಾಗ ಎಚ್ಚೆತ್ತ ಕೇಂದ್ರ ಸರ್ಕಾರ “ಜನಲೋಕಪಾಲ ಮಸೂದೆ”ಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿತು. ಅಂತಿಮವಾಗಿ ಸರ್ಕಾರ ಸಂಸತ್ತಿನಲ್ಲಿ ದುರ್ಬಲ ಲೋಕಪಾಲ ಮಸೂದೆಯನ್ನು ಮಂಡಿಸಿತು. ಲೋಕಸಭೆಯಲ್ಲಿ ಇದು ಅಂಗಿಕಾರಗೊಂಡರೂ ರಾಜ್ಯಸಭೆ ಇದನ್ನು ತಿರಸ್ಕರಿಸಿತು. ತಮ್ಮ ಬೇಡಿಕೆ ಈಡೇರುವುದಿಲ್ಲವೆಂದು ಅರಿತ ಕೇಜ್ರಿವಾಲ್ ೨೦೧೨ರಲ್ಲಿ ಗೋಪಾಲ್ ರೈ ಹಾಗೂ ಮನೀಶ್ ರವರ ಜೊತೆಗೂಡಿ ಮತ್ತೆ ಹೋರಾಟಕ್ಕಿಳಿದರು.
- ಇದಕ್ಕೂ ಸರ್ಕಾರ ಜಗ್ಗದ ಕಾರಣ ಕೇಜ್ರಿವಾಲ್ ಹೊಸದೊಂದು ಪಕ್ಷ ರಚಿಸಿ ರಾಜಕೀಯಕ್ಕೆ ಧುಮುಕಿದರು. ರಾಜಕೀಯದಲ್ಲಿ ಆಸಕ್ತಿ ಹೋಂದಿರದ ಅಣ್ಣಾ ಹಜಾರೆಯವರು ತಮ್ಮ ಬೆಂಬಲಿಗರೊಂದಿಗೆ ಇವರ ತಂಡದಿಂದ ಹೊರನಡೆದರು. ಸದ್ಯಕ್ಕೆ ಕೇಜ್ರಿವಾಲ್ ರವರ ಪತ್ನಿ ಸುನಿತಾರವರು ಕೇಂದ್ರ ಸಚಿವಾಲಯದ ಇಲಾಖೆಯೊಂದರಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಇಬ್ಬರು ಮಕ್ಕಳೊಂದಿಗೆ ಇವರ ಕುಟುಂಬ ದೆಹಲಿಯ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದೆ.
- ಕೇಜ್ರಿವಾಲ್ ರವರು ಹೊಸಪಕ್ಷದ ಮುಖಾಂತರ ಸಾಮಾಜಿಕ ಬದ್ಧತೆಯುಳ್ಳ ಸಂಘ ಸಂಸ್ಥೆಗಳ ನೆರವಿನಿಂದ ದೇಶದ ಯುವ ಜನಾಂಗವನ್ನು ಭ್ರಷ್ಟಾಚಾರದ ವಿರುದ್ದ ಹೋರಾಡಲು ಹಾಗೂ ಹೊರದೇಶದ ಬ್ಯಾಂಕ್‌ಗಳಲ್ಲಿ ಶ್ರೀಮಂತರು ಇಟ್ಟಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಾಸ್ ತರಲು ಸರ್ಕಾರವನ್ನು ಒತ್ತಾಯಿಸುತ್ತ ತಮ್ಮ ಸೇವೆಯನ್ನು ದೇಶಕ್ಕೆ ಸಂಪೂರ್ಣವಾಗಿ ಮೀಸಲಿಟ್ಟಿದ್ದಾರೆ. ಇವರ ದಿಟ್ಟ ಹೋರಾಟವನ್ನು ಕಂಡು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಭಾರತದ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿದೆ.
ರಾಜಕೀಯ ಬೆಳವಣಿಗೆ ಸಂಪಾದಿಸಿ
- ಅರವಿಂದ ಕೇಜ್ರಿವಾಲರು ನವಂಬರ್ ೨೦೧೨ರಲ್ಲಿ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದರು. ಅವರು ೨೦೧೩ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶೀಲಾ ದೀಕ್ಷಿತರನ್ನು ಸೋಲಿಸಿದರು.[೨] ನಂತರ ದೆಹಲಿಯ ಮುಖ್ಯಮಂತ್ರಿ ಆದರು.[೩]
- ರಾಷ್ಟ್ರ ರಾಜಕಾರಣದ ಭೂಪಠವನ್ನು ಅಮೂಲಾಗ್ರವಾಗಿ ಬದಲಾಯಿಸುವ ಮುನ್ಸೂಚನೆ ರೀತಿಯಲ್ಲಿ 2015 ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಬಹುಮತ ಪಡೆದುಕೊಂಡಿತು.
- 70 ಸದಸ್ಯ ಬಲದ ವಿಧಾನಸಭೆಯಲ್ಲಿ 67 ಸ್ಥಾನಗಳನ್ನು ಪಡೆಯುವ ಮೂಲಕ ಆಮ್ ಆದ್ಮಿ ಪಕ್ಷ ರಾಜಕೀಯ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಮುಖಭಂಗ ಹಾಗೂ ಗರ್ವಭಂಗ ಮಾಡಿತು.
- ಅಧಿಕಾರಕ್ಕೆ ಬರುವ ಆಸೆ ಹೊಂದಿದ್ದ ಭಾರತೀಯ ಜನತಾಪಕ್ಷಕ್ಕೆ ಕೇವಲ 3 ಸ್ಥಾನಗಳು ಮಾತ್ರ ಲಭಿಸಿತು. ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದು ಸ್ಥಾನವೂ ದಕ್ಕಲಿಲ್ಲ. ಹೀಗಾಗಿ ಭಾರತದ ರಾಜಕೀಯ ಇತಿಹಾಸದಲ್ಲಿ ಇದೊಂದು ವಿಶಿಷ್ಟ ದಾಖಲೆ ಎಂದು ಹೇಳಬಹುದಾಗಿದೆ.
೨೦೨೦ರ ದೆಹಲಿ ವಿಧಾನ ಸಬೆಚುನಾವಣೆಯಲ್ಲಿ ಗೆಲುವು ಸಂಪಾದಿಸಿ
- ೨೦೨೦ ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಅವರು ತಮ್ಮ ಪಕ್ಷವನ್ನು ಮತ್ತೆ ಗೆಲುವಿಗೆ ತಂದರು. ದೆಹಲಿಯ ೭೦ ವಿಧಾನ ಸಭೆಯ ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ೬೨ ಸ್ಥಾನಗಳನನ್ನು ಗಳಿಸಿತು. ಅವರ ಉತ್ತಮ ಶಿಕ್ಷಣ ನೀತಿ, ಉಚಿತ ನೀರು, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮೊದಲಾದ ಅನೇಕ ಜನಪ್ರಿಯ ಕಾರ್ಯಗಳು ಅವರ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.[೪] ಮೂರನೇ ಬಾರಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ 16 ಫೆಬ್ರವರಿ 2020 ರಂದು ಪ್ರಮಾಣ ವಚನ ಸ್ವೀಕರಿಸೆದರು. ಇದರೊಂದಿಗೆ ಸಂಪುಟದ 6 ಜನ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು.[೫]
ಹೊರಸಂಪರ್ಕಕೊಂಡಿಗಳು ಸಂಪಾದಿಸಿ
ಉಲ್ಲೇಖಗಳು ಸಂಪಾದಿಸಿ
- ↑ "'ಅಭಿವ್ಯಕ್ತಿ,','ಅರವಿಂದ ಕೇಜ್ರಿವಾಲ ಎಂಬ ಮಾಂತ್ರಿಕ' December 29, 2013". Archived from the original on ಮಾರ್ಚ್ 7, 2016. Retrieved ಫೆಬ್ರವರಿ 7, 2015.
- ↑ ಭಾರತದ ಚುನಾವಣಾ ಆಯೋಗದ ಜಾಲತಾಣ 'ಭಾರತದ ಚುನಾವಣಾ ಆಯೋಗದ ಜಾಲತಾಣ' Archived 2013-12-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಪ್ರಜಾವಾಣಿ ವರದಿ 12/30/2013 'ಪ್ರಜಾವಣಿ ಪತ್ರಿಕೆಯ ವರದಿ,' 'ರಾಜಕೀಯದಲ್ಲಿ ಹೊಸಪರಿಭಾಷೆ' ೧೨/೩೦/೨೦೧೩
- ↑ ಮತ್ತೆ ಆಪ್ ಮಡಿಲಿಗೆ ದೆಹಲಿ: ಕೇಜ್ರಿವಾಲ್ ಗೆಲುವಿಗೆ ಕಾರಣಗಳಿವು..ಪ್ರಜಾವಾಣಿ ವಾರ್ತೆ;d: 12 ಫೆಬ್ರವರಿ 2020,
- ↑ ಅರವಿಂದ ಕೇಜ್ರಿವಾಲ್ ಸಂಪುಟ ಸೇರಿರುವ ಆರು ಜನ ಸಚಿವರು ಇವರು..ಪ್ರಜಾವಾಣಿ ;d: 16 ಫೆಬ್ರವರಿ 2020