ಅಮೆಜೋನಿಯ
ಅಮೆಜಾನ್ ಮಳೆಕಾಡು | ||
Forest | ||
[[Image:| 256px|none |
]] | |
Kintras | ಬ್ರೆಜಿಲ್, ಪೆರು, ಕೊಲಂಬಿಯಾ, ವೆನೆಜುವೇಲ, ಎಕ್ವಡಾರ್, ಬೊಲಿವಿಯಾ, ಗಯಾನ, ಸುರಿನಾಮ್, ಫ್ರಾನ್ಸ್ (French Guiana) | |
---|---|---|
Pairt o | South America | |
River | Amazon River | |
Area | ೫೫,೦೦,೦೦೦ km² (೨೧,೨೩,೫೬೨ sq mi) | |
[[Image:| 256px|none |
]] |
ಜಗತ್ತಿನ ಅತಿ ವಿಸ್ತಾರ,ಅನನ್ಯ ವೃಷ್ಟಿವನ
ಬದಲಾಯಿಸಿಅಮೆಜೋನಿಯ ಅಮೆಜೋನಿಯಾ-ಅದೊಂದು ಕಾನನ. ಧರೆಯ ಅತಿ ವಿಶಿಷ್ಟ,ಅತಿ ವಿಸ್ತಾರ,ಅತೀವ ವೈವಿಧ್ಯಮಯ ಅತಿ ಅಗಮ್ಯ ಅನನ್ಯ ವೃಷ್ಟಿವನ ಅದು.ಸುಪ್ರಸಿದ್ಧ 'ಅಮೆಜಾನ್' ನದಿಯ ಕೃಪೆಯಲ್ಲಿ ಅರಳಿರುವ ಅಡವಿ ಪ್ರದೇಶ ಅದು..ಹಾಗಿದ್ದರಿಂದಲೇ ಈ ಹೆಸರು. ಅಮೆಜೋನಿಯದ ನೆಲೆ ದಕ್ಷಿಣ ಆಮೇರಿಕ .ಈ ಭೂಖಂಡದಲ್ಲಿ ಸಮಭಾಜಕದ ವೃತ್ತದ ಆಸುಪಾಸಿನಲ್ಲಿ ಎಂಟು ದೇಶಗಳಲ್ಲಿ ಹರಡಿರುವ ಈ ಕಾನನದ ಒಟ್ಟು ವೈಶಾಲ್ಯ ಐದೂವರೆ ದಶಲಕ್ಷ ಚದರ ಕಿ.ಮೀ.. ವರ್ಷಪೂರ್ತಿ ಪ್ರತಿದಿನವೂ ಸುರಿವ ವರ್ಷಧಾರೆಯಿಂದಲೂ ಅಮೆಜಾನ್ ನದಿ ಮತ್ತು ಅದರ ಒಂದು ಸಾವಿರದ ಒಂದುನೂರು ಉಪನದಿಗಳ ಜಾಲದಿಂದಲು ಪೋಷಣೆಗೊಂಡು ಪಸರಿಸಿರುವ ಈ ವೃಷ್ಟಿವನದಲ್ಲಿ ನಡು ಹಗಲಿನಲ್ಲೂ ಮಂದ ಬೆಳಕು.ವಾರ್ಷಿಕ ಸರಾಸರಿ ಮುನ್ನೂರು ಸೆಂ.ಮೀ.ಮಳೆ ಬೀಳುವ ಈ ದಟ್ಟ ಅಡವಿಯಲ್ಲಿ ನಿರಭ್ರ ಮಧ್ಯಾನಗಳಲ್ಲೂ ಶೇಖಡ ಒಂದರಷ್ಟು ಸೂರ್ಯರಶ್ಮಿಯೂ ನೆಲೆ ತಲುಪುವುದಿಲ್ಲ! ಜೀವ ವೈವಿಧ್ಯತೆ ಮತ್ತು ನಿಬಿಡತೆ ಕುರಿತಂತೆಯೂ ಅಮೆಜೋನಿಯಾಗೆ ಬೇರಾವ ಅರಣ್ಯವೂ ಸರಿಸಾಟಿ ಇಲ್ಲ.ಈ ವೃಷ್ಟಿವನದಲ್ಲಿ ಅಲ್ಲಿನದೇ ವಿಶಿಷ್ಟ ನಾಲ್ಕು ಸಾವಿರಕ್ಕೂ ಹೆಚ್ಚು ವೃಕ್ಷ ಪ್ರಭೇಧಗಳಿವೆ!ಈ ಅಡವಿಯ ಚಾವಣಿ ನೆಲದಿಂದ ಒಂದು ನೂರಾ ಅರವತ್ತು ಅಡಿಗಳ ಔನತ್ಯ ಮೀರುತ್ತದೆ!ಅಲ್ಲಿನ ನೆಲದ ಮೇಲಂತೂ ಹೆಜ್ಜೆ ಇಡಲೂ ಸ್ಥಳ ಇಲ್ಲದಷ್ಟು ಸಸ್ಯಾಛ್ಛಾದನೆ.ಹುಲ್ಲು,ಪೊದೆ,ಗಿಡ,ಬಳ್ಳಿ,ಅಪ್ಪುಗಿಡ,ವೃಕ್ಷ ಮಹ್ಹವೃಕ್ಷ ......ಹಾಗೆಲ್ಲ ನೆಲದಿಂದ ಚಾವಣಿವರೆಗೂ ದಟ್ಟ ಸಸ್ಯಾಚ್ಛಾದನೆ. ಸಹಜವಾಗಿಯೇ ಇಂಥ ಸಸ್ಯಾವಾರದಲ್ಲಿರುವ ಪ್ರಾಣಿ ವೈವಿಧ್ಯವೂ ಹೇರಳ,ವರ್ಣಿಸದಳ.ಅಮೆಜೋನಿಯಾದಲ್ಲಿ ಒಂದು ದಶಲಕ್ಷಕಿಂತಲೂ ಹೆಚ್ಚು ಕೀಟಪ್ರಭೇಧಗಳಿವೆ. ಅಲ್ಲಿ ಹಗಲಿನ ಪತಂಗಗಳಿವೆ,ನಿಶಾಚರ ಚಿಟ್ಟೆಗಳಿವೆ.ಇಡೀ ಪ್ರಪಂಚದಲ್ಲಿರುವ ಒಟ್ಟೂ ಪಕ್ಷಿಪ್ರಬೇಧಗಳಲ್ಲಿ ಶೇಖಡಾ ಐವತ್ತರಷ್ಟು ಪ್ರಬೇಧಗಳು ಅಮೆಜೋನಿಯಾದಲ್ಲಿ ಇವೆ.ಸಿಹಿನೀರಿನ ಮತ್ಸ್ಯಗಳ ಶತಾಂಶ ನಲವತ್ತು ಭಾಗ ಇಲ್ಲೇ ನೆಲೆಗೊಂಡಿವೆ.ಅಮೆಜೋನಿಯಾದಲ್ಲಿ ವಿಕಸನಗೊಂಡಿರುವ 'ಐದು ಕೈಗಳ'ಪ್ರಾಣಿಗಳಿಗಂತು-ಜೇಡ ಕೋತಿ,ಟಮಂಡುವಾ,ಕಿಕಂಔ ಇತ್ಯಾದಿ-ಇಡೀ ಧರೆಯಲ್ಲಿ ಬೇರೆಲ್ಲೂ ಇಲ್ಲ ಇದೇ ಅಡವಿಯಲ್ಲೇ ಕೆಲವಾರು ಆದಿವಾಸಿ ಅನಾಗರಿಕ ಮನುಷ್ಯ ತಂಡಗಳು ನೆಲೆಗೊಂಡಿವೆ.ನಿಸರ್ಗದ ಮಡಿಲಲ್ಲೇ ನೆಮ್ಮದಿಯ ಬಾಳುವೆ ನಡೆಸಿವೆ.
ಐವತ್ತೈದು ದಶಲಕ್ಷ ವರ್ಷ ಹಿಂದಿನದು
ಬದಲಾಯಿಸಿ- ಧರೆಯ ಅತ್ಯದ್ಭುತ, ಅತಿದೀರ್ಘ, ಅತ್ಯಧಿಕ ಜಲಭರಿತ ನದಿಯಾದ ‘ಅಮೆಜಾನ್’ ಮತ್ತು ಅದರ ಸಾವಿರಕ್ಕೂ ಅಧಿಕ ಉಪನದಿಗಳ ಆಶ್ರಯದಲ್ಲಿ, ಆ ಪ್ರದೇಶದಲ್ಲಿ ವರ್ಷವಿಡೀ ಸುರಿವ ನಿತ್ಯವೃಷ್ಟಿಯ ಪೋಷಣೆಯಲ್ಲಿ, ಈಗ್ಗೆ ಐವತ್ತೈದು ದಶಲಕ್ಷ ವರ್ಷ ಹಿಂದಿನಿಂದ ಅರಳಿ ದಟ್ಟೈಸಿದೆ ಈ ಗೊಂಡಾರಣ್ಯ.
- ಅಮೆಜಾನ್ ನದಿಯಿಂದಾಗಿಯೇ ಅಮೆಜೋನಿಯಾ ಎಂಬ ಅಭಿಧಾನವನ್ನು ಪಡೆದಿರುವ ಈ ಮಳೆಕಾಡಿನ ಮಹದಚ್ಚರಿಯ ಕೆಲವು ಗುಣ-ಲಕ್ಷಣಗಳನ್ನು ಗಮನಿಸಿ:
- ಅಮೆಜೋನಿಯಾ ನಮ್ಮ ಪೃಥ್ವಿಯ ಅತ್ಯಂತ ವಿಸ್ತಾರ ವೃಷ್ಟಿ ವನ. ದಕ್ಷಿಣ ಅಮೆರಿಕದ ಒಂಬತ್ತು ರಾಷ್ಟ್ರಗಳಲ್ಲಿ (ಬ್ರೆಜ್ಹಿಲ್, ಪೆರು, ಕೊಲಂಬಿಯಾ, ವೆನಿಜೂಲಾ, ಇಕ್ವೆಡಾರ್, ಬೊಲಿವಿಯಾ, ಗಯಾನಾ, ಸುರಿನೇಮ್ ಮತ್ತು ಫ್ರೆಂಚ್ ಗಯಾನಾ) ಅವಿಚ್ಛಿನ್ನವಾಗಿ ಹರಡಿರುವ ಈ ಮಳೆಕಾಡಿನ ವಿಸ್ತಾರ ಮೂಲತಃ ಐದೂವರೆ ದಶಲಕ್ಷ ಚದರ ಕಿಲೋಮೀಟರ್! ಇದು ಇಡೀ ಧರೆಯಲ್ಲಿರುವ ಒಟ್ಟೂ ವೃಷ್ಟಿವನ ಪ್ರದೇಶದ ಅರ್ಧದಷ್ಟು ವಿಸ್ತಾರಕ್ಕೆ ಸಮ!
- ಒಟ್ಟು ಏಳು ಲಕ್ಷ ಚದರ ಕಿಲೋ ಮೀಟರ್ ಜಲಾನಯನ ಪ್ರದೇಶ ಹೊಂದಿರುವ ಅಮೆಜಾನ್ ಮತ್ತು ಅದರ ಒಂದು ಸಾವಿರದ ಒಂದು ನೂರು ಉಪನದಿಗಳ ಒಟ್ಟು ಎಂಬತ್ತು ಸಾವಿರ ಕಿಲೋ ಮೀಟರ್ ಉದ್ದದ ನದೀ ಜಾಲ ಅಮೆಜೋನಿಯಾ ಮಳೆಕಾಡಿನ ಮೂಲಕ ಬಾಗಿ- ಬಳುಕಿ, ವರ್ಷವಿಡೀ ಜಲಭರಿತವಾಗಿ ಪ್ರವಹಿಸುತ್ತ ಸ್ವರ್ಗಸದೃಶ ‘ಪಚ್ಚೆ ಸಾಮ್ರಾಜ್ಯ’ವನ್ನೇ ಸೃಷ್ಟಿಸಿದೆ.
ಸಸ್ಯ ಪ್ರಾಣಿ ಪ್ರಬೇದಗಳು
ಬದಲಾಯಿಸಿ- ಅಮೆಜೋನಿಯಾದಲ್ಲಿನ ಸಸ್ಯದಟ್ಟಣೆ- ವೃಕ್ಷ ದಟ್ಟಣೆ ವರ್ಣಿಸಲಸದಳ (ಚಿತ್ರ 6, 8 ). ಈ ಅಡವಿಯಲ್ಲಿ ಸುಮಾರು 40,000 ಸಸ್ಯ ಪ್ರಭೇದಗಳಿವೆ. 16,000 ವೃಕ್ಷ ಪ್ರಭೇದಗಳಿವೆ. ಒಟ್ಟು 390 ಶತಕೋಟಿ ವೃಕ್ಷಗಳಿವೆ! ಅಮೆಜೋನಿಯಾದ ಪ್ರತಿ ಚದರ ಕಿಲೋ ಮೀಟರ್ ಪ್ರದೇಶದಲ್ಲೂ 4,400 ವೃಕ್ಷಗಳಿವೆ. ಅಷ್ಟೇ ಪ್ರದೇಶದಲ್ಲಿರುವ ಜೀವಂತ ಸಸ್ಯರಾಶಿಯ ತೂಕ ಸರಾಸರಿ ಒಂದು ಲಕ್ಷ ಟನ್ ಆಗುವಷ್ಟಿದೆ!
- ಅಮೇಜೋನಿಯಾದ ಪ್ರಾಣಿ ಸಾಮ್ರಾಜ್ಯವೂ ಅಷ್ಟೇ ನಿಬಿಡ. ಅಷ್ಟೇ ವೈವಿಧ್ಯಮಯ: ಈ ವೃಷ್ಟಿವನದಲ್ಲಿ ನೆಲೆಸಿರುವ ಅಕಶೇರುಕ ಪ್ರಭೇದಗಳ ಸಂಖ್ಯೆ 1,30,000. ಕೀಟ ಪ್ರಭೇದಗಳು 2.5 ದಶಲಕ್ಷ. ಮತ್ಸ್ಯ ಪ್ರಭೇದಗಳು 2,200. ಪಕ್ಷಿ ಪ್ರಭೇದಗಳು 1,300. ಉಭಯವಾಸಿ ಪ್ರಭೇದಗಳು 428. ಸರೀಸೃಪ ಪ್ರಭೇದಗಳು 378. ಸ್ತನಿ ಪ್ರಭೇದಗಳು 427. ಇವೆಲ್ಲ ಈವರೆಗೆ ಪತ್ತೆಯಾಗಿರುವ ಸಂಖ್ಯೆಗಳು ಅಷ್ಟೇ. ವಾಸ್ತವವಾಗಿ ಇಲ್ಲಿನ ಜೀವವೈವಿಧ್ಯ ಇದರ ಹಲವು ಹತ್ತು ಮಡಿ ಹೆಚ್ಚಾಗುವಷ್ಟಿದೆ ಎಂದು ತಜ್ಞರು ಅಂದಾಜಿಸಿದ್ದಾರೆ!
ಭೂ ಪರಿಸರದ ರಕ್ಷನೆಯ ಪಾತ್ರ
ಬದಲಾಯಿಸಿ- ಮಹತ್ವ: ಸಹಜವಾಗಿಯೇ ಭೂ ಪರಿಸರದಲ್ಲಿ ಅಮೆಜೋನಿಯಾದ ಪಾತ್ರ ಮತ್ತು ಮಹತ್ವ ದೊಡ್ಡದು. ಈಗಾಗಲೇ, ವಿವರಿಸಿದಂತೆ ಅಪಾರ ಪ್ರಮಾಣದ ಜೀವಜಾಲದ ಆಶ್ರಯತಾಣವಾಗಿರುವುದಷ್ಟೇ ಅಲ್ಲದೆ ಭೂಮಿಯ ಸರ್ವತೋಮುಖ ಸ್ವಾಸ್ಥ್ಯದಲ್ಲೂ ಅದರದು ಬಹುವಿಧ ಪಾತ್ರ ವಹಿಸುತ್ತಿದೆ.
- ೧.ಇಡೀ ಧರೆಯ ವಾರ್ಷಿಕ ಮಳೆ ನೀರಿನ ಅರ್ಧದಷ್ಟು ಭಾಗವನ್ನು ಅಮೆಜೋನಿಯಾದ ನೆಲ ಹೀರುತ್ತದೆ, ಸಂಗ್ರಹಿಸುತ್ತದೆ.
- ೨.ಅಂತರ್ಜಲ ದಾಸ್ತಾನಿಗೆ ಮರುಪೂರಣಗೊಳಿಸುತ್ತದೆ. ಅಮೆಜೋನಿಯಾದ ಸಸ್ಯರಾಶಿ ವಾಯುಮಂಡಲಕ್ಕೆ ಪೂರೈಸುವ ಆಮ್ಲಜನಕದ, ವಾತಾವರಣದಿಂದ ಹೀರಿಕೊಳ್ಳುವ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣಗಳಂತೂ ಕಲ್ಪನೆಗೂ ನಿಲುಕದಷ್ಟು ಅಗಾಧ.
- ೩.ಮಣ್ಣಿನ ಸವೆತವನ್ನು ತಡೆಗಟ್ಟುವುದೇ ಅಲ್ಲದೆ, ಹೇರಳ ವಿಧ ನೈಸರ್ಗಿಕ ಸಸ್ಯಾಹಾರಗಳ, ಅಸಂಖ್ಯ ಬಗೆಯ ಔಷಧೀಯ ಸಸ್ಯಗಳ ಭಂಡಾರವಾಗಿಯೂ ಈ ಅಡವಿ ಅತ್ಯಂತ ಅಮೂಲ್ಯ (ಅಮೆಜೋನಿಯಾದಲ್ಲಿ ಈವರೆಗೆ ಗುರುತಿಸಲಾಗಿರುವ ಔಷಧೀಯ ಸಸ್ಯಗಳ ಶೇಕಡ ಒಂದರಷ್ಟೇ ಪ್ರಭೇದಗಳು ಪ್ರಸ್ತುತ ಜಗತ್ತಿನ ಶೇಕಡ 25ರಷ್ಟು ಆಧುನಿಕ ಜೀವರಕ್ಷಕ ಔಷಧಗಳ ಆಕರವಾಗಿವೆ!).
- ಹಾಗಾಗಿ, ಅಮೆಜೋನಿಯಾದಲ್ಲಿ ಸಂಭವಿಸುವ ಯಾವುದೇ ವಿನಾಶಕರ ಚಟುವಟಿಕೆ ಇಡಿ ಪೃಥ್ವಿಗೇ ಅತ್ಯಂತ ಅಪಾಯಕರ. ಪರಿಣಾಮಗಳಂತೂ ತೀರ ಗಂಭೀರ. ಅಮೆಜೋನಿಯಾದಲ್ಲಿನ ರಾಷ್ಟ್ರಗಳಿಗೂ, ಇಡೀ ಜಗತ್ತಿಗೂ ಇದೆಲ್ಲ ತಿಳಿದಿದ್ದೂ, ಅಮೆಜೋನಿಯಾದಲ್ಲಿ ತೀವ್ರ ಸ್ವರೂಪದ, ಬಹುವಿಧ ತಳಮಳಗಳು ಸಂಭವಿಸುತ್ತಿವೆ. ದಿನೇ ದಿನೇ ಅದರ ನಾಶ ಉಲ್ಬಣಗೊಳ್ಳುತ್ತಿವೆ. ಆದ್ದರಿಂದಲೇ ಇಡೀ ಪೃಥ್ವಿಯ ಎಲ್ಲೆಡೆ ಪರಿಸರ ತಜ್ಞರೂ, ಇಳೆಯ ಗೆಳೆಯರೂ ಆತಂಕ- ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಕಳವಳಕಾರಿ ಬೆಲವಣಿಗೆ
ಬದಲಾಯಿಸಿ- ನಾನಾ ಕಾರಣಗಳಿಗಾಗಿ ಅಮೆಜೋನಿಯಾದಲ್ಲಿ ಭಾರೀ ಪ್ರಮಾಣದ ಅರಣ್ಯ ನಾಶ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಅಧಿಕಗೊಳ್ಳುತ್ತಿದೆ ಕೂಡ. ಪ್ರತಿವರ್ಷ ಸರಾಸರಿ ಏಳು ಲಕ್ಷ ಚದರ ಕಿಲೋ ಮೀಟರ್‌ಗೆ ಕಡಿಮೆಯಿಲ್ಲದ ಆ ವಿನಾಶಕರ ಅಕೃತ್ಯದ ಸ್ಫಷ್ಟ ಅಂಕಿ-ಅಂಶಗಳು ಬೇಕೆಂದರೆ ಜುಲೈ 2011ರಿಂದ ಆಗಸ್ಟ್ 2012ರವರೆಗಿನ ಅವಧಿಯಲ್ಲಿ ಅಲ್ಲಿ ನೆಲಸಮಗೊಂಡ ಅರಣ್ಯದ ವಿಸ್ತಾರ 7,47,630 ಚದರ ಕಿಲೋ ಮೀಟರ್.
- 2012-13ರಲ್ಲಿ 7,52,201 ಚದರ ಕಿ.ಮೀ. 2013-14ರಲ್ಲಿ 7,58,092 ಚದರ ಕಿ.ಮೀ. 2014-15ರಲ್ಲಿ 7,63,104 ಚದರ ಕಿ.ಮೀ. 2015-16ರಲ್ಲಿ 7,68,935 ಚದರ ಕಿ.ಮೀ! ಅಮೆಜೋನಿಯಾದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಂತೂ ಮೂಲ ಅಡವಿಗಳ ಶೇಕಡ 50ಕ್ಕೂ ಅಧಿಕ ಭಾಗ ಕಣ್ಮರೆಯಾಗಿದೆ!
- ಅಮೆಜೋನಿಯಾದಲ್ಲಿ ನಡೆದಿರುವ ಅರಣ್ಯ ನಾಶಕ್ಕೆ ಕಾರಣಗಳು ಹಲವಾರು: ಕೃಷಿ ಭೂಮಿಗಾಗಿ, ಊರು-ಕೇರಿ ವಿಸ್ತರಣೆಗಾಗಿ, ಸೌದೆಗಾಗಿ... ಇಂಥ ಉದ್ದೇಶಗಳಿಗಾಗಿ ಕಳೆದುಹೋಗುತ್ತಿರುವ ಅರಣ್ಯ ಪ್ರಮಾಣ ಗಣನೆಗೆ ಸಿಗದಷ್ಟಿದೆ.
- ಅಮೆಜೋನಿಯಾ ಅರಣ್ಯ ನಾಶದ ಅತ್ಯಂತ ಪ್ರಧಾನ ಉದ್ದೇಶಗಳಲ್ಲಿ ಅಗ್ರ ಸ್ಥಾನದಲ್ಲಿರುವುದು ‘ಗೋಮಾಳ’ಗಳ ನಿರ್ಮಾಣ. ಮಾಂಸಕ್ಕಾಗಿ, ಚರ್ಮಕ್ಕಾಗಿ ಲಕ್ಷ ಲಕ್ಷ ಸಂಖ್ಯೆಯ ದನಗಳನ್ನು ಸಾಕುವ, ಮೇಯಿಸುವ ಬೃಹತ್ ಯೋಜನೆಗಳಿಗಾಗಿ ಅತ್ಯಧಿಕ ಪ್ರಮಾಣದ ಅಡವಿ ಪ್ರದೇಶ ಬಯಲಾಗುತ್ತಿದೆ. ಜಗದಾದ್ಯಂತ ವಿಪರೀತ ಬೇಡಿಕೆ ಇರುವ ‘ಸೋಯಾ ಮತ್ತು ತಾಳೆ ಎಣ್ಣೆ’ಗಾಗಿ ಕೂಡ ಭಾರೀ ವಿಸ್ತಾರದ ಅಡವಿ ಪ್ರದೇಶ ನೆಲಸಮವಾಗುತ್ತಿದೆ.
- ಈ ನಿಬಿಡ ಅಡವಿಯಲ್ಲಿ ಅಲ್ಲಲ್ಲಿ ಬೆಳೆದು ನಿಂತಿರುವ, ನೂರಾರು ವರ್ಷಗಳಷ್ಟು ವಯಸ್ಸಾಗಿರುವ ಮಹಾವೃಕ್ಷಗಳನ್ನು ‘ಮರ’ಕ್ಕಾಗಿ ಕತ್ತರಿಸಿ ಸಾಗಿಸುವ ಕಳ್ಳ ದಂಧೆಯೂ ವ್ಯಾಪಕವಾಗಿ ನಿರಂತರ ನಡೆದಿದೆ. ‘ಲೆಕ್ಟಿವ್ ಲಾಗಿಂಗ್’ ಎಂಬ ಈ ಭಾರೀ ಲಾಭದಾಯಕ ದುಷ್ಕೃತ್ಯಕ್ಕೆ ಪ್ರತಿವರ್ಷ ಸಮೀಪ 15,500 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ತುತ್ತಾಗುತ್ತಿದೆ! ಅದಕ್ಕೆಲ್ಲ ಅಲ್ಲಿನದೇ ದೇಶಗಳ ಮತ್ತು ಇಡೀ ಜಗದಮೇಲಿನ ದೀರ್ಘಾವಧಿ ಪರಿಣಾಮದಅರಿವಿಲ್ಲದ ಜನರ ತತ್ಕಾಲೀನ ಲಾಭದದೃಷ್ಟಿ ಮುಖ್ಯ ಕಾರಣ.
ಅರಣ್ಯದ ಮೇಲೆ ಮಾನವ ಧಾಳಿ
ಬದಲಾಯಿಸಿ- ೧.ಅಮೆಜೋನಿಯಾದಲ್ಲಿ ಮುವ್ವತ್ತೈದು ವಿಧದ ಅತ್ಯುತ್ಕೃಷ್ಟ- ಅಪಾರ ಬೆಲೆಯ- ಗಟ್ಟಿ ಮರಗಳಿವೆ: ಮಹಾಘನಿ, ಸಿಡಾರ್, ಬ್ರೆಜಿಲ್ ನಟ್ ಇತ್ಯಾದಿ! ದುರಂತ ಏನೆಂದರೆ ಹಾಗೆ ಕತ್ತರಿಸಲ್ಪಡುವ ಪ್ರತಿ ಮಹಾವೃಕ್ಷವೂ ನೆಲಕ್ಕೆ ಬೀಳುವಾಗ ಅದರ ಆಸುಪಾಸಿನ ಕನಿಷ್ಠ ಮುವ್ವತ್ತು ಇತರ ಅನಪೇಕ್ಷಿತ ವೃಕ್ಷಗಳು ಮುರಿದು ಬೀಳುತ್ತವೆ. ಅಲ್ಲೆಲ್ಲ ಅಡವಿಯ ಚಾವಣಿ ತೆರೆದುಕೊಳ್ಳುತ್ತದೆ. ನೆಲದ ಮೇಲೆ ಒಣಗಿ ಉಳಿಯುವ ಅಂಥ ಸಸ್ಯ ರಾಶಿಗಳು ಪ್ರಳಯಕಾರೀ ಕಾಡು ಕಿಚ್ಚುಗಳಿಗೆ ದಾರಿ ಮಾಡುತ್ತವೆ.
- ೨.ಅಮೆಜೋನಿಯಾದಲ್ಲಿ ನಿರ್ಮಾಣಗೊಂಡಿರುವ ಮತ್ತು ನಿರ್ಮಾಣಗೊಳ್ಳುತ್ತಿರುವ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳೂ ಅಪಾರ ವಿಸ್ತಾರದ ಅಡವಿಯನ್ನೂ, ಅಸೀಮ ಸಂಖ್ಯೆಯ ಜೀವರಾಶಿಯನ್ನೂ ಧ್ವಂಸಗೊಳಿಸುತ್ತಿವೆ. ಇಂಥ ರಸ್ತೆಗಳು ಮರಗಳ್ಳರಿಗೆ, ಪ್ರಾಣಿ-ಪಕ್ಷಿಗಳ ಕಳ್ಳ ಬೇಟೆಗಾರರಿಗೆ, ವನ್ಯ ಮಾಂಸದ ಕ್ರೂರ ದಂಧೆಕೋರರಿಗೆ ದುರ್ಗಮ ಅಡವಿ ಪ್ರದೇಶಗಳನ್ನು ಸುಲಭವಾಗಿ ತೆರೆದಿಡುತ್ತಿವೆ. ಹಾಗಾಗಿ ಅಗಮ್ಯವಾಗಿ, ಸುರಕ್ಷಿತವಾಗಿದ್ದ ಅರಣ್ಯ ಭಾಗಗಳು ಕೂಡ ಹಾಳಾಗುತ್ತಿವೆ. ಅಲ್ಲಿನ ಪ್ರಾಣಿಗಳೆಲ್ಲ ದುರಂತಕ್ಕೊಳಗಾಗುತ್ತಿವೆ.
- ೩.ಅಮೆಜೋನಿಯಾದ ಕೆಲವಾರು ಪ್ರದೇಶಗಳಲ್ಲಿ ನೆಲದಲ್ಲಿ ಭಾರೀ ತೈಲ ನಿಕ್ಷೇಪಗಳು ಪತ್ತೆಯಾಗಿವೆ. ಅದನ್ನು ಹೊರತೆಗೆಯಲು ವಿನಾಶಗೊಳ್ಳುತ್ತಿರುವ ಅರಣ್ಯ ಪ್ರದೇಶಗಳೂ ಅಪಾರ. ಈಕ್ವೆಡಾರ್ ರಾಷ್ಟ್ರದ ‘ಯಾಸೂನಿ ರಾಷ್ಟ್ರೀಯ ಉದ್ಯಾನ’ದ 6,500 ಚದರ ಕಿಲೋ ಮೀಟರ್ ವೈಶಾಲ್ಯದಷ್ಟು ನಿಬಿಡ ಮಳೆಕಾಡನ್ನು ಕಡಿದು ತೈಲಬಾವಿಗಳನ್ನು ಕೊರೆಯಲಾಗುತ್ತಿದೆ! ಪೆನ್ಸ್ಲವೇನಿನಿಯಾದ ಹಲವಾರು ನೆಲೆಗಳಲ್ಲಿ ನಡೆದಿರುವ ಬಂಗಾರ ಗಣಿಗಾರಿಕೆ ಮತ್ತು ಬಂಗಾರವನ್ನು ಪ್ರತ್ಯೇಕಿಸಲು ಬಳಸಲಾಗುತ್ತಿರುವ ರಾಶಿ ರಾಶಿ ಪಾದರಸ ಅಲ್ಲೆಲ್ಲ ಅಡವಿ ನೆಲವನ್ನೂ, ಜೀವಜಾಲವನ್ನೂ ಧ್ವಂಸಗೊಳಿಸಿ ಅಮೆಜಾನ್ ನದೀಜಾಲಕ್ಕೂ ಘೋರ ವಿಷಧಾರೆಗಳನ್ನು ಬೆರೆಸುತ್ತಿವೆ!
.೪.* ಪ್ರಸ್ತುತದ ಗಂಭೀರ ಜಾಗತಿಕ ಸಮಸ್ಯೆಗಳಲ್ಲಿ ಅಗ್ರಪಂಕ್ತಿಯಲ್ಲಿರುವ ‘ಭೂ ತಾಪ ಹೆಚ್ಚಳ’ ಪರೋಕ್ಷವಾಗಿ ಅಮೆಜೋನಿಯಾದ ಕ್ಷಿಪ್ರ ಅವನತಿಗೆ ಕಾರಣವಾಗುತ್ತಿದೆ.
ಭೂ ಉಷ್ಣತೆಯ ಏರಿಕೆ ಮತ್ತು ಹಸಿರ ಮನೆ ನಾಶ
ಬದಲಾಯಿಸಿ- ಅತ್ಯಂತ ಇತ್ತೀಚಿನ ಅಧ್ಯಯನ ವರದಿಯೊಂದರ ಪ್ರಕಾರ ಭೂ ಪರಿಸರದ ಉಷ್ಣತೆ ಇನ್ನು 1 ಡಿಗ್ರಿ ಸೆಲ್ಷಿಯಸ್ ನಷ್ಟೇ ಅಧಿಕಗೊಂಡರೂ, ಅದೊಂದೇ ಕಾರಣದಿಂದಲೇ, ಇನ್ನು ಒಂದು ನೂರು ವರ್ಷಗಳಲ್ಲಿ ಪೆನಿಸಲ್ವೇನಿಯಾದ ಶೇಕಡ 40 ಭಾಗ ಒಣಗಿಹೋಗುತ್ತದೆ. 2 ಡಿಗ್ರಿ ಹೆಚ್ಚಿದರೆ ಶೇಕಡ 75 ರಷ್ಟು ಮತ್ತು 3 ಡಿಗ್ರಿ ಏರಿದರೆ ಶೇಕಡ 85 ಭಾಗ ನಿರ್ನಾಮವಾಗಲಿದೆ! ಭವಿಷ್ಯದ ತಳಮಳಿಗೆ ಈಗಿನಿಂದಲೇ ಇಳೆಯ ತಜ್ಞರು ತೀವ್ರ ಕಳವಳದಿಂದ ಭೂಮಿಯ ಶಾಖ ಏರುವಿಕೆ ತಡೆಗೆ ತೀವ್ರ ಪ್ರಯತ್ನ ನಡೆಸಿದ್ದಾರೆ.[೧]
ಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2017-07-18. Retrieved 2017-07-16.