ಅಮೃತ ಮಹಲ್ (ಗೋವಿನ ತಳಿ)
ಇವುಗಳು ಕೆಲಸಗಾರ ತಳಿ ವರ್ಗಕ್ಕೆ ಸೇರಿದವುಗಳಾಗಿವೆ. ಮೂಲತಃ ಕರ್ನಾಟಕದ ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯವುಗಳಾದ ಇವುಗಳನ್ನು ವಿಶೇಷವಾಗಿ ಮೈಸೂರು ಅರಸರು ೧೫೭೨ ರಿಂದ ೧೬೩೬ರ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಿದರು. ಯುದ್ಧಗಳ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳ ಸಾಗಾಟಕ್ಕಾಗಿ ಈ ತಳಿಯ ಅಭಿವೃದ್ಧಿಯಾಯಿತು.[೧] 1617-1704 ರಲ್ಲಿ ಆಗಿನ ಮೈಸೂರಿನ ಮಹಾರಾಜರು ಕಾಲಾನುಸಾರವಾಗಿ ಈ ಕರುಹಟ್ಟಿಗೆ ರಾಸುಗಳನ್ನು ಸೇರಿಸಿ, ಈ ರಾಸುಗಳಿಗೆ ನಿಗದಿತ 'ಕಾವಲು'ಗಳನ್ನು ತಮ್ಮ ರಾಜ್ಯದ ವಿವಿಧ ಭಾಗದಲ್ಲಿ ನೀಡಿದರು. ಅಂದಿನ ಮಹಾರಾಜರಾದ ಸನ್ಮಾನ್ಯ ಶ್ರೀ ಚಿಕ್ಕದೇವರಾಜ ಒಡೆಯರ್ ರವರು ಈ ಸಂಸ್ಥೆಗೆ 'ಬೆಣ್ಣೆ ಚಾವಡಿ' ಎಂದು ನಾಮಕರಣ ಮಾಡಿದರು. 1799 ರಲ್ಲಿ ಟಿಪ್ಪು ಸುಲ್ತಾನರು ಬೆಣ್ಣೆ ಚಾವಡಿ ಹೆಸರನ್ನು 'ಅಮೃತ್ ಮಹಲ್' ಎಂದು ಮರುನಾಮಕರಣ ಮಾಡಿ, ಅಮೃತ್ ಮಹಲ್ ತಳಿಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದರು. ಹಾಗೂ ಈ ಇಲಾಖೆಯ ಉನ್ನತೀಕರಣಕ್ಕಾಗಿ ಸೂಕ್ತ ಕಾಯ್ದೆಗಳನ್ನು ಹುಕುಂನಾಮ ಮುಖೇನ ಅಳವಡಿಸಿದರು. 1799-1881 ರ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ಅವನತಿಯ ನಂತರ ಅಮೃತ್ ಮಹಲ್ ಇಲಾಖೆಯ ಉಸ್ತುವಾರಿಯನ್ನು ಬ್ರಿಟೀಷರು ತೆಗೆದುಕೊಂಡು ಅವರ ರೀತಿಯಲ್ಲಿಯೇ ಅಮೃತ್ ಮಹಲ್ ದನಗಳನ್ನು ಹಾಲು, ಉಳುಮೆ ಹಾಗೂ ಯುದ್ಧಗಳಲ್ಲಿ ಉಪಯೋಗಿಸುವ ಸಲುವಾಗಿ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಿದರು. ಈ ಇಲಾಖೆಗೆ ಒಟ್ಟು 143 ಕಾವಲುಗಳಿದ್ದು, ಇವುಗಳ ಉಸ್ತುವಾರಿಯನ್ನು ಅಂದಿನ ಬ್ರಿಟೀಷ್ ಸರ್ಕಾರದ ಮಿಲಿಟರಿ ಸಹಾಯಕರಿಗೆ ನೀಡಲಾಯಿತು.[೨][೩][೪] ಮೈಸೂರಿನ ದಿವಾನರಾಗಿದ್ದ ಪೂರ್ಣಯ್ಯನವರು ಈ ಅಮೃತಮಹಲ್ ತಳಿಗಳನ್ನು ತಮಿಳುನಾಡಿನಲ್ಲಿ ಬೆಳೆಸಿದರು. ಇಂದಿಗೂ ತಮಿಳುನಾಡಿನ ಕೆಲಭಾಗಗಳಲ್ಲಿ ಅಮೃತಮಹಲ್ ತಳಿಯ ದನ ಕರುಗಳನ್ನು ಪೂರ್ಣಯ್ಯನ ದನಗಳೆಂದೇ ಕರೆಯುತ್ತಾರೆ. ಮೈಸೂರು ಅರಸರ ಹಾಗು ಹೈದರಾಲಿ, ಟಿಪ್ಪುವಿನ ಸೈನ್ಯದಲ್ಲಿ ಈ ತಳಿಗಳ ಬಂಜಾರವೆಂಬ ದಳ ಪ್ರಮುಖವಾಗಿತ್ತು. ಕೇವಲ ೨೩೭ ಅಮೃತಮಹಲ್ ತಳಿಯ ಎತ್ತುಗಳು ೩೦೦೦ದಷ್ಟಿದ್ದ ಹೈದರಾಬಾದ್ ನಿಜಾಮನ ಸೈನ್ಯವನ್ನು ಸೋಲಿಸಿ ಓಡಿಸಿರುವುದು ಇಂದು ಇತಿಹಾಸ ಹಾಗೂ ಅವುಗಳ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳಲ್ಲಿ ಯುದ್ಧ ಪರಿಕರಗಳನ್ನು ಸಾಗಿಸಲು ಈ ತಳಿಯ ಎತ್ತುಗಳು ಉಪಕರಿಸಿದ್ದವು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಅಮೃತಮಹಲ್ ತಳಿಗಳು ಸಾಕಿದ ಒಡೆಯನಿಗೆ ಅತ್ಯಂತ ನಿಷ್ಠೆ ತೋರಿಸುತ್ತವೆ. ಗಂಟೆಗಳ ಕಾಲ ಆಹಾರ, ನೀರು ಸೇವಿಸದೇ ಸಾಮಾನು ಸಾಗಿಸುವ ಸಾಮರ್ಥ್ಯ ಈ ತಳಿಗಳಲ್ಲಿ ಕಂಡುಬರುತ್ತದೆ. ಹಾಲು ವಿಶೇಷವಾಗಿ ನೀಡದಿದ್ದರೂ ಆಕಳುಗಳು ಶ್ರಮದ ಕೆಲಸಕ್ಕೆ ಉಪಯೋಗವಾಗುತ್ತವೆ.[೫]
ಅಮೃತ ಮಹಲ್ | |
---|---|
ತಳಿಯ ಹೆಸರು | ಅಮೃತ ಮಹಲ್ |
ಮೂಲ | ಕರ್ನಾಟಕದ ಹಳೇಮೈಸೂರು ಪ್ರಾಂತ್ಯ |
ವಿಭಾಗ | ಕೆಲಸಗಾರ ತಳಿ |
ಹಾಸನ, ದಕ್ಷಿಣ ಕನ್ನಡದ ಕೆಲವು ಭಾಗ, ಚಿಕ್ಕಮಗಳೂರು, ಹಳೇ ಮೈಸೂರು ಪ್ರದೇಶ, ಮಂಡ್ಯ ಮೊದಲಾದೆಡೆ ಈ ತಳಿಯ ಸಂವರ್ಧನೆಗಾಗಿ ಅಮೃತಮಹಲ್ ಕಾವಲು ಭೂಮಿ ಬಿಟ್ಟಂತಹ ಉದಾಹರಣೆಗಳು ನೋಡಲು ಸಿಗುತ್ತವೆ.[೬][೭] ಆದರಿಂದು ಅವಗಣನೆಯಿಂದಾಗಿ ಆ ಕಾವಲು ಭೂಮಿಗಳು ಅತಿಕ್ರಮಣವಾಗುತ್ತಿವೆ. ಒಳ್ಳೆಯ ತಳಿಗಳು ಕೂಡ ಅಂತ್ಯವಾಗುವ ನಿಟ್ಟಿನಲ್ಲಿವೆ.[೮]
ಉಲ್ಲೇಖಗಳು
ಬದಲಾಯಿಸಿ- ↑ "Cattle Throughout History". Dairy Farmers of Washington. Archived from the original on 2005-05-27. Retrieved 2009-12-11.
- ↑ ಇಲಾಖೆಯ ಇತಿಹಾಸ, ವಿಕಾಸ್‍ಪೀಡಿಯ
- ↑ Royalty to history: End of road for Amrit Mahal? - The Times of India
- ↑ ಗೋ ಸಂರಕ್ಷಣೆ, ಸಂವರ್ಧನೆ Archived 2014-12-19 ವೇಬ್ಯಾಕ್ ಮೆಷಿನ್ ನಲ್ಲಿ., Vishwahitham.org
- ↑ "Breeds of Livestock - Amrit Mahal Cattle". Ansi.okstate.edu. Archived from the original on 2010-06-05. Retrieved 2009-12-11.
- ↑ "One-third of Amrit Mahal Kaval is forest land: MoEF". The Hindu. Retrieved 13 May 2015.
- ↑ "Panel to study shrinking Amrit Mahal kaval lands". Archived from the original on 18 ಮೇ 2015. Retrieved 13 May 2015.
- ↑ ಅಮೃತ್ ಮಹಲ್ ತಳಿ ಅಭಿವೃದ್ಧಿಗೆ ಕ್ರಮ: ಜಯಚಂದ್ರ, ಕ.ಪ್ರ.ವಾರ್ತೆ, 03 Dec 2013
ಹೊರಕೊಂಡಿಗಳು
ಬದಲಾಯಿಸಿ'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಚಿತ್ರಗಳು
ಬದಲಾಯಿಸಿ-
ಗಂಡು
-
ಹೆಣ್ಣು