ಅಮೃತಬಳ್ಳಿ
ಅಮೃತಬಳ್ಳಿ | |
---|---|
Scientific classification | |
ಸಾಮ್ರಾಜ್ಯ: | Plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | T. cordifolia
|
Binomial name | |
ಟಿನೋಸ್ಪೋರ ಕಾರ್ಡಿಫೋಲಿಯ (Thunb.) Miers
|
ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು. ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ. ಅಮೃತಬಳ್ಳಿಯು ಮರಗಳ ಮೇಲೆ ತೋಟಗಳ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳಲ್ಲಿ ಪೊದೆಗಳ ಮೇಲೂ ಸಹ ಹಬ್ಬಿರುತ್ತದೆ. ಇದರ ಪತ್ರೆ ಹಸಿರು ಮತ್ತು ಹೃದಯಾಕಾರವಾಗಿರುತ್ತದೆ, ಮೃದುವಾಗಿರುತ್ತದೆ. ಕಾಂಡದ ಮೇಲೆ ತೆಳು ಪೊರೆಯಿರುತ್ತದೆ ಮತ್ತು ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ. ಪ್ರತಿಭಾಗವೂ ಕಹಿಯಾಗಿರುತ್ತದೆ. ಬೇವಿನಮರದ ಮೇಲೆ ಹಬ್ಬಿರುವ ಬಳ್ಳಿಯು ಅತೀ ಶ್ರೇಷ್ಟವಾದುದು. ಹೂಗಳು ಹಸಿರು ಬಣ್ಣದವು. ಹೂ ಬಿಡುವ ಕಾಲ ಫೆಬ್ರವರಿ. ದೊಡ್ಡ ದೊಡ್ಡ ಬಂಗಲೆಗಳ ಮುಂದೆ, ಪ್ರವಾಸಿ ಮಂದಿರಗಳ ಮುಂದೆ ಚಪ್ಪರ ಹಾಕಿ ಬಳ್ಳಿಯನ್ನು ನೆಡುತ್ತಾರೆ ಮತ್ತು ಥಂಡಿಸಡಕ್ ಅಥವಾ ಶೀತದ್ವಾರ ನಿರ್ಮಿಸುತ್ತಾರೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿ ಅಮೃತ ಸಮಾನವಾದುದು ಮತ್ತು ಈ ಬಳ್ಳಿಯಡಿಯಲ್ಲಿ ನಿಲ್ಲುವ ಅಥವಾ ಸಾಗುವ ಮನುಷ್ಯ, ಎತ್ತಿನಗಾಡಿ, ಪಶು-ಪಕ್ಷಿಗಳು ಮತ್ತು ಈಗಿನ ಆಧುನಿಕ ವಾಹನಗಳು ಅಪಘಾತಗಳಿಂದ ಸುರಕ್ಷಿತವಾಗಿರುವವು ಎನ್ನುವ ನಂಬಿಕೆಯಿದೆ.
ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ ತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ. ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು. ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು.
ಸಸ್ಯ ವರ್ಣನೆ
ಬದಲಾಯಿಸಿಅಮೃತ ಬಳ್ಳಿ ಇದರ ವೈಜ್ಞಾನಿಕ ಹೆಸರು ಟಿನೋಸ್ಪೊರಾ ಕಾರ್ಡಿಫೋಲಿಯಾ. ಇದನ್ನು ಇಂಡಿಯನ್ ಕ್ವಿನೈನ್ ಎಂದು ಕರೆಯುತ್ತಾರೆ. ಇದು ಮೆನಿಸ್ಪೆರ್ಮೇಸಿಯಾ ಕುಟುಂಬಕ್ಕೆ ಸೇರಿದೆ. ಆಸರೆಯ ಮೇಲೆ ಹಬ್ಬುವ ಈ ಬಳ್ಳಿಯು ಒರಟಾದ, ಬೂದಿಮಿಶ್ರಿತ ಕಂದು ಬಣ್ಣದ ತೊಗಟೆ ಹೊಂದಿದ್ದು, ಕೆಲವು ಬಾರಿ ಹಾಲು ಮಿಶ್ರಿತ ಹಳದಿ ಬಣ್ಣದ ಹೂಗಳಿದ್ದು, ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಬಿಡುತ್ತವೆ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣವನ್ನು ಹೋಲುವ, ಹೊಳಪುಳ್ಳ , ದುಂಡಗಿನ ಹಣ್ಣನ್ನು ಕಾಣಬಹುದು.
ಉಪಯುಕ್ತ ಭಾಗಗಳು
ಬದಲಾಯಿಸಿ- ಕಾಂಡ
- ಎಲೆ
- ಬೇರು
ಕೊಯ್ಲು ಮತ್ತು ಇಳುವರಿ
ಬದಲಾಯಿಸಿನಾಟಿ ಮಾಡಿದ ೩-೪ ತಿಂಗಳುಗಳ ನಂತರ ಎಲೆಗಳು ಕೊಯ್ಲಿಗೆ ಬರುತ್ತದೆ. ನಂತರ ಪ್ರತಿತಿಂಗಳಿಗೊಮ್ಮೆ ಬಲಿತ ಎಲೆಗಳನ್ನು ಕೊಯ್ಲು ಮಾಡಿ ಉಪಯೋಗಿಸಬಹುದು. ಪ್ರತಿ ಗಿಡದಿಂದ, ವರ್ಷದಲ್ಲಿ ೧ಕೆ.ಜಿ ಒಣಗಿದ ಎಲೆಗಳನ್ನು ಮತ್ತು ೫೦೦ಗ್ರಾಂ ಕಾಂಡದ ಇಳುವರಿ ದೊರೆಯುತ್ತದೆ.
ಸಸ್ಯ ಹಂಚಿಕೆ
ಬದಲಾಯಿಸಿಭಾರತ ಮತ್ತು ಶ್ರೀಲಂಕಾದ ಉಷ್ಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಕಂಡು ಬರುತ್ತದೆ.
ಹವಾಗುಣ ಮತ್ತು ಮಣ್ಣು
ಬದಲಾಯಿಸಿಇದನ್ನು ಎಲ್ಲಾ ಪ್ರದೇಶದಲ್ಲಿ ಬೆಳೆಸಬಹುದು. ನೀರು ಮತ್ತು ಕೊಟ್ಟಿಗೆ ಗೊಬ್ಬರ ಅವಶ್ಯಕ.
ಔಷಧೀಯ ಗುಣಗಳು
ಬದಲಾಯಿಸಿಎಲ್ಲಾ ಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿಯು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ[೨]. ಮಧುಮೇಹ ರೋಗಕ್ಕೆ ಔಷಧಿಯಾಗಿ ಬಳಸುತ್ತಾರೆ[೩]. ಅದರ ತಾಜಾ ಕಾಂಡವನ್ನು ಜಜ್ಜಿ , ಹಿಸುಕಿ ರಸ ತೆಗೆದು ೨ ಚಮಚ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ ೩ ಬಾರಿ ಆಹಾರ ಸೇವನೆಯ ಮುಂಚೆ ಕುಡಿಯ ಬೇಕು.
ಹೃದಯ ಶೂಲೆಯಲ್ಲಿ
ಬದಲಾಯಿಸಿಅಮೃತಬಳ್ಳಿಯ ಚೂರ್ಣ ಅರ್ಧ ಟೀ ಚಮಚದಷ್ಟೇ ಒಂದೆರಡು ಮೆಣಸು ಕಾಳಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ವೇಳೆ ಸೇವಿಸುವುದು.
ಸ್ಮರಣ ಶಕ್ತಿಗೆ
ಬದಲಾಯಿಸಿಶತಾವರಿ ಶುಂಠಿ ವಾಯುವಿಳಂಗ ಬಜೆ, ಬ್ರಾಹ್ಮಿ ಅಳಲೆಕಾಯಿ ಉತ್ತರಾಣೆ ಮತ್ತು ಸಮಭಾಗ ಅಮೃತಬಳ್ಳಿ ಸೇರಿಸಿ ನಯವಾದ ಚೂರ್ಣ ಮಾಡಿಟ್ಟುಕೊಳ್ಳುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಸ್ವಲ್ಪ ತುಪ್ಪ ಸೇರಿಸಿ ನೆಕ್ಕುವುದು. ಮೇಲೆ ಕೆಂಪು ಕಲ್ಲುಸಕ್ಕರೆ ಹಾಕಿರುವ ಬಿಸಿ ಹಾಲನ್ನು ಕುಡಿಯುವುದು. ದೂರವಾಣಿ ಸಂಖ್ಯೆಗಳನ್ನಾಗಲಿ ಅಥವಾ 15ರಿಂದ 19ರ ತನಕ ಮಗ್ಗಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದು ಕೆಲವೇ ತಿಂಗಳಲ್ಲಿ ಫಲ ದೊರೆಯುವುದು.
ಬಾಯಾರಿಕೆ, ವಾಂತಿ, ವಾಕರಿಕೆ
ಬದಲಾಯಿಸಿಸುಮಾರು 25 ಗ್ರಾಂನಷ್ಟು ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳುವುದು. ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದು.
ಮೂತ್ರನಾಳದಲ್ಲಿ ಕಲ್ಲು
ಬದಲಾಯಿಸಿಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯ ಸಮತೂಕ ನಯವಾಗಿ ಚೂರ್ಣ ಮಾಡಿಟ್ಟುಕೊಳ್ಳುವುದು. 10ಗ್ರಾಂನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು.
ಮೈಮೇಲೇಳುವ ಪಿತ್ತದ ಗಂಧೆಗಳು
ಬದಲಾಯಿಸಿಅಮೃತಬಳ್ಳಿಯ ಎಲೆ ಸಾಸಿವೆ ಶ್ರೀಗಂಧದ ಚಕ್ಕೆ ಇವುಗಳ ಸಮತೂಕವನ್ನು ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ ಹಚ್ಚುವುದು. ಪಿತ್ತ ವಿಕಾರ ಕಡಿಮೆ ಆಗಿ ಪಿತ್ತದ ಗಂಧೆಗಳು ಮತ್ತು ನೆವೆ ಉರಿ ಶಮನವಾಗುವುದು.
ಹೊಟ್ಟೆ ಉರಿ
ಬದಲಾಯಿಸಿಹಸಿಸೊಪ್ಪಿನ ರಸ 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.
ವಾತ ಜ್ವರದಲ್ಲಿ
ಬದಲಾಯಿಸಿಅಮೃತಬಳ್ಳಿ ತ್ರಫಲ ಚೂರ್ಣ, ತುಂಗೇಗುಡ್ಡೆ ಕೊತ್ತಂಬರಿ, ಶತಾವರಿ, ಕಳ್ಳಂಗಡಲೆ ಮತ್ತು ಬೇಲದ ಬೇರು ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು. ಸ್ವಲ್ಪ ಚೂರ್ಣಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಿಸಿ ಅರ್ಧ ಬಟ್ಟಲು ಕಷಾಯವನ್ನು ಮಾಡಿ ಆರಿಸಿ ಕುಡಿಯುವುದು.
ಬುದ್ಧಿ ಭ್ರಮಣೆಗೆ
ಬದಲಾಯಿಸಿಹಸಿ ಅಮೃತಬಳ್ಳಿಯನ್ನು ತಂದು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಪಟ್ಟು ಹಾಕುವುದು. ಒಂದೆರಡು ತಾಸುಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದು.
ದೃಷ್ಟಿಮಾಂದ್ಯದಲ್ಲಿ
ಬದಲಾಯಿಸಿಅಮೃತಬಳ್ಳಿ ತ್ರಿಫಲ ಚೂರ್ಣ, ಹಿಪ್ಪಲಿ ಸಮ ಪ್ರಮಾಣ ಸೇರಿಸಿ ಜಜ್ಜಿ ಕಷಾಯ ಮಾಡುವುದು. ಅರ್ಧ ಬಟ್ಟಲು ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದು.
ಬೊಜ್ಜು ಮತ್ತು ಕೊಬ್ಬು ಕಡಿಮೆ ಆಗಲು, ಆಯಸ್ಸು ಹೆಚ್ಚಲು
ಬದಲಾಯಿಸಿಇದು ಪರಿಣಾಮಕಾರಿ ಔಷಧಿ. ಮೇಲಿನ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಟೀ ಚಮಚ ಜೇನು ತುಪ್ಪವನ್ನು ಕೂಡಿಸಿ ಸೇವಿಸುವುದು. ಸುಮಾರು 40 ದಿವಸ ಅರಳ ಅಂಗಸಾಧನೆ, ಕೊಬ್ಬು ರಹಿತ ಆಹಾರ, ತಣ್ಣೀರು ಸ್ನಾನ ಮತ್ತು ದೀರ್ಘ ನಡಿಗೆ ಅಭ್ಯಾಸ ಮಾಡಿಕೊಳ್ಳುವುದು.
ಸ್ತ್ರೀಯರ ರಕ್ತ ಪ್ರದರಕ್ಕೆ
ಬದಲಾಯಿಸಿ20ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಸಕ್ಕರೆ ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು.
ಉರಿ ಮೂತ್ರದಲ್ಲಿ
ಬದಲಾಯಿಸಿಅಮೃತಬಳ್ಳಿ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿವಸಕ್ಕೆ ಎರಡು ಬಾರಿ ಸೇವಿಸುವುದು ಅಥವಾ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದು, ಪ್ರಮಾಣ ಒಂದು ಗ್ರಾಂ ವೇಳೆಗೆ.
ಉಲ್ಲೇಖ
ಬದಲಾಯಿಸಿ
ಬಾಹ್ಯಸಂಪರ್ಕಗಳು
ಬದಲಾಯಿಸಿhttp://www.ayurvedacollege.com/articles/students/Guduchi Archived 2016-05-07 ವೇಬ್ಯಾಕ್ ಮೆಷಿನ್ ನಲ್ಲಿ. Guduchi: The one who protects the body http://www.ayurvediccommunity.com/AmaraKannada.asp