ಅಟಕಾಮಾ ಮರುಭೂಮಿ
ಅಟಕಾಮಾ ಮರುಭೂಮಿ ದಕ್ಷಿಣ ಅಮೇರಿಕಾ ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣ ಪೀಠಭೂಮಿ. ಈ ಪ್ರದೇಶವು ಮಳೆಯನ್ನು ಕಾಣದ ಪ್ರದೇಶವಾಗಿದೆ. ಅಟಕಾಮಾ ಮರುಭೂಮಿಯು ಆಂಡೆಸ್ ಪರ್ವತಗಳ ಪಶ್ಚಿಮ ಭಾಗದಲ್ಲಿ ಶಾಂತ ಮಹಾಸಾಗರದ ಕರಾವಳಿಗೆ ಹೊಂದಿಕೊಂಡಿರುವ ಸುಮಾರು ೬೦೦ ಮೈಲಿ (೯೬೬ ಕಿ.ಮೀ.) ಅಗಲದ ಪಟ್ಟಿ. ಅಧ್ಯಯನಗಳ ಪ್ರಕಾರ ಅಟಕಾಮಾ ಮರುಭೂಮಿಯು ಜಗತ್ತಿನ ಅತ್ಯಂತ ಒಣ ಮರುಭೂಮಿಯಾಗಿದೆ. ಒಂದು ಅಂದಾಜಿನ ಪ್ರಕಾರ ಇದು ಕ್ಯಾಲಿಫೋರ್ನಿಯಾದ ಸಾವಿನ ಕಣಿವೆಗಿಂತ ೫೦ ಪಟ್ಟು ಹೆಚ್ಚು ಶುಷ್ಕಪ್ರದೇಶ. ಅಟಕಾಮಾ ಮರುಭೂಮಿಯ ವಿಸ್ತೀರ್ಣ ಸುಮಾರು ೧೮೧,೩೦೦ ಚದರ ಕಿ.ಮೀ. ಚಿಲಿ ದೇಶದ ಉತ್ತರಭಾಗದಲ್ಲಿ ಹಬ್ಬಿರುವ ಅಟಕಾಮಾ ಮರುಭೂಮಿಯ ಹೆಚ್ಚಿನ ಭಾಗ ಉಪ್ಪಿನ ಗುಡ್ಡಗಳು, ಮರಳು ಮತ್ತು ಲಾವಾ ಹರಿವಿನಿಂದುಂಟಾಗಿರುವ ಗಟ್ಟಿ ಬೆಂಗಾಡು. ಪೂರ್ವದ ಆಂಡೆಸ್ ಪರ್ವತಗಳು ಮತ್ತು ಪಶ್ಚಿಮದ ಚಿಲಿಯ ಕರಾವಳಿ ಬೆಟ್ಟಸಾಲುಗಳ ನಡುವೆ ಸಿಲುಕಿರುವ ಅಟಕಾಮಾ ಮರುಭೂಮಿಗೆ ಮಳೆಯ ಹನಿ ಕೂಡ ಬೀಳದಂತೆ ಇವೆರಡು ಪರ್ವತಸಾಲುಗಳು ತಡೆಯೊಡ್ಡಿವೆ. ಹೀಗಾಗಿ ಅಟಕಾಮಾ ಮರುಭೂಮಿಯು ಪೂರ್ಣವಾಗಿ ಬಂಜರು ಪ್ರದೇಶವಾಗಿದ್ದು ಹೆಚ್ಚಿನ ಜೀವಸೆಲೆ ಇಲ್ಲಿಲ್ಲ. ಹೆಚ್ಚಿನ ಭಾಗದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಒಂದು ಮಿಲಿಮೀಟರ್ ಆಗಿದ್ದರೆ ಇಲ್ಲಿನ ಅನೇಕ ಹವಾಮಾನ ವೀಕ್ಷಣಾ ಕೇಂದ್ರಗಳಲ್ಲಿ ದಶಕಗಳ ಕಾಲ ಹನಿ ಮಳೆ ಸಹ ದಾಖಲಾಗಿಲ್ಲ. ೧೫೭೦ ರಿಂದ ೧೯೭೧ರವರೆಗೆ ಗಣನೀಯ ಮಳೆ ಅಟಕಾಮಾ ಮರುಭೂಮಿಯಲ್ಲಿ ಬಿದ್ದಿಲ್ಲವೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಇಂತಹ ಶುಷ್ಕ ವಾತಾವರಣದ ಕಾರಣದಿಂದಾಗಿ ಅಟಕಾಮಾ ಮರುಭೂಮಿಯ ಅತ್ಯುನ್ನತ ಪ್ರದೇಶ ೬೮೮೫ ಮೀ. ಗಳಷ್ಟು ಎತ್ತರದಲ್ಲಿದ್ದರೂ ಸಹ ಅಲ್ಲಿ ಯಾವುದೇ ಹಿಮನದಿಗಳಾಗಲಿ ಅಥವಾ ನೀರಿನ ಇನ್ನಾವುದೇ ಮೂಲವಾಗಲಿ ಇಲ್ಲ. ಸಾಗರಕ್ಕೆ ಸಮೀಪದಲ್ಲಿರುವ ಮರುಭೂಮಿಯ ಭಾಗಗಳು ಆಗೊಮ್ಮೆ ಈಗೊಮ್ಮೆ ಸಾಗರದ ಕಡೆಯಿಂದ ಗಾಳಿಯೊಡನೆ ತೇಲಿಬರುವ ನೀರಿನಂಶ (ಸಾಗರದ ಮಂಜು) ಪಡೆಯುತ್ತಿದ್ದು ಈ ಅಲ್ಪ ತೇವಾಂಶವು ಕೆಲತಳಿಯ ಕಳ್ಳಿ ಮತ್ತು ಆಲ್ಗೆಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ. ಉಳಿದ ಭಾಗಗಳು ಮಂಗಳ ಗ್ರಹದ ಮೇಲ್ಮೈಯನ್ನು ಬಲುಮಟ್ಟಿಗೆ ಹೋಲುತ್ತವೆ. ಅಟಕಾಮಾ ಮರುಭೂಮಿಯಲ್ಲಿ ಜನವಸತಿ ಬಲು ವಿರಳ. ಕೆಲವೊಂದು ಓಯಸಿಸ್‌ಗಳಿದ್ದು ಅವುಗಳ ಆಸುಪಾಸಿನಲ್ಲಿ ಅಲ್ಪ ಜನವಸತಿಯಿದೆ. ತಾಮ್ರ, ಬೆಳ್ಳಿ ಮತ್ತು ನೈಟ್ರೇಟ್ ನಿಕ್ಷೇಪಗಳು ಇಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲ ಜನರು ಸಹ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ.
ಇವನ್ನೂ ನೋಡಿ
ಬದಲಾಯಿಸಿಬಾಹ್ಯ ಸಂಪರ್ಕಕೊಂಡಿಗಳು
ಬದಲಾಯಿಸಿ- ಅಟಕಾಮಾ ಮರುಭೂಮಿ
- ಅಟಕಾಮಾ ಮರುಭೂಮಿಯಲ್ಲಿ ಮಂಗಳ ಗ್ರಹದಲ್ಲಿರುವಂತಹ ಮಣ್ಣು Archived 2003-11-19 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯಾಷನಲ್ ಜಿಯೋಗ್ರಾಫಿಕ್ನಲ್ಲಿ ಅಟಕಾಮಾ ಮರುಭೂಮಿಯ ಬಗ್ಗೆ ಲೇಖನ.
- ಅಟಕಾಮಾ ಮರುಭೂಮಿಯ ಅತಿ ಶುಷ್ಕ ಇತಿಹಾಸ.
- ಅಟಕಾಮಾ ಮರುಭೂಮಿಯ ಚಿತ್ರಗಳು. Archived 2006-04-19 ವೇಬ್ಯಾಕ್ ಮೆಷಿನ್ ನಲ್ಲಿ.